Aranyaka Parva: Chapter 298

ಆರಣ್ಯಕ ಪರ್ವ: ಆರಣೇಯ ಪರ್ವ

೨೯೮

ಧರ್ಮನಿಂದ ಧರ್ಮರಾಜನಿಗೆ ವರಗಳು

ಯಕ್ಷನು ತಾನು ಯುಧಿಷ್ಠಿರನ ತಂದೆ ಧರ್ಮನೆಂದು ಹೇಳಿಕೊಳ್ಳುವುದು; ಯುಧಿಷ್ಠಿರನು ಬ್ರಾಹ್ಮಣನ ಅರಣಿಗಳನ್ನು, ಹದಿಮೂರನೆಯ ವರ್ಷ ಯಾರೂ ತಮ್ಮನ್ನು ಗುರುತಿಸದಿರಲೆಂದೂ, ಧರ್ಮದಲ್ಲಿ ನೆಲೆಸಿರುವಂತೆಯೂ ವರಗಳನ್ನು ಪಡೆಯುವುದು (೧-೨೮).

03298001 ವೈಶಂಪಾಯನ ಉವಾಚ|

03298001a ತತಸ್ತೇ ಯಕ್ಷವಚನಾದುದತಿಷ್ಠಂತ ಪಾಂಡವಾಃ|

03298001c ಕ್ಷುತ್ಪಿಪಾಸೇ ಚ ಸರ್ವೇಷಾಂ ಕ್ಷಣೇ ತಸ್ಮಿನ್ವ್ಯಗಚ್ಚತಾಂ||

ವೈಶಂಪಾಯನನು ಹೇಳಿದನು: “ಆಗ ಆ ಯಕ್ಷನ ವಚನದಂತೆ ಪಾಂಡವರು ಎದ್ದು ನಿಂತರು ಮತ್ತು ಅವರೆಲ್ಲರ ಹಸಿವು ಬಾಯಾರಿಕೆಗಳು ಕ್ಷಣಮಾತ್ರದಲ್ಲಿ ಇಲ್ಲವಾದವು.

03298002 ಯುಧಿಷ್ಠಿರ ಉವಾಚ|

03298002a ಸರಸ್ಯೇಕೇನ ಪಾದೇನ ತಿಷ್ಠಂತಮಪರಾಜಿತಂ|

03298002c ಪೃಚ್ಚಾಮಿ ಕೋ ಭವಾನ್ದೇವೋ ನ ಮೇ ಯಕ್ಷೋ ಮತೋ ಭವಾನ್||

ಯುದಿಷ್ಠಿರನು ಹೇಳಿದನು: “ಈ ಸರೋವರದಲ್ಲಿ ಒಂದೇ ಕಾಲಿನ ಮೇಲೆ ಅಪರಾಜಿತನಾಗಿ ನಿಂತಿರುವ ನೀನು ಯಾವ ದೇವತೆಯೆಂದು ಕೇಳುತ್ತೇನೆ. ನೀನು ಯಕ್ಷನಾಗಿರಲಿಕ್ಕಿಲ್ಲ ಎಂದು ನನ್ನ ಅಭಿಪ್ರಾಯ.

03298003a ವಸೂನಾಂ ವಾ ಭವಾನೇಕೋ ರುದ್ರಾಣಾಮಥ ವಾ ಭವಾನ್|

03298003c ಅಥ ವಾ ಮರುತಾಂ ಶ್ರೇಷ್ಠೋ ವಜ್ರೀ ವಾ ತ್ರಿದಶೇಶ್ವರಃ||

ನೀನು ವಸುಗಳಲ್ಲಿ ಒಬ್ಬನಾಗಿರಬಹುದೇ ಅಥವಾ ರುದ್ರರಲ್ಲಿ ಒಬ್ಬನಾಗಿರಬಹುದೇ? ಅಥವಾ ಮರುತರ ಶ್ರೇಷ್ಠನಾಗಿರಬಹುದೇ? ಅಥವಾ ವಜ್ರಿ ತ್ರಿದಶೇಶ್ವರನಿರಬಹುದೇ?

