Bhishma Parva: Chapter 21

ಭೀಷ್ಮ ಪರ್ವ: ಭಗವದ್ಗೀತಾ ಪರ್ವ

೨೧

ಧಾರ್ತರಾಷ್ಟ್ರರ ಅತಿ ದೊಡ್ಡ ಸೇನೆಯನ್ನು ನೋಡಿ ವಿಷಾದಗೊಂಡ ಯುಧಿಷ್ಠಿರನಿಗೆ ಅರ್ಜುನನು ಕೃಷ್ಣನೆಲ್ಲಿರುವನೋ ಅಲ್ಲಿ ಜಯವಿರುವುದು ಎಂದು ಹೇಳಿ ತಮ್ಮ ವಿಜಯದ ಅಶ್ವಾಸನೆಯನ್ನು ನೀಡುವುದು (೧-೧೭).

06021001 ಸಂಜಯ ಉವಾಚ|

06021001a ಬೃಹತೀಂ ಧಾರ್ತರಾಷ್ಟ್ರಾಣಾಂ ದೃಷ್ಟ್ವಾ ಸೇನಾಂ ಸಮುದ್ಯತಾಂ|

06021001c ವಿಷಾದಮಗಮದ್ರಾಜಾ ಕುಂತೀಪುತ್ರೋ ಯುಧಿಷ್ಠಿರಃ||

ಸಂಜಯನು ಹೇಳಿದನು: “ಯುದ್ಧಸನ್ನದ್ಧವಾಗಿದ್ದ ಧಾರ್ತರಾಷ್ಟ್ರರ ಅತಿ ದೊಡ್ಡ ಸೇನೆಯನ್ನು ನೋಡಿ ಕುಂತೀಪುತ್ರ ರಾಜಾ ಯುಧಿಷ್ಠಿರನಿಗೆ ವಿಷಾದವುಂಟಾಯಿತು.

06021002a ವ್ಯೂಹಂ ಭೀಷ್ಮೇಣ ಚಾಭೇದ್ಯಂ ಕಲ್ಪಿತಂ ಪ್ರೇಕ್ಷ್ಯ ಪಾಂಡವಃ|

06021002c ಅಭೇದ್ಯಮಿವ ಸಂಪ್ರೇಕ್ಷ್ಯ ವಿಷಣ್ಣೋಽರ್ಜುನಮಬ್ರವೀತ್||

ಭೀಷ್ಮನು ರಚಿಸಿದ್ದ ಆ ಅಭೇದ್ಯ ವ್ಯೂಹವನ್ನು ನೋಡಿ ಪಾಂಡವನು ಅದು ಅಭೇದ್ಯವೆಂದು ಅರಿತು ವಿಷಣ್ಣನಾಗಿ ಅರ್ಜುನನಿಗೆ ಹೇಳಿದನು:

06021003a ಧನಂಜಯ ಕಥಂ ಶಕ್ಯಮಸ್ಮಾಭಿರ್ಯೋದ್ಧುಮಾಹವೇ|

06021003c ಧಾರ್ತರಾಷ್ಟ್ರೈರ್ಮಹಾಬಾಹೋ ಯೇಷಾಂ ಯೋದ್ಧಾ ಪಿತಾಮಹಃ||

“ಧನಂಜಯ! ಮಹಾಬಾಹೋ! ಯಾರ ಯೋದ್ಧನು ಪಿತಾಮಹನೋ ಆ ಧಾರ್ತರಾಷ್ಟ್ರರನ್ನು ಯುದ್ಧದಲ್ಲಿ ನಾವು ಹೇಗೆ ಎದುರಿಸಬಲ್ಲೆವು?

06021004a ಅಕ್ಷೋಭ್ಯೋಽಯಮಭೇದ್ಯಶ್ಚ ಭೀಷ್ಮೇಣಾಮಿತ್ರಕರ್ಶಿನಾ|

06021004c ಕಲ್ಪಿತಃ ಶಾಸ್ತ್ರದೃಷ್ಟೇನ ವಿಧಿನಾ ಭೂರಿತೇಜಸಾ||

ಆ ಅಮಿತ್ರಕರ್ಶಿ, ಭೂರಿತೇಜಸ ಭೀಷ್ಮನು ಶಾಸ್ತ್ರಗಳಲ್ಲಿರುವಂತೆ ವಿಧಿವತ್ತಾಗಿ ರಚಿಸಿರುವ ಈ ವ್ಯೂಹವು ಅಭೇದ್ಯವಾದುದು.

