Aranyaka Parva: Chapter 51

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೫೧

ದಮಯಂತೀ ಸ್ವಯಂವರಕ್ಕೆ ಇಂದ್ರಾದಿ ದೇವತೆಗಳ ಆಗಮನ

ಭೀಮನು ದಮಯಂತಿಯ ಸ್ವಯಂವರವನ್ನು ಏರ್ಪಡಿಸಿದ್ದುದು (೧-೮); ನೃಪರೆಲ್ಲರೂ ಸ್ವಯಂವರಕ್ಕೆ ನಡೆದುದು (೯-೧೦). ನಾರದ-ಪರ್ವತರಿಂದ ಸ್ವಯಂವರದ ಕುರಿತು ಕೇಳಿದ ಇಂದ್ರನು ಅಗ್ನಿ ಮತ್ತು ಲೋಕಪಾಲಕರೊಡನೆ ಸ್ವಯಂವರದಲ್ಲಿ ಭಾಗವಹಿಸಲು ಹೊರಟಿದುದು (೧೧-೨೫). ಮಾರ್ಗದಲ್ಲಿ ನಲನನ್ನು ಕಂಡ ಇಂದ್ರಾದಿಗಳು ಅವನ ಸಹಾಯವನ್ನು ಕೇಳಿದುದು (೨೬-೨೯).

03051001 ಬೃಹದಶ್ವ ಉವಾಚ|

03051001a ದಮಯಂತೀ ತು ತಚ್ಛೃತ್ವಾ ವಚೋ ಹಂಸಸ್ಯ ಭಾರತ|

03051001c ತದಾ ಪ್ರಭೃತಿ ನಸ್ವಸ್ಥಾ ನಲಂ ಪ್ರತಿ ಬಭೂವ ಸಾ||

ಬೃಹದಶ್ವನು ಹೇಳಿದನು: “ಭಾರತ! ಹಂಸದ ಮಾತುಗಳನ್ನು ಕೇಳಿದ ದಮಯಂತಿಯು, ನಲನ ಕಾರಣದಿಂದಾಗಿ ಬಹಳಷ್ಟು ಅಸ್ವಸ್ಥಳಾದಳು.

03051002a ತತಶ್ಚಿಂತಾಪರಾ ದೀನಾ ವಿವರ್ಣವದನಾ ಕೃಶಾ|

03051002c ಬಭೂವ ದಮಯಂತೀ ತು ನಿಃಶ್ವಾಸಪರಮಾ ತದಾ||

ದಮಯಂತಿಯು ಚಿಂತಾಪರಳಾಗಿ, ದೀನಳಾಗಿ, ಮುಖದ ಬಣ್ಣವನ್ನೇ ಕಳೆದುಕೊಂಡು, ಕೃಶಳಾಗಿ, ದೀರ್ಘ ನಿಟ್ಟುಸಿರು ಬಿಡುತ್ತಿದ್ದಳು.

03051003a ಊರ್ಧ್ವದೃಷ್ಟಿರ್ಧ್ಯಾನಪರಾ ಬಭೂವೋನ್ಮತ್ತದರ್ಶನಾ|

03051003c ನ ಶಯ್ಯಾಸನಭೋಗೇಷು ರತಿಂ ವಿಂದತಿ ಕರ್ಹಿ ಚಿತ್||

ಅವಳು ದಿಟ್ಟು ಹಿಡಿದು ಮೇಲೆಯೇ ನೋಡುತ್ತಿದ್ದು ಅಥವಾ ಯೋಚನೆಯಲ್ಲಿ ಮಗ್ನಳಾಗಿಯೇ ಇರುತ್ತಿದ್ದು, ಉನ್ಮತ್ತಳಾದಂತೆ ಕಾಣುತ್ತಿದ್ದಳು. ಅವಳು ಶಯನದಲ್ಲಿಯಾಗಲೀ, ಕುಳಿತುಕೊಳ್ಳುವುದರಲ್ಲಾಗಲೀ, ಅಥವಾ ಊಟದಲ್ಲಿಯಾಗಲೀ ಯಾವುದೇ ರೀತಿಯ ಆನಂದವನ್ನು ಕಾಣುತ್ತಿರಲಿಲ್ಲ.

