ಭೀಷ್ಮ ಪರ್ವ:ಭಗವದ್ಗೀತಾ ಪರ್ವ
೨೫
ಕರ್ಮಯೋಗ
06025001 ಅರ್ಜುನ ಉವಾಚ|
06025001a ಜ್ಯಾಯಸೀ ಚೇತ್ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ|
06025001c ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ||
ಅರ್ಜುನನು ಹೇಳಿದನು: “ಜನಾರ್ದನ! ಕೇಶವ! ಕರ್ಮಕ್ಕಿಂತ ಜ್ಞಾನವೇ ಶ್ರೇಷ್ಠವೆಂದು ನಿನ್ನ ಅಭಿಪ್ರಾಯವಾದರೆ ಘೋರವಾದ ಕರ್ಮದಲ್ಲಿ ನನ್ನನ್ನೇಕೆ ತೊಡಗಿಸುವೆ?
06025002a ವ್ಯಾಮಿಶ್ರೇಣೈವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ|
06025002c ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಽಹಮಾಪ್ನುಯಾಂ||
ಒಮ್ಮೆ ಕರ್ಮ, ಒಮ್ಮೆ ಜ್ಞಾನ ಇವುಗಳನ್ನು ಬೆರೆಸಿ ತೊಡಕಾಗಿ ಮಾತನಾಡಿ ನನ್ನ ಬುದ್ಧಿಯನ್ನೇ ಮಂಕಾಗಿಸಿದ್ದೀಯೆ. ನನಗೆ ಶ್ರೇಯಸ್ಕರವಾದ ಒಂದೇ ಮಾರ್ಗವನ್ನು ನಿಶ್ಚಯಿಸಿ ಹೇಳು.”
06025003 ಶ್ರೀಭಗವಾನುವಾಚ|
06025003a ಲೋಕೇಽಸ್ಮಿನ್ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ|
06025003c ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಂ||
ಶ್ರೀಭಗವಂತನು ಹೇಳಿದನು: “ಅನಘ! ನಾನು ಮೊದಲೇ ಹೇಳಿದಂತೆ ಈ ಲೋಕದಲ್ಲಿ ಎರಡು ವಿಧದ ನಿಷ್ಠೆಗಳಿವೆ: ಸಾಂಖ್ಯರಿಗೆ ಜ್ಞಾನಯೋಗ ಮತ್ತು ಯೋಗಿಗಳಿಗೆ ಕರ್ಮಯೋಗ.
06025004a ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋಽಶ್ನುತೇ|
06025004c ನ ಚ ಸಮ್ನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ||
ಕರ್ಮಗಳನ್ನು ಮಾಡದೇ ಇರುವುದರಿಂದ ಮನುಷ್ಯನಿಗೆ ಕರ್ಮಗಳಿಂದ ಮುಕ್ತಿ ದೊರೆಯುವುದಿಲ್ಲ. ಕೇವಲ ಸನ್ಯಾಸದಿಂದ ಸಿದ್ಧಿಯು ದೊರೆಯುವುದಿಲ್ಲ.
06025005a ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್|
06025005c ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ||
ಯಾಕೆಂದರೆ ಯಾರೂ ಒಂದು ಕ್ಷಣವೂ ಕೂಡ ಕರ್ಮವನ್ನು ಮಾಡದೇ ಇರಲಾರನು. ಪ್ರಕೃತಿಯಿಂದ ಜನಿಸಿದ ಗುಣಗಳು ಅವಶ್ಯವಾಗಿ ಎಲ್ಲರಿಂದಲೂ ಕರ್ಮವನ್ನು ಮಾಡಿಸುತ್ತವೆ.
06025006a ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್|
06025006c ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ||
ಕರ್ಮೇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಮನಸ್ಸಿನಲ್ಲಿ ಇಂದ್ರಿಯಗಳ ವಸ್ತುಗಳ ಕುರಿತು ಸ್ಮರಿಸುತ್ತಿರುವ ವಿಮೂಢಾತ್ಮನನ್ನು ಮಿಥ್ಯಾಚಾರಿ ಎಂದು ಹೇಳುತ್ತಾರೆ.
