Ashramavasika Parva: Chapter 41

ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ

೪೧

ಬೆಳಗಾಗುತ್ತಲೇ ವ್ಯಾಸನು ಮಡಿದವರನ್ನು ಯಥಾಸ್ಥಾನಗಳಿಗೆ ವಿಸರ್ಜಿಸಿದುದು (೧-೧೬). ಯುದ್ಧದಲ್ಲಿ ವಿಧವೆಯರಾಗಿದ್ದ ಕುರುಸ್ತ್ರೀಯರು ಗಂಗಾನದಿಯಲ್ಲಿ ಮುಳುಗಿ ತಮ್ಮ ತಮ್ಮ ಪತಿಯರ ಲೋಕಗಳಿಗೆ ತೆರಳಿದುದು (೧೭-೨೮).

15041001 ವೈಶಂಪಾಯನ ಉವಾಚ|

15041001a ತತಸ್ತೇ ಭರತಶ್ರೇಷ್ಠಾಃ ಸಮಾಜಗ್ಮುಃ ಪರಸ್ಪರಮ್|

15041001c ವಿಗತಕ್ರೋಧಮಾತ್ಸರ್ಯಾಃ ಸರ್ವೇ ವಿಗತಕಲ್ಮಷಾಃ||

15041002a ವಿಧಿಂ ಪರಮಮಾಸ್ಥಾಯ ಬ್ರಹ್ಮರ್ಷಿವಿಹಿತಂ ಶುಭಮ್|

15041002c ಸಂಪ್ರೀತಮನಸಃ ಸರ್ವೇ ದೇವಲೋಕ ಇವಾಮರಾಃ||

ವೈಶಂಪಾಯನನು ಹೇಳಿದನು: "ಆಗ ಬ್ರಹ್ಮರ್ಷಿಯು ವಿಹಿಸಿದ ಶುಭ ವಿಧಿಯ ಪ್ರಕಾರ ಆ ಭರತಶ್ರೇಷ್ಠರೆಲ್ಲರೂ ದೇವಲೋಕದ ಅಮರರಂತೆ ಕ್ರೋಧ-ಮಾತ್ಸರ್ಯಗಳನ್ನು ತೊರೆದು, ದುಃಖಗಳಿಲ್ಲದೇ, ಪರಸ್ಪರರೊಡನೆ ಕಲೆತರು.

15041003a ಪುತ್ರಃ ಪಿತ್ರಾ ಚ ಮಾತ್ರಾ ಚ ಭಾರ್ಯಾ ಚ ಪತಿನಾ ಸಹ|

15041003c ಭ್ರಾತಾ ಭ್ರಾತ್ರಾ ಸಖಾ ಚೈವ ಸಖ್ಯಾ ರಾಜನ್ಸಮಾಗತಾಃ||

ರಾಜನ್! ಮಗನು ತಂದೆ-ತಾಯಿಯರೊಂದಿಗೂ, ಪತ್ನಿಯು ಪತಿಯೊಂದಿಗೂ, ಸಹೋದರನು ಸಹೋದರನೊಂದಿಗೂ ಮತ್ತು ಮಿತ್ರನು ಮಿತ್ರನೊಡನೆಯೂ ಕಲೆತರು.

15041004a ಪಾಂಡವಾಸ್ತು ಮಹೇಷ್ವಾಸಂ ಕರ್ಣಂ ಸೌಭದ್ರಮೇವ ಚ|

15041004c ಸಂಪ್ರಹರ್ಷಾತ್ಸಮಾಜಗ್ಮುರ್ದ್ರೌಪದೇಯಾಂಶ್ಚ ಸರ್ವಶಃ||

ಪಾಂಡವರು ಮಹೇಷ್ವಾಸ ಕರ್ಣನನ್ನೂ, ಸೌಭದ್ರನನ್ನು, ದ್ರೌಪದೇಯರೆಲ್ಲರನ್ನೂ ಅತ್ಯಂತ ಹರ್ಷದಿಂದ ಸೇರಿದರು.

