ಆಶ್ರಮವಾಸಿಕ ಪರ್ವ: ನಾರದಾಗಮನ ಪರ್ವ
೪೭
ಧೃತರಾಷ್ಟ್ರ ಶ್ರಾದ್ಧ ಕರಣ
ಯುಧಿಷ್ಠಿರನನ್ನು ನಾರದನು ಸಮಾಧಾನಗೊಳಿಸಿದುದು (೧-೯). ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಶ್ರಾದ್ಧಕರಣ (೧೦-೨೭).
15047001 ನಾರದ ಉವಾಚ|
15047001a ನಾಸೌ ವೃಥಾಗ್ನಿನಾ ದಗ್ಧೋ ಯಥಾ ತತ್ರ ಶ್ರುತಂ ಮಯಾ|
15047001c ವೈಚಿತ್ರವೀರ್ಯೋ ನೃಪತಿಸ್ತತ್ತೇ ವಕ್ಷ್ಯಾಮಿ ಭಾರತ||
ನಾರದನು ಹೇಳಿದನು: "ಭಾರತ! ನೃಪತಿ ವೈಚಿತ್ರವೀರ್ಯನು ಅಲ್ಲಿ ವೃಥಾ ಕಾಡ್ಗಿಚ್ಚಿನಲ್ಲಿ ಸುಟ್ಟುಹೋಗಲಿಲ್ಲ. ಅಲ್ಲಿ ನಾನು ಕೇಳಿದುದನ್ನು ಹೇಳುತ್ತೇನೆ. ಕೇಳು.
15047002a ವನಂ ಪ್ರವಿಶತಾ ತೇನ ವಾಯುಭಕ್ಷೇಣ ಧೀಮತಾ|
15047002c ಅಗ್ನಯಃ ಕಾರಯಿತ್ವೇಷ್ಟಿಮುತ್ಸೃಷ್ಟಾ ಇತಿ ನಃ ಶ್ರುತಮ್||
ವಾಯುವನ್ನೇ ಆಹಾರವನ್ನಾಗಿ ಸೇವಿಸುತ್ತಿದ್ದ ಆ ಧೀಮತ ಧೃತರಾಷ್ಟ್ರನು ವನವನ್ನು ಪ್ರವೇಶಿಸುವಾಗ ತನ್ನ ಅಗ್ನಿಯಲ್ಲಿ ಇಷ್ಟಿಯನ್ನು ಮಾಡಿಸಿ ವಿಸರ್ಜಿಸಿದನೆಂದು ನಾನು ಕೇಳಿದ್ದೇನೆ.
15047003a ಯಾಜಕಾಸ್ತು ತತಸ್ತಸ್ಯ ತಾನಗ್ನೀನ್ನಿರ್ಜನೇ ವನೇ|
15047003c ಸಮುತ್ಸೃಜ್ಯ ಯಥಾಕಾಮಂ ಜಗ್ಮುರ್ಭರತಸತ್ತಮ||
ಭರತಸತ್ತಮ! ಯಾಜಕರು ಆ ಅಗ್ನಿಯನ್ನು ನಿರ್ಜನ ವನದಲ್ಲಿ ವಿಸರ್ಜಿಸಿ, ಇಷ್ಟಬಂದಲ್ಲಿಗೆ ಹೊರಟುಹೋಗಿದ್ದರು.
15047004a ಸ ವಿವೃದ್ಧಸ್ತದಾ ವಹ್ನಿರ್ವನೇ ತಸ್ಮಿನ್ನಭೂತ್ಕಿಲ|
15047004c ತೇನ ತದ್ವನಮಾದೀಪ್ತಮಿತಿ ಮೇ ತಾಪಸಾಬ್ರುವನ್||
ಅದೇ ಅಗ್ನಿಯು ಆಗ ಗಾಳಿಗೆ ಸಿಲುಕಿ ಕಾಡ್ಗಿಚ್ಚಾಗಿ ಆ ವನದಲ್ಲಿ ಪಸರಿಸಿಕೊಂಡಿತು ಎಂದು ನನಗೆ ತಾಪಸರು ಹೇಳಿದರು.
