Aranyaka Parva: Chapter 285

ಆರಣ್ಯಕ ಪರ್ವ: ಕುಂಡಲಾಹರಣ ಪರ್ವ

೨೮೫

ಸೂರ್ಯನು ತಾನು ಅವನ ತಂದೆಯೆಂದು ಹೇಳಿಕೊಳ್ಳದೇ “ನಿನ್ನಲ್ಲಿ ಯಾವುದೋ ಒಂದು ದೇವನಿರ್ಮಿತ ವಿಶೇಷತೆಯಿದೆ. ಆದುದರಿಂದ ನಾನು ನಿನಗೆ ಹೇಳುವುದನ್ನು ಶಂಕಿಸದೇ ಅದನ್ನು ಮಾಡು” ಎಂದು ಕರ್ಣನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುವುದು (೧-೧೭).

03285001 ಸೂರ್ಯ ಉವಾಚ|

03285001a ಮಾಹಿತಂ ಕರ್ಣ ಕಾರ್ಷೀಸ್ತ್ವಮಾತ್ಮನಃ ಸುಹೃದಾಂ ತಥಾ|

03285001c ಪುತ್ರಾಣಾಮಥ ಭಾರ್ಯಾಣಾಮಥೋ ಮಾತುರಥೋ ಪಿತುಃ||

ಸೂರ್ಯನು ಹೇಳಿದನು: “ಕರ್ಣ! ನಿನಗೆ, ನಿನ್ನ ಸುಹೃದಯರಿಗೆ, ಪುತ್ರರಿಗೆ, ಭಾರ್ಯೆಯರಿಗೆ, ಮತ್ತು ತಾಯಿ-ತಂದೆಯರಿಗೆ ಅಹಿತವಾದುದನ್ನು ಮಾಡಬೇಡ.

03285002a ಶರೀರಸ್ಯಾವಿರೋಧೇನ ಪ್ರಾಣಿನಾಂ ಪ್ರಾಣಭೃದ್ವರ|

03285002c ಇಷ್ಯತೇ ಯಶಸಃ ಪ್ರಾಪ್ತಿಃ ಕೀರ್ತಿಶ್ಚ ತ್ರಿದಿವೇ ಸ್ಥಿರಾ||

ಪ್ರಾಣವಿದ್ದವರಲ್ಲಿ ಶ್ರೇಷ್ಠನೇ! ಪ್ರಾಣಿಗಳು ತಮ್ಮ ಶರೀರವನ್ನು ವಿರೋಧಿಸದೇ ಯಶಸ್ಸನ್ನು ಮತ್ತು ತ್ರಿದಿವದಲ್ಲಿ ಸ್ಥಿರವಾದ ಕೀರ್ತಿಯನ್ನು ಪಡೆಯಲು ಬಯಸುತ್ತವೆ.

03285003a ಯಸ್ತ್ವಂ ಪ್ರಾಣವಿರೋಧೇನ ಕೀರ್ತಿಮಿಚ್ಚಸಿ ಶಾಶ್ವತೀಂ|

03285003c ಸಾ ತೇ ಪ್ರಾಣಾನ್ಸಮಾದಾಯ ಗಮಿಷ್ಯತಿ ನ ಸಂಶಯಃ||

ಆದರೆ ನೀನು ಪ್ರಾಣವನ್ನು ವಿರೋಧಿಸಿ ಶಾಶ್ವತಕೀರ್ತಿಯನ್ನು ಬಯಸುತ್ತೀಯೆ. ನೀನು ಪಡೆಯುವ ಅದು ಪ್ರಾಣದೊಂದಿಗೆ ಹೊರಟುಹೋಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

03285004a ಜೀವತಾಂ ಕುರುತೇ ಕಾರ್ಯಂ ಪಿತಾ ಮಾತಾ ಸುತಾಸ್ತಥಾ|

03285004c ಯೇ ಚಾನ್ಯೇ ಬಾಂಧವಾಃ ಕೇ ಚಿಲ್ಲೋಕೇಽಸ್ಮಿನ್ಪುರುಷರ್ಷಭ|

03285004e ರಾಜಾನಶ್ಚ ನರವ್ಯಾಘ್ರ ಪೌರುಷೇಣ ನಿಬೋಧ ತತ್||

ಪುರುಷರ್ಷಭ! ನರವ್ಯಾಘ್ರ! ಈ ಲೋಕದಲ್ಲಿ ತಂದೆ, ತಾಯಿ, ಮಕ್ಕಳು ಮತ್ತು ಇತರ ಬಾಂಧವರೂ, ರಾಜರೂ ಕೂಡ ಪೌರುಷದಿಂದ ಜೀವಕ್ಕಾಗಿಯೇ ಮಾಡುತ್ತಾರೆ ಎಂದು ನನ್ನಿಂದ ತಿಳಿ.

