Aranyaka Parva: Chapter 28

ಆರಣ್ಯಕ ಪರ್ವ: ಕೈರಾತ ಪರ್ವ

೨೮

ದ್ರೌಪದೀ-ಯುಧಿಷ್ಠಿರ ಸಂವಾದ

ಬಂದೊದಗಿರುವ ಕಷ್ಟಗಳನ್ನು ನೋಡಿ ಶಾಂತಿಯೇ ಇಲ್ಲವೆಂದು ದ್ರೌಪದಿಯು ಯುಧಿಷ್ಠಿರನಿಗೆ ಹೇಳುವುದು (೧-೧೮). ಈ ಕಷ್ಟಗಳನ್ನು ನೋಡಿಯೂ ನಿನಗೆ ಏಕೆ ಸಿಟ್ಟೇ ಬರುತ್ತಿಲ್ಲವೆಂದು ಯುಧಿಷ್ಠಿರನನ್ನು ಪ್ರಶ್ನಿಸಿದುದು (೧೯-೩೩). “ಸಮಯ ಬಂದಾಗ ತನ್ನ ತೇಜಸ್ಸನ್ನು ತೋರಿಸದೇ ಇರುವ ಕ್ಷತ್ರಿಯನನ್ನು ಸರ್ವಭೂತಗಳೂ ಸದಾ ಕೀಳಾಗಿ ಕಾಣುತ್ತವೆ” ಎಂದು ದ್ರೌಪದಿಯು ಯುಧಿಷ್ಠಿರನಿಗೆ ಹೇಳುವುದು (೩೪-೩೭).

03028001 ವೈಶಂಪಾಯನ ಉವಾಚ|

03028001a ತತೋ ವನಗತಾಃ ಪಾರ್ಥಾಃ ಸಾಯಾಹ್ನೇ ಸಹ ಕೃಷ್ಣಯಾ|

03028001c ಉಪವಿಷ್ಟಾಃ ಕಥಾಶ್ಚಕ್ರುರ್ದುಃಖಶೋಕಪರಾಯಣಾಃ||

ವೈಶಂಪಾಯನನು ಹೇಳಿದನು: “ವನವನ್ನು ಸೇರಿದ ಪಾರ್ಥರು ಸಾಯಂಕಾಲದಲ್ಲಿ ಕೃಷ್ಣೆಯೊಂದಿಗೆ ಕುಳಿತುಕೊಂಡು ದುಃಖಶೋಕಪರಾಯಣರಾಗಿ ಮಾತನಾಡಿಕೊಳ್ಳುತ್ತಿದ್ದರು.

03028002a ಪ್ರಿಯಾ ಚ ದರ್ಶನೀಯಾಂಕ್ಷು ಚ ಪಂಡಿತಾ ಚ ಪತಿವ್ರತಾ|

03028002c ತತಃ ಕೃಷ್ಣಾ ಧರ್ಮರಾಜಮಿದಂ ವಚನಮಬ್ರವೀತ್||

03028003a ನ ನೂನಂ ತಸ್ಯ ಪಾಪಸ್ಯ ದುಃಖಮಸ್ಮಾಸು ಕಿಂ ಚನ|

03028003c ವಿದ್ಯತೇ ಧಾರ್ತರಾಷ್ಟ್ರಸ್ಯ ನೃಶಂಸಸ್ಯ ದುರಾತ್ಮನಃ||

ಆಗ ಪ್ರಿಯೆ, ಸುಂದರಿ, ಚೆನ್ನಾಗಿ ಬುದ್ಧಿವಂತಿಕೆಯ ಮಾತನಾಡಬಲ್ಲ, ಪಂಡಿತೆ, ಪತಿವ್ರತೆ ಕೃಷ್ಣೆಯು ಧರ್ಮರಾಜನಿಗೆ ಈ ಮಾತುಗಳನ್ನು ಹೇಳಿದಳು: “ಆ ಪಾಪಿ ದುರಾತ್ಮ, ಸುಳ್ಳುಗಾರ, ಧಾರ್ತರಾಷ್ಟ್ರನಿಗೆ ನಮ್ಮ ಮೇಲೆ ನಿಜವಾಗಿಯೂ ಅಷ್ಟೊಂದು ದುಃಖವಾಗುತ್ತಿರಲಿಕ್ಕಿಲ್ಲ.

