Bhishma Parva: Chapter 29

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೨೯

ಜ್ಞಾನವಿಜ್ಞಾನ ಯೋಗ

Related image06029001 ಶ್ರೀಭಗವಾನುವಾಚ|

06029001a ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ|

06029001c ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು||

ಶ್ರೀ ಭಗವಾನನು ಹೇಳಿದನು: ಪಾರ್ಥ! ನನ್ನಲ್ಲಿಯೇ ಆಸಕ್ತನಾಗಿ, ಮನಸ್ಸಿನಿಂದ ನನ್ನನ್ನೇ ಆಶ್ರಯಿಸಿ ಯೋಗವನ್ನಾಚರಿಸುತ್ತಾ ಅಸಂಶಯವಾಗಿ ಹಾಗೂ ಸಮಗ್ರವಾಗಿ ನನ್ನನ್ನು ಹೇಗೆ ತಿಳಿದುಕೊಳ್ಳಬಹುದು ಎನ್ನುವುದನ್ನು ಕೇಳು.

06029002a ಜ್ಞಾನಂ ತೇಽಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ|

06029002c ಯಜ್ಜ್ಞಾತ್ವಾ ನೇಹ ಭೂಯೋಽನ್ಯಜ್ಜ್ಞಾತವ್ಯಮವಶಿಷ್ಯತೇ||

ವಿಜ್ಞಾನದಿಂದೊಡಗೂಡಿದ ಈ ಜ್ಞಾನವನ್ನು ಸಂಪೂರ್ಣವಾಗಿ ನಿನಗೆ ನಾನು ಹೇಳಿಕೊಡುತ್ತೇನೆ. ಇದನ್ನು ತಿಳಿದ ನಂತರ ಇನ್ನು ಹೆಚ್ಚಿನದನ್ನು ತಿಳಿದುಕೊಳ್ಳಲು ಉಳಿಯುವುದೇ ಇಲ್ಲ.

06029003a ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ|

06029003c ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ||

ಸಾವಿರ ಮನುಷ್ಯರಲ್ಲಿ ಯಾವನೋ ಒಬ್ಬನು ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸುವ ಸಿದ್ಧರಲ್ಲಿಯೂ ಯಾವನೋ ಒಬ್ಬನ್ನು ನನ್ನನ್ನು ಸರಿಯಾಗಿ ತಿಳಿದುಕೊಂಡಿರುತ್ತಾನೆ.

06029004a ಭೂಮಿರಾಪೋಽನಲೋ ವಾಯುಃ ಖಂ ಮನೋ ಬುದ್ಧಿರೇವ ಚ|

06029004c ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ||

ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತ್ತು ಅಹಂಕಾರ ಹೀಗೆ ಎಂಟು ವಿಧಗಳಲ್ಲಿ ನನ್ನ ಪ್ರಕೃತಿಯು ಭಿನ್ನವಾಗಿದೆ.

06029005a ಅಪರೇಯಂ ಇತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಂ|

06029005c ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್||

ಇದು ನನ್ನ ಅಪರ (ಕೀಳು) ಪ್ರಕೃತಿ. ಮಹಾಬಾಹೋ! ಯಾವುದರಿಂದ ಈ ಜಗತ್ತು ಆಧರಿಸಿದೆಯೋ ಆ ಇರುವವುಗಳಲ್ಲಿರುವ ಜೀವವು ಇದಕ್ಕಿಂತಲೂ ಉಚ್ಛವಾದ ನನ್ನ ಪ್ರಕೃತಿಯೆಂದು ತಿಳಿದುಕೋ[1].

06029006a ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ|

06029006c ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ||

ಸರ್ವಭೂತಗಳೂ ಇವುಗಳಿಂದ ಉಂಟಾಗುವವೆಂದು ನಿಶ್ಚಯಿಸು. ನಾನೇ ಈ ಎಲ್ಲ ಜಗತ್ತಿನ ಪ್ರಭವ ಮತ್ತು ಪ್ರಲಯ.

06029007a ಮತ್ತಃ ಪರತರಂ ನಾನ್ಯತ್ಕಿಂ ಚಿದಸ್ತಿ ಧನಂಜಯ|

06029007c ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ||

ಧನಂಜಯ! ನನಗಿಂತಲೂ ಇನ್ನು ಹೆಚ್ಚಿನ ಮತ್ತೊಂದು ಯಾವುದೂ ಇಲ್ಲ. ಇವೆಲ್ಲವೂ ನನ್ನಲ್ಲಿ ದಾರದಲ್ಲಿ ಪೋಣಿಸಲ್ಪಟ್ಟ ಮಣಿಗಳ ಸಾಲಿನಂತೆ ಇವೆ.

