ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ
೪೨
ವೈಶಂಪಾಯನ ವಾಕ್ಯ
ಜನಮೇಜಯನ ಪ್ರಶ್ನೆಗೆ ವೈಶಂಪಾಯನನು ಉತ್ತರಿಸಿದುದು (೧-೧೭).
15042001 ಸೂತ ಉವಾಚ|
15042001a ಏತಚ್ಛೃತ್ವಾ ನೃಪೋ ವಿದ್ವಾನ್ ಹೃಷ್ಟೋಽಭೂಜ್ಜನಮೇಜಯಃ|
15042001c ಪಿತಾಮಹಾನಾಂ ಸರ್ವೇಷಾಂ ಗಮನಾಗಮನಂ ತದಾ||
ಸೂತನು ಹೇಳಿದನು: "ತನ್ನ ಪಿತಾಮಹರೆಲ್ಲರ ಗಮನ-ಆಗಮನಗಳ ಕುರಿತು ಕೇಳಿ ನೃಪ ವಿದ್ವಾನ್ ಜನಮೇಜಯನು ಹೃಷ್ಟನಾದನು.
15042002a ಅಬ್ರವೀಚ್ಚ ಮುದಾ ಯುಕ್ತಃ ಪುನರಾಗಮನಂ ಪ್ರತಿ|
15042002c ಕಥಂ ನು ತ್ಯಕ್ತದೇಹಾನಾಂ ಪುನಸ್ತದ್ರೂಪದರ್ಶನಮ್||
ಅವರ ಪುನರಾಗಮನದ ಕುರಿತು ಹರ್ಷಿತನಾದ ಅವನು "ದೇಹವನ್ನು ತ್ಯಜಿಸಿದವರು ಪುನಃ ಹೇಗೆ ಅದೇ ರೂಪದಲ್ಲಿ ಕಾಣಿಸಿಕೊಂಡರು?" ಎಂದು ಕೇಳಿದನು.
15042003a ಇತ್ಯುಕ್ತಃ ಸ ದ್ವಿಜಶ್ರೇಷ್ಠೋ ವ್ಯಾಸಶಿಷ್ಯಃ ಪ್ರತಾಪವಾನ್|
15042003c ಪ್ರೋವಾಚ ವದತಾಂ ಶ್ರೇಷ್ಠಸ್ತಂ ನೃಪಂ ಜನಮೇಜಯಮ್||
ಹೀಗೆ ಕೇಳಲು ದ್ವಿಜಶ್ರೇಷ್ಠ ವ್ಯಾಸಶಿಷ್ಯ ಪ್ರತಾಪವಾನ್ ಮಾತುಗಾರರಲ್ಲಿ ಶ್ರೇಷ್ಠ ವೈಶಂಪಾಯನನು ನೃಪ ಜನಮೇಜಯನಿಗೆ ಇಂತೆಂದನು.
15042004a ಅವಿಪ್ರಣಾಶಃ ಸರ್ವೇಷಾಂ ಕರ್ಮಣಾಮಿತಿ ನಿಶ್ಚಯಃ|
15042004c ಕರ್ಮಜಾನಿ ಶರೀರಾಣಿ ತಥೈವಾಕೃತಯೋ ನೃಪ||
"ನೃಪ! ಕರ್ಮಗಳೆಲ್ಲವೂ (ಅವುಗಳ ಫಲವೆಲ್ಲವನ್ನೂ ಅನುಭವಿಸದೇ) ವಿನಾಶಹೊಂದುವುದಿಲ್ಲವೆನ್ನುವುದು ನಿಶ್ಚಿತ. (ಜೀವಾತ್ಮನಿಗೆ) ಶರೀರಗಳೂ ಆಕೃತಿಗಳೂ ಕರ್ಮದಿಂದಲೇ ಪ್ರಾಪ್ತವಾಗುವವು.
15042005a ಮಹಾಭೂತಾನಿ ನಿತ್ಯಾನಿ ಭೂತಾಧಿಪತಿಸಂಶ್ರಯಾತ್|
15042005c ತೇಷಾಂ ಚ ನಿತ್ಯಸಂವಾಸೋ ನ ವಿನಾಶೋ ವಿಯುಜ್ಯತಾಮ್||
ಭೂತಾಧಿಪನ ಸಂಶ್ರಯದಲ್ಲಿ ಮಹಾಭೂತಗಳು ನಿತ್ಯವೂ ಇರುತ್ತವೆ. ನಿತ್ಯವಾಗಿರುವ ಈ ಮಹಾಭೂತಗಳು ಪರಸ್ಪರರೊಡನೆ ಸಹವಾಸಹೊಂದಿದರೂ ಪರಸ್ಪರರ ವಿಯೋಗದಿಂದ ನಾಶಹೊಂದುವುದಿಲ್ಲ.
