ಆರಣ್ಯಕ ಪರ್ವ: ಕುಂಡಲಾಹರಣ ಪರ್ವ
೨೯೦
ಮಂತ್ರಗಳಲ್ಲಿ ಕುತೂಹಲವುಂಟಾಗಲು ಕನ್ಯೆ ಕುಂತಿಯು ಸೂರ್ಯನನ್ನು ಕರೆಯಲು ಅವನ ಆಗಮನ (೧-೯). ಅವನನ್ನು ನೋಡಿ ಕುಂತಿಯು ಹೆದರಿ ಹೋಗೆಂದು ಹೇಳಲು ಸೂರ್ಯನು ಕವಚ-ಕುಂಡಲಗಳನ್ನು ಧರಿಸಿದ ವೀರ್ಯವಂತ ಪುತ್ರನನ್ನು ನನ್ನಿಂದ ಪಡೆಯಬೇಕೆಂಬ ನಿನ್ನ ಇಚ್ಛೆಯನ್ನು ಪೂರೈಸದೇ ನಾನು ಹೋಗಲಾರೆ ಎನ್ನುವುದು; ಅವಳಲ್ಲಿ ಶಾಪದ ಭಯವನ್ನು ಹುಟ್ಟಿಸುವುದು (೧೦-೨೬).
03290001 ವೈಶಂಪಾಯನ ಉವಾಚ|
03290001a ಗತೇ ತಸ್ಮಿನ್ದ್ವಿಜಶ್ರೇಷ್ಠೇ ಕಸ್ಮಿಂಶ್ಚಿತ್ಕಾಲಪರ್ಯಯೇ|
03290001c ಚಿಂತಯಾಮಾಸ ಸಾ ಕನ್ಯಾ ಮಂತ್ರಗ್ರಾಮಬಲಾಬಲಂ||
ವೈಶಂಪಾಯನನು ಹೇಳಿದನು: “ಆ ದ್ವಿಜಶ್ರೇಷ್ಠನು ಹೊರಟುಹೋಗಿ ಕೆಲವು ಸಮಯವು ಕಳೆಯಿತು. ಆ ಕನ್ಯೆಯು ಮಂತ್ರಗುಚ್ಛಗಳ ಬಲಾಬಲದ ಕುರಿತು ಚಿಂತಿಸತೊಡಗಿದಳು.
03290002a ಅಯಂ ವೈ ಕೀದೃಶಸ್ತೇನ ಮಮ ದತ್ತೋ ಮಹಾತ್ಮನಾ|
03290002c ಮಂತ್ರಗ್ರಾಮೋ ಬಲಂ ತಸ್ಯ ಜ್ಞಾಸ್ಯೇ ನಾತಿಚಿರಾದಿವ||
“ಆ ಮಹಾತ್ಮನು ನನಗೆ ಕೊಟ್ಟಿರುವ ಈ ಮಂತ್ರಗ್ರಾಮಗಳು ಹೇಗಿವೆ? ಅತಿಬೇಗನೇ ನಾನು ಅದರ ಬಲವೇನೆಂದು ತಿಳಿಯುತ್ತೇನೆ.”
03290003a ಏವಂ ಸಂಚಿಂತಯಂತೀ ಸಾ ದದರ್ಶರ್ತುಂ ಯದೃಚ್ಚಯಾ|
03290003c ವ್ರೀಡಿತಾ ಸಾಭವದ್ಬಾಲಾ ಕನ್ಯಾಭಾವೇ ರಜಸ್ವಲಾ||
ಹೀಗೆ ಯೋಚಿಸುತ್ತಿರಲು ಆ ಬಾಲಕಿಯು ತಾನು ರಜಸ್ವಲೆಯಾದುದನ್ನು ಕಂಡಳು ಮತ್ತು ಕನ್ಯಾಭಾವದಿಂದ ನಾಚಿಕೊಂಡಳು.
