ಭೀಷ್ಮ ಪರ್ವ:ಭಗವದ್ಗೀತಾ ಪರ್ವ
೨೬
ಜ್ಞಾನಯೋಗ
06026001 ಶ್ರೀಭಗವಾನುವಾಚ|
06026001a ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಂ|
06026001c ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇಽಬ್ರವೀತ್||
ಶ್ರೀ ಭಗವಂತನು ಹೇಳಿದನು: “ಅವ್ಯಯನಾದ ನಾನು ಈ ಯೋಗವನ್ನು ವಿವಸ್ವತನಿಗೆ ಹೇಳಿದೆ. ವಿವಸ್ವತನು ಮನುವಿಗೆ ಹೇಳಿದನು. ಮನುವು ಇಕ್ಷ್ವಾಕುವಿಗೆ ಹೇಳಿದನು.
06026002a ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ|
06026002c ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ||
ಪರಂಪರಾಗತವಾಗಿ ಬಂದ ಇದನ್ನು ರಾಜರ್ಷಿಗಳು ತಿಳಿದಿದ್ದರು. ಪರಂತಪ! ಮಹಾ ಕಾಲದಿಂದಾಗಿ ಆ ಯೋಗವು ನಷ್ಟವಾಗಿದೆ.
06026003a ಸ ಏವಾಯಂ ಮಯಾ ತೇಽದ್ಯ ಯೋಗಃ ಪ್ರೋಕ್ತಃ ಪುರಾತನಃ|
06026003c ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಂ||
ಅದೇ ಪುರಾತನವಾದ ನಾನು ಹೇಳಿದ್ದ ಯೋಗವನ್ನು, ಈ ಉತ್ತಮ ರಹಸ್ಯವನ್ನು ಇಂದು ನನ್ನ ಭಕ್ತ ನನ್ನ ಸಖ ಎಂದು ನಿನಗೆ ಹೇಳುತ್ತಿದ್ದೇನೆ.”
06026004 ಅರ್ಜುನ ಉವಾಚ|
06026004a ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ|
06026004c ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ||
ಅರ್ಜುನನು ಹೇಳಿದನು: “ನಿನ್ನ ಜನ್ಮವು ಈಚಿನದು. ವಿವಸ್ವತನ ಜನ್ಮವು ಹಿಂದಿನದು. ಇದನ್ನು ನೀನು ಮೊದಲೇ ಹೇಳಿದೆ ಎನ್ನುವುದನ್ನು ಹೇಗೆ ಅರ್ಥಮಾಡಿಕೊಳ್ಳಲಿ?”
06026005 ಶ್ರೀಭಗವಾನುವಾಚ|
06026005a ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ|
06026005c ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ||
ಶ್ರೀ ಭಗವಾನನು ಹೇಳಿದನು: “ನನ್ನ ಬಹಳಷ್ಟು ಜನ್ಮಗಳು ಕಳೆದುಹೋಗಿವೆ. ಅರ್ಜುನ ನಿನ್ನದೂ ಕೂಡ. ಅವೆಲ್ಲವನ್ನು ನಾನು ತಿಳಿದಿದ್ದೇನೆ. ಆದರೆ ಪರಂತಪ! ನಿನಗವು ತಿಳಿದಿಲ್ಲ.
06026006a ಅಜೋಽಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋಽಪಿ ಸನ್|
06026006c ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ||
ಹುಟ್ಟಿಲ್ಲದವನಾದರೂ ಅವ್ಯಯನಾದರೂ ಭೂತಗಳಿಗೆಲ್ಲ ಈಶ್ವರನಾದರೂ ನನ್ನನ್ನು ನಾನು ಪ್ರಕೃತಿಯ ಪ್ರಭಾವದಲ್ಲಿರಿಸಿಕೊಂಡು ನನ್ನ ಮಾಯೆಯಿಂದ ಹುಟ್ಟುತ್ತೇನೆ.
