Aranyaka Parva: Chapter 50

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೫೦

ನಲೋಪಾಖ್ಯಾನ

ನಲ ಮತ್ತು ದಮಯಂತಿಯರ ನಡುವೆ, ಪರಸ್ಪರರನ್ನು ನೋಡಿರದೇ ಇದ್ದರೂ, ಇತರರಿಂದ ಪರಸ್ಪರರ ಗುಣಗಳನ್ನು ಕೇಳಿ ಕಾಮವು ಬೆಳೆದಿದ್ದುದು (೧-೧೬). ಹಂಸವೊಂದು ನಲನ ಸಂದೇಶವನ್ನು ದಮಯಂತಿಗೆ ತಲುಪಿಸಿ, ಪ್ರೀತಿಯನ್ನು ವೃದ್ಧಿಸಿದುದು (೧೭-೩೧).

Image result for nala damayanti03050001 ಬೃಹದಶ್ವ ಉವಾಚ|

03050001a ಆಸೀದ್ರಾಜಾ ನಲೋ ನಾಮ ವೀರಸೇನಸುತೋ ಬಲೀ|

03050001c ಉಪಪನ್ನೋ ಗುಣೈರಿಷ್ಟೈ ರೂಪವಾನಶ್ವಕೋವಿದಃ||

03050002a ಅತಿಷ್ಠನ್ಮನುಜೇಂದ್ರಾಣಾಂ ಮೂರ್ಧ್ನಿ ದೇವಪತಿರ್ಯಥಾ|

03050002c ಉಪರ್ಯುಪರಿ ಸರ್ವೇಷಾಮಾದಿತ್ಯ ಇವ ತೇಜಸಾ||

ಬೃಹದಶ್ವನು ಹೇಳಿದನು: “ವೀರಸೇನನ ಬಲಶಾಲಿ ಮಗ, ಎಲ್ಲಾ ಸದ್ಗುಣ ಸಂಪನ್ನ, ರೂಪವಂತ, ಅಶ್ವಕೋವಿದ, ದೇವಪತಿಯಂತೆ ಮನುಜೇಂದ್ರರೆಲ್ಲರ ಮೇಲ್ಪಟ್ಟ, ಅವರೆಲ್ಲರಿಗಿಂತ ತೇಜಸ್ಸಿನಲ್ಲಿ ಸೂರ್ಯನಂತೆ ಶೋಭಿಸುತ್ತಿದ್ದ ನಲ ಎಂಬ ಹೆಸರಿನ ಒಬ್ಬ ರಾಜನಿದ್ದನು.

03050003a ಬ್ರಹ್ಮಣ್ಯೋ ವೇದವಿಚ್ಛೂರೋ ನಿಷಧೇಷು ಮಹೀಪತಿಃ|

03050003c ಅಕ್ಷಪ್ರಿಯಃ ಸತ್ಯವಾದೀ ಮಹಾನಕ್ಷೌಹಿಣೀಪತಿಃ||

ಶೂರನೂ, ಬ್ರಹ್ಮಜ್ಞನೂ, ವೇದಪಾರಂಗತನೂ, ಸತ್ಯವಾದಿಯೂ, ಮಹಾ ಅಕ್ಷೌಹಿಣಿಪತಿಯೂ ಆದ ಈ ನಿಷಧ ಮಹೀಪತಿಯು ಜೂಜಿನಲ್ಲಿ ಪ್ರೀತಿ ಹೊಂದಿದ್ದನು.

03050004a ಈಪ್ಸಿತೋ ವರನಾರೀಣಾಮುದಾರಃ ಸಮ್ಯತೇಂದ್ರಿಯಃ|

03050004c ರಕ್ಷಿತಾ ಧನ್ವಿನಾಂ ಶ್ರೇಷ್ಠಃ ಸಾಕ್ಷಾದಿವ ಮನುಃ ಸ್ವಯಂ||

ಸುಂದರ ನಾರಿಯರೆಲ್ಲರೂ ಆಸೆ ಪಡುವಂತಿದ್ದ ಅವನು ಉದಾರನೂ, ಇಂದ್ರಿಯಸಂಯಮನೂ ಆಗಿದ್ದು, ಧನುರ್ಧಾರಿಗಳಲ್ಲಿ ಶ್ರೇಷ್ಠನೂ, ಎಲ್ಲರ ರಕ್ಷಕನೂ ಆಗಿ ಸ್ವತಃ ಸಾಕ್ಷಾತ್ ಮನುವಿನಂತಿದ್ದನು.