03051004a ನ ನಕ್ತಂ ನ ದಿವಾ ಶೇತೇ ಹಾ ಹೇತಿ ವದತೀ ಮುಹುಃ|

03051004c ತಾಮಸ್ವಸ್ಥಾಂ ತದಾಕಾರಾಂ ಸಖ್ಯಸ್ತಾ ಜಜ್ಞುರಿಂಗಿತೈಃ||

03051005a ತತೋ ವಿದರ್ಭಪತಯೇ ದಮಯಂತ್ಯಾಃ ಸಖೀಗಣಃ|

03051005c ನ್ಯವೇದಯತ ನಸ್ವಸ್ಥಾಂ ದಮಯಂತೀಂ ನರೇಶ್ವರ||

ಮತ್ತೆ ಮತ್ತೆ ಹಾ ಹಾ ಎಂದು ನರಳುತ್ತಾ ಅವಳು ದಿನ-ರಾತ್ರಿ ಎರಡರಲ್ಲಿಯೂ ನಿದ್ರಿಸುತ್ತಿರಲಿಲ್ಲ, ಅವಳ ಈ ಅವಸ್ಥೆಯನ್ನು ನೋಡಿದ ಸಖಿಯರು ಅವಳ ಇಂಗಿತವನ್ನು ಅರಿತರು. ನರೇಶ್ವರ! ನಂತರ ದಮಯಂತಿಯ ಸಖೀಗಣವು ದಮಯಂತಿಯು ಸ್ವಸ್ಥಳಿಲ್ಲ ಎಂದು ವಿದರ್ಭಪತಿಗೆ ನಿವೇದಿಸಿದರು.

03051006a ತಚ್ಛೃತ್ವಾ ನೃಪತಿರ್ಭೀಮೋ ದಮಯಂತೀಸಖೀಗಣಾತ್|

03051006c ಚಿಂತಯಾಮಾಸ ತತ್ಕಾರ್ಯಂ ಸುಮಹತ್ಸ್ವಾಂ ಸುತಾಂ ಪ್ರತಿ||

ದಮಯಂತಿಯ ಸಖೀಗಣದಿಂದ ಈ ಮಾತನ್ನು ಕೇಳಿದ ನೃಪತಿ ಭೀಮನು ತನ್ನ ಸುತೆಯ ಸಲುವಾಗಿ ಮಾಡಬೇಕಾದ ಕಾರ್ಯದ ಕುರಿತು ಯೋಚಿಸತೊಡಗಿದನು.

03051007a ಸ ಸಮೀಕ್ಷ್ಯ ಮಹೀಪಾಲಃ ಸ್ವಾಂ ಸುತಾಂ ಪ್ರಾಪ್ತಯೌವನಾಂ|

03051007c ಅಪಶ್ಯದಾತ್ಮನಃ ಕಾರ್ಯಂ ದಮಯಂತ್ಯಾಃ ಸ್ವಯಂವರಂ||

ಮಹೀಪಾಲನು ತನ್ನ ಸುತೆಯು ಯೌವನವನ್ನು ಹೊಂದಿದ್ದಾಳೆ ಎಂದು ಸಮೀಕ್ಷಿಸಿ, ದಮಯಂತಿಯ ಸ್ವಯಂವರವನ್ನು ಏರ್ಪಡಿಸುವುದು ತನ್ನ ಕಾರ್ಯ ಎಂದು ಕಂಡುಕೊಂಡನು.

03051008a ಸ ಸಂನಿಪಾತಯಾಮಾಸ ಮಹೀಪಾಲಾನ್ವಿಶಾಂ ಪತೇ|

03051008c ಅನುಭೂಯತಾಮಯಂ ವೀರಾಃ ಸ್ವಯಂವರ ಇತಿ ಪ್ರಭೋ||

ಪ್ರಭು! ವಿಶಾಂಪತೇ! ಅವನು “ವೀರರೇ! ನಮ್ಮ ಈ ಸ್ವಯಂವರಕ್ಕೆ ಬನ್ನಿ!” ಎಂದು ಎಲ್ಲ ಮಹೀಪಾಲರನ್ನೂ ಒಂದುಗೂಡಿಸಿದನು.

