ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
೨೫೬
ಜಯದ್ರಥವಿಮೋಕ್ಷಣ
ಭೀಮನು ಜಯದ್ರಥನನ್ನು ಹಿಡಿದು ಅವನ ತಲೆಗೆ ಒದೆದು, ಮೂರ್ಛೆಗೊಳಿಸಿ, ಐದು ಜುಟ್ಟುಗಳನ್ನು ಮಾತ್ರ ಬಿಟ್ಟು ತಲೆಯನ್ನು ಬೋಳಿಸಿ, ರಥಕ್ಕೆ ಕಟ್ಟಿ ಯುಧಿಷ್ಠಿರನಲ್ಲಿಗೆ ಕರೆತಂದುದು (೧-೧೪). ಯುಧಿಷ್ಠಿರನು ಜಯದ್ರಥನನ್ನು ಬಿಡುಗಡೆ ಮಾಡಿದುದು (೧೫-೨೩). ಜಯದ್ರಥನು ಗಂಗಾದ್ವಾರಕ್ಕೆ ಹೋಗಿ ಹರನ ಕುರಿತು ತಪಸ್ಸನ್ನಾಚರಿಸಿ ಐವರು ಪಾಂಡವರನ್ನು ಕೊಲ್ಲಲು ವರವನ್ನು ಕೇಳಲು ಹರನು ಅದು ಆಗುವುದಿಲ್ಲವೆಂದು ಅರ್ಜುನನನ್ನು ಬಿಟ್ಟು ಇತರರನ್ನು ಯುದ್ಧದಲ್ಲಿ ತಡೆಯಬಲ್ಲನೆಂದು ವರವನ್ನಿತ್ತುದು (೨೪-೩೦).
03256001 ವೈಶಂಪಾಯನ ಉವಾಚ|
03256001a ಜಯದ್ರಥಸ್ತು ಸಂಪ್ರೇಕ್ಷ್ಯ ಭ್ರಾತರಾವುದ್ಯತಾಯುಧೌ|
03256001c ಪ್ರಾದ್ರವತ್ತೂರ್ಣಮವ್ಯಗ್ರೋ ಜೀವಿತೇಪ್ಸುಃ ಸುದುಃಖಿತಃ||
ವೈಶಂಪಾಯನನು ಹೇಳಿದನು: “ಆಯುಧಗಳನ್ನು ಹಿಡಿದು ಓಡಿ ಬರುತ್ತಿರುವ ಸಹೋದರರನ್ನು ಕಂಡು ಜಯದ್ರಥನು ಬಹಳ ದುಃಖಿತನಾಗಿದ್ದರೂ ತನ್ನ ಜೀವವನ್ನು ಉಳಿಸಿಕೊಳ್ಳಲು ಇನ್ನೂ ಜೋರಾಗಿ ಓಡಿದನು.
03256002a ತಂ ಭೀಮಸೇನೋ ಧಾವಂತಮವತೀರ್ಯ ರಥಾದ್ಬಲೀ|
03256002c ಅಭಿದ್ರುತ್ಯ ನಿಜಗ್ರಾಹ ಕೇಶಪಕ್ಷೇಽತ್ಯಮರ್ಷಣಃ||
ಬಲೀ ಭೀಮಸೇನನು ರಥದಿಂದ ಇಳಿದು ಓಡುತ್ತಿರುವವನ ಬೆನ್ನತ್ತಿ ಕೋಪದಿಂದ ಅವನ ಕೂದಲನ್ನು ಹಿಡಿದನು.
03256003a ಸಮುದ್ಯಮ್ಯ ಚ ತಂ ರೋಷಾನ್ನಿಷ್ಪಿಪೇಷ ಮಹೀತಲೇ|
03256003c ಗಲೇ ಗೃಹೀತ್ವಾ ರಾಜಾನಂ ತಾಡಯಾಮಾಸ ಚೈವ ಹ||
ರೋಷದಿಂದ ಆ ರಾಜನನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿದು, ಕತ್ತನ್ನು ಹಿಡಿದು ಹೊಡೆಯತೊಡಗಿದನು.
