|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ: ಭೂಮಿ ಪರ್ವ
೧೨
ಶಾಕದ್ವೀಪವರ್ಣನೆ (೧-೩೭).
06012001 ಧೃತರಾಷ್ಟ್ರ ಉವಾಚ|
06012001a ಜಂಬೂಖಂಡಸ್ತ್ವಯಾ ಪ್ರೋಕ್ತೋ ಯಥಾವದಿಹ ಸಂಜಯ|
06012001c ವಿಷ್ಕಂಭಮಸ್ಯ ಪ್ರಬ್ರೂಹಿ ಪರಿಮಾಣಂ ಚ ತತ್ತ್ವತಃ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಯಥಾವತ್ತಾಗಿ ನೀನು ಜಂಬೂಖಂಡದ ಕುರಿತು ಹೇಳಿದ್ದೀಯೆ. ಈಗ ಅದರ ಸುತ್ತಳತೆ ಮತ್ತು ವಿಸ್ತಾರವೆಷ್ಟೆಂಬುದನ್ನು ಇದ್ದ ಹಾಗೆ ಹೇಳು.
06012002a ಸಮುದ್ರಸ್ಯ ಪ್ರಮಾಣಂ ಚ ಸಮ್ಯಗಚ್ಛಿದ್ರದರ್ಶನ|
06012002c ಶಾಕದ್ವೀಪಂ ಚ ಮೇ ಬ್ರೂಹಿ ಕುಶದ್ವೀಪಂ ಚ ಸಂಜಯ||
ಸಂಜಯ! ಜಂಬೂದ್ವೀಪದ ಸುತ್ತಲೂ ಇರುವ ಸಮುದ್ರದ, ಶಾಕದ್ವೀಪ ಮತ್ತು ಕುಶದ್ವೀಪಗಳ ಪ್ರಮಾಣಗಳನ್ನು ಹೇಳು.
06012003a ಶಾಲ್ಮಲಂ ಚೈವ ತತ್ತ್ವೇನ ಕ್ರೌಂಚದ್ವೀಪಂ ತಥೈವ ಚ|
06012003c ಬ್ರೂಹಿ ಗಾವಲ್ಗಣೇ ಸರ್ವಂ ರಾಹೋಃ ಸೋಮಾರ್ಕಯೋಸ್ತಥಾ||
ಗಾವಲ್ಗಣೇ! ಹಾಗೆಯೇ ಶಾಲ್ಮಲ ಮತ್ತು ಕ್ರೌಂಚದ್ವೀಪಗಳ ಕುರಿತು ಮತ್ತು ರಾಹು, ಚಂದ್ರ ಸೂರ್ಯರ ಕುರಿತು ಎಲ್ಲವನ್ನೂ ಹೇಳು.”
06012004 ಸಂಜಯ ಉವಾಚ|
06012004a ರಾಜನ್ಸುಬಹವೋ ದ್ವೀಪಾ ಯೈರಿದಂ ಸಂತತಂ ಜಗತ್|
06012004c ಸಪ್ತ ತ್ವಹಂ ಪ್ರವಕ್ಷ್ಯಾಮಿ ಚಂದ್ರಾದಿತ್ಯೌ ಗ್ರಹಾಂಸ್ತಥಾ||
ಸಂಜಯನು ಹೇಳಿದನು: “ರಾಜನ್! ಈ ಸಮಸ್ತ ಜಗತ್ತಿನಲ್ಲಿ ಬಹಳಷ್ಟು ದ್ವೀಪಗಳಿವೆ. ಆದರೆ ನಾನು ನಿನಗೆ ಏಳು ದ್ವೀಪಗಳ ಮತ್ತು ಚಂದ್ರ, ಆದಿತ್ಯಾದಿ ಗ್ರಹಗಳ ಕುರಿತು ಹೇಳುತ್ತೇನೆ.
06012005a ಅಷ್ಟಾದಶ ಸಹಸ್ರಾಣಿ ಯೋಜನಾನಾಂ ವಿಶಾಂ ಪತೇ|
06012005c ಷಟ್ಶತಾನಿ ಚ ಪೂರ್ಣಾನಿ ವಿಷ್ಕಂಭೋ ಜಂಬುಪರ್ವತಃ||
ವಿಶಾಂಪತೇ! ಜಂಬೂಪರ್ವತ (ದ್ವೀಪ)ವು ಸಂಪೂರ್ಣ ಹದಿನೆಂಟು ಸಾವಿರ ಆರುನೂರು ಯೋಜನೆಗಳ ವಿಸ್ತೀರ್ಣದಲ್ಲಿದೆ.
