ಆರಣ್ಯಕ ಪರ್ವ: ಕುಂಡಲಾಹರಣ ಪರ್ವ
೨೯೩
ಅದೇ ಸಮಯದಲ್ಲಿ ಗಂಗಾ ತೀರಕ್ಕೆ ವಿಹಾರಕ್ಕೆಂದು ಬಂದಿದ್ದ, ಧೃತರಾಷ್ಟ್ರನ ಸಖ, ಸೂತ ಅಧಿರಥನು ಆ ಪೆಟ್ಟಿಗೆಯಲ್ಲಿದ್ದ ಮಗುವನ್ನು ಮಕ್ಕಳಿಲ್ಲದವರ ಪುತ್ರನಿವನು ಎಂದು ಪತ್ನಿ ರಾಧೆಗೆ ಕೊಟ್ಟಿದುದು (೧-೧೦). ಬೆಳೆದು ದೊಡ್ಡವನಾಗಿ ದ್ರೋಣನಿಂದ ಕಲಿತು ದುರ್ಯೋಧನನ ಸಖ್ಯದಲ್ಲಿ ಬಂದಿದ್ದ ಕರ್ಣನ ಅಭೇದ್ಯ ಕವಚ ಕುಂಡಲಗಳೇ ಯುಧಿಷ್ಠಿರನ ಚಿಂತೆಗೆ ಕಾರಣವಾದುದು (೧೧-೨೦). ಇಂದ್ರನು ಬ್ರಾಹ್ಮಣ ವೇಷದಲ್ಲಿ ಭಿಕ್ಷವನ್ನು ಕೇಳಿಕೊಂಡು ಕರ್ಣನಲ್ಲಿಗೆ ಬರುವುದು (೨೧-೨೩).
03293001 ವೈಶಂಪಾಯನ ಉವಾಚ|
03293001a ಏತಸ್ಮಿನ್ನೇವ ಕಾಲೇ ತು ಧೃತರಾಷ್ಟ್ರಸ್ಯ ವೈ ಸಖಾ|
03293001c ಸೂತೋಽಧಿರಥ ಇತ್ಯೇವ ಸದಾರೋ ಜಾಹ್ನವೀಂ ಯಯೌ||
ವೈಶಂಪಾಯನನು ಹೇಳಿದನು: “ಇದೇ ಸಮಯದಲ್ಲಿ ಧೃತರಾಷ್ಟ್ರನ ಸಖ ಸೂತ ಅಧಿರಥನು ತನ್ನ ಪತ್ನಿಯೊಂದಿಗೆ ಅದೇ ಜಾಹ್ನವೀ ತೀರಕ್ಕೆ ಬಂದನು.
03293002a ತಸ್ಯ ಭಾರ್ಯಾಭವದ್ರಾಜನ್ರೂಪೇಣಾಸದೃಶೀ ಭುವಿ|
03293002c ರಾಧಾ ನಾಮ ಮಹಾಭಾಗಾ ನ ಸಾ ಪುತ್ರಮವಿಂದತ|
03293002e ಅಪತ್ಯಾರ್ಥೇ ಪರಂ ಯತ್ನಮಕರೋಚ್ಚ ವಿಶೇಷತಃ||
ರಾಜನ್! ಅವನ ಭಾರ್ಯೆಯು ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳಾಗಿದ್ದಳು. ರಾಧಾ ಎಂಬ ಹೆಸರಿನ ಆ ಮಹಾಭಾಗೆಯು ಮಕ್ಕಳಿಗಾಗಿ ವಿಶೇಷವಾಗಿ ಪರಮ ಪ್ರಯತ್ನಪಟ್ಟಿದ್ದರೂ ಮಕ್ಕಳನ್ನು ಪಡೆದಿರಲಿಲ್ಲ.
03293003a ಸಾ ದದರ್ಶಾಥ ಮಂಜೂಷಾಮುಹ್ಯಮಾನಾಂ ಯದೃಚ್ಚಯಾ|
03293003c ದತ್ತರಕ್ಷಾಪ್ರತಿಸರಾಮನ್ವಾಲಭನಶೋಭಿತಾಂ|
03293003e ಊರ್ಮೀತರಂಗೈರ್ಜಾಹ್ನವ್ಯಾಃ ಸಮಾನೀತಾಮುಪಹ್ವರಂ||
ಅವಳು ನದಿಯಲ್ಲಿ ತೇಲಿಬರುತ್ತಿರುವ, ಬಣ್ಣದ ಬಟ್ಟೆಗಳಿಂದ ಕಟ್ಟಿದ್ದ, ಕೀಲದಿಂದ ಅಲಂಕೃತಗೊಂಡಿದ್ದ ಪೆಟ್ಟಿಗೆಯನ್ನು ನೋಡಿದಳು. ಜಾಹ್ನವಿಯ ಅಲೆಗಳು ಅದನ್ನು ಅವಳ ಕಡೆಗೇ ತಳ್ಳಿದವು.