06025007a ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇಽರ್ಜುನ|
06025007c ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ||
ಅರ್ಜುನ! ಯಾರು ಇಂದ್ರಿಯಗಳನ್ನು ಮನಸ್ಸಿನಿಂದ ನಿಯಂತ್ರಿಸಿ ಕರ್ಮಯೋಗದಲ್ಲಿ ಆಸಕ್ತನಾಗಿ ಕರ್ಮೇಂದ್ರಿಯಗಳಿಂದ ಕರ್ಮಮಾಡುತ್ತಾನೋ ಅವನು ವಿಶೇಷವೆನಿಸಿಕೊಳ್ಳುತ್ತಾನೆ.
06025008a ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ|
06025008c ಶರೀರಯಾತ್ರಾಪಿ ಚ ತೇ ನ ಪ್ರಸಿಧ್ಯೇದಕರ್ಮಣಃ||
ನಿನಗೆ ನಿಯೋಜಿಸಿದ ಕರ್ಮಗಳನ್ನು ಮಾಡು. ಯಾಕೆಂದರೆ ಕರ್ಮವನ್ನು ಮಾಡದೇ ಇರುವುದಕ್ಕಿಂತ ಕರ್ಮವನ್ನು ಮಾಡುವುದು ಹೆಚ್ಚಿನದು. ಅಕರ್ಮಣದಿಂದ ಶರೀರಯಾತ್ರೆಯೂ ಅಸಾಧ್ಯವಾಗುತ್ತದೆ.
06025009a ಯಜ್ಞಾರ್ಥಾತ್ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮಬಂಧನಃ|
06025009c ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ||
ಯಜ್ಞಾರ್ಥವಲ್ಲದ ಕರ್ಮಗಳಿಂದ ಮನುಷ್ಯನು ಕರ್ಮಬಂಧನಕ್ಕೊಳಗಾಗುತ್ತಾನೆ. ಆದುದರಿಂದ ಕೌಂತೇಯ! ಫಲಗಳಿಗೆ ಅಂಟಿಕೊಳ್ಳದೇ ಕರ್ಮಗಳನ್ನು ಮಾಡು.
06025010a ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ|
06025010c ಅನೇನ ಪ್ರಸವಿಷ್ಯಧ್ವಮೇಷ ವೋಽಸ್ತ್ವಿಷ್ಟಕಾಮಧುಕ್||
ಹಿಂದೆ ಯಜ್ಞದೊಂದಿಗೆ ಪ್ರಜೆಗಳನ್ನು ಸೃಷ್ಟಿಸಿದ ಪ್ರಜಾಪತಿಯು ಹೇಳಿದನು: “ಇದರಿಂದ ಇಮ್ಮಡಿಗೊಳ್ಳಿ. ಇದೇ ನಿಮ್ಮ ಇಷ್ಟಗಳನ್ನು ಪೂರೈಸುತ್ತದೆ.
06025011a ದೇವಾನ್ಭಾವಯತಾನೇನ ತೇ ದೇವಾ ಭಾವಯಂತು ವಃ|
06025011c ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ||
ಇದರಿಂದ ದೇವತೆಗಳನ್ನು ಭಾವಯಿಸಿ. ಆ ದೇವತೆಗಳು ನಿಮ್ಮನ್ನು ಭಾವಯಿಸಲಿ. ಪರಸ್ಪರರನ್ನು ಭಾವಯಿಸಿಕೊಂಡು ಪರಮ ಶ್ರೇಯಸ್ಸನ್ನು ಪಡೆಯಿರಿ.
06025012a ಇಷ್ಟಾನ್ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ|
06025012c ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ||
ಯಜ್ಞದಿಂದ ಭಾವಿತರಾದ ದೇವತೆಗಳು ನಿಮಗೆ ಇಷ್ಟಗಳನ್ನೂ ಬೋಗಗಳನ್ನೂ ನೀಡುತ್ತಾರೆ. ಅವರಿಂದ ಪಡೆದುದನ್ನು ಅವರಿಗೇ ಕೊಡದೇ ಭೋಗಿಸುವವನು ಕಳ್ಳನೇ ತಾನೇ.
