ಆರಣ್ಯಕ ಪರ್ವ: ಅರಣ್ಯ ಪರ್ವ
೫
ಧೃತರಾಷ್ಟ್ರ-ವಿದುರರಲ್ಲಿ ಮನಸ್ತಾಪ
ಪಾಂಡವರು ವನಕ್ಕೆ ತೆರಳಿದ ನಂತರ ಪರಿತಪಿಸುತ್ತಿದ್ದ ಧೃತರಾಷ್ಟ್ರನು ವಿದುರನನ್ನು ಕರೆಯಿಸಿ ಅವರಿಗೆ ಮತ್ತು ತನಗೆ ಯಾವುದು ಒಳ್ಳೆಯದು ಎಂದು ಕೇಳುವುದು (೧-೩). ಅಧಿಕವಾದ ಏನನ್ನೆಲ್ಲ ಪಾಂಡವರಿಂದ ಪಡೆದಿದ್ದನೋ ಅದನ್ನು ಅವರಿಗೆ ಹಿಂದಿರುಗಿಸಲು ವಿದುರನು ಹೇಳುವುದು (೪-೧೫). “ನೀನು ನನ್ನ ಹಿತದಲ್ಲಿಲ್ಲವೆಂದು ನನಗನ್ನಿಸುತ್ತದೆ...ನೀನು ಈಗ ಎಲ್ಲಿ ಬೇಕಾದರೂ ಹೋಗಬಹುದು, ಬೇಕೆಂದರೆ ಇಲ್ಲಿಯೂ ಇರಬಹುದು” ಎಂದು ಧೃತರಾಷ್ಟ್ರನು ವಿದುರನನ್ನು ನಿಂದಿಸಿ ಅಂತಃಪುರಕ್ಕೆ ತೆರಳುವುದು; ವಿದುರನು ಪಾಂಡವರಿದ್ದಲ್ಲಿಗೆ ಹೊರಡುವುದು (೧೬-೨೦).
03005001 ವೈಶಂಪಾಯನ ಉವಾಚ|
03005001a ವನಂ ಪ್ರವಿಷ್ಟೇಷ್ವಥ ಪಾಂಡವೇಷು
ಪ್ರಜ್ಞಾಚಕ್ಷುಸ್ತಪ್ಯಮಾನೋಽಂಬಿಕೇಯಃ|
03005001c ಧರ್ಮಾತ್ಮಾನಂ ವಿದುರಮಗಾಧಬುದ್ಧಿಂ
ಸುಖಾಸೀನೋ ವಾಕ್ಯಮುವಾಚ ರಾಜಾ||
ವೈಶಂಪಾಯನನು ಹೇಳಿದನು: “ಪಾಂಡವರು ವನಕ್ಕೆ ಹೊರಟು ಹೋದ ನಂತರ ಪರಿತಪಿಸುತ್ತಿದ್ದ ಪ್ರಜ್ಞಾಚಕ್ಷು ರಾಜ ಅಂಬಿಕೇಯನು ಸುಖಾಸೀನನಾಗಿದ್ದ ಅಗಾಧಬುದ್ಧಿ ಧರ್ಮಾತ್ಮ ವಿದುರನಿಗೆ ಹೇಳಿದನು:
03005002a ಪ್ರಜ್ಞಾ ಚ ತೇ ಭಾರ್ಗವಸ್ಯೇವ ಶುದ್ಧಾ
ಧರ್ಮಂ ಚ ತ್ವಂ ಪರಮಂ ವೇತ್ಥ ಸೂಕ್ಷ್ಮಂ|
03005002c ಸಮಶ್ಚ ತ್ವಂ ಸಮ್ಮತಃ ಕೌರವಾಣಾಂ
ಪಥ್ಯಂ ಚೈಷಾಂ ಮಮ ಚೈವ ಬ್ರವೀಹಿ||
“ನಿನ್ನ ಬುದ್ಧಿಯು ಭಾರ್ಗವನಷ್ಟೇ ಶುದ್ಧವಾದುದು. ನಿನ್ನ ಧರ್ಮವು ಶ್ರೇಷ್ಠವೂ ಸೂಕ್ಷ್ಮವೂ ಎಂದು ತಿಳಿದಿದೆ. ಕುರುಗಳು ನಿನ್ನನ್ನು ನಿಷ್ಪಕ್ಷಪಾತಿ ಎಂದು ಒಪ್ಪಿಕೊಳ್ಳುತ್ತಾರೆ. ಈಗ ಅವರಿಗೆ ಮತ್ತು ನನಗೆ ಯಾವುದು ಒಳ್ಳೆಯದು ಎನ್ನುವುದನ್ನು ಹೇಳು.
