|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ
೧
ಸೈನ್ಯಶಿಕ್ಷಣ
ಕುರು-ಪಾಂಡವ ಸೇನೆಗಳು ಕುರುಕ್ಷೇತ್ರಕ್ಕೆ ಬಂದು ಬೀಡುಬಿಟ್ಟಿದುದು (೧-೨೫). ಎರಡೂ ಸೇನೆಗಳೂ ನಿಯಮ-ಧರ್ಮಗಳನ್ನು ಹಾಕಿಕೊಂಡಿದುದು (೨೬-೩೪).
06001001a ಕಥಂ ಯುಯುಧಿರೇ ವೀರಾಃ ಕುರುಪಾಂಡವಸೋಮಕಾಃ|
06001001c ಪಾರ್ಥಿವಾಶ್ಚ ಮಹಾಭಾಗಾ[2] ನಾನಾದೇಶಸಮಾಗತಾಃ||
ಜನಮೇಜಯನು ಹೇಳಿದನು: “ವೀರ ಕುರು-ಪಾಂಡವ-ಸೋಮಕರು ಮತ್ತು ನಾನಾ ದೇಶಗಳಿಂದ ಬಂದು ಸೇರಿದ ಮಹಾಭಾಗ ಪಾರ್ಥಿವರು ಹೇಗೆ ಯುದ್ಧಮಾಡಿದರು?”
06001002 ವೈಶಂಪಾಯನ ಉವಾಚ|
06001002a ಯಥಾ ಯುಯುಧಿರೇ ವೀರಾಃ ಕುರುಪಾಂಡವಸೋಮಕಾಃ|
06001002c ಕುರುಕ್ಷೇತ್ರೇ ತಪಃಕ್ಷೇತ್ರೇ ಶೃಣು ತತ್ಪೃಥಿವೀಪತೇ||
ವೈಶಂಪಾಯನನು ಹೇಳಿದನು: “ಪೃಥಿವೀಪತೇ! ವೀರ ಕುರು-ಪಾಂಡವ-ಸೋಮಕರು ತಪಃಕ್ಷೇತ್ರ ಕುರುಕ್ಷೇತ್ರದಲ್ಲಿ ಹೇಗೆ ಯುದ್ಧಮಾಡಿದರೆನ್ನುವುದನ್ನು ಕೇಳು.
06001003a ಅವತೀರ್ಯ ಕುರುಕ್ಷೇತ್ರಂ ಪಾಂಡವಾಃ ಸಹಸೋಮಕಾಃ|
06001003c ಕೌರವಾನಭ್ಯವರ್ತಂತ ಜಿಗೀಷಂತೋ ಮಹಾಬಲಾಃ||
ಸೋಮಕರೊಂದಿಗೆ ಕುರುಕ್ಷೇತ್ರಕ್ಕೆ ಬಂದಿಳಿದ ಮಹಾಬಲಿ ಪಾಂಡವರು ಗೆಲ್ಲುವ ಆಸೆಯನ್ನಿಟ್ಟುಕೊಂಡು ಕೌರವರನ್ನು ಎದುರಿಸಿದರು.
06001004a ವೇದಾಧ್ಯಯನಸಂಪನ್ನಾಃ ಸರ್ವೇ ಯುದ್ಧಾಭಿನಂದಿನಃ|
06001004c ಆಶಂಸಂತೋ ಜಯಂ ಯುದ್ಧೇ ವಧಂ ವಾಭಿಮುಖಾ ರಣೇ||
ವೇದಾಧ್ಯಯನ ಸಂಪನ್ನರಾದ ಅವರೆಲ್ಲರೂ ಯುದ್ಧವನ್ನು ಆನಂದಿಸುವವರಾಗಿದ್ದರು. ಯುದ್ಧದಲ್ಲಿ ಜಯವನ್ನು ಆಶಿಸುತ್ತಾ ರಣದಲ್ಲಿ ವಧೆಯನ್ನು ಎದುರಿಸಿದರು.