06029008a ರಸೋಽಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ|

06029008c ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು||

ಕೌಂತೇಯ! ನೀರಿನಲ್ಲಿ ನಾನು ರಸ. ಶಶಿ-ಸೂರ್ಯರಲ್ಲಿ ನಾನು ಪ್ರಭೆ. ಸರ್ವವೇದಗಳಲ್ಲಿ ನಾನು ಪ್ರಣವ. ಆಕಾಶದಲ್ಲಿ ಶಬ್ಧ. ಮತ್ತು ನರರಲ್ಲಿ ನಾನು ಪೌರುಷ.

06029009a ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ|

06029009c ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು||

ಪೃಥ್ವಿಯಲ್ಲಿ ಪುಣ್ಯಗಂಧವೂ, ವಿಭಾವಸುವಿನಲ್ಲಿ ತೇಜಸ್ಸೂ ಆಗಿರುವೆನು. ಸರ್ವಭೂತಗಳಲ್ಲಿ ಜೀವನವೂ, ತಪಸ್ವಿಗಳಲ್ಲಿ ತಪಸ್ಸೂ ಆಗಿದ್ದೇನೆ.

06029010a ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಂ|

06029010c ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಂ||

ಪಾರ್ಥ! ನನ್ನನ್ನು ಸರ್ವಭೂತಗಳ ಸನಾತನ ಬೀಜವೆಂದು ತಿಳಿ. ನಾನು ಬುದ್ಧಿವಂತರ ಬುದ್ಧಿ ಮತ್ತು ತೇಜಸ್ವಿಗಳ ತೇಜಸ್ಸು.

06029011a ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಂ|

06029011c ಧರ್ಮಾವಿರುದ್ಧೋ ಭೂತೇಷು ಕಾಮೋಽಸ್ಮಿ ಭರತರ್ಷಭ||

ನಾನು ಕಾಮರಾಗವಿವರ್ಜಿತನಾದ ಬಲವಂತರ ಬಲ. ಭರತರ್ಷಭ! ಇರುವವುಗಳಲ್ಲಿರುವ ಧರ್ಮವಿರುದ್ಧವಾದ ಕಾಮವೂ ನಾನೇ.

06029012a ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ|

06029012c ಮತ್ತ ಏವೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ||

ಸಾತ್ವಿಕ, ರಾಜಸ ಮತ್ತು ತಾಮಸಗಳ ಏನೆಲ್ಲ ಭಾವಗಳಿವೆಯೋ ಅವು ನಾನೇ ಎಂದು ತಿಳಿ. ಆದರೆ ನಾನು ಅವುಗಳಲ್ಲಿ ಇರುವುದಿಲ್ಲ. ಅವು ನನ್ನಲ್ಲಿ ಇರುತ್ತವೆ.

06029013a ತ್ರಿಭಿರ್ಗುಣಮಯೈರ್ಭಾವೈರೇಭಿಃ ಸರ್ವಮಿದಂ ಜಗತ್|

06029013c ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಂ||

ಈ ಮೂರು ಗುಣಗಳ ಭಾವಗಳಿಂದಲೇ ಈ ಜಗತ್ತೆಲ್ಲವೂ ಮೋಹಿತಗೊಂಡು ನಾನೇ ಪರಮ ಅವ್ಯಯನೆಂದು ತಿಳಿಯಲಾರದು.

06029014a ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ|

06029014c ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ||

ನನ್ನ ಈ ಗುಣಮಯವಾದ ದೈವೀ ಮಾಯೆಯನ್ನು ದಾಟುವುದು ಬಹಳ ಕಷ್ಟ. ನನ್ನನ್ನೇ ಯಾರು ಶರಣು ಹೊಂದುತ್ತಾರೋ ಅವರು ನನ್ನ ಈ ಮಾಯೆಯನ್ನು ದಾಟಬಲ್ಲರು.

06029015a ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ|

06029015c ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ||

ಕೆಟ್ಟ ಕರ್ಮಗಳನ್ನು ಮಾಡುವ ಮೂಢ ನರಾಧಮರು ನನಗೆ ಶರಣು ಬರುವುದಿಲ್ಲ. ಮಾಯೆಯಿಂದ ಅಪಹೃತರಾಗಿ ಅವರು ಅಜ್ಞಾನದಿಂದ ಅಸುರಭಾವವನ್ನು ಆಶ್ರಯಿಸುವರು.