06026007a ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
06026007c ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಭಾರತ! ಯಾವಾಗ ಧರ್ಮದ ಗ್ಲಾನಿಯಾಗುತ್ತದೆಯೋ ಯಾವಾಗ ಅಧರ್ಮದ ಅಭ್ಯುತ್ಥಾನವಾಗುತ್ತದೆಯೋ ಆಗ ನನ್ನನ್ನು ನಾನೇ ಹುಟ್ಟಿಸಿಕೊಳ್ಳುತ್ತೇನೆ.
06026008a ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
06026008c ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಸಜ್ಜನರನ್ನು ಕಾಪಾಡುವುದಕ್ಕಾಗಿಯೂ ಪಾಪಿಗಳ ವಿನಾಶಕ್ಕಾಗಿಯೂ ಧರ್ಮವನ್ನು ನೆಲೆಗೊಳಿಸುವುದಕ್ಕಾಗಿಯೂ ನಾನು ಯುಗ ಯುಗಗಳಲ್ಲಿಯೂ ಹುಟ್ಟುತ್ತೇನೆ.
06026009a ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ|
06026009c ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ||
ಅರ್ಜುನ! ನನ್ನ ಈ ದಿವ್ಯ ಜನ್ಮ ಮತ್ತು ಕರ್ಮಗಳ ತತ್ತ್ವವನ್ನು ಹೀಗೆಯೇ ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರು ದೇಹವನ್ನು ತ್ಯಜಿಸಿ ಪುನರ್ಜನ್ಮವನ್ನು ಹೊಂದುವುದಿಲ್ಲ.
06026010a ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ|
06026010c ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ||
ರಾಗ, ಭಯ ಕ್ರೋಧಗಳನ್ನು ಕಳೆದುಕೊಂಡು ನನ್ನಲ್ಲಿಯೇ ಇದ್ದು ನನ್ನನ್ನು ಉಪಾಶ್ರಿಸುವ ಬಹುಮಂದಿಗಳು ಜ್ಞಾನತಪಸ್ಸಿನಿಂದ ಪೂತರಾಗಿ ನನ್ನ ಭಾವವನ್ನು ತಾಳುತ್ತಾರೆ.
06026011a ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
06026011c ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ||
ಪಾರ್ಥ! ಯಾವಯಾವ ರೀತಿಗಳಲ್ಲಿ ನನ್ನ ಹತ್ತಿರ ಬರುತ್ತಾರೋ ಆ ಆ ರೀತಿಗಳಲ್ಲಿ ನಾನು ಅವರಿಗೆ ಅನುಗ್ರಹಿಸುತ್ತೇನೆ. ಮನುಷ್ಯರು ಎಲ್ಲ ರೀತಿಯಲ್ಲಿಯೂ ನನ್ನ ನಡತೆಯನ್ನೇ ಅನುಸರಿಸುತ್ತಾರೆ.
06026012a ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ|
06026012c ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ||
ಕರ್ಮಗಳ ಸಿದ್ಧಿಯನ್ನು ಬಯಸಿ ಇಲ್ಲಿ ದೇವತೆಗಳಿಗೆ ಯಜಿಸುತ್ತಾರೆ. ಈ ಮನುಷ್ಯಲೋಕದಲ್ಲಿ ಕ್ಷಿಪ್ರವಾಗಿಯೇ ಕರ್ಮದ ಫಲವು ದೊರೆಯುತ್ತದೆ.
06026013a ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ|
06026013c ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಂ||
ಗುಣ ಮತ್ತು ಕರ್ಮಗಳ ಪ್ರಕಾರ ವಿಭಜಿಸಿ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದೆ. ಅದರ ಕರ್ತಾರನಾಗಿದ್ದರೂ ಕೂಡ ನನ್ನನ್ನು ಅಕರ್ತಾರನೆಂದೂ ಅವ್ಯಯನೆಂದೂ ತಿಳಿ.