06001005a ಅಭಿಯಾಯ ಚ ದುರ್ಧರ್ಷಾಂ ಧಾರ್ತರಾಷ್ಟ್ರಸ್ಯ ವಾಹಿನೀಂ|
06001005c ಪ್ರಾಙ್ಮುಖಾಃ ಪಶ್ಚಿಮೇ ಭಾಗೇ ನ್ಯವಿಶಂತ ಸಸೈನಿಕಾಃ||
ಆ ದುರ್ಧರ್ಷರು ಧಾರ್ತರಾಷ್ಟ್ರನ ವಾಹಿನಿಯನ್ನು ಎದುರಿಸಿ ಪೂರ್ವಾಭಿಮುಖರಾಗಿ ಪಶ್ಚಿಮಭಾಗದಲ್ಲಿ ಸೈನಿಕರೊಂದಿಗೆ ಬೀಡುಬಿಟ್ಟರು.
06001006a ಸಮಂತಪಂಚಕಾದ್ಬಾಹ್ಯಂ ಶಿಬಿರಾಣಿ ಸಹಸ್ರಶಃ|
06001006c ಕಾರಯಾಮಾಸ ವಿಧಿವತ್ಕುಂತೀಪುತ್ರೋ ಯುಧಿಷ್ಠಿರಃ||
ಕುಂತೀಪುತ್ರ ಯುಧಿಷ್ಠಿರನು ವಿಧಿವತ್ತಾಗಿ ಸಮಂತಪಂಚಕದ ಹೊರಗೆ ಸಹಸ್ರಾರು ಶಿಬಿರಗಳನ್ನು ಮಾಡಿಸಿದನು.
06001007a ಶೂನ್ಯೇವ ಪೃಥಿವೀ ಸರ್ವಾ ಬಾಲವೃದ್ಧಾವಶೇಷಿತಾ|
06001007c ನಿರಶ್ವಪುರುಷಾ ಚಾಸೀದ್ರಥಕುಂಜರವರ್ಜಿತಾ||
ಕೇವಲ ಬಾಲಕ ವೃದ್ಧರು ಉಳಿದಿದ್ದ ಇಡೀ ಭೂಮಿಯು ಕುದುರೆ-ಪುರುಷ-ರಥ-ಕುಂಜರಗಳಿಲ್ಲದೇ ಶೂನ್ಯವಾಗಿ ತೋರಿತು.
06001008a ಯಾವತ್ತಪತಿ ಸೂರ್ಯೋ ಹಿ ಜಂಬೂದ್ವೀಪಸ್ಯ ಮಂಡಲಂ|
06001008c ತಾವದೇವ ಸಮಾವೃತ್ತಂ ಬಲಂ ಪಾರ್ಥಿವಸತ್ತಮ||
ಪಾರ್ಥಿವಸತ್ತಮ! ಸೂರ್ಯನು ಸುಡುವ ಜಂಬೂದ್ವೀಪದ ಎಲ್ಲ ಕಡೆಗಳಿಂದ ಸೇನೆಗಳನ್ನು ಒಟ್ಟುಗೂಡಿಸಲಾಗಿತ್ತು.
06001009a ಏಕಸ್ಥಾಃ ಸರ್ವವರ್ಣಾಸ್ತೇ ಮಂಡಲಂ ಬಹುಯೋಜನಂ|
06001009c ಪರ್ಯಾಕ್ರಾಮಂತ ದೇಶಾಂಶ್ಚ ನದೀಃ ಶೈಲಾನ್ವನಾನಿ ಚ||
ದೇಶ, ನದಿ, ಶೈಲ, ವನಗಳನ್ನು ದಾಟಿ ಬಂದ ಸರ್ವವರ್ಣದವರೂ ಬಹುಯೋಜನ ಮಂಡಲಗಳಲ್ಲಿ ಒಟ್ಟಾಗಿದ್ದರು.
06001010a ತೇಷಾಂ ಯುಧಿಷ್ಠಿರೋ ರಾಜಾ ಸರ್ವೇಷಾಂ ಪುರುಷರ್ಷಭ|
06001010c ಆದಿದೇಶ ಸವಾಹಾನಾಂ ಭಕ್ಷ್ಯಭೋಜ್ಯಮನುತ್ತಮಂ||
ಪುರುಷರ್ಷಭ! ರಾಜ ಯುಧಿಷ್ಠಿರನು ಅವರ ವಾಹನಗಳೊಂದಿಗೆ ಎಲ್ಲರಿಗೂ ಅನುತ್ತಮ ಭಕ್ಷ-ಭೋಜ್ಯಗಳನ್ನು ನಿಯೋಜಿಸಿದನು.