03290004a ಅಥೋದ್ಯಂತಂ ಸಹಸ್ರಾಂಶುಂ ಪೃಥಾ ದೀಪ್ತಂ ದದರ್ಶ ಹ|
03290004c ನ ತತರ್ಪ ಚ ರೂಪೇಣ ಭಾನೋಃ ಸಂಧ್ಯಾಗತಸ್ಯ ಸಾ||
ಆಗ ಉದಯಿಸಿ ಬೆಳಗುತ್ತಿದ್ದ ಸಹಸ್ರಾಂಶುವನ್ನು ಪೃಥೆಯು ನೋಡಿದಳು. ಆ ಸಂಧ್ಯೆಯಲ್ಲಿ ಆಗಮಿಸುತ್ತಿದ್ದ ಆ ಭಾನುವಿನ ರೂಪವನ್ನು ನೋಡಿ ತೃಪ್ತಳಾಗಲಿಲ್ಲ.
03290005a ತಸ್ಯಾ ದೃಷ್ಟಿರಭೂದ್ದಿವ್ಯಾ ಸಾಪಶ್ಯದ್ದಿವ್ಯದರ್ಶನಂ|
03290005c ಆಮುಕ್ತಕವಚಂ ದೇವಂ ಕುಂಡಲಾಭ್ಯಾಂ ವಿಭೂಷಿತಂ||
ಅವಳ ದೃಷ್ಠಿಯು ದಿವ್ಯವಾಯಿತು ಮತ್ತು ಅವಳು ಕವಚಗಳಿಂದ ಮುಚ್ಚಿದ, ಕುಂಡಲಗಳಿಂದ ವಿಭೂಷಿತವಾದ ಆ ದೇವನ ದಿವ್ಯದರ್ಶನವನ್ನು ಕಂಡಳು.
03290006a ತಸ್ಯಾಃ ಕೌತೂಹಲಂ ತ್ವಾಸೀನ್ಮಂತ್ರಂ ಪ್ರತಿ ನರಾಧಿಪ|
03290006c ಆಹ್ವಾನಮಕರೋತ್ಸಾಥ ತಸ್ಯ ದೇವಸ್ಯ ಭಾಮಿನೀ||
ನರಾಧಿಪ! ಮಂತ್ರಗಳ ಕುರಿತು ಅವಳಲ್ಲಿ ಕುತೂಹಲವುಂಟಾಯಿತು. ಆಗ ಭಾಮಿನಿಯು ಅದರಿಂದ ಆ ದೇವನನ್ನು ಆಹ್ವಾನಿಸಿದಳು.
03290007a ಪ್ರಾಣಾನುಪಸ್ಪೃಶ್ಯ ತದಾ ಆಜುಹಾವ ದಿವಾಕರಂ|
03290007c ಆಜಗಾಮ ತತೋ ರಾಜನ್ಸ್ತ್ವರಮಾಣೋ ದಿವಾಕರಃ||
ರಾಜನ್! ಅವಳು ಆಗ ಉಸಿರನ್ನು ಉಪಸ್ಪರಿಸಿ ದಿವಾಕರನನ್ನು ಕರೆದಳು. ಆಗ ಅವಸರದಿಂದ ದಿವಾಕರನು ಬಂದನು.
03290008a ಮಧುಪಿಂಗೋ ಮಹಾಬಾಹುಃ ಕಂಬುಗ್ರೀವೋ ಹಸನ್ನಿವ|
03290008c ಅಂಗದೀ ಬದ್ಧಮುಕುಟೋ ದಿಶಃ ಪ್ರಜ್ವಾಲಯನ್ನಿವ||
03290009a ಯೋಗಾತ್ಕೃತ್ವಾ ದ್ವಿಧಾತ್ಮಾನಮಾಜಗಾಮ ತತಾಪ ಚ|
ಮಧುವಿನ ಬಣ್ಣದ, ಮಹಾಬಾಹು, ಕಂಬುಗ್ರೀವ, ನಸುನಗುತ್ತಿರುವ, ಅಂಗದೀ, ಬದ್ಧಮುಕುಟ, ದಿಶಗಳನ್ನು ಪ್ರಜ್ವಲಿಸುತ್ತಿರುವಂತೆ ಯೋಗದಿಂದ ತನ್ನನ್ನು ಎರಡನ್ನಾಗಿ ಮಾಡಿಕೊಂಡು ಇಲ್ಲಿಗೂ ಬಂದನು ಮತ್ತು ಅಲ್ಲಿಯೂ ಸುಡುತ್ತಿದ್ದನು.