03256004a ಪುನಃ ಸಂಜೀವಮಾನಸ್ಯ ತಸ್ಯೋತ್ಪತಿತುಮಿಚ್ಚತಃ|
03256004c ಪದಾ ಮೂರ್ಧ್ನಿ ಮಹಾಬಾಹುಃ ಪ್ರಾಹರದ್ವಿಲಪಿಷ್ಯತಃ||
ಅವನು ಪುನಃ ಎಚ್ಚರನಾಗಿ, ಮೇಲೇಳಲು ಪ್ರಯತ್ನಿಸಿ ವಿಲಪಿಸುತ್ತಿರಲು ಮಹಾಬಾಹುವು ಅವನ ತಲೆಯನ್ನು ಕಾಲಿನಿಂದ ಒದ್ದನು.
03256005a ತಸ್ಯ ಜಾನುಂ ದದೌ ಭೀಮೋ ಜಘ್ನೇ ಚೈನಮರತ್ನಿನಾ|
03256005c ಸ ಮೋಹಮಗಮದ್ರಾಜಾ ಪ್ರಹಾರವರಪೀಡಿತಃ||
ತೊಡೆಯಿಂದ ಕೆಳಗೊತ್ತಿ ಮುಷ್ಟಿಯಿಂದ ಭೀಮನು ಹೊಡೆಯಲು ಚೆನ್ನಾಗಿ ಪೆಟ್ಟುತಿಂದು ಪೀಡಿತನಾದ ರಾಜನು ಮೂರ್ಛಿತನಾದನು.
03256006a ವಿರೋಷಂ ಭೀಮಸೇನಂ ತು ವಾರಯಾಮಾಸ ಫಲ್ಗುನಃ|
03256006c ದುಃಶಲಾಯಾಃ ಕೃತೇ ರಾಜಾ ಯತ್ತದಾಹೇತಿ ಕೌರವ||
ರೋಷದಲ್ಲಿದ್ದ ಭೀಮಸೇನನನ್ನು ಫಲ್ಗುನನು ತಡೆದನು: “ಕೌರವ! ದುಃಶಲೆಗಾಗಿಯಾದರೂ ರಾಜನು ಹೇಳಿದಂತೆ ಮಾಡು!”
03256007 ಭೀಮಸೇನ ಉವಾಚ|
03256007a ನಾಯಂ ಪಾಪಸಮಾಚಾರೋ ಮತ್ತೋ ಜೀವಿತುಮರ್ಹತಿ|
03256007c ದ್ರೌಪದ್ಯಾಸ್ತದನರ್ಹಾಯಾಃ ಪರಿಕ್ಲೇಷ್ಟಾ ನರಾಧಮಃ||
ಭೀಮಸೇನನು ಹೇಳಿದನು: “ಮುಗ್ಧ ದ್ರೌಪದಿಯನ್ನು ಬಲಾತ್ಕರಿಸಿದ ಈ ಪಾಪಿ ನರಾಧಮನು ಜೀವಿಸಿರಬಾರದು!
03256008a ಕಿಂ ನು ಶಕ್ಯಂ ಮಯಾ ಕರ್ತುಂ ಯದ್ರಾಜಾ ಸತತಂ ಘೃಣೀ|
03256008c ತ್ವಂ ಚ ಬಾಲಿಶಯಾ ಬುದ್ಧ್ಯಾ ಸದೈವಾಸ್ಮಾನ್ಪ್ರಬಾಧಸೇ||
ಸತತವೂ ಘೃಣಿಯಾಗಿರುವ ನಮ್ಮ ರಾಜನು ಹೇಳುವುದನ್ನು ನಾನು ಹೇಗೆ ತಾನೇ ಮಾಡಲು ಶಕ್ಯ? ನೀನು ಕೂಡ ನಿನ್ನ ಬಾಲಿಶ ಬುದ್ಧಿಯಿಂದ ಸದಾ ನನ್ನನ್ನು ಕಾಡುತ್ತಿರುತ್ತೀಯೆ!”