03293004a ಸಾ ತಾಂ ಕೌತೂಹಲಾತ್ಪ್ರಾಪ್ತಾಂ ಗ್ರಾಹಯಾಮಾಸ ಭಾಮಿನೀ|
03293004c ತತೋ ನಿವೇದಯಾಮಾಸ ಸೂತಸ್ಯಾಧಿರಥಸ್ಯ ವೈ||
ಆ ಭಾಮಿನಿಯು ಕುತೂಹಲದಿಂದ ಅದನ್ನು ಹಿಡಿದಳು ಮತ್ತು ಸೂತ ಅಧಿರಥನಿಗೆ ನಿವೇದಿಸಿದಳು.
03293005a ಸ ತಾಮುದ್ಧೃತ್ಯ ಮಂಜೂಷಾಮುತ್ಸಾರ್ಯ ಜಲಮಂತಿಕಾತ್|
03293005c ಯಂತ್ರೈರುದ್ಘಾಟಯಾಮಾಸ ಸೋಽಪಶ್ಯತ್ತತ್ರ ಬಾಲಕಂ||
03293006a ತರುಣಾದಿತ್ಯಸಂಕಾಶಂ ಹೇಮವರ್ಮಧರಂ ತಥಾ|
03293006c ಮೃಷ್ಟಕುಂಡಲಯುಕ್ತೇನ ವದನೇನ ವಿರಾಜತಾ||
ಅವನು ಆ ಪೆಟ್ಟಿಗೆಯನ್ನು ನೀರಿನಿಂದ ಮೇಲಕ್ಕೆ ಎತ್ತಿ ತರಿಸಿದನು. ಯಂತ್ರಗಳಿಂದ ಅದನ್ನು ಒಡೆದು ತೆರೆಯಲು ಅಲ್ಲಿ ತರುಣ ಆದಿತ್ಯನಂತಿರುವ, ಬಂಗಾರದ ಕವಚವನ್ನು ಧರಿಸಿದ್ದ, ಥಳಥಳಿಸುತ್ತಿದ್ದ ಕುಂಡಲಗಳಿಂದ ವಿರಾಜಿಸುತ್ತಿದ್ದ ಮುಖದ ಬಾಲಕನನ್ನು ನೋಡಿದನು.
03293007a ಸ ಸೂತೋ ಭಾರ್ಯಯಾ ಸಾರ್ಧಂ ವಿಸ್ಮಯೋತ್ಫುಲ್ಲಲೋಚನಃ|
03293007c ಅಂಕಮಾರೋಪ್ಯ ತಂ ಬಾಲಂ ಭಾರ್ಯಾಂ ವಚನಮಬ್ರವೀತ್||
ಸೂತನ ಮತ್ತು ಅವನ ಪತ್ನಿಯ ಕಣ್ಣುಗಳು ಆಶ್ಚರ್ಯದಿಂದ ಅರಳಿದವು. ಅವನನ್ನು ತನ್ನ ತೊಡೆಯಮೇಲಿರಿಸಿಕೊಂಡು ಪತ್ನಿಗೆ ಈ ಮಾತುಗಳನ್ನಾಡಿದನು:
03293008a ಇದಮತ್ಯದ್ಭುತಂ ಭೀರು ಯತೋ ಜಾತೋಽಸ್ಮಿ ಭಾಮಿನಿ|
03293008c ದೃಷ್ಟವಾನ್ದೇವಗರ್ಭೋಽಯಂ ಮನ್ಯೇಽಸ್ಮಾನ್ಸಮುಪಾಗತಃ||
“ಭೀರು! ಭಾಮಿನೀ! ಹುಟ್ಟಿದಾಗಿನಿಂದ ಈ ವರೆಗೆ ಇಂಥಹ ಅದ್ಭುತವನ್ನು ನೋಡಿರಲಿಲ್ಲ. ನಮಗಾಗಿಯೇ ಈ ದೇವಗರ್ಭವು ಬಂದಿದೆ ಎಂದು ನನಗನ್ನಿಸುತ್ತದೆ.
