ಆರಣ್ಯಕ ಪರ್ವ: ಅರಣ್ಯ ಪರ್ವ
೬
ವಿದುರನು ವನದಲ್ಲಿ ಯುಧಿಷ್ಠಿರನ ಬಳಿ ಬರುವುದು
ಕಾಮ್ಯಕದಲ್ಲಿ ಆಗಮಿಸಿದ ವಿದುರನನ್ನು ಸಂಶಯಿಸಿದ ಪಾಂಡವರು ಬರಮಾಡಿಕೊಳ್ಳುವುದು (೧-೧೧). ಧೃತರಾಷ್ಟ್ರನಿಂದ ತ್ಯಕ್ತನಾಗಿ ನಿನ್ನ ಬಳಿ ಬಂದಿದ್ದೇನೆಂದು ವಿದುರನು ಯುಧಿಷ್ಠಿರನಿಗೆ ಹೇಳುವುದು (೧೨-೨೨).
03006001 ವೈಶಂಪಾಯನ ಉವಾಚ|
03006001a ಪಾಂಡವಾಸ್ತು ವನೇ ವಾಸಮುದ್ದಿಶ್ಯ ಭರತರ್ಷಭಾಃ|
03006001c ಪ್ರಯಯುರ್ಜಾಹ್ನವೀಕೂಲಾತ್ಕುರುಕ್ಷೇತ್ರಂ ಸಹಾನುಗಾಃ||
ವೈಶಂಪಾಯನನು ಹೇಳಿದನು: “ಭರತರ್ಷಭ ಪಾಂಡವರಾದರೋ ವನದಲ್ಲಿ ವಾಸಿಸುವ ಉದ್ದೇಶದಿಂದ ಜಾಹ್ನವೀ ತಟದಿಂದ ತಮ್ಮ ಅನುಯಾಯಿಗಳ ಸಹಿತ ಕುರುಕ್ಷೇತ್ರದ ಕಡೆ ಪ್ರಯಾಣಿಸಿದರು.
03006002a ಸರಸ್ವತೀದೃಷದ್ವತ್ಯೌ ಯಮುನಾಂ ಚ ನಿಷೇವ್ಯ ತೇ|
03006002c ಯಯುರ್ವನೇನೈವ ವನಂ ಸತತಂ ಪಶ್ಚಿಮಾಂ ದಿಶಂ||
ಸರಸ್ವತೀ, ದೃಷದ್ವತಿ ಮತ್ತು ಯಮುನೆಯನ್ನು ದಾಟಿ ವನದಿಂದ ವನಕ್ಕೆ ಹೋಗುತ್ತಾ ಸತತವಾಗಿ ಪಶ್ಚಿಮದಿಕ್ಕಿನಲ್ಲಿ ಪ್ರಯಾಣಮಾಡಿದರು.
03006003a ತತಃ ಸರಸ್ವತೀಕೂಲೇ ಸಮೇಷು ಮರುಧನ್ವಸು|
03006003c ಕಾಮ್ಯಕಂ ನಾಮ ದದೃಶುರ್ವನಂ ಮುನಿಜನಪ್ರಿಯಂ||
ಆಗ ಸರಸ್ವತೀ ದಡದಲ್ಲಿ ಮರುಭೂಮಿಯ ಮಧ್ಯದಲ್ಲಿ ಕಾಮ್ಯಕ ಎಂಬ ಹೆಸರಿನ ಮುನಿಜನರಿಗೆ ಪ್ರಿಯವಾದ ವನವನ್ನು ನೋಡಿದರು.
03006004a ತತ್ರ ತೇ ನ್ಯವಸನ್ವೀರಾ ವನೇ ಬಹುಮೃಗದ್ವಿಜೇ|
03006004c ಅನ್ವಾಸ್ಯಮಾನಾ ಮುನಿಭಿಃ ಸಾಂತ್ವ್ಯಮಾನಾಶ್ಚ ಭಾರತ||
ಭಾರತ! ಬಹಳಷ್ಟು ಮೃಗಗಳು ಮತ್ತು ದ್ವಿಜರು ವಾಸಿಸುತ್ತಿದ್ದ ಆ ವನದಲ್ಲಿ ಮುನಿಗಳಿಂದ ಸಾಂತ್ವನವನ್ನು ಪಡೆಯುತ್ತಾ ವೀರರು ನೆಲೆಸಿದರು.
