ಆರಣ್ಯಕ ಪರ್ವ: ಅರಣ್ಯ ಪರ್ವ
೪
ಅಕ್ಷಯ ಆಹಾರ ಪ್ರದಾನ
ಸೂರ್ಯನು ಪ್ರತ್ಯಕ್ಷನಾಗಿ ಯುಧಿಷ್ಠಿರನಿಗೆ ಅಕ್ಷಯಪಾತ್ರೆಯನ್ನು ದಯಪಾಲಿಸಿದುದು (೧-೩). ಅದರಿಂದ ಯುಧಿಷ್ಠಿರನು ತನ್ನನ್ನು ಅನುಸರಿಸಿಬಂದ ಬ್ರಾಹ್ಮಣರನ್ನು ಪೋಷಿಸಿದ್ದುದು (೪-೮). ಪಾಂಡವರ ಕಾಮ್ಯಕವನಪ್ರವೇಶ (೯-೧೦).
03004001a ತತೋ ದಿವಾಕರಃ ಪ್ರೀತೋ ದರ್ಶಯಾಮಾಸ ಪಾಂಡವಂ|
03004001c ದೀಪ್ಯಮಾನಃ ಸ್ವವಪುಷಾ ಜ್ವಲನ್ನಿವ ಹುತಾಶನಃ||
ವೈಶಂಪಾಯನನು ಹೇಳಿದನು: “ಆಗ ದಿವಾಕರನು ಪ್ರೀತನಾಗಿ ಪಾಂಡವನಿಗೆ ಹುತಾಶನನಂತೆ ಉರಿದು ಬೆಳಗುತ್ತಿರುವ ತನ್ನ ಸ್ವರೂಪವನ್ನು ಪಾಂಡವನಿಗೆ ತೋರಿಸಿದನು.
03004002a ಯತ್ತೇಽಭಿಲಷಿತಂ ರಾಜನ್ಸರ್ವಮೇತದವಾಪ್ಸ್ಯಸಿ|
03004002c ಅಹಮನ್ನಂ ಪ್ರದಾಸ್ಯಾಮಿ ಸಪ್ತ ಪಂಚ ಚ ತೇ ಸಮಾಃ||
03004003a ಫಲಮೂಲಾಮಿಷಂ ಶಾಕಂ ಸಂಸ್ಕೃತಂ ಯನ್ಮಹಾನಸೇ|
03004003c ಚತುರ್ವಿಧಂ ತದನ್ನಾದ್ಯಮಕ್ಷಯ್ಯಂ ತೇ ಭವಿಷ್ಯತಿ|
03004003e ಧನಂ ಚ ವಿವಿಧಂ ತುಭ್ಯಮಿತ್ಯುಕ್ತ್ವಾಂತರಧೀಯತ[2]||
“ರಾಜನ್! ನೀನು ಬಯಸಿದುದೆಲ್ಲವನ್ನೂ ಪಡೆಯುತ್ತೀಯೆ. ಹನ್ನೆರಡು ವರ್ಷಗಳು ನಾನು ನಿನಗೆ ಆಹಾರವನ್ನು ನೀಡುತ್ತೇನೆ. ನಿನ್ನ ಅಡುಗೆಮನೆಯಲ್ಲಿ ಫಲ, ಗಡ್ಡೆಗೆಣಸುಗಳು, ತರಕಾರಿ ಮತ್ತು ಪದಾರ್ಥ ಈ ನಾಲ್ಕೂ[3] ತರಹದ ಅನ್ನವೂ ಅಕ್ಷಯವಾಗುತ್ತವೆ. ವಿವಿಧ ಸಂಪತ್ತೂ ನಿನ್ನದಾಗುತ್ತವೆ!” ಎಂದು ಹೇಳಿ ಅಂತರ್ಧಾನನಾದನು.
03004004a ಲಬ್ಧ್ವಾ ವರಂ ತು ಕೌಂತೇಯೋ ಜಲಾದುತ್ತೀರ್ಯ ಧರ್ಮವಿತ್|
03004004c ಜಗ್ರಾಹ ಪಾದೌ ಧೌಮ್ಯಸ್ಯ ಭ್ರಾತೄಂಶ್ಚಾಸ್ವಜತಾಚ್ಯುತಃ||
ಧರ್ಮವಿದು ಅಚ್ಯುತ ಕೌಂತೇಯನು ಆ ವರವನ್ನು ಪಡೆದು ನೀರಿನಿಂದ ಮೇಲೆದ್ದು ಧೌಮ್ಯನ ಪಾದಗಳನ್ನು ಹಿಡಿದನು ಮತ್ತು ಸಹೋದರರನ್ನು ಬಿಗಿದಪ್ಪಿದನು.