06021005a ತೇ ವಯಂ ಸಂಶಯಂ ಪ್ರಾಪ್ತಾಃ ಸಸೈನ್ಯಾಃ ಶತ್ರುಕರ್ಶನ|

06021005c ಕಥಮಸ್ಮಾನ್ಮಹಾವ್ಯೂಹಾದುದ್ಯಾನಂ ನೋ ಭವಿಷ್ಯತಿ||

ಶತ್ರುಕರ್ಶನ! ನಮ್ಮ ಈ ಸೇನೆಯಿಂದ ನನಗೆ ಸಂಶಯಬಂದೊದಗಿದೆ. ಹೇಗೆ ತಾನೇ ನಾವು ಈ ಮಹಾ ವ್ಯೂಹವನ್ನು ಎದುರಿಸಿ ವಿಜಯವನ್ನು ಪಡೆಯಬಹುದು?”

06021006a ಅಥಾರ್ಜುನೋಽಬ್ರವೀತ್ಪಾರ್ಥಂ ಯುಧಿಷ್ಠಿರಮಮಿತ್ರಹಾ|

06021006c ವಿಷಣ್ಣಮಭಿಸಂಪ್ರೇಕ್ಷ್ಯ ತವ ರಾಜನ್ನನೀಕಿನೀಂ||

ರಾಜನ್! ಆಗ ಅಮಿತ್ರಹ ಅರ್ಜುನನು ನಿನ್ನ ಸೇನೆಯನ್ನು ನೋಡಿಯೇ ದುಃಖಿತನಾದ ಪಾರ್ಥ ಯುಧಿಷ್ಠಿರನಿಗೆ ಹೇಳಿದನು:

06021007a ಪ್ರಜ್ಞಯಾಭ್ಯಧಿಕಾಂ ಶೂರಾನ್ಗುಣಯುಕ್ತಾನ್ಬಹೂನಪಿ|

06021007c ಜಯಂತ್ಯಲ್ಪತರಾ ಯೇನ ತನ್ನಿಬೋಧ ವಿಶಾಂ ಪತೇ||

“ವಿಶಾಂಪತೇ! ಗುಣಯುಕ್ತರಾದ ಶೂರರನ್ನು ಅಧಿಕ ಸಂಖ್ಯೆಯಲ್ಲಿದ್ದರೂ ಕಡಿಮೆ ಸಂಖ್ಯೆಯಲ್ಲಿರುವವರು ಹೆಚ್ಚಿನ ಬುದ್ಧಿಯನ್ನುಪಯೋಗಿಸಿ ಹೇಗೆ ಜಯಿಸಬಹುದು ಎನ್ನುವುದನ್ನು ಕೇಳು.

06021008a ತತ್ತು ತೇ ಕಾರಣಂ ರಾಜನ್ಪ್ರವಕ್ಷ್ಯಾಮ್ಯನಸೂಯವೇ|

06021008c ನಾರದಸ್ತಂ ಋಷಿರ್ವೇದ ಭೀಷ್ಮದ್ರೋಣೌ ಚ ಪಾಂಡವ||

ರಾಜನ್! ಪಾಂಡವ! ನೀನು ಅನಸೂಯನಾಗಿದ್ದೀಯೆ ಎಂಬ ಕಾರಣದಿಂದ ನಿನಗೆ ನಾನು ಹೇಳುತ್ತೇನೆ. ಇದನ್ನು ಋಷಿ ನಾರದನೂ, ಭೀಷ್ಮ-ದ್ರೋಣರೂ ತಿಳಿದಿದ್ದಾರೆ.

