ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ
೩೭
ಯುದ್ಧದಲ್ಲಿ ಮೃತರಾದವರನ್ನು ತೋರಿಸಬೇಕೆಂದು ಗಾಂಧಾರಿಯು ವ್ಯಾಸನಲ್ಲಿ ಕೇಳಿಕೊಂಡಿದುದು (೧-೧೪). ಗಾಂಧರಿಯ ಮಾತುಗಳನ್ನು ಕೇಳಿ ಕರ್ಣನನ್ನು ನೆನೆಸಿಕೊಂಡು ದುಃಖಿತಳಾದ ಕುಂತಿಗೆ “ನಿನ್ನ ಮನಸ್ಸಿನಲ್ಲಿರುವುದನ್ನು ಇದ್ದಹಾಗೆ ಹೇಳು!" ಎಂದು ವ್ಯಾಸನು ಕೇಳಿದುದು (೧೫-೧೮).
15037001 ವೈಶಂಪಾಯನ ಉವಾಚ|
15037001a ತಚ್ಛೃತ್ವಾ ವಿವಿಧಂ ತಸ್ಯ ರಾಜರ್ಷೇಃ ಪರಿದೇವಿತಮ್|
15037001c ಪುನರ್ನವೀಕೃತಃ ಶೋಕೋ ಗಾಂಧಾರ್ಯಾ ಜನಮೇಜಯ||
ವೈಶಂಪಾಯನನು ಹೇಳಿದನು: "ಜನಮೇಜಯ! ರಾಜರ್ಷಿಯ ವಿಧವಿಧವಾದ ಆ ಪರಿವೇದನೆಯನ್ನು ಕೇಳಿ ಗಾಂಧಾರಿಯ ಶೋಕವೂ ನವೀಕೃತವಾಯಿತು.
15037002a ಕುಂತ್ಯಾ ದ್ರುಪದಪುತ್ರ್ಯಾಶ್ಚ ಸುಭದ್ರಾಯಾಸ್ತಥೈವ ಚ|
15037002c ತಾಸಾಂ ಚ ವರನಾರೀಣಾಂ ವಧೂನಾಂ ಕೌರವಸ್ಯ ಹ||
ಹಾಗೆಯೇ ಕುಂತಿ, ದ್ರುಪದಪುತ್ರಿ, ಸುಭದ್ರೆ, ಮತ್ತು ಕೌರವನ ಸುಂದರ ಸೊಸೆಯಂದಿರ ದುಃಖವೂ ನವೀಕೃತವಾಯಿತು.
15037003a ಪುತ್ರಶೋಕಸಮಾವಿಷ್ಟಾ ಗಾಂಧಾರೀ ತ್ವಿದಮಬ್ರವೀತ್|
15037003c ಶ್ವಶುರಂ ಬದ್ಧನಯನಾ ದೇವೀ ಪ್ರಾಂಜಲಿರುತ್ಥಿತಾ||
ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಂಡಿದ್ದ ದೇವೀ ಗಾಂಧಾರಿಯು ಪುತ್ರಶೋಕದ ಆವೇಶದಿಂದ ಎದ್ದು ನಿಂತು ಕೈಮುಗಿದು ತನ್ನ ಮಾವ ವ್ಯಾಸನಿಗೆ ಹೇಳಿದಳು:
15037004a ಷೋಡಶೇಮಾನಿ ವರ್ಷಾಣಿ ಗತಾನಿ ಮುನಿಪುಂಗವ|
15037004c ಅಸ್ಯ ರಾಜ್ಞೋ ಹತಾನ್ಪುತ್ರಾನ್ಶೋಚತೋ ನ ಶಮೋ ವಿಭೋ||
"ವಿಭೋ! ಮುನಿಪುಂಗವ! ಈ ರಾಜನು ಪುತ್ರರನ್ನು ಕಳೆದುಕೊಂಡು ಶೋಕಿಸುತ್ತಾ ಹದಿನಾರು ವರ್ಷಗಳು ಕಳೆದುಹೋದವು. ಆದರೂ ಅವನಿಗೆ ಶಾಂತಿಯಿಲ್ಲದಾಗಿದೆ.
