ಆರಣ್ಯಕ ಪರ್ವ: ಕುಂಡಲಾಹರಣ ಪರ್ವ
೨೯೨
ಕುಂತಿಯಲ್ಲಿ ಕರ್ಣನ ಜನನ (೧-೫). ಹುಟ್ಟಿದ ಕೂಡಲೇ ಅವನನ್ನು ಪೆಟ್ಟಿಗೆಯಲ್ಲಿರಿಸಿ, ಬಹು ವಿಧವಾಗಿ ವಿಲಪಿಸುತ್ತಾ ಅಶ್ವನದಿಯಲ್ಲಿ ಬಿಟ್ಟಿದುದು (೧-೨೨). ಆ ಪೆಟ್ಟಿಗೆಯು ಚರ್ಮಣ್ವತಿ, ಯಮುನೆಯರ ಮೂಲಕ ಗಂಗೆಯನ್ನು ಸೇರಿ ಚಂಪಾಪುರಿಗೆ ಬಂದುದು (೨೩-೨೭).
03292001 ವೈಶಂಪಾಯನ ಉವಾಚ|
03292001a ತತೋ ಗರ್ಭಃ ಸಮಭವತ್ಪೃಥಾಯಾಃ ಪೃಥಿವೀಪತೇ|
03292001c ಶುಕ್ಲೇ ದಶೋತ್ತರೇ ಪಕ್ಷೇ ತಾರಾಪತಿರಿವಾಂಬರೇ||
ವೈಶಂಪಾಯನನು ಹೇಳಿದನು: “ಅಂಬರದಲ್ಲಿ ತಾರಾಪತಿಯು ಹೇಗೋ ಹಾಗೆ ಪೃಥಾಳಲ್ಲಿ ಗರ್ಭವು ಬೆಳೆಯಿತು.
03292002a ಸಾ ಬಾಂಧವಭಯಾದ್ಬಾಲಾ ತಂ ಗರ್ಭಂ ವಿನಿಗೂಹತೀ|
03292002c ಧಾರಯಾಮಾಸ ಸುಶ್ರೋಣೀ ನ ಚೈನಾಂ ಬುಬುಧೇ ಜನಃ||
ಬಾಂಧವರಿಗೆ ಹೆದರಿ ಆ ಬಾಲಕಿಯು ತನ್ನ ಗರ್ಭವನ್ನು ಮುಚ್ಚಿಟ್ಟುಕೊಂಡಳು. ಆ ಸುಶ್ರೋಣಿಯು ಗರ್ಭವನ್ನು ಧರಿಸಿದ್ದಾಗ ಯಾರಿಗೂ ಅದು ತಿಳಿಯಲಿಲ್ಲ.
03292003a ನ ಹಿ ತಾಂ ವೇದ ನಾರ್ಯನ್ಯಾ ಕಾ ಚಿದ್ಧಾತ್ರೇಯಿಕಾಮೃತೇ|
03292003c ಕನ್ಯಾಪುರಗತಾಂ ಬಾಲಾಂ ನಿಪುಣಾಂ ಪರಿರಕ್ಷಣೇ||
ತನ್ನನ್ನು ರಕ್ಷಿಸಿಕೊಳ್ಳುವುದರಲ್ಲಿ ನಿಪುಣೆಯಾದ ಈ ಬಾಲಕಿಯ ಕುರಿತು ಅವಳ ದಾತ್ರೇಯಿಕೆಯ ಹೊರತು ಕನ್ಯಾಪುರದಲ್ಲಿದ್ದ ಬೇರೆ ಯಾವ ನಾರಿಯೂ ತಿಳಿದಿರಲಿಲ್ಲ.
03292004a ತತಃ ಕಾಲೇನ ಸಾ ಗರ್ಭಂ ಸುಷುವೇ ವರವರ್ಣಿನೀ|
03292004c ಕನ್ಯೈವ ತಸ್ಯ ದೇವಸ್ಯ ಪ್ರಸಾದಾದಮರಪ್ರಭಂ||
ಅನಂತರ ಕಾಲಬಂದಾಗ ಆ ವರವರ್ಣಿನಿ ಕನ್ಯೆಯು ದೇವನ ಪ್ರಸಾದದಿಂದ ಅಮರಪ್ರಭೆಯ ಮಗುವಿಗೆ ಜನ್ಮವಿತ್ತಳು.