15047005a ಸ ರಾಜಾ ಜಾಹ್ನವೀಕಚ್ಚೇ ಯಥಾ ತೇ ಕಥಿತಂ ಮಯಾ|
15047005c ತೇನಾಗ್ನಿನಾ ಸಮಾಯುಕ್ತಃ ಸ್ವೇನೈವ ಭರತರ್ಷಭ||
ಭರತರ್ಷಭ! ನಾನು ಈ ಮೊದಲೇ ಹೇಳಿದಂತೆ ಜಾಹ್ನವೀ ತೀರದಲ್ಲಿ ರಾಜಾ ಧೃತರಾಷ್ಟ್ರನು ಸ್ವ-ಇಚ್ಛೆಯಿಂದ ಅದೇ ಅಗ್ನಿಯಲ್ಲಿ ಸಮಾಯುಕ್ತನಾದನು.
15047006a ಏವಮಾವೇದಯಾಮಾಸುರ್ಮುನಯಸ್ತೇ ಮಮಾನಘ|
15047006c ಯೇ ತೇ ಭಾಗೀರಥೀತೀರೇ ಮಯಾ ದೃಷ್ಟಾ ಯುಧಿಷ್ಠಿರ||
ಅನಘ! ಯುಧಿಷ್ಠಿರ! ಹೀಗೆ ಭಾಗೀರಥೀ ತೀರದಲ್ಲಿ ನಾನು ಕಂಡ ಮುನಿಗಳು ನನ್ನಲ್ಲಿ ಹೇಳಿಕೊಂಡರು.
15047007a ಏವಂ ಸ್ವೇನಾಗ್ನಿನಾ ರಾಜಾ ಸಮಾಯುಕ್ತೋ ಮಹೀಪತೇ|
15047007c ಮಾ ಶೋಚಿಥಾಸ್ತ್ವಂ ನೃಪತಿಂ ಗತಃ ಸ ಪರಮಾಂ ಗತಿಮ್||
ಮಹೀಪತೇ! ಹೀಗೆ ರಾಜಾ ಧೃತರಾಷ್ಟ್ರನು ತನ್ನದೇ ಅಗ್ನಿಯಲ್ಲಿ ಸಮಾಯುಕ್ತನಾದನು. ರಾಜನು ಪರಮ ಗತಿಯನ್ನು ಹೊಂದಿದ್ದಾನೆ. ಅದರ ಕುರಿತು ನೀನು ಶೋಕಿಸಬೇಡ!
15047008a ಗುರುಶುಶ್ರೂಷಯಾ ಚೈವ ಜನನೀ ತವ ಪಾಂಡವ|
15047008c ಪ್ರಾಪ್ತಾ ಸುಮಹತೀಂ ಸಿದ್ಧಿಮಿತಿ ಮೇ ನಾತ್ರ ಸಂಶಯಃ||
ಪಾಂಡವ! ನಿನ್ನ ಜನನಿಯೂ ಕೂಡ ಗುರುಶುಶ್ರೂಷೆಗಳಿಂದ ಮಹಾ ಸಿದ್ಧಿಯನ್ನೇ ಪಡೆದಿದ್ದಾಳೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.
15047009a ಕರ್ತುಮರ್ಹಸಿ ಕೌರವ್ಯ ತೇಷಾಂ ತ್ವಮುದಕಕ್ರಿಯಾಮ್|
15047009c ಭ್ರಾತೃಭಿಃ ಸಹಿತಃ ಸರ್ವೈರೇತದತ್ರ ವಿಧೀಯತಾಮ್||
ಕೌರವ್ಯ! ಸಹೋದರರೊಡಗೂಡಿ ನೀನು ಅವರೆಲ್ಲರ ಉದಕಕ್ರಿಯೆಗಳನ್ನು ಮಾಡಬೇಕಾಗಿದೆ. ಇದನ್ನು ಈಗಲೇ ಮಾಡುವವನಾಗು!""