06012006a ಲಾವಣಸ್ಯ ಸಮುದ್ರಸ್ಯ ವಿಷ್ಕಂಭೋ ದ್ವಿಗುಣಃ ಸ್ಮೃತಃ|
06012006c ನಾನಾಜನಪದಾಕೀರ್ಣೋ ಮಣಿವಿದ್ರುಮಚಿತ್ರಿತಃ||
ನಾನಾಜನಪದಗಳಿಂದ ತುಂಬಿದ ಮತ್ತು ಮಣಿವಿದ್ರುಮಗಳಿಂದ ಚಿತ್ರಿತವಾದ ಲವಣ ಸಮುದ್ರದ ವಿಸ್ತಾರವು ಅದರ ಎರಡು ಪಟ್ಟು ಇದೆಯೆಂದು ಹೇಳುತ್ತಾರೆ[1].
06012007a ನೈಕಧಾತುವಿಚಿತ್ರೈಶ್ಚ ಪರ್ವತೈರುಪಶೋಭಿತಃ|
06012007c ಸಿದ್ಧಚಾರಣಸಂಕೀರ್ಣಃ ಸಾಗರಃ ಪರಿಮಂಡಲಃ||
ಅನೇಕ ಖನಿಜಗಳಿಂದ ಕೂಡಿದ ವಿಚಿತ್ರ ಪರ್ವತಗಳಿಂದ ಅದು ಶೋಭಿಸುತ್ತದೆ. ಸಿದ್ಧಚಾರಣರಿಂದ ತುಂಬಿರುವ ಆ ಸಾಗರವು ಗೋಲಾಕಾರವಾಗಿದೆ.
06012008a ಶಾಕದ್ವೀಪಂ ಚ ವಕ್ಷ್ಯಾಮಿ ಯಥಾವದಿಹ ಪಾರ್ಥಿವ|
06012008c ಶೃಣು ಮೇ ತ್ವಂ ಯಥಾನ್ಯಾಯಂ ಬ್ರುವತಃ ಕುರುನಂದನ||
ಪಾರ್ಥಿವ! ಈಗ ಶಾಕದ್ವೀಪದ ಕುರಿತು ಹೇಳುತ್ತೇನೆ. ಕುರುನಂದನ! ಯಥಾನ್ಯಾಯವಾಗಿ ನಾನು ಹೇಳುವುದನ್ನು ಕೇಳು.
06012009a ಜಂಬೂದ್ವೀಪಪ್ರಮಾಣೇನ ದ್ವಿಗುಣಃ ಸ ನರಾಧಿಪ|
06012009c ವಿಷ್ಕಂಭೇಣ ಮಹಾರಾಜ ಸಾಗರೋಽಪಿ ವಿಭಾಗಶಃ|
06012009e ಕ್ಷೀರೋದೋ ಭರತಶ್ರೇಷ್ಠ ಯೇನ ಸಂಪರಿವಾರಿತಃ||
ನರಾಧಿಪ! ಶಾಕದ್ವೀಪವು ಪ್ರಮಾಣದಲ್ಲಿ ಜಂಬೂದ್ವೀಪಕ್ಕಿಂತ ಎರಡು ಪಟ್ಟಿದೆ[2]. ಮಹಾರಾಜ! ಭರತಶ್ರೇಷ್ಠ! ಶಾಕದ್ವೀಪವನ್ನು ಸುತ್ತುವರೆದಿರುವ ಕ್ಷೀರಸಾಗರವು ವಿಸ್ತಾರದಲ್ಲಿ ಶಾಕದ್ವೀಪಕ್ಕಿಂತ ಎರಡು ಪಟ್ಟಿದೆ[3].
06012010a ತತ್ರ ಪುಣ್ಯಾ ಜನಪದಾ ನ ತತ್ರ ಮ್ರಿಯತೇ ಜನಃ|
06012010c ಕುತ ಏವ ಹಿ ದುರ್ಭಿಕ್ಷಂ ಕ್ಷಮಾತೇಜೋಯುತಾ ಹಿ ತೇ||
ಅಲ್ಲಿರುವ ಜನಪದಗಳು ಪುಣ್ಯವಾದವು ಮತ್ತು ಅಲ್ಲಿಯ ಜನರು ಸಾಯುವುದಿಲ್ಲ. ಅವರು ಕ್ಷಮ-ತೇಜೋಯುತರಾಗಿರುವಾಗ ಎಲ್ಲಿಂದ ಅಲ್ಲಿ ದುರ್ಭಿಕ್ಷವಿರಬೇಕು?