15041005a ತತಸ್ತೇ ಪ್ರೀಯಮಾಣಾ ವೈ ಕರ್ಣೇನ ಸಹ ಪಾಂಡವಾಃ|

15041005c ಸಮೇತ್ಯ ಪೃಥಿವೀಪಾಲಾಃ ಸೌಹೃದೇಽವಸ್ಥಿತಾಭವನ್||

ಕರ್ಣನೊಡನೆ ಪಾಂಡವರೂ ಮತ್ತು ಪೃಥಿವೀಪಾಲರು ಅನ್ಯೋನ್ಯರನ್ನೂ ಭೇಟಿಮಾಡಿ ಸೌಹಾರ್ದತೆಯಿಂದಿದ್ದರು.

15041006a ಋಷಿಪ್ರಸಾದಾತ್ತೇಽನ್ಯೇ ಚ ಕ್ಷತ್ರಿಯಾ ನಷ್ಟಮನ್ಯವಃ|

15041006c ಅಸೌಹೃದಂ ಪರಿತ್ಯಜ್ಯ ಸೌಹೃದೇ ಪರ್ಯವಸ್ಥಿತಾಃ||

ಋಷಿಯ ಅನುಗ್ರಹದಿಂದ ಅನ್ಯ ಕ್ಷತ್ರಿಯರೂ ಕೋಪವನ್ನು ಕಳೆದುಕೊಂಡು, ಶತ್ರುಭಾವವನ್ನು ಬಿಟ್ಟು ಸೌಹಾರ್ದತೆಯಿಂದ ವರ್ತಿಸಿದರು.

15041007a ಏವಂ ಸಮಾಗತಾಃ ಸರ್ವೇ ಗುರುಭಿರ್ಬಾಂಧವೈಸ್ತಥಾ|

15041007c ಪುತ್ರೈಶ್ಚ ಪುರುಷವ್ಯಾಘ್ರಾಃ ಕುರವೋಽನ್ಯೇ ಚ ಮಾನವಾಃ||

ಹೀಗೆ ಕುರು ಪುರುಷವ್ಯಾಘ್ರ ಪುತ್ರರೂ ಅನ್ಯ ಮಾನವರೂ ಹಿರಿಯರು ಮತ್ತು ಬಂಧವರೊಂದಿಗೆ ಸೇರಿ ಕಲೆತರು.

15041008a ತಾಂ ರಾತ್ರಿಮೇಕಾಂ ಕೃತ್ಸ್ನಾಂ ತೇ ವಿಹೃತ್ಯ ಪ್ರೀತಮಾನಸಾಃ|

15041008c ಮೇನಿರೇ ಪರಿತೋಷೇಣ ನೃಪಾಃ ಸ್ವರ್ಗಸದೋ ಯಥಾ||

ಆ ನೃಪರು ಇಡೀ ರಾತ್ರಿಯನ್ನು ಒಂದಾಗಿ ಪ್ರೀತಮನಸ್ಕರಾಗಿ ವಿಹರಿಸುತ್ತಾ ತಾವು ಸ್ವರ್ಗದ ಸದಸ್ಯರೋ ಎನ್ನುವಂತೆ ಸಂತೋಷದಿಂದ ಕಳೆದರು.

15041009a ನಾತ್ರ ಶೋಕೋ ಭಯಂ ತ್ರಾಸೋ ನಾರತಿರ್ನಾಯಶೋಽಭವತ್|

15041009c ಪರಸ್ಪರಂ ಸಮಾಗಮ್ಯ ಯೋಧಾನಾಂ ಭರತರ್ಷಭ||

ಭರತರ್ಷಭ! ಆ ಯೋಧರು ಪರಸ್ಪರರನ್ನು ಸೇರಿದಾಗ ಅಲ್ಲಿ ಶೋಕವಾಗಲೀ, ಭಯವಾಗಲೀ, ಕಷ್ಟವಾಗಲೀ, ಅಸಂತೋಷವಾಗಲೀ, ಅಪಯಶಸ್ಸಾಗಲೀ ಉಂಟಾಗಲಿಲ್ಲ.