15047010 ವೈಶಂಪಾಯನ ಉವಾಚ|
15047010a ತತಃ ಸ ಪೃಥಿವೀಪಾಲಃ ಪಾಂಡವಾನಾಂ ಧುರಂಧರಃ|
15047010c ನಿರ್ಯಯೌ ಸಹ ಸೋದರ್ಯೈಃ ಸದಾರೋ ಭರತರ್ಷಭ||
ವೈಶಂಪಾಯನನು ಹೇಳಿದನು: "ಭರತರ್ಷಭ! ಆಗ ಪಾಂಡವರ ಧುರಂಧರ ಪೃಥಿವೀಪಾಲ ಯುಧಿಷ್ಠಿರನು ತನ್ನ ಸಹೋದರರೊಂದಿಗೆ ಹಸ್ತಿನಾಪುರದ ಹೊರ ಹೊರಟನು.
15047011a ಪೌರಜಾನಪದಾಶ್ಚೈವ ರಾಜಭಕ್ತಿಪುರಸ್ಕೃತಾಃ|
15047011c ಗಂಗಾಂ ಪ್ರಜಗ್ಮುರಭಿತೋ ವಾಸಸೈಕೇನ ಸಂವೃತಾಃ||
ರಾಜಭಕ್ತಿಯಿಂದ ಪ್ರೇರಿತರಾದ ಗ್ರಾಮೀಣ-ಪೌರ ಜನರೂ ಕೂಡ ಒಂದೇ ವಸ್ತ್ರವನ್ನು ಸುತ್ತಿಕೊಂಡು ಗಂಗೆಯ ಮುಖವಾಗಿ ಹೊರಟರು.
15047012a ತತೋಽವಗಾಹ್ಯ ಸಲಿಲಂ ಸರ್ವೇ ತೇ ಕುರುಪುಂಗವಾಃ|
15047012c ಯುಯುತ್ಸುಮಗ್ರತಃ ಕೃತ್ವಾ ದದುಸ್ತೋಯಂ ಮಹಾತ್ಮನೇ||
ಆ ಕುರುಪುಂಗವರೆಲ್ಲರೂ ನದಿಯನ್ನು ಸೇರಿ ಯುಯುತ್ಸುವನ್ನು ಮುಂದೆಮಾಡಿಕೊಂಡು ಮಹಾತ್ಮ ಧೃತರಾಷ್ಟ್ರನಿಗೆ ತರ್ಪಣವನ್ನಿತ್ತರು.
15047013a ಗಾಂಧಾರ್ಯಾಶ್ಚ ಪೃಥಾಯಾಶ್ಚ ವಿಧಿವನ್ನಾಮಗೋತ್ರತಃ|
15047013c ಶೌಚಂ ನಿವರ್ತಯಂತಸ್ತೇ ತತ್ರೋಷುರ್ನಗರಾದ್ ಬಹಿಃ||
ವಿಧಿವತ್ತಾಗಿ ನಾಮ-ಗೋತ್ರಗಳನ್ನು ಹೇಳಿಕೊಂಡು ಗಾಂಧಾರಿಗೂ ಪೃಥೆಗೂ ತರ್ಪಣಗಳನ್ನಿತ್ತರು. ಶೌಚಕಾರ್ಯದಲ್ಲಿ ನಿರತರಾಗಿ ಅವರು ನಗರದ ಹೊರಗಡೆಯೇ ಉಳಿದುಕೊಂಡರು.