06012011a ಶಾಕದ್ವೀಪಸ್ಯ ಸಂಕ್ಷೇಪೋ ಯಥಾವದ್ ಭರತರ್ಷಭ|
06012011c ಉಕ್ತ ಏಷ ಮಹಾರಾಜ ಕಿಮನ್ಯಚ್ಚ್ರೋತುಮಿಚ್ಛಸಿ||
ಭರತರ್ಷಭ! ಶಾಕದ್ವೀಪದ ಕುರಿತು ಇದ್ದುದನ್ನು ಸಂಕ್ಷೇಪವಾಗಿ ಹೇಳಿದ್ದೇನೆ. ಮಹಾರಾಜ! ಇನ್ನು ಏನನ್ನು ಕೇಳಲು ಬಯಸುತ್ತೀಯೆ?”
06012012 ಧೃತರಾಷ್ಟ್ರ ಉವಾಚ|
06012012a ಶಾಕದ್ವೀಪಸ್ಯ ಸಂಕ್ಷೇಪೋ ಯಥಾವದಿಹ ಸಂಜಯ|
06012012c ಉಕ್ತಸ್ತ್ವಯಾ ಮಹಾಭಾಗ ವಿಸ್ತರಂ ಬ್ರೂಹಿ ತತ್ತ್ವತಃ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಶಾಕದ್ವೀಪದ ಕುರಿತು ಇದ್ದುದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೀಯೆ. ಮಹಾಭಾಗ! ನೀನು ಹೇಳಿದುದನ್ನೇ ತತ್ವತಃ ವಿಸ್ತಾರವಾಗಿ ಹೇಳು.”
06012013 ಸಂಜಯ ಉವಾಚ|
06012013a ತಥೈವ ಪರ್ವತಾ ರಾಜನ್ಸಪ್ತಾತ್ರ ಮಣಿಭೂಷಿತಾಃ|
06012013c ರತ್ನಾಕರಾಸ್ತಥಾ ನದ್ಯಸ್ತೇಷಾಂ ನಾಮಾನಿ ಮೇ ಶೃಣು|
06012013e ಅತೀವಗುಣವತ್ಸರ್ವಂ ತತ್ರ ಪುಣ್ಯಂ ಜನಾಧಿಪ||
ಸಂಜಯನು ಹೇಳಿದನು: “ರಾಜನ್! ಅಲ್ಲಿಯೇ ಇರುವ ಏಳು ಮಣಿಭೂಷಿತ ಪರ್ವತಗಳ, ಸಾಗರಗಳ, ನದಿಗಳ ಹೆಸರುಗಳನ್ನು ನನ್ನಿಂದ ಕೇಳು. ಜನಾಧಿಪ! ಅಲ್ಲಿ ಎಲ್ಲವೂ ಅತೀವ ಗುಣವತ್ತಾಗಿವೆ ಮತ್ತು ಪುಣ್ಯವಾಗಿವೆ.
06012014a ದೇವರ್ಷಿಗಂಧರ್ವಯುತಃ ಪರಮೋ ಮೇರುರುಚ್ಯತೇ|
06012014c ಪ್ರಾಗಾಯತೋ ಮಹಾರಾಜ ಮಲಯೋ ನಾಮ ಪರ್ವತಃ|
06012014e ಯತೋ ಮೇಘಾಃ ಪ್ರವರ್ತಂತೇ ಪ್ರಭವಂತಿ ಚ ಸರ್ವಶಃ||
ದೇವ-ಋಷಿ-ಗಂಧರ್ವರಿಂದ ಕೂಡಿರುವ ಮೇರುವನ್ನು ಪರಮವೆಂದು ಹೇಳುತ್ತಾರೆ. ಮಹಾರಾಜ! ಅದರ ನಂತರ ಬರುತ್ತದೆ ಮಲಯ ಎಂಬ ಹೆಸರಿನ ಪರ್ವತ. ಈ ಪರ್ವತದಿಂದಲೇ ಮೋಡಗಳು ಹುಟ್ಟುತ್ತವೆ ಮತ್ತು ಎಲ್ಲ ಕಡೆ ಪಸರಿಸುತ್ತವೆ.
06012015a ತತಃ ಪರೇಣ ಕೌರವ್ಯ ಜಲಧಾರೋ ಮಹಾಗಿರಿಃ|
06012015c ಯತ್ರ ನಿತ್ಯಮುಪಾದತ್ತೇ ವಾಸವಃ ಪರಮಂ ಜಲಂ|
06012015e ಯತೋ ವರ್ಷಂ ಪ್ರಭವತಿ ವರ್ಷಾಕಾಲೇ ಜನೇಶ್ವರ||
ಕೌರವ್ಯ! ನಂತರದ್ದು ಜಲಧಾರ ಎಂಬ ಮಹಾಗಿರಿಯಿದೆ. ಅಲ್ಲಿ ವಾಸವನು ನಿತ್ಯವೂ ಪರಮ ಜಲವನ್ನು ಪಡೆಯುತ್ತಾನೆ ಮತ್ತು ಜನೇಶ್ವರ! ಅದೇ ನೀರನ್ನು ಮಳೆಗಾಳದಲ್ಲಿ ಮಳೆಯಾಗಿ ಸುರಿಸುತ್ತಾನೆ.