15042006a ಅನಾಶಾಯ ಕೃತಂ ಕರ್ಮ ತಸ್ಯ ಚೇಷ್ಟಃ ಫಲಾಗಮಃ|
15042006c ಆತ್ಮಾ ಚೈಭಿಃ ಸಮಾಯುಕ್ತಃ ಸುಖದುಃಖಮುಪಾಶ್ನುತೇ||
ಮಾಡಿದ ಕರ್ಮದ ಫಲವು ಮುಂದೆ ಅದರ ಅನುಭವವಾಗುವ ವರೆಗೆ ನಾಶವಾಗದೇ ಹಾಗೆಯೇ ಇರುತ್ತದೆ. ಮುಂದೆ ಫಲವು ಒದಗಿದಾಗ ಜೀವಾತ್ಮವು ಸುಖ-ದುಃಖಗಳನ್ನು ಹೊಂದುತ್ತದೆ.
15042007a ಅವಿನಾಶೀ ತಥಾ ನಿತ್ಯಂ ಕ್ಷೇತ್ರಜ್ಞ ಇತಿ ನಿಶ್ಚಯಃ|
15042007c ಭೂತಾನಾಮಾತ್ಮಭಾವೋ ಯೋ ಧ್ರುವೋಽಸೌ ಸಂವಿಜಾನತಾಮ್||
ಕ್ಷೇತ್ರಜ್ಞನು ವಾಸ್ತವವಾಗಿ ಅವಿನಾಶಿ ಎನ್ನುವುದು ನಿಶ್ಚಿತ. ಆದರೆ ಜೀವನು ಭೂತಗಳೊಡನೆ ತಾದಾತ್ಮ್ಯವನ್ನು ಬೆಳೆಸಿಕೊಂಡಿರುವುದರಿಂದ ಆತ್ಮಜ್ಞಾನದ ಹೊರತಾಗಿ ಅವುಗಳಿಂದ ಪ್ರತ್ಯೇಕವಾಗಿರಲು ಸಾಧ್ಯವಾಗುವುದಿಲ್ಲ.
15042008a ಯಾವನ್ನ ಕ್ಷೀಯತೇ ಕರ್ಮ ತಾವದಸ್ಯ ಸ್ವರೂಪತಾ|
15042008c ಸಂಕ್ಷೀಣಕರ್ಮಾ ಪುರುಷೋ ರೂಪಾನ್ಯತ್ವಂ ನಿಯಚ್ಚತಿ||
ಎಲ್ಲಿಯವರೆಗೆ ಶರೀರದ ಪ್ರಾರಬ್ಧಕರ್ಮಗಳು ಕ್ಷಯವಾಗುವುದಿಲ್ಲವೋ ಅಲ್ಲಿಯವರೆಗೆ ಜೀವಕ್ಕೆ ಆ ಶರೀರದೊಡನೆ ಏಕರೂಪತೆಯಿರುತ್ತದೆ. ಯಾವಾಗ ಪ್ರಾರಬ್ಧ ಕರ್ಮಗಳು ಕ್ಷಯವಾಗುತ್ತವೆಯೋ ಆಗ ಆ ಜೀವವು ಬೇರೆಯ ಸ್ವರೂಪವನ್ನು ಹೊಂದುತ್ತದೆ.
15042009a ನಾನಾಭಾವಾಸ್ತಥೈಕತ್ವಂ ಶರೀರಂ ಪ್ರಾಪ್ಯ ಸಂಹತಾಃ|
15042009c ಭವಂತಿ ತೇ ತಥಾ ನಿತ್ಯಾಃ ಪೃಥಗ್ಭಾವಂ ವಿಜಾನತಾಮ್||
ನಾನಾಭಾವಗಳು ಶರೀರವನ್ನು ಹೊಂದಿ ಏಕತ್ವವನ್ನು ಹೊಂದಿರುತ್ತವೆ. ಯಾರು ಆತ್ಮವು ದೇಹದಿಂದ ಪ್ರತ್ಯೇಕವೆಂದು ಭಾವಿಸುವವರೋ ಅವರಿಗೆ ಆ ಭಾವಗಳು ನಿತ್ಯವಾದ ಆತ್ಮಸ್ವರೂಪಗಳೇ ಆಗಿಬಿಡುತ್ತವೆ.