06026014a ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ|
06026014c ಇತಿ ಮಾಂ ಯೋಽಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ||
ಕರ್ಮಗಳು ನನಗೆ ಅಂಟಿಕೊಳ್ಳುವುದಿಲ್ಲ; ಕರ್ಮಫಲಗಳೂ ನನ್ನನ್ನು ಮುಟ್ಟುವುದಿಲ್ಲ. ನನ್ನನ್ನು ಈ ರೀತಿಯಲ್ಲಿ ತಿಳಿದುಕೊಂಡವನು ಕೂಡ ಕರ್ಮಗಳಿಂದ ಬಂಧಿತನಾಗುವುದಿಲ್ಲ.
06026015a ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ|
06026015c ಕುರು ಕರ್ಮೈವ ತಸ್ಮಾತ್ತ್ವಂ ಪೂರ್ವೈಃ ಪೂರ್ವತರಂ ಕೃತಂ||
ಇದನ್ನು ಹೀಗೆಯೇ ತಿಳಿದು ಹಿಂದೆ ಕೂಡ ಮುಮುಕ್ಷುಗಳು ಕರ್ಮವನ್ನು ಮಾಡುತ್ತಿದ್ದರು. ಆದುದರಿಂದ ನೀನು ಕೂಡ ಪೂರ್ವಜರು ಪೂರ್ವದಲ್ಲಿ ಮಾಡಿದಂತೆ ಕರ್ಮವನ್ನು ಮಾಡು.
06026016a ಕಿಂ ಕರ್ಮ ಕಿಮಕರ್ಮೇತಿ ಕವಯೋಽಪ್ಯತ್ರ ಮೋಹಿತಾಃ|
06026016c ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್||
ಯಾವುದು ಕರ್ಮ ಮತ್ತು ಯಾವುದು ಅಕರ್ಮ ಎಂದು ಬುದ್ಧಿವಂತರೂ ಕೂಡ ಗೊಂದಲಕ್ಕೊಳಗಾಗುತ್ತಾರೆ. ಆ ಕರ್ಮವೇನೆಂಬುದನ್ನು ನಾನು ನಿನಗೆ ಹೇಳುತ್ತೇನೆ. ಇದನ್ನು ತಿಳಿದು ನೀನು ಅಶುಭದಿಂದ ಮುಕ್ತನಾಗುತ್ತೀಯೆ.
06026017a ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ|
06026017c ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ||
ಯಾಕೆಂದರೆ ಕರ್ಮಗಳ ಕುರಿತೂ ತಿಳಿದುಕೊಳ್ಳಬೇಕು. ದುಷ್ಟಕರ್ಮಗಳ ಕುರಿತೂ ತಿಳಿದುಕೊಳ್ಳಬೇಕು. ಅಕರ್ಮದ ಕುರಿತೂ ತಿಳಿದುಕೊಳ್ಳಬೇಕು. ಕರ್ಮದ ಗತಿಯು ಗಹನವಾದದ್ದು.
06026018a ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ|
06026018c ಸ ಬುದ್ಧಿಮಾನ್ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್||
ಕರ್ಮದಲ್ಲಿ ಅಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ಯಾರು ಕಾಣುತ್ತಾನೋ ಅವನು ಮನುಷ್ಯರಲ್ಲಿಯೇ ಬುದ್ಧಿವಂತನು. ಅವನು ಎಲ್ಲ ಕರ್ಮಗಳನ್ನೂ ಮಾಡುವ ಯೋಗಿ.
06026019a ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ|
06026019c ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ||
ಯಾರ ಎಲ್ಲ ಕರ್ಮಗಳು ಕಾಮ ಮತ್ತು ಸಂಕಲ್ಪಗಳಿಂದ ವರ್ಜಿತವಾಗಿರುವವೋ ಮತ್ತು ಯಾರ ಕರ್ಮಗಳು ಜ್ಞಾನಾಗ್ನಿಯಲ್ಲಿ ಸುಟ್ಟಿರುವವೋ ಅಂಥವನನ್ನು ಪಂಡಿತನೆಂದು ತಿಳಿದವರು ಕರೆಯುತ್ತಾರೆ.
