|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
೧
ಭೀಷ್ಮನಿಗೆ ಜಲತರ್ಪಣವನ್ನಿತ್ತು ಯುಧಿಷ್ಠಿರನು ಶೋಕಾರ್ತನಾಗಿ ಕುಸಿದು ಬೀಳುವುದು (೧-೫). ಧೃತರಾಷ್ಟ್ರನು ಯುಧಿಷ್ಠಿರನನ್ನು ಸಂತೈಸುವುದು (೬-೧೯).
14001001 ವೈಶಂಪಾಯನ ಉವಾಚ|
14001001a ಕೃತೋದಕಂ ತು ರಾಜಾನಂ ಧೃತರಾಷ್ಟ್ರಂ ಯುಧಿಷ್ಠಿರಃ|
14001001c ಪುರಸ್ಕೃತ್ಯ ಮಹಾಬಾಹುರುತ್ತತಾರಾಕುಲೇಂದ್ರಿಯಃ||
ವೈಶಂಪಾಯನನು ಹೇಳಿದನು: “ಮಹಾಬಾಹು ಯುಧಿಷ್ಠಿರನು ಭೀಷ್ಮನಿಗೆ ಜಲತರ್ಪಣವನ್ನಿತ್ತು ರಾಜಾ ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ವ್ಯಾಕುಲಚಿತ್ತನಾಗಿ ಗಂಗಾನದಿಯ ತಟವನ್ನೇರಿದನು.
14001002a ಉತ್ತೀರ್ಯ ಚ ಮಹೀಪಾಲೋ ಬಾಷ್ಪವ್ಯಾಕುಲಲೋಚನಃ|
14001002c ಪಪಾತ ತೀರೇ ಗಂಗಾಯಾ ವ್ಯಾಧವಿದ್ಧ ಇವ ದ್ವಿಪಃ||
ಮೇಲೇರುತ್ತಲೇ ಬಾಷ್ಪವ್ಯಾಕುಲಕಣ್ಣುಗಳ ಆ ಮಹೀಪಾಲನು ಬೇಟೆಗಾರನಿಂದ ಹೊಡೆಯಲ್ಪಟ್ಟ ಆನೆಯಂತೆ ಗಂಗಾನದಿಯ ತೀರದಲ್ಲಿಯೇ ಬಿದ್ದುಬಿಟ್ಟನು.
14001003a ತಂ ಸೀದಮಾನಂ ಜಗ್ರಾಹ ಭೀಮಃ ಕೃಷ್ಣೇನ ಚೋದಿತಃ|
14001003c ಮೈವಮಿತ್ಯಬ್ರವೀಚ್ಚೈನಂ ಕೃಷ್ಣಃ ಪರಬಲಾರ್ದನಃ||
ಕುಸಿಯುತ್ತಿದ್ದ ಅವನನ್ನು ಕೃಷ್ಣನ ಹೇಳಿಕೆಯಂತೆ ಭೀಮನು ಹಿಡಿದುಕೊಂಡನು. ಪರಬಲಾರ್ದನ ಕೃಷ್ಣನು “ಹೀಗಾಗಬೇಡ!” ಎಂದು ಯುಧಿಷ್ಠಿರನಿಗೆ ಹೇಳಿದನು.
14001004a ತಮಾರ್ತಂ ಪತಿತಂ ಭೂಮೌ ನಿಶ್ವಸಂತಂ ಪುನಃ ಪುನಃ|
14001004c ದದೃಶುಃ ಪಾಂಡವಾ ರಾಜನ್ಧರ್ಮಾತ್ಮಾನಂ ಯುಧಿಷ್ಠಿರಮ್||
ರಾಜನ್! ಆರ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ನೆಲದ ಮೇಲೆ ಬಿದ್ದ ಧರ್ಮಾತ್ಮ ಯುಧಿಷ್ಠಿರನನ್ನು ಪಾಂಡವರು ನೋಡಿದರು.