06012016a ಉಚ್ಚೈರ್ಗಿರೀ ರೈವತಕೋ ಯತ್ರ ನಿತ್ಯಂ ಪ್ರತಿಷ್ಠಿತಃ|
06012016c ರೇವತೀ ದಿವಿ ನಕ್ಷತ್ರಂ ಪಿತಾಮಹಕೃತೋ ವಿಧಿಃ||
ಅನಂತರ ಎತ್ತರದ ರೈವತಕ ಗಿರಿಯಿದೆ. ಅಲ್ಲಿ ವಿಧಿ ಪಿತಾಮಹನು ಮಾಡಿದ ರೇವತೀ ನಕ್ಷತ್ರವು ದಿವಿಯಲ್ಲಿ ನಿತ್ಯವೂ ಪತಿಷ್ಠಿತಗೊಂಡಿದೆ.
06012017a ಉತ್ತರೇಣ ತು ರಾಜೇಂದ್ರ ಶ್ಯಾಮೋ ನಾಮ ಮಹಾಗಿರಿಃ|
06012017c ಯತಃ ಶ್ಯಾಮತ್ವಮಾಪನ್ನಾಃ ಪ್ರಜಾ ಜನಪದೇಶ್ವರ||
ರಾಜೇಂದ್ರ! ಅದರ ಉತ್ತರದಲ್ಲಿ ಶ್ಯಾಮ ಎಂಬ ಹೆಸರಿನ ಮಹಾಗಿರಿಯಿದೆ. ಜನಪದೇಶ್ವರ! ಅಲ್ಲಿರುವ ಪ್ರಜೆಗಳು ಶ್ಯಾಮತ್ವವನ್ನು ಪಡೆದಿದ್ದಾರೆ.”
06012018 ಧೃತರಾಷ್ಟ್ರ ಉವಾಚ|
06012018a ಸುಮಹಾನ್ಸಂಶಯೋ ಮೇಽದ್ಯ ಪ್ರೋಕ್ತಂ ಸಂಜಯ ಯತ್ತ್ವಯಾ|
06012018c ಪ್ರಜಾಃ ಕಥಂ ಸೂತಪುತ್ರ ಸಂಪ್ರಾಪ್ತಾಃ ಶ್ಯಾಮತಾಮಿಹ||
ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಈಗ ಹೇಳಿದುದರಲ್ಲಿ ನನಗೆ ಮಹಾಸಂಶಯವಿದೆ. ಸೂತಪುತ್ರ! ಅಲ್ಲಿಯ ಪ್ರಜೆಗಳು ಹೇಗೆ ಶ್ಯಾಮತ್ವವನ್ನು ಪಡೆದರು[4]?”
06012019 ಸಂಜಯ ಉವಾಚ|
06012019a ಸರ್ವೇಷ್ವೇವ ಮಹಾಪ್ರಾಜ್ಞ ದ್ವೀಪೇಷು ಕುರುನಂದನ|
06012019c ಗೌರಃ ಕೃಷ್ಣಶ್ಚ ವರ್ಣೌ ದ್ವೌ ತಯೋರ್ವರ್ಣಾಂತರಂ ನೃಪ||
ಸಂಜಯನು ಹೇಳಿದನು: “ಕುರುನಂದನ! ಮಹಾಪ್ರಾಜ್ಞ! ನೃಪ! ಎಲ್ಲ ದ್ವೀಪಗಳಲ್ಲಿಯೂ ಗೌರವರ್ಣದವರು, ಕೃಷ್ಣವರ್ಣದವರು ಮತ್ತು ಇವೆರಡೂ ವರ್ಣಗಳ ನಡುವೆ ಇರುವವರು ಕಂಡುಬರುತ್ತಾರೆ.
06012020a ಶ್ಯಾಮೋ ಯಸ್ಮಾತ್ಪ್ರವೃತ್ತೋ ವೈ ತತ್ತೇ ವಕ್ಷ್ಯಾಮಿ ಭಾರತ|
06012020c ಆಸ್ತೇಽತ್ರ ಭಗವಾನ್ ಕೃಷ್ಣಸ್ತತ್ಕಾಂತ್ಯಾ ಶ್ಯಾಮತಾಂ ಗತಃ||
ಭಾರತ! ಅಲ್ಲಿರುವವರು ಹೇಗೆ ಶ್ಯಾಮವರ್ಣದವರಾದರೆಂದು ನಿನಗೆ ಹೇಳುತ್ತೇನೆ. ಅಲ್ಲಿರುವವರು ಭಗವಾನ್ ಕೃಷ್ಣನ ಕಾಂತಿಯಿಂದ ಶ್ಯಾಮತ್ವವನ್ನು ಪಡೆದರು[5].
