Aranyaka Parva: Chapter 289

ಆರಣ್ಯಕ ಪರ್ವ: ಕುಂಡಲಾಹರಣ ಪರ್ವ

೨೮೯

ಮುನಿವರನು ಕುಂತಿಯ ಸೇವೆಗೆ ಮೆಚ್ಚಿ ಬೇಕಾದ ದೇವತೆಯನ್ನು ವಶಮಾಡಿಸಿಕೊಳ್ಳಬಹುದಾದ ಮಂತ್ರಗುಚ್ಛಗಳನ್ನು ಕೊಟ್ಟು ಹೋದುದು (೧-೨೩).

03289001 ವೈಶಂಪಾಯನ ಉವಾಚ|

03289001a ಸಾ ತು ಕನ್ಯಾ ಮಹಾರಾಜ ಬ್ರಾಹ್ಮಣಂ ಸಂಶಿತವ್ರತಂ|

03289001c ತೋಷಯಾಮಾಸ ಶುದ್ಧೇನ ಮನಸಾ ಸಂಶಿತವ್ರತಾ||

ವೈಶಂಪಾಯನನು ಹೇಳಿದನು: “ಮಹಾರಾಜ! ಆ ಸಂಶಿತವ್ರತ ಕನ್ಯೆಯಾದರೋ ಸಂಶಿತವ್ರತ ಬ್ರಾಹ್ಮಣನನ್ನು ಶುದ್ಧ ಮನಸ್ಸಿನಿಂದ ತೃಪ್ತಿಗೊಳಿಸಿದಳು.

03289002a ಪ್ರಾತರಾಯಾಸ್ಯ ಇತ್ಯುಕ್ತ್ವಾ ಕದಾ ಚಿದ್ದ್ವಿಜಸತ್ತಮಃ|

03289002c ತತ ಆಯಾತಿ ರಾಜೇಂದ್ರ ಸಾಯೇ ರಾತ್ರಾವಥೋ ಪುನಃ||

ರಾಜೇಂದ್ರ! ಕೆಲವೊಮ್ಮೆ ಆ ದ್ವಿಜಸತ್ತಮನು ಬೆಳಿಗ್ಗೆ ಬರುತ್ತೇನೆ ಎಂದು ಹೇಳಿ ಸಾಯಂಕಾಲ ಬರುತ್ತಿದ್ದನು. ಪುನಃ ಸಾಯಂಕಾಲ ಬರುತ್ತೇನೆಂದು ಹೇಳಿ ರಾತ್ರಿ ಬರುತ್ತಿದ್ದನು.

03289003a ತಂ ಚ ಸರ್ವಾಸು ವೇಲಾಸು ಭಕ್ಷ್ಯಭೋಜ್ಯಪ್ರತಿಶ್ರಯೈಃ|

03289003c ಪೂಜಯಾಮಾಸ ಸಾ ಕನ್ಯಾ ವರ್ಧಮಾನೈಸ್ತು ಸರ್ವದಾ||

ಆ ಕನ್ಯೆಯು ಎಲ್ಲ ವೇಳೆಗಳಲ್ಲಿಯೂ ಅವನನ್ನು ಹೆಚ್ಚು ಹೆಚ್ಚು ಭಕ್ಷ್ಯ, ಭೋಜ್ಯ ಮತ್ತು ಆಶ್ರಯವನ್ನಿತ್ತು ಸರ್ವದಾ ಪೂಜಿಸುತ್ತಿದ್ದಳು.

03289004a ಅನ್ನಾದಿಸಮುದಾಚಾರಃ ಶಯ್ಯಾಸನಕೃತಸ್ತಥಾ|

03289004c ದಿವಸೇ ದಿವಸೇ ತಸ್ಯ ವರ್ಧತೇ ನ ತು ಹೀಯತೇ||

ಅವನು ಕುಳಿತಿರುವಾಗ ಮತ್ತು ಮಲಗಿರುವಾಗ ಅವನಿಗೆ ನೀಡಿದ ಅನ್ನಾದಿ ಸಮುದಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದವೇ ಹೊರತು ಕೊರತೆ ಏನೂ ಆಗುತ್ತಿರಲಿಲ್ಲ.