03050005a ತಥೈವಾಸೀದ್ವಿದರ್ಭೇಷು ಭೀಮೋ ಭೀಮಪರಾಕ್ರಮಃ|

03050005c ಶೂರಃ ಸರ್ವಗುಣೈರ್ಯುಕ್ತಃ ಪ್ರಜಾಕಾಮಃ ಸ ಚಾಪ್ರಜಃ||

ಹಾಗೆಯೇ ವಿದರ್ಭದಲ್ಲಿ ಶೂರನೂ, ಸರ್ವಗುಣಯುಕ್ತನೂ, ಭೀಮಪರಾಕ್ರಮಿಯೂ, ಸಂತಾನವಿಲ್ಲದೆ, ಸಂತಾನವನ್ನು ಬಯಸುತ್ತಿದ್ದ ಭೀಮ ಎನ್ನುವ ರಾಜನಿದ್ದನು.

03050006a ಸ ಪ್ರಜಾರ್ಥೇ ಪರಂ ಯತ್ನಮಕರೋತ್ಸುಸಮಾಹಿತಃ|

03050006c ತಮಭ್ಯಗಚ್ಚದ್ಬ್ರಹ್ಮರ್ಷಿರ್ದಮನೋ ನಾಮ ಭಾರತ||

03050007a ತಂ ಸ ಭೀಮಃ ಪ್ರಜಾಕಾಮಸ್ತೋಷಯಾಮಾಸ ಧರ್ಮವಿತ್|

03050007c ಮಹಿಷ್ಯಾ ಸಹ ರಾಜೇಂದ್ರ ಸತ್ಕಾರೇಣ ಸುವರ್ಚಸಂ||

ಅವನು ಸಂತಾನಕ್ಕೋಸ್ಕರ ನಿರಂತರ ಪರಮ ಯತ್ನವನ್ನು ಮಾಡಿದನು. ಭಾರತ! ಆಗ ದಮನ ಎಂಬ ಹೆಸರಿನ ಬ್ರಹ್ಮರ್ಷಿಯೊಬ್ಬನು ಅವನಲ್ಲಿಗೆ ಆಗಮಿಸಿದನು. ಆ ದರ್ಮವಿತ್ತ, ಪ್ರಜಾಕಾಮಿ ರಾಜೇಂದ್ರ ಭೀಮನು ತನ್ನ ಮಹಿಷಿಯೊಡಗೊಂಡು ಆ ಸುವರ್ಚಸನನ್ನು ಸತ್ಕರಿಸಿದನು.

03050008a ತಸ್ಮೈ ಪ್ರಸನ್ನೋ ದಮನಃ ಸಭಾರ್ಯಾಯ ವರಂ ದದೌ|

03050008c ಕನ್ಯಾರತ್ನಂ ಕುಮಾರಾಂಶ್ಚ ತ್ರೀನುದಾರಾನ್ಮಹಾಯಶಾಃ||

03050009a ದಮಯಂತೀಂ ದಮಂ ದಾಂತಂ ದಮನಂ ಚ ಸುವರ್ಚಸಂ|

03050009c ಉಪಪನ್ನಾನ್ಗುಣೈಃ ಸರ್ವೈರ್ಭೀಮಾನ್ಭೀಮಪರಾಕ್ರಮಾನ್||

ಅದರಿಂದ ಪ್ರಸನ್ನನಾದ ದಮನನು ರಾಜ-ರಾಣಿಯರಿಗೆ ವರವನ್ನಿತ್ತನು: ಒಂದು ಕನ್ಯಾರತ್ನ - ದಮಯಂತಿ, ಮತ್ತು ಮಹಾಯಶರೂ, ಉದಾರರೂ ಆದ ಮೂವರು ಕುಮಾರರು - ದಮ, ದಾಂತ, ಮತ್ತು ಸುವರ್ಚಸಿಯಾದ ದಮನ. ಇವರೆಲ್ಲರೂ ಗುಣಸಂಪನ್ನರೂ, ಘೋರರೂ, ಘೋರಪರಾಕ್ರಮಿಗಳೂ ಆಗಿದ್ದರು.