03298004a ಮಮ ಹಿ ಭ್ರಾತರ ಇಮೇ ಸಹಸ್ರಶತಯೋಧಿನಃ|

03298004c ನ ತಂ ಯೋಗಂ ಪ್ರಪಶ್ಯಾಮಿ ಯೇನ ಸ್ಯುರ್ವಿನಿಪಾತಿತಾಃ||

ಯಾಕೆಂದರೆ ನನ್ನ ಈ ತಮ್ಮಂದಿರು ನೂರಾರು ಸಹಸ್ರಾರು ಯೋಧರನ್ನು ಹೋರಾಡಬಲ್ಲರು. ಅವರು ಹೇಗೆ ಕೆಳಗುರಿಳಿಸಲ್ಪಟ್ಟರು ಎನ್ನುವುದೇ ನನಗೆ ತೋಚದಾಗಿದೆ.

03298005a ಸುಖಂ ಪ್ರತಿವಿಬುದ್ಧಾನಾಮಿಂದ್ರಿಯಾಣ್ಯುಪಲಕ್ಷಯೇ|

03298005c ಸ ಭವಾನ್ಸುಹೃದಸ್ಮಾಕಮಥ ವಾ ನಃ ಪಿತಾ ಭವಾನ್||

ಅವರು ತಮ್ಮ ಬುದ್ಧಿಯನ್ನೂ ಇಂದ್ರಿಯಗಳನ್ನೂ ಸುಖವಾಗಿ ಪಡೆದಿರುವುದನ್ನು ನೋಡಿದರೆ ನೀನು ನಮ್ಮ ಸುಹೃದಯನಿರಬಹುದು. ಅಥವಾ ನೀನು ನನ್ನ ತಂದೆಯಲ್ಲವೇ?”

03298006 ಯಕ್ಷ ಉವಾಚ|

03298006a ಅಹಂ ತೇ ಜನಕಸ್ತಾತ ಧರ್ಮೋ ಮೃದುಪರಾಕ್ರಮ|

03298006c ತ್ವಾಂ ದಿದೃಕ್ಷುರನುಪ್ರಾಪ್ತೋ ವಿದ್ಧಿ ಮಾಂ ಭರತರ್ಷಭ||

ಯಕ್ಷನು ಹೇಳಿದನು: “ಮಗೂ! ಮೃದುಪರಾಕ್ರಮಿ! ನಾನು ನಿನ್ನ ಜನಕ ಧರ್ಮ. ಭರತರ್ಷಭ! ನಿನ್ನನ್ನು ನೋಡಲು ನಾನು ಬಂದಿದ್ದೇನೆ ಎಂದು ತಿಳಿ.

03298007a ಯಶಃ ಸತ್ಯಂ ದಮಃ ಶೌಚಮಾರ್ಜವಂ ಹ್ರೀರಚಾಪಲಂ|

03298007c ದಾನಂ ತಪೋ ಬ್ರಹ್ಮಚರ್ಯಮಿತ್ಯೇತಾಸ್ತನವೋ ಮಮ||

ಯಶಸ್ಸು, ಸತ್ಯ, ದಮ, ಶೌಚ, ಆರ್ಜವ, ವಿನಯತೆ, ಅಚಪಲತೆ, ದಾನ, ತಪಸ್ಸು, ಬ್ರಹ್ಮಚರ್ಯ ಇವೇ ನನ್ನ ದೇಹ.

03298008a ಅಹಿಂಸಾ ಸಮತಾ ಶಾಂತಿಸ್ತಪಃ ಶೌಚಮಮತ್ಸರಃ|

03298008c ದ್ವಾರಾಣ್ಯೇತಾನಿ ಮೇ ವಿದ್ಧಿ ಪ್ರಿಯೋ ಹ್ಯಸಿ ಸದಾ ಮಮ||

ಅಹಿಂಸೆ, ಸಮತೆ, ಶಾಂತಿ, ತಪಸ್ಸು, ಶೌಚ, ಅಮಾತ್ಸರ್ಯ, ಇವು ನನ್ನ ದ್ವಾರಗಳು ಮತ್ತು ನನಗೆ ಸದಾ ಪ್ರಿಯವಾದುವುಗಳೆಂದು ತಿಳಿ.