03289005a ನಿರ್ಭರ್ತ್ಸನಾಪವಾದೈಶ್ಚ ತಥೈವಾಪ್ರಿಯಯಾ ಗಿರಾ|

03289005c ಬ್ರಾಹ್ಮಣಸ್ಯ ಪೃಥಾ ರಾಜನ್ನ ಚಕಾರಾಪ್ರಿಯಂ ತದಾ||

ರಾಜನ್! ಅವನು ಬೈಯುತ್ತಿದ್ದರೂ, ತಪ್ಪುಗಳನ್ನು ಹುಡುಕಿ ಹೇಳುತ್ತಿದ್ದರೂ ಮತ್ತು ಅಪ್ರಿಯವಾಗಿ ಮಾತನ್ನಾಡುತ್ತಿದ್ದರೂ ಸಹ ಪೃಥೆಯು ಬ್ರಾಹ್ಮಣನಿಗೆ ಅಪ್ರಿಯವಾದುದನ್ನು ಮಾಡಲಿಲ್ಲ.

03289006a ವ್ಯಸ್ತೇ ಕಾಲೇ ಪುನಶ್ಚೈತಿ ನ ಚೈತಿ ಬಹುಶೋ ದ್ವಿಜಃ|

03289006c ದುರ್ಲಭ್ಯಮಪಿ ಚೈವಾನ್ನಂ ದೀಯತಾಮಿತಿ ಸೋಽಬ್ರವೀತ್||

ಕೆಲವೊಮ್ಮೆ ಕಾಲವು ವ್ಯಸ್ತವಾದಾಗ ಬರುತ್ತಿದ್ದನು. ಬಹಳಷ್ಟು ಸಲ ಬರುತ್ತಲೇ ಇರಲಿಲ್ಲ. ಆಹಾರವು ದೊರೆಯುವುದು ಕಷ್ಟವಾಗಿದ್ದರೂ ಎಷ್ಟೋ ಸಲ ಊಟವನ್ನು ಕೊಡು ಎಂದು ಕೇಳುತ್ತಿದ್ದನು.

03289007a ಕೃತಮೇವ ಚ ತತ್ಸರ್ವಂ ಪೃಥಾ ತಸ್ಮೈ ನ್ಯವೇದಯತ್|

03289007c ಶಿಷ್ಯವತ್ಪುತ್ರವಚ್ಚೈವ ಸ್ವಸೃವಚ್ಚ ಸುಸಮ್ಯತಾ||

ಎಲ್ಲವೂ ತಯಾರಿದೆ ಎಂದು ಪೃಥೆಯು ಅವನಿಗೆ ನಿವೇದಿಸುತ್ತಿದ್ದಳು. ಶಿಷ್ಯೆಯಂತೆ, ಮಗಳಂತೆ, ಮತ್ತು ತಂಗಿಯಂತೆ ನಡೆದುಕೊಳ್ಳುತ್ತಿದ್ದಳು.

03289008a ಯಥೋಪಜೋಷಂ ರಾಜೇಂದ್ರ ದ್ವಿಜಾತಿಪ್ರವರಸ್ಯ ಸಾ|

03289008c ಪ್ರೀತಿಮುತ್ಪಾದಯಾಮಾಸ ಕನ್ಯಾ ಯತ್ನೈರನಿಂದಿತಾ||

ರಾಜೇಂದ್ರ! ಅವನಿಗಿಷ್ಟವಾದಂತೆ ಪ್ರಯತ್ನಿಸುತ್ತಿದ್ದ ಆ ಅನಿಂದಿತೆ ಕನ್ಯೆಯು ಆ ದ್ವಿಜಪ್ರವರನ ಪ್ರೀತಿಯನ್ನು ಗಳಿಸಿದಳು.

03289009a ತಸ್ಯಾಸ್ತು ತು ಶೀಲವೃತ್ತೇನ ತುತೋಷ ದ್ವಿಜಸತ್ತಮಃ|

03289009c ಅವಧಾನೇನ ಭೂಯೋಽಸ್ಯ ಪರಂ ಯತ್ನಮಥಾಕರೋತ್||

ಬಹಳ ಪ್ರಯತ್ನಪಟ್ಟು ತನ್ನ ಸೇವೆ ಮಾಡುತ್ತಿರುವ ಅವಳ ಶೀಲ ನಡತೆಯಿಂದ ದ್ವಿಜಸತ್ತಮನು ತೃಪ್ತನಾದನು.