03028004a ಯಸ್ತ್ವಾಂ ರಾಜನ್ಮಯಾ ಸಾರ್ಧಮಜಿನೈಃ ಪ್ರತಿವಾಸಿತಂ|

03028004c ಭ್ರಾತೃಭಿಶ್ಚ ತಥಾ ಸರ್ವೈರ್ನಾಭ್ಯಭಾಷತ ಕಿಂ ಚನ|

03028004e ವನಂ ಪ್ರಸ್ಥಾಪ್ಯ ದುಷ್ಟಾತ್ಮಾ ನಾನ್ವತಪ್ಯತ ದುರ್ಮತಿಃ||

ರಾಜನ್! ನೀನು ನನ್ನೊಂದಿಗೆ ಮತ್ತು ನಿನ್ನ ಭ್ರಾತೃಗಳೆಲ್ಲರೊಂದಿಗೆ ಜಿನವಸ್ತ್ರಗಳನ್ನು ಧರಿಸಿ ಹೊರಡುತ್ತಿರುವಾಗ ಅವನು ಏನಾದರೂ ಮಾತನಾಡಿದನೇ? ಇಲ್ಲ ತಾನೇ? ನಮ್ಮನ್ನು ವನಕ್ಕೆ ಕಳುಹಿಸಿ ಆ ದುಷ್ಟಾತ್ಮ ದುರ್ಮತಿಗೆ ಪಶ್ಚಾತ್ತಾಪ ಏನಾದರೂ ಆಯಿತೇ? ಇಲ್ಲ ತಾನೇ?

03028005a ಆಯಸಂ ಹೃದಯಂ ನೂನಂ ತಸ್ಯ ದುಷ್ಕೃತಕರ್ಮಣಃ|

03028005c ಯಸ್ತ್ವಾಂ ಧರ್ಮಪರಂ ಶ್ರೇಷ್ಠಂ ರೂಕ್ಷಾಣ್ಯಶ್ರಾವಯತ್ತದಾ||

ನಮ್ಮಲ್ಲೆಲ್ಲರಿಗೂ ಶ್ರೇಷ್ಠನಾದ ಧರ್ಮಪರನಾದ ನಿನಗೆ ಅಂಥಹ ಕಠೋರಮಾತುಗಳನ್ನಾಡಿದ ಆ ದುಷ್ಕೃತಕರ್ಮಿಯ ಹೃದಯವು ಕಬ್ಬಿಣದ್ದಾಗಿರಬೇಕು!

03028006a ಸುಖೋಚಿತಮದುಃಖಾರ್ಹಂ ದುರಾತ್ಮಾ ಸಸುಹೃದ್ಗಣಃ|

03028006c ಈದೃಶಂ ದುಃಖಮಾನೀಯ ಮೋದತೇ ಪಾಪಪೂರುಷಃ||

ಸುಖೋಚಿತನೂ (ಸುಖಕ್ಕೆ ಅರ್ಹನಾದವನೂ), ದುಃಖಕ್ಕೆ ಅನರ್ಹನೂ ಆದ ನಿನಗೆ ಈ ತರಹದ ದುಃಖವನ್ನು ತಂದಿತ್ತು ಆ ದುರಾತ್ಮ ಪಾಪಪುರುಷನು ತನ್ನ ಸ್ನೇಹಿತರ ಪಡೆಯೊಂದಿಗೆ ನಲಿಯುತ್ತಿದ್ದಾನೆ.

03028007a ಚತುರ್ಣಾಮೇವ ಪಾಪಾನಾಮಶ್ರು ವೈ ನಾಪತತ್ತದಾ|

03028007c ತ್ವಯಿ ಭಾರತ ಜಾನಿಷ್ಕ್ರಾಂತೇ ವನಾಯಾಜಿನವಾಸಸಿ||

03028008a ದುರ್ಯೋಧನಸ್ಯ ಕರ್ಣಸ್ಯ ಶಕುನೇಶ್ಚ ದುರಾತ್ಮನಃ|

03028008c ದುರ್ಭ್ರಾತುಸ್ತಸ್ಯ ಚೋಗ್ರಸ್ಯ ತಥಾ ದುಃಶಾಸನಸ್ಯ ಚ||

ಭಾರತ! ನೀನು ಜಿನಧಾರಿಯಾಗಿ ವನಕ್ಕೆ ಹೊರಡುವಾಗ ನಾಲ್ಕೇ ನಾಲ್ಕು ಮಂದಿ ಪಾಪಿಗಳು ಕಣ್ಣೀರು ಸುರಿಸಲಿಲ್ಲ. ನಾನು ಲೆಕ್ಖ ಮಾಡಿದ್ದೆ - ದುರ್ಯೋಧನ, ಕರ್ಣ, ದುರಾತ್ಮ ಶಕುನಿ, ಅವನ ಕೆಟ್ಟ ತಮ್ಮ ಉಗ್ರ ದುಃಶಾಸನ!