03004005a ದ್ರೌಪದ್ಯಾ ಸಹ ಸಂಗಮ್ಯ ಪಶ್ಯಮಾನೋಽಭ್ಯಯಾತ್ಪ್ರಭುಃ|
03004005c ಮಹಾನಸೇ ತದಾನ್ನಂ ತು ಸಾಧಯಾಮಾಸ ಪಾಂಡವಃ||
ದ್ರೌಪದಿಯೊಡನೆ ಅವಳು ನೋಡುತ್ತಿದ್ದಂತೆಯೇ ಪ್ರಭು ಪಾಂಡವನು ಅಡುಗೆಮನೆಯಲ್ಲಿ ಅಡುಗೆಯನ್ನು ತಯಾರಿಸಿದನು.
03004006a ಸಂಸ್ಕೃತಂ ಪ್ರಸವಂ ಯಾತಿ ವನ್ಯಮನ್ನಂ ಚತುರ್ವಿಧಂ|
03004006c ಅಕ್ಷಯ್ಯಂ ವರ್ಧತೇ ಚಾನ್ನಂ ತೇನ ಭೋಜಯತೇ ದ್ವಿಜಾನ್||
ವನಪದಾರ್ಥಗಳಿಂದ ತಯಾರಾದ ನಾಲ್ಕೂ ವಿಧದ ಅಡುಗೆಯು ಅಕ್ಷಯವಾಯಿತು ಮತ್ತು ಆ ಆಹಾರದಿಂದ ದ್ವಿಜರಿಗೆಲ್ಲಾ ಭೋಜನವನ್ನಿತ್ತನು.
03004007a ಭುಕ್ತವತ್ಸು ಚ ವಿಪ್ರೇಷು ಭೋಜಯಿತ್ವಾನುಜಾನಪಿ|
03004007c ಶೇಷಂ ವಿಘಸಸಂಜ್ಞಂ ತು ಪಶ್ಚಾದ್ಭುಂಕ್ತೇ ಯುಧಿಷ್ಠಿರಃ|
03004007e ಯುಧಿಷ್ಠಿರಂ ಭೋಜಯಿತ್ವಾ ಶೇಷಮಶ್ನಾತಿ ಪಾರ್ಷತೀ[4]||
ವಿಪ್ರರಿಗೆ ಭೋಜನವನ್ನಿತ್ತು ತನ್ನ ಅನುಜರಿಗೂ ಉಣ್ಣಿಸಿ ನಂತರ ಉಳಿದ ವಿಘಸವನ್ನು ಯುಧಿಷ್ಠಿರನು ಸೇವಿಸಿದನು. ಯುಧಿಷ್ಠಿರನಿಗೆ ನೀಡಿ ಉಳಿದುದನ್ನು ಪಾರ್ಷತಿಯು ಉಂಡಳು.
03004008a ಏವಂ ದಿವಾಕರಾತ್ಪ್ರಾಪ್ಯ ದಿವಾಕರಸಮದ್ಯುತಿಃ|
03004008c ಕಾಮಾನ್ಮನೋಽಭಿಲಷಿತಾನ್ಬ್ರಾಹ್ಮಣೇಭ್ಯೋ ದದೌ ಪ್ರಭುಃ||
ಈ ರೀತಿ ದಿವಾಕರಸಮದ್ಯುತಿ ಪ್ರಭುವು ದಿವಾಕರನಿಂದ ಮನೋಭಿಲಾಷೆ ಕಾಮಗಳನ್ನು ಪಡೆದು ಬ್ರಾಹ್ಮಣರಿಗೆ ನೀಡಿದನು.
03004009a ಪುರೋಹಿತಪುರೋಗಾಶ್ಚ ತಿಥಿನಕ್ಷತ್ರಪರ್ವಸು|
03004009c ಯಜ್ಞಿಯಾರ್ಥಾಃ ಪ್ರವರ್ತಂತೇ ವಿಧಿಮಂತ್ರಪ್ರಮಾಣತಃ||
ಪುರೋಹಿತನ ನೇತೃತ್ವದಲ್ಲಿ ತಿಥಿ, ನಕ್ಷತ್ರ ಪರ್ವಗಳಲ್ಲಿ ವಿಧಿಮಂತ್ರಪ್ರಮಾಣದಂತೆ ಅವರು ಯಜ್ಞಾರ್ಥಿಗಳಾದರು.