03298009a ದಿಷ್ಟ್ಯಾ ಪಂಚಸು ರಕ್ತೋಽಸಿ ದಿಷ್ಟ್ಯಾ ತೇ ಷಟ್ಪದೀ ಜಿತಾ|

03298009c ದ್ವೇ ಪೂರ್ವೇ ಮಧ್ಯಮೇ ದ್ವೇ ಚ ದ್ವೇ ಚಾಂತೇ ಸಾಂಪರಾಯಿಕೇ||

ಅದೃಷ್ಟವೆಂದರೆ ನೀವು ಐದರಲ್ಲಿ ಅನುರಕ್ತರಾಗಿದ್ದೀರಿ. ಪರಲೋಕವನ್ನು ನೀಡುವ ಆರನ್ನು ಮೊದಲು ಬರುವ ಎರಡು, ಮಧ್ಯದಲ್ಲಿ ಬರುವ ಎರಡು ಮತ್ತು ಕೊನೆಯಲ್ಲಿ ಬರುವ ಎರಡು - ಗೆದ್ದಿದ್ದೀರಿ.

03298010a ಧರ್ಮೋಽಹಮಸ್ಮಿ ಭದ್ರಂ ತೇ ಜಿಜ್ಞಾಸುಸ್ತ್ವಾಮಿಹಾಗತಃ|

03298010c ಆನೃಶಂಸ್ಯೇನ ತುಷ್ಟೋಽಸ್ಮಿ ವರಂ ದಾಸ್ಯಾಮಿ ತೇಽನಘ||

ನಾನು ಧರ್ಮ! ನಿನಗೆ ಮಂಗಳವಾಗಲಿ! ನಿನ್ನೊಡನೆ ಜಿಜ್ಞಾಸಿಸಲು ಇಲ್ಲಿಗೆ ಬಂದಿದ್ದೇನೆ. ಅನಘ! ನಿನ್ನ ಸತ್ಯತೆಯಿಂದ ತುಷ್ಟನಾಗಿದ್ದೇನೆ. ನಿನಗೆ ವರವನ್ನು ಕೊಡುತ್ತೇನೆ.

03298011a ವರಂ ವೃಣೀಷ್ವ ರಾಜೇಂದ್ರ ದಾತಾ ಹ್ಯಸ್ಮಿ ತವಾನಘ|

03298011c ಯೇ ಹಿ ಮೇ ಪುರುಷಾ ಭಕ್ತಾ ನ ತೇಷಾಮಸ್ತಿ ದುರ್ಗತಿಃ||

ರಾಜೇಂದ್ರ! ಅನಘ! ವರವನ್ನು ಬೇಡು. ಕೊಡುತ್ತಿದ್ದೇನೆ. ನನ್ನ ಭಕ್ತ ಪುರುಷರಿಗೆ ದುರ್ಗತಿಯುಂಟಾಗುವುದಿಲ್ಲ.”

03298012 ಯುಧಿಷ್ಠಿರ ಉವಾಚ|

03298012a ಅರಣೀಸಹಿತಂ ಯಸ್ಯ ಮೃಗ ಆದಾಯ ಗಚ್ಚತಿ|

03298012c ತಸ್ಯಾಗ್ನಯೋ ನ ಲುಪ್ಯೇರನ್ಪ್ರಥಮೋಽಸ್ತು ವರೋ ಮಮ||

ಯುಧಿಷ್ಠಿರನು ಹೇಳಿದನು: “ಯಾರ ಅರಣಿಗಳನ್ನು ಎತ್ತಿಕೊಂಡು ಜಿಂಕೆಯು ಓಡಿಹೋಯಿತೋ ಅವನ ಅಗ್ನಿಯು ನಿಲ್ಲದಿರಲಿ. ಇದೇ ನನ್ನ ಮೊದಲನೆಯ ವರ.”