06012021a ತತಃ ಪರಂ ಕೌರವೇಂದ್ರ ದುರ್ಗಶೈಲೋ ಮಹೋದಯಃ|
06012021c ಕೇಸರೀ ಕೇಸರಯುತೋ ಯತೋ ವಾತಃ ಪ್ರವಾಯತಿ||
ಕೌರವೇಂದ್ರ! ಅದಕ್ಕೂ ನಂತರದ ಮಹೋದಯ ದುರ್ಗಶೈಲವಿದೆ. ಅಲ್ಲಿ ಬೀಸುವ ಗಾಳಿಯು ಕೇಸರೀ ಬಣ್ಣದಾಗಿದ್ದು ಕೇಸರೀಯತವಾಗಿದೆ.
06012022a ತೇಷಾಂ ಯೋಜನವಿಷ್ಕಂಭೋ ದ್ವಿಗುಣಃ ಪ್ರವಿಭಾಗಶಃ|
06012022c ವರ್ಷಾಣಿ ತೇಷು ಕೌರವ್ಯ ಸಂಪ್ರೋಕ್ತಾನಿ ಮನೀಷಿಭಿಃ||
ಕೌರವ್ಯ! ಅವುಗಳ ವಿಸ್ತಾರವು ಕ್ರಮವಾಗಿ ಅದರ ಮೊದಲಿನದಕ್ಕಿಂತ ದ್ವಿಗುಣವಾಗಿರುತ್ತದೆ[6]. ಅಲ್ಲಿ ಏಳು ವರ್ಷ(ಖಂಡ)ಗಳಿವೆ ಎಂದು ಮನೀಷಿಗಳು ಹೇಳುತ್ತಾರೆ.
06012023a ಮಹಾಮೇರುರ್ಮಹಾಕಾಶೋ ಜಲದಃ ಕುಮುದೋತ್ತರಃ|
06012023c ಜಲಧಾರಾತ್ಪರೋ ರಾಜನ್ಸುಕುಮಾರ ಇತಿ ಸ್ಮೃತಃ||
ರಾಜನ್! ಮಹಾಮೇರು ಪರ್ವತದ ಸಮೀಪ ಮಹಾಕಾಶವರ್ಷವಿದೆ. ಜಲದ (ಮಲಯ) ಪರ್ವತದ ಪಕ್ಕ ಕುಮುದೋತ್ತರವರ್ಷವಿದೆ. ಇಲಧಾರ ಪರ್ವತದ ಸಮೀಪ ಸುಕುಮಾರ ವರ್ಷವಿದೆ ಎಂದು ಹೇಳುತ್ತಾರೆ.
06012024a ರೈವತಸ್ಯ ತು ಕೌಮಾರಃ ಶ್ಯಾಮಸ್ಯ ತು ಮಣೀಚಕಃ|
06012024c ಕೇಸರಸ್ಯಾಥ ಮೋದಾಕೀ ಪರೇಣ ತು ಮಹಾಪುಮಾನ್||
ರೈವತದ ಪಕ್ಕದಲ್ಲಿರುವುದು ಕೌಮಾರವರ್ಷ. ಶ್ಯಾಮಪರ್ವತದ ಪಕ್ಕದಲ್ಲಿರುವುದು ಮಣೀಚಕ ವರ್ಷ. ಕೇಸರ ಪರ್ವತದ ಸಮೀಪದ್ದು ಮೋದಾಕೀಖಂಡ. ಮೋದಾಕೀಖಂಡದ ನಂತರ ಮಹಾಪುಮಾನ್ ಎಂಬ ಪರ್ವತವಿದೆ.