03004010a ತತಃ ಕೃತಸ್ವಸ್ತ್ಯಯನಾ ಧೌಮ್ಯೇನ ಸಹ ಪಾಂಡವಾಃ|
03004010c ದ್ವಿಜಸಂಘೈಃ ಪರಿವೃತಾಃ ಪ್ರಯಯುಃ ಕಾಮ್ಯಕಂ ವನಂ||
ಅನಂತರ ದ್ವಿಜರಿಂದ ಪರಿವೃತರಾಗಿ, ಧೌಮ್ಯನೊಂದಿಗೆ ಪಾಂಡವರು ಮಂಗಳಕರ ಪ್ರಯಾಣಮಾಡಿ ಕಾಮ್ಯಕವವನ್ನು ತಲುಪಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ಕಾಮ್ಯಕವನಪ್ರವೇಶೇ ಚತುರ್ಥೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ಕಾಮ್ಯಕವನಪ್ರವೇಶ ಎನ್ನುವ ನಾಲ್ಕನೆಯ ಅಧ್ಯಾಯವು.
[1]ಗೋರಖಪುರಸಂಪುಟದಲ್ಲಿ ಯುಧಿಷ್ಠಿರನು ಸೂರ್ಯನನ್ನು ಪ್ರಾರ್ಥಿಸಿದ ೩೪ ಶ್ಲೋಕಗಳನ್ನು ಪುಣೆಯ ಸಂಪುಟದಲ್ಲಿ ತೆಗೆದುಹಾಕಿದ್ದಾರೆ. ಈ ಶ್ಲೋಕಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
[2]ಕುಂಭಕೋಣ ಮತ್ತು ನೀಲಕಂಠೀಯ ಸಂಪುಟಗಳಲ್ಲಿ ಈ ಶ್ಲೊಕಗಳ ಮಧ್ಯೆ ಸೂರ್ಯನು ಅಕ್ಷಯ ಪಾತ್ರೆಯನ್ನು ಕೊಡುವುದನ್ನು ಸೂಚಿಸುವ ಒಂದು ಶ್ಲೋಕವಿದೆ - ಗೃಹೀಷ್ವ ಪಿಠರಂ ತಾಮ್ರಂ ಮಯಾ ದತ್ತ ನರಾಧಿಪ! ಯಾವದ್ ವರ್ತ್ಸ್ಯತಿ ಪಾಂಚಾಲೀ ಪಾತ್ರೇಣಾನೇನ ಸುವ್ರತ|| - ಈ ತಾಮ್ರದ ಪಾತ್ರೆಯುಲ್ಲಿ ಪಾಂಚಾಲಿಯು ಅಡುಗೆ ಮಾಡಿ ಬಡಿಸಿ, ತಾನೂ ಉಂಡು, ಕವುಚಿ ಇಡುವವವರೆಗೆ ಮಾಡಿದುದೆಲ್ಲವೂ ಅಕ್ಷಯವಾಗುತ್ತದೆಯೆಂದು.
[3] ಮಾಂಸವು ಅಕ್ಷಯವಾಗುವುದೆನ್ನುವುದನ್ನು ಇಲ್ಲಿ ಹೇಳಿಲ್ಲ. ಆದುದರಿಂದ ಪಾಂಡವರು ಅವರ ವನವಾಸದ ಸಮಯದಲ್ಲಿ ಆಹಾರಕ್ಕಾಗಿ ಆಗಾಗ ಜಿಂಕೆಗಳನ್ನು ಬೇಟೆಯಾಡುತ್ತಿದ್ದರು.
[4]ಕುಂಭಕೋಣ ಸಂಪುಟದಲ್ಲಿ ಈ ಶ್ಲೋಕದ ನಂತರ ದ್ರೌಪದಿಯು ಊಟಮಾಡಿದ ಮೇಲೆ ಆಹಾರವು ಕ್ಷಯವಾಗುತ್ತದೆ ಎಂದು ಸೂಚಿಸುವ ಈ ಶ್ಲೋಕಾರ್ಧವಿದೆ - ದ್ರೌಪದ್ಯಾಂ ಭುಜ್ಯಮಾನಾಯಾಂ ತದನ್ನಂ ಕ್ಷಯಮೇತಿ ಚ|