03050010a ದಮಯಂತೀ ತು ರೂಪೇಣ ತೇಜಸಾ ಯಶಸಾ ಶ್ರಿಯಾ|

03050010c ಸೌಭಾಗ್ಯೇನ ಚ ಲೋಕೇಷು ಯಶಃ ಪ್ರಾಪ ಸುಮಧ್ಯಮಾ||

ಸುಮಧ್ಯಮೆ ದಮಯಂತಿಯು ರೂಪ, ತೇಜಸ್ಸು, ಯಶಸ್ಸು, ಸೌಂದರ್ಯ ಮತ್ತು ಸೌಭಾಗ್ಯಗಳಲ್ಲಿ ಲೋಕಗಳಲ್ಲೆಲ್ಲಾ ಪ್ರಸಿದ್ಧಳಾಗಿದ್ದಳು.

03050011a ಅಥ ತಾಂ ವಯಸಿ ಪ್ರಾಪ್ತೇ ದಾಸೀನಾಂ ಸಮಲಂಕೃತಂ|

03050011c ಶತಂ ಸಖೀನಾಂ ಚ ತಥಾ ಪರ್ಯುಪಾಸ್ತೇ ಶಚೀಮಿವ||

ವಯಸ್ಸಿಗೆ ಬಂದ ಅವಳನ್ನು ಒಂದು ನೂರು ಸಮಲಂಕೃತ ಸಖಿಯರು, ಶಚಿಯಂತೆ ಸುತ್ತುವರೆಯುತ್ತಿದ್ದರು.

03050012a ತತ್ರ ಸ್ಮ ಭ್ರಾಜತೇ ಭೈಮೀ ಸರ್ವಾಭರಣಭೂಷಿತಾ|

03050012c ಸಖೀಮಧ್ಯೇಽನವದ್ಯಾಂಗೀ ವಿದ್ಯುತ್ಸೌದಾಮಿನೀ ಯಥಾ||

03050012e ಅತೀವ ರೂಪಸಂಪನ್ನಾ ಶ್ರೀರಿವಾಯತಲೋಚನಾ|

03050013a ನ ದೇವೇಷು ನ ಯಕ್ಷೇಷು ತಾದೃಗ್ರೂಪವತೀ ಕ್ವ ಚಿತ್||

03050013c ಮಾನುಷೇಷ್ವಪಿ ಚಾನ್ಯೇಷು ದೃಷ್ಟಪೂರ್ವಾ ನ ಚ ಶ್ರುತಾ|

03050013e ಚಿತ್ತಪ್ರಮಾಥಿನೀ ಬಾಲಾ ದೇವಾನಾಮಪಿ ಸುಂದರೀ||

ತನ್ನ ಸಖಿಯರ ಮಧ್ಯದಲ್ಲಿ, ಅನವದ್ಯಾಂಗಿ, ಸರ್ವಾಭರಣಭೂಷಿತೆ ಪುಷ್ಪಗಳಿಂದಲಂಕೃತ ಭೈಮಿಯು ಮಿಂಚಿನಂತೆ ಶೋಭಿಸುತ್ತಿದ್ದಳು. ಆ ಆಯತ ಲೋಚನೆಯು ಲಕ್ಷ್ಮಿಯಂತೆ ಅತೀವ ರೂಪಸಂಪನ್ನಳಾಗಿದ್ದಳು. ಇದಕ್ಕೂ ಪೂರ್ವದಲ್ಲಿ ದೇವ, ಯಕ್ಷ ಅಥವಾ ಮನುಷ್ಯರಲ್ಲಿ ಇಷ್ಟೊಂದು ರೂಪವತಿಯನ್ನು ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ. ಆ ಸುಂದರ ಬಾಲಕಿಯು ದೇವತೆಗಳ ಚಿತ್ತವನ್ನೂ ಕಡೆಯುತ್ತಿದ್ದಳು.