14001005a ತಂ ದೃಷ್ಟ್ವಾ ದೀನಮನಸಂ ಗತಸತ್ತ್ವಂ ಜನೇಶ್ವರಮ್|
14001005c ಭೂಯಃ ಶೋಕಸಮಾವಿಷ್ಟಾಃ ಪಾಂಡವಾಃ ಸಮುಪಾವಿಶನ್||
ಸತ್ವವನ್ನು ಕಳೆದುಕೊಂಡು ದೀನಮನಸ್ಕನಾಗಿದ್ದ ಜನೇಶ್ವರನನ್ನು ನೋಡಿ ಇನ್ನೂ ಶೋಕಸಮಾವಿಷ್ಟರಾಗಿ ಪಾಂಡವರು ಅವನ ಬಳಿಯಲ್ಲಿಯೇ ಕುಳಿತುಕೊಂಡರು.
14001006a ರಾಜಾ ಚ ಧೃತರಾಷ್ಟ್ರಸ್ತಮುಪಾಸೀನೋ ಮಹಾಭುಜಃ|
14001006c ವಾಕ್ಯಮಾಹ ಮಹಾಪ್ರಾಜ್ಞೋ ಮಹಾಶೋಕಪ್ರಪೀಡಿತಮ್||
ಆಗ ಮಹಾಭುಜ ಮಹಾಪ್ರಾಜ್ಞ ರಾಜಾ ಧೃತರಾಷ್ಟ್ರನು ಮಹಾಶೋಕದಿಂದ ಪೀಡಿತನಾಗಿ ಕುಳಿತಿದ್ದ ಯುಧಿಷ್ಠಿರನಿಗೆ ಹೇಳಿದನು:
14001007a ಉತ್ತಿಷ್ಠ ಕುರುಶಾರ್ದೂಲ ಕುರು ಕಾರ್ಯಮನಂತರಮ್|
14001007c ಕ್ಷತ್ರಧರ್ಮೇಣ ಕೌರವ್ಯ ಜಿತೇಯಮವನಿಸ್ತ್ವಯಾ||
“ಕುರುಶಾರ್ದೂಲ! ಎದ್ದೇಳು! ನಂತರದ ಕಾರ್ಯಗಳನ್ನು ಮಾಡುವವನಾಗು! ಕೌರವ್ಯ! ಕ್ಷತ್ರಧರ್ಮದಿಂದಲೇ ನೀನು ಈ ಅವನಿಯನ್ನು ಗೆದ್ದಿರುವೆ!
14001008a ತಾಂ ಭುಂಕ್ಷ್ವ ಭ್ರಾತೃಭಿಃ ಸಾರ್ಧಂ ಸುಹೃದ್ಭಿಶ್ಚ ಜನೇಶ್ವರ|
14001008c ನ ಶೋಚಿತವ್ಯಂ ಪಶ್ಯಾಮಿ ತ್ವಯಾ ಧರ್ಮಭೃತಾಂ ವರ||
ಜನೇಶ್ವರ! ಸಹೋದರರು ಮತ್ತು ಸ್ನೇಹಿತರೊಂದಿಗೆ ಅದನ್ನು ಭೋಗಿಸು! ಧರ್ಮಭೃತರಲ್ಲಿ ಶ್ರೇಷ್ಠನೇ! ನಿನ್ನ ಈ ಶೋಕಕ್ಕೆ ಯಾವ ಕಾರಣವನ್ನೂ ನಾನು ಕಾಣುತ್ತಿಲ್ಲ.
14001009a ಶೋಚಿತವ್ಯಂ ಮಯಾ ಚೈವ ಗಾಂಧಾರ್ಯಾ ಚ ವಿಶಾಂ ಪತೇ|
14001009c ಪುತ್ರೈರ್ವಿಹೀನೋ ರಾಜ್ಯೇನ ಸ್ವಪ್ನಲಬ್ಧಧನೋ ಯಥಾ||
ವಿಶಾಂಪತೇ! ಕನಸಿನಲ್ಲಿ ಕಂಡ ಧನದಂತೆ ಪುತ್ರರನ್ನೂ ರಾಜ್ಯವನ್ನೂ ಕಳೆದುಕೊಂಡು ನಾನು ಮತ್ತು ಗಾಂಧಾರಿ ಶೋಕಿಸಬೇಕಾಗಿದೆ.