06001011a ಸಂಜ್ಞಾಶ್ಚ ವಿವಿಧಾಸ್ತಾಸ್ತಾಸ್ತೇಷಾಂ ಚಕ್ರೇ ಯುಧಿಷ್ಠಿರಃ|
06001011c ಏವಂವಾದೀ ವೇದಿತವ್ಯಃ ಪಾಂಡವೇಯೋಽಯಂ ಇತ್ಯುತ||
ಯುಧಿಷ್ಠಿರನು ಅವರಿಗೆ ವಿವಿಧ ಸಂಜ್ಞೆಗಳನ್ನು ಕೊಟ್ಟನು. ಇವುಗಳನ್ನು ಹೇಳುವುದರಿಂದ ಅವರು ಪಾಂಡವರ ಕಡೆಯವರೆಂದು ತಿಳಿಯಬಹುದಾಗಿತ್ತು.
06001012a ಅಭಿಜ್ಞಾನಾನಿ ಸರ್ವೇಷಾಂ ಸಂಜ್ಞಾಶ್ಚಾಭರಣಾನಿ ಚ|
06001012c ಯೋಜಯಾಮಾಸ ಕೌರವ್ಯೋ ಯುದ್ಧಕಾಲ ಉಪಸ್ಥಿತೇ||
ಹಾಗೆಯೇ ಕೌರವ್ಯನು ಯುದ್ಧಕಾಲದಲ್ಲಿ ಗುರುತಿಸಲಿಕ್ಕಾಗಿ ಎಲ್ಲರಿಗೂ ಸಂಜ್ಞೆಗಳನ್ನೂ ಆಭರಣಗಳನ್ನೂ ಆಯೋಜಿಸಿದನು.
06001013a ದೃಷ್ಟ್ವಾ ಧ್ವಜಾಗ್ರಂ ಪಾರ್ಥಾನಾಂ ಧಾರ್ತರಾಷ್ಟ್ರೋ ಮಹಾಮನಾಃ|
06001013c ಸಹ ಸರ್ವೈರ್ಮಹೀಪಾಲೈಃ ಪ್ರತ್ಯವ್ಯೂಹತ ಪಾಂಡವಾನ್||
06001014a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ|
06001014c ಮಧ್ಯೇ ನಾಗಸಹಸ್ರಸ್ಯ ಭ್ರಾತೃಭಿಃ ಪರಿವಾರಿತಂ||
ಪಾರ್ಥರ ಧ್ವಜಾಗ್ರವನ್ನು ನೋಡಿದ ಮಹಾಮನಸ್ವಿ ಧಾರ್ತರಾಷ್ಟ್ರನು ನೆತ್ತಿಯ ಮೇಲೆ ಹಿಡಿದಿದ್ದ ಬಿಳಿಯ ಕೊಡೆಯ ನೆರಳಿನಲ್ಲಿ, ಸಹಸ್ರಾರು ಆನೆಗಳ ಮಧ್ಯೆ, ತಮ್ಮಂದಿರಿಂದ ಪರಿವಾರಿತನಾಗಿ ಸರ್ವ ಮಹೀಪಾಲರೊಂದಿಗೆ ಪಾಂಡವರ ವಿರುದ್ಧ ವ್ಯೂಹವನ್ನು ರಚಿಸಿದನು.
06001015a ದೃಷ್ಟ್ವಾ ದುರ್ಯೋಧನಂ ಹೃಷ್ಟಾಃ ಸರ್ವೇ ಪಾಂಡವಸೈನಿಕಾಃ|
06001015c ದಧ್ಮುಃ ಸರ್ವೇ ಮಹಾಶಂಖಾನ್ಭೇರೀರ್ಜಘ್ನುಃ ಸಹಸ್ರಶಃ||
ದುರ್ಯೋಧನನನ್ನು ನೋಡಿ ಸಂತೋಷದಿಂದ ಸರ್ವ ಪಾಂಡವಸೈನಿಕರೂ ಸಹಸ್ರಾರು ಮಹಾಶಂಖಗಳನ್ನು ಊದಿದರು ಮತ್ತು ಭೇರಿಗಳನ್ನು ಬಾರಿಸಿದರು.