03290009c ಆಬಭಾಷೇ ತತಃ ಕುಂತೀಂ ಸಾಮ್ನಾ ಪರಮವಲ್ಗುನಾ||
03290010a ಆಗತೋಽಸ್ಮಿ ವಶಂ ಭದ್ರೇ ತವ ಮಂತ್ರಬಲಾತ್ಕೃತಃ|
03290010c ಕಿಂ ಕರೋಮ್ಯವಶೋ ರಾಜ್ಞಿ ಬ್ರೂಹಿ ಕರ್ತಾ ತದಸ್ಮಿ ತೇ||
ಆಗ ಅವನು ಕುಂತಿಗೆ ಈ ಪ್ರೀತಿಯುಕ್ತ ಪರಮ ಸ್ವಾದು ಮಾತುಗಳಿಂದ ಹೇಳಿದನು: “ಭದ್ರೇ! ಮಂತ್ರದ ಬಲವು ಮಾಡಿದಂತೆ ನಿನ್ನ ವಶದಲ್ಲಿ ಬಂದುಬಿಟ್ಟಿದ್ದೇನೆ. ರಾಣಿ! ಏನು ಮಾಡಲಿ ಹೇಳು. ಅವಶನಾಗಿ ನೀನು ಹೇಳಿದುದನ್ನು ಮಾಡುತ್ತೇನೆ.”
03290011 ಕುಂತ್ಯುವಾಚ|
03290011a ಗಮ್ಯತಾಂ ಭಗವನ್ಸ್ತತ್ರ ಯತೋಽಸಿ ಸಮುಪಾಗತಃ|
03290011c ಕೌತೂಹಲಾತ್ಸಮಾಹೂತಃ ಪ್ರಸೀದ ಭಗವನ್ನಿತಿ||
ಕುಂತಿಯು ಹೇಳಿದಳು: “ಭಗವನ್! ನೀನು ಎಲ್ಲಿಂದ ಬಂದಿದ್ದೀಯೋ ಅಲ್ಲಿಗೆ ಹೊರಟುಹೋಗು! ಪ್ರಸೀದನಾಗು ಭಗವನ್! ಕೇವಲ ಕುತೂಹಲದಿಂದ ನಿನ್ನನ್ನು ಕರೆಯಿಸಿದೆ.”
03290012 ಸೂರ್ಯ ಉವಾಚ|
03290012a ಗಮಿಷ್ಯೇಽಹಂ ಯಥಾ ಮಾಂ ತ್ವಂ ಬ್ರವೀಷಿ ತನುಮಧ್ಯಮೇ|
03290012c ನ ತು ದೇವಂ ಸಮಾಹೂಯ ನ್ಯಾಯ್ಯಂ ಪ್ರೇಷಯಿತುಂ ವೃಥಾ||
ಸೂರ್ಯನು ಹೇಳಿದನು: “ತನುಮಧ್ಯಮೇ! ನೀನು ಹೇಳಿದಂತೆ ನಾನು ಹೋಗುತ್ತೇನೆ. ಆದರೆ ದೇವನನ್ನು ಕರೆದು ವೃಥಾ ಹಿಂದೆ ಕಳುಹಿಸುವುದು ನ್ಯಾಯವಲ್ಲ.
03290013a ತವಾಭಿಸಂಧಿಃ ಸುಭಗೇ ಸೂರ್ಯಾತ್ಪುತ್ರೋ ಭವೇದಿತಿ|
03290013c ವೀರ್ಯೇಣಾಪ್ರತಿಮೋ ಲೋಕೇ ಕವಚೀ ಕುಂಡಲೀತಿ ಚ||
ಸುಭಗೇ! ವೀರ್ಯದಲ್ಲಿ ಲೋಕದಲ್ಲೇ ಅಪ್ರತಿಮನಾದ, ಕವಚ-ಕುಂಡಲಗಳನ್ನು ಧರಿಸಿದ ಮಗನು ಸೂರ್ಯನಿಂದ ಪಡೆಯಬೇಕೆಂಬುದು ನಿನ್ನ ಇಚ್ಛೆಯಾಗಿತ್ತು.
03290014a ಸಾ ತ್ವಮಾತ್ಮಪ್ರದಾನಂ ವೈ ಕುರುಷ್ವ ಗಜಗಾಮಿನಿ|
03290014c ಉತ್ಪತ್ಸ್ಯತಿ ಹಿ ಪುತ್ರಸ್ತೇ ಯಥಾಸಂಕಲ್ಪಮಂಗನೇ||
ಆದುದರಿಂದ ಗಜಗಾಮಿನೀ! ನಿನ್ನನ್ನು ನನಗೆ ಕೊಡು. ಅಂಗನೇ! ನೀನು ಸಂಕಲ್ಪಿಸಿದ್ದಂತಹ ಮಗನನ್ನು ನಿನಗೆ ಕೊಡುತ್ತೇನೆ.