06026020a ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ|
06026020c ಕರ್ಮಣ್ಯಭಿಪ್ರವೃತ್ತೋಽಪಿ ನೈವ ಕಿಂ ಚಿತ್ಕರೋತಿ ಸಃ||
ಕರ್ಮಫಲದ ಸಂಗವನ್ನು ತೊರೆದು ನಿತ್ಯ ತೃಪ್ತನಾಗಿರುವ ಯಾವುದರಮೇಲೂ ಆಶ್ರಯಿಸಿರದವನು ಕರ್ಮಗಳಲ್ಲಿ ತೊಡಗಿದ್ದರೂ ನಿಜವಾಗಿ ಅವನು ಏನೂ ಮಾಡುತ್ತಿರುವುದಿಲ್ಲ.
06026021a ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ|
06026021c ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ||
ಬೇಕೆನ್ನದಿಲ್ಲದಿರುವವನು, ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವನು, ತನ್ನದೆನಿಸಿರುವ ಎಲ್ಲವನ್ನೂ ತೊರೆದಿರುವವನು ಕೇವಲ ಶರೀರವನ್ನಿರಿಸಿಕೊಳ್ಳುವುದಕ್ಕಾಗಿ ಮಾಡುವ ಕರ್ಮಗಳಿಂದ ಪಾಪವನ್ನು ಹೊಂದುವುದಿಲ್ಲ.
06026022a ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ|
06026022c ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ||
ಕೇಳದೇ ಬಂದಿರುವುದರಿಂದಲೇ ಸಂತುಷ್ಟನಾಗಿ ದ್ವಂದ್ವಗಳಿಲ್ಲದೇ ಮತ್ಸರವಿಲ್ಲದೇ ಸಿದ್ಧಿ ಅಸಿದ್ಧಿಗಳನ್ನು ಸಮನಾಗಿರಿಸಿದವನು ಕರ್ಮಗಳನ್ನು ಮಾಡಿದರೂ ಬಂಧನಕ್ಕೊಳಗಾಗುವುದಿಲ್ಲ.
06026023a ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ|
06026023c ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ||
ಸಂಗವನ್ನು ತೊರೆದ, ಜ್ಞಾನದಲ್ಲಿಯೇ ನೆಲೆಗೊಂಡ ಚೇತನವುಳ್ಳ ಮುಕ್ತನ ಯಜ್ಞವೆಂದು ಆಚರಿಸಿದ ಕರ್ಮಗಳೆಲ್ಲವೂ ನಾಶಗೊಳ್ಳುತ್ತವೆ.
06026024a ಬ್ರಹ್ಮಾರ್ಪಣಂ ಬ್ರಹ್ಮಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ|
06026024c ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ||
ಬ್ರಹ್ಮವೆಂಬ ಯಾಗದ ಹುಟ್ಟಿನಲ್ಲಿ ಬ್ರಹ್ಮವೆಂಬ ಹವಿಸ್ಸನ್ನಿಟ್ಟು ಬ್ರಹ್ಮನೇ ಬ್ರಹ್ಮವೆಂಬ ಅಗ್ನಿಯಲ್ಲಿ ಸುರಿದುದು ಬ್ರಹ್ಮನಿಗೇ ಹೋಗಿ ಸೇರುತ್ತದೆ. ಹಾಗೆ ಸಮಾಧಿಯಲ್ಲಿರುವವನ ಕರ್ಮವೂ ಬ್ರಹ್ಮನಿಗೆ ಸೇರುತ್ತದೆ.
06026025a ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ|
06026025c ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ||
ಇತರ ಯೋಗಿಗಳು ಯಜ್ಞದಿಂದ ದೇವತೆಗಳನ್ನು ಮಾತ್ರ ಪೂಜಿಸುತ್ತಾರೆ. ಇತರರು ಬ್ರಹ್ಮಾಗ್ನಿಯಲ್ಲಿ ಯಜ್ಞವನ್ನು ಯಜ್ಞದಿಂದಲೇ ಯಾಜಿಸುತ್ತಾರೆ.