06001016a ತತಃ ಪ್ರಹೃಷ್ಟಾಂ ಸ್ವಾಂ ಸೇನಾಮಭಿವೀಕ್ಷ್ಯಾಥ ಪಾಂಡವಾಃ|
06001016c ಬಭೂವುರ್ಹೃಷ್ಟಮನಸೋ ವಾಸುದೇವಶ್ಚ ವೀರ್ಯವಾನ್||
ಆಗ ಪ್ರಹೃಷ್ಟರಾಗಿದ್ದ ತಮ್ಮ ಸೇನೆಯನ್ನು ನೋಡಿ ಪಾಂಡವರೂ ವೀರ್ಯವಾನ್ ವಾಸುದೇವನೂ ಹೃಷ್ಟಮನಸ್ಕರಾದರು.
06001017a ತತೋ ಯೋಧಾನ್ ಹರ್ಷಯಂತೌ ವಾಸುದೇವಧನಂಜಯೌ|
06001017c ದಧ್ಮತುಃ ಪುರುಷವ್ಯಾಘ್ರೌ ದಿವ್ಯೌ ಶಂಖೌ ರಥೇ ಸ್ಥಿತೌ||
ಆಗ ಯೋಧರನ್ನು ಹರ್ಷಗೊಳಿಸುತ್ತಾ ವಾಸುದೇವ-ಧನಂಜಯರಿಬ್ಬರು ಪುರುಷವ್ಯಾಘ್ರರೂ ರಥದಲ್ಲಿ ನಿಂತು ದಿವ್ಯ ಶಂಖಗಳನ್ನು ಊದಿದರು.
06001018a ಪಾಂಚಜನ್ಯಸ್ಯ ನಿರ್ಘೋಷಂ ದೇವದತ್ತಸ್ಯ ಚೋಭಯೋಃ|
06001018c ಶ್ರುತ್ವಾ ಸವಾಹನಾ ಯೋಧಾಃ ಶಕೃನ್ಮೂತ್ರಂ ಪ್ರಸುಸ್ರುವುಃ||
ಪಾಂಚಜನ್ಯ ಮತ್ತು ದೇವದತ್ತ ಇವೆರಡರ ನಿರ್ಘೋಷವನ್ನು ಕೇಳಿ ಪ್ರಾಣಿಗಳೊಂದಿಗೆ ಯೋಧರೂ ಮಲ-ಮೂತ್ರಗಳನ್ನು ವಿಸರ್ಜಿಸಿದರು.
06001019a ಯಥಾ ಸಿಂಹಸ್ಯ ನದತಃ ಸ್ವನಂ ಶ್ರುತ್ವೇತರೇ ಮೃಗಾಃ|
06001019c ತ್ರಸೇಯುಸ್ತದ್ವದೇವಾಸೀದ್ಧಾರ್ತರಾಷ್ಟ್ರಬಲಂ ತದಾ||
ಗರ್ಜಿಸುವ ಸಿಂಹದ ಕೂಗನ್ನು ಕೇಳಿ ಇತರ ಮೃಗಗಳು ಭಯಪಡುವಂತೆ ಧಾರ್ತರಾಷ್ಟ್ರನ ಸೇನೆಯು ಶಂಖನಾದವನ್ನು ಕೇಳಿ ತಲ್ಲಣಿಸಿತು.
06001020a ಉದತಿಷ್ಠದ್ರಜೋ ಭೌಮಂ ನ ಪ್ರಾಜ್ಞಾಯತ ಕಿಂ ಚನ|
06001020c ಅಂತರ್ಧೀಯತ ಚಾದಿತ್ಯಃ ಸೈನ್ಯೇನ ರಜಸಾವೃತಃ||
ಮೇಲೆದ್ದ ಧೂಳಿನಿಂದ ಭೂಮಿಯಲ್ಲಿ ಏನೂ ಕಾಣದಂತಾಯಿತು. ಆದಿತ್ಯನು ಮುಳುಗಿದನೋ ಎನ್ನುವಂತೆ ಧೂಳು ಸೈನ್ಯಗಳನ್ನು ಆವರಿಸಿತು.