 03028009a ಇತರೇಷಾಂ ತು ಸರ್ವೇಷಾಂ ಕುರೂಣಾಂ ಕುರುಸತ್ತಮ|

03028009c ದುಃಖೇನಾಭಿಪರೀತಾನಾಂ ನೇತ್ರೇಭ್ಯಃ ಪ್ರಾಪತಜ್ಜಲಂ||

ಕುರುಸತ್ತಮ! ದುಃಖದಿಂದ ಬೆಂದ ಇತರ ಎಲ್ಲ ಕುರುಗಳ ಕಣ್ಣುಗಳಿಂದ ನೀರು ಇಳಿಯುತ್ತಿತ್ತು.

03028010a ಇದಂ ಚ ಶಯನಂ ದೃಷ್ಟ್ವಾ ಯಚ್ಚಾಸೀತ್ತೇ ಪುರಾತನಂ|

03028010c ಶೋಚಾಮಿ ತ್ವಾಂ ಮಹಾರಾಜ ದುಃಖಾನರ್ಹಂ ಸುಖೋಚಿತಂ||

ಮಹಾರಾಜ! ಈ ಹಾಸಿಗೆಯನ್ನು ನೋಡಿ ಹಿಂದೆ ನಿನಗಿದ್ದ ಹಾಸಿಗೆಯನ್ನು ನೆನಪಿಸಿಕೊಂಡು ದುಃಖಿಸುತ್ತೇನೆ. ನಿನಗೆ ಸುಖವೇ ಸರಿಯಾದುದು. ದುಃಖಕ್ಕೆ ಅರ್ಹನಲ್ಲ!

03028011a ದಾಂತಂ ಯಚ್ಚ ಸಭಾಮಧ್ಯೇ ಆಸನಂ ರತ್ನಭೂಷಿತಂ|

03028011c ದೃಷ್ಟ್ವಾ ಕುಶಬೃಸೀಂ ಚೇಮಾಂ ಶೋಕೋ ಮಾಂ ರುಂಧಯತ್ಯಯಂ||

ಸಭಾಮಧ್ಯದಲ್ಲಿದ್ದ ರತ್ನದಿಂದ ಅಲಂಕೃತಗೊಂಡಿದ್ದ ದಂತದ ಸಿಂಹಾಸನವನ್ನು ನೆನಪಿಸಿಕೊಂಡು ಈಗ ನಿನ್ನ ದರ್ಭಾಸನವನ್ನು ನೋಡಿ ಶೋಕವು ನನ್ನ ಉಸಿರುಕಟ್ಟುತ್ತಿದೆ.

03028012a ಯದಪಶ್ಯಂ ಸಭಾಯಾಂ ತ್ವಾಂ ರಾಜಭಿಃ ಪರಿವಾರಿತಂ|

03028012c ತಚ್ಚ ರಾಜನ್ನಪಶ್ಯಂತ್ಯಾಃ ಕಾ ಶಾಂತಿರ್ಹೃದಯಸ್ಯ ಮೇ||

ರಾಜರಿಂದ ಸುತ್ತುವರೆದು ನೀನು ಸಭೆಯಲ್ಲಿದ್ದುದನ್ನು ನೋಡಿದ್ದೆ. ರಾಜನ್! ಈಗ ಅದೆಲ್ಲವೂ ಇಲ್ಲವೆಂದಾಗ ನನ್ನ ಹೃದಯಕ್ಕೆ ಶಾಂತಿಯಾದರೂ ಹೇಗಿರುತ್ತದೆ?

03028013a ಯಾ ತ್ವಾಹಂ ಚಂದನಾದಿಗ್ಧಮಪಶ್ಯಂ ಸೂರ್ಯವರ್ಚಸಂ|

03028013c ಸಾ ತ್ವಾ ಪಂಕಮಲಾದಿಗ್ಧಂ ದೃಷ್ಟ್ವಾ ಮುಹ್ಯಾಮಿ ಭಾರತ||

ಭಾರತ! ಚಂದನದ ಲೇಪವನ್ನು ಹಚ್ಚಿಕೊಂಡು ಸೂರ್ಯವರ್ಚಸನಾಗಿದ್ದ ನಿನ್ನನ್ನು ನೋಡಿದ್ದ ನಾನು ಈಗ ಧೂಳು-ಕೊಳೆಗಳಿಂದ ಲೇಪಿತನಾಗಿರುವುದನ್ನು ನೋಡಿ ಮೂರ್ಛೆಹೋಗುವುದಿಲ್ಲವೇ?