03006005a ವಿದುರಸ್ತ್ವಪಿ ಪಾಂಡೂನಾಂ ತದಾ ದರ್ಶನಲಾಲಸಃ|
03006005c ಜಗಾಮೈಕರಥೇನೈವ ಕಾಮ್ಯಕಂ ವನಂ ಋದ್ಧಿಮತ್||
ಆಗ ವಿದುರನೂ ಕೂಡ ಪಾಂಡವರನ್ನು ನೋಡುವ ಇಚ್ಛೆಯಿಂದ ಒಂಟಿ ರಥದಲ್ಲಿ ಸಮೃದ್ಧ ಕಾಮ್ಯಕ ವನಕ್ಕೆ ಆಗಮಿಸಿದನು.
03006006a ತತೋ ಯಾತ್ವಾ ವಿದುರಃ ಕಾನನಂ ತಚ್
ಚೀಘ್ರೈರಶ್ವೈರ್ವಾಹಿನಾ ಸ್ಯಂದನೇನ|
03006006c ದದರ್ಶಾಸೀನಂ ಧರ್ಮರಾಜಂ ವಿವಿಕ್ತೇ
ಸಾರ್ಧಂ ದ್ರೌಪದ್ಯಾ ಭ್ರಾತೃಭಿರ್ಬ್ರಾಹ್ಮಣೈಶ್ಚ||
ಶೀಘ್ರ ಅಶ್ವಗಳಿಂದ ಎಳೆಯಲ್ಪಟ್ಟ ವಾಹನದಿಂದ ವಿದುರನು ಆ ಕಾನನಕ್ಕೆ ಬಂದು ಏಕಾಂತ ಸ್ಥಳದಲ್ಲಿ ದ್ರೌಪದಿ, ಸಹೋದರರು ಮತ್ತು ಬ್ರಾಹ್ಮಣರೊಂದಿಗೆ ಕುಳಿತಿದ್ದ ಧರ್ಮರಾಜನನ್ನು ನೋಡಿದನು.
03006007a ತತೋಽಪಶ್ಯದ್ವಿದುರಂ ತೂರ್ಣಮಾರಾದ್
ಅಭ್ಯಾಯಾಂತಂ ಸತ್ಯಸಂಧಃ ಸ ರಾಜಾ|
03006007c ಅಥಾಬ್ರವೀದ್ಭ್ರಾತರಂ ಭೀಮಸೇನಂ
ಕಿಂ ನು ಕ್ಷತ್ತಾ ವಕ್ಷ್ಯತಿ ನಃ ಸಮೇತ್ಯ||
ದೂರದಿಂದಲೇ ವಿದುರನನ್ನು ನೋಡಿದ ಆ ಸತ್ಯಸಂಧ ರಾಜನು ಸಹೋದರ ಭೀಮಸೇನನನ್ನು ಹತ್ತಿರ ಕರೆದು ಕೇಳಿದನು: “ಭೇಟಿಯಾದಾಗ ಕ್ಷತ್ತನು ಏನು ಹೇಳಬಹುದು?