06001021a ವವರ್ಷ ಚಾತ್ರ ಪರ್ಜನ್ಯೋ ಮಾಂಸಶೋಣಿತವೃಷ್ಟಿಮಾನ್|
06001021c ವ್ಯುಕ್ಷನ್ಸರ್ವಾಣ್ಯನೀಕಾನಿ ತದದ್ಭುತಮಿವಾಭವತ್||
ಅಲ್ಲಿ ಕಪ್ಪು ಮೋಡಗಳು ಸೇನೆಗಳನ್ನು ಸುತ್ತುವರೆದು ರಕ್ತ-ಮಾಂಸಗಳಿಂದ ಕೂಡಿದ ಮಳೆಯನ್ನು ಸುರಿಸಿದ ಅದ್ಭುತವು ನಡೆಯಿತು.
06001022a ವಾಯುಸ್ತತಃ ಪ್ರಾದುರಭೂನ್ನೀಚೈಃ ಶರ್ಕರಕರ್ಷಣಃ|
06001022c ವಿನಿಘ್ನಂಸ್ತಾನ್ಯನೀಕಾನಿ ವಿಧಮಂಶ್ಚೈವ ತದ್ರಜಃ||
ಆಗ ಕಲ್ಲು-ಮಣ್ಣುಗಳಿಂದ ಕೂಡಿದ ಜೋರಾದ ಭಿರುಗಾಳಿಯು ಕೆಳಗಿನಿಂದ ಬೀಸಿ ಆ ಧೂಳಿನಿಂದ ಸೇನೆಗಳನ್ನು ಬಡಿದು ಹೊಡೆಯಿತು.
06001023a ಉಭೇ ಸೇನೇ ತದಾ ರಾಜನ್ಯುದ್ಧಾಯ ಮುದಿತೇ ಭೃಶಂ|
06001023c ಕುರುಕ್ಷೇತ್ರೇ ಸ್ಥಿತೇ ಯತ್ತೇ ಸಾಗರಕ್ಷುಭಿತೋಪಮೇ||
ರಾಜನ್! ಆಗ ಯುದ್ಧಕ್ಕೆ ತುಂಬ ಸಂತೋಷಗೊಂಡು ಕುರುಕ್ಷೇತ್ರದಲ್ಲಿ ನಿಂತಿರುವ ಆ ಎರಡೂ ಸೇನೆಗಳೂ ಅಲ್ಲೋಲಕಲ್ಲೋಲಗೊಳ್ಳುತ್ತಿರುವ ಸಾಗರಗಳಂತೆ ತೋರಿದವು.
06001024a ತಯೋಸ್ತು ಸೇನಯೋರಾಸೀದದ್ಭುತಃ ಸ ಸಮಾಗಮಃ|
06001024c ಯುಗಾಂತೇ ಸಮನುಪ್ರಾಪ್ತೇ ದ್ವಯೋಃ ಸಾಗರಯೋರಿವ||
ಅವರ ಆ ಸೇನೆಗಳ ಸಮಾಗಮವು ಯುಗಾಂತದಲ್ಲಿ ಎರಡು ಸಾಗರಗಳು ಸೇರುವಂತೆ ಅದ್ಭುತವಾಗಿತ್ತು.
06001025a ಶೂನ್ಯಾಸೀತ್ಪೃಥಿವೀ ಸರ್ವಾ ಬಾಲವೃದ್ಧಾವಶೇಷಿತಾ|
06001025c ತೇನ ಸೇನಾಸಮೂಹೇನ ಸಮಾನೀತೇನ ಕೌರವೈಃ||
ಕೌರವರು ಒಟ್ಟುಸೇರಿಸಿದ ಸೇನಾಸಮೂಹಗಳಿಂದ ಬಾಲಕ-ವೃದ್ಧರನ್ನು ಬಿಟ್ಟು ಭೂಮಿಯಲ್ಲಾ ಬರಿದಾಗಿತ್ತು.
06001026a ತತಸ್ತೇ ಸಮಯಂ ಚಕ್ರುಃ ಕುರುಪಾಂಡವಸೋಮಕಾಃ|
06001026c ಧರ್ಮಾಂಶ್ಚ ಸ್ಥಾಪಯಾಮಾಸುರ್ಯುದ್ಧಾನಾಂ ಭರತರ್ಷಭ||
ಭರತರ್ಷಭ! ಆಗ ಕುರು-ಪಾಂಡವ-ಸೋಮಕರು ಒಪ್ಪಂದವನ್ನು ಮಾಡಿಕೊಂಡು ಯುದ್ಧಗಳಲ್ಲಿ ನಿಯಮ-ಧರ್ಮಗಳನ್ನು ಸ್ಥಾಪಿಸಿದರು.