03051009a ಶ್ರುತ್ವಾ ತು ಪಾರ್ಥಿವಾಃ ಸರ್ವೇ ದಮಯಂತ್ಯಾಃ ಸ್ವಯಂವರಂ|

03051009c ಅಭಿಜಗ್ಮುಸ್ತದಾ ಭೀಮಂ ರಾಜಾನೋ ಭೀಮಶಾಸನಾತ್||

ದಮಯಂತಿಯ ಸ್ವಯಂವರವನ್ನು ಕೇಳಿ ಪಾರ್ಥಿವ ಸರ್ವರೂ ರಾಜ ಭೀಮನ ಕರೆಯಂತೆ ಭೀಮನಲ್ಲಿಗೆ ಹೊರಟರು.

03051010a ಹಸ್ತ್ಯಶ್ವರಥಘೋಷೇಣ ನಾದಯಂತೋ ವಸುಂಧರಾಂ|

03051010c ವಿಚಿತ್ರಮಾಲ್ಯಾಭರಣೈರ್ಬಲೈರ್ದೃಶ್ಯೈಃ ಸ್ವಲಂಕೃತೈಃ||

ತಮ್ಮ ತಮ್ಮ ಆನೆ, ಕುದುರೆ, ರಥ ಮತ್ತು ವಿಚಿತ್ರ ಮಾಲ್ಯಾಭರಣಗಳಿಂದ ಅಲಂಕೃತರಾದ ಸೇನೆಗಳ ಘರ್ಜನೆಯಿಂದಾಗಿ ಇಡೀ ವಸುಂಧರೆಯೇ ಘರ್ಜಿಸುತ್ತಿದೆಯೋ ಎಂಬಂತೆ ಕಂಡುಬಂದಿತು.

03051011a ಏತಸ್ಮಿನ್ನೇವ ಕಾಲೇ ತು ಪುರಾಣಾವೃಷಿಸತ್ತಮೌ|

03051011c ಅಟಮಾನೌ ಮಹಾತ್ಮಾನಾವಿಂದ್ರಲೋಕಮಿತೋ ಗತೌ||

03051012a ನಾರದಃ ಪರ್ವತಶ್ಚೈವ ಮಹಾತ್ಮಾನೌ ಮಹಾವ್ರತೌ|

03051012c ದೇವರಾಜಸ್ಯ ಭವನಂ ವಿವಿಶಾತೇ ಸುಪೂಜಿತೌ||

03051013a ತಾವರ್ಚಿತ್ವಾ ಸಹಸ್ರಾಕ್ಷಸ್ತತಃ ಕುಶಲಮವ್ಯಯಂ|

03051013c ಪಪ್ರಚ್ಚಾನಾಮಯಂ ಚಾಪಿ ತಯೋಃ ಸರ್ವಗತಂ ವಿಭುಃ||

ಇದೇ ಸಮಯದಲ್ಲಿ, ಮಹಾತ್ಮರೂ, ಮಹಾವ್ರತರೂ, ಪುರಾಣ ಋಷಿಸತ್ತಮರೂ ಆದ ನಾರದ ಮತ್ತು ಪರ್ವತರು ಸಂಚರಿಸುತ್ತಾ ಇಂದ್ರಲೋಕಕ್ಕೆ ಆಗಮಿಸಿದರು. ದೇವರಾಜನ ಭವನವನ್ನು ಪ್ರವೇಶಿಸಿ, ಸುಪೂಜಿತರಾದರು. ಅವರನ್ನು ಅರ್ಚಿಸಿದ ಸಹಸ್ರಾಕ್ಷ ವಿಭುವು ಅವರು ಎಲ್ಲಿ ಹೋದರೂ ಅವ್ಯಯವಾದ ಅವರ ಕುಶಲತೆಯ ಕುರಿತು ವಿಚಾರಿಸಿದನು.

03051014 ನಾರದ ಉವಾಚ|

03051014a ಆವಯೋಃ ಕುಶಲಂ ದೇವ ಸರ್ವತ್ರಗತಮೀಶ್ವರ|

03051014c ಲೋಕೇ ಚ ಮಘವನ್ಕೃತ್ಸ್ನೇ ನೃಪಾಃ ಕುಶಲಿನೋ ವಿಭೋ||

ನಾರದನು ಹೇಳಿದನು: “ಈಶ್ವರ! ನಾವೀರ್ವರು ಹೋದಲ್ಲೆಲ್ಲಾ ಕುಶಲವಾಗಿಯೇ ಇದ್ದೇವೆ. ಮತ್ತು ಮಘವತ್! ವಿಭೋ! ಭೂಲೋಕದಲ್ಲಿಯೂ ಕೂಡ ನೃಪರೆಲ್ಲರೂ ಉತ್ತಮ ಕುಶಲತೆಯಿಂದ ಇದ್ದಾರೆ.””