03285005a ಕೀರ್ತಿಶ್ಚ ಜೀವತಃ ಸಾಧ್ವೀ ಪುರುಷಸ್ಯ ಮಹಾದ್ಯುತೇ|

03285005c ಮೃತಸ್ಯ ಕೀರ್ತ್ಯಾ ಕಿಂ ಕಾರ್ಯಂ ಭಸ್ಮೀಭೂತಸ್ಯ ದೇಹಿನಃ|

ಮಹಾದ್ಯುತೇ! ಜೀವಿತನಾಗಿರುವವನ ಕೀರ್ತಿಯು ಒಳ್ಳೆಯದು. ಭಸ್ಮೀಭೂತ ದೇಹಿ ಮೃತನ ಕೀರ್ತಿಯಿಂದ ಏನು ಪ್ರಯೋಜನ?

03285005e ಮೃತಃ ಕೀರ್ತಿಂ ನ ಜಾನಾತಿ ಜೀವನ್ಕೀರ್ತಿಂ ಸಮಶ್ನುತೇ||

03285006a ಮೃತಸ್ಯ ಕೀರ್ತಿರ್ಮರ್ತ್ಯಸ್ಯ ಯಥಾ ಮಾಲಾ ಗತಾಯುಷಃ|

ಸತ್ತವನಿಗೆ ಕೀರ್ತಿಯು ತಿಳಿಯದು. ಜೀವಂತನಾಗಿರುವವನು ಕೀರ್ತಿಯನ್ನು ಅನುಭವಿಸುತ್ತಾನೆ. ಮೃತನ ಕೀರ್ತಿಯು ಹೆಣಕ್ಕೆ ಹಾಕಿದ ಮಾಲೆಯ ಹಾಗೆ.

03285006c ಅಹಂ ತು ತ್ವಾಂ ಬ್ರವೀಮ್ಯೇತದ್ಭಕ್ತೋಽಸೀತಿ ಹಿತೇಪ್ಸಯಾ||

03285007a ಭಕ್ತಿಮಂತೋ ಹಿ ಮೇ ರಕ್ಷ್ಯಾ ಇತ್ಯೇತೇನಾಪಿ ಹೇತುನಾ|

ನಿನ್ನ ಹಿತಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ನೀನು ನನ್ನ ಭಕ್ತ ಮತ್ತು ನಾನು ಭಕ್ತರನ್ನು ರಕ್ಷಿಸಬೇಕು.

03285007c ಭಕ್ತೋಽಯಂ ಪರಯಾ ಭಕ್ತ್ಯಾ ಮಾಮಿತ್ಯೇವ ಮಹಾಭುಜ|

03285007e ಮಮಾಪಿ ಭಕ್ತಿರುತ್ಪನ್ನಾ ಸ ತ್ವಂ ಕುರು ವಚೋ ಮಮ||

ಮಹಾಭುಜ ಕರ್ಣ! ಈ ಭಕ್ತನು ನನ್ನ ಮೇಲೆ ಪರಮ ಭಕ್ತಿಯಿಟ್ಟಿದ್ದಾನೆಂದು ನನಗೆ ತಿಳಿದಿದೆ. ನನ್ನ ಮೇಲೆ ಭಕ್ತಿಯುತ್ಪನ್ನವಾಗಿದ್ದರೆ ನಾನು ಹೇಳಿದ ಹಾಗೆ ಮಾಡು.