03050014a ನಲಶ್ಚ ನರಶಾರ್ದೂಲೋ ರೂಪೇಣಾಪ್ರತಿಮೋ ಭುವಿ|

03050014c ಕಂದರ್ಪ ಇವ ರೂಪೇಣ ಮೂರ್ತಿಮಾನಭವತ್ಸ್ವಯಂ||

ನರಶಾರ್ದೂಲ ನಲನು ರೂಪದಲ್ಲಿ ಭುವಿಯಲ್ಲೇ ಅಪ್ರತಿಮನಾಗಿದ್ದನು, ಮತ್ತು ರೂಪದಲ್ಲಿ ಕಂದರ್ಪನೇ ಸ್ವಯಂ ಅವತರಿಸಿದಂತಿದ್ದನು.

03050015a ತಸ್ಯಾಃ ಸಮೀಪೇ ತು ನಲಂ ಪ್ರಶಶಂಸುಃ ಕುತೂಹಲಾತ್|

03050015c ನೈಷಧಸ್ಯ ಸಮೀಪೇ ತು ದಮಯಂತೀಂ ಪುನಃ ಪುನಃ||

ಜನರು ಕುತೂಹಲದಿಂದ ದಮಯಂತಿಯ ಸಮೀಪದಲ್ಲಿ ನಲನನ್ನು ಪ್ರಶಂಸಿಸುತ್ತಿದ್ದರು; ಮತ್ತು ನೈಷಧನ ಸಮೀಪದಲ್ಲಿ ಪುನಃ ಪುನಃ ಅವಳನ್ನು ಪ್ರಶಂಸಿಸುತ್ತಿದ್ದರು.

03050016a ತಯೋರದೃಷ್ಟಕಾಮೋಽಭೂಚ್ಛೃಣ್ವತೋಃ ಸತತಂ ಗುಣಾನ್|

03050016c ಅನ್ಯೋನ್ಯಂ ಪ್ರತಿ ಕೌಂತೇಯ ಸ ವ್ಯವರ್ಧತ ಹೃಚ್ಚಯಃ||

ಕೌಂತೇಯ! ಹೀಗೆ ಸತತವಾಗಿ ಪರಸ್ಪರರ ಗುಣಗಳನ್ನು ಕೇಳುತ್ತಿದ್ದಂತೆ, ಇನ್ನೂ ನೋಡದಿರದ ಆ ವ್ಯಕ್ತಿಯ ಕುರಿತು ಕಾಮ ಬೆಳೆಯಿತು ಮತ್ತು ಅವರ ಹೃದಯಗಳಲ್ಲಿ ಪರಸ್ಪರರಿಗೆ ಪ್ರೀತಿ ವರ್ಧಿಸಿತು.

03050017a ಅಶಕ್ನುವನ್ನಲಃ ಕಾಮಂ ತದಾ ಧಾರಯಿತುಂ ಹೃದಾ|

03050017c ಅಂತಃಪುರಸಮೀಪಸ್ಥೇ ವನ ಆಸ್ತೇ ರಹೋಗತಃ||

ಒಮ್ಮೆ ಈ ಕಾಮವನ್ನು ಹೃದಯದಲ್ಲೇ ಸಹಿಸಿಟ್ಟುಕೊಳ್ಳಲು ಅಸಮರ್ಥನಾದ ನಲನು ಯಾರಿಗೂ ತಿಳಿಯದಂತೆ ಅಂತಃಪುರದ ಸಮೀಪದ ವನದಲ್ಲಿ ಹೋಗಿ ಕುಳಿತುಕೊಂಡಿದ್ದನು.