03051015 ಬೃಹದಶ್ವ ಉವಾಚ|

03051015a ನಾರದಸ್ಯ ವಚಃ ಶ್ರುತ್ವಾ ಪಪ್ರಚ್ಚ ಬಲವೃತ್ರಹಾ|

03051015c ಧರ್ಮಜ್ಞಾಃ ಪೃಥಿವೀಪಾಲಾಸ್ತ್ಯಕ್ತಜೀವಿತಯೋಧಿನಃ||

03051016a ಶಸ್ತ್ರೇಣ ನಿಧನಂ ಕಾಲೇ ಯೇ ಗಚ್ಚಂತ್ಯಪರಾಙ್ಮುಖಾಃ|

03051016c ಅಯಂ ಲೋಕೋಽಕ್ಷಯಸ್ತೇಷಾಂ ಯಥೈವ ಮಮ ಕಾಮಧುಕ್||

ಬೃಹದಶ್ವನು ಹೇಳಿದನು: “ನಾರದನ ಮಾತನ್ನು ಕೇಳಿ ಬಲವೃತ್ರಹನು ಪ್ರಶ್ನಿಸಿದನು: “ಜೀವವನ್ನೇ ತ್ಯಜಿಸಿ ಯುದ್ಧಮಾಡುವ ಧರ್ಮಜ್ಞರಾದ ಪೃಥಿವೀಪಾಲರು ಪರಾಙ್ಮುಖರಾಗದೇ, ಕಾಲಬಂದಾಗ ಶಸ್ತ್ರಗಳಿಂದ ನಿಧನಹೊಂದಿ ಈ ಲೋಕಕ್ಕೆ ಬರುತ್ತಾರೆ. ಆದರೆ ಈಗ ಅಂಥವರ ಸಂಖ್ಯೆಯು ಕಡಿಮೆಯಾಗುತ್ತಿದೆ.

03051017a ಕ್ವ ನು ತೇ ಕ್ಷತ್ರಿಯಾಃ ಶೂರಾ ನ ಹಿ ಪಶ್ಯಾಮಿ ತಾನಹಂ|

03051017c ಆಗಚ್ಚತೋ ಮಹೀಪಾಲಾನತಿಥೀನ್ದಯಿತಾನ್ಮಮ||

ಆದರೆ ಆ ಎಲ್ಲ ಶೂರ ಕ್ಷತ್ರಿಯರು ಈಗ ಎಲ್ಲಿದ್ದಾರೆ? ನನ್ನ ಪ್ರೀತಿಯ ಅತಿಥಿಗಳಾಗಿ ಮಹೀಪಾಲರು ಯಾರೂ ಬರುತ್ತಿರುವಂತೆ ಕಾಣುವುದಿಲ್ಲವಲ್ಲ!”

03051018a ಏವಮುಕ್ತಸ್ತು ಶಕ್ರೇಣ ನಾರದಃ ಪ್ರತ್ಯಭಾಷತ|

03051018c ಶೃಣು ಮೇ ಭಗವನ್ಯೇನ ನ ದೃಶ್ಯಂತೇ ಮಹೀಕ್ಷಿತಃ||

ಶಕ್ರನ ಈ ಪ್ರಶ್ನೆಗೆ ನಾರದನು ಉತ್ತರಿಸಿದನು: “ಭಗವನ್! ನೀನು ಏಕೆ ಮಹೀಕ್ಷಿತರ್ಯಾರನ್ನೂ ನೋಡುತ್ತಿಲ್ಲ ಎಂದು ನನ್ನಿಂದ ಕೇಳು.

03051019a ವಿದರ್ಭರಾಜದುಹಿತಾ ದಮಯಂತೀತಿ ವಿಶ್ರುತಾ|

03051019c ರೂಪೇಣ ಸಮತಿಕ್ರಾಂತಾ ಪೃಥಿವ್ಯಾಂ ಸರ್ವಯೋಷಿತಃ||

ವಿದರ್ಭ ರಾಜನಿಗೆ ದಮಯಂತಿ ಎನ್ನುವ ಮಗಳಿದ್ದಾಳೆ. ರೂಪದಲ್ಲಿ ಅವಳು ಪೃಥ್ವಿಯ ಎಲ್ಲರನ್ನೂ ಮೀರಿಸಿದವಳು.