15037005a ಪುತ್ರಶೋಕಸಮಾವಿಷ್ಟೋ ನಿಃಶ್ವಸನ್ ಹ್ಯೇಷ ಭೂಮಿಪಃ|
15037005c ನ ಶೇತೇ ವಸತೀಃ ಸರ್ವಾ ಧೃತರಾಷ್ಟ್ರೋ ಮಹಾಮುನೇ||
ಮಹಾಮುನೇ! ಪುತ್ರಶೋಕದಿಂದ ಸಮಾವಿಷ್ಟನಾಗಿ ಈ ಭೂಮಿಪ ಧೃತರಾಷ್ಟ್ರನು ಇಡೀ ರಾತ್ರಿ ನಿಟ್ಟುಸಿರು ಬಿಡುತ್ತಲೇ ಇರುತ್ತಾನೆ. ನಿದ್ರೆಯನ್ನೇ ಮಾಡುವುದಿಲ್ಲ.
15037006a ಲೋಕಾನನ್ಯಾನ್ಸಮರ್ಥೋಽಸಿ ಸ್ರಷ್ಟುಂ ಸರ್ವಾಂಸ್ತಪೋಬಲಾತ್|
15037006c ಕಿಮು ಲೋಕಾಂತರಗತಾನ್ರಾಜ್ಞೋ ದರ್ಶಯಿತುಂ ಸುತಾನ್||
ನಿನ್ನ ತಪೋಬಲದಿಂದ ಅನ್ಯ ಸರ್ವ ಲೋಕಗಳನ್ನೇ ಸೃಷ್ಟಿಸಲು ಸಮರ್ಥನಾಗಿರುವೆ. ಇನ್ನು ಬೇರೆಯೇ ಲೋಕಕ್ಕೆ ಹೋಗಿರುವ ಮಕ್ಕಳನ್ನು ರಾಜನಿಗೆ ತೋರಿಸುವುದು ಯಾವ ಮಹಾ ದೊಡ್ಡ ವಿಷಯ?
15037007a ಇಯಂ ಚ ದ್ರೌಪದೀ ಕೃಷ್ಣಾ ಹತಜ್ಞಾತಿಸುತಾ ಭೃಶಮ್|
15037007c ಶೋಚತ್ಯತೀವ ಸಾಧ್ವೀ ತೇ ಸ್ನುಷಾಣಾಂ ದಯಿತಾ ಸ್ನುಷಾ||
ಸೊಸೆಯಂದಿರಲ್ಲಿಯೇ ಅತ್ಯಂತ ಪ್ರಿಯಸೊಸೆಯಾಗಿರುವ ಸಾಧ್ವೀ ದ್ರೌಪದೀ ಕೃಷ್ಣೆಯೂ ಇಲ್ಲಿ ಮಕ್ಕಳು-ಬಾಂಧವರನ್ನು ಕಳೆದುಕೊಂಡು ಅತೀವವಾಗಿ ಶೋಕಿಸುತ್ತಿದ್ದಾಳೆ.
15037008a ತಥಾ ಕೃಷ್ಣಸ್ಯ ಭಗಿನೀ ಸುಭದ್ರಾ ಭದ್ರಭಾಷಿಣೀ|
15037008c ಸೌಭದ್ರವಧಸಂತಪ್ತಾ ಭೃಶಂ ಶೋಚತಿ ಭಾಮಿನೀ||
ಹಾಗೆಯೇ ಕೃಷ್ಣನ ತಂಗಿ, ಭದ್ರಭಾಷಿಣೀ ಭಾಮಿನೀ ಸುಭದ್ರೆಯೂ ಕೂಡ ಸೌಭದ್ರನ ವಧೆಯಿಂದ ಸಂತಪ್ತಳಾಗಿ ತುಂಬಾ ಶೋಕಿಸುತ್ತಿದ್ದಾಳೆ.
15037009a ಇಯಂ ಚ ಭೂರಿಶ್ರವಸೋ ಭಾರ್ಯಾ ಪರಮದುಃಖಿತಾ|
15037009c ಭರ್ತೃವ್ಯಸನಶೋಕಾರ್ತಾ ನ ಶೇತೇ ವಸತೀಃ ಪ್ರಭೋ||
ಪ್ರಭೋ! ಪರಮದುಃಖಿತಳಾಗಿರುವ ಭೂರಿಶ್ರವಸನ ಈ ಭಾರ್ಯೆಯೂ ಕೂಡ ಪತಿಯ ವ್ಯಸನಶೋಕಾರ್ತಳಾಗಿ ನಿದ್ದೆಮಾಡುತ್ತಿಲ್ಲ!