03005003a ಏವಂ ಗತೇ ವಿದುರ ಯದದ್ಯ ಕಾರ್ಯಂ
ಪೌರಾಶ್ಚೇಮೇ ಕಥಮಸ್ಮಾನ್ಭಜೇರನ್|
03005003c ತೇ ಚಾಪ್ಯಸ್ಮಾನ್ನೋದ್ಧರೇಯುಃ ಸಮೂಲಾನ್
ನ ಕಾಮಯೇ ತಾಂಶ್ಚ ವಿನಶ್ಯಮಾನಾನ್||
ವಿದುರ! ಹೀಗೆ ನಡೆದುಹೋಗಿರಲು ಇಂದು ನಾನು ಏನು ಮಾಡಬೇಕು? ಪ್ರಜೆಗಳು ನಮ್ಮೊಂದಿಗೇ ಇರುವಂತೆ ಹೇಗೆ ಮಾಡಬಹುದು? ಅವರು ನಮ್ಮನ್ನು ಸಮೂಲವಾಗಿ ನಾಶಮಾಡುವುದನ್ನೂ ಬಯಸುವುದಿಲ್ಲ. ಅವರು ನಾಶಹೊಂದುವುದನ್ನೂ ಬಯಸುವುದಿಲ್ಲ.”
03005004 ವಿದುರ ಉವಾಚ|
03005004a ತ್ರಿವರ್ಗೋಽಯಂ ಧರ್ಮಮೂಲೋ ನರೇಂದ್ರ
ರಾಜ್ಯಂ ಚೇದಂ ಧರ್ಮಮೂಲಂ ವದಂತಿ|
03005004c ಧರ್ಮೇ ರಾಜನ್ವರ್ತಮಾನಃ ಸ್ವಶಕ್ತ್ಯಾ
ಪುತ್ರಾನ್ಸರ್ವಾನ್ಪಾಹಿ ಕುಂತೀಸುತಾಂಶ್ಚ||
ವಿದುರನು ಹೇಳಿದನು: “ನರೇಂದ್ರ! ಧರ್ಮಕ್ಕೆ ಮೂರು ರೀತಿಯ ಮೂಲಗಳಿವೆಯೆಂದೂ ರಾಜ್ಯವೂ ಒಂದು ಧರ್ಮಮೂಲವೆಂದೂ ಹೇಳುತ್ತಾರೆ. ರಾಜನ್! ನಿನಗೆ ಶಕ್ತಿಯಿದ್ದಷ್ಟು ಧರ್ಮದಲ್ಲಿ ನಡೆದುಕೊಂಡು ನಿನ್ನ ಪುತ್ರರು ಮತ್ತು ಕುಂತೀ ಪುತ್ರರು ಎಲ್ಲರನ್ನೂ ಪಾಲಿಸು.
03005005a ಸ ವೈ ಧರ್ಮೋ ವಿಪ್ರಲುಪ್ತಃ ಸಭಾಯಾಂ
ಪಾಪಾತ್ಮಭಿಃ ಸೌಬಲೇಯಪ್ರಧಾನೈಃ|
03005005c ಆಹೂಯ ಕುಂತೀಸುತಮಕ್ಷವತ್ಯಾಂ
ಪರಾಜೈಷೀತ್ಸತ್ಯಸಂಧಂ ಸುತಸ್ತೇ||
ಇದೇ ಧರ್ಮವನ್ನು ಸೌಬಲಪ್ರಮುಖ ಪಾಪಾತ್ಮರು ಸಭೆಯಲ್ಲಿ ಉಲ್ಲಂಘಿಸಿದರು. ನಿನ್ನ ಮಗನು ಆ ಸತ್ಯಸಂಧ ಕುಂತೀಸುತನನ್ನು ಜೂಜಿಗೆ ಆಹ್ವಾನಿಸಿ ಸೋಲಿಸಿದನು.