03051020a ತಸ್ಯಾಃ ಸ್ವಯಂವರಃ ಶಕ್ರ ಭವಿತಾ ನಚಿರಾದಿವ|

03051020c ತತ್ರ ಗಚ್ಚಂತಿ ರಾಜಾನೋ ರಾಜಪುತ್ರಾಶ್ಚ ಸರ್ವಶಃ||

ಸದ್ಯದಲ್ಲಿಯೇ ಅವಳ ಸ್ವಯಂವರವು ನಡೆಯಲಿದೆ. ಆದುದರಿಂದ ಶಕ್ರ! ರಾಜರು ಮತ್ತು ರಾಜಪುತ್ರರೆಲ್ಲರೂ ಅಲ್ಲಿಗೆ ಹೋಗುತ್ತಿದ್ದಾರೆ.

03051021a ತಾಂ ರತ್ನಭೂತಾಂ ಲೋಕಸ್ಯ ಪ್ರಾರ್ಥಯಂತೋ ಮಹೀಕ್ಷಿತಃ|

03051021c ಕಾಂಕ್ಷಂತಿ ಸ್ಮ ವಿಶೇಷೇಣ ಬಲವೃತ್ರನಿಷೂದನ||

ಬಲ-ವೃತ್ರ ನಿಶೂದನ! ಈ ಭೂರತ್ನವನ್ನು ಪಡೆಯಲು ಹೊರಟಿರುವ ಎಲ್ಲ ಮಹೀಕ್ಷಿತರೂ ಅವಳನ್ನು ವಿಶೇಷವಾಗಿ ಆಕಾಂಕ್ಷಿಸುತ್ತಿದ್ದಾರೆ!”

03051022a ಏತಸ್ಮಿನ್ಕಥ್ಯಮಾನೇ ತು ಲೋಕಪಾಲಾಶ್ಚ ಸಾಗ್ನಿಕಾಃ|

03051022c ಆಜಗ್ಮುರ್ದೇವರಾಜಸ್ಯ ಸಮೀಪಮಮರೋತ್ತಮಾಃ||

ಹೀಗೆ ಹೇಳುತ್ತಿರುವಾಗಲೇ, ಅಮರೋತ್ತಮ ಲೋಕಪಾಲಕರು ಅಗ್ನಿಯನ್ನೂ ಒಡಗೊಂಡು, ದೇವರಾಜನ ಬಳಿ ಆಗಮಿಸಿದರು.

03051023a ತತಸ್ತಚ್ಛುಶ್ರುವುಃ ಸರ್ವೇ ನಾರದಸ್ಯ ವಚೋ ಮಹತ್|

03051023c ಶ್ರುತ್ವಾ ಚೈವಾಬ್ರುವನ್ ಹೃಷ್ಟಾ ಗಚ್ಚಾಮೋ ವಯಮಪ್ಯುತ||

ಅವರೆಲ್ಲರೂ ನಾರದನ ಮಹತ್ತರ ಮಾತುಗಳನ್ನು ಕೇಳಿ ಹರ್ಷಗೊಂಡು “ನಾವೂ ಕೂಡ ಅಲ್ಲಿಗೆ ಹೋಗೋಣ!” ಎಂದರು.

03051024a ತತಃ ಸರ್ವೇ ಮಹಾರಾಜ ಸಗಣಾಃ ಸಹವಾಹನಾಃ|

03051024c ವಿದರ್ಭಾನಭಿತೋ ಜಗ್ಮುರ್ಯತ್ರ ಸರ್ವೇ ಮಹೀಕ್ಷಿತಃ||

ಮಹಾರಾಜ! ಹೀಗೆ ಅವರೆಲ್ಲರೂ ಗಣ-ವಾಹನ ಸಮೇತರಾಗಿ ಎಲ್ಲ ಮಹೀಕ್ಷಿತರೂ ಸೇರಿದ್ದ ವಿದರ್ಭಕ್ಕೆ ಹೊರಟರು.