14001010a ಅಶ್ರುತ್ವಾ ಹಿತಕಾಮಸ್ಯ ವಿದುರಸ್ಯ ಮಹಾತ್ಮನಃ|
14001010c ವಾಕ್ಯಾನಿ ಸುಮಹಾರ್ಥಾನಿ ಪರಿತಪ್ಯಾಮಿ ದುರ್ಮತಿಃ||
ನನ್ನ ಹಿತವನ್ನೇ ಬಯಸಿದ್ದ ಮಹಾತ್ಮ ವಿದುರನ ಮಹಾ ಅರ್ಥಗಳಿದ್ದ ಮಾತುಗಳನ್ನು ಕೇಳದೇ ದುರ್ಮತಿಯಾದ ನಾನು ಪರಿತಪಿಸುತ್ತಿದ್ದೇನೆ.
14001011a ಉಕ್ತವಾನೇಷ ಮಾಂ ಪೂರ್ವಂ ಧರ್ಮಾತ್ಮಾ ದಿವ್ಯದರ್ಶನಃ|
14001011c ದುರ್ಯೋಧನಾಪರಾಧೇನ ಕುಲಂ ತೇ ವಿನಶಿಷ್ಯತಿ||
ಆ ಧರ್ಮಾತ್ಮಾ ದಿವ್ಯದರ್ಶನನು ನನಗೆ ಹಿಂದೆಯೇ ಈ ರೀತಿ ಹೇಳಿದ್ದನು: “ದುರ್ಯೋಧನನ ಅಪರಾಧದಿಂದ ನಿನ್ನ ಕುಲವು ನಾಶವಾಗುತ್ತದೆ.
14001012a ಸ್ವಸ್ತಿ ಚೇದಿಚ್ಚಸೇ ರಾಜನ್ಕುಲಸ್ಯಾತ್ಮನ ಏವ ಚ|
14001012c ವಧ್ಯತಾಮೇಷ ದುಷ್ಟಾತ್ಮಾ ಮಂದೋ ರಾಜಾ ಸುಯೋಧನಃ||
ರಾಜನ್! ನಿನ್ನ ಮತ್ತು ನಿನ್ನ ಕುಲದ ಒಳಿತನ್ನು ಬಯಸುವೆಯಾದರೆ ಈ ಮೂಢ ದುಷ್ಟಾತ್ಮ ರಾಜಾ ಸುಯೋಧನನನ್ನು ವಧಿಸು.
14001013a ಕರ್ಣಶ್ಚ ಶಕುನಿಶ್ಚೈವ ಮೈನಂ ಪಶ್ಯತು ಕರ್ಹಿ ಚಿತ್|
14001013c ದ್ಯೂತಸಂಪಾತಮಪ್ಯೇಷಾಮಪ್ರಮತ್ತೋ ನಿವಾರಯ||
ಕರ್ಣ-ಶಕುನಿಯರು ಅವನನ್ನು ಎಂದೂ ನೋಡದಂತೆಯಾದರೂ ಮಾಡು. ಅಥವಾ ಅವರು ದ್ಯೂತಕ್ಕೆ ಸಿಲುಕಿ ಅಪ್ರಮತ್ತರಾಗುವುದನ್ನಾದರೂ ತಡೆ!
14001014a ಅಭಿಷೇಚಯ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್|
14001014c ಸ ಪಾಲಯಿಷ್ಯತಿ ವಶೀ ಧರ್ಮೇಣ ಪೃಥಿವೀಮಿಮಾಮ್||
ಧರ್ಮಾತ್ಮ ಯುಧಿಷ್ಠಿರನನ್ನು ರಾಜನನ್ನಾಗಿ ಅಭಿಷೇಕಿಸು. ಅವನು ಧರ್ಮವನ್ನು ಅನುಸರಿಸಿ ಈ ಪೃಥ್ವಿಯನ್ನು ಪಾಲಿಸುತ್ತಾನೆ!