03293009a ಅನಪತ್ಯಸ್ಯ ಪುತ್ರೋಽಯಂ ದೇವೈರ್ದತ್ತೋ ಧ್ರುವಂ ಮಮ|
03293009c ಇತ್ಯುಕ್ತ್ವಾ ತಂ ದದೌ ಪುತ್ರಂ ರಾಧಾಯೈ ಸ ಮಹೀಪತೇ||
ಮಕ್ಕಳಿಲ್ಲದವರ ಪುತ್ರನಿವನು. ದೇವತೆಗಳೇ ನನಗೆ ಕೊಟ್ಟಿದ್ದುದು ಎನ್ನುವುದು ನಿಶ್ಚಿತ.” ಮಹೀಪತೇ! ಹೀಗೆ ಹೇಳಿ ಆ ಮಗನನ್ನು ರಾಧೆಗೆ ಕೊಟ್ಟನು.
03293010a ಪ್ರತಿಜಗ್ರಾಹ ತಂ ರಾಧಾ ವಿಧಿವದ್ದಿವ್ಯರೂಪಿಣಂ|
03293010c ಪುತ್ರಂ ಕಮಲಗರ್ಭಾಭಂ ದೇವಗರ್ಭಂ ಶ್ರಿಯಾ ವೃತಂ||
ರಾಧೆಯು ಆ ಕಮಲಗರ್ಭದಂತೆ ಬೆಳಗುತ್ತಿರುವ, ದೇವಗರ್ಭ, ಶ್ರೀಯಿಂದ ಆವೃತನಾಗಿದ್ದ ಆ ದಿವ್ಯರೂಪಿ ಪುತ್ರನನ್ನು ವಿಧಿವತ್ತಾಗಿ ಸ್ವೀಕರಿಸಿದಳು.
03293011a ಪುಪೋಷ ಚೈನಂ ವಿಧಿವದ್ವವೃಧೇ ಸ ಚ ವೀರ್ಯವಾನ್|
03293011c ತತಃ ಪ್ರಭೃತಿ ಚಾಪ್ಯನ್ಯೇ ಪ್ರಾಭವನ್ನೌರಸಾಃ ಸುತಾಃ|
ಅವಳು ಅವನನ್ನು ವಿಧಿವತ್ತಾಗಿ ಬೆಳಸಿದಳು. ಅವನೂ ವೀರ್ಯವಂತನಾಗಿ ಬೆಳೆದನು. ಅವನ ನಂತರ ಅವಳು ಇತರ ಪುತ್ರರನ್ನೂ ಪಡೆದಳು.
03293012a ವಸುವರ್ಮಧರಂ ದೃಷ್ಟ್ವಾ ತಂ ಬಾಲಂ ಹೇಮಕುಂಡಲಂ|
03293012c ನಾಮಾಸ್ಯ ವಸುಷೇಣೇತಿ ತತಶ್ಚಕ್ರುರ್ದ್ವಿಜಾತಯಃ||
ಬಂಗಾರದ ಕವಚಗಳನ್ನು ಮತ್ತು ಹೇಮಕುಂಡಲಗಳನ್ನು ಧರಿಸಿದ್ದ ಆ ಬಾಲಕನನ್ನು ನೋಡಿ ದ್ವಿಜರು ಅವನ ಹೆಸರನ್ನು ವಸುಷೇಣ ಎಂದಿಟ್ಟರು.
03293013a ಏವಂ ಸ ಸೂತಪುತ್ರತ್ವಂ ಜಗಾಮಾಮಿತವಿಕ್ರಮಃ|
03293013c ವಸುಷೇಣ ಇತಿ ಖ್ಯಾತೋ ವೃಷ ಇತ್ಯೇವ ಚ ಪ್ರಭುಃ||
ಈ ರೀತಿ ಅಮಿತವಿಕ್ರಮಿ ಪ್ರಭುವು ಸೂತಪುತ್ರತ್ವವನ್ನು ಪಡೆದು ವಸುಷೇಣ ಎಂದು, ವೃಷ ಎಂದೂ ಖ್ಯಾತನಾದನು.
03293014a ಸ ಜ್ಯೇಷ್ಠಪುತ್ರಃ ಸೂತಸ್ಯ ವವೃಧೇಽಂಗೇಷು ವೀರ್ಯವಾನ್|
03293014c ಚಾರೇಣ ವಿದಿತಶ್ಚಾಸೀತ್ಪೃಥಾಯಾ ದಿವ್ಯವರ್ಮಭೃತ್||
ಸೂತನ ಆ ಜ್ಯೇಷ್ಠಪುತ್ರನು ಅಂಗಗಳಲ್ಲಿ ವೀರ್ಯವಂತನಾಗಿ ಬೆಳೆದನು. ಪೃಥೆಯು ಅವನ ದಿವ್ಯ ಕವಚದ ಕುರಿತು ಚಾರರಿಂದ ತಿಳಿದುಕೊಂಡಳು.