03051025a ನಲೋಽಪಿ ರಾಜಾ ಕೌಂತೇಯ ಶ್ರುತ್ವಾ ರಾಜ್ಞಾಂ ಸಮಾಗಮಂ|

03051025c ಅಭ್ಯಗಚ್ಚದದೀನಾತ್ಮಾ ದಮಯಂತೀಮನುವ್ರತಃ||

ಕೌಂತೇಯ! ದಮಯಂತಿಯಲ್ಲಿಯೇ ಅನುವೃತನಾದ ರಾಜ ನಲನೂ ಕೂಡ ರಾಜರ ಸಮಾಗಮದ ಕುರಿತು ಕೇಳಿ, ಮುದದಿಂದ ಅಲ್ಲಿಗೆ ಹೊರಟನು.

03051026a ಅಥ ದೇವಾಃ ಪಥಿ ನಲಂ ದದೃಶುರ್ಭೂತಲೇ ಸ್ಥಿತಂ|

03051026c ಸಾಕ್ಷಾದಿವ ಸ್ಥಿತಂ ಮೂರ್ತ್ಯಾ ಮನ್ಮಥಂ ರೂಪಸಂಪದಾ||

ಮಾರ್ಗದಲ್ಲಿ ದೇವತೆಗಳು ಭೂತಲದಲ್ಲಿ ಪಯಣಿಸುತ್ತಿದ್ದ ಸಾಕ್ಷಾತ್ ಮನ್ಮಥನೇ ಅವತರಿಸಿದ್ದಾನೋ ಎನ್ನುವ ರೂಪ ಸಂಪದ ನಲನನ್ನು ನೋಡಿದರು.

03051027a ತಂ ದೃಷ್ಟ್ವಾ ಲೋಕಪಾಲಾಸ್ತೇ ಭ್ರಾಜಮಾನಂ ಯಥಾ ರವಿಂ|

03051027c ತಸ್ಥುರ್ವಿಗತಸಂಕಲ್ಪಾ ವಿಸ್ಮಿತಾ ರೂಪಸಂಪದಾ||

ಸೂರ್ಯನಂತೆ ಶೋಭಿಸುತ್ತಿದ್ದ ಅವನನ್ನು ನೋಡಿದ ಲೋಕಪಾಲರು, ತಮ್ಮ ತಮ್ಮ ಉದ್ದೇಶಗಳನ್ನೇ ಮರೆತು, ವಿಸ್ಮಿತರಾಗಿ ಅವನ ರೂಪಸಂಪತ್ತನ್ನೇ ನೋಡತೊಡಗಿದರು.

03051028a ತತೋಽಂತರಿಕ್ಷೇ ವಿಷ್ಟಭ್ಯ ವಿಮಾನಾನಿ ದಿವೌಕಸಃ|

03051028c ಅಬ್ರುವನ್ನೈಷಧಂ ರಾಜನ್ನವತೀರ್ಯ ನಭಸ್ತಲಾತ್||

ಆ ದಿವೌಕಸರು ಅಂತರಿಕ್ಷದಲ್ಲಿಯೇ ತಮ್ಮ ತಮ್ಮ ವಿಮಾನಗಳನ್ನು ನಿಲ್ಲಿಸಿ, ನಭಸ್ತಲದಿಂದ ಕೆಳಗಿಳಿದು, ನೈಷಧನನ್ನುದ್ದೇಶಿಸಿ ಹೇಳಿದರು:

03051029a ಭೋ ಭೋ ನೈಷಧ ರಾಜೇಂದ್ರ ನಲ ಸತ್ಯವ್ರತೋ ಭವಾನ್|

03051029c ಅಸ್ಮಾಕಂ ಕುರು ಸಾಹಾಯ್ಯಂ ದೂತೋ ಭವ ನರೋತ್ತಮ||

“ಭೋ ಭೋ ನೈಷಧ! ರಾಜೇಂದ್ರ! ನಲ! ನರೋತ್ತಮ! ಸತ್ಯವ್ರತ ನೀನು ನಮ್ಮ ದೂತನಾಗಿ ನಮಗೆ ಸಹಾಯವನ್ನು ಮಾಡು.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಇಂದ್ರನಾರದ ಸಂವಾದೇ ಏಕಪಂಚಾಶತ್ತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಇಂದ್ರನಾರದ ಸಂವಾದ ಎನ್ನುವ ಐವತ್ತೊಂದನೆಯ ಅಧ್ಯಾಯವು.

Image result for indian motifs hansa

Comments are closed.