15047014a ಪ್ರೇಷಯಾಮಾಸ ಸ ನರಾನ್ವಿಧಿಜ್ಞಾನಾಪ್ತಕಾರಿಣಃ|
15047014c ಗಂಗಾದ್ವಾರಂ ಕುರುಶ್ರೇಷ್ಠೋ ಯತ್ರ ದಗ್ಧೋಽಭವನ್ನೃಪಃ||
ಅನಂತರ ನೃಪನು ವಿಧಿವಿಧಾನಗಳನ್ನು ತಿಳಿದಿದ್ದ ಆಪ್ತರನ್ನು ಕುರುಶ್ರೇಷ್ಠ ಧೃತರಾಷ್ಟ್ರನು ಸುಟ್ಟುಹೋಗಿದ್ದ ಗಂಗಾದ್ವಾರದ ಸ್ಥಳಕ್ಕೆ ಕಳುಹಿಸಿಕೊಟ್ಟನು.
15047015a ತತ್ರೈವ ತೇಷಾಂ ಕುಲ್ಯಾನಿ ಗಂಗಾದ್ವಾರೇಽನ್ವಶಾತ್ತದಾ|
15047015c ಕರ್ತವ್ಯಾನೀತಿ ಪುರುಷಾನ್ದತ್ತದೇಯಾನ್ಮಹೀಪತಿಃ||
ಅಲ್ಲಿಯೇ ಗಂಗಾದ್ವಾರದಲ್ಲಿ ಅವರ ಅಪರಕ್ರಿಯೆಗಳನ್ನು ಮಾಡಲು ಶಾಸನವನ್ನಿತ್ತನು. ಮಹೀಪತಿಯು ಆ ಪುರುಷರಿಗೆ ದಾನನೀಡಲು ಪದಾರ್ಥಗಳನ್ನಿತ್ತನು.
15047016a ದ್ವಾದಶೇಽಹನಿ ತೇಭ್ಯಃ ಸ ಕೃತಶೌಚೋ ನರಾಧಿಪಃ|
15047016c ದದೌ ಶ್ರಾದ್ಧಾನಿ ವಿಧಿವದ್ದಕ್ಷಿಣಾವಂತಿ ಪಾಂಡವಃ||
ಹನ್ನೆರಡನೆಯ ದಿನ ಅವರ ಶೌಚಕರ್ಮಗಳನ್ನೂ ಶ್ರಾದ್ಧಗಳನ್ನೂ ಮುಗಿಸಿ ಪಾಂಡವ ನರಾಧಿಪನು ವಿಧಿವತ್ತಾಗಿ ದಕ್ಷಿಣೆಗಳನ್ನಿತ್ತನು.
15047017a ಧೃತರಾಷ್ಟ್ರಂ ಸಮುದ್ದಿಶ್ಯ ದದೌ ಸ ಪೃಥಿವೀಪತಿಃ|
15047017c ಸುವರ್ಣಂ ರಜತಂ ಗಾಶ್ಚ ಶಯ್ಯಾಶ್ಚ ಸುಮಹಾಧನಾಃ||
15047018a ಗಾಂಧಾರ್ಯಾಶ್ಚೈವ ತೇಜಸ್ವೀ ಪೃಥಾಯಾಶ್ಚ ಪೃಥಕ್ ಪೃಥಕ್|
15047018c ಸಂಕೀರ್ತ್ಯ ನಾಮನೀ ರಾಜಾ ದದೌ ದಾನಮನುತ್ತಮಮ್||
ತೇಜಸ್ವೀ ರಾಜಾ ಪೃಥಿವೀಪತಿಯು ಧೃತರಾಷ್ಟ್ರ, ಗಾಂಧಾರೀ ಮತ್ತು ಪೃಥೆಯರನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಉದ್ದೇಶಿಸಿ ಅವರವರ ಹೆಸರುಗಳನ್ನು ಹೇಳಿಕೊಳ್ಳುತ್ತಾ ಚಿನ್ನ, ಬೆಳ್ಳಿ, ಹಾಸಿಗೆಗಳು ಮತ್ತು ಅನುತ್ತಮ ಮಹಾಧನವನ್ನು ದಾನವನ್ನಾಗಿತ್ತನು.