03006008a ಕಚ್ಚಿನ್ನಾಯಂ ವಚನಾತ್ಸೌಬಲಸ್ಯ
ಸಮಾಹ್ವಾತಾ ದೇವನಾಯೋಪಯಾತಿ|
03006008c ಕಚ್ಚಿತ್ ಕ್ಷುದ್ರಃ ಶಕುನಿರ್ನಾಯುಧಾನಿ
ಜೇಷ್ಯತ್ಯಸ್ಮಾನ್ಪುನರೇವಾಕ್ಷವತ್ಯಾಂ||
ಸೌಬಲನು ಹೇಳಿಕಳುಹಿಸಿದಂತೆ ಇನ್ನೊಮ್ಮೆ ಜೂಜಿಗೆ ಕರೆಯಲು ಇಲ್ಲಿಗೆ ಬಂದಿರಬಹುದೇ? ದುಷ್ಟ ಶಕುನಿಯು ಇನ್ನೊಮ್ಮೆ ಜೂಜಿನಲ್ಲಿ ನಮ್ಮನ್ನು ಸೋಲಿಸಿ ನಮ್ಮ ಆಯುಧಗಳನ್ನು ಪಡೆಯಲು ಬಯಸಿರಬಹುದೇ?
03006009a ಸಮಾಹೂತಃ ಕೇನ ಚಿದಾದ್ರವೇತಿ
ನಾಹಂ ಶಕ್ತೋ ಭೀಮಸೇನಾಪಯಾತುಂ|
03006009c ಗಾಂಡೀವೇ ವಾ ಸಂಶಯಿತೇ ಕಥಂ ಚಿದ್
ರಾಜ್ಯಪ್ರಾಪ್ತಿಃ ಸಂಶಯಿತಾ ಭವೇನ್ನಃ||
ಯಾರಾದರೂ ಇಲ್ಲಿಗೆ ಬಾ ಎಂದು ಆಹ್ವಾನಿಸಿದರೆ ಇಲ್ಲ ಎಂದು ಹೇಳುವುದಕ್ಕೆ ನನಗಾಗುವುದಿಲ್ಲ ಭೀಮಸೇನ! ಆದರೂ ಹೇಗಾದರೂ ಯಾರಾದರೂ ಗಾಂಡೀವವನ್ನು ಪಣವಾಗಿ ಗೆದ್ದರೆ[1] ನಮಗೆ ಪುನಃ ರಾಜ್ಯಪ್ರಾಪ್ತಿಯಾಗುವುದಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ.”
03006010a ತತ ಉತ್ಥಾಯ ವಿದುರಂ ಪಾಂಡವೇಯಾಃ
ಪ್ರತ್ಯಗೃಹ್ಣನ್ನೃಪತೇ ಸರ್ವ ಏವ|
03006010c ತೈಃ ಸತ್ಕೃತಃ ಸ ಚ ತಾನಾಜಮೀಢೋ
ಯಥೋಚಿತಂ ಪಾಂಡುಪುತ್ರಾನ್ಸಮೇಯಾತ್||
ನೃಪತೇ! ಪಾಂಡವೇಯರೆಲ್ಲರೂ ಎದ್ದು ನಿಂತು ವಿದುರನನ್ನು ಬರಮಾಡಿಕೊಂಡರು. ಅವರಿಂದ ಸತ್ಕೃತನಾದ ಅಜಮೀಢ[2]ನು ಯಥೋಚಿತವಾಗಿ ಪಾಂಡುಪುತ್ರರೊಡನೆ ಕೂಡಿದನು.
03006011a ಸಮಾಶ್ವಸ್ತಂ ವಿದುರಂ ತೇ ನರರ್ಷಭಾಸ್
ತತೋಽಪೃಚ್ಚನ್ನಾಗಮನಾಯ ಹೇತುಂ|
03006011c ಸ ಚಾಪಿ ತೇಭ್ಯೋ ವಿಸ್ತರತಃ ಶಶಂಸ
ಯಥಾವೃತ್ತೋ ಧೃತರಾಷ್ಟ್ರೋಽಂಬಿಕೇಯಃ||
ವಿದುರನು ವಿಶ್ರಾಂತಿ ಪಡೆದ ನಂತರ ಆ ನರರ್ಷಭರು ಅವನು ಬಂದಿರುವ ಕಾರಣವನ್ನು ಕೇಳಿದರು. ಅವನಾದರೋ ಅವರಿಗೆ ಅಂಬಿಕೇಯ ಧೃತರಾಷ್ಟ್ರನು ನಡೆದುಕೊಂಡಿದುದರ ಕುರಿತು ವಿಸ್ತಾರವಾಗಿ ವಿವರಿಸಿದನು.