06001027a ನಿವೃತ್ತೇ ಚೈವ ನೋ ಯುದ್ಧೇ ಪ್ರೀತಿಶ್ಚ ಸ್ಯಾತ್ಪರಸ್ಪರಂ[3]|
06001027c ಯಥಾಪುರಂ[4] ಯಥಾಯೋಗಂ ನ ಚ ಸ್ಯಾಚ್ಚಲನಂ ಪುನಃ||
“ಈ ಯುದ್ಧವು ಮುಗಿದನಂತರ[5] ನಾವು ಪರಸ್ಪರರೊಡನೆ ಪ್ರೀತಿಯಿಂದಲೇ ಇರಬೇಕು. ಮೊದಲಿನಂತೆಯೇ ಪರಸ್ಪರರಲ್ಲಿ ನಡೆದು ಕೊಳ್ಳಬೇಕು.
06001028a ವಾಚಾ ಯುದ್ಧೇ ಪ್ರವೃತ್ತೇ ನೋ ವಾಚೈವ ಪ್ರತಿಯೋಧನಂ|
06001028c ನಿಷ್ಕ್ರಾಂತಃ ಪೃತನಾಮಧ್ಯಾನ್ನ ಹಂತವ್ಯಃ ಕಥಂ ಚನ||
ವಾಕ್ಯುದ್ಧದಲ್ಲಿ ಪ್ರವೃತ್ತರಾದವರನ್ನು ವಾಕ್ಯುದ್ಧದಿಂದಲೇ ಎದುರಿಸಬೇಕು. ಸೇನೆಯನ್ನು ಬಿಟ್ಟು ಹೋಗುವವರನ್ನು ಎಂದೂ ಕೊಲ್ಲಬಾರದು.
06001029a ರಥೀ ಚ ರಥಿನಾ ಯೋಧ್ಯೋ ಗಜೇನ ಗಜಧೂರ್ಗತಃ|
06001029c ಅಶ್ವೇನಾಶ್ವೀ ಪದಾತಿಶ್ಚ ಪದಾತೇನೈವ ಭಾರತ||
ರಥದಲ್ಲಿರುವವನೊಡನೆ ರಥದಲ್ಲಿರುವವನೇ, ಆನೆಯ ಸವಾರನೊಡನೆ ಆನೆಯ ಸವಾರಿಯೇ, ಕುದುರೆಯ ಸವಾರನೊಡನೆ ಕುದುರೆಯ ಸವಾರನೇ, ಮತ್ತು ಪದಾತಿಯೊಡನೆ ಪದಾತಿಯೇ ಯುದ್ಧಮಾಡಬೇಕು.
06001030a ಯಥಾಯೋಗಂ ಯಥಾವೀರ್ಯಂ ಯಥೋತ್ಸಾಹಂ ಯಥಾವಯಃ|
06001030c ಸಮಾಭಾಷ್ಯ ಪ್ರಹರ್ತವ್ಯಂ ನ ವಿಶ್ವಸ್ತೇ ನ ವಿಹ್ವಲೇ||
ಯೋಗ, ವೀರ್ಯ, ಉತ್ಸಾಹ ಮತ್ತು ವಯಸ್ಸಿಗೆ ತಕ್ಕಂತೆ, ಎಚ್ಚರಿಕೆಯನ್ನಿತ್ತು ಹೊಡೆಯಬೇಕು[6]. ಸಿದ್ಧನಾಗಿರದೇ ಇರುವವನನ್ನು ಅಥವಾ ಭಯಭೀತನಾದವನ್ನು ಹೊಡೆಯಬಾರದು.
06001031a ಪರೇಣ ಸಹ ಸಮ್ಯುಕ್ತಃ ಪ್ರಮತ್ತೋ ವಿಮುಖಸ್ತಥಾ|
06001031c ಕ್ಷೀಣಶಸ್ತ್ರೋ ವಿವರ್ಮಾ ಚ ನ ಹಂತವ್ಯಃ ಕಥಂ ಚನ||
ಇನ್ನೊಬ್ಬರೊಡನೆ ಹೋರಾಡುತ್ತಿರುವವನನ್ನು[7], ಬುದ್ಧಿ ಕಳೆದುಕೊಂಡಿರುವವನನ್ನು, ಹಿಂದೆ ಓಡಿಹೋಗುತ್ತಿರುವನನ್ನು, ಶಸ್ತ್ರವನ್ನು ಕಳೆದುಕೊಂಡವನನ್ನು, ಕವಚವಿಲ್ಲದವನನ್ನು ಎಂದೂ ಹೊಡೆಯಬಾರದು.