06029016a ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋಽರ್ಜುನ|

06029016c ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ||

ಅರ್ಜುನ! ಭರತರ್ಷಭ! ನಾಲ್ಕು ವಿಧದ ಜನರು ನನ್ನನ್ನು ಭಜಿಸುತ್ತಾರೆ - ಒಳ್ಳೆಯ ಕರ್ಮಗಳನ್ನು ಮಾಡುವವರು, ಆರ್ತರು, ಜಿಜ್ಞಾಸುಗಳು (ಭಗವಂತನ ತತ್ವವನ್ನು ತಿಳಿಯಲು ಬಯಸುವವರು), ಅರ್ಥಾರ್ಥಿಗಳು (ಧನವನ್ನು ಬಯಸುವವರು) ಮತ್ತು ಜ್ಞಾನಿಗಳು (ಭಗವಂತನ ತತ್ವವನ್ನು ತಿಳಿದುಕೊಂಡಿರುವವರು).

06029017a ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ|

06029017c ಪ್ರಿಯೋ ಹಿ ಜ್ಞಾನಿನೋಽತ್ಯರ್ಥಮಹಂ ಸ ಚ ಮಮ ಪ್ರಿಯಃ||

ಅವರಲ್ಲಿ ನಿತ್ಯಯುಕ್ತನಾಗಿರುವ, ಏಕಭಕ್ತಿಯನ್ನಿಟ್ಟಿರುವ ಜ್ಞಾನಿಯು ಹೆಚ್ಚಿನವನು. ಏಕೆಂದರೆ ಜ್ಞಾನಿಗೆ ನಾನು ಅತ್ಯಂತ ಪ್ರಿಯ ಮತ್ತು ನನಗೂ ಕೂಡ ಅವನು ಅತ್ಯಂತ ಪ್ರಿಯ.

06029018a ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಂ|

06029018c ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಂ||

ಇವರೆಲ್ಲರೂ ಉದಾರರೇ. ಆದರೆ ಜ್ಞಾನಿಯು ನನ್ನ ಆತ್ಮನೇ ಎನ್ನುವುದು ನನ್ನ ಮತ. ಏಕೆಂದರೆ ಅವನು ಯುಕ್ತಾತ್ಮನಾಗಿದ್ದುಕೊಂಡು ಅನುತ್ತಮ ಗತಿಯಾದ ನನ್ನಲ್ಲಿಯೇ ಇರುತ್ತಾನೆ.

06029019a ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ|

06029019c ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ||

ಬಹಳ ಜನ್ಮಗಳ ಕೊನೆಯಲ್ಲಿ ಜ್ಞಾನವಂತರು “ವಾಸುದೇವನೇ ಸರ್ವವು” ಎಂದು ನನ್ನನ್ನು ಸೇರುತ್ತಾರೆ. ಅಂತಹ ಮಹಾತ್ಮರು ಸುದುರ್ಲಭ.

06029020a ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇಽನ್ಯದೇವತಾಃ|

06029020c ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ||

ಅವರವರ ಕಾಮಗಳಿಂದ ಜ್ಞಾನವನ್ನು ಕಳೆದುಕೊಂಡು, ಅಯಾಯಾ ಪ್ರಕೃತಿಗಳ ನಿಯಮಾನುಸಾರವಾಗಿ ತಾವೇ ನಿಯಂತ್ರಣಕ್ಕೊಳಪಟ್ಟು ಅನ್ಯ ದೇವತೆಗಳನ್ನು ಶರಣುಹೋಗುತ್ತಾರೆ.

06029021a ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ|

06029021c ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಂ||

ಯಾರ್ಯಾರು ಯಾವ ಯಾವ ದೇವತಾತನುವನ್ನು ಭಕ್ತಿ-ಶ್ರದ್ಧೆಗಳಿಂದ ಪೂಜಿಸಲು ಬಯಸುತ್ತಾರೋ ಅವರವರಿಗೆ ತಕ್ಕಂತಹ ಅಚಲ ಶ್ರದ್ಧೆಯನ್ನು ನಾನೇ ಉಂಟುಮಾಡುತ್ತೇನೆ[2].

06029022a ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾ ರಾಧನಮೀಹತೇ|

06029022c ಲಭತೇ ಚ ತತಃ ಕಾಮಾನ್ಮಯೈವ ವಿಹಿತಾನ್ ಹಿ ತಾನ್||

ಅದೇ ಶ್ರದ್ಧೆಯಿಂದ ಕೂಡಿದವನಾಗಿ ಅವನು ಅದರ ಆರಾಧನೆಯನ್ನು ಮಾಡಲು ಪ್ರಯತ್ನಿಸುತ್ತಾನೆ. ಮತ್ತು ಅದರಿಂದ ನನ್ನಿಂದಲೇ ಉಂಟುಮಾಡಲ್ಪಟ್ಟ ಕಾಮಗಳನ್ನು ಪಡೆದುಕೊಳ್ಳುತ್ತಾನೆ[3].