03006012 ವಿದುರ ಉವಾಚ|
03006012a ಅವೋಚನ್ಮಾಂ ಧೃತರಾಷ್ಟ್ರೋಽನುಗುಪ್ತಂ
ಅಜಾತಶತ್ರೋ ಪರಿಗೃಹ್ಯಾಭಿಪೂಜ್ಯ|
03006012c ಏವಂ ಗತೇ ಸಮತಾಮಭ್ಯುಪೇತ್ಯ
ಪಥ್ಯಂ ತೇಷಾಂ ಮಮ ಚೈವ ಬ್ರವೀಹಿ||
ವಿದುರನು ಹೇಳಿದನು: “ಅಜಾತಶತ್ರು! ನನ್ನನ್ನು ಪರಿಪಾಲಿಸುವ ಧೃತರಾಷ್ಟ್ರನು ನನ್ನನ್ನು ಸ್ವಾಗತಿಸಿ ಗೌರವಿಸಿ ಹೇಳಿದನು: “ಹೀಗೆಲ್ಲ ನಡೆದುಹೋಗಿರಲು, ಇಬ್ಬರಿಗೂ ಸಮತೆಯನ್ನು ತೋರಿಸಿ, ಅವರಿಗೆ ಮತ್ತು ನಮಗೆ ಸರಿಯಾದುದು ಏನು ಹೇಳು!”
03006013a ಮಯಾಪ್ಯುಕ್ತಂ ಯತ್ ಕ್ಷಮಂ ಕೌರವಾಣಾಂ
ಹಿತಂ ಪಥ್ಯಂ ಧೃತರಾಷ್ಟ್ರಸ್ಯ ಚೈವ|
03006013c ತದ್ವೈ ಪಥ್ಯಂ ತನ್ಮನೋ ನಾಭ್ಯುಪೈತಿ
ತತಶ್ಚಾಹಂ ಕ್ಷಮಮನ್ಯನ್ನ ಮನ್ಯೇ||
ನಾನು ಕೌರವರಿಗೆ ಏನು ತಕ್ಕುದಾದುದೋ ಮತ್ತು ಯಾವುದು ಧೃತರಾಷ್ಟ್ರನಿಗೂ ಹಿತವೂ ಸರಿಯೂ ಆದುದೋ ಅದನ್ನು ಹೇಳಿದೆನು. ಆದರೆ ನನ್ನ ಸಲಹೆಯು ಅವನ ಮನಸ್ಸನ್ನು ತಲುಪಲಿಲ್ಲ, ಮತ್ತು ಬೇರೆ ಏನನ್ನು ಹೇಳಲೂ ನನಗೆ ಮನಸ್ಸಾಗಲಿಲ್ಲ.
03006014a ಪರಂ ಶ್ರೇಯಃ ಪಾಂಡವೇಯಾ ಮಯೋಕ್ತಂ
ನ ಮೇ ತಚ್ಚ ಶ್ರುತವಾನಾಂಬಿಕೇಯಃ|
03006014c ಯಥಾತುರಸ್ಯೇವ ಹಿ ಪಥ್ಯಮನ್ನಂ
ನ ರೋಚತೇ ಸ್ಮಾಸ್ಯ ತದುಚ್ಯಮಾನಂ||
ಪಾಂಡವೇಯ! ಯಾವುದು ಪರಮ ಶ್ರೇಯವೋ ಅದನ್ನೇ ನಾನು ಹೇಳಿದೆ. ಆದರೆ ಅಂಬಿಕೇಯನು ಅದನ್ನು ಕೇಳಲಿಲ್ಲ. ರೋಗಿಗೆ ಪಥ್ಯ ಆಹಾರವು ರುಚಿಕರವೆನಿಸುವುದಿಲ್ಲದಂತೆ ನನ್ನ ಮಾತುಗಳು ಅವನಿಗೆ ಹಿಡಿಸಲಿಲ್ಲ.