15041010a ಸಮಾಗತಾಸ್ತಾಃ ಪಿತೃಭಿರ್ಭ್ರಾತೃಭಿಃ ಪತಿಭಿಃ ಸುತೈಃ|

15041010c ಮುದಂ ಪರಮಿಕಾಂ ಪ್ರಾಪ್ಯ ನಾರ್ಯೋ ದುಃಖಮಥಾತ್ಯಜನ್||

ನಾರಿಯರು ಅಲ್ಲಿ ದುಃಖವನ್ನು ತೊರೆದು ತಂದೆಗಳೊಂದಿಗೂ, ಸಹೋದರರೊಂದಿಗೂ, ಪತಿಗಳೊಂದಿಗೂ, ಮಕ್ಕಳೊಂದಿಗೂ ಕಲೆತು ಅತ್ಯಂತ ಸಂತೋಷವನ್ನು ಅನುಭವಿಸಿದರು.

15041011a ಏಕಾಂ ರಾತ್ರಿಂ ವಿಹೃತ್ಯೈವಂ ತೇ ವೀರಾಸ್ತಾಶ್ಚ ಯೋಷಿತಃ|

15041011c ಆಮಂತ್ರ್ಯಾನ್ಯೋನ್ಯಮಾಶ್ಲಿಷ್ಯ ತತೋ ಜಗ್ಮುರ್ಯಥಾಗತಮ್||

ಈ ರೀತಿ ಆ ವೀರರೂ ಮತ್ತು ಅವರ ಪತ್ನಿಯರೂ ಒಂದು ರಾತ್ರಿ ವಿಹರಿಸಿ, ರಾತ್ರಿಕಳೆದ ಕೂಡಲೇ ಅನ್ಯೋನ್ಯರನ್ನು ಆಲಂಗಿಸಿ, ಬೀಳ್ಕೊಂಡು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು.

15041012a ತತೋ ವಿಸರ್ಜಯಾಮಾಸ ಲೋಕಾಂಸ್ತಾನ್ಮುನಿಪುಂಗವಃ|

15041012c ಕ್ಷಣೇನಾಂತರ್ಹಿತಾಶ್ಚೈವ ಪ್ರೇಕ್ಷತಾಮೇವ ತೇಽಭವನ್||

ಆಗ ಮುನಿಪುಂಗವನು ಆ ಲೋಕಗಳನ್ನು ವಿಸರ್ಜಿಸಿದನು. ಎಲ್ಲರೂ ನೋಡುತ್ತಿದ್ದಂತೆಯೇ ಕ್ಷಣದಲ್ಲಿಯೇ ಅವರು ಅಂತರ್ಧಾನರಾದರು.

15041013a ಅವಗಾಹ್ಯ ಮಹಾತ್ಮಾನಃ ಪುಣ್ಯಾಂ ತ್ರಿಪಥಗಾಂ ನದೀಮ್|

15041013c ಸರಥಾಃ ಸಧ್ವಜಾಶ್ಚೈವ ಸ್ವಾನಿ ಸ್ಥಾನಾನಿ ಭೇಜಿರೇ||

ಆ ಮಹಾತ್ಮನು ಪುಣ್ಯ ತ್ರಿಪಥಗಾ ನಧಿಯಲ್ಲಿ ರಥ-ಧ್ವಜ-ಅಶ್ವಗಳೊಂದಿಗೆ ಅವರನ್ನು ಅವರವರ ಸ್ಥಾನಗಳಿಗೆ ಕಳುಹಿಸಿಕೊಟ್ಟನು.

15041014a ದೇವಲೋಕಂ ಯಯುಃ ಕೇ ಚಿತ್ಕೇ ಚಿದ್ಬ್ರಹ್ಮಸದಸ್ತಥಾ|

15041014c ಕೇ ಚಿಚ್ಚ ವಾರುಣಂ ಲೋಕಂ ಕೇ ಚಿತ್ಕೌಬೇರಮಾಪ್ನುವನ್||

ಕೆಲವರು ದೇವಲೋಕಕ್ಕೆ ಹೋದರೆ ಇನ್ನು ಕೆಲವರು ಬ್ರಹ್ಮಸದನಕ್ಕೆ ಹೋದರು. ಕೆಲವರು ವರುಣಲೋಕವನ್ನೂ ಇನ್ನು ಕೆಲವರು ಕುಬೇರನ ಲೋಕವನ್ನೂ ಸೇರಿದರು.