03298013 ಧರ್ಮ ಉವಾಚ|

03298013a ಅರಣೀಸಹಿತಂ ತಸ್ಯ ಬ್ರಾಹ್ಮಣಸ್ಯ ಹೃತಂ ಮಯಾ|

03298013c ಮೃಗವೇಷೇಣ ಕೌಂತೇಯ ಜಿಜ್ಞಾಸಾರ್ಥಂ ತವ ಪ್ರಭೋ||

ಧರ್ಮನು ಹೇಳಿದನು: “ಕೌಂತೇಯ! ಪ್ರಭೋ! ನಿನ್ನನ್ನು ಪರೀಕ್ಷಿಸಲೋಸುಗ ಮೃಗವೇಷದಿಂದ ನಾನೇ ಆ ಬ್ರಾಹ್ಮಣನ ಅರಣಿಗಳನ್ನು ಅಪಹರಿಸಿದ್ದೆ.””

03298014 ವೈಶಂಪಾಯನ ಉವಾಚ|

03298014a ದದಾನೀತ್ಯೇವ ಭಗವಾನುತ್ತರಂ ಪ್ರತ್ಯಪದ್ಯತ|

03298014c ಅನ್ಯಂ ವರಯ ಭದ್ರಂ ತೇ ವರಂ ತ್ವಮಮರೋಪಮ||

ವೈಶಂಪಾಯನನು ಹೇಳಿದನು: ““ಇದನ್ನು ಕೊಡುತ್ತೇನೆ” ಎಂದು ಭಗವಾನನು ಉತ್ತರವನ್ನಿತ್ತನು. “ನಿನಗೆ ಮಂಗಳವಾಗಲಿ! ಅಮರೋಪಮ! ನೀನು ಬೇರೆ ವರವನ್ನು ಕೇಳು.”

03298015 ಯುಧಿಷ್ಠಿರ ಉವಾಚ|

03298015a ವರ್ಷಾಣಿ ದ್ವಾದಶಾರಣ್ಯೇ ತ್ರಯೋದಶಮುಪಸ್ಥಿತಂ|

03298015c ತತ್ರ ನೋ ನಾಭಿಜಾನೀಯುರ್ವಸತೋ ಮನುಜಾಃ ಕ್ವ ಚಿತ್||

ಯುಧಿಷ್ಠಿರನು ಹೇಳಿದನು: “ಅರಣ್ಯದಲ್ಲಿ ಹನ್ನೆರಡು ವರ್ಷಗಳು ಕಳೆದವು. ಹದಿಮೂರನೆಯ ವರ್ಷವು ಉಳಿದಿದೆ. ನಾವೆಲ್ಲಿ ವಾಸಿಸಿದರೂ ಅಲ್ಲಿ ಮನುಷ್ಯರು ನಮ್ಮನ್ನು ಗುರುತಿಸದೇ ಇರಲಿ.””

03298016 ವೈಶಂಪಾಯನ ಉವಾಚ|

03298016a ದದಾನೀತ್ಯೇವ ಭಗವಾನುತ್ತರಂ ಪ್ರತ್ಯಪದ್ಯತ|

03298016c ಭೂಯಶ್ಚಾಶ್ವಾಸಯಾಮಾಸ ಕೌಂತೇಯಂ ಸತ್ಯವಿಕ್ರಮಂ||

ವೈಶಂಪಾಯನನು ಹೇಳಿದನು: ““ಅದನ್ನೂ ಕೊಟ್ಟಿದ್ದೇನೆ” ಎಂದು ಭಗವಾನನು ಉತ್ತರಿಸಿದನು ಮತ್ತು ಮತ್ತೊಮ್ಮೆ ಸತ್ಯವಿಕ್ರಮಿ ಕೌಂತೇಯನಿಗೆ ಆಶ್ವಾಸನೆಯನ್ನಿತ್ತನು.