03005006a ಏತಸ್ಯ ತೇ ದುಷ್ಪ್ರಣೀತಸ್ಯ ರಾಜಂ
ಶೇಷಸ್ಯಾಹಂ ಪರಿಪಶ್ಯಾಮ್ಯುಪಾಯಂ|
03005006c ಯಥಾ ಪುತ್ರಸ್ತವ ಕೌರವ್ಯ ಪಾಪಾನ್
ಮುಕ್ತೋ ಲೋಕೇ ಪ್ರತಿತಿಷ್ಠೇತ ಸಾಧು||
ರಾಜನ್! ಅಂದು ನೀನು ದುಷ್ಪ್ರಣೀತನಾಗಿದ್ದರೂ ಇಂದು ನಿನ್ನನ್ನು ಉಳಿಸಿಕೊಳ್ಳುವ ಉಪಾಯವನ್ನು ಕಂಡಿದ್ದೇನೆ. ಕೌರವ್ಯ! ಇದರಿಂದ ನಿನ್ನ ಪುತ್ರನು ಪಾಪಗಳಿಂದ ಮುಕ್ತನಾಗಿ ಲೋಕದಲ್ಲಿ ಒಳ್ಳೆಯವನಾಗಿ ಗೌರವಿಸಲ್ಪಡುತ್ತಾನೆ.
03005007a ತದ್ವೈ ಸರ್ವಂ ಪಾಂಡುಪುತ್ರಾ ಲಭಂತಾಂ
ಯತ್ತದ್ರಾಜನ್ನತಿಸೃಷ್ಟಂ ತ್ವಯಾಸೀತ್|
03005007c ಏಷ ಧರ್ಮಃ ಪರಮೋ ಯತ್ಸ್ವಕೇನ
ರಾಜಾ ತುಷ್ಯೇನ್ನ ಪರಸ್ವೇಷು ಗೃಧ್ಯೇತ್||
ರಾಜನ್! ನಿನ್ನದಕ್ಕಿಂತ ಅಧಿಕವಾದ ಏನನ್ನೆಲ್ಲ ಪಾಂಡುಪುತ್ರರಿಂದ ನೀನು ಪಡೆದಿದ್ದೀಯೋ ಅವೆಲ್ಲವನ್ನೂ ಪಾಂಡುಪುತ್ರರಿಗೆ ಹಿಂದಿರುಗಿಸು. ರಾಜನಾದವನು ತನ್ನದಾಗಿದ್ದುದರಲ್ಲಿ ತೃಪ್ತಿಯನ್ನು ಪಡೆದು ಇತರರದ್ದನ್ನು ಮೋಸದಿಂದ ತನ್ನದಾಗಿಸಿಕೊಳ್ಳಬಾರದು ಎನ್ನುವುದೇ ಪರಮ ಧರ್ಮ.
03005008a ಏತತ್ಕಾರ್ಯಂ ತವ ಸರ್ವಪ್ರಧಾನಂ
ತೇಷಾಂ ತುಷ್ಟಿಃ ಶಕುನೇಶ್ಚಾವಮಾನಃ|
03005008c ಏವಂ ಶೇಷಂ ಯದಿ ಪುತ್ರೇಷು ತೇ ಸ್ಯಾದ್
ಏತದ್ರಾರಾಜನ್ ಸ್ತ್ವರಮಾಣಃ ಕುರುಷ್ವ||
ಅವರನ್ನು ಸಂತೋಷಪಡಿಸುವುದು ಮತ್ತು ಶಕುನಿಯನ್ನು ನಿಂದಿಸುವುದು ಇದೇ ನೀನು ಮಾಡಬೇಕಾದ ಎಲ್ಲಕ್ಕಿಂತಲೂ ಪ್ರಮುಖ್ಯ ಕಾರ್ಯ. ರಾಜನ್! ನಿನ್ನ ಮಕ್ಕಳು ಉಳಿಯಬೇಕು ಎಂದಿದ್ದರೆ ಆದಷ್ಟು ಬೇಗ ಇದನ್ನು ಮಾಡು.