03050018a ಸ ದದರ್ಶ ತದಾ ಹಂಸಾಂ ಜಾತರೂಪಪರಿಚ್ಚದಾನ್|

03050018c ವನೇ ವಿಚರತಾಂ ತೇಷಾಮೇಕಂ ಜಗ್ರಾಹ ಪಕ್ಷಿಣಂ||

ಅಲ್ಲಿ ಅವನು ಬಂಗಾರದ ಹೊದಿಕೆಹೊಂದಿದ್ದ ಹಂಸಗಳನ್ನು ನೋಡಿದನು ಮತ್ತು ವನದಲ್ಲಿ ಓಡಾಡುತ್ತಿದ್ದ ಆ ಪಕ್ಷಿಗಳಲ್ಲಿ ಒಂದನ್ನು ಹಿಡಿದನು.

03050019a ತತೋಽಂತರಿಕ್ಷಗೋ ವಾಚಂ ವ್ಯಾಜಹಾರ ತದಾ ನಲಂ|

03050019c ನ ಹಂತವ್ಯೋಽಸ್ಮಿ ತೇ ರಾಜನ್ಕರಿಷ್ಯಾಮಿ ಹಿ ತೇ ಪ್ರಿಯಂ||

ಆಗ ಆ ಅಂತರಿಕ್ಷಗನು ನಲನಿಗೆ ಕೂಗಿ ಹೇಳಿದನು: “ರಾಜ! ನನ್ನನ್ನು ಕೊಲ್ಲಬೇಡ. ನಿನಗೆ ಪ್ರಿಯವಾದದ್ದನ್ನು ನಾನು ಮಾಡಿಕೊಡುತ್ತೇನೆ.

03050020a ದಮಯಂತೀಸಕಾಶೇ ತ್ವಾಂ ಕಥಯಿಷ್ಯಾಮಿ ನೈಷಧ|

03050020c ಯಥಾ ತ್ವದನ್ಯಂ ಪುರುಷಂ ನ ಸಾ ಮಂಸ್ಯತಿ ಕರ್ಹಿ ಚಿತ್||

ನೈಷಧ! ದಮಯಂತಿಯ ಸಮಕ್ಷಮದಲ್ಲಿ, ಅವಳು ನಿನ್ನ ಹೊರತಾಗಿ ಬೇರೆ ಯಾವ ಪುರುಷನ ಕುರಿತೂ ಯೋಚಿಸದ ಹಾಗೆ, ನಿನ್ನ ಕುರಿತು ಅವಳಿಗೆ ಹೇಳುತ್ತೇನೆ.”

03050021a ಏವಮುಕ್ತಸ್ತತೋ ಹಂಸಮುತ್ಸಸರ್ಜ ಮಹೀಪತಿಃ|

03050021c ತೇ ತು ಹಂಸಾಃ ಸಮುತ್ಪತ್ಯ ವಿದರ್ಭಾನಗಮಂಸ್ತತಃ||

ಈ ಮಾತುಗಳನ್ನು ಕೇಳಿ ಮಹೀಪತಿಯು ಆ ಹಂಸವನ್ನು ಬಿಡುಗಡೆಮಾಡಿದನು ಮತ್ತು ಹಂಸಗಳೆಲ್ಲವೂ ಮೇಲೆ ಹಾರಿ ವಿದರ್ಭದ ಕಡೆ ಹೋದವು.

03050022a ವಿದರ್ಭನಗರೀಂ ಗತ್ವಾ ದಮಯಂತ್ಯಾಸ್ತದಾಂತಿಕೇ|

03050022c ನಿಪೇತುಸ್ತೇ ಗರುತ್ಮಂತಃ ಸಾ ದದರ್ಶಾಥ ತಾನ್ಖಗಾನ್||

ಆ ಗುರುತ್ಮಂತಗಳು ವಿದರ್ಭನಗರಕ್ಕೆ ಹೋಗಿ ಅಲ್ಲಿ ದಮಯಂತಿಯ ಬಳಿಗೆ ಬಂದಿಳಿದವು ಮತ್ತು ಅವಳು ಆ ಪಕ್ಷಿಗಳನ್ನು ನೋಡಿದಳು.