06001032a ನ ಸೂತೇಷು ನ ಧುರ್ಯೇಷು ನ ಚ ಶಸ್ತ್ರೋಪನಾಯಿಷು|
06001032c ನ ಭೇರೀಶಂಖವಾದೇಷು ಪ್ರಹರ್ತವ್ಯಂ ಕಥಂ ಚನ||
ಸೂತರನ್ನು[8], ಕಟ್ಟಿದ ಪ್ರಾಣಿಗಳನ್ನು, ಶಸ್ತ್ರಗಳ ಸರಬರಾಜುಮಾಡುವವರನ್ನು, ಭೇರಿ-ಶಂಖಗಳನ್ನು ನುಡಿಸುವವರನ್ನು ಎಂದೂ ಹೊಡೆಯಬಾರದು.”
06001033a ಏವಂ ತೇ ಸಮಯಂ ಕೃತ್ವಾ ಕುರುಪಾಂಡವಸೋಮಕಾಃ|
06001033c ವಿಸ್ಮಯಂ ಪರಮಂ ಜಗ್ಮುಃ ಪ್ರೇಕ್ಷಮಾಣಾಃ ಪರಸ್ಪರಂ||
ಈ ರೀತಿ ಒಪ್ಪಂದವನ್ನು ಮಾಡಿಕೊಂಡು ಕುರು-ಪಾಂಡವ-ಸೋಮಕರು ಪರಸ್ಪರರನ್ನು ವೀಕ್ಷಿಸಿ ಪರಮ ವಿಸ್ಮಿತರಾದರು.
06001034a ನಿವಿಶ್ಯ ಚ ಮಹಾತ್ಮಾನಸ್ತತಸ್ತೇ ಪುರುಷರ್ಷಭಾಃ|
06001034c ಹೃಷ್ಟರೂಪಾಃ ಸುಮನಸೋ ಬಭೂವುಃ ಸಹಸೈನಿಕಾಃ||
ಅಲ್ಲಿ ತಂಗಿದ ಆ ಮಹಾತ್ಮ ಪುರುಷರ್ಷಭರು ಸೈನಿಕರೊಂದಿಗೆ ಹೃಷ್ಟರೂಪರೂ ಸುಮನಸ್ಕರೂ ಆದರು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಸೈನ್ಯಶಿಕ್ಷಣೇ ಪ್ರಥಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಸೈನ್ಯಶಿಕ್ಷಣ ಎನ್ನುವ ಮೊದಲನೇ ಅಧ್ಯಾಯವು.
[1]ಇನ್ನು ಭೀಷ್ಮಪರ್ವವು ಮುಗಿಯುವವರೆಗೆ “ಜನಮೇಜಯ ಉವಾಚ” ಎನ್ನುವುದು ಬರುವುದಿಲ್ಲ.
[2]“ಸುಮಹಾತ್ಮಾನೋ” ಎಂಬ ಪಾಠವೂ ಇದೆ [ಭಾರತ ದರ್ಶನ ಪ್ರಕಾಶನ, ಸಂಪುಟ ೧೨, ಪುಟ ೧].
[3] ನಿವೃತ್ತೇ ವಿಹಿತೇ ಯುದ್ಧೇ ಸ್ಯಾತ್ಪ್ರೀತಿರ್ನ ಪರಸ್ಪರಂ| ಎಂಬ ಪಾಠಾಂತರವಿದೆ [ಭಾರತ ದರ್ಶನ ಪ್ರಕಾಶನ, ಸಂಪುಟ ೧೨, ಪುಟ ೫].