06025013a ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ|
06025013c ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್||
ಯಜ್ಞಶಿಷ್ಟವನ್ನು ಸೇವಿಸುವವರು ಸರ್ವ ಕಿಲ್ಬಿಷಗಳಿಂದ ಮುಕ್ತರಾಗುತ್ತಾರೆ. ಆದರೆ ತಮಗಾಗಿಯೇ ಅಡುಗೆಮಾಡುವ ಪಾಪಿಗಳು ಪಾಪವನ್ನೆಸಗುತ್ತಾರೆ.
06025014a ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ|
06025014c ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ||
ಅನ್ನದಿಂದ ಭೂತಗಳಾಗುತ್ತವೆ. ಪರ್ಜನ್ಯದಿಂದ ಅನ್ನವುಂಟಾಗುತ್ತದೆ. ಯಜ್ಞದಿಂದ ಪರ್ಜನ್ಯವಾಗುತ್ತದೆ. ಕರ್ಮದಿಂದಲೇ ಯಜ್ಞವಾಗುತ್ತದೆ.”
06025015a ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಂ|
06025015c ತಸ್ಮಾತ್ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಂ||
ಕರ್ಮವು ಬ್ರಹ್ಮೋದ್ಭವವೆಂದು ತಿಳಿ. ಬ್ರಹ್ಮವು ಅಕ್ಷರದಿಂದ ಹುಟ್ಟಿದೆ. ಆದುದರಿಂದ ಸರ್ವಗತನಾದ ನಿತ್ಯನಾದ ಬ್ರಹ್ಮನು ಯಜ್ಞದಲ್ಲಿ ಪ್ರತಿಷ್ಠಿತನಾಗಿದ್ದಾನೆ.
06025016a ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ|
06025016c ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ||
ಪಾರ್ಥ! ಹೀಗೆ ತಿರುಗಿಸಲ್ಪಟ್ಟ ಚಕ್ರವನ್ನು ಇಲ್ಲಿ ಯಾರು ಅನುಸರಿಸುವುದಿಲ್ಲವೋ ಅಂಥಹ ಇಂದ್ರಿಯಗಳೊಡನೆ ಆಟವಾಡುತ್ತಿರುವ ಪಾಪಜೀವಿಯು ವ್ಯರ್ಥವಾಗಿ ಜೀವಿಸುತ್ತಾನೆ.
06025017a ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ|
06025017c ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ||
ಯಾರು ಆತ್ಮನೊಂದಿಗೇ ಆನಂದಿಸುತ್ತಾನೋ ಆತ್ಮನಿಂದಲೇ ತೃಪ್ತನಾಗಿರುತ್ತಾನೋ ಮತ್ತು ಆತ್ಮನಲ್ಲಿಯೇ ಸಂತುಷ್ಟನಾಗಿರುತ್ತಾನೋ ಅ ಮಾನವನಿಗೆ ಕಾರ್ಯವೆನ್ನುವುದೇ ಇಲ್ಲ.
06025018a ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ|
06025018c ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ||
ಅವನಿಗೆ ಕರ್ಮವನ್ನು ಮಾಡುವುದರಲ್ಲಿ ಅಥವಾ ಕರ್ಮವನ್ನು ಮಾಡುವುದೇ ಇರುವುದರಲ್ಲಿ ಎಂದೂ ಅರ್ಥವಿಲ್ಲ. ಅವನಿಗೆ ಸರ್ವಭೂತಗಳಲ್ಲಿಯೂ ಯಾವರೀತಿಯ ಅವಲಂಬನೆಯೂ ಇರುವುದಿಲ್ಲ.
06025019a ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ|
06025019c ಅಸಕ್ತೋ ಹ್ಯಾಚರನ್ಕರ್ಮ ಪರಮಾಪ್ನೋತಿ ಪೂರುಷಃ||
ಆದುದರಿಂದ ಯಾವಾಗಲೂ ಅಸಕ್ತನಾಗಿ ಮಾಡಬೇಕಾದ ಕರ್ಮವನ್ನು ಮಾಡು. ಏಕೆಂದರೆ ಅಸಕ್ತನಾಗಿ ಕರ್ಮಮಾಡುವ ಪುರುಷನು ಅತ್ಯುತ್ತಮವಾದುದನ್ನು ಪಡೆಯುತ್ತಾನೆ.