03285008a ಅಸ್ತಿ ಚಾತ್ರ ಪರಂ ಕಿಂ ಚಿದಧ್ಯಾತ್ಮಂ ದೇವನಿರ್ಮಿತಂ|

03285008c ಅತಶ್ಚ ತ್ವಾಂ ಬ್ರವೀಮ್ಯೇತತ್ಕ್ರಿಯತಾಮವಿಶಂಕಯಾ||

ನಿನ್ನಲ್ಲಿ ಯಾವುದೋ ಒಂದು ದೇವನಿರ್ಮಿತ ವಿಶೇಷತೆಯಿದೆ. ಆದುದರಿಂದ ನಾನು ನಿನಗೆ ಹೇಳುತ್ತಿದ್ದೇನೆ. ಶಂಕಿಸದೇ ಅದನ್ನು ಮಾಡು.

03285009a ದೇವಗುಹ್ಯಂ ತ್ವಯಾ ಜ್ಞಾತುಂ ನ ಶಕ್ಯಂ ಪುರುಷರ್ಷಭ|

03285009c ತಸ್ಮಾನ್ನಾಖ್ಯಾಮಿ ತೇ ಗುಹ್ಯಂ ಕಾಲೇ ವೇತ್ಸ್ಯತಿ ತದ್ಭವಾನ್||

ಪುರುಷರ್ಷಭ! ದೇವತೆಗಳ ಗುಟ್ಟನ್ನು ತಿಳಿಯಲು ನಿನಗೆ ಸಾಧ್ಯವಿಲ್ಲ. ಆದುದರಿಂದ ನಾನು ಆ ಗುಟ್ಟನ್ನು ಹೇಳುವುದಿಲ್ಲ. ಸಮಯ ಬಂದಾಗ ನೀನು ಇದನ್ನು ತಿಳಿಯುತ್ತೀಯೆ.

03285010a ಪುನರುಕ್ತಂ ಚ ವಕ್ಷ್ಯಾಮಿ ತ್ವಂ ರಾಧೇಯ ನಿಬೋಧ ತತ್|

03285010c ಮಾಸ್ಮೈ ತೇ ಕುಂಡಲೇ ದದ್ಯಾ ಭಿಕ್ಷವೇ ವಜ್ರಪಾಣಯೇ||

ರಾಧೇಯ! ಪುನಃ ಹೇಳುತ್ತಿದ್ದೇನೆ. ತಿಳಿದುಕೋ. ವಜ್ರಪಾಣಿಗೆ ನಿನ್ನ ಕುಂಡಲಗಳನ್ನು ಭಿಕ್ಷವಾಗಿ ಕೊಡಬೇಡ.

03285011a ಶೋಭಸೇ ಕುಂಡಲಾಭ್ಯಾಂ ಹಿ ರುಚಿರಾಭ್ಯಾಂ ಮಹಾದ್ಯುತೇ|

03285011c ವಿಶಾಖಯೋರ್ಮಧ್ಯಗತಃ ಶಶೀವ ವಿಮಲೋ ದಿವಿ||

ಮಹಾದ್ಯುತೇ! ಈ ಸುಂದರ ಕುಂಡಲಗಳಿಂದಲೇ ನೀನು ವಿಮಲ ಆಕಾಶದಲ್ಲಿ ವಿಶಾಖಗಳ ಮಧ್ಯದಲ್ಲಿ ನಡೆಯುವ ಚಂದ್ರನಂತೆ ಶೋಭಿಸುತ್ತೀಯೆ.

03285012a ಕೀರ್ತಿಶ್ಚ ಜೀವತಃ ಸಾಧ್ವೀ ಪುರುಷಸ್ಯೇತಿ ವಿದ್ಧಿ ತತ್|

03285012c ಪ್ರತ್ಯಾಖ್ಯೇಯಸ್ತ್ವಯಾ ತಾತ ಕುಂಡಲಾರ್ಥೇ ಪುರಂದರಃ||

ಮಗೂ! ಜೀವಂತನಾಗಿರುವ ಪುರುಷನಿಗೆ ಮಾತ್ರ ಕೀರ್ತಿಯು ಒಳ್ಳೆಯದು ಎಂದು ತಿಳಿದು ಪುರಂದರನಿಗೆ ಕುಂಡಲಗಳನ್ನು ನಿರಾಕರಿಸು.