03290015a ಅಥ ಗಚ್ಚಾಮ್ಯಹಂ ಭದ್ರೇ ತ್ವಯಾಸಂಗಮ್ಯ ಸುಸ್ಮಿತೇ|
03290015c ಶಪ್ಸ್ಯಾಮಿ ತ್ವಾಮಹಂ ಕ್ರುದ್ಧೋ ಬ್ರಾಹ್ಮಣಂ ಪಿತರಂ ಚ ತೇ||
ಭದ್ರೇ! ಸುಸ್ಮಿತೇ! ಅಥವಾ ನಾನು ನಿನ್ನನ್ನು ಕೂಡದೇ ಹೋಗುತ್ತೇನೆ. ಮತ್ತು ನಾನು ಕೃದ್ಧನಾಗಿ ನಿನ್ನನ್ನೂ, ಆ ಬ್ರಾಹ್ಮಣನನ್ನೂ, ನಿನ್ನ ತಂದೆಯನ್ನೂ ಶಪಿಸುತ್ತೇನೆ.
03290016a ತ್ವತ್ಕೃತೇ ತಾನ್ಪ್ರಧಕ್ಷ್ಯಾಮಿ ಸರ್ವಾನಪಿ ನ ಸಂಶಯಃ|
03290016c ಪಿತರಂ ಚೈವ ತೇ ಮೂಢಂ ಯೋ ನ ವೇತ್ತಿ ತವಾನಯಂ||
03290017a ತಸ್ಯ ಚ ಬ್ರಾಹ್ಮಣಸ್ಯಾದ್ಯ ಯೋಽಸೌ ಮಂತ್ರಮದಾತ್ತವ|
03290017c ಶೀಲವೃತ್ತಮವಿಜ್ಞಾಯ ಧಾಸ್ಯಾಮಿ ವಿನಯಂ ಪರಂ||
ನಿನ್ನ ಕಾರಣದಿಂದಾಗಿ ಅವರೆಲ್ಲರನ್ನೂ ಸುಟ್ಟುಬಿಡುತ್ತೇನೆ. ಇದರಲ್ಲಿ ಸಂಶಯವಿಲ್ಲ. ನಿನ್ನ ತಪ್ಪನ್ನು ತಿಳಿಯದ ಆ ಮೂಢ ನಿನ್ನ ತಂದೆಯನ್ನೂ, ನಿನ್ನ ಶೀಲ-ನಡತೆಗಳನ್ನು ತಿಳಿಯದೇ ನಿನಗೆ ಮಂತ್ರಗಳನ್ನಿತ್ತ ಆ ಪರಮ ವಿನಯ ಬ್ರಾಹ್ಮಣನನ್ನು ಕೂಡ ಸುಡುತ್ತೇನೆ.
03290018a ಏತೇ ಹಿ ವಿಬುಧಾಃ ಸರ್ವೇ ಪುರಂದರಮುಖಾ ದಿವಿ|
03290018c ತ್ವಯಾ ಪ್ರಲಬ್ಧಂ ಪಶ್ಯಂತಿ ಸ್ಮಯಂತ ಇವ ಭಾಮಿನಿ||
03290019a ಪಶ್ಯ ಚೈನಾನ್ಸುರಗಣಾನ್ದಿವ್ಯಂ ಚಕ್ಷುರಿದಂ ಹಿ ತೇ|
03290019c ಪೂರ್ವಮೇವ ಮಯಾ ದತ್ತಂ ದೃಷ್ಟವತ್ಯಸಿ ಯೇನ ಮಾಂ||
ಭಾಮಿನೀ! ದಿವಿಯಲ್ಲಿ ಪುರಂದರನೇ ಮೊದಲಾದ ದೇವತೆಗಳು ನೀನು ನನಗೆ ಮೋಸಮಾಡಿದುದನ್ನು ಕಂಡು ನಗುತ್ತಿದ್ದಾರೆ. ನೀನು ನನ್ನನ್ನು ನೋಡಬಹುದೆಂದು ನಾನು ನಿನಗೆ ಮೊದಲು ಕೊಟ್ಟಿದ್ದ ದಿವ್ಯದೃಷ್ಠಿಯಿಂದ ಆ ಸುರಗಣಗಳನ್ನು ನೋಡು.””