03005009a ಅಥೈತದೇವಂ ನ ಕರೋಷಿ ರಾಜನ್
ಧ್ರುವಂ ಕುರೂಣಾಂ ಭವಿತಾ ವಿನಾಶಃ|
03005009c ನ ಹಿ ಕ್ರುದ್ಧೋ ಭೀಮಸೇನೋಽರ್ಜುನೋ ವಾ
ಶೇಷಂ ಕುರ್ಯಾಚ್ಚಾತ್ರವಾಣಾಮನೀಕೇ||
ರಾಜನ್! ಇದನ್ನು ನೀನು ಮಾಡದಿದ್ಹರೆ ಕುರುಗಳ ವಿನಾಶವಾಗುತ್ತದೆ ಎನ್ನುವುದು ನಿಶ್ಚಿತ. ಕೃದ್ಧ ಭೀಮಸೇನ-ಅರ್ಜುನರು ಯುದ್ಧದಲ್ಲಿ ಅವರ ಶತ್ರುಗಳಲ್ಲಿ ಯಾರನ್ನೂ ಉಳಿಸುವುದಿಲ್ಲ.
03005010a ಯೇಷಾಂ ಯೋದ್ಧಾ ಸವ್ಯಸಾಚೀ ಕೃತಾಸ್ತ್ರೋ
ಧನುರ್ಯೇಷಾಂ ಗಾಂಡಿವಂ ಲೋಕಸಾರಂ|
03005010c ಯೇಷಾಂ ಭೀಮೋ ಬಾಹುಶಾಲೀ ಚ ಯೋದ್ಧಾ
ತೇಷಾಂ ಲೋಕೇ ಕಿಂ ನು ನ ಪ್ರಾಪ್ಯಮಸ್ತಿ||
ಲೋಕದಲ್ಲಿಯೇ ಶ್ರೇಷ್ಠ ಗಾಂಡೀವ ಧನುಸ್ಸಿನ ಕೃತಾಸ್ತ್ರ ಸವ್ಯಸಾಚಿಯು ಯಾರ ಯೋದ್ಧನೋ ಮತ್ತು ಭೀಮನಂಥ ಬಲಶಾಲಿಯು ಯಾರ ಯೋದ್ಧನೋ ಅಂಥವರಿಗೆ ಈ ಲೋಕದಲ್ಲಿ ಏನನ್ನು ಪಡೆಯಲು ಸಾಧ್ಯವಿಲ್ಲ?
03005011a ಉಕ್ತಂ ಪೂರ್ವಂ ಜಾತಮಾತ್ರೇ ಸುತೇ ತೇ
ಮಯಾ ಯತ್ತೇ ಹಿತಮಾಸೀತ್ತದಾನೀಂ|
03005011c ಪುತ್ರಂ ತ್ಯಜೇಮಮಹಿತಂ ಕುಲಸ್ಯೇತ್ಯ್
ಏತದ್ರಾಜನ್ನ ಚ ತತ್ತ್ವಂ ಚಕರ್ಥ|
03005011e ಇದಾನೀಂ ತೇ ಹಿತಮುಕ್ತಂ ನ ಚೇತ್ತ್ವಂ
ಕರ್ತಾಸಿ ರಾಜನ್ಪರಿತಪ್ತಾಸಿ ಪಶ್ಚಾತ್||
ಹಿಂದೆ ನಿನ್ನಮಗನು ಹುಟ್ಟುವಾಗಲೇ ನಾನು ನಿನಗೆ ಹಿತಕರ ಮಾತನ್ನು ಹೇಳಿದ್ದೆ – “ರಾಜನ್! ನಿನ್ನ ಈ ಪುತ್ರನನ್ನು ಕುಲಕ್ಕಾಗಿ ತ್ಯಜಿಸು!” ಎಂದು. ಆದರೂ ನೀನು ಅದನ್ನು ಮಾಡಲಿಲ್ಲ. ರಾಜನ್! ಈಗಲೂ ಈ ಹಿತಮಾತುಗಳಂತೆ ಮಾಡದಿದ್ದರೆ ನಂತರ ಪಶ್ಚಾತ್ತಾಪ ಪಡುತ್ತೀಯೆ.