03006015a ನ ಶ್ರೇಯಸೇ ನೀಯತೇಽಜಾತಶತ್ರೋ
ಸ್ತ್ರೀ ಶ್ರೋತ್ರಿಯಸ್ಯೇವ ಗೃಹೇ ಪ್ರದುಷ್ಟಾ|
03006015c ಬ್ರುವನ್ನ ರುಚ್ಯೈ ಭರತರ್ಷಭಸ್ಯ
ಪತಿಃ ಕುಮಾರ್ಯಾ ಇವ ಷಷ್ಟಿವರ್ಷಃ||
ಅಜಾತಶತ್ರು! ಪ್ರದುಷ್ಟ ಸ್ತ್ರೀಯೋರ್ವಳನ್ನು ಶ್ರೋತ್ರಿಯ ಕಡೆ ಹೇಗೋ ಹಾಗೆ ಅವನನ್ನು ಶ್ರೇಯಸ್ಸಿನ ಕಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಅರವತ್ತು ವರ್ಷದವನು ಕುಮಾರಿಗೆ ಪತಿಯಾಗಿ ಹೇಗೆ ಇಷ್ಟವಾಗುವುದಿಲ್ಲವೋ ಹಾಗೆ ನನ್ನ ಮಾತುಗಳು ಭರತರ್ಷಭನಿಗೆ ಇಷ್ಟವಾಗಲಿಲ್ಲ!
03006016a ಧ್ರುವಂ ವಿನಾಶೋ ನೃಪ ಕೌರವಾಣಾಂ
ನ ವೈ ಶ್ರೇಯೋ ಧೃತರಾಷ್ಟ್ರಃ ಪರೈತಿ|
03006016c ಯಥಾ ಪರ್ಣೇ ಪುಷ್ಕರಸ್ಯೇವ ಸಿಕ್ತಂ
ಜಲಂ ನ ತಿಷ್ಠೇತ್ಪಥ್ಯಮುಕ್ತಂ ತಥಾಸ್ಮಿನ್||
ನೃಪ! ಕೌರವರ ವಿನಾಶವು ನಿರ್ಧರಿತವಾಗಿದೆ ಮತ್ತು ಧೃತರಾಷ್ಟ್ರನು ಶ್ರೇಯಸ್ಸನ್ನು ಕಾಣುವುದಿಲ್ಲ. ಕಮಲದ ಡಂಟಿಗೆ ನೀರು ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ ಒಳ್ಳೆಯ ಸಲಹೆಯ ಮಾತುಗಳು ಅವನಿಗೆ ತಾಗುವುದಿಲ್ಲ.
03006017a ತತಃ ಕ್ರುದ್ಧೋ ಧೃತರಾಷ್ಟ್ರೋಽಬ್ರವೀನ್ಮಾಂ
ಯತ್ರ ಶ್ರದ್ಧಾ ಭಾರತ ತತ್ರ ಯಾಹಿ|
03006017c ನಾಹಂ ಭೂಯಃ ಕಾಮಯೇ ತ್ವಾಂ ಸಹಾಯಂ
ಮಹೀಂ ಇಮಾಂ ಪಾಲಯಿತುಂ ಪುರಂ ವಾ||
ಕೃದ್ಧನಾದ ಧೃತರಾಷ್ಟ್ರನು ನನಗೆ ಹೇಳಿದನು: “ಭಾರತ! ನಿನಗೆ ಎಲ್ಲಿ ಶ್ರದ್ಧೆಯಿದೆಯೋ ಅಲ್ಲಿಗೆ ಹೋಗು. ಈ ಭೂಮಿ ಮತ್ತು ಪುರವನ್ನು ಪಾಲಿಸಲು ಇನ್ನು ನನಗೆ ನಿನ್ನ ಸಹಾಯವು ಅಗತ್ಯವಿಲ್ಲ.”