03290020 ವೈಶಂಪಾಯನ ಉವಾಚ|
03290020a ತತೋಽಪಶ್ಯತ್ತ್ರಿದಶಾನ್ರಾಜಪುತ್ರೀ|
ಸರ್ವಾನೇವ ಸ್ವೇಷು ಧಿಷ್ಣ್ಯೇಷು ಖಸ್ಥಾನ್|
03290020c ಪ್ರಭಾಸಂತಂ ಭಾನುಮಂತಂ ಮಹಾಂತಂ|
ಯಥಾದಿತ್ಯಂ ರೋಚಮಾನಂ ತಥೈವ||
ವೈಶಂಪಾಯನನು ಹೇಳಿದನು: “ಆಗ ರಾಜಪುತ್ರಿಯು ಪ್ರಭಾಸಿಸುತ್ತಿರುವ ಭಾನುಮಂತ ಮಹಾಂತ ಸುಂದರ ಆದಿತ್ಯನನ್ನು ಹೇಗೋ ಹಾಗೆ ಅವರವರ ದಿಕ್ಕುಗಳಲ್ಲಿ ನಿಂತಿರುವ ಆ ಎಲ್ಲ ತ್ರಿದಶರನ್ನು ನೋಡಿದಳು.
03290021a ಸಾ ತಾನ್ದೃಷ್ಟ್ವಾ ವ್ರೀಡಮಾನೇವ ಬಾಲಾ|
ಸೂರ್ಯಂ ದೇವೀ ವಚನಂ ಪ್ರಾಹ ಭೀತಾ|
03290021c ಗಚ್ಚ ತ್ವಂ ವೈ ಗೋಪತೇ ಸ್ವಂ ವಿಮಾನಂ|
ಕನ್ಯಾಭಾವಾದ್ದುಃಖ ಏಷೋಪಚಾರಃ||
ಅವರೆಲ್ಲರನ್ನೂ ನೋಡಿ ನಾಚಿದ ಆ ದೇವಿ ಬಾಲಕಿಯು ಭೀತಳಾಗಿ ಸೂರ್ಯನಿಗೆ ಹೇಳಿದಳು: “ಗೋಪತೇ! ನಿನ್ನ ವಿಮಾನದಲ್ಲಿ ನೀನು ಹೊರಟುಹೋಗು. ನಿನ್ನ ಈ ಉಪಚಾರವು ಕನ್ಯಾಭಾವಕ್ಕೆ ದುಃಖವನ್ನು ತರುತ್ತಿದೆ.
03290022a ಪಿತಾ ಮಾತಾ ಗುರವಶ್ಚೈವ ಯೇಽನ್ಯೇ|
ದೇಹಸ್ಯಾಸ್ಯ ಪ್ರಭವಂತಿ ಪ್ರದಾನೇ|
03290022c ನಾಹಂ ಧರ್ಮಂ ಲೋಪಯಿಷ್ಯಾಮಿ ಲೋಕೇ|
ಸ್ತ್ರೀಣಾಂ ವೃತ್ತಂ ಪೂಜ್ಯತೇ ದೇಹರಕ್ಷಾ||
ತಂದೆ, ತಾಯಿ, ಮತ್ತು ಅನ್ಯ ಹಿರಿಯರು ಈ ದೇಹವನ್ನು ಕೊಡಲು ಶಕ್ತರಾಗಿದ್ದಾರೆ. ನಾನು ಲೋಕದಲ್ಲಿ ಧರ್ಮಲೋಪವನ್ನು ಮಾಡುವುದಿಲ್ಲ. ದೇಹವನ್ನು ರಕ್ಷಿಸಿಕೊಳ್ಳುವುದು ಸ್ತ್ರೀಯರ ಪೂಜನೀಯ ನಡತೆ.