03289010a ತಾಂ ಪ್ರಭಾತೇ ಚ ಸಾಯೇ ಚ ಪಿತಾ ಪಪ್ರಚ್ಚ ಭಾರತ|

03289010c ಅಪಿ ತುಷ್ಯತಿ ತೇ ಪುತ್ರಿ ಬ್ರಾಹ್ಮಣಃ ಪರಿಚರ್ಯಯಾ||

ಭಾರತ! ಬೆಳಿಗ್ಗೆ ಮತ್ತು ಸಾಯಂಕಾಲ ಅವಳ ತಂದೆಯು ಅವಳನ್ನು ಕೇಳುತ್ತಿದ್ದನು: “ಪುತ್ರಿ! ನಿನ್ನ ಪರಿಚರ್ಯೆಯಿಂದ ಬ್ರಾಹ್ಮಣನು ತೃಪ್ತನಾಗಿದ್ದಾನೆ ತಾನೇ?”

03289011a ತಂ ಸಾ ಪರಮಮಿತ್ಯೇವ ಪ್ರತ್ಯುವಾಚ ಯಶಸ್ವಿನೀ|

03289011c ತತಃ ಪ್ರೀತಿಮವಾಪಾಗ್ರ್ಯಾಂ ಕುಂತಿಭೋಜೋ ಮಹಾಮನಾಃ||

ಆ ಯಶಸ್ವಿನಿಯು “ಸಂಪೂರ್ಣವಾಗಿ!” ಎಂದು ಉತ್ತರಿಸಲು ಮಹಾಮನಸ್ವಿ ಕುಂತಿಭೋಜನು ಅತ್ಯಂತ ಸಂತೋಷಪಡುತ್ತಿದ್ದನು.

03289012a ತತಃ ಸಂವತ್ಸರೇ ಪೂರ್ಣೇ ಯದಾಸೌ ಜಪತಾಂ ವರಃ|

03289012c ನಾಪಶ್ಯದ್ದುಷ್ಕೃತಂ ಕಿಂ ಚಿತ್ಪೃಥಾಯಾಃ ಸೌಹೃದೇ ರತಃ|

03289013a ತತಃ ಪ್ರೀತಮನಾ ಭೂತ್ವಾ ಸ ಏನಾಂ ಬ್ರಾಹ್ಮಣೋಽಬ್ರವೀತ್|

03289013c ಪ್ರೀತೋಽಸ್ಮಿ ಪರಮಂ ಭದ್ರೇ ಪರಿಚಾರೇಣ ತೇ ಶುಭೇ||

ಆಗ ಒಂದು ವರ್ಷವು ಮುಗಿಯಲು, ಜಪಿಗಳಲ್ಲಿ ಶ್ರೇಷ್ಠನಾದವನು ಪೃಥೆಯಿಂದ ಯಾವ ದುಷ್ಕೃತವೂ ಆಗದೇ ಇದ್ದುದನ್ನು ನೋಡಿ ಅವಳೊಂದಿಗೆ ಸ್ನೇಹಭಾವವನ್ನು ಬೆಳೆಸಿಕೊಂಡನು. ಆಗ ಪ್ರೀತಿಮನಸ್ಕ ಬ್ರಾಹ್ಮಣನು ಹೇಳಿದನು: “ಭದ್ರೇ! ಶುಭೇ! ನಿನ್ನ ಪರಿಚಾರಿಕೆಯಿಂದ ಪರಮ ಪ್ರೀತನಾಗಿದ್ದೇನೆ.

03289014a ವರಾನ್ವೃಣೀಷ್ವ ಕಲ್ಯಾಣಿ ದುರಾಪಾನ್ಮಾನುಷೈರಿಹ|

03289014c ಯೈಸ್ತ್ವಂ ಸೀಮಂತಿನೀಃ ಸರ್ವಾ ಯಶಸಾಭಿಭವಿಷ್ಯಸಿ||

ಕಲ್ಯಾಣೀ! ಮನುಷ್ಯರು ಪಡೆಯುವುದಕ್ಕೆ ಕಷ್ಟವೆನಿಸುವ ಮತ್ತು ಯಾವುದರಿಂದ ನೀನು ಸರ್ವ ಸೀಮಂತಿಯರಿಗಿಂತಲೂ ಯಶಸ್ವಿನಿಯಾಗುತ್ತೀಯೋ ಅಂಥಹ ವರವನ್ನು ಕೇಳಿಕೋ.”

03289015 ಕುಂತ್ಯುವಾಚ|

03289015a ಕೃತಾನಿ ಮಮ ಸರ್ವಾಣಿ ಯಸ್ಯಾ ಮೇ ವೇದವಿತ್ತಮ|

03289015c ತ್ವಂ ಪ್ರಸನ್ನಃ ಪಿತಾ ಚೈವ ಕೃತಂ ವಿಪ್ರ ವರೈರ್ಮಮ||

ಕುಂತಿಯು ಹೇಳಿದಳು: “ವೇದವಿತ್ತಮ! ನೀನು ಮತ್ತು ನನ್ನ ತಂದೆಯು ಪ್ರಸನ್ನರಾಗಿದ್ದೀರಿ ಎಂದರೆ ನಾನು ಎಲ್ಲವನ್ನೂ ಸಾಧಿಸಿದಂತೆಯೇ. ವಿಪ್ರ! ವರವು ನನಗೆ ಇದಕ್ಕಿಂತಲೂ ಹೆಚ್ಚಿನ ಏನನ್ನು ಮಾಡೀತು?”

03289016 ಬ್ರಾಹ್ಮಣ ಉವಾಚ|

03289016a ಯದಿ ನೇಚ್ಚಸಿ ಭದ್ರೇ ತ್ವಂ ವರಂ ಮತ್ತಃ ಶುಚಿಸ್ಮಿತೇ|

03289016c ಇಮಂ ಮಂತ್ರಂ ಗೃಹಾಣ ತ್ವಮಾಹ್ವಾನಾಯ ದಿವೌಕಸಾಂ||

ಬ್ರಾಹ್ಮಣನು ಹೇಳಿದನು: “ಭದ್ರೇ! ಶುಚಿಸ್ಮಿತೇ! ನನ್ನಿಂದ ನಿನಗೆ ವರವು ಇಷ್ಟವಿಲ್ಲದಿದ್ದರೆ ದಿವೌಕಸರನ್ನು ಆಹ್ವಾನಿಸಬಲ್ಲ ಈ ಮಂತ್ರಗಳನ್ನು ಸ್ವೀಕರಿಸು.

03289017a ಯಂ ಯಂ ದೇವಂ ತ್ವಮೇತೇನ ಮಂತ್ರೇಣಾವಾಹಯಿಷ್ಯಸಿ|

03289017c ತೇನ ತೇನ ವಶೇ ಭದ್ರೇ ಸ್ಥಾತವ್ಯಂ ತೇ ಭವಿಷ್ಯತಿ||

ಭದ್ರೇ! ನೀನು ಈ ಮಂತ್ರಗಳಿಂದ ಯಾವ ಯಾವ ದೇವನನ್ನು ಆಹ್ವಾನಿಸುತ್ತೀಯೋ ಆ ಆ ದೇವತೆಗಳು ನಿನ್ನ ವಶದಲ್ಲಿ ಬಂದು ನಿಂತು ನಿನ್ನವರಾಗುತ್ತಾರೆ.

03289018a ಅಕಾಮೋ ವಾ ಸಕಾಮೋ ವಾ ನ ಸ ನೈಷ್ಯತಿ ತೇ ವಶಂ|

03289018c ವಿಬುಧೋ ಮಂತ್ರಸಂಶಾಂತೋ ವಾಕ್ಯೇ ಭೃತ್ಯ ಇವಾನತಃ||

ಬಯಸಿಯೋ ಅಥವಾ ಬಯಸದೆಯೋ ಅವರು ನಿನ್ನ ವಶದಲ್ಲಿ ಬರುತ್ತಾರೆ ಮತ್ತು ನಿನ್ನ ಮಂತ್ರಕ್ಕೆ ಬದ್ಧರಾದ ಅವರು ನಿನ್ನ ಮಾತನ್ನು ಸೇವಕರಂತೆ ನೆರವೇರಿಸುತ್ತಾರೆ.””

03289019 ವೈಶಂಪಾಯನ ಉವಾಚ|

03289019a ನ ಶಶಾಕ ದ್ವಿತೀಯಂ ಸಾ ಪ್ರತ್ಯಾಖ್ಯಾತುಮನಿಂದಿತಾ|

03289019c ತಂ ವೈ ದ್ವಿಜಾತಿಪ್ರವರಂ ತದಾ ಶಾಪಭಯಾನ್ನೃಪ||

ವೈಶಂಪಾಯನನು ಹೇಳಿದನು: “ನೃಪ! ಆ ದ್ವಿಜಪ್ರವರನ ಶಾಪಕ್ಕೆ ಹೆದರಿದ ಆ ಅನಿಂದಿತೆಯು ಅವನನ್ನು ಎರಡನೆಯ ಬಾರಿ ನಿರಾಕರಿಸಲು ಶಕ್ಯಳಾಗಲಿಲ್ಲ.

03289020a ತತಸ್ತಾಮನವದ್ಯಾಂಗೀಂ ಗ್ರಾಹಯಾಮಾಸ ವೈ ದ್ವಿಜಃ|

03289020c ಮಂತ್ರಗ್ರಾಮಂ ತದಾ ರಾಜನ್ನಥರ್ವಶಿರಸಿ ಶ್ರುತಂ||

ರಾಜನ್! ಆಗ ಆ ದ್ವಿಜನು ಅನವದ್ಯಾಂಗಿಗೆ ಅಥರ್ವಶಿರದಲ್ಲಿ ಹೇಳಿದ ಮಂತ್ರಗುಚ್ಛಗಳನ್ನು ಕೊಟ್ಟನು.

03289021a ತಂ ಪ್ರದಾಯ ತು ರಾಜೇಂದ್ರ ಕುಂತಿಭೋಜಮುವಾಚ ಹ|

03289021c ಉಷಿತೋಽಸ್ಮಿ ಸುಖಂ ರಾಜನ್ಕನ್ಯಯಾ ಪರಿತೋಷಿತಃ||

03289022a ತವ ಗೇಹೇ ಸುವಿಹಿತಃ ಸದಾ ಸುಪ್ರತಿಪೂಜಿತಃ|

03289022c ಸಾಧಯಿಷ್ಯಾಮಹೇ ತಾವದಿತ್ಯುಕ್ತ್ವಾಂತರಧೀಯತ||

ರಾಜೇಂದ್ರ! ಅವುಗಳನ್ನಿತ್ತು ಕುಂತಿಭೋಜನಿಗೆ ಹೇಳಿದನು: “ರಾಜನ್! ಕನ್ಯೆಯಿಂದ ಪರಿತೋಷಿತನಾಗಿ ಸುಖವಾಗಿ ನಿನ್ನ ಗೃಹದಲ್ಲಿ ನೆಲೆಸಿದೆ. ನಿನ್ನ ಮಗಳು ನನ್ನೊಂದಿಗೆ ಸರಿಯಾಗಿ ನಡೆದುಕೊಂಡು ಸದಾ ಪೂಜಿಸುತ್ತಿದ್ದಳು. ಅವಳಿಂದ ನಾನು ಸಂತೊಷಗೊಂಡಿದ್ದೇನೆ!” ಎಂದು ಹೇಳಿ ಅಂತರ್ಧಾನನಾದನು.

03289023a ಸ ತು ರಾಜಾ ದ್ವಿಜಂ ದೃಷ್ಟ್ವಾ ತತ್ರೈವಾಂತರ್ಹಿತಂ ತದಾ|

03289023c ಬಭೂವ ವಿಸ್ಮಯಾವಿಷ್ಟಃ ಪೃಥಾಂ ಚ ಸಮಪೂಜಯತ್||

ಆ ದ್ವಿಜನು ಅಲ್ಲಿಯೇ ಅಂತರ್ಧಾನನಾದುದನ್ನು ನೋಡಿ ರಾಜನು ವಿಸ್ಮಯನಾದನು ಮತ್ತು ಪೃಥೆಯನ್ನು ಗೌರವಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಪೃಥಾಯಾ ಮಂತ್ರಪ್ರಾಪ್ತೌ ಏಕೋನವತ್ಯಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಪೃಥೆಯಿಂದ ಮಂತ್ರಪ್ರಾಪ್ತಿಯಲ್ಲಿ ಇನ್ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.

Related image

Comments are closed.