06012025a ಪರಿವಾರ್ಯ ತು ಕೌರವ್ಯ ದೈರ್ಘ್ಯಂ ಹ್ರಸ್ವತ್ವಮೇವ ಚ|
06012025c ಜಂಬೂದ್ವೀಪೇನ ವಿಖ್ಯಾತಸ್ತಸ್ಯ ಮಧ್ಯೇ ಮಹಾದ್ರುಮಃ||
06012026a ಶಾಕೋ ನಾಮ ಮಹಾರಾಜ ತಸ್ಯ ದ್ವೀಪಸ್ಯ ಮಧ್ಯಗಃ|
06012026c ತತ್ರ ಪುಣ್ಯಾ ಜನಪದಾಃ ಪೂಜ್ಯತೇ ತತ್ರ ಶಂಕರಃ||
ಕೌರವ್ಯ! ಆ ದ್ವೀಪದ ಮಧ್ಯದಲ್ಲಿ ವಿಖ್ಯಾತವಾದ ಶಾಕಾ ಎಂಬ ಹೆಸರಿನ ಮಹಾದ್ರುಮವಿದೆ. ಎತ್ತರ ಮತ್ತು ಅಗಲಗಳಲ್ಲಿ ಅದು ಜಂಬೂದ್ವೀಪದಲ್ಲಿರುವ ಜಂಬೂ ವೃಕ್ಷದಂತಿದೆ. ಅಲ್ಲಿಯ ಪುಣ್ಯಜನಪದರು ಶಂಕರನನ್ನು ಪೂಜಿಸುತ್ತಾರೆ.
06012027a ತತ್ರ ಗಚ್ಛಂತಿ ಸಿದ್ಧಾಶ್ಚ ಚಾರಣಾ ದೈವತಾನಿ ಚ|
06012027c ಧಾರ್ಮಿಕಾಶ್ಚ ಪ್ರಜಾ ರಾಜಂಶ್ಚತ್ವಾರೋಽತೀವ ಭಾರತ||
ರಾಜನ್! ಭಾರತ! ಅಲ್ಲಿಗೆ ಸಿದ್ಧರೂ, ಚಾರಣರೂ, ದೇವತೆಗಳೂ, ಧಾರ್ಮಿಕ ಪ್ರಜೆಗಳೂ ಈ ನಾಲ್ವರೂ ಹೋಗುತ್ತಾರೆ.
06012028a ವರ್ಣಾಃ ಸ್ವಕರ್ಮನಿರತಾ ನ ಚ ಸ್ತೇನೋಽತ್ರ ದೃಶ್ಯತೇ|
06012028c ದೀರ್ಘಾಯುಷೋ ಮಹಾರಾಜ ಜರಾಮೃತ್ಯುವಿವರ್ಜಿತಾಃ||
ಅಲ್ಲಿ ವರ್ಣಗಳು ಸ್ವಕರ್ಮದಲ್ಲಿ ನಿರತರಾಗಿರುವುದು ಕಂಡುಬರುತ್ತದೆ. ಕಳ್ಳತನವೆಂಬುದಿಲ್ಲ. ಮಹಾರಾಜ! ದೀರ್ಘಾಯುಷಿಗಳಾದ ಅವರು ಜರಾಮೃತ್ಯು ವಿವರ್ಜಿತರಾಗಿರುತ್ತಾರೆ.
06012029a ಪ್ರಜಾಸ್ತತ್ರ ವಿವರ್ಧಂತೇ ವರ್ಷಾಸ್ವಿವ ಸಮುದ್ರಗಾಃ|
06012029c ನದ್ಯಃ ಪುಣ್ಯಜಲಾಸ್ತತ್ರ ಗಂಗಾ ಚ ಬಹುಧಾಗತಿಃ||
ಅಲ್ಲಿಯ ಪ್ರಜೆಗಳು ಮಳೆಗಾಲದ ನದಿಗಳಂತೆ ಬೆಳೆಯುತ್ತಾರೆ. ಅಲ್ಲಿಯ ನದಿಗಳಲ್ಲಿ ಪುಣ್ಯ ನೀರುಗಳಿವೆ. ಗಂಗೆಯೂ ಕೂಡ ಬಹು ನದಿಗಳಾಗಿ ಹರಿಯುತ್ತಾಳೆ.
06012030a ಸುಕುಮಾರೀ ಕುಮಾರೀ ಚ ಸೀತಾ ಕಾವೇರಕಾ ತಥಾ|
06012030c ಮಹಾನದೀ ಚ ಕೌರವ್ಯ ತಥಾ ಮಣಿಜಲಾ ನದೀ|
06012030e ಇಕ್ಷುವರ್ಧನಿಕಾ ಚೈವ ತಥಾ ಭರತಸತ್ತಮ||
ಕೌರವ್ಯ! ಭರತಸತ್ತಮ! ಆ ನದಿಗಳು ಸುಕುಮಾರೀ, ಕುಮಾರೀ, ಸೀತಾ, ಕಾವೇರಕಾ, ಮಹಾನದೀ, ಮಣಿಜಲಾ, ಮತ್ತು ಇಕ್ಷುವರ್ಧನಿಕಾ.