03256009a ಏವಮುಕ್ತ್ವಾ ಸಟಾಸ್ತಸ್ಯ ಪಂಚ ಚಕ್ರೇ ವೃಕೋದರಃ|
03256009c ಅರ್ಧಚಂದ್ರೇಣ ಬಾಣೇನ ಕಿಂ ಚಿದಬ್ರುವತಸ್ತದಾ||
ಹೀಗೆ ಹೇಳಿ ವೃಕೋದರನು ಅರ್ಧಚಂದ್ರದ ಬಾಣದಿಂದ ಐದು ಜುಟ್ಟುಗಳನ್ನು ಮಾತ್ರ ಬಿಟ್ಟು ಅವನ ತಲೆಯನ್ನು ಬೋಳಿಸಿದನು. ಆಗ ಅವನು ಏನನ್ನೂ ಹೇಳಲಿಲ್ಲ.
03256010a ವಿಕಲ್ಪಯಿತ್ವಾ ರಾಜಾನಂ ತತಃ ಪ್ರಾಹ ವೃಕೋದರಃ|
03256010c ಜೀವಿತುಂ ಚೇಚ್ಚಸೇ ಮೂಢ ಹೇತುಂ ಮೇ ಗದತಃ ಶೃಣು||
ಆಗ ರಾಜನಿಗೆ ಎರಡು ಆಯ್ಕೆಗಳನ್ನಿತ್ತು ಹೇಳಿದನು: “ಮೂಢ! ಜೀವಿಸಲು ಇಚ್ಛಿಸುತ್ತೀಯಾದರೆ ನಾನು ಈಗ ಹೇಳುವುದನ್ನು ಕೇಳು.
03256011a ದಾಸೋಽಸ್ಮೀತಿ ತ್ವಯಾ ವಾಚ್ಯಂ ಸಂಸತ್ಸು ಚ ಸಭಾಸು ಚ|
03256011c ಏವಂ ತೇ ಜೀವಿತಂ ದದ್ಯಾಮೇಷ ಯುದ್ಧಜಿತೋ ವಿಧಿಃ||
ಸಂಸತ್ತು ಮತ್ತು ಸಭೆಗಳಲ್ಲಿ “ನಾನು ದಾಸ!” ಎಂದು ನೀನು ಹೇಳಬೇಕು. ಹೀಗೆ ಮಾತ್ರ ನಿನಗೆ ಜೀವಿಸಲು ಬಿಡುತ್ತೇನೆ. ಇದು ಯುದ್ಧದಲ್ಲಿ ಗೆದ್ದವರ ವಿಧಿ.”
03256012a ಏವಮಸ್ತ್ವಿತಿ ತಂ ರಾಜಾ ಕೃಚ್ಚ್ರಪ್ರಾಣೋ ಜಯದ್ರಥಃ|
03256012c ಪ್ರೋವಾಚ ಪುರುಷವ್ಯಾಘ್ರಂ ಭೀಮಮಾಹವಶೋಭಿನಂ||
ಪ್ರಾಣಕ್ಕೆ ಕಷ್ಟಬಿದ್ದ ರಾಜಾ ಜಯದ್ರಥನು “ಹಾಗೆಯೇ ಆಗಲಿ” ಎಂದು ಯುದ್ಧದಲ್ಲಿ ಶೋಭಿಸುತ್ತಿದ್ದ ಪುರುಷವ್ಯಾಘ್ರ ಭೀಮನಿಗೆ ಹೇಳಿದನು.
03256013a ತತ ಏನಂ ವಿಚೇಷ್ಟಂತಂ ಬದ್ಧ್ವಾ ಪಾರ್ಥೋ ವೃಕೋದರಃ