03298017a ಯದ್ಯಪಿ ಸ್ವೇನ ರೂಪೇಣ ಚರಿಷ್ಯಥ ಮಹೀಮಿಮಾಂ|

03298017c ನ ವೋ ವಿಜ್ಞಾಸ್ಯತೇ ಕಶ್ಚಿತ್ತ್ರಿಷು ಲೋಕೇಷು ಭಾರತ||

“ಭಾರತ! ಒಂದುವೇಳೆ ನಿಮ್ಮ ರೂಪದಲ್ಲಿಯೇ ಈ ಭೂಮಿಯಲ್ಲಿ ಸಂಚರಿಸಿದರೂ ಈ ಮೂರುಲೋಕಗಳಲ್ಲಿ ಯಾರೂ ನಿಮ್ಮನ್ನು ಗುರುತಿಸುವುದಿಲ್ಲ.

03298018a ವರ್ಷಂ ತ್ರಯೋದಶಂ ಚೇದಂ ಮತ್ಪ್ರಸಾದಾತ್ಕುರೂದ್ವಹಾಃ|

03298018c ವಿರಾಟನಗರೇ ಗೂಢಾ ಅವಿಜ್ಞಾತಾಶ್ಚರಿಷ್ಯಥ||

ಕುರೂದ್ವಹರೇ! ನನ್ನ ಪ್ರಸಾದದಿಂದ ನೀವು ಈ ಹದಿಮೂರನೆಯ ವರ್ಷವನ್ನು ವಿರಾಟನಗರದಲ್ಲಿ ಗೂಢರಾಗಿ ಅವಿಜ್ಞಾತರಾಗಿ ವಾಸಮಾಡಿಕೊಂಡಿರುತ್ತೀರಿ.

03298019a ಯದ್ವಃ ಸಂಕಲ್ಪಿತಂ ರೂಪಂ ಮನಸಾ ಯಸ್ಯ ಯಾದೃಶಂ|

03298019c ತಾದೃಶಂ ತಾದೃಶಂ ಸರ್ವೇ ಚಂದತೋ ಧಾರಯಿಷ್ಯಥ||

ನಿಮಗಿಷ್ಟವಾದ ಯಾವ ರೂಪದಲ್ಲಿರಬೇಕೆಂದು ನೀವು ಸಂಕಲ್ಪಿಸುತ್ತೀರೋ ಅದೇ ರೂಪವನ್ನು ನೀವೆಲ್ಲರೂ ಧರಿಸುತ್ತೀರಿ.

03298020a ಅರಣೀಸಹಿತಂ ಚೇದಂ ಬ್ರಾಹ್ಮಣಾಯ ಪ್ರಯಚ್ಚತ|

03298020c ಜಿಜ್ಞಾಸಾರ್ಥಂ ಮಯಾ ಹ್ಯೇತದಾಹೃತಂ ಮೃಗರೂಪಿಣಾ||

ನಿನ್ನನ್ನು ಪರೀಕ್ಷಿಸಲು ಮೃಗರೂಪವನ್ನು ಧರಿಸಿ ನಾನು ಅಪಹರಿಸಿದ ಈ ಅರಣಿಗಳನ್ನು ಆ ಬ್ರಾಹ್ಮಣನಿಗೆ ತಲುಪಿಸಿ.

03298021a ತೃತೀಯಂ ಗೃಹ್ಯತಾಂ ಪುತ್ರ ವರಮಪ್ರತಿಮಂ ಮಹತ್|

03298021c ತ್ವಂ ಹಿ ಮತ್ಪ್ರಭವೋ ರಾಜನ್ವಿದುರಶ್ಚ ಮಮಾಂಶಭಾಕ್||

ಪುತ್ರ! ಮೂರನೆಯ ಮಹತ್ತರ ಅಪ್ರತಿಮ ವರವನ್ನು ಸ್ವೀಕರಿಸು. ರಾಜನ್! ನೀನು ನನ್ನ ಪ್ರಭಾವದಿಂದಲೇ ಇದ್ದೀಯೆ. ವಿದುರನೂ ಕೂಡ ನನ್ನ ಅಂಶಕನೇ.”