15037010a ಯಸ್ಯಾಸ್ತು ಶ್ವಶುರೋ ಧೀಮಾನ್ಬಾಹ್ಲೀಕಃ ಸ ಕುರೂದ್ವಹಃ|
15037010c ನಿಹತಃ ಸೋಮದತ್ತಶ್ಚ ಪಿತ್ರಾ ಸಹ ಮಹಾರಣೇ||
ಮಾವ ಧೀಮಾನ್ ಕುರೂದ್ವಹ ಬಾಹ್ಲೀಕನೂ ಮತ್ತು ತಂದೆಯೊಂದಿಗೆ ಸೋಮದತ್ತನೂ ಮಹಾರಣದಲ್ಲಿ ಹತರಾದರು.
15037011a ಶ್ರೀಮಚ್ಚಾಸ್ಯ ಮಹಾಬುದ್ಧೇಃ ಸಂಗ್ರಾಮೇಷ್ವಪಲಾಯಿನಃ|
15037011c ಪುತ್ರಸ್ಯ ತೇ ಪುತ್ರಶತಂ ನಿಹತಂ ಯದ್ರಣಾಜಿರೇ||
ರಣಾಂಗಣದಲ್ಲಿ ನಿನ್ನ ಪುತ್ರನ ನೂರು ಮಕ್ಕಳು - ಶ್ರೀಮಂತರೂ, ಮಹಾಬುದ್ಧಿಯುಳ್ಳವರೂ, ಸಂಗ್ರಾಮದಲ್ಲಿ ಪಲಾಯನಮಾಡದಿಲ್ಲದಿದ್ದವರೂ ಆಗಿದ್ದವರು - ಹತರಾದರು.
15037012a ತಸ್ಯ ಭಾರ್ಯಾಶತಮಿದಂ ಪುತ್ರಶೋಕಸಮಾಹತಮ್|
15037012c ಪುನಃ ಪುನರ್ವರ್ಧಯಾನಂ ಶೋಕಂ ರಾಜ್ಞೋ ಮಮೈವ ಚ|
15037012e ತೇನಾರಂಭೇಣ ಮಹತಾ ಮಾಮುಪಾಸ್ತೇ ಮಹಾಮುನೇ||
ಶೋಕದಿಂದ ಪೀಡಿತರಾದ, ಆ ನೂರು ಭಾರ್ಯೆಯರೂ ಇಲ್ಲಿದ್ದಾರೆ. ಇವರೆಲ್ಲರೂ ನನ್ನ ಮತ್ತು ರಾಜನ ದುಃಖವನ್ನು ಪುನಃ ಪುನಃ ಹೆಚ್ಚಿಸುತ್ತಿದ್ದಾರೆ. ಮಹಾಮುನೇ! ಮಹಾ ಉದ್ವೇಗದಿಂದ ಕೂಡಿದ ಅವರು ನನ್ನ ಸುತ್ತಲೂ ಕುಳಿತುಕೊಂಡಿದ್ದಾರೆ.
15037013a ಯೇ ಚ ಶೂರಾ ಮಹಾತ್ಮಾನಃ ಶ್ವಶುರಾ ಮೇ ಮಹಾರಥಾಃ|
15037013c ಸೋಮದತ್ತಪ್ರಭೃತಯಃ ಕಾ ನು ತೇಷಾಂ ಗತಿಃ ಪ್ರಭೋ||
ಪ್ರಭೋ! ಶೂರರೂ ಮಹಾತ್ಮರೂ ಆಗಿದ್ದ ಸೋಮದತ್ತನೇ ಮೊದಲಾದ ನನ್ನ ಮಾವಂದಿರು ಯಾವ ಗತಿಯನ್ನು ಪಡೆದುಕೊಂಡಿದ್ದಾರೆ?
15037014a ತವ ಪ್ರಸಾದಾದ್ಭಗವನ್ವಿಶೋಕೋಽಯಂ ಮಹೀಪತಿಃ|
15037014c ಕುರ್ಯಾತ್ಕಾಲಮಹಂ ಚೈವ ಕುಂತೀ ಚೇಯಂ ವಧೂಸ್ತವ||
ಭಗವನ್! ನಿನ್ನ ಅನುಗ್ರಹದಿಂದ ಈ ಮಹೀಪತಿಯೂ, ನಾನೂ ಮತ್ತು ನಿನ್ನ ಸೊಸೆಯಾದ ಈ ಕುಂತಿಯೂ ವಿಶೋಕರಾಗುವಂತೆ ಮಾಡು!"