03005012a ಯದ್ಯೇತದೇವಂ ಅನುಮಂತಾ ಸುತಸ್ತೇ
ಸಂಪ್ರೀಯಮಾಣಃ ಪಾಂಡವೈರೇಕರಾಜ್ಯಂ|
03005012c ತಾಪೋ ನ ತೇ ವೈ ಭವಿತಾ ಪ್ರೀತಿಯೋಗಾತ್
ತ್ವಂ ಚೇನ್ನ ಗೃಹ್ಣಾಸಿ ಸುತಂ ಸಹಾಯೈಃ|
03005012e ಅಥಾಪರೋ ಭವತಿ ಹಿ ತಂ ನಿಗೃಹ್ಯ
ಪಾಂಡೋಃ ಪುತ್ರಂ ಪ್ರಕುರುಷ್ವಾಧಿಪತ್ಯೇ||
ಒಂದುವೇಳೆ ನಿನ್ನ ಮಗನು ಪಾಂಡವರೊಂದಿಗೆ ಒಂದೇ ರಾಜ್ಯವನ್ನು ಆಳಲು ಒಪ್ಪಿಕೊಂಡರೆ ಹಾಗೂ ನೀನು ನಿನ್ನ ಮಗ ಮತ್ತು ಅವನ ಸಹಾಯಕರನ್ನು ನಿಯಂತ್ರಣದಲ್ಲಿರಿಕೊಂಡರೆ ಈ ಪ್ರೀತಿ ಸಂಯೋಗದಿಂದ ನೀನು ದುಃಖಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ನಡೆದರೆ ಅವನನ್ನು ಸೆರೆಹಿಡಿದು ಪಾಂಡುಪುತ್ರನನ್ನು ಅಧಿಪತಿಯನ್ನಾಗಿ ನಿಯೋಜಿಸು.
03005013a ಅಜಾತಶತ್ರುರ್ಹಿ ವಿಮುಕ್ತರಾಗೋ
ಧರ್ಮೇಣೇಮಾಂ ಪೃಥಿವೀಂ ಶಾಸ್ತು ರಾಜನ್|
03005013c ತತೋ ರಾಜನ್ಪಾರ್ಥಿವಾಃ ಸರ್ವ ಏವ
ವೈಶ್ಯಾ ಇವಾಸ್ಮಾನುಪತಿಷ್ಟಂತು ಸದ್ಯಃ||
ರಾಜನ್! ವಿಮುಕ್ತರಾಗನಾಗಿರುವ ಅಜಾತಶತ್ರುವೇ ಧರ್ಮದಿಂದ ಈ ಭೂಮಿಯನ್ನು ಆಳಲಿ. ರಾಜನ್! ಆಗ ಈಗಿರುವ ಸರ್ವ ಪಾರ್ಥಿವರೂ ನಮಗೆ ವೈಶ್ಯರಂತೆ ಅನುಯಾಯಿಗಳಾಗಿರುತ್ತಾರೆ.
03005014a ದುರ್ಯೋಧನಃ ಶಕುನಿಃ ಸೂತಪುತ್ರಃ
ಪ್ರೀತ್ಯಾ ರಾಜನ್ಪಾಂಡುಪುತ್ರಾನ್ಭಜಂತಾಂ|
03005014c ದುಃಶಾಸನೋ ಯಾಚತು ಭೀಮಸೇನಂ
ಸಭಾಮಧ್ಯೇ ದ್ರುಪದಸ್ಯಾತ್ಮಜಾಂ ಚ||
ರಾಜನ್! ದುರ್ಯೋಧನ, ಶಕುನಿ ಮತ್ತು ಸೂತಪುತ್ರನು ಪಾಂಡುಪುತ್ರರೊಂದಿಗೆ ಪ್ರೀತಿಯಿಂದಿರಬೇಕು. ದುಃಶಾಸನನು ಸಭಾಮಧ್ಯದಲ್ಲಿ ದ್ರುಪದಾತ್ಮಜೆ ಮತ್ತು ಭೀಮಸೇನರಿಂದ ಕ್ಷಮೆಯನ್ನು ಕೇಳಬೇಕು.