06021009a ಏತಮೇವಾರ್ಥಮಾಶ್ರಿತ್ಯ ಯುದ್ಧೇ ದೇವಾಸುರೇಽಬ್ರವೀತ್|

06021009c ಪಿತಾಮಹಃ ಕಿಲ ಪುರಾ ಮಹೇಂದ್ರಾದೀನ್ದಿವೌಕಸಃ||

ಇದೇ ವಿಷಯದ ಕುರಿತು ದೇವಾಸುರರ ಯುದ್ಧದಲ್ಲಿ ಹಿಂದೆ ಪಿತಾಮಹನು ಮಹೇಂದ್ರಾದಿ ದಿವೌಕಸರಿಗೆ ಹೇಳಿರಲಿಲ್ಲವೇ?

06021010a ನ ತಥಾ ಬಲವೀರ್ಯಾಭ್ಯಾಂ ವಿಜಯಂತೇ ಜಿಗೀಷವಃ|

06021010c ಯಥಾ ಸತ್ಯಾನೃಶಂಸ್ಯಾಭ್ಯಾಂ ಧರ್ಮೇಣೈವೋದ್ಯಮೇನ ಚ||

ವಿಜಯವನ್ನು ಬಯಸುವವರು ಸತ್ಯ, ಅಹಿಂಸೆ, ಧರ್ಮ ಮತ್ತು ಉದ್ಯಮದಿಂದ ಗೆಲ್ಲುವಷ್ಟು ಬಲ-ವೀರ್ಯಗಳಿಂದ ಗೆಲ್ಲುವುದಿಲ್ಲ.

06021011a ತ್ಯಕ್ತ್ವಾಧರ್ಮಂ ಚ ಲೋಭಂ ಚ ಮೋಹಂ ಚೋದ್ಯಮಮಾಸ್ಥಿತಾಃ|

06021011c ಯುಧ್ಯಧ್ವಮನಹಂಕಾರಾ ಯತೋ ಧರ್ಮಸ್ತತೋ ಜಯಃ||

ಅಧರ್ಮ, ಲೋಭ, ಮೋಹಗಳನ್ನು ತೊರೆದು ಉದ್ಯಮದಲ್ಲಿ ನಿರತರಾಗಿ ಅಹಂಕಾರವಿಲ್ಲದೇ ಯುದ್ಧಮಾಡಬೇಕು. ಧರ್ಮವೆಲ್ಲಿದೆಯೋ ಅಲ್ಲಿ ಜಯ.

06021012a ಏವಂ ರಾಜನ್ವಿಜಾನೀಹಿ ಧ್ರುವೋಽಸ್ಮಾಕಂ ರಣೇ ಜಯಃ|

06021012c ಯಥಾ ಮೇ ನಾರದಃ ಪ್ರಾಹ ಯತಃ ಕೃಷ್ಣಸ್ತತೋ ಜಯಃ||

ರಾಜನ್! ಈ ರಣದಲ್ಲಿ ಜಯವು ನಿಶ್ಚಯವಾಗಿಯೂ ನಮ್ಮದೇ ಎಂದು ತಿಳಿ. ನಾರದನು ನಮಗೆ ಹೇಳಿದಂತೆ ಕೃಷ್ಣನೆಲ್ಲಿರುವನೋ ಅಲ್ಲಿ ಜಯವಿರುವುದು.

06021013a ಗುಣಭೂತೋ ಜಯಃ ಕೃಷ್ಣೇ ಪೃಷ್ಠತೋಽನ್ವೇತಿ ಮಾಧವಂ|

06021013c ಅನ್ಯಥಾ ವಿಜಯಶ್ಚಾಸ್ಯ ಸನ್ನತಿಶ್ಚಾಪರೋ ಗುಣಃ||

ಜಯವು ಕೃಷ್ಣನಲ್ಲಿರುವ ಗುಣ. ಅದು ಮಾಧವನ ಹಿಂದೆ ಅನುಸರಿಸಿ ಹೋಗುತ್ತದೆ. ವಿಜಯ ಮಾತ್ರವಲ್ಲದೇ ಸನ್ನತಿಯೂ ಇವನ ಇನ್ನೊಂದು ಗುಣ.