[4] ಕೆಲವು ಪುಸ್ತಕಗಳಲ್ಲಿ ಯಥಾಪರ ಎಂಬ ಪಾಠಾಂತರವಿದೆ. ಹೀಗೆ ಈ ಶ್ಲೋಕದ ಉತ್ತರಾರ್ಧವನ್ನು ಕೆಲವರು ಈ ರೀತಿ ವ್ಯಾಖ್ಯಾನಿಸಿದ್ದಾರೆ: ಯಥಾಯೋಗಂ = ತುಲ್ಯಯೋರ್ಯೋಗಸ್ಯ ಅನತಿಕ್ರಮಣಂ - ಸಮಾನಬಲವುಳ್ಳವರು ಮಾತ್ರವೇ ಪರಸ್ಪರರಲ್ಲಿ ಯುದ್ಧಮಾಡಬೇಕು. ಯಥಾಪರಂ = ಯಥಾ ಏನ ಪ್ರಕಾರೇಣ ಅಪರಂ ಅನುತ್ಕೃಷ್ಟಂ ಅನ್ಯಾಯ್ಯಂ ಇತ್ಯರ್ಥಃ| ತಥಾ ನ ಕಸ್ಯಚಿತ್ತುಲ್ಯಯೋಗಾಕ್ರಮಃ ಸ್ಯಾದಿತಿ ಭಾವಃ - ಅನ್ಯಾಯವಾಗದಂತೆ ಅಸಮಾನಬಲವುಳ್ಳವರು ಪರಸ್ಪರ ಕಾದಾಡುವಂತೆ ಯಾವನೊಬ್ಬನೂ ಬಲದಲ್ಲಿ ತನ್ನನ್ನು ಮೀರಿದವನೊಡನೆ ಯುದ್ಧಮಾಡದಂತೆ ನೋಡಿಕೊಳ್ಳಬೇಕು.
[5] ಕೆಲವು ವ್ಯಾಖ್ಯಾನಕಾರರು ಯುದ್ಧೇ ನಿವೃತ್ತೇ ಎಂಬುದಕ್ಕೆ ಪ್ರತಿದಿನ ಸಾಯಂಕಾಲ ಯುದ್ಧವಿರಾಮದ ಸಮಯದಲ್ಲಿ ಎಂದು ಅರ್ಥೈಸಿದ್ದಾರೆ.
[6] ಅವನು ತನಗೆ ಸರಿಸಮನಾಗಿದ್ದಾನೆಯೇ? ಅವನಿಗೆ ತನ್ನೊಡನೆ ಯುದ್ಧಮಾಡುವ ಇಚ್ಛೆಯಿದೆಯೇ? ಅವನು ತನ್ನೊಡನೆ ಯುದ್ಧಮಾಡಲು ಉತ್ಸಾಹದಿಂದಿರುವನೇ? ಅವನಿಗೆ ತನ್ನೊಡನೆ ಯುದ್ಧಮಾಡಲು ಸಾಕಷ್ಟು ಬಲವಿದೆಯೇ? ಎಂದು ಸಮಾಲೋಚಿಸಿ ಎದುರಾಳಿಯನ್ನು ಆರಿಸಿಕೊಳ್ಳಬೇಕು. [ಭಾರತ ದರ್ಶನ ಪ್ರಕಾಶನ, ಸಂಪುಟ ೧೨, ಪುಟ ೬-೭].
[7] ಒಬ್ಬನು ಇನ್ನೊಬ್ಬನೊಡನೆ ಯುದ್ಧಮಾಡುತ್ತಿರುವಾಗ ತನ್ನ ಕಡೆಯವನ ಬಲವು ಕ್ಷೀಣಿಸುತ್ತಿರುವುದನ್ನು ನೋಡಿ ಮಿತ್ರಯೋಧನಾದ ಇನ್ನೊಬ್ಬನು ಮಧ್ಯದಲ್ಲಿ ಪ್ರವೇಶಿಸಿ ಎದುರಾಳಿಯನ್ನು ಸಂಹರಿಸಬಾರದು. [ಭಾರತ ದರ್ಶನ ಪ್ರಕಾಶನ, ಸಂಪುಟ ೧೨, ಪುಟ ೭].
[8] ಕೆಲವು ವ್ಯಾಖ್ಯಾನಕಾರರು ಸೂತ ಎಂಬ ಶಬ್ಧಕ್ಕೆ ಕುದುರೆಗಳನ್ನು ಸಾಕುವವರೆಂದೂ ಧುರ್ಯ ಎಂಬ ಶಬ್ಧಕ್ಕೆ ಭಾರವನ್ನು ಹೊರುವ ಸೇವಕರೆಂದೂ ಅರ್ಥೈಸಿದ್ದಾರೆ.