06029023a ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಂ|

06029023c ದೇವಾನ್ದೇವಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ||

ಆದರೆ ಅವರಿಗೆ ದೊರೆಯುವ ಫಲವು ಅಂತ್ಯವುಳ್ಳವು. ಅವು ಅಲ್ಪಮೇಧಸ್ಸಿನವರಿಗೆ ಆಗುತ್ತದೆ. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರು ನನ್ನನ್ನೇ ಸೇರುವರು.

06029024a ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ|

06029024c ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಂ||

ಬುದ್ಧಿಯಿಲ್ಲದವರು ಅವ್ಯಕ್ತನಾದ ನಾನು ವ್ಯಕ್ತಿತ್ವವನ್ನು ಪಡೆದಿದ್ದೇನೆಂದು ತಿಳಿದುಕೊಳ್ಳುತ್ತಾರೆ. ಅವ್ಯಯನೂ ಅನುತ್ತಮನೂ ಆಗಿರುವ ನನ್ನ ಪರಮ ಭಾವವನ್ನು ಅರಿತಿರುವುದಿಲ್ಲ.

06029025a ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ|

06029025c ಮೂಢೋಽಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಂ||

ಯೋಗಮಾಯೆಯಿಂದ ಸಮಾವೃತನಾಗಿರುವ ನಾನು ಎಲ್ಲರಿಗೂ ಗೋಚರನಾಗುವುದಿಲ್ಲ. ಈ ಮೂಢ ಜನರು ಅಜನೂ ಅವ್ಯಯನೂ ಆಗಿರುವ ನನ್ನನ್ನು ಅರಿಯರು.

06029026a ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ|

06029026c ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ||

ಅರ್ಜುನ! ನಾನು ಹಿಂದೆ ಆಗಿಹೋಗಿರುವ, ಈಗ ಇರುವ ಮತ್ತು ಭವಿಷ್ಯದಲ್ಲಿ ಬರುವ ಭೂತಗಳನ್ನು ತಿಳಿದಿದ್ದೇನೆ. ಆದರೆ ನನ್ನನ್ನು ಯಾರೂ ಅರಿಯರು.

06029027a ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ|

06029027c ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ||

ಭಾರತ! ಪರಂತಪ! ಇಚ್ಛೆ-ದ್ವೇಷಗಳಿಂದ ಹುಟ್ಟಿದ ದ್ವಂದ್ವಮೋಹದಿಂದ ಸರ್ವಭೂತಗಳು ತಮ್ಮ ವರ್ತಮಾನ ಜನ್ಮದಲ್ಲಿ ಸಮ್ಮೋಹಗೊಂಡಿರುತ್ತಾರೆ.

06029028a ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಂ|

06029028c ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ||

ಯಾರ ಪುಣ್ಯಕರ್ಮಗಳಿಂದಾಗಿ ಪಾಪವು ಮುಗಿಯಲು ಬಂದಿದೆಯೋ ಆ ಜನರು ದ್ವಂದ್ವಮೋಹದಿಂದ ವಿಮುಕ್ತರಾಗಿ ದೃಢವ್ರತರಾಗಿ ನನ್ನನ್ನು ಭಜಿಸುತ್ತಾರೆ.

06029029a ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ|

06029029c ತೇ ಬ್ರಹ್ಮ ತದ್ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಂ||

ಜರಾಮರಣಮೋಕ್ಷಕ್ಕಾಗಿ ಯಾರು ನನ್ನನ್ನು ಆಶ್ರಯಿಸಿ ಪ್ರಯತ್ನಿಸುತ್ತಾರೋ ಅವರು ಆ ಬ್ರಹ್ಮವನ್ನು, ಸಂಪೂರ್ಣ ಅಧ್ಯಾತ್ಮವನ್ನು, ಅಖಿಲ ಕರ್ಮವನ್ನೂ ಅರಿತುಕೊಳ್ಳುವರು.

06029030a ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ|

06029030c ಪ್ರಯಾಣಕಾಲೇಽಪಿ ಚ ಮಾಂ ತೇ ವಿದುರ್ಯುಕ್ತಚೇತಸಃ||

ನನ್ನನ್ನು ಅಧಿಭೂತನೆಂದೂ, ಅಧಿದೈವನೆಂದೂ ಮತ್ತು ಅಧಿಯಜ್ಞನೆಂದೂ ಯಾರು ತಿಳಿಯುತ್ತಾರೋ ಅವರು ಮರಣಕಾಲದಲ್ಲಿಯೂ ಯುಕ್ತಚೇತಸರಾಗಿ ನನ್ನನ್ನು ಅರ್ಥಮಾಡಿಕೊಳ್ಳುವರು.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನವಿಜ್ಞಾನಯೋಗೋ ನಾಮ ಸಪ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಜ್ಞಾನವಿಜ್ಞಾನಯೋಗವೆಂಬ ಏಳನೇ ಅಧ್ಯಾಯವು.