06021014a ಅನಂತತೇಜಾ ಗೋವಿಂದಃ ಶತ್ರುಪೂಗೇಷು ನಿರ್ವ್ಯಥಃ|

06021014c ಪುರುಷಃ ಸನಾತನತಮೋ ಯತಃ ಕೃಷ್ಣಸ್ತತೋ ಜಯಃ||

ಅನಂತ ತೇಜಸ್ಸುಳ್ಳ ಗೋವಿಂದನು ಅಸಂಖ್ಯ ಶತ್ರುಗಳಿಂದಲೂ ವ್ಯಥೆಗೊಳ್ಳಲಾರನು. ಸನಾತನತಮ ಪುರುಷ ಕೃಷ್ಣನು ಎಲ್ಲಿರುವನೋ ಅಲ್ಲಿ ಜಯ.

06021015a ಪುರಾ ಹ್ಯೇಷ ಹರಿರ್ಭೂತ್ವಾ ವೈಕುಂಠೋಽಕುಂಠಸಾಯಕಃ|

06021015c ಸುರಾಸುರಾನವಸ್ಫೂರ್ಜನ್ನಬ್ರವೀತ್ ಕೇ ಜಯಂತ್ವಿತಿ||

ಹಿಂದೆ ಇವನೇ ವೈಕುಂಠ ಹರಿಯಾಗಿ ಸಿಡಿಲಿನ ಶಬ್ಧದ ಧ್ವನಿಯಲ್ಲಿ ಸುರಾಸುರರಿಗೆ ಕೂಗಿ “ನಿಮ್ಮಲ್ಲಿ ಯಾರು ಗೆಲ್ಲುತ್ತೀರಿ?” ಎಂದು ಕೇಳಿದ್ದನು.

06021016a ಅನು ಕೃಷ್ಣಂ ಜಯೇಮೇತಿ ಯೈರುಕ್ತಂ ತತ್ರ ತೈರ್ಜಿತಂ|

06021016c ತತ್ಪ್ರಸಾದಾದ್ಧಿ ತ್ರೈಲೋಕ್ಯಂ ಪ್ರಾಪ್ತಂ ಶಕ್ರಾದಿಭಿಃ ಸುರೈಃ||

“ಕೃಷ್ಣನು ನಮ್ಮೊಡನಿರುವುದರಿಂದ ನಮಗೇ ಜಯ” ಎಂದು ಹೇಳಿ ಶಕ್ರಾದಿ ಸುರರು ಅಲ್ಲಿಯೇ ಅವನ ಪ್ರಸಾದದಿಂದ ದೈತ್ಯರನ್ನು ಗೆದ್ದು ತ್ರೈಲೋಕ್ಯವನ್ನು ಪಡೆದರು.

06021017a ತಸ್ಯ ತೇ ನ ವ್ಯಥಾಂ ಕಾಂ ಚಿದಿಹ ಪಶ್ಯಾಮಿ ಭಾರತ|

06021017c ಯಸ್ಯ ತೇ ಜಯಮಾಶಾಸ್ತೇ ವಿಶ್ವಭುಕ್ ತ್ರಿದಶೇಶ್ವರಃ||

ಭಾರತ! ಆದುದರಿಂದ ನಿನ್ನ ವ್ಯಥೆಗೆ ಯಾವುದೇ ಕಾರಣವು ನನಗೆ ಕಾಣುತ್ತಿಲ್ಲ. ಜಯವನ್ನು ಆಶಿಸುತ್ತಿರುವ ವಿಶ್ವಭುಕ್ ತ್ರಿದಶೇಶ್ವರನು ನಿನ್ನೊಡನೆ ಇದ್ದಾನೆ.””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಯುಧಿಷ್ಠಿರಾರ್ಜುನಸಂವಾದೇ ಏಕವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಯುಧಿಷ್ಠಿರಾರ್ಜುನಸಂವಾದವೆಂಬ ಇಪ್ಪತ್ತೊಂದನೇ ಅಧ್ಯಾಯವು.

Image result for flowers against white background

Comments are closed.