06025020a ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ|
06025020c ಲೋಕಸಂಗ್ರಹಮೇವಾಪಿ ಸಂಪಶ್ಯನ್ಕರ್ತುಮರ್ಹಸಿ||
ಕರ್ಮದಿಂದಲೇ ಜನಕಾದಿಗಳು ಸಂಸಿದ್ಧಿಗೆ ಪ್ರಯತ್ನಿಸಿದರು. ಲೋಕಸಂಗ್ರಹವನ್ನು ಗುರಿಯಾಗಿಟ್ಟುಕೊಂಡೂ ಕರ್ಮಗಳನ್ನು ಮಾಡಬೇಕಾಗುತ್ತದೆ.
06025021a ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|
06025021c ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||
ಶ್ರೇಷ್ಠನಾದವನು ಏನೇನು ಆಚರಣೆಗಳನ್ನು ಮಾಡುತ್ತಾನೋ ಅವುಗಳನ್ನೇ ಇತರ ಜನರೂ ಮಾಡುತ್ತಾರೆ. ಅವನು ಯಾವುದನ್ನು ಪ್ರಮಾಣವೆಂದು ಎತ್ತಿಹಿಡಿಯುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ.
06025022a ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂ ಚನ|
06025022c ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ||
ಪಾರ್ಥ! ಮೂರು ಲೋಕಗಳಲ್ಲಿಯೂ ನಾನು ಮಾಡಬೇಕಾದ ಕರ್ತವ್ಯವೊಂದೂ ಇಲ್ಲ. ನಾನು ಪಡೆಯದೇ ಇದ್ದುದು ಅಥವಾ ಪಡೆಯಬೇಕಾಗಿದ್ದುದು ಏನೂ ಇಲ್ಲ. ಆದರೂ ನಾನು ಕರ್ಮಾಚರಣೆ ಮಾಡುತ್ತೇನೆ.
06025023a ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ|
06025023c ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ||
ಪಾರ್ಥ! ಒಂದು ವೇಳೆ ಯಾವಾಗಲಾದರೂ ನಾನು ಈ ಕರ್ಮಗಳನ್ನು ಅಯಾಸಗೊಳ್ಳದೇ ಮುಂದುವರಿಸಿಕೊಂಡು ಹೋಗಲಿಲ್ಲವೆಂದಾದರೆ ಮನುಷ್ಯರು ಎಲ್ಲರೀತಿಯಲ್ಲಿಯೂ ನನ್ನನ್ನು ಅನುಸರಿಸುತ್ತಾರೆ.
06025024a ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಂ|
06025024c ಸಂಕರಸ್ಯ ಚ ಕರ್ತಾ ಸ್ಯಾಂ ಉಪಹನ್ಯಾಮಿಮಾಃ ಪ್ರಜಾಃ||
ನಾನು ಕರ್ಮಗಳನ್ನು ಮಾಡದೇ ಇದ್ದರೆ ಈ ಲೋಕಗಳು ಕುಸಿದುಬೀಳುತ್ತವೆ. ಸಂಕರದ ಕರ್ತನಾಗುತ್ತೇನೆ ಮತ್ತು ಈ ಪ್ರಜೆಗಳ ನಾಶವಾಗುತ್ತದೆ.
06025025a ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ|
06025025c ಕುರ್ಯಾದ್ವಿದ್ವಾಂಸ್ತಥಾಸಕ್ತಶ್ಚಿಕೀರ್ಷುರ್ಲೋಕಸಂಗ್ರಹಂ||
ಭಾರತ! ಅವಿದ್ವಾಂಸರು ಹೇಗೆ ಸಕ್ತರಾಗಿ ಕರ್ಮಗಳನ್ನೆಸಗುತ್ತಾರೋ ಹಾಗೆ ಲೋಕಸಂಗ್ರಹವನ್ನು ಬಯಸಿ ವಿದ್ವಾಂಸನಾದವನು ಅಸಕ್ತನಾಗಿ ಕರ್ಮಗಳನ್ನು ಮಾಡಬೇಕು.
06025026a ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಂ|
06025026c ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್||
ಕರ್ಮಕ್ಕೆ ಅಂಟಿಕೊಂಡಿರುವ ಅಜ್ಞಾನಿಗಳಲ್ಲಿ ಬುದ್ಧಿಭೇದವನ್ನು ಹುಟ್ಟಿಸಬಾರದು. ತಿಳಿದವನು ಯುಕ್ತನಾಗಿದ್ದು ಕರ್ಮಗಳನ್ನು ಮಾಡಿಕೊಂಡು ಅವರು ಎಲ್ಲ ಕರ್ಮಗಳನ್ನೂ ಮಾಡುವಂತೆ ಮಾಡಬೇಕು.