03006018a ಸೋಽಹಂ ತ್ಯಕ್ತೋ ಧೃತರಾಷ್ಟ್ರೇಣ ರಾಜಂಸ್
ತ್ವಾಂ ಶಾಸಿತುಮುಪಯಾತಸ್ತ್ವರಾವಾನ್|
03006018c ತದ್ವೈ ಸರ್ವಂ ಯನ್ಮಯೋಕ್ತಂ ಸಭಾಯಾಂ
ತದ್ಧಾರ್ಯತಾಂ ಯತ್ಪ್ರವಕ್ಷ್ಯಾಮಿ ಭೂಯಃ||
ರಾಜನ್! ಧೃತರಾಷ್ಟ್ರನಿಂದ ತ್ಯಕ್ತನಾದ ನಾನು ತ್ವರೆಮಾಡಿ ಸಮಾಲೋಚನೆ ಮಾಡಲು ನಿನ್ನಲ್ಲಿಗೆ ಬಂದಿದ್ದೇನೆ. ಸಭೆಯಲ್ಲಿ ನಾನು ಹೇಳಿದ ಸರ್ವವನ್ನೂ ಮನಸ್ಸಿನಲ್ಲಿಟ್ಟುಕೋ. ಅವನ್ನೇ ಪುನಃ ಹೇಳುತ್ತೇನೆ.
03006019a ಕ್ಲೇಶೈಸ್ತೀವ್ರೈರ್ಯುಜ್ಯಮಾನಃ ಸಪತ್ನೈಃ
ಕ್ಷಮಾಂ ಕುರ್ವನ್ಕಾಲಮುಪಾಸತೇ ಯಃ|
03006019c ಸಂ ವರ್ಧಯನ್ಸ್ತೋಕಮಿವಾಗ್ನಿಮಾತ್ಮವಾನ್
ಸ ವೈ ಭುಂಕ್ತೇ ಪೃಥಿವೀಮೇಕ ಏವ||
ತನ್ನ ಪ್ರತಿಸ್ಪರ್ಧಿಗಳಿಂದ ಸಂಪೂರ್ಣವಾಗಿ ಸೋತವನು ಕ್ಷಮಿಸಿ ಕಾಲವನ್ನು ಉಪಾಸಿಸುತ್ತಾನೆ. ಅಗ್ನಿಯನ್ನು ಹೇಗೆ ವೃದ್ಧಿಸುತ್ತೀವೋ ಹಾಗೆ, ನಿಧಾನವಾಗಿ ತನ್ನನ್ನು ತಾನೇ ವೃದ್ಧಿಗೊಳಿಸಿಕೊಂಡು ಏಕೈಕನಾಗಿ ಪೃಥ್ವಿಯನ್ನು ಅನುಭವಿಸುತ್ತಾನೆ.
03006020a ಯಸ್ಯಾವಿಭಕ್ತಂ ವಸು ರಾಜನ್ಸಹಾಯೈಸ್
ತಸ್ಯ ದುಃಖೇಽಪ್ಯಂಶಭಾಜಃ ಸಹಾಯಾಃ|
03006020c ಸಹಾಯಾನಾಮೇಷ ಸಂಗ್ರಹಣೇಽಭ್ಯುಪಾಯಃ
ಸಹಾಯಾಪ್ತೌ ಪೃಥಿವೀಪ್ರಾಪ್ತಿಮಾಹುಃ||
ರಾಜನ್! ತನ್ನ ಸಹಾಯಕರೊಂದಿಗೆ ಸಂಪತ್ತನ್ನು ಹಂಚಿಕೊಂಡವನಿಗೆ ಅವನು ದುಃಖದಲ್ಲಿರುವಾಗ ಸಹಾಯಕರಿರುತ್ತಾರೆ. ಇದೊಂದು ಸಹಾಯಕರನ್ನು ಒಟ್ಟುಮಾಡಿಕೊಳ್ಳುವ ಉಪಾಯ. ಸಹಾಯಕರಿಂದ ಪೃಥ್ವಿಯನ್ನೇ ಗೆಲ್ಲಬಹುದು.