15041015a ತಥಾ ವೈವಸ್ವತಂ ಲೋಕಂ ಕೇ ಚಿಚ್ಚೈವಾಪ್ನುವನ್ನೃಪಾಃ|

15041015c ರಾಕ್ಷಸಾನಾಂ ಪಿಶಾಚಾನಾಂ ಕೇ ಚಿಚ್ಚಾಪ್ಯುತ್ತರಾನ್ಕುರೂನ್||

ಹಾಗೆಯೇ ಕೆಲವು ರಾಜರು ವೈವಸ್ವತ ಲೋಕವನ್ನೂ, ಇನ್ನು ಕೆಲವರು ರಾಕ್ಷಸ, ಪಿಶಾಚ ಮತ್ತು ಉತ್ತರ ಕುರುಲೋಕಕ್ಕೂ ಹೊರಟುಹೋದರು.

15041016a ವಿಚಿತ್ರಗತಯಃ ಸರ್ವೇ ಯಾ ಅವಾಪ್ಯಾಮರೈಃ ಸಹ|

15041016c ಆಜಗ್ಮುಸ್ತೇ ಮಹಾತ್ಮಾನಃ ಸವಾಹಾಃ ಸಪದಾನುಗಾಃ||

ಅಮರರೊಂದಿಗೆ ವಾಹನ-ಅನುಯಾಯಿಗಳೊಂದಿಗೆ ಬಂದಿದ್ದ ಆ ಮಹಾತ್ಮರೆಲ್ಲರೂ ಹೀಗೆ ವಿಚಿತ್ರ ಗತಿಗಳನ್ನು ಪಡೆದರು.

15041017a ಗತೇಷು ತೇಷು ಸರ್ವೇಷು ಸಲಿಲಸ್ಥೋ ಮಹಾಮುನಿಃ|

15041017c ಧರ್ಮಶೀಲೋ ಮಹಾತೇಜಾಃ ಕುರೂಣಾಂ ಹಿತಕೃತ್ಸದಾ|

15041017e ತತಃ ಪ್ರೋವಾಚ ತಾಃ ಸರ್ವಾಃ ಕ್ಷತ್ರಿಯಾ ನಿಹತೇಶ್ವರಾಃ||

ಅವರೆಲ್ಲರೂ ಹೊರಟು ಹೋದನಂತರ ನದಿಯಲ್ಲಿ ನಿಂತಿದ್ದ ಸದಾ ಕುರುಗಳ ಹಿತವನ್ನೇ ಮಾಡುತ್ತಿದ್ದ ಆ ಮಹಾತೇಜಸ್ವಿ ಧರ್ಮಶೀಲ ಮಹಾಮುನಿಯು ಪತಿಗಳನ್ನು ಕಳೆದುಕೊಂಡಿದ್ದ ಕ್ಷತ್ರಿಯ ಸ್ತ್ರೀಯರಿಗೆ ಹೇಳಿದನು:

15041018a ಯಾ ಯಾಃ ಪತಿಕೃತಾಽಲ್ಲೋಕಾನಿಚ್ಚಂತಿ ಪರಮಸ್ತ್ರಿಯಃ|

15041018c ತಾ ಜಾಹ್ನವೀಜಲಂ ಕ್ಷಿಪ್ರಮವಗಾಹಂತ್ವತಂದ್ರಿತಾಃ||

"ಪರಮಸ್ತ್ರೀಯರೇ! ನಿಮ್ಮಲ್ಲಿ ಯಾರು ಯಾರು ನಿಮ್ಮ ನಿಮ್ಮ ಗಂಡಂದಿರು ಹೋಗಿರುವ ಲೋಕಗಳಿಗೆ ಹೋಗಲು ಇಚ್ಛಿಸುವಿರೋ ಅವರು ಆಲಸ್ಯವನ್ನು ತೊರೆದು ಬೇಗನೇ ಗಂಗಾನದಿಯಲ್ಲಿ ಮುಳುಗಿರಿ!"

15041019a ತತಸ್ತಸ್ಯ ವಚಃ ಶ್ರುತ್ವಾ ಶ್ರದ್ದಧಾನಾ ವರಾಂಗನಾಃ|

15041019c ಶ್ವಶುರಂ ಸಮನುಜ್ಞಾಪ್ಯ ವಿವಿಶುರ್ಜಾಹ್ನವೀಜಲಮ್||

ಅವನ ಆ ಮಾತನ್ನು ಕೇಳಿ ಶ್ರದ್ಧೆಯನ್ನಿಟ್ಟಿದ್ದ ವರಾಂಗನೆಯರು ಮಾವನ ಅನುಮತಿಯನ್ನು ಪಡೆದು ಜಾಹ್ನವೀ ನದಿಯನ್ನು ಪ್ರವೇಶಿಸಿದರು.