06012031a ತತಃ ಪ್ರವೃತ್ತಾಃ ಪುಣ್ಯೋದಾ ನದ್ಯಃ ಕುರುಕುಲೋದ್ವಹ|
06012031c ಸಹಸ್ರಾಣಾಂ ಶತಾನ್ಯೇವ ಯತೋ ವರ್ಷತಿ ವಾಸವಃ||
ಕುರುಕುಲೋದ್ವಹ! ಹೀಗೆ ಅಲ್ಲಿ ಸಹಸ್ರಾರು ನೂರಾರು ಪುಣ್ಯ ನದಿಗಳು ಹರಿಯುತ್ತವೆ. ವಾಸವನು ಅಲ್ಲಿ ಮಳೆಸುರಿಸುತ್ತಾನೆ.
06012032a ನ ತಾಸಾಂ ನಾಮಧೇಯಾನಿ ಪರಿಮಾಣಂ ತಥೈವ ಚ|
06012032c ಶಕ್ಯತೇ ಪರಿಸಂಖ್ಯಾತುಂ ಪುಣ್ಯಾಸ್ತಾ ಹಿ ಸರಿದ್ವರಾಃ||
ಅವುಗಳ ಹೆಸರುಗಳನ್ನು ಪರಿಮಾಣಗಳನ್ನು ಪಟ್ಟಿ ಮಾಡಲು ಶಕ್ಯವಿಲ್ಲ. ಅವೆಲ್ಲವೂ ಪುಣ್ಯನದಿಗಳು.
06012033a ತತ್ರ ಪುಣ್ಯಾ ಜನಪದಾಶ್ಚತ್ವಾರೋ ಲೋಕಸಮ್ಮತಾಃ|
06012033c ಮಗಾಶ್ಚ ಮಶಕಾಶ್ಚೈವ ಮಾನಸಾ ಮಂದಗಾಸ್ತಥಾ||
ಅಲ್ಲಿ ಲೋಕಸಮ್ಮತವಾದ ನಾಲ್ಕು ಪುಣ್ಯ ಜನಪದಗಳಿವೆ - ಮಗಾ, ಮಶಕಾ, ಮಾನಸ ಮತ್ತು ಮಂದಗಾ.
06012034a ಮಗಾ ಬ್ರಾಹ್ಮಣಭೂಯಿಷ್ಠಾಃ ಸ್ವಕರ್ಮನಿರತಾ ನೃಪ|
06012034c ಮಶಕೇಷು ತು ರಾಜನ್ಯಾ ಧಾರ್ಮಿಕಾಃ ಸರ್ವಕಾಮದಾಃ||
ನೃಪ! ಮಗಾರು ಹೆಚ್ಚಾಗಿ ಸ್ವಕರ್ಮನಿರತರಾದ ಬ್ರಾಹ್ಮಣರು. ಮಶಕರಲ್ಲಿ ಸರ್ವಕಾಮಗಳನ್ನು ನೀಡುವ ಧಾರ್ಮಿಕ ರಾಜರಿದ್ದಾರೆ.
06012035a ಮಾನಸೇಷು ಮಹಾರಾಜ ವೈಶ್ಯಾಃ ಕರ್ಮೋಪಜೀವಿನಃ|
06012035c ಸರ್ವಕಾಮಸಮಾಯುಕ್ತಾಃ ಶೂರಾ ಧರ್ಮಾರ್ಥನಿಶ್ಚಿತಾಃ|
06012035e ಶೂದ್ರಾಸ್ತು ಮಂದಗೇ ನಿತ್ಯಂ ಪುರುಷಾ ಧರ್ಮಶೀಲಿನಃ||
ಮಹಾರಾಜ! ಮಾನಸರು ವೈಶ್ಯರ ಕರ್ಮೋಪಜೀವಿಗಳು. ಅವರು ಸರ್ವಕಾಮಸಮಾಯುಕ್ತರು, ಶೂರರು ಮತ್ತು ಧರ್ಮಾರ್ಥನಿಶ್ಚಿತರು. ಮಂದಗರು ಶೂದ್ರರು - ನಿತ್ಯವೂ ಧರ್ಮಶೀಲಪುರುಷರು.
06012036a ನ ತತ್ರ ರಾಜಾ ರಾಜೇಂದ್ರ ನ ದಂಡೋ ನ ಚ ದಂಡಿಕಾಃ|
06012036c ಸ್ವಧರ್ಮೇಣೈವ ಧರ್ಮಂ ಚ ತೇ ರಕ್ಷಂತಿ ಪರಸ್ಪರಂ||
ರಾಜೇಂದ್ರ! ಅಲ್ಲಿ ರಾಜನೂ ಇಲ್ಲ, ದಂಡಿಸುವವನೂ ಇಲ್ಲ, ದಂಡನೆಗೆ ಒಳಪಡುವವರೂ ಇಲ್ಲ. ಸ್ವಧರ್ಮವೇ ಪರಸ್ಪರರ ಧರ್ಮವನ್ನು ರಕ್ಷಿಸುತ್ತದೆ.