03298022 ಯುಧಿಷ್ಠಿರ ಉವಾಚ|

03298022a ದೇವದೇವೋ ಮಯಾ ದೃಷ್ಟೋ ಭವಾನ್ ಸಾಕ್ಷಾತ್ಸನಾತನಃ|

03298022c ಯಂ ದದಾಸಿ ವರಂ ತುಷ್ಟಸ್ತಂ ಗ್ರಹೀಷ್ಯಾಮ್ಯಹಂ ಪಿತಃ||

ಯುಧಿಷ್ಠಿರನು ಹೇಳಿದನು: “ದೇವದೇವ! ಸನಾತನನಾದ ನಿನ್ನನ್ನು ಸಾಕ್ಷಾತ್ ನೋಡಿ ನಾನು ಸಂತೋಷಗೊಂಡೆನು. ತಂದೆಯೇ! ನೀನಾಗಿಯೇ ನನಗೆ ಯಾವ ವರವನ್ನು ಕೊಡುತ್ತೀಯೋ ಅದನ್ನು ತೃಪ್ತಿಯಿಂದ ಸ್ವೀಕರಿಸುತ್ತೇನೆ.

03298023a ಜಯೇಯಂ ಲೋಭಮೋಹೌ ಚ ಕ್ರೋಧಂ ಚಾಹಂ ಸದಾ ವಿಭೋ|

03298023c ದಾನೇ ತಪಸಿ ಸತ್ಯೇ ಚ ಮನೋ ಮೇ ಸತತಂ ಭವೇತ್||

ವಿಭೋ! ಸದಾ ನಾನು ಲೋಭ-ಮೋಹಗಳನ್ನು ಮತ್ತು ಕ್ರೋಧವನ್ನೂ ಜಯಿಸಿರಲಿ. ದಾನ, ತಪಸ್ಸು ಮತ್ತು ಸತ್ಯದಲ್ಲಿ ಸತತವೂ ನನ್ನ ಮನಸ್ಸು ಇರಲಿ.”

03298024 ಧರ್ಮ ಉವಾಚ|

03298024a ಉಪಪನ್ನೋ ಗುಣೈಃ ಸರ್ವೈಃ ಸ್ವಭಾವೇನಾಸಿ ಪಾಂಡವ|

03298024c ಭವಾನ್ಧರ್ಮಃ ಪುನಶ್ಚೈವ ಯಥೋಕ್ತಂ ತೇ ಭವಿಷ್ಯತಿ||

ಧರ್ಮನು ಹೇಳಿದನು: “ಪಾಂಡವ! ಈ ಎಲ್ಲ ಗುಣಗಳೂ ನಿನ್ನಲ್ಲಿ ಸ್ವಾಭಾವಿಕವಾಗಿಯೇ ನೆಲಸಿವೆ. ನೀನೇ ಧರ್ಮ. ಪುನಃ ನೀನು ಹೇಳಿದುದೆಲ್ಲವೂ ಹಾಗೆಯೇ ಆಗುತ್ತವೆ.””

03298025 ವೈಶಂಪಾಯನ ಉವಾಚ|

03298025a ಇತ್ಯುಕ್ತ್ವಾಂತರ್ದಧೇ ಧರ್ಮೋ ಭಗವಾನ್ಲೋಕಭಾವನಃ|

03298025c ಸಮೇತಾಃ ಪಾಂಡವಾಶ್ಚೈವ ಸುಖಸುಪ್ತಾ ಮನಸ್ವಿನಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಭಗವಾನ್ ಲೋಕಭಾವನ ಧರ್ಮನು ಅಂತರ್ಧಾನನಾದನು. ಮನಸ್ವಿ ಪಾಂಡವರೂ ಕೂಡ ಒಟ್ಟಿಗೇ ಮನಸ್ಸಿನಲ್ಲಿ ಸುಖವನ್ನು ಹೊಂದಿದರು.