03292005a ತಥೈವ ಬದ್ಧಕವಚಂ ಕನಕೋಜ್ಜ್ವಲಕುಂಡಲಂ|
03292005c ಹರ್ಯಕ್ಷಂ ವೃಷಭಸ್ಕಂಧಂ ಯಥಾಸ್ಯ ಪಿತರಂ ತಥಾ||
ತಂದೆಯಂತೆ ಅವನೂ ಕೂಡ ಕವಚವನ್ನು ಕಟ್ಟಿ, ಚಿನ್ನದಿಂದ ಹೊಳೆಯುತ್ತಿರುವ ಕುಂಡಲಗಳನ್ನು ಧರಿಸಿ, ಹರಿಯ ಕಣ್ಣುಗಳುಳ್ಳವನಾಗಿ, ವೃಷಭಸ್ಕಂಧನಾಗಿದ್ದನು.
03292006a ಜಾತಮಾತ್ರಂ ಚ ತಂ ಗರ್ಭಂ ಧಾತ್ರ್ಯಾ ಸಮ್ಮಂತ್ರ್ಯ ಭಾಮಿನೀ|
03292006c ಮಂಜೂಷಾಯಾಮವದಧೇ ಸ್ವಾಸ್ತೀರ್ಣಾಯಾಂ ಸಮಂತತಃ||
ಹುಟ್ಟಿದ ತಕ್ಷಣವೇ ಆ ಧಾತ್ರಿಯ ಸಲಹೆಯಂತೆ ಭಾಮಿನಿಯು ಆ ಮಗುವನ್ನು ಎಲ್ಲಕಡೆಯಿಂದಲೂ ಚೆನ್ನಾಗಿ ಸುರಕ್ಷಿತವಾಗಿದ್ದ ಪೆಟ್ಟಿಗೆಯಲ್ಲಿ ಇಟ್ಟಳು.
03292007a ಮಧೂಚ್ಚಿಷ್ಟಸ್ಥಿತಾಯಾಂ ಸಾ ಸುಖಾಯಾಂ ರುದತೀ ತಥಾ|
03292007c ಶ್ಲಕ್ಷ್ಣಾಯಾಂ ಸುಪಿಧಾನಾಯಾಮಶ್ವನದ್ಯಾಮವಾಸೃಜತ್||
ಜೇನಿನ ಅಂಟನ್ನು ಹಚ್ಚಿ ಮುಚ್ಚಿದ್ದ, ಸುಖವಾದ ಮೆತ್ತನೆಯ ಹಾಸಿನ ಮೇಲೆ ಅಳುತ್ತಾ ಮಗುವನ್ನಿಟ್ಟು ಅಶ್ವನದಿಯಲ್ಲಿ ಬಿಟ್ಟಳು.
03292008a ಜಾನತೀ ಚಾಪ್ಯಕರ್ತವ್ಯಂ ಕನ್ಯಾಯಾ ಗರ್ಭಧಾರಣಂ|
03292008c ಪುತ್ರಸ್ನೇಹೇನ ರಾಜೇಂದ್ರ ಕರುಣಂ ಪರ್ಯದೇವಯತ್||
ರಾಜೇಂದ್ರ! ಕನ್ಯೆಯು ಗರ್ಭವನ್ನು ಧರಿಸುವುದು ತಪ್ಪೆಂದು ತಿಳಿದಿದ್ದರೂ ಅವಳು ಪುತ್ರಸ್ನೇಹದಿಂದ ಕರುಣ ರೋದನವನ್ನು ಮಾಡಿದಳು.