03005015a ಯುಧಿಷ್ಠಿರಂ ತ್ವಂ ಪರಿಸಾಂತ್ವಯಸ್ವ
ರಾಜ್ಯೇ ಚೈನಂ ಸ್ಥಾಪಯಸ್ವಾಭಿಪೂಜ್ಯ|
03005015c ತ್ವಯಾ ಪೃಷ್ಟಃ ಕಿಮಹಮನ್ಯದ್ವದೇಯಂ
ಏತತ್ಕೃತ್ವಾ ಕೃತಕೃತ್ಯೋಽಸಿ ರಾಜನ್||
ಸ್ವಯಂ ನೀನೇ ಯುಧಿಷ್ಠಿರನನ್ನು ಸಂತವಿಸು. ಅವನನ್ನು ಗೌರವಿಸಿ ರಾಜ್ಯದಲ್ಲಿ ಸ್ಥಾಪಿಸು. ರಾಜನ್! ನೀನು ಕೇಳಿದೆಯೆಂದು ನಾನು ಇನ್ನೂ ಏನನ್ನು ಹೇಳಲಿ? ಇದನ್ನು ಮಾಡಿದರೆ ನೀನು ಕೃತಕೃತ್ಯನಾಗುವೆ.”
03005016 ಧೃತರಾಷ್ಟ್ರ ಉವಾಚ|
03005016a ಏತದ್ವಾಕ್ಯಂ ವಿದುರ ಯತ್ತೇ ಸಭಾಯಾಂ
ಇಹ ಪ್ರೋಕ್ತಂ ಪಾಂಡವಾನ್ಪ್ರಾಪ್ಯ ಮಾಂ ಚ|
03005016c ಹಿತಂ ತೇಷಾಮಹಿತಂ ಮಾಮಕಾನಾಂ
ಏತತ್ಸರ್ವಂ ಮಮ ನೋಪೈತಿ ಚೇತಃ||
ಧೃತರಾಷ್ಟ್ರನು ಹೇಳಿದನು: “ವಿದುರ! ಸಭೆಯಲ್ಲಿ ಪಾಂಡವರಿಗೆ ಮತ್ತು ನನಗೆ ಇದನ್ನೇ - ಅವರಿಗೆ ಹಿತವಾಗಿರುವ ಮತ್ತು ನನ್ನವರಿಗೆ ಅಹಿತವಾಗಿರುವ ಮಾತುಗಳನ್ನು ಹೇಳಿದ್ದೆ. ಇವು ಯಾವುದೂ ನನ್ನ ಮನಸ್ಸಿಗೆ ಹಿಡಿಯುವುದಿಲ್ಲ.
03005017a ಇದಂ ತ್ವಿದಾನೀಂ ಕುತ ಏವ ನಿಶ್ಚಿತಂ
ತೇಷಾಮರ್ಥೇ ಪಾಂಡವಾನಾಂ ಯದಾತ್ಥ|
03005017c ತೇನಾದ್ಯ ಮನ್ಯೇ ನಾಸಿ ಹಿತೋ ಮಮೇತಿ
ಕಥಂ ಹಿ ಪುತ್ರಂ ಪಾಂಡವಾರ್ಥೇ ತ್ಯಜೇಯಂ||
ಪಾಂಡವರ ಪರವಾಗಿ ನೀನು ಹೇಗೆ ಈ ರೀತಿಯ ನಿಶ್ಚಯವನ್ನು ಮಾಡಬಲ್ಲೆ? ನೀನು ನನ್ನ ಹಿತದಲ್ಲಿಲ್ಲವೆಂದು ನನಗನ್ನಿಸುತ್ತದೆ. ಪಾಂಡವರಿಗಾಗಿ ನಾನು ನನ್ನ ಮಗನನ್ನು ಹೇಗೆತಾನೇ ತ್ಯಜಿಸಿಯೇನು?