03298026a ಅಭ್ಯೇತ್ಯ ಚಾಶ್ರಮಂ ವೀರಾಃ ಸರ್ವ ಏವ ಗತಕ್ಲಮಾಃ|

03298026c ಆರಣೇಯಂ ದದುಸ್ತಸ್ಮೈ ಬ್ರಾಹ್ಮಣಾಯ ತಪಸ್ವಿನೇ||

ಆಯಾಸವನ್ನೆಲ್ಲ ಕಳೆದುಕೊಂಡ ಆ ವೀರರೆಲ್ಲರೂ ಆಶ್ರಮಕ್ಕೆ ಬಂದು ಆರಣೇಯವನ್ನು ಆ ತಪಸ್ವಿ ಬ್ರಾಹ್ಮಣನಿಗೆ ಕೊಟ್ಟರು.

03298027a ಇದಂ ಸಮುತ್ಥಾನಸಮಾಗಮಂ ಮಹತ್|

        ಪಿತುಶ್ಚ ಪುತ್ರಸ್ಯ ಚ ಕೀರ್ತಿವರ್ಧನಂ|

03298027c ಪಠನ್ನರಃ ಸ್ಯಾದ್ವಿಜಿತೇಂದ್ರಿಯೋ ವಶೀ|

        ಸಪುತ್ರಪೌತ್ರಃ ಶತವರ್ಷಭಾಗ್ಭವೇತ್||

ಈ ಕೀರ್ತಿವರ್ಧಕ ತಂದೆ ಮತ್ತು ಮಗನ ಮಹಾ ಸಮುತ್ಥಾನ ಸಮಾಗಮವನ್ನು ಜಿತೀಂದ್ರಿಯನಾಗಿದ್ದುಕೊಂಡು, ತನ್ನನ್ನು ತಾನು ವಶದಲ್ಲಿಟ್ಟುಕೊಂಡು, ಯಾವ ನರನು ಓದುತ್ತಾನೋ ಅವನು ತನ್ನ ಪುತ್ರ ಪೌತ್ರರೊಂದಿಗೆ ನೂರುವರ್ಷಗಳು ಜೀವಿಸುತ್ತಾನೆ.

03298028a ನ ಚಾಪ್ಯಧರ್ಮೇ ನ ಸುಹೃದ್ವಿಭೇದನೇ|

        ಪರಸ್ವಹಾರೇ ಪರದಾರಮರ್ಶನೇ|

03298028c ಕದರ್ಯಭಾವೇ ನ ರಮೇನ್ಮನಃ ಸದಾ|

        ನೃಣಾಂ ಸದಾಖ್ಯಾನಮಿದಂ ವಿಜಾನತಾಂ||

ಈ ಸದಾಖ್ಯಾನವನ್ನು ತಿಳಿದ ನರರು ಅಧರ್ಮದಲ್ಲಿ ರುಚಿಯನ್ನಿಡುವುದಿಲ್ಲ, ಸುಹೃದರೊಂದಿಗೆ ಬೇರಾಗುವುದಿಲ್ಲ, ಪರರಿಂದ ಕದಿಯುವುದರಲ್ಲಿ ಮತ್ತು ಪರರ ಸ್ತ್ರೀಯರಲ್ಲಿ ಆಸೆಯಿಡುವುದಿಲ್ಲ. ಸದಾ ಕದರ್ಯಭಾವದಲ್ಲಿ ಮನಸ್ಸನ್ನು ರಂಜಿಸುವುದಿಲ್ಲ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ನಕುಲಾದಿಜೀವನಾದಿವರಪ್ರಾಪ್ತೌ ಅಷ್ಟನವತ್ಯಧಿಕದ್ವಿಶತತಮೋಽಧ್ಯಾಯ😐

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ನಕುಲಾದಿಜೀವನಾದಿವರಪ್ರಾಪ್ತಿಯಲ್ಲಿ ಇನ್ನೂರಾತೊಂಭತ್ತೆಂಟನೆಯ ಅಧ್ಯಾಯವು.

Image result for indian motifs lilies

Comments are closed.