03292009a ಸಮುತ್ಸೃಜಂತೀ ಮಂಜೂಷಾಮಶ್ವನದ್ಯಾಸ್ತದಾ ಜಲೇ|
03292009c ಉವಾಚ ರುದತೀ ಕುಂತೀ ಯಾನಿ ವಾಕ್ಯಾನಿ ತಚ್ಚೃಣು||
ಆ ಪೆಟ್ಟಿಗೆಯನ್ನು ಅಶ್ವನದಿಯ ನೀರಿನಲ್ಲಿ ಬಿಡುವಾಗ ಅಳುತ್ತಿರುವ ಕುಂತಿಯು ಏನು ಹೇಳಿದಳೆನ್ನುವುದನ್ನು ಕೇಳು.
03292010a ಸ್ವಸ್ತಿ ತೇಽಸ್ತ್ವಾಂತರಿಕ್ಷೇಭ್ಯಃ ಪಾರ್ಥಿವೇಭ್ಯಶ್ಚ ಪುತ್ರಕ|
03292010c ದಿವ್ಯೇಭ್ಯಶ್ಚೈವ ಭೂತೇಭ್ಯಸ್ತಥಾ ತೋಯಚರಾಶ್ಚ ಯೇ||
“ಪುತ್ರಕ! ನೀನು ಅಂತರಿಕ್ಷದ, ಭೂಮಿಯ, ಮತ್ತು ದಿವಿಯ ಭೂತಗಳಿಂದ ಹಾಗೆಯೇ ನೀರಿನಲ್ಲಿ ಜಲಿಸುವುವರಿಂದ ರಕ್ಷಿತನಾಗಿರು.
03292011a ಶಿವಾಸ್ತೇ ಸಂತು ಪಂಥಾನೋ ಮಾ ಚ ತೇ ಪರಿಪಂಥಿನಃ|
03292011c ಆಗಮಾಶ್ಚ ತಥಾ ಪುತ್ರ ಭವಂತ್ವದ್ರೋಹಚೇತಸಃ||
ನಿನ್ನ ಮಾರ್ಗವು ಮಂಗಳಕರವಾಗಿರಲಿ. ಅಡ್ಡಿಯಾಗದಿರಲಿ. ಮತ್ತು ಪುತ್ರ! ನಿನ್ನನ್ನು ಎದುರಿಸುವವರು ದ್ರೋಹಚೇತಸರಾಗದಿರಲಿ.
03292012a ಪಾತು ತ್ವಾಂ ವರುಣೋ ರಾಜಾ ಸಲಿಲೇ ಸಲಿಲೇಶ್ವರಃ|
03292012c ಅಂತರಿಕ್ಷೇಽಂತರಿಕ್ಷಸ್ಥಃ ಪವನಃ ಸರ್ವಗಸ್ತಥಾ||
ರಾಜ ಸಲಿಲಲೇಶ್ವರ ವರುಣನು ನೀರಿನಲ್ಲಿ ನಿನ್ನನ್ನು ರಕ್ಷಿಸಲಿ. ಅಂತರಿಕ್ಷದಲ್ಲಿ ಅಂತರಿಕ್ಷದಲ್ಲಿರುವ ವಾಯುವು ಸದಾ ರಕ್ಷಿಸಲಿ.
03292013a ಪಿತಾ ತ್ವಾಂ ಪಾತು ಸರ್ವತ್ರ ತಪನಸ್ತಪತಾಂ ವರಃ|
03292013c ಯೇನ ದತ್ತೋಽಸಿ ಮೇ ಪುತ್ರ ದಿವ್ಯೇನ ವಿಧಿನಾ ಕಿಲ||
ಪುತ್ರ! ದೇವವಿಧಿಯಲ್ಲಿ ಯಾರಿಂದ ನಿನ್ನನ್ನು ಪಡೆದಿದ್ದೇನೋ ಆ ತಪಸ್ವಿಗಳಲ್ಲಿ ಶ್ರೇಷ್ಠ ನಿನ್ನ ಪಿತ ತಪನನು ಎಲ್ಲೆಡೆಯಲ್ಲಿಯೂ ನಿನ್ನನ್ನು ರಕ್ಷಿಸಲಿ.