15042010a ಅಶ್ವಮೇಧೇ ಶ್ರುತಿಶ್ಚೇಯಮಶ್ವಸಂಜ್ಞಪನಂ ಪ್ರತಿ|
15042010c ಲೋಕಾಂತರಗತಾ ನಿತ್ಯಂ ಪ್ರಾಣಾ ನಿತ್ಯಾ ಹಿ ವಾಜಿನಃ||
ಅಶ್ವಮೇಧದಲ್ಲಿ ಅಶ್ವವನ್ನು ವಿಶಸನಮಾಡುವಾಗ ಹೇಳುವ ಮಂತ್ರಗಳಂತೆ ದೇಹಧಾರಿಗಳ ಪ್ರಾಣ ಮತ್ತು ಇಂದ್ರಿಯಗಳು ಸರ್ವದಾ ಲೋಕಾಂತರದಲ್ಲಿಯೇ ಇರುತ್ತವೆ ಎಂದು ಸೂಚಿತವಾಗುತ್ತದೆ.
15042011a ಅಹಂ ಹಿತಂ ವದಾಮ್ಯೇತತ್ಪ್ರಿಯಂ ಚೇತ್ತವ ಪಾರ್ಥಿವ|
15042011c ದೇವಯಾನಾ ಹಿ ಪಂಥಾನಃ ಶ್ರುತಾಸ್ತೇ ಯಜ್ಞಸಂಸ್ತರೇ||
ಪಾರ್ಥಿವ! ನಿನಗೆ ಪ್ರಿಯವಾದರೆ ಈ ಹಿತಕರ ಮಾತನ್ನು ಹೇಳುತ್ತೇನೆ. ಯಜ್ಞವನ್ನು ಪ್ರಾರಂಭಿಸುವಾಗ ನೀನು ದೇವಯಾನ ಮಾರ್ಗದ ವಿಷಯವಾಗಿ ಕೇಳಿರುತ್ತೀಯೆ.
15042012a ಸುಕೃತೋ ಯತ್ರ ತೇ ಯಜ್ಞಸ್ತತ್ರ ದೇವಾ ಹಿತಾಸ್ತವ|
15042012c ಯದಾ ಸಮನ್ವಿತಾ ದೇವಾಃ ಪಶೂನಾಂ ಗಮನೇಶ್ವರಾಃ|
15042012e ಗತಿಮಂತಶ್ಚ ತೇನೇಷ್ಟ್ವಾ ನಾನ್ಯೇ ನಿತ್ಯಾ ಭವಂತಿ ತೇ||
ಯಜ್ಞದಂತಹ ಉತ್ತಮ ಕರ್ಮವನ್ನು ಮಾಡುವಾಗ ಯಜ್ಞದಲ್ಲಿ ದೇವತೆಗಳು ನಿನ್ನ ಹಿತೈಷಿಗಳಾಗುತ್ತಾರೆ. ದೇವತೆಗಳು ತೃಪ್ತಿಹೊಂದಿದಾಗ ಅವರು ಜೀವಿಗಳು ಅಭೀಷ್ಟಲೋಕಗಳನ್ನು ಪಡೆಯುವಂತೆ ಮಾಡುತ್ತಾರೆ. ಹಾಗೆ ಜೀವಿಗಳು ಇಷ್ಟವಾದ ಲೋಕಗಳಿಗೆ ಹೋಗುವ ಶಕ್ತಿಯನ್ನು ಪಡೆಯುತ್ತವೆ.
15042013a ನಿತ್ಯೇಽಸ್ಮಿನ್ಪಂಚಕೇ ವರ್ಗೇ ನಿತ್ಯೇ ಚಾತ್ಮನಿ ಯೋ ನರಃ|
15042013c ಅಸ್ಯ ನಾನಾಸಮಾಯೋಗಂ ಯಃ ಪಶ್ಯತಿ ವೃಥಾಮತಿಃ|
15042013e ವಿಯೋಗೇ ಶೋಚತೇಽತ್ಯರ್ಥಂ ಸ ಬಾಲ ಇತಿ ಮೇ ಮತಿಃ||
ಈ ಪಂಚಕ ವರ್ಗವೂ ಆತ್ಮನೂ ನಿತ್ಯರಾಗಿರುವರು. ಆದರೆ ಈ ಶರೀರದ ಹುಟ್ಟು-ಸಾವುಗಳಂತೆ ಆತ್ಮನಿಗೂ ಹುಟ್ಟು-ಸಾವುಗಳಿವೆಯೆಂದು ತಿಳಿಯುವವನ ಬುದ್ಧಿಯು ವ್ಯರ್ಥವೇ ಸರಿ. ಹೀಗೆಯೇ ಸುಹೃದಯರ ವಿಯೋಗದಿಂದ ದುಃಖಪಡುವವನೂ ಮೂರ್ಖನೆಂದೇ ನನ್ನ ಅಭಿಪ್ರಾಯವಾಗಿದೆ.