15047019a ಯೋ ಯದಿಚ್ಚತಿ ಯಾವಚ್ಚ ತಾವತ್ಸ ಲಭತೇ ದ್ವಿಜಃ|
15047019c ಶಯನಂ ಭೋಜನಂ ಯಾನಂ ಮಣಿರತ್ನಮಥೋ ಧನಮ್||
15047020a ಯಾನಮಾಚ್ಚಾದನಂ ಭೋಗಾನ್ದಾಸೀಶ್ಚ ಪರಿಚಾರಿಕಾಃ|
15047020c ದದೌ ರಾಜಾ ಸಮುದ್ದಿಶ್ಯ ತಯೋರ್ಮಾತ್ರೋರ್ಮಹೀಪತಿಃ||
ಯಾವ ದ್ವಿಜನು ಏನನ್ನು ಬಯಸಿದನೋ ಅವನ್ನು - ಶಯನ, ಭೋಜನ, ವಾಹನ, ಮಣಿ-ರತ್ನ-ಧನ, ಹೊದಿಕೆಗಳು, ಭೋಗಗಳು, ದಾಸೀ-ಪರಿಚಾರಕರು - ಇವನ್ನು ರಾಜ ಮಹೀಪತಿಯು ತನ್ನ ಇಬ್ಬರು ತಾಯಿಯರ ಸಲುವಾಗಿ ದಾನಮಾಡಿದನು.
15047021a ತತಃ ಸ ಪೃಥಿವೀಪಾಲೋ ದತ್ತ್ವಾ ಶ್ರಾದ್ಧಾನ್ಯನೇಕಶಃ|
15047021c ಪ್ರವಿವೇಶ ಪುನರ್ಧೀಮಾನ್ನಗರಂ ವಾರಣಾಹ್ವಯಮ್||
ಧೀಮಾನ್ ಪೃಥಿವೀಪಾಲನು ಅನೇಕ ಶ್ರಾದ್ಧ-ದಾನಗಳನ್ನು ಮಾಡಿ ಪುನಃ ಹಸ್ತಿನಾಪುರ ನಗರವನ್ನು ಪ್ರವೇಶಿಸಿದನು.
15047022a ತೇ ಚಾಪಿ ರಾಜವಚನಾತ್ಪುರುಷಾ ಯೇ ಗತಾಭವನ್|
15047022c ಸಂಕಲ್ಪ್ಯ ತೇಷಾಂ ಕುಲ್ಯಾನಿ ಪುನಃ ಪ್ರತ್ಯಾಗಮಂಸ್ತತಃ||
ರಾಜನ ವಚನದಂತೆ ಹೋಗಿದ್ದ ಪುರುಷರು ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಅಸ್ಥಿಗಳನ್ನು ಸಂಗ್ರಹಿಸಿಕೊಂಡು ಪುನಃ ಅಲ್ಲಿಗೆ ಆಗಮಿಸಿದರು.
15047023a ಮಾಲ್ಯೈರ್ಗಂಧೈಶ್ಚ ವಿವಿಧೈಃ ಪೂಜಯಿತ್ವಾ ಯಥಾವಿಧಿ|
15047023c ಕುಲ್ಯಾನಿ ತೇಷಾಂ ಸಂಯೋಜ್ಯ ತದಾಚಖ್ಯುರ್ಮಹೀಪತೇಃ||
ವಿವಿಧ ಮಾಲೆ-ಗಂಧಗಳಿಂದ ಯಥಾವಿಧಿಯಾಗಿ ಪೂಜಿಸಿ ಅವರು ಆ ಅಸ್ಥಿಗಳನ್ನು ಗಂಗೆಯಲ್ಲಿ ವಿಸರ್ಜಿಸಿ ಮಹೀಪತಿಗೆ ವರದಿಮಾಡಿದರು.