06026026a ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಮ್ಯಮಾಗ್ನಿಷು ಜುಹ್ವತಿ|
06026026c ಶಬ್ಧಾದೀನ್ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ||
ಅನ್ಯರು ಶ್ರೋತ್ರುವೇ ಮೊದಲಾದ ಇಂದ್ರಿಯಗಳನ್ನೇ ಸಂಯಮಾಗ್ನಿಯಲ್ಲಿ ಯಾಜಿಸುತ್ತಾರೆ. ಅನ್ಯರು ಶಬ್ಧವೇ ಮೊದಲಾದ ವಿಷಯಗಳನ್ನು ಇಂದ್ರಿಯಾಗ್ನಿಯಲ್ಲಿ ಯಾಜಿಸುತ್ತಾರೆ.
06026027a ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ|
06026027c ಆತ್ಮಸಮ್ಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ||
ಇನ್ನೂ ಇತರರು ಇಂದ್ರಿಯಗಳ ಕರ್ಮಗಳನ್ನು ಮತ್ತು ಪ್ರಾಣಕರ್ಮಗಳೆಲ್ಲವನ್ನೂ ಜ್ಞಾನದಿಂದ ಉರಿಸಲ್ಪಟ್ಟ ಆತ್ಮ ಮತ್ತು ಸಂಯಮ ಯೋಗಗಳೆರಡರ ಅಗ್ನಿಯಲ್ಲಿ ಯಾಜಿಸುತ್ತಾರೆ.
06026028a ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾಪರೇ|
06026028c ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ||
ಹಾಗೆಯೇ ಇತರ ಸಂಶಿತವ್ರತ ಯತಿಗಳು ದ್ರವ್ಯಯಜ್ಞ, ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯಜ್ಞಾನಯಜ್ಞಗಳನ್ನು ಮಾಡುತ್ತಾರೆ.
06026029a ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಽಪಾನಂ ತಥಾಪರೇ|
06026029c ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ||
ಪ್ರಾಣಾಯಾಮ ಪರಾಯಣರು ಪ್ರಾಣಾಪಾನಗಳ ಗತಿಯನ್ನು ನಿಲ್ಲಿಸಿ ಅಪಾನದಲ್ಲಿ ಪ್ರಾಣವನ್ನು ಮತ್ತೆ ಕೆಲವರು ಅಪಾನವನ್ನು ಪ್ರಾಣದಲ್ಲಿ ಯಾಜಿಸುತ್ತಾರೆ.
06026030a ಅಪರೇ ನಿಯತಾಹಾರಾಃ ಪ್ರಾಣಾನ್ಪ್ರಾಣೇಷು ಜುಹ್ವತಿ|
06026030c ಸರ್ವೇಽಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ||
ಇತರರು ನಿಯತಾಹಾರಿಗಳಾಗಿ ಪ್ರಾಣಗಳನ್ನು ಪ್ರಾಣಗಳಲ್ಲಿ ಯಾಜಿಸುತ್ತಾರೆ. ಇವರೆಲ್ಲರೂ ಯಜ್ಞಗಳಿಂದ ಕಲ್ಮಷಗಳನ್ನು ನಾಶಪಡಿಸಿಕೊಂಡ ಯಜ್ಞವಿದರು.
06026031a ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಂ|
06026031c ನಾಯಂ ಲೋಕೋಽಸ್ತ್ಯಯಜ್ಞಸ್ಯ ಕುತೋಽನ್ಯಃ ಕುರುಸತ್ತಮ||
ಅಮೃತವಾದ ಯಜ್ಞಶಿಷ್ಟವನ್ನು ಭುಂಜಿಸಿದವರು ಸನಾತನ ಬ್ರಹ್ಮನನ್ನು ಸೇರುತ್ತಾರೆ. ಯಜ್ಞವಿಲ್ಲದೇ ಈ ಲೋಕವೇ ಇರುವುದಿಲ್ಲ. ಇನ್ನು ಬೇರೆ ಲೋಕಗಳು ಹೇಗಿರುತ್ತವೆ ಕುರುಸುತ್ತಮ?