06025027a ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ|
06025027c ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ||
ಪ್ರಕೃತಿಯ ಗುಣಗಳೇ ಎಲ್ಲರೀತಿಯಲ್ಲಿಯೂ ಕರ್ಮಗಳನ್ನು ಮಾಡಿಸುತ್ತವೆ. ಅಹಂಕಾರದ ವಿಮೂಢಾತ್ಮನು ನಾನು ಮಾಡುತ್ತೇನೆ ಎಂದು ತಿಳಿಯುತ್ತಾನೆ.
06025028a ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ|
06025028c ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ||
ಆದರೆ ಮಹಾಬಾಹೋ! ಗುಣ ಮತ್ತು ಕರ್ಮಗಳ ವಿಭಜನೆಯ ತತ್ವವನ್ನು ತಿಳಿದವನು ಗುಣಗಳು[1] ಗುಣಗಳ[2] ಮೇಲೆ ವರ್ತಿಸುತ್ತಿವೆ ಎಂದು ತಿಳಿದು ಅಂಟಿಕೊಳ್ಳುವುದಿಲ್ಲ.
06025029a ಪ್ರಕೃತೇರ್ಗುಣಸಮ್ಮೂಢಾಃ ಸಜ್ಜಂತೇ ಗುಣಕರ್ಮಸು|
06025029c ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್||
ಪ್ರಕೃತಿಯ ಗುಣಗಳಲ್ಲಿ ಮುಳುಗಿರುವವರು ಗುಣಗಳಿಂದುಂಟಾದ ಕರ್ಮಗಳಿಗೆ ಅಂಟಿಕೊಂಡಿರುತ್ತಾರೆ. ಎಲ್ಲವನ್ನೂ ತಿಳಿಯದೇ ಇರುವ ಆ ಮಂದರನ್ನು ಎಲ್ಲವನ್ನೂ ತಿಳಿದಿರುವವನು ವಿಚಲಿಸಬಾರದು.
06025030a ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ|
06025030c ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ||
ಎಲ್ಲ ಕರ್ಮಗಳನ್ನೂ ನನಗೆ ಒಪ್ಪಿಸಿ ಆಧ್ಯಾತ್ಮಚೇತಸನಾಗಿ, ಫಲದ ಅಸೆಯನ್ನು ತೊರೆದು, ನನ್ನತನವನ್ನು ತೊರೆದವನಾಗಿ ವಿಗತಜ್ವರನಾಗಿ ಯುದ್ಧಮಾಡು.
06025031a ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ|
06025031c ಶ್ರದ್ಧಾವಂತೋಽನಸೂಯಂತೋ ಮುಚ್ಯಂತೇ ತೇಽಪಿ ಕರ್ಮಭಿಃ||
ನನ್ನ ಈ ಮತವನ್ನು ನಿತ್ಯವೂ ಯಾವ ಮಾನವನು ಶ್ರದ್ಧಾವಂತನಾಗಿ ಅನಸೂಯನಾಗಿ ಅನುಷ್ಠಾನಮಾಡುತ್ತಾನೋ ಅವನೂ ಕೂಡ ಕರ್ಮಗಳಿಂದ ಮುಕ್ತನಾಗುತ್ತಾನೆ.
06025032a ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಂ|
06025032c ಸರ್ವಜ್ಞಾನವಿಮೂಢಾಂಸ್ತಾನ್ವಿದ್ಧಿ ನಷ್ಟಾನಚೇತಸಃ||
ಆದರೆ ನನ್ನ ಈ ಮತವನ್ನು ತಿರಸ್ಕರಿಸಿ ಇದರಂತೆ ನಡೆದುಕೊಳ್ಳವುದಿರುವ ವಿಮೂಢ ಅಚೇತಸರ ಸರ್ವಜ್ಞಾನವೂ ನಷ್ಟವೆಂದು ತಿಳಿ.