06012037a ಏತಾವದೇವ ಶಕ್ಯಂ ತು ತಸ್ಮಿನ್ದ್ವೀಪೇ ಪ್ರಭಾಷಿತುಂ|
06012037c ಏತಾವದೇವ ಶ್ರೋತವ್ಯಂ ಶಾಕದ್ವೀಪೇ ಮಹೌಜಸಿ||
ಇಷ್ಟನ್ನೇ ಆ ದ್ವೀಪದ ಕುರಿತು ಮಾತನಾಡಲು ಶಕ್ಯ. ಮತ್ತು ಆ ಮಹೌಜಸ ಶಾಕದ್ವೀಪದ ಕುರಿತು ಇಷ್ಟನ್ನೇ ಕೇಳಬೇಕು[7].”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೂಮಿ ಪರ್ವಣಿ ಶಾಕದ್ವೀಪವರ್ಣನೇ ದ್ವಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೂಮಿ ಪರ್ವದಲ್ಲಿ ಶಾಕದ್ವೀಪವರ್ಣನೆ ಎನ್ನುವ ಹನ್ನೆರಡನೇ ಅಧ್ಯಾಯವು.
[1]ಅಂದರೆ ಲವಣಸಮುದ್ರದ ವಿಸ್ತೀರ್ಣವು ೩೭,೨೦೦ ಯೋಜನೆಗಳು.
[2]ಅಂದರೆ ಶಾಕದ್ವೀಪದ ವಿಸ್ತಾರ ೩೭,೨೦೦ ಯೋಜನೆಗಳು. ಶಾಕದ್ವೀಪ ಮತ್ತು ಲವಣಸಮುದ್ರಗಳ ವಿಸ್ತೀರ್ಣಗಳು ಒಂದೇ ಸಮನಾಗಿವೆ.
[3]ಅಂದರೆ ಕ್ಷೀರಸಾಗರದ ವಿಸ್ತೀರ್ಣ ೭೪,೪೦೦ ಯೋಜನೆಗಳು. ಕ್ಷೀರಸಾಗರದ ವಿಸ್ತೀರ್ಣವು ಲವಣ ಸಮುದ್ರದ ವಿಸ್ತೀರ್ಣದ ಎರಡು ಪಟ್ಟಿದೆ.
[4]ಪರ್ವತವು ಶ್ಯಾಮಲವರ್ಣವಾಗಿದ್ದರೆ ಪ್ರಜೆಗಳೇಕೆ ಶ್ಯಾಮಲವರ್ಣದವರಾದರು?
[5]ಈ ಶ್ಯಾಮಪರ್ವತದಲ್ಲಿಯೇ ಭಗವಾನ್ ಕೃಷ್ಣನಿದ್ದಾನೆ. ಶ್ಯಾಮಲವರ್ಣದ (ಕಡುನೀಲಿಬಣ್ಣದ) ಕೃಷ್ಣನಿಂದಾಗೆ ಪರ್ವತವು ಶ್ಯಾಮವರ್ಣದ್ದಾಯಿತು; ಅಲ್ಲಿರುವವರೂ ಶ್ಯಾಮವರ್ಣದವರಾದರು.
[6]ಮೊದಲನೆಯ ಪರ್ವತವಾದ ಮೇರುವಿನ ವಿಸ್ತಾರವು ಒಂದು ಸಾವಿರ ಯೋಜನೆಗಳಿದ್ದರೆ ಎರಡನೆಯದಾದ ಮಲಯ ಪರ್ವತವು ಎರಡು ಸಾವಿರ ಯೋಜನೆಗಳ ವಿಸ್ತೀರ್ಣದಲ್ಲಿದೆ. ಮೂರನೆಯ ಪರ್ವತದ ವಿಸ್ತೀರ್ಣವು ನಾಲ್ಕು ಸಾವಿರ ಯೋಜನೆಗಳು. ಹೀಗೆ ಒಂದಕ್ಕೆರಡರಂತೆ ಪರ್ವತದ ವಿಸ್ತೀರ್ಣವು ಕ್ರಮವಾಗಿ ಅಧಿಕವಾಗುತ್ತ ಹೋಗುತ್ತದೆ.
[7]ಈ ದ್ವೀಪದ ಕುರಿತು ಹೆಚ್ಚುತಿಳಿದುಕೊಳ್ಳಲು ಪ್ರಯತ್ನಿಸಬಾರದು...ಏಕೆ?