ಭೀಷ್ಮಪರ್ವಣಿ ಏಕೋನತ್ರಿಂಶೋಽಧ್ಯಾಯಃ||

ಭೀಷ್ಮಪರ್ವದಲ್ಲಿ ಇಪ್ಪತ್ತೊಂಭತ್ತನೇ ಅಧ್ಯಾಯವು.

Related image

[1] ಅಪರಾ ನ ಪರಾ ನಿಕೃಷ್ಟಾ ಅಶುದ್ಧಾ ಅನರ್ಥಕರೀ ಸಂಸಾರಬಂಧನಾತ್ಮಿಕಾ ಇಯಂ| ಇತಃ ಅಸ್ಯಾ ಯಥೋಕ್ತಾಯಾಃ ತು ಅನ್ಯಾಂ ವಿಶುದ್ಧಾಂ ಪ್ರಕೃತಿಂ ಮಮ ಆತ್ಮಭೂತಾಂ ವಿದ್ಧಿ ಮೇ ಪರಾಂ ಪ್ರಕೃಷ್ಟಾಂ ಜೀವಭೂತಾಂ ಕ್ಷೇತ್ರಜ್ಞ ಲಕ್ಷಣಾಂ ಪ್ರಾಣಧಾರಣನಿಮಿತ ಭೂತಾಂ ಹೇ ಮಹಾಬಾಹೋ ಯಯಾ ಪ್ರಕೃತ್ಯಾ ಇದಂ ಧಾರ್ಯತೇ ಜಗತ್ ಅಂತಃ ಪ್ರವಿಷ್ಟಯಾ||

[2] ತೇಷಾಂ ಚ ಕಾಮಿನಾಂ ಯೋ ಯಃ ಕಾಮೀ ಯಾಂ ಯಾಂ ದೇವತಾತನುಂ ಶ್ರದ್ಧಯಾ ಸಂಯುಕ್ತಃ ಭಕ್ತಶ್ಚ ಸನ್ ಆರ್ಚಿತುಂ ಪೂಜಯಿತುಂ ಇಚ್ಛತಿ ತಸ್ಯ ತಸ್ಯ ಕಾಮಿನಃ ಅಚಲಾಂ ಸ್ಥಿರಾಂ ಶ್ರದ್ಧಾಂ ತಾಮೇವ ವಿದಧಾಮಿ ಯಯೈವ ಪೂರ್ವಂ ಪ್ರವೃತ್ತಃ ಸ್ವಭಾವತಃ||

[3] ಸಃ ತಯಾ ಮದ್ವಿಹಿತಾ ಶ್ರದ್ಧಯಾ ಯುಕ್ತಃ ಸನ್ ತಸ್ಯಾಃ ದೇವತಾತನ್ವಾಃ ರಾಧನಂ ಆರಾಧನಂ ಈಹತೇ ಚೇಷ್ಟತೇ| ಲಭತೇ ಚ ತತಃ ತಸ್ಯಾ ಆರಾಧಿತಾಯಾ ದೇವತಾತನ್ವಾಃ ಕಾಮಾನ್ ಈಪ್ಸಿತಾನ್ ಮಯೈವ ಪರಮೇಶ್ವರೇಣ ಸರ್ವಜ್ಞೇನ ಕರ್ಮಫಲವಿಭಾಗಜ್ಞತಯಾ ವಿಹಿತಾನ್ ನಿರ್ಮಿತಾನ್ ತಾನ್ ಹಿ| ಯಸ್ಮಾತ್ ತೇ ವಿಹಿತಾಃ ಕಾಮಾಃ ತಸ್ಮಾತ್ ತಾನ್ ಅವಶ್ಯಂ ಲಭತೇ ಇತ್ಯರ್ಥಃ| ‘ಹಿತಾನ್’ ಇತಿ ಪದಚ್ಛೇದೇ ಹಿತತ್ವಂ ಕಾಮಾನಾಂ ಉಪಚರಿತಂ ಕಲ್ಪ್ಯಂ| ನ ಹಿ ಕಾಮಾಃ ಹಿತಾಃ ಕಸ್ಯಚಿತ್||

Comments are closed.