15037015a ಇತ್ಯುಕ್ತವತ್ಯಾಂ ಗಾಂಧಾರ್ಯಾಂ ಕುಂತೀ ವ್ರತಕೃಶಾನನಾ|
15037015c ಪ್ರಚ್ಚನ್ನಜಾತಂ ಪುತ್ರಂ ತಂ ಸಸ್ಮಾರಾದಿತ್ಯಸಂಭವಮ್||
ಗಾಂಧಾರಿಯೂ ಈ ರೀತಿ ಮಾತನಾಡುತ್ತಿದ್ದಾಗ ವ್ರತಗಳಿಂದ ಕೃಶಳಾಗಿದ್ದ ಕುಂತಿಯು ಆದಿತ್ಯನಿಂದ ಹುಟ್ಟಿದ್ದ ತನ್ನ ಆ ಮಗನನ್ನು ಸ್ಮರಿಸಿಕೊಂಡು ಮುಖವನ್ನು ಮುಚ್ಚಿಕೊಂಡಳು.
15037016a ತಾಮೃಷಿರ್ವರದೋ ವ್ಯಾಸೋ ದೂರಶ್ರವಣದರ್ಶನಃ|
15037016c ಅಪಶ್ಯದ್ದುಃಖಿತಾಂ ದೇವೀಂ ಮಾತರಂ ಸವ್ಯಸಾಚಿನಃ||
ದೂರದಲ್ಲಿರುವುದನ್ನು ಕೇಳಲೂ ಮತ್ತು ನೋಡಲೂ ಸಮರ್ಥನಾಗಿದ್ದ ಆ ವರದ ಋಷಿ ವ್ಯಾಸನು ಸವ್ಯಸಾಚಿಯ ತಾಯಿ ಆ ದೇವಿಯು ದುಃಖಿತಳಾಗಿದ್ದುದ್ದನು ಗಮನಿಸಿದನು.
15037017a ತಾಮುವಾಚ ತತೋ ವ್ಯಾಸೋ ಯತ್ತೇ ಕಾರ್ಯಂ ವಿವಕ್ಷಿತಮ್|
15037017c ತದ್ಬ್ರೂಹಿ ತ್ವಂ ಮಹಾಪ್ರಾಜ್ಞೇ ಯತ್ತೇ ಮನಸಿ ವರ್ತತೇ||
ಆಗ ವ್ಯಾಸನು ಅವಳಿಗೆ ಹೀಗೆ ಹೇಳಿದನು: "ಮಹಾಪ್ರಾಜ್ಞೆ! ನೀನು ನನ್ನಿಂದ ಯಾವ ಕಾರ್ಯವನ್ನು ಬಯಸುತ್ತೀಯೆ ಅದನ್ನು ಹೇಳು. ನಿನ್ನ ಮನಸ್ಸಿನಲ್ಲಿರುವುದನ್ನು ಇದ್ದಹಾಗೆ ಹೇಳು!"
15037018a ತತಃ ಕುಂತೀ ಶ್ವಶುರಯೋಃ ಪ್ರಣಮ್ಯ ಶಿರಸಾ ತದಾ|
15037018c ಉವಾಚ ವಾಕ್ಯಂ ಸವ್ರೀಡಂ ವಿವೃಣ್ವಾನಾ ಪುರಾತನಮ್||
ಆಗ ಕುಂತಿಯು ತನ್ನ ಮಾವನಿಗೆ ಶಿರಬಾಗಿ ನಮಸ್ಕರಿಸಿ, ನಾಚಿಕೆಯಿಂದ ಮುಖಕುಂದಿದವಳಾಗಿ, ಹಿಂದೆ ನಡೆದುಹೋಗಿದ್ದುದರ ಕುರಿತು ಈ ಮಾತುಗಳನ್ನಾಡಿದಳು.
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ವ್ಯಾಸಕುಂತೀಸಂವಾದೇ ಸಪ್ತತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ವ್ಯಾಸಕುಂತೀಸಂವಾದ ಎನ್ನುವ ಮೂವತ್ತೇಳನೇ ಅಧ್ಯಾಯವು.