03028014a ಯಾ ವೈ ತ್ವಾ ಕೌಶಿಕೈರ್ವಸ್ತ್ರೈಃ ಶುಭ್ರೈರ್ಬಹುಧನೈಃ ಪುರಾ|

03028014c ದೃಷ್ಟವತ್ಯಸ್ಮಿ ರಾಜೇಂದ್ರ ಸಾ ತ್ವಾಂ ಪಶ್ಯಾಮಿ ಚೀರಿಣಂ||

ಹಿಂದೆ ನೀನು ಶುಭ್ರವಾದ ಬೆಲೆಬಾಳುವ ಕೌಶಿಕವಸ್ತ್ರಗಳಲ್ಲಿದ್ದುದನ್ನು ನೋಡಿದ್ದೆ. ಈಗ ರಾಜೇಂದ್ರ! ನಾನು ನೀನು ಚೀರಿಣವನ್ನು ಧರಿಸಿದುದನ್ನು ನೋಡಬೇಕಾಗಿದೆ!

03028015a ಯಚ್ಚ ತದ್ರುಕ್ಮಪಾತ್ರೀಭಿರ್ಬ್ರಾಹ್ಮಣೇಭ್ಯಃ ಸಹಸ್ರಶಃ|

03028015c ಹ್ರಿಯತೇ ತೇ ಗೃಹಾದನ್ನಂ ಸಂಸ್ಕೃತಂ ಸಾರ್ವಕಾಮಿಕಂ||

03028016a ಯತೀನಾಮಗೃಹಾಣಾಂ ತೇ ತಥೈವ ಗೃಹಮೇಧಿನಾಂ|

03028016c ದೀಯತೇ ಭೋಜನಂ ರಾಜನ್ನತೀವ ಗುಣವತ್ಪ್ರಭೋ|

03028016e ತಚ್ಚ ರಾಜನ್ನಪಶ್ಯಂತ್ಯಾಃ ಕಾ ಶಾಂತಿರ್ಹೃದಯಸ್ಯ ಮೇ||

ರಾಜನ್! ಪ್ರಭೋ! ಸಹಸ್ರಾರು ಬ್ರಾಹ್ಮಣರಿಗೆ ನಿನ್ನ ಮನೆಯಿಂದ ಬಂಗಾರದ ತಟ್ಟೆಗಳಲ್ಲಿ ಎಲ್ಲರ - ಯತಿಗಳಿರಲಿ, ಮನೆಯಿಲ್ಲದವರಿರಲಿ, ಗೃಹಸ್ಥರಿರಲಿ - ಎಲ್ಲರ ನಾಲಿಗೆಯ ರುಚಿಯನ್ನೂ ತೀರಿಸುವ, ಚೆನ್ನಾಗಿ ತಯಾರಿಸಿದ ಆಹಾರವನ್ನು ಹೊತ್ತು ತಂದು ಉತ್ತಮ ಭೋಜನವನ್ನು ನೀಡುತ್ತಿದ್ದ ಆ ಒಂದು ಕಾಲವಿತ್ತು. ಈಗ ನನಗದು ಕಾಣದಿರುವಾಗ, ರಾಜನ್! ನನ್ನ ಹೃದಯಕ್ಕೆ ಏನು ಶಾಂತಿಯಿರಬಹುದು?