15047024a ಸಮಾಶ್ವಾಸ್ಯ ಚ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್|
15047024c ನಾರದೋಽಪ್ಯಗಮದ್ರಾಜನ್ಪರಮರ್ಷಿರ್ಯಥೇಪ್ಸಿತಮ್||
ರಾಜನ್! ಧರ್ಮಾತ್ಮ ರಾಜಾ ಯುಧಿಷ್ಠಿರನನ್ನು ಸಮಾಧಾನಗೊಳಿಸಿ ಪರಮ ಋಷಿ ನಾರದನು ಇಷ್ಟಬಂದ ಕಡೆ ಹೊರಟುಹೋದನು.
15047025a ಏವಂ ವರ್ಷಾಣ್ಯತೀತಾನಿ ಧೃತರಾಷ್ಟ್ರಸ್ಯ ಧೀಮತಃ|
15047025c ವನವಾಸೇ ತದಾ ತ್ರೀಣಿ ನಗರೇ ದಶ ಪಂಚ ಚ||
15047026a ಹತಪುತ್ರಸ್ಯ ಸಂಗ್ರಾಮೇ ದಾನಾನಿ ದದತಃ ಸದಾ|
15047026c ಜ್ಞಾತಿಸಂಬಂಧಿಮಿತ್ರಾಣಾಂ ಭ್ರಾತೄಣಾಂ ಸ್ವಜನಸ್ಯ ಚ||
ಈ ರೀತಿ ಸಂಗ್ರಾಮದಲ್ಲಿ ಪುತ್ರರನ್ನು ಕಳೆದುಕೊಂಡಿದ್ದ ಧೀಮಂತ ಧೃತರಾಷ್ಟ್ರನು ಸದಾ ಮಕ್ಕಳ, ಸಂಬಂಧಿಗಳ, ಮಿತ್ರರ, ಸಹೋದರರ ಮತ್ತು ಸ್ವಜನರ ಸಲುವಾಗಿ ದಾನಗಳನ್ನು ನೀಡುತ್ತಾ ಹಸ್ತಿನಾಪುರದಲ್ಲಿ ಹದಿನೈದು ವರ್ಷಗಳನ್ನೂ ವನವಾಸದಲ್ಲಿ ಮೂರು ವರ್ಷಗಳನ್ನು ಕಳೆದಿದ್ದನು.
15047027a ಯುಧಿಷ್ಠಿರಸ್ತು ನೃಪತಿರ್ನಾತಿಪ್ರೀತಮನಾಸ್ತದಾ|
15047027c ಧಾರಯಾಮಾಸ ತದ್ರಾಜ್ಯಂ ನಿಹತಜ್ಞಾತಿಬಾಂಧವಃ||
ನೃಪತಿ ಯುಧಿಷ್ಠಿರನಾದರೋ ಜ್ಞಾತಿ-ಬಾಂಧವರನ್ನು ಕಳಿದುಕೊಂಡು ಅಷ್ಟೊಂದು ಸಂತೋಷದಿಂದಿರದಿದ್ದರೂ ರಾಜ್ಯಾಡಳಿತವನ್ನು ಮಾಡುತ್ತಿದ್ದನು."
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ನಾರದಾಗಮನಪರ್ವಣಿ ಶ್ರಾದ್ಧದಾನೇ ಸಪ್ತಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನರದಾಗಮನಪರ್ವದಲ್ಲಿ ಶ್ರಾದ್ಧದಾನ ಎನ್ನುವ ನಲ್ವತ್ತೇಳನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕ ಪರ್ವಣಿ ನಾರದಾಗಮನಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನಾರದಾಗಮನಪರ್ವವು|
ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕಪರ್ವಃ||
ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವವು||
ಇದೂವರೆಗಿನ ಒಟ್ಟು ಮಹಾಪರ್ವಗಳು – ೧೫/೧೮, ಉಪಪರ್ವಗಳು-೯೨/೧೦೦, ಅಧ್ಯಾಯಗಳು-೧೯೭೮/೧೯೯೫, ಶ್ಲೋಕಗಳು-೭೩೨೧೧/೭೩೭೮೪
ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ||
ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||
|| ಹರಿಃ ಓಂ ಕೃಷ್ಣಾರ್ಪಣಮಸ್ತು ||