06026032a ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ|
06026032c ಕರ್ಮಜಾನ್ವಿದ್ಧಿ ತಾನ್ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ||
ಹೀಗೆ ಬಹುವಿಧದ ಯಜ್ಞಗಳು ಬ್ರಹ್ಮನ ಮುಖದಿಂದ ಹೊರಚೆಲ್ಲಿವೆ. ಅವೆಲ್ಲವೂ ಕರ್ಮದಿಂದಲೇ ಹುಟ್ಟಿದವೆಂದು ತಿಳಿ. ಇವೆಲ್ಲವನ್ನು ತಿಳಿದೇ ಮೋಕ್ಷವನ್ನು ಹೊಂದುವೆ.
06026033a ಶ್ರೇಯಾನ್ದ್ರವ್ಯಮಯಾದ್ಯಜ್ಞಾಜ್ಜ್ಞಾನಯಜ್ಞಃ ಪರಂತಪ|
06026033c ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ||
ಪರಂತಪ! ದ್ರವ್ಯ ಯಜ್ಞಕ್ಕಿಂತಲೂ ಜ್ಞಾನಯಜ್ಞವು ಶ್ರೇಷ್ಠ. ಪಾರ್ಥ! ಸರ್ವ ಕರ್ಮಗಳೂ ಅಂತ್ಯದಲ್ಲಿ ಜ್ಞಾನದಲ್ಲಿ ಪರಿಸಮಾಪ್ತವಾಗುತ್ತವೆ.
06026034a ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ|
06026034c ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ||
ಅದನ್ನು ಸಾಷ್ಟಾಂಗ ನಮಸ್ಕಾರಮಾಡುವುದರ, ಮತ್ತೆ ಮತ್ತೆ ಪ್ರಶ್ನಿಸುವುದರ ಮತ್ತು ಸೇವೆಗಳ ಮೂಲಕ ತಿಳಿ. ತತ್ತ್ವವನ್ನು ಕಂಡ ಜ್ಞಾನಿಗಳು ನಿನಗೆ ಆ ಜ್ಞಾನವನ್ನು ಉಪದೇಶಿಸುತ್ತಾರೆ.
06026035a ಯಜ್ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ|
06026035c ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ||
ಪಾಂಡವ! ಇದನ್ನು ತಿಳಿದು ನೀನು ಪುನಃ ಈ ರೀತಿಯ ಮೋಹವನ್ನು ಹೊಂದುವುದಿಲ್ಲ. ಇದರಿಂದ ನೀನು ಯಾವುದನ್ನೂ ಬಿಡದೇ ಅನ್ಯ ಭೂತಗಳೆಲ್ಲವನ್ನೂ ಆತ್ಮನಲ್ಲಿ ಅಥವಾ ನನ್ನಲ್ಲಿ ನೋಡುತ್ತೀಯೆ.
06026036a ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ|
06026036c ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ||
ಸರ್ವ ಪಾಪಿಗಳಿಗಿಂತಲೂ ಹೆಚ್ಚಿನ ಪಾಪಗಳನ್ನು ಮಾಡಿದ್ದರೂ ಕೂಡ ನೀನು ಎಲ್ಲವನ್ನು ಜ್ಞಾನವೆಂಬ ದೋಣಿಯನ್ನು ಬಳಸಿಯೇ ದಡವನ್ನು ಸೇರಬಹುದು.