06025033a ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ|
06025033c ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ||
ಜ್ಞಾನಿಯೂ ಕೂಡ ತನ್ನ ಪ್ರಕೃತಿಯ ಪ್ರಕಾರ ನಡೆದುಕೊಳ್ಳುತ್ತಾನೆ. ಆದುದರಿಂದ ಭೂತಗಳು ಪ್ರಕೃತಿಯನ್ನೇ ಅನುಸರಿಸುತ್ತವೆ. ನಿಗ್ರಹವು ಏನು ಮಾಡುತ್ತದೆ?
06025034a ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ|
06025034c ತಯೋರ್ನ ವಶಮಾಗಚ್ಛೇತ್ತೌ ಹ್ಯಸ್ಯ ಪರಿಪಂಥಿನೌ||
ಇಂದ್ರಿಯ ಇಂದ್ರಿಯಕ್ಕೂ ಅದರ ವಿಷಯವಸ್ತುವಿನ ಕುರಿತಾದ ರಾಗ ದ್ವೇಷಗಳು ವ್ಯವಸ್ಥಿತಗೊಂಡಿವೆ. ಅವೆರಡರ ಮಧ್ಯೆ ಸಿಲುಕಿಕೊಳ್ಳಬಾರದು. ಏಕೆಂದರೆ ಅವೆರಡೂ ಅವನ ಪ್ರತಿಸ್ಪರ್ಧಿಗಳು.
06025035a ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್|
06025035c ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ||
ಗುಣಯುಕ್ತವಾಗಿಲ್ಲದಿದ್ದರೂ ಸ್ವಧರ್ಮವನ್ನೇ ಚೆನ್ನಾಗಿ ಅನುಷ್ಠಾನಕ್ಕೆ ತರುವುದು ಪರಧರ್ಮಕ್ಕಿಂತ ಒಳ್ಳೆಯದು. ಸ್ವಧರ್ಮದಲ್ಲಿದ್ದುಕೊಂಡು ಸಾಯುವುದು ಶ್ರೇಯ. ಪರಧರ್ಮವು ಭಯವನ್ನು ತಂದೊಡ್ಡುತ್ತದೆ.”
06025036 ಅರ್ಜುನ ಉವಾಚ|
06025036a ಅಥ ಕೇನ ಪ್ರಯುಕ್ತೋಽಯಂ ಪಾಪಂ ಚರತಿ ಪೂರುಷಃ|
06025036c ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ||
ಅರ್ಜುನನು ಹೇಳಿದನು: “ವಾರ್ಷ್ಣೇಯ! ಹಾಗಿದ್ದರೆ ಪುರುಷನು ಯಾವುದರಿಂದ ಪ್ರಚೋದನೆಗೊಂಡು ತನ್ನ ಇಷ್ಟದ ವಿರುದ್ಧವಾಗಿ ಬಲಾತ್ಕಾರದಿಂದ ಮಾಡಿಸಲ್ಪಟ್ಟಿದೆಯೋ ಎನ್ನುವಂತೆ ಪಾಪವನ್ನು ಎಸಗುತ್ತಾನೆ?”
06025037 ಶ್ರೀಭಗವಾನುವಾಚ|
06025037a ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ|
06025037c ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಂ||
ಶ್ರೀ ಭಗವಂತನು ಹೇಳಿದನು: “ರಜೋಗುಣಸಮುದ್ಭವವಾದ ಈ ಕಾಮ ಮತ್ತು ಕ್ರೋಧಗಳು ಮಹಾಭಕ್ಷಕರು ಮತ್ತು ಮಹಾಪಾಪಿಗಳು. ಇವೇ ವೈರಿಗಳೆಂದು ತಿಳಿ.
06025038a ಧೂಮೇನಾವ್ರಿಯತೇ ವಹ್ನಿರ್ಯಥಾದರ್ಶೋ ಮಲೇನ ಚ|
06025038c ಯಥೋಲ್ಬೇನಾವೃತೋ ಗರ್ಭಸ್ತಥಾ ತೇನೇದಮಾವೃತಂ||
ಬೆಂಕಿಯು ಹೊಗೆಯಿಂದ ಮುಚ್ಚಿಕೊಂಡಿರುವಂತೆ, ಕನ್ನಡಿಯು ಕೊಳೆಯಿಂದ ಮುಚ್ಚಿಕೊಂಡಂತೆ ಭ್ರೂಣವು ಗರ್ಭದಿಂದ ಆವೃತಗೊಂಡಿರುವಂತೆ ಇದು ಅದರಿಂದ ಆವೃತಗೊಂಡಿದೆ.