03006021a ಸತ್ಯಂ ಶ್ರೇಷ್ಠಂ ಪಾಂಡವ ನಿಷ್ಪ್ರಲಾಪಂ
ತುಲ್ಯಂ ಚಾನ್ನಂ ಸಹ ಭೋಜ್ಯಂ ಸಹಾಯೈಃ|
03006021c ಆತ್ಮಾ ಚೈಷಾಮಗ್ರತೋ ನಾತಿವರ್ತೇದ್
ಏವಂವೃತ್ತಿರ್ವರ್ಧತೇ ಭೂಮಿಪಾಲಃ||
ಪಾಂಡವ! ಪ್ರಲಾಪವಿಲ್ಲದೇ ಸತ್ಯವನ್ನು ಹೇಳುವುದು ಶ್ರೇಷ್ಠ. ಭೋಜನವನ್ನು ಸಹಾಯಕರೊಂದಿಗೆ ಸಮನಾಗಿ ಹಂಚಿಕೊಳ್ಳುವುದು ಶ್ರೇಷ್ಠ. ಇನ್ನೊಬ್ಬರ ಮೊದಲೇ ಸ್ವಾರ್ಥವು ಬರಬಾರದು. ಅಂಥಹ ನಡತೆಯು ಭೂಮಿಪಾಲನನ್ನು ವೃದ್ಧಿಗೊಳಿಸುತ್ತದೆ.”
03006022 ಯುಧಿಷ್ಠಿರ ಉವಾಚ|
03006022a ಏವಂ ಕರಿಷ್ಯಾಮಿ ಯಥಾ ಬ್ರವೀಷಿ
ಪರಾಂ ಬುದ್ಧಿಮುಪಗಮ್ಯಾಪ್ರಮತ್ತಃ|
03006022c ಯಚ್ಚಾಪ್ಯನ್ಯದ್ದೇಶಕಾಲೋಪಪನ್ನಂ
ತದ್ವೈ ವಾಚ್ಯಂ ತತ್ಕರಿಷ್ಯಾಮಿ ಕೃತ್ಸ್ನಂ||
ಯುಧಿಷ್ಠಿರನು ಹೇಳಿದನು: “ವಿದುರ! ನೀನು ಹೇಳಿದಹಾಗೆಯೇ ಮಾಡುತ್ತೇನೆ ಮತ್ತು ನಿನ್ನ ಮಹಾ ವಿವೇಕವನ್ನು ಮನಃಪೂರ್ವಕವಾಗಿ ಮಾಡುತ್ತೇನೆ. ಈ ಕಾಲದೇಶಗಳಿಗೆ ಹೊಂದುವಂಥಹ ಮತ್ತೇನನ್ನಾದರೂ ಹೇಳಬಯಸಿದರೆ ಅದರಂತೆಯೂ ಎಲ್ಲವನ್ನು ಮಾಡುತ್ತೇನೆ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ವಿದುರನಿರ್ವಾಸೇ ಷಷ್ಠೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ವಿದುರನಿರ್ವಾಸ ಎನ್ನುವ ಆರನೆಯ ಅಧ್ಯಾಯವು.
[1] ಜೂಜಿನಲ್ಲಿ ಗಾಂಡೀವವನ್ನು ಗೆಲ್ಲಲು ಸಾಧ್ಯವೇ? ಸಾಧ್ಯವಾಗಿದ್ದರೆ ಶಕುನಿ-ದುರ್ಯೋಧನಾದಿಗಳು ಇದನ್ನೂ ಪಣವನ್ನಾಗಿಡಲು ಯುಧಿಷ್ಠಿರನಿಗೆ ಏಕೆ ದ್ಯೂತದ ಸಮಯದಲ್ಲಿ ಕೇಳಲಿಲ್ಲ?
[2] ಇಲ್ಲಿ ವಿದುರನನ್ನು ಅಜಮೀಢನೆಂದು ಏಕೆ ಸಂಬೋಧಿಸಲಾಗಿದೆ?