06026037a ಯಥೈಧಾಂಸಿ ಸಮಿದ್ಧೋಽಗ್ನಿರ್ಭಸ್ಮಸಾತ್ಕುರುತೇಽರ್ಜುನ|
06026037c ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ||
ಅರ್ಜುನ! ಚೆನ್ನಾಗಿ ಉರಿಯುತ್ತಿರುವ ಬೆಂಕಿಯು ಮರದ ತುಂಡುಗಳನ್ನು ಭಸ್ಮವಾಗಿಸುವಂತೆ ಜ್ಞಾನಾಗ್ನಿಯು ಸರ್ವಕರ್ಮಗಳನ್ನೂ ಭಸ್ಮೀಭೂತವಾಗಿಸುತ್ತದೆ.
06026038a ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ|
06026038c ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ||
ನಿಜವಾಗಿಯೂ ಇಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವು ಇಲ್ಲ. ಯೋಗಸಂಸಿದ್ಧನು ಕಾಲಾಂತರದಲ್ಲಿ ಅದನ್ನು ಸ್ವಯಂ ಆತ್ಮನಲ್ಲಿ ತಿಳಿಯುತ್ತಾನೆ.
06026039a ಶ್ರದ್ಧಾವಾಽಲ್ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ|
06026039c ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ||
ಶ್ರದ್ಧಾವಂತನೂ, ತತ್ಪರನೂ ಮತ್ತು ಸಂಯತೇಂದ್ರಿಯನೂ ಆದವನಿಗೆ ಜ್ಞಾನವು ದೊರೆಯುತ್ತದೆ. ಜ್ಞಾನವನ್ನು ಹೊಂದಿದ ತಕ್ಷಣವೇ ಅವನು ಪರಮ ಶಾಂತಿಯನ್ನು ಪಡೆಯುತ್ತಾನೆ.
06026040a ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ|
06026040c ನಾಯಂ ಲೋಕೋಽಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ||
ಅಜ್ಞನು, ಶ್ರದ್ಧೆಯಿಲ್ಲದವನು, ಮತ್ತು ಸಂಶಯಾತ್ಮನು ವಿನಾಶಗೊಳ್ಳುತ್ತಾನೆ. ಸಂಶಯಾತ್ಮನಿಗೆ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವಿರುವುದಿಲ್ಲ.
06026041a ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಚಿನ್ನಸಂಶಯಂ|
06026041c ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ||
ಧನಂಜಯ! ಯೋಗದಿಂದ ಕರ್ಮಗಳನ್ನು ತೊರೆದ, ಜ್ಞಾನದಿಂದ ಸಂಶಯವನ್ನು ತರಿದ ಆತ್ಮವಂತನನ್ನು ಕರ್ಮಗಳು ಬಂಧಿಸುವುದಿಲ್ಲ.
06026042a ತಸ್ಮಾದಜ್ಞಾನಸಂಭೂತಂ ಹೃತ್ಸ್ಥಂ ಜ್ಞಾನಾಸಿನಾತ್ಮನಃ|
06026042c ಚಿತ್ತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ||
ಆದುದರಿಂದ ಭಾರತ! ಅಜ್ಞಾನದಿಂದ ನಿನ್ನಿಂದಲೇ ಹುಟ್ಟಿರುವ ನಿನ್ನಲ್ಲಿಯೇ ಇರುವ ಈ ಸಂಶಯವನ್ನು ಜ್ಞಾನದ ಖಡ್ಗದಿಂದ ತರಿದೆಸೆದು ಯೋಗವನ್ನು ನಿನ್ನದಾಗಿಸಿಕೊಂಡು ಮೇಲೇಳು!”
ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನಯೋಗೋ ನಾಮ ಚತುರ್ಥೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಜ್ಞಾನಯೋಗವೆಂಬ ನಾಲ್ಕನೇ ಅಧ್ಯಾಯವು.
ಭೀಷ್ಮಪರ್ವಣಿ ಷಡ್ವಿಂಶೋಽಧ್ಯಾಯಃ||
ಭೀಷ್ಮಪರ್ವದಲ್ಲಿ ಇಪ್ಪತ್ತಾರನೇ ಅಧ್ಯಾಯವು.