03292014a ಆದಿತ್ಯಾ ವಸವೋ ರುದ್ರಾಃ ಸಾಧ್ಯಾ ವಿಶ್ವೇ ಚ ದೇವತಾಃ|
03292014c ಮರುತಶ್ಚ ಸಹೇಂದ್ರೇಣ ದಿಶಶ್ಚ ಸದಿಗೀಶ್ವರಾಃ||
03292015a ರಕ್ಷಂತು ತ್ವಾಂ ಸುರಾಃ ಸರ್ವೇ ಸಮೇಷು ವಿಷಮೇಷು ಚ|
03292015c ವೇತ್ಸ್ಯಾಮಿ ತ್ವಾಂ ವಿದೇಶೇಽಪಿ ಕವಚೇನೋಪಸೂಚಿತಂ||
ಆದಿತ್ಯರು, ವಸುಗಳು, ರುದ್ರರು, ಸಾಧ್ಯರು, ವಿಶ್ವೇದೇವರು, ಮರುತರು, ಇಂದ್ರನೊಂದಿಗೆ ದಿಕ್ಕುಗಳೂ, ದಿಕ್ಕುಗಳ ಈಶ್ವರರೂ ಮತ್ತು ಎಲ್ಲ ಸುರರೂ ನಿನ್ನ ಸಮ ಮತ್ತು ವಿಷಮಗಳಲ್ಲಿ ರಕ್ಷಿಸಲಿ. ನಿನ್ನ ಕವಚಗಳ ಸೂಚನೆಯಿಂದ ನಿನ್ನನ್ನು ನಾನು ವಿದೇಶದಲ್ಲಿಯೂ ಗುರುತಿಸುತ್ತೇನೆ.
03292016a ಧನ್ಯಸ್ತೇ ಪುತ್ರ ಜನಕೋ ದೇವೋ ಭಾನುರ್ವಿಭಾವಸುಃ|
03292016c ಯಸ್ತ್ವಾಂ ದ್ರಕ್ಷ್ಯತಿ ದಿವ್ಯೇನ ಚಕ್ಷುಷಾ ವಾಹಿನೀಗತಂ||
ಪುತ್ರ! ನಿನ್ನ ತಂದೆ ದೇವ ಭಾನು ವಿಭಾವಸುವೇ ಧನ್ಯ! ಏಕೆಂದರೆ ಅವನು ನೀನು ನದಿಯಲ್ಲಿ ಹೋಗುತ್ತಿರುವುದನ್ನು ತನ್ನ ದಿವ್ಯದೃಷ್ಠಿಯಿಂದ ಕಾಣಬಹುದು.
03292017a ಧನ್ಯಾ ಸಾ ಪ್ರಮದಾ ಯಾ ತ್ವಾಂ ಪುತ್ರತ್ವೇ ಕಲ್ಪಯಿಷ್ಯತಿ|
03292017c ಯಸ್ಯಾಸ್ತ್ವಂ ತೃಷಿತಃ ಪುತ್ರ ಸ್ತನಂ ಪಾಸ್ಯಸಿ ದೇವಜ||
ದೇವಜ! ನಿನ್ನನ್ನು ಪುತ್ರನೆಂದು ಕಲ್ಪಿಸಿಕೊಳ್ಳುವ ಆ ತಾಯಿಯು ಧನ್ಯೆ. ಏಕೆಂದರೆ ಅವಳ ಮೊಲೆಯಿಂದ ಪುತ್ರ! ನೀನು ಬಾಯಾರಿಕೆಯಿಂದ ಹಾಲನ್ನು ಕುಡಿಯುತ್ತೀಯೆ.