03290023a ಮಯಾ ಮಂತ್ರಬಲಂ ಜ್ಞಾತುಮಾಹೂತಸ್ತ್ವಂ ವಿಭಾವಸೋ|
03290023c ಬಾಲ್ಯಾದ್ಬಾಲೇತಿ ಕೃತ್ವಾ ತತ್ ಕ್ಷಂತುಮರ್ಹಸಿ ಮೇ ವಿಭೋ||
ವಿಭಾವಸೋ! ಮಂತ್ರಬಲವನ್ನು ತಿಳಿಯಲು ಬಾಲತ್ವದಿಂದ ನಿನ್ನನ್ನು ಕರೆದೆ. ಬಾಲಕಿಯು ಮಾಡಿದುದೆಂದು ವಿಭೋ! ನನ್ನನ್ನು ಕ್ಷಮಿಸಬೇಕು.”
03290024 ಸೂರ್ಯ ಉವಾಚ|
03290024a ಬಾಲೇತಿ ಕೃತ್ವಾನುನಯಂ ತವಾಹಂ|
ದದಾನಿ ನಾನ್ಯಾನುನಯಂ ಲಭೇತ|
03290024c ಆತ್ಮಪ್ರದಾನಂ ಕುರು ಕುಂತಿಕನ್ಯೇ|
ಶಾಂತಿಸ್ತವೈವಂ ಹಿ ಭವೇಚ್ಚ ಭೀರು||
ಸೂರ್ಯನು ಹೇಳಿದನು: “ಬಾಲಕಿಯೆಂದೇ ನಾನು ನಿನ್ನನ್ನು ಅನುನಯದಿಂದ ಕಾಣುತ್ತಿದ್ದೇನೆ. ಹಾಗಿಲ್ಲದಿದ್ದರೆ ನಾನು ಅನುನಯದಿಂದ ಇರಲು ಸಾಧ್ಯವೇ ಇರಲಿಲ್ಲ. ಕುಂತೀ! ಕನ್ಯೇ! ಆತ್ಮಪ್ರದಾನವನ್ನು ಮಾಡು. ಭೀರು! ಇದರಿಂದ ನಿನಗೂ ಶಾಂತಿಯೊದಗುತ್ತದೆ.
03290025a ನ ಚಾಪಿ ಯುಕ್ತಂ ಗಂತುಂ ಹಿ ಮಯಾ ಮಿಥ್ಯಾಕೃತೇನ ವೈ|
03290025c ಗಮಿಷ್ಯಾಮ್ಯನವದ್ಯಾಂಗಿ ಲೋಕೇ ಸಮವಹಾಸ್ಯತಾಂ|
03290025e ಸರ್ವೇಷಾಂ ವಿಬುಧಾನಾಂ ಚ ವಕ್ತವ್ಯಃ ಸ್ಯಾಮಹಂ ಶುಭೇ||
ನನ್ನನ್ನು ಸುಳ್ಳುಮಾಡಿಸಿಕೊಂಡು ಹೋಗುವುದು ಯುಕ್ತವಲ್ಲ. ಅನವದ್ಯಾಂಗೀ! ಹಾಗೆ ಹೋದರೆ ಲೋಕವು ನನ್ನನ್ನು ಅಪಹಾಸ್ಯಮಾಡುವುದಿಲ್ಲವೇ? ಶುಭೇ! ಎಲ್ಲ ದೇವತೆಗಳೂ ನನ್ನ ಕುರಿತು ಮಾತನಾಡಿಕೊಳ್ಳುತ್ತಾರೆ.
03290026a ಸಾ ತ್ವಂ ಮಯಾ ಸಮಾಗಚ್ಚ ಪುತ್ರಂ ಲಪ್ಸ್ಯಸಿ ಮಾದೃಶಂ|
03290026c ವಿಶಿಷ್ಟಾ ಸರ್ವಲೋಕೇಷು ಭವಿಷ್ಯಸಿ ಚ ಭಾಮಿನಿ||
ಭಾಮಿನೀ! ಆದುದರಿಂದ ನೀನು ನನ್ನೊಂದಿಗೆ ಸೇರಿ, ಸರ್ವಲೋಕದಲ್ಲಿಯೂ ವಿಶಿಷ್ಠನೆನಿಸಿಕೊಳ್ಳುವ ನನ್ನಂತಹ ಪುತ್ರನನ್ನು ಪಡೆ.””
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಾಹ್ವಾನೇ ನವತ್ಯಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಾಹ್ವಾನದಲ್ಲಿ ಇನ್ನೂರಾತೊಂಭತ್ತನೆಯ ಅಧ್ಯಾಯವು.