03028017a ಯಾಂಸ್ತೇ ಭ್ರಾತೄನ್ಮಹಾರಾಜ ಯುವಾನೋ ಮೃಷ್ಟಕುಂಡಲಾಃ|

03028017c ಅಭೋಜಯಂತ ಮೃಷ್ಟಾನ್ನೈಃ ಸೂದಾಃ ಪರಮಸಂಸ್ಕೃತೈಃ||

03028018a ಸರ್ವಾಂಸ್ತಾನದ್ಯ ಪಶ್ಯಾಮಿ ವನೇ ವನ್ಯೇನ ಜೀವತಃ|

03028018c ಅದುಃಖಾರ್ಹಾನ್ಮನುಷ್ಯೇಂದ್ರ ನೋಪಶಾಮ್ಯತಿ ಮೇ ಮನಃ||

ಮಹಾರಾಜ! ಹೊಳೆಯುವ ಕುಂಡಲಗಳನ್ನು ಧರಿಸಿದ್ದ ಯುವಕರು ನಿನ್ನ ತಮ್ಮಂದಿರಿಗೆ ಉತ್ತಮವಾಗಿ ತಯಾರಿಸಿದ ಮೃಷ್ಟಾನ್ನ ಪದಾರ್ಥಗಳನ್ನು ಉಣಿಸುತ್ತಿದ್ದರು. ಇಂದು ಅವರೆಲ್ಲರೂ ವನದಲ್ಲಿ ವನೋತ್ಪತ್ತಿಗಳನ್ನು ತಿಂದು ಜೀವಿಸುತ್ತಿರುವುದನ್ನು ನೋಡುತ್ತಿದ್ದೇನೆ. ಮನುಷ್ಯೇಂದ್ರ! ಅವರು ದುಃಖಕ್ಕೆ ಅನರ್ಹರು. ನನ್ನ ಮನಸ್ಸು ಶಾಂತಿಯನ್ನೇ ಕಾಣುತ್ತಿಲ್ಲ.

03028019a ಭೀಮಸೇನಮಿಮಂ ಚಾಪಿ ದುಃಖಿತಂ ವನವಾಸಿನಂ|

03028019c ಧ್ಯಾಯಂತಂ ಕಿಂ ನ ಮನ್ಯುಸ್ತೇ ಪ್ರಾಪ್ತೇ ಕಾಲೇ ವಿವರ್ಧತೇ||

ವನದಲ್ಲಿ ವಾಸಿಸುವ ಭೀಮಸೇನನು ದುಃಖಿತನಾಗಿ ಯೋಚನಾಮಗ್ನನಾಗಿರುವುದನ್ನು ನಾನು ನೋಡುತ್ತಿದ್ದೇನೆ. ಕಾಲವು ಕಳೆದಂತೆ ನಿನಗೆ ಸಿಟ್ಟು ಬರುವುದಿಲ್ಲವೇ?

03028020a ಭೀಮಸೇನಂ ಹಿ ಕರ್ಮಾಣಿ ಸ್ವಯಂ ಕುರ್ವಾಣಮಚ್ಯುತ|

03028020c ಸುಖಾರ್ಹಂ ದುಃಖಿತಂ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ಅಚ್ಯುತ! ತನ್ನ ಕೆಲಸಗಳನ್ನು ತಾನಾಗಿಯೇ ಮಾಡಿಕೊಳ್ಳುತ್ತಿದ್ದ, ಸುಖಾರ್ಹ ಭೀಮಸೇನನು ದುಃಖಿತನಾಗಿರುವುದನ್ನು ನೋಡಿ ನಿನಗೆ ಕೋಪವು ಹೆಚ್ಚಾಗುವುದಿಲ್ಲವೇ?

03028021a ಸತ್ಕೃತಂ ವಿವಿಧೈರ್ಯಾನೈರ್ವಸ್ತ್ರೈರುಚ್ಚಾವಚೈಸ್ತಥಾ|

03028021c ತಂ ತೇ ವನಗತಂ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ವಿವಿಧ ವಾಹನಗಳಿಂದಲೂ ವಸ್ತ್ರಗಳಿಂದಲೂ ತೃಪ್ತಿಗೊಂಡು ಸುಖವಾಗಿದ್ದ ಅವನು ವನದಲ್ಲಿರುವುದನ್ನು ನೋಡಿ ನಿನಗೆ ಹೇಗೆ ತಾನೇ ಕೋಪವು ಹೆಚ್ಚಾಗುವುದಿಲ್ಲ?

03028022a ಕುರೂನಪಿ ಹಿ ಯಃ ಸರ್ವಾನ್ ಹಂತುಮುತ್ಸಹತೇ ಪ್ರಭುಃ|

03028022c ತ್ವತ್ಪ್ರಸಾದಂ ಪ್ರತೀಕ್ಷಂಸ್ತು ಸಹತೇಽಯಂ ವೃಕೋದರಃ||

ಆ ಪ್ರಭುವು ಸರ್ವ ಕುರುಗಳನ್ನೂ ಕೊಲ್ಲಲು ಉತ್ಸುಕನಾಗಿದ್ದನು. ಆದರೆ ಆ ವೃಕೋದರನು ನಿನ್ನ ಅಪ್ಪಣೆಯನ್ನು ಕಾಯುತ್ತಾ ಅದನ್ನು ಸಹಿಸಿಕೊಂಡಿದ್ದಾನೆ.