03292018a ಕೋ ನು ಸ್ವಪ್ನಸ್ತಯಾ ದೃಷ್ಟೋ ಯಾ ತ್ವಾಮಾದಿತ್ಯವರ್ಚಸಂ|
03292018c ದಿವ್ಯವರ್ಮಸಮಾಯುಕ್ತಂ ದಿವ್ಯಕುಂಡಲಭೂಷಿತಂ||
03292019a ಪದ್ಮಾಯತವಿಶಾಲಾಕ್ಷಂ ಪದ್ಮತಾಮ್ರತಲೋಜ್ಜ್ವಲಂ|
03292019c ಸುಲಲಾಟಂ ಸುಕೇಶಾಂತಂ ಪುತ್ರತ್ವೇ ಕಲ್ಪಯಿಷ್ಯತಿ||
ಪುತ್ರ! ಆದಿತ್ಯವರ್ಚಸನಾದ, ದಿವ್ಯ ಕವಚಗಳನ್ನು ಧರಿಸಿದ, ದಿವ್ಯಕುಂಡಲಗಳಿಂದ ಭೂಷಿತನಾದ, ಪದ್ಮದ ಎಸಳುಗಳಂತೆ ವಿಶಾಲ ಆಯತ ಕಣ್ಣುಗಳನ್ನು ಪಡೆದ, ತಾಮ್ರದಂತೆ ಪ್ರಜ್ವಲಿಸುವ ಅಂಗೈವುಳ್ಳ, ಸುಂದರ ಹಣೆಯ, ಸುಂದರ ಕೂದಲಿನ ನಿನ್ನನ್ನು ನೋಡಿ ಅವಳು ಏನು ಸ್ವಪ್ನವನ್ನು ಕಲ್ಪಿಸಿಕೊಂಡಾಳು?
03292020a ಧನ್ಯಾ ದ್ರಕ್ಷ್ಯಂತಿ ಪುತ್ರ ತ್ವಾಂ ಭೂಮೌ ಸಂಸರ್ಪಮಾಣಕಂ|
03292020c ಅವ್ಯಕ್ತಕಲವಾಕ್ಯಾನಿ ವದಂತಂ ರೇಣುಗುಣ್ಠಿತಂ||
ಪುತ್ರ! ನೆಲದ ಮೇಲೆ ಅಂಬೆಗಾಲಿಕ್ಕುತ್ತಾ, ಅವ್ಯಕ್ತವಾದ ಸಿಹಿಮಾತುಗಳನ್ನಾಡುತ್ತಾ, ಧೂಳಿನಿಂದ ತುಂಬಿದ ನಿನ್ನನ್ನು ನೋಡುವವರೇ ಧನ್ಯರು.
03292021a ಧನ್ಯಾ ದ್ರಕ್ಷ್ಯಂತಿ ಪುತ್ರ ತ್ವಾಂ ಪುನರ್ಯೌವನಗೇ ಮುಖೇ|
03292021c ಹಿಮವದ್ವನಸಂಭೂತಂ ಸಿಂಹಂ ಕೇಸರಿಣಂ ಯಥಾ||
ಪುತ್ರ! ಹಿಮವತ್ ವನದಲ್ಲಿ ಹುಟ್ಟಿದ ಸಿಂಹ ಕೇಸರಿಯಂತೆ ಯೌವನದ ಹೊಸ್ತಿಲಲ್ಲಿರುವ ನಿನ್ನನ್ನು ಪುನಃ ನೋಡುವವರೇ ಧನ್ಯರು.”
03292022a ಏವಂ ಬಹುವಿಧಂ ರಾಜನ್ವಿಲಪ್ಯ ಕರುಣಂ ಪೃಥಾ|
03292022c ಅವಾಸೃಜತ ಮಂಜೂಷಾಮಶ್ವನದ್ಯಾಸ್ತದಾ ಜಲೇ||
ರಾಜನ್! ಈರೀತಿ ಬಹುವಿಧದಲ್ಲಿ ವಿಲಪಿಸುತ್ತಾ ಕರುಣಿ ಪೃಥೆಯು ಪೆಟ್ಟಿಗೆಯನ್ನು ಅಶ್ವನದಿಯ ನೀರಿನಲ್ಲಿ ತೇಲಿಸಿ ಬಿಟ್ಟಳು.
03292023a ರುದತೀ ಪುತ್ರಶೋಕಾರ್ತಾ ನಿಶೀಥೇ ಕಮಲೇಕ್ಷಣಾ|
03292023c ಧಾತ್ರ್ಯಾ ಸಹ ಪೃಥಾ ರಾಜನ್ಪುತ್ರದರ್ಶನಲಾಲಸಾ||
ರಾಜನ್! ಪುತ್ರಶೋಕಾರ್ತಳಾಗಿ ಮಗನನ್ನು ನೋಡುವ ಲಾಲಸೆಯಿಂದ ಆ ಕಮಲೇಕ್ಷಣೆ ಪೃಥೆಯು ಧಾತ್ರಿಯೊಡನೆ ಕಣ್ಣೀರಿಟ್ಟಳು.