03050023a ಸಾ ತಾನದ್ಭುತರೂಪಾನ್ವೈ ದೃಷ್ಟ್ವಾ ಸಖಿಗಣಾವೃತಾ|

03050023c ಹೃಷ್ಟಾ ಗ್ರಹೀತುಂ ಖಗಮಾಂಸ್ತ್ವರಮಾಣೋಪಚಕ್ರಮೇ||

03050024a ಅಥ ಹಂಸಾ ವಿಸಸೃಪುಃ ಸರ್ವತಃ ಪ್ರಮದಾವನೇ|

03050024c ಏಕೈಕಶಸ್ತತಃ ಕನ್ಯಾಸ್ತಾನ್ ಹಂಸಾನ್ಸಮುಪಾದ್ರವನ್||

ಆ ಅದ್ಭುತ ರೂಪಿಗಳನ್ನು ನೋಡಿ ಸಖೀಗಣಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವಳು ಹರ್ಷದಿಂದ ಪಕ್ಷಿಗಳನ್ನು ಹಿಡಿಯಲೋಸುಗ ಅವುಗಳನ್ನು ಬೆನ್ನಟ್ಟಿದಳು. ಎಲ್ಲ ಸಖಿಯರೂ ಒಬ್ಬೊಬ್ಬರು ಅವರವರ ಹಂಸಗಳನ್ನು ಹಿಡಿಯಲು ಬೆನ್ನಟ್ಟಿದರು.

03050025a ದಮಯಂತೀ ತು ಯಂ ಹಂಸಂ ಸಮುಪಾಧಾವದಂತಿಕೇ|

03050025c ಸ ಮಾನುಷೀಂ ಗಿರಂ ಕೃತ್ವಾ ದಮಯಂತೀಮಥಾಬ್ರವೀತ್||

ಆದರೆ ದಮಯಂತಿಯು ಅನುಸರಿಸುತ್ತಿದ್ದ ಹಂಸವು ಅವಳು ಸಮೀಪ ಬರುತ್ತಿದ್ದಂತಯೇ ಮನುಷ್ಯಧ್ವನಿಯನ್ನು ಧರಿಸಿ ದಮಯಂತಿಯನ್ನುದ್ದೇಶಿಸಿ ಮಾತನಾಡಿತು:

03050026a ದಮಯಂತಿ ನಲೋ ನಾಮ ನಿಷಧೇಷು ಮಹೀಪತಿಃ|

03050026c ಅಶ್ವಿನೋಃ ಸದೃಶೋ ರೂಪೇ ನ ಸಮಾಸ್ತಸ್ಯ ಮಾನುಷಾಃ||

“ದಮಯಂತಿ! ನಿಷಧದಲ್ಲಿ ನಲ ಎಂಬ ಹೆಸರಿನ ರಾಜನಿದ್ದಾನೆ. ಅವನು ಅಶ್ವಿನಿಯರ ಸದೃಶನಾಗಿದ್ದಾನೆ ಮತ್ತು ಮನುಷ್ಯರಲ್ಲೇ ರೂಪದಲ್ಲಿ ಅವನ ಸರಿಸಾಟಿಯಾದವರು ಯಾರೂ ಇಲ್ಲ.

03050027a ತಸ್ಯ ವೈ ಯದಿ ಭಾರ್ಯಾ ತ್ವಂ ಭವೇಥಾ ವರವರ್ಣಿನಿ|

03050027c ಸಫಲಂ ತೇ ಭವೇಜ್ಜನ್ಮ ರೂಪಂ ಚೇದಂ ಸುಮಧ್ಯಮೇ||

ವರವರ್ಣಿನೀ! ಒಂದುವೇಳೆ ನೀನು ಅವನ ಭಾರ್ಯೆಯಾದೆ ಎಂದರೆ ನಿನ್ನ ಈ ರೂಪ ಮತ್ತು ಜನ್ಮ ಸಾರ್ಥಕವಾದಂತಾಗುತ್ತದೆ.