03028023a ಯೋಽರ್ಜುನೇನಾರ್ಜುನಸ್ತುಲ್ಯೋ ದ್ವಿಬಾಹುರ್ಬಹುಬಾಹುನಾ|

03028023c ಶರಾತಿಸರ್ಗೇ ಶೀಘ್ರತ್ವಾತ್ಕಾಲಾಂತಕಯಮೋಪಮಃ||

03028024a ಯಸ್ಯ ಶಸ್ತ್ರಪ್ರತಾಪೇನ ಪ್ರಣತಾಃ ಸರ್ವಪಾರ್ಥಿವಾಃ|

03028024c ಯಜ್ಞೇ ತವ ಮಹಾರಾಜ ಬ್ರಾಹ್ಮಣಾನುಪತಸ್ಥಿರೇ||

03028025a ತಮಿಮಂ ಪುರುಷವ್ಯಾಘ್ರಂ ಪೂಜಿತಂ ದೇವದಾನವೈಃ|

03028025c ಧ್ಯಾಯಂತಮರ್ಜುನಂ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ಯಾರ ಎರಡು ಕೈಗಳು ಕಾರ್ತವೀರ್ಯಾರ್ಜುನನ ಸಹಸ್ರಬಾಹುಗಳ ಸಮಾನವಾಗಿರುವವೋ, ಬಾಣಗಳನ್ನು ಬಿಡುವ ವೇಗದಲ್ಲಿ ಕಾಲಾಂತಕನ ಸಮನಾದ, ಯಾರ ಶಸ್ತ್ರಪ್ರಪಾತಕ್ಕೆ ಸಿಲುಕಿ ಸರ್ವ ಪಾರ್ಥಿವರೂ ಶರಣು ಬಿದ್ದಿದ್ದರೋ, ಮಹಾರಾಜ! ನಿನ್ನ ಯಜ್ಞದಲ್ಲಿ ಬ್ರಾಹ್ಮಣರ ಉಪಚಾರದಲ್ಲಿ ತೊಡಗಿದ್ದ, ದೇವದಾನವರಿಂದ ಪೂಜಿತ ಈ ಪುರುಷವ್ಯಾಘ್ರ ಅರ್ಜುನನೂ ಕೂಡ ಧ್ಯಾನತತ್ಪರನಾಗಿರುವುದನ್ನು ಕಂಡು ಹೇಗೆ ತಾನೇ ನಿನ್ನ ಸಿಟ್ಟು ಹೆಚ್ಚಾಗುವುದಿಲ್ಲ?

03028026a ದೃಷ್ಟ್ವಾ ವನಗತಂ ಪಾರ್ಥಮದುಃಖಾರ್ಹಂ ಸುಖೋಚಿತಂ|

03028026c ನ ಚ ತೇ ವರ್ಧತೇ ಮನ್ಯುಸ್ತೇನ ಮುಹ್ಯಾಮಿ ಭಾರತ||

ಭಾರತ! ದುಃಖಕ್ಕೆ ಅನರ್ಹನಾದ, ಸುಖಕ್ಕೆ ಅರ್ಹನಾದ ಪಾರ್ಥನು ವನವನ್ನು ಸೇರಿದುದನ್ನು ನೋಡಿ ನಿನ್ನ ಕೋಪವು ಹೆಚ್ಚಾಗುತ್ತಿಲ್ಲವೆಂದರೆ ನನಗೆ ಆಶ್ಚರ್ಯವೆನಿಸುತ್ತಿದೆ.

03028027a ಯೋ ದೇವಾಂಶ್ಚ ಮನುಷ್ಯಾಂಶ್ಚ ಸರ್ಪಾಂಶ್ಚೈಕರಥೋಽಜಯತ್|

03028027c ತಂ ತೇ ವನಗತಂ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ಒಬ್ಬನೇ ರಥವನ್ನೇರಿ ದೇವತೆಗಳನ್ನೂ, ಮನುಷ್ಯರನ್ನೂ, ಸರ್ಪಗಳನ್ನೂ ಜಯಿಸಿದ ಅವನು ವನವನ್ನು ಸೇರಿದುದನ್ನು ನೋಡಿ ನಿನ್ನ ಸಿಟ್ಟು ಹೇಗೆ ತಾನೇ ಹೆಚ್ಚಾಗುತ್ತಿಲ್ಲ?