15042014a ವಿಯೋಗೇ ದೋಷದರ್ಶೀ ಯಃ ಸಂಯೋಗಮಿಹ ವರ್ಜಯೇತ್|
15042014c ಅಸಂಗೇ ಸಂಗಮೋ ನಾಸ್ತಿ ದುಃಖಂ ಭುವಿ ವಿಯೋಗಜಮ್||
ವಿಯೋಗದಲ್ಲಿ ದೋಷವನ್ನು ಕಾಣುವವನು ಸಂಯೋಗವನ್ನು ತ್ಯಜಿಸಬೇಕು. ಅಸಂಗನಾದ ಆತ್ಮನಿಗೆ ಸಂಗವೆನ್ನುವುದೇ ಇಲ್ಲ ಎಂದು ತಿಳಿದುಕೊಂಡವನಿಗೆ ಭೂಮಿಯಲ್ಲಿ ವಿಯೋಗದಿಂದ ದುಃಖವೇ ಉಂಟಾಗುವುದಿಲ್ಲ.
15042015a ಪರಾಪರಜ್ಞಸ್ತು ನರೋ ನಾಭಿಮಾನಾದುದೀರಿತಃ|
15042015c ಅಪರಜ್ಞಃ ಪರಾಂ ಬುದ್ಧಿಂ ಸ್ಪೃಷ್ಟ್ವಾ ಮೋಹಾದ್ವಿಮುಚ್ಯತೇ||
ಪರ ಮತ್ತು ಅಪರಗಳನ್ನು ತಿಳಿದವನೇ ಬೇರೆ. ಅವನನ್ನು ದೇಹಾಭಿಮಾನಿಯೆಂದು ಹೇಳುವುದಿಲ್ಲ. ಅಪರವನ್ನು ತಿಳಿದವನೂ ಕೂಡ ಪರಾಬುದ್ಧಿಯನ್ನು ಪಡೆದು ಮೋಹದಿಂದ ಬಿಡುಗಡೆಹೊಂದುತ್ತಾನೆ.
15042016a ಅದರ್ಶನಾದಾಪತಿತಃ ಪುನಶ್ಚಾದರ್ಶನಂ ಗತಃ|
15042016c ನಾಹಂ ತಂ ವೇದ್ಮಿ ನಾಸೌ ಮಾಂ ನ ಚ ಮೇಽಸ್ತಿ ವಿರಾಗತಾ||
ಈ ಜೀವವು ಎಲ್ಲಿಂದ ಬಂದಿತೆಂದೂ ಮತ್ತೆ ಎಲ್ಲಿಗೆ ಹೋಯಿತೆಂದೂ ನಾವು ಕಾಣೆವು. ನಾನು ಅವನನ್ನು ತಿಳಿದಿಲ್ಲ ಮತ್ತು ಅವನಿಗೂ ನನ್ನ ವಿಷಯವು ತಿಳಿಯುವುದಿಲ್ಲ. ಆದರೂ ನನಗೆ ವೈರಾಗ್ಯವುಂಟಾಗಿಲ್ಲ.
15042017a ಯೇನ ಯೇನ ಶರೀರೇಣ ಕರೋತ್ಯಯಮನೀಶ್ವರಃ|
15042017c ತೇನ ತೇನ ಶರೀರೇಣ ತದವಶ್ಯಮುಪಾಶ್ನುತೇ|
15042017e ಮಾನಸಂ ಮನಸಾಪ್ನೋತಿ ಶಾರೀರಂ ಚ ಶರೀರವಾನ್||
ಪರಾಧೀನವಾಗಿರುವ ಈ ಜೀವವು ಯಾವ ಯಾವ ಶರೀರದಿಂದ ಕರ್ಮವನ್ನು ಮಾಡುವುದೋ ಅದೇ ಶರೀರದಿಂದಲೇ ಕರ್ಮದ ಫಲವನ್ನು ಅವಶ್ಯವಾಗಿ ಅನುಭವಿಸುತ್ತದೆ. ಮಾನಸಿಕ ಕರ್ಮದ ಫಲವನ್ನು ಮನಸ್ಸಿನಿಂದಲೂ ಶಾರೀರಿಕ ಕರ್ಮಗಳ ಫಲವನ್ನು ಶರೀರದ ಮೂಲಕವೂ ಜೀವನು ಅನುಭವಿಸುತ್ತಾನೆ."
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಜನಮೇಜಯಂ ಪ್ರತಿ ವೈಶಂಪಾಯನವಾಕ್ಯೇ ದ್ವಿಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಜನಮೇಜಯಂ ಪ್ರತಿ ವೈಶಂಪಾಯನವಾಕ್ಯ ಎನ್ನುವ ನಲ್ವತ್ತೆರಡನೇ ಅಧ್ಯಾಯವು.