03292024a ವಿಸರ್ಜಯಿತ್ವಾ ಮಂಜೂಷಾಂ ಸಂಬೋಧನಭಯಾತ್ಪಿತುಃ|
03292024c ವಿವೇಶ ರಾಜಭವನಂ ಪುನಃ ಶೋಕಾತುರಾ ತತಃ||
ಪೆಟ್ಟಿಗೆಯನ್ನು ವಿಸರ್ಜಿಸಿ ಶೋಕಾತುರದಿಂದ ಮತ್ತು ತಂದೆಯನ್ನು ಎಬ್ಬಿಸುವ ಭಯದಿಂದ ಪುನಃ ರಾಜಭವನವನ್ನು ಪ್ರವೇಶಿಸಿದಳು.
03292025a ಮಂಜೂಷಾ ತ್ವಶ್ವನದ್ಯಾಃ ಸಾ ಯಯೌ ಚರ್ಮಣ್ವತೀಂ ನದೀಂ|
03292025c ಚರ್ಮಣ್ವತ್ಯಾಶ್ಚ ಯಮುನಾಂ ತತೋ ಗಂಗಾಂ ಜಗಾಮ ಹ||
ಅಶ್ವನದಿಯಿಂದ ಆ ಮಂಜೂಷವು ಚರ್ಮಣ್ವತೀ ನದಿಗೆ ಬಂದಿತು. ಚರ್ಮಣ್ವತಿಯಿಂದ ಯಮುನೆಗೆ ಮತ್ತು ಅಲ್ಲಿಂದ ಗಂಗೆಗೆ ಹೋಯಿತು.
03292026a ಗಂಗಾಯಾಃ ಸೂತವಿಷಯಂ ಚಂಪಾಮಭ್ಯಾಯಯೌ ಪುರೀಂ|
03292026c ಸ ಮಂಜೂಷಾಗತೋ ಗರ್ಭಸ್ತರಂಗೈರುಹ್ಯಮಾನಕಃ||
03292027a ಅಮೃತಾದುತ್ಥಿತಂ ದಿವ್ಯಂ ತತ್ತು ವರ್ಮ ಸಕುಂಡಲಂ|
03292027c ಧಾರಯಾಮಾಸ ತಂ ಗರ್ಭಂ ದೈವಂ ಚ ವಿಧಿನಿರ್ಮಿತಂ||
ಗಂಗೆಯಲ್ಲಿ ಅದು ಸೂತರ ರಾಷ್ಟ್ರ ಚಂಪಾಪುರಿಗೆ ಬಂದಿತು. ತರಂಗಗಳಿಂದ ಎಳೆಯಲ್ಪಟ್ಟ ಆ ಮಂಜೂಷದಲ್ಲಿದ್ದ ಮಗುವು ಅಮೃತದಿಂದ ಮೇಲೆದ್ದ ದಿವ್ಯ ಕವಚವನ್ನೂ ಕುಂಡಲಗಳನ್ನೂ ಧರಿಸಿತ್ತು. ಆ ಮಗುವು ವಿಧಿನಿರ್ಮಿತ ದೈವವನ್ನೂ ಧರಿಸಿತ್ತು.[1]”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಕರ್ಣಪರಿತ್ಯಾಗೇ ದ್ವಿನವತ್ಯಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಕರ್ಣಪರಿತ್ಯಾಗದಲ್ಲಿ ಇನ್ನೂರಾತೊಂಭತ್ತೆರಡನೆಯ ಅಧ್ಯಾಯವು.
[1] ಕುಂತಿಯ ಮಾತುಗಳಲ್ಲಿಯೇ ಕರ್ಣಜನ್ಮ ಕಥನವು ಆಶ್ರಮವಾಸಿಕ ಪರ್ವದ ಅಧ್ಯಾಯ ೩೮ರಲ್ಲಿ ಬರುತ್ತದೆ.