15041020a ವಿಮುಕ್ತಾ ಮಾನುಷೈರ್ದೇಹೈಸ್ತತಸ್ತಾ ಭರ್ತೃಭಿಃ ಸಹ|

15041020c ಸಮಾಜಗ್ಮುಸ್ತದಾ ಸಾಧ್ವ್ಯಃ ಸರ್ವಾ ಏವ ವಿಶಾಂ ಪತೇ||

ವಿಶಾಂಪತೇ! ಮಾನುಷ ದೇಹಗಳನ್ನು ತೊರೆದು ಆ ಸಾಧ್ವಿಯರೆಲ್ಲರೂ ತಮ್ಮ ತಮ್ಮ ಪತಿಯರೊಂದಿಗೆ ಹೊರಟುಹೋದರು.

15041021a ಏವಂ ಕ್ರಮೇಣ ಸರ್ವಾಸ್ತಾಃ ಶೀಲವತ್ಯಃ ಕುಲಸ್ತ್ರಿಯಃ|

15041021c ಪ್ರವಿಶ್ಯ ತೋಯಂ ನಿರ್ಮುಕ್ತಾ ಜಗ್ಮುರ್ಭರ್ತೃಸಲೋಕತಾಮ್||

ಹೀಗೆ ಕ್ರಮೇಣವಾಗಿ ಆ ಎಲ್ಲ ಶೀಲವಂತ ಕುಲಸ್ತ್ರೀಯರು ನೀರಿನಲ್ಲಿ ಮುಳುಗಿ ಮುಕ್ತರಾಗಿ ತಮ್ಮ ತಮ್ಮ ಪತಿಗಳ ಲೋಕಗಳಿಗೆ ಹೊರಟುಹೋದರು.

15041022a ದಿವ್ಯರೂಪಸಮಾಯುಕ್ತಾ ದಿವ್ಯಾಭರಣಭೂಷಿತಾಃ|

15041022c ದಿವ್ಯಮಾಲ್ಯಾಂಬರಧರಾ ಯಥಾಸಾಂ ಪತಯಸ್ತಥಾ||

15041023a ತಾಃ ಶೀಲಸತ್ತ್ವಸಂಪನ್ನಾ ವಿತಮಸ್ಕಾ ಗತಕ್ಲಮಾಃ|

15041023c ಸರ್ವಾಃ ಸರ್ವಗುಣೈರ್ಯುಕ್ತಾಃ ಸ್ವಂ ಸ್ವಂ ಸ್ಥಾನಂ ಪ್ರಪೇದಿರೇ||

ಅವರ ಪತಿಗಳಂತೆಯೇ ಆ ಶೀಲಸತ್ತ್ವಸಂಪನ್ನ ಸ್ತ್ರೀಯರು ದಿವ್ಯರೂಪಗಳನ್ನು ಧರಿಸಿ, ದಿವ್ಯಾಭರಣಭೂಷಿತರಾಗಿ, ದಿವ್ಯ ಮಾಲ್ಯಾಂಬರಗಳನ್ನು ಧರಿಸಿ ಸರ್ವಗುಣಗಳಿಂದ ಯುಕ್ತರಾಗಿ, ಆಯಾಸವನ್ನು ಕಳೆದುಕೊಂಡು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.

15041024a ಯಸ್ಯ ಯಸ್ಯ ಚ ಯಃ ಕಾಮಸ್ತಸ್ಮಿನ್ಕಾಲೇಽಭವತ್ತದಾ|

15041024c ತಂ ತಂ ವಿಸೃಷ್ಟವಾನ್ವ್ಯಾಸೋ ವರದೋ ಧರ್ಮವತ್ಸಲಃ||

ವರದ ಧರ್ಮವತ್ಸಲ ವ್ಯಾಸನು ಆ ಸಮಯದಲ್ಲಿ ಯಾರ ಯಾರ ಬಯಕೆಯು ಯಾವುದಿತ್ತೋ ಅವೆಲ್ಲವನ್ನೂ ಪೂರೈಸಿಕೊಟ್ಟು ಬೇಕಾದ ಲೋಕಗಳನ್ನು ಸೃಷ್ಟಿಸಿದನು.