03293015a ಸೂತಸ್ತ್ವಧಿರಥಃ ಪುತ್ರಂ ವಿವೃದ್ಧಂ ಸಮಯೇ ತತಃ|
03293015c ದೃಷ್ಟ್ವಾ ಪ್ರಸ್ಥಾಪಯಾಮಾಸ ಪುರಂ ವಾರಣಸಾಹ್ವಯಂ||
ಸೂತ ಅಧಿರಥನು ತನ್ನ ಮಗನು ಕಾಲಕ್ಕೆ ತಕ್ಕಂತೆ ಬೆಳೆದಿದ್ದುದನ್ನು ನೋಡಿ ವಾರಣಾವತ ಪುರಕ್ಕೆ ಕಳುಹಿಸಿದನು.
03293016a ತತ್ರೋಪಸದನಂ ಚಕ್ರೇ ದ್ರೋಣಸ್ಯೇಷ್ವಸ್ತ್ರಕರ್ಮಣಿ|
03293016c ಸಖ್ಯಂ ದುರ್ಯೋಧನೇನೈವಮಗಚ್ಚತ್ಸ ಚ ವೀರ್ಯವಾನ್||
ಅಲ್ಲಿ ಅವನು ಅಸ್ತ್ರಗಳಿಗಾಗಿ ದ್ರೋಣನ ಬಳಿಹೋದನು. ಮತ್ತು ಆ ವೀರ್ಯವಂತನು ದುರ್ಯೋಧನನ ಸಖ್ಯದಲ್ಲಿ ಬಂದನು[1].
03293017a ದ್ರೋಣಾತ್ಕೃಪಾಚ್ಚ ರಾಮಾಚ್ಚ ಸೋಽಸ್ತ್ರಗ್ರಾಮಂ ಚತುರ್ವಿಧಂ|
03293017c ಲಬ್ಧ್ವಾ ಲೋಕೇಽಭವತ್ಖ್ಯಾತಃ ಪರಮೇಷ್ವಾಸತಾಂ ಗತಃ||
ಅವನು ಚತುರ್ವಿಧ ಸಂಗ್ರಾಮವನ್ನು ದ್ರೋಣನಿಂದ, ಕೃಪನಿಂದ ಮತ್ತು ರಾಮನಿಂದ ಪಡೆದು[2] ಲೋಕದಲ್ಲಿ ಮಹಾ ಬಿಲ್ಲುಗಾರನೆಂದು ಖ್ಯಾತಿಗೆ ಬಂದನು.
03293018a ಸಂಧಾಯ ಧಾರ್ತರಾಷ್ಟ್ರೇಣ ಪಾರ್ಥಾನಾಂ ವಿಪ್ರಿಯೇ ಸ್ಥಿತಃ|
03293018c ಯೋದ್ಧುಮಾಶಂಸತೇ ನಿತ್ಯಂ ಫಲ್ಗುನೇನ ಮಹಾತ್ಮನಾ||
ಧಾರ್ತರಾಷ್ಟ್ರರನ್ನು ಸೇರಿಕೊಂಡು ಪಾರ್ಥರ ವೈರಿಯಾಗಿ ನಿಂತನು. ಮಹಾತ್ಮ ಫಲ್ಗುನನೊಂದಿಗೆ ನಿತ್ಯವೂ ಯುದ್ಧಕ್ಕಾಗಿ ಕಾಯುತ್ತಿದ್ದನು.
03293019a ಸದಾ ಹಿ ತಸ್ಯ ಸ್ಪರ್ಧಾಸೀದರ್ಜುನೇನ ವಿಶಾಂ ಪತೇ|
03293019c ಅರ್ಜುನಸ್ಯ ಚ ಕರ್ಣೇನ ಯತೋ ದೃಷ್ಟೋ ಬಭೂವ ಸಃ||
ವಿಶಾಂಪತೇ! ಅವನಿಗೆ ಯಾವಾಗಲೂ ಅರ್ಜುನನೊಂದಿಗೆ ಸ್ಪರ್ಧೆಯಿರುತ್ತಿತ್ತು. ಅರ್ಜುನನೂ ಕೂಡ ಕರ್ಣನನ್ನು ಹಾಗೆಯೇ ಕಾಣುತ್ತಿದ್ದನು.