03050028a ವಯಂ ಹಿ ದೇವಗಂಧರ್ವಮನುಷ್ಯೋರಗರಾಕ್ಷಸಾನ್|

03050028c ದೃಷ್ಟವಂತೋ ನ ಚಾಸ್ಮಾಭಿರ್ದೃಷ್ಟಪೂರ್ವಸ್ತಥಾವಿಧಃ||

ನಾವು ದೇವತೆ, ಗಂಧರ್ವ, ಮನುಷ್ಯ, ಉರಗ ಮತ್ತು ರಾಕ್ಷಸರನ್ನು ನೋಡಿದ್ದೇವೆ. ಆದರೆ ಇವನಂತವನನ್ನು ಇದೂವರೆಗೂ ಯಾರಲ್ಲಿಯೂ ಕಂಡಿಲ್ಲ.

03050029a ತ್ವಂ ಚಾಪಿ ರತ್ನಂ ನಾರೀಣಾಂ ನರೇಷು ಚ ನಲೋ ವರಃ|

03050029c ವಿಶಿಷ್ಟಾಯಾ ವಿಶಿಷ್ಟೇನ ಸಂಗಮೋ ಗುಣವಾನ್ಭವೇತ್||

ನೀನೂ ಕೂಡ ನಾರಿಯರಲ್ಲಿ ರತ್ನದಂತಿದ್ದೀಯೆ. ಮತ್ತು ನಲನು ನರರಲಿಯೇ ಶ್ರೇಷ್ಟನಾಗಿದ್ದಾನೆ. ವಿಶಿಷ್ಟವಾದ ವ್ಯಕ್ತಿಯ ಸಂಗಮವು ವಿಶಿಷ್ಟವಾದ ವ್ಯಕ್ತಿಯೊಡನೆ ಆಯಿತೆಂದರೆ ಒಳ್ಳೆಯದೇ ಆಗುತ್ತದೆ.”

03050030a ಏವಮುಕ್ತಾ ತು ಹಂಸೇನ ದಮಯಂತೀ ವಿಶಾಂ ಪತೇ|

03050030c ಅಬ್ರವೀತ್ತತ್ರ ತಂ ಹಂಸಂ ತಮಪ್ಯೇವಂ ನಲಂ ವದ||

ವಿಶಾಂಪತೇ! ಹಂಸದ ಈ ಮಾತುಗಳನ್ನು ಕೇಳಿ ದಮಯಂತಿಯು ಆ ಹಂಸಕ್ಕೆ “ನಲನಿಗೂ ಇದೇ ರೀತಿ ಹೇಳು” ಎಂದಳು.

Image result for nala damayanti03050031a ತಥೇತ್ಯುಕ್ತ್ವಾಂಡಜಃ ಕನ್ಯಾಂ ವೈದರ್ಭಸ್ಯ ವಿಶಾಂ ಪತೇ|

03050031c ಪುನರಾಗಮ್ಯ ನಿಷಧಾನ್ನಲೇ ಸರ್ವಂ ನ್ಯವೇದಯತ್||

ವಿಶಾಂಪತೇ! ಆ ಪಕ್ಷಿಯು ವೈದರ್ಭಿಗೆ “ಹಾಗೆಯೇ ಮಾಡುತ್ತೇನೆ!” ಎಂದು ವಚನವನ್ನಿತ್ತು, ನಿಷಧಕ್ಕೆ ಮರಳಿ, ನಲನಿಗೆ ಸರ್ವವನ್ನೂ ವರದಿಮಾಡಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಹಂಸದಮಯಂತೀಸಂವಾದೇ ಪಂಚಾಶತ್ತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಹಂಸದಮಯಂತೀಸಂವಾದ ಎನ್ನುವ ಐವತ್ತನೆಯ ಅಧ್ಯಾಯವು.

Image result for indian motifs hansa

Comments are closed.