15041025a ತಚ್ಛೃತ್ವಾ ನರದೇವಾನಾಂ ಪುನರಾಗಮನಂ ನರಾಃ|

15041025c ಜಹೃಷುರ್ಮುದಿತಾಶ್ಚಾಸನ್ನನ್ಯದೇಹಗತಾ ಅಪಿ||

ನರದೇವರ ಪುನರಾಗಮನದ ಕುರಿತು ಕೇಳಿದ ಮನುಷ್ಯರೂ ಅನ್ಯ ದೇಹಗಳಲ್ಲಿ ಹೋದವರೂ ಮುದಿತರಾದರು.

15041026a ಪ್ರಿಯೈಃ ಸಮಾಗಮಂ ತೇಷಾಂ ಯ ಇಮಂ ಶೃಣುಯಾನ್ನರಃ|

15041026c ಪ್ರಿಯಾಣಿ ಲಭತೇ ನಿತ್ಯಮಿಹ ಚ ಪ್ರೇತ್ಯ ಚೈವ ಹ||

ಆ ಪ್ರಿಯರ ಸಮಾಗಮವನ್ನು ಯಾರು ಕೇಳುತ್ತಾರೋ ಅವರಿಗೆ ಇಹ ಮತ್ತು ಪರಲೋಕಗಳಲ್ಲಿ ನಿತ್ಯವೂ ಪ್ರಿಯವಾದುದು ದೊರೆಯುತ್ತದೆ.

15041027a ಇಷ್ಟಬಾಂಧವಸಂಯೋಗಮನಾಯಾಸಮನಾಮಯಮ್|

15041027c ಯ ಇಮಂ ಶ್ರಾವಯೇದ್ವಿದ್ವಾನ್ಸಂಸಿದ್ಧಿಂ ಪ್ರಾಪ್ನುಯಾತ್ಪರಾಮ್||

ಇಷ್ಟಬಾಂಧವರೊಡನೆ ಅನಾಯಾಸವಾಗಿ ಸಮಾಗಮವಾಗುತ್ತದೆ. ಇದನ್ನು ಯಾವ ವಿದ್ವಾಂಸನು ಇತರರಿಗೆ ಕೇಳಿಸುತ್ತಾನೋ ಅವನು ಪರಮ ಸಂಸಿದ್ಧಿಯನ್ನು ಪಡೆಯುತ್ತಾನೆ.

15041028a ಸ್ವಾಧ್ಯಾಯಯುಕ್ತಾಃ ಪುರುಷಾಃ ಕ್ರಿಯಾಯುಕ್ತಾಶ್ಚ ಭಾರತ|

15041028c ಅಧ್ಯಾತ್ಮಯೋಗಯುಕ್ತಾಶ್ಚ ಧೃತಿಮಂತಶ್ಚ ಮಾನವಾಃ|

15041028e ಶ್ರುತ್ವಾ ಪರ್ವ ತ್ವಿದಂ ನಿತ್ಯಮವಾಪ್ಸ್ಯಂತಿ ಪರಾಂ ಗತಿಮ್||

ಭಾರತ! ಸ್ವಾಧ್ಯಾಯದಲ್ಲಿ ನಿರತರಾದವರೂ, ಕ್ರಿಯಾಶೀಲರಾದವರೂ, ಮತ್ತು ಆಧ್ಯಾತ್ಮಯೋಗಯುಕ್ತರಾದ ಧೃತಿಮಂತ ಮನುಷ್ಯರು ಈ ಪರ್ವವನ್ನು ನಿತ್ಯವೂ ಕೇಳಿ ಪರಮ ಗತಿಯನ್ನು ಪಡೆಯುತ್ತಾರೆ.””

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಸ್ತ್ರೀಣಾಂ ಸ್ವಸ್ವಪತಿಲೋಕಗಮನೇ ಏಕಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಸ್ತ್ರೀಣಾಂ ಸ್ವಸ್ವಪತಿಲೋಕಗಮನ ಎನ್ನುವ ನಲ್ವತ್ತೊಂದನೇ ಅಧ್ಯಾಯವು.

Related image

Comments are closed.