03293020a ತಂ ತು ಕುಂಡಲಿನಂ ದೃಷ್ಟ್ವಾ ವರ್ಮಣಾ ಚ ಸಮನ್ವಿತಂ|
03293020c ಅವಧ್ಯಂ ಸಮರೇ ಮತ್ವಾ ಪರ್ಯತಪ್ಯದ್ಯುಧಿಷ್ಠಿರಃ||
ಅವನು ಕುಂಡಲಗಳಿಂದ ಮತ್ತು ಕವಚದಿಂದ ಸಮನ್ವಿತನಾಗಿರುವುದನ್ನು ಕಂಡು ಮತ್ತು ಸಮರದಲ್ಲಿ ಅವಧ್ಯನೆಂದು ತಿಳಿದು ಯುಧಿಷ್ಠಿರನು ಪರಿತಪಿಸುತ್ತಿದ್ದನು.
03293021a ಯದಾ ತು ಕರ್ಣೋ ರಾಜೇಂದ್ರ ಭಾನುಮಂತಂ ದಿವಾಕರಂ|
03293021c ಸ್ತೌತಿ ಮಧ್ಯಂದಿನೇ ಪ್ರಾಪ್ತೇ ಪ್ರಾಂಜಲಿಃ ಸಲಿಲೇ ಸ್ಥಿತಃ||
03293022a ತತ್ರೈನಮುಪತಿಷ್ಠಂತಿ ಬ್ರಾಹ್ಮಣಾ ಧನಹೇತವಃ|
03293022c ನಾದೇಯಂ ತಸ್ಯ ತತ್ಕಾಲೇ ಕಿಂ ಚಿದಸ್ತಿ ದ್ವಿಜಾತಿಷು||
ರಾಜೇಂದ್ರ! ಮಧ್ಯಾಹ್ನವು ಪ್ರಾಪ್ತವಾಗಲು ಅವನು ಭಾನುಮಂತ ದಿವಾಕರನನ್ನು ಕೈಮುಗಿದು ನೀರಿನಲ್ಲಿ ನಿಂತು ಸ್ತುತಿಸಲು ಅಲ್ಲಿ ಬ್ರಾಹ್ಮಣರು ಧನಕ್ಕಾಗಿ ಕಾಯುತ್ತಾ ನಿಂತಿರುತ್ತಿದ್ದರು. ಆ ಸಮಯದಲ್ಲಿ ದ್ವಿಜರು ಏನನ್ನು ಕೇಳಿದರೂ ಅವನು ಕೊಡದೇ ಇರುತ್ತಿರಲಿಲ್ಲ.
03293023a ತಮಿಂದ್ರೋ ಬ್ರಾಹ್ಮಣೋ ಭೂತ್ವಾ ಭಿಕ್ಷಾಂ ದೇಹೀತ್ಯುಪಸ್ಥಿತಃ|
03293023c ಸ್ವಾಗತಂ ಚೇತಿ ರಾಧೇಯಸ್ತಮಥ ಪ್ರತ್ಯಭಾಷತ||
ಆಗ ಇಂದ್ರನು ಬ್ರಾಹ್ಮಣನಾಗಿ “ಭಿಕ್ಷಾಂದೇಹಿ!” ಎಂದು ನಿಂತುಕೊಳ್ಳಲು ನಿನಗೆ ಸ್ವಾಗತ ಎಂದು ರಾಧೇಯನು ಅವನಿಗೆ ಉತ್ತರಿಸಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ರಾಧಾಕರ್ಣಪ್ರಾಪ್ತೌ ತ್ರಿನವತ್ಯಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ರಾಧಾಕರ್ಣಪ್ರಾಪ್ತಿಯಲ್ಲಿ ಇನ್ನೂರಾತೊಂಭತ್ಮೂರನೆಯ ಅಧ್ಯಾಯವು.
[1] ಕರ್ಣನು ದುರ್ಯೋಧನನ ಸಖ್ಯದಲ್ಲಿ ಬರುವ ವಿಷಯವು ಆದಿ ಪರ್ವದ ಅಧ್ಯಾಯ ೧೨೬ರಲ್ಲಿ ಬಂದಿದೆ.
[2] ಪರಶುರಾಮನಿಂದ ಕರ್ಣನು ಅಸ್ತ್ರಗಳನ್ನು ಪಡೆದುಕೊಂಡ ವಿಷಯವನ್ನು ನಾರದನು ಯುಧಿಷ್ಠಿರನಿಗೆ ತಿಳಿಸುವ ಪ್ರಸಂಗವು ಶಾಂತಿ ಪರ್ವದ ಅಧ್ಯಾಯ ೩ರಲ್ಲಿ ಬರುತ್ತದೆ.