03028028a ಯೋ ಯಾನೈರದ್ಭುತಾಕಾರೈರ್ಹಯೈರ್ನಾಗೈಶ್ಚ ಸಂವೃತಃ|

03028028c ಪ್ರಸಹ್ಯ ವಿತ್ತಾನ್ಯಾದತ್ತ ಪಾರ್ಥಿವೇಭ್ಯಃ ಪರಂತಪಃ||

ಆ ಪರಂತಪನು ಅದ್ಭುತ ಆಕಾರಗಳ ರಥ, ಕುದುರೆಗಳು ಮತ್ತು ಆನೆಗಳಿಂದ ಸುತ್ತುವರೆದು ಬಲವನ್ನುಪಯೋಗಿಸಿ ಪಾರ್ಥಿವೇಂದ್ರರಿಂದ ಕಪ್ಪ ಕಾಣಿಕೆಗಳನ್ನು ಕಸಿದುಕೊಳ್ಳಲಿಲ್ಲವೇ?

03028029a ಕ್ಷಿಪತ್ಯೇಕೇನ ವೇಗೇನ ಪಂಚ ಬಾಣಶತಾನಿ ಯಃ|

03028029c ತಂ ತೇ ವನಗತಂ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ಅವನು ಒಂದೇ ಸಾರಿ ಐದುನೂರು ಬಾಣಗಳನ್ನು ಬಿಡುವುದಿಲ್ಲವೇ? ಅಂಥವನು ಈಗ ವನವನ್ನು ಸೇರಿದ್ದಾನೆ ಎಂದು ನೋಡಿ ನಿನ್ನ ಸಿಟ್ಟೇಕೆ ಹೆಚ್ಚಾಗುತ್ತಿಲ್ಲ?

03028030a ಶ್ಯಾಮಂ ಬೃಹಂತಂ ತರುಣಂ ಚರ್ಮಿಣಾಮುತ್ತಮಂ ರಣೇ|

03028030c ನಕುಲಂ ತೇ ವನೇ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ರಣದಲ್ಲಿ ತುರಾಣಿ ಹಿಡಿಯುವವರಲ್ಲಿ ಶ್ರೇಷ್ಠ, ಶ್ಯಾಮವರ್ಣದ, ಎತ್ತರವಾಗಿರುವ ತರುಣ ನಕುಲನು ವನದಲ್ಲಿದ್ದಾನೆಂದು ನೋಡಿ ನಿನ್ನ ಸಿಟ್ಟೇಕೆ ಹೆಚ್ಚಾಗುತ್ತಿಲ್ಲ?

03028031a ದರ್ಶನೀಯಂ ಚ ಶೂರಂ ಚ ಮಾದ್ರೀಪುತ್ರಂ ಯುಧಿಷ್ಠಿರ|

03028031c ಸಹದೇವಂ ವನೇ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ಯುಧಿಷ್ಠಿರ! ಸುಂದರ ಶೂರ ಮಾದ್ರೀಪುತ್ರ ಸಹದೇವನು ವನದಲ್ಲಿರುವುದನ್ನು ನೋಡಿ ನಿನ್ನ ಸಿಟ್ಟೇಕೆ ಹೆಚ್ಚಾಗುತ್ತಿಲ್ಲ?

03028032a ದ್ರುಪದಸ್ಯ ಕುಲೇ ಜಾತಾಂ ಸ್ನುಷಾಂ ಪಾಂಡೋರ್ಮಹಾತ್ಮನಃ|

03028032c ಮಾಂ ತೇ ವನಗತಾಂ ದೃಷ್ಟ್ವಾ ಕಸ್ಮಾನ್ಮನ್ಯುರ್ನ ವರ್ಧತೇ||

ದ್ರುಪದನ ಕುಲದಲ್ಲಿ ಹುಟ್ಟಿದ, ಮಹಾತ್ಮ ಪಾಂಡುವಿನ ಸೊಸೆ ನಾನು ವನವನ್ನು ಸೇರಿದ್ದುದನ್ನು ನೋಡಿಯೂ ನಿನ್ನ ಕೋಪವು ಏಕೆ ಹೆಚ್ಚಾಗುತ್ತಿಲ್ಲ?

03028033a ನೂನಂ ಚ ತವ ನೈವಾಸ್ತಿ ಮನ್ಯುರ್ಭರತಸತ್ತಮ|

03028033c ಯತ್ತೇ ಭ್ರಾತೄಂಶ್ಚ ಮಾಂ ಚೈವ ದೃಷ್ಟ್ವಾ ನ ವ್ಯಥತೇ ಮನಃ||

ಭರತಸತ್ತಮ! ನಿನ್ನ ತಮ್ಮಂದಿರನ್ನು ಮತ್ತು ನನ್ನನ್ನು ನೋಡಿಯೂ ನಿನ್ನ ಮನಸ್ಸು ವ್ಯಥಿತಗೊಳ್ಳುವುದಿಲ್ಲ ಎಂದರೆ ನಿನ್ನಲ್ಲಿ ಇನ್ನು ಏನೂ ಸಿಟ್ಟು ಉಳಿದಿರುವುದಕ್ಕಿಲ್ಲ!