14001015a ಅಥ ನೇಚ್ಚಸಿ ರಾಜಾನಂ ಕುಂತೀಪುತ್ರಂ ಯುಧಿಷ್ಠಿರಮ್|
14001015c ಮೇಢೀಭೂತಃ ಸ್ವಯಂ ರಾಜ್ಯಂ ಪ್ರತಿಗೃಹ್ಣೀಷ್ವ ಪಾರ್ಥಿವ||
ಪಾರ್ಥಿವ! ಒಂದುವೇಳೆ ನಿನಗೆ ಕುಂತೀಪುತ್ರ ಯುಧಿಷ್ಠಿರನು ರಾಜನಾಗುವುದು ಇಷ್ಟವಿರದೇ ಇದ್ದರೆ ನೀನೇ ಮೇಟಿಯ ಕಂಬದಂತವನಾಗಿ ರಾಜ್ಯವನ್ನು ಸ್ವೀಕರಿಸು!
14001016a ಸಮಂ ಸರ್ವೇಷು ಭೂತೇಷು ವರ್ತಮಾನಂ ನರಾಧಿಪ|
14001016c ಅನುಜೀವಂತು ಸರ್ವೇ ತ್ವಾಂ ಜ್ಞಾತಯೋ ಜ್ಞಾತಿವರ್ಧನ||
ನರಾಧಿಪ! ಸರ್ವಭೂತಗಳಲ್ಲಿಯೂ ಸಮನಾಗಿ ವರ್ತಿಸುವ ನಿನ್ನನ್ನು ಅನುಸರಿಸಿ ನಿನ್ನ ಎಲ್ಲ ಜ್ಞಾತಿಬಾಂಧವರೂ ವರ್ಧಿಸಲಿ!”
14001017a ಏವಂ ಬ್ರುವತಿ ಕೌಂತೇಯ ವಿದುರೇ ದೀರ್ಘದರ್ಶಿನಿ|
14001017c ದುರ್ಯೋಧನಮಹಂ ಪಾಪಮನ್ವವರ್ತಂ ವೃಥಾಮತಿಃ||
ಕೌಂತೇಯ! ದೀರ್ಘದರ್ಶಿನಿಯಾದ ವಿದುರನು ಹೀಗೆ ಹೇಳಿದ್ದರೂ ವೃಥಾಮತಿಯಾದ ನಾನು ಪಾಪಿ ದುರ್ಯೋಧನನನ್ನು ಅನುಸರಿಸಿದೆ.
14001018a ಅಶ್ರುತ್ವಾ ಹ್ಯಸ್ಯ ವೀರಸ್ಯ ವಾಕ್ಯಾನಿ ಮಧುರಾಣ್ಯಹಮ್|
14001018c ಫಲಂ ಪ್ರಾಪ್ಯ ಮಹದ್ದುಃಖಂ ನಿಮಗ್ನಃ ಶೋಕಸಾಗರೇ||
ಆ ವೀರನ ಮಧುರ ಮಾತುಗಳನ್ನು ಕೇಳದೇ ಈ ಮಹಾದುಃಖವನ್ನು ಪಡೆದು ಶೋಕಸಾಗರದಲ್ಲಿ ಮುಳುಗಿ ಹೋಗಿದ್ದೇನೆ.
14001019a ವೃದ್ಧೌ ಹಿ ತೇ ಸ್ವಃ ಪಿತರೌ ಪಶ್ಯಾವಾಂ ದುಃಖಿತೌ ನೃಪ|
14001019c ನ ಶೋಚಿತವ್ಯಂ ಭವತಾ ಪಶ್ಯಾಮೀಹ ಜನಾಧಿಪ||
ನೃಪ! ನರಾಧಿಪ! ದುಃಖದಲ್ಲಿರುವ ನಿನ್ನ ಈ ವೃದ್ಧ ತಂದೆ-ತಾಯಿಯರನ್ನು ನೋಡು. ನಮ್ಮನ್ನು ನೋಡಿ ನೀನು ಶೋಕಿಸಬಾರದು!””
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಯುಧಿಷ್ಠಿರಸಾಂತ್ವನೇ ಪ್ರಥಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಯುಧಿಷ್ಠಿರಸಾಂತ್ವನ ಎನ್ನುವ ಮೊದಲನೇ ಅಧ್ಯಾಯವು.