03005018a ಅಸಂಶಯಂ ತೇಽಪಿ ಮಮೈವ ಪುತ್ರಾ
ದುರ್ಯೋಧನಸ್ತು ಮಮ ದೇಹಾತ್ಪ್ರಸೂತಃ|
03005018c ಸ್ವಂ ವೈ ದೇಹಂ ಪರಹೇತೋಸ್ತ್ಯಜೇತಿ
ಕೋ ನು ಬ್ರೂಯಾತ್ಸಮತಾಮನ್ವವೇಕ್ಷನ್||
ಅವರೂ ಕೂಡ ನನ್ನ ಪುತ್ರರೆನ್ನುವುದರಲ್ಲಿ ಸಂಶಯವೇ ಇಲ್ಲ. ಆದರೂ ದುರ್ಯೋಧನನು ನನ್ನ ದೇಹದಿಂದ ಹುಟ್ಟಿದವನು. ಸಮತೆಯನ್ನು ತೋರಿಸುವ ಯಾರು ತಾನೇ ಪರರಿಗಾಗಿ ನಾನು ನನ್ನ ದೇಹವನ್ನೇ ತ್ಯಜಿಸುತ್ತೇನೆ ಎಂದು ಹೇಳಿಯಾನು?
03005019a ಸ ಮಾ ಜಿಹ್ಮಂ ವಿದುರ ಸರ್ವಂ ಬ್ರವೀಷಿ
ಮಾನಂ ಚ ತೇಽಹಮಧಿಕಂ ಧಾರಯಾಮಿ|
03005019c ಯಥೇಚ್ಚಕಂ ಗಚ್ಚ ವಾ ತಿಷ್ಠ ವಾ ತ್ವಂ
ಸುಸಾಂತ್ವ್ಯಮಾನಾಪ್ಯಸತೀ ಸ್ತ್ರೀ ಜಹಾತಿ||
ವಿದುರ! ನೀನು ಎಂದೂ ನನಗೆ ತಪ್ಪನ್ನು ಹೇಳಿಲ್ಲ. ಆದುದರಿಂದ ನಿನ್ನ ಈ ಅಧಿಕತನವನ್ನು ಸಹಿಸುತ್ತೇನೆ. ಈಗ ನೀನು ಎಲ್ಲಿ ಬೇಕಾದರೂ ಹೋಗಬಹುದು ಅಥವಾ ಬೇಕೆಂದರೆ ಇಲ್ಲಿಯೇ ಇರು. ಸತಿಯಲ್ಲದ ಸ್ತ್ರೀಯು ಸಂತವಿಸಿದರೂ ಹೊರಟು ಹೋಗುತ್ತಾಳೆ.””
03005020 ವೈಶಂಪಾಯನ ಉವಾಚ|
03005020a ಏತಾವದುಕ್ತ್ವಾ ಧೃತರಾಷ್ಟ್ರೋಽನ್ವಪದ್ಯದ್
ಅಂತರ್ವೇಶ್ಮ ಸಹಸೋತ್ಥಾಯ ರಾಜನ್|
03005020c ನೇದಮಸ್ತೀತ್ಯಥ ವಿದುರೋ ಭಾಷಮಾಣಃ
ಸಂಪ್ರಾದ್ರವದ್ಯತ್ರ ಪಾರ್ಥಾ ಬಭೂವುಃ||
ವೈಶಂಪಾಯನನು ಹೇಳಿದನು: “ರಾಜನ್! ಇದನ್ನು ಹೇಳಿ ಧೃತರಾಷ್ಟ್ರನು ಅವಸರದಲ್ಲಿ ಎದ್ದು ಅಂತಃಪುರಕ್ಕೆ ತೆರಳಿದನು. “ಹೀಗಲ್ಲ!” ಎಂದು ಹೇಳುತ್ತಾ ವಿದುರನು ಪಾರ್ಥರು ಇರುವಲ್ಲಿಗೆ ತೆರಳಲು ತ್ವರೆಮಾಡಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ವಿದುರವಾಕ್ಯಪ್ರತ್ಯಾಖ್ಯಾನೇ ಪಂಚಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ವಿದುರವಾಕ್ಯಪ್ರತ್ಯಾಖ್ಯಾನ ಎನ್ನುವ ಐದನೆಯ ಅಧ್ಯಾಯವು.