06025039a ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ|
06025039c ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ||
ಕೌಂತೇಯ! ಜ್ಞಾನಿಗಳ ನಿತ್ಯವೈರಿಯಾದ ಕಾಮರೂಪದ ತೃಪ್ತಿಯನ್ನುವುದೇ ಇಲ್ಲದ ಈ ಬೆಂಕಿಯಿಂದಲೇ ಜ್ಞಾನವು ಆವೃತವಾಗಿರುತ್ತದೆ.
06025040a ಇಂದ್ರಿಯಾಣಿ ಮನೋ ಬುದ್ಧಿರಸ್ಯಾಧಿಷ್ಠಾನಮುಚ್ಯತೇ|
06025040c ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಂ||
ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯು ಇದರ ಅಧಿಷ್ಠಾನವೆಂದು ಹೇಳುತ್ತಾರೆ. ಇವುಗಳಿಂದಲೇ ಇದು ಜ್ಞಾನಕ್ಕೆ ಮುಸುಕು ಹಾಕಿ ದೇಹಿಯನ್ನು ವಿಮೋಹಗೊಳಿಸುತ್ತದೆ.
06025041a ತಸ್ಮಾತ್ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ|
06025041c ಪಾಪ್ಮಾನಂ ಪ್ರಜಹಿಹ್ಯೇನಂ ಜ್ಞಾನವಿಜ್ಞಾನನಾಶನಂ||
ಆದುದರಿಂದ ಭರತರ್ಷಭ! ಮೊದಲು ಇಂದ್ರಿಯಗಳನ್ನು ನಿಯಂತ್ರಿಸಿ ಪಾಪವನ್ನೆಸಗುವ ಜ್ಞಾನ ವಿಜ್ಞಾನಗಳನ್ನು ನಾಶಪಡಿಸುವ ಇದನ್ನು ತೊರೆ.
06025042a ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ|
06025042c ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ||
ಇಂದ್ರಿಯಗಳು ಶ್ರೇಷ್ಠವೆಂದು ಹೇಳುತ್ತಾರೆ. ಇಂದ್ರಿಯಗಳಿಗಿಂತಲೂ ಶ್ರೇಷ್ಠವಾದದ್ದು ಮನಸ್ಸು. ಮನಸ್ಸಿಗಿಂತಲೂ ಶ್ರೇಷ್ಠವಾದದ್ದು ಬುದ್ಧಿ. ಬುದ್ಧಿಗಿಂತಲೂ ಶ್ರೇಷ್ಠವಾದದ್ದು ಅವನು.
06025043a ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ|
06025043c ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಂ||
ಮಹಾಬಾಹೋ! ಹೀಗೆ ಬುದ್ಧಿಗಿಂತಲೂ ಶ್ರೇಷ್ಠವಾದುದನ್ನು ತಿಳಿದುಕೊಂಡು ಅತ್ಮನನ್ನು ಆತ್ಮನಲ್ಲಿ ತೊಡಗಿಸಿಕೊಂಡು, ಜಯಿಸಲು ಕಷ್ಟಕರವಾದ ಕಾಮರೂಪದ ಈ ಶತ್ರುವನ್ನು ಜಯಿಸು.”
ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಕರ್ಮಯೋಗೋ ನಾಮ ತೃತೀಯೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಕರ್ಮಯೋಗವೆಂಬ ಮೂರನೇ ಅಧ್ಯಾಯವು.
ಭೀಷ್ಮಪರ್ವಣಿ ಪಂಚವಿಂಶೋಽಧ್ಯಾಯಃ||
ಭೀಷ್ಮಪರ್ವದಲ್ಲಿ ಇಪ್ಪತ್ತೈದನೇ ಅಧ್ಯಾಯವು.
[1] ಇಂದ್ರಿಯ ರೂಪದಲ್ಲಿರುವ ಗುಣಗಳು.
[2] ಇಂದ್ರಿಯಗಳ ವಿಷಯರೂಪದಲ್ಲಿರುವ ಗುಣಗಳ ಮೇಲೆ.