03028034a ನ ನಿರ್ಮನ್ಯುಃ ಕ್ಷತ್ರಿಯೋಽಸ್ತಿ ಲೋಕೇ ನಿರ್ವಚನಂ ಸ್ಮೃತಂ|

03028034c ತದದ್ಯ ತ್ವಯಿ ಪಶ್ಯಾಮಿ ಕ್ಷತ್ರಿಯೇ ವಿಪರೀತವತ್||

ಆದರೆ ಸಿಟ್ಟಿಲ್ಲದಿರುವ ಕ್ಷತ್ರಿಯನೇ ಲೋಕದಲ್ಲಿ ಇಲ್ಲ ಎನ್ನುವುದಕ್ಕೆ ವಿರುದ್ಧ ಮಾತೇ ಇಲ್ಲದಿರುವಾಗ ಇಂದು ಕ್ಷತ್ರಿಯನಾದ ನಿನ್ನನ್ನು ನೋಡಿ ಆ ಮಾತಿಗೆ ವಿರುದ್ಧವಾಗಿರುವುದನ್ನು ನೋಡುತ್ತಿದ್ದೇನೆ.

03028035a ಯೋ ನ ದರ್ಶಯತೇ ತೇಜಃ ಕ್ಷತ್ರಿಯಃ ಕಾಲ ಆಗತೇ|

03028035c ಸರ್ವಭೂತಾನಿ ತಂ ಪಾರ್ಥ ಸದಾ ಪರಿಭವಂತ್ಯುತ||

ಪಾರ್ಥ! ಸಮಯವು ಬಂದಾಗ ತನ್ನ ತೇಜಸ್ಸನ್ನು ತೋರಿಸದೇ ಇರುವ ಕ್ಷತ್ರಿಯನನ್ನು ಸರ್ವಭೂತಗಳೂ ಸದಾ ಕೀಳಾಗಿ ಕಾಣುತ್ತವೆ ಎಂದು ಹೇಳುತ್ತಾರೆ.

03028036a ತತ್ತ್ವಯಾ ನ ಕ್ಷಮಾ ಕಾರ್ಯಾ ಶತ್ರೂನ್ಪ್ರತಿ ಕಥಂ ಚನ|

03028036c ತೇಜಸೈವ ಹಿ ತೇ ಶಕ್ಯಾ ನಿಹಂತುಂ ನಾತ್ರ ಸಂಶಯಃ||

ಶತ್ರುಗಳನ್ನು ಯಾವಾಗಲೂ ನೀನು ಕ್ಷಮಿಸಬಾರದು. ಯಾಕೆಂದರೆ ನಿನ್ನ ತೇಜಸ್ಸಿನಿಂದಲೇ ಅವರನ್ನು ಕಡಿದುರಿಳಿಸಲು ಸಾಧ್ಯ ಎನ್ನುವುದರಲ್ಲಿ ಸಂಶಯವೇ ಇಲ್ಲ.

03028037a ತಥೈವ ಯಃ ಕ್ಷಮಾಕಾಲೇ ಕ್ಷತ್ರಿಯೋ ನೋಪಶಾಮ್ಯತಿ|

03028037c ಅಪ್ರಿಯಃ ಸರ್ವಭೂತಾನಾಂ ಸೋಽಮುತ್ರೇಹ ಚ ನಶ್ಯತಿ||

ಹಾಗೆಯೇ ಕ್ಷಮಾಕಾಲದಲ್ಲಿ ಕ್ಷಮಿಸದೇ ಇರುವ ಕ್ಷತ್ರಿಯನು ಸರ್ವಭೂತಗಳಿಗೆ ಅಪ್ರಿಯನಾಗಿ ಇಲ್ಲಿ ಮತ್ತು ಇದರ ನಂತರ ನಾಶ ಹೊಂದುತ್ತಾನೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ರೌಪದೀಪರಿತಾಪವಾಕ್ಯೇ ಅಷ್ಟಾವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ರೌಪದೀಪರಿತಾಪವಾಕ್ಯದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯವು.

Related image

Comments are closed.