03285013a ಶಕ್ಯಾ ಬಹುವಿಧೈರ್ವಾಕ್ಯೈಃ ಕುಂಡಲೇಪ್ಸಾ ತ್ವಯಾನಘ|

03285013c ವಿಹಂತುಂ ದೇವರಾಜಸ್ಯ ಹೇತುಯುಕ್ತೈಃ ಪುನಃ ಪುನಃ||

ಅನಘ! ಕುಂಡಲಗಳನ್ನು ಬಯಸಿಬಂದ ದೇವರಾಜನನ್ನು ಬಹುವಿಧದ ಹೇತುಯುಕ್ತ ವಾಕ್ಯಗಳಿಂದ ಪುನಃ ಪುನಃ ತಡೆಯಲು ಪ್ರಯತ್ನಿಸು.

03285014a ಉಪಪತ್ತ್ಯುಪಪನ್ನಾರ್ಥೈರ್ಮಾಧುರ್ಯಕೃತಭೂಷಣೈಃ|

03285014c ಪುರಂದರಸ್ಯ ಕರ್ಣ ತ್ವಂ ಬುದ್ಧಿಮೇತಾಮಪಾನುದ||

ಪುರಂದರನ ಈ ಯೋಜನೆಯನ್ನು ಬುದ್ಧಿಯುಕ್ತ ಮಧುರ ಸುಂದರ ಶಬ್ಧಗಳುಳ್ಳ ಮಾತುಗಳಿಂದ ತಡೆ.

03285015a ತ್ವ ಹಿ ನಿತ್ಯಂ ನರವ್ಯಾಘ್ರ ಸ್ಪರ್ಧಸೇ ಸವ್ಯಸಾಚಿನಾ|

03285015c ಸವ್ಯಸಾಚೀ ತ್ವಯಾ ಚೈವ ಯುಧಿ ಶೂರಃ ಸಮೇಷ್ಯತಿ||

ನರವ್ಯಾಘ್ರ! ನಿತ್ಯವೂ ನೀನು ಸವ್ಯಸಾಚಿಯೊಡನೆ ಸ್ಪರ್ಧಿಸುತ್ತೀಯೆ. ಹಾಗೆಯೇ ಶೂರ ಸವ್ಯಸಾಚಿಯೂ ಕೂಡ ಯುದ್ಧದಲ್ಲಿ ನಿನ್ನ ಸರಿಸಾಟಿಯಾಗಿದ್ದಾನೆ.

03285016a ನ ತು ತ್ವಾಮರ್ಜುನಃ ಶಕ್ತಃ ಕುಂಡಲಾಭ್ಯಾಂ ಸಮನ್ವಿತಂ|

03285016c ವಿಜೇತುಂ ಯುಧಿ ಯದ್ಯಸ್ಯ ಸ್ವಯಮಿಂದ್ರಃ ಶರೋ ಭವೇತ್||

ಆದರೆ ಇಂದ್ರನೇ ಶರವಾದರೂ ಕುಂಡಲಗಳಿಂದ ಕೂಡಿದ ನಿನ್ನನ್ನು ಅರ್ಜುನನು ಯುದ್ಧದಲ್ಲಿ ಜಯಿಸಲು ಶಕ್ತನಿಲ್ಲ.

03285017a ತಸ್ಮಾನ್ನ ದೇಯೇ ಶಕ್ರಾಯ ತ್ವಯೈತೇ ಕುಂಡಲೇ ಶುಭೇ|

03285017c ಸಂಗ್ರಾಮೇ ಯದಿ ನಿರ್ಜೇತುಂ ಕರ್ಣ ಕಾಮಯಸೇಽರ್ಜುನಂ||

ಆದುದರಿಂದ ಸಂಗ್ರಾಮದಲ್ಲಿ ಅರ್ಜುನನನ್ನು ಜಯಿಸಲು ಇಚ್ಛಿಸಿದರೆ ನೀನು ಈ ಶುಭಕುಂಡಲಗಳನ್ನು ಶಕ್ರನಿಗೆ ಕೊಡಬಾರದು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕರ್ಣಸಂವಾದೇ ಪಂಚಶೀತ್ಯಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕರ್ಣಸಂವಾದದಲ್ಲಿ ಇನ್ನೂರಾಎಂಭತ್ತೈದನೆಯ ಅಧ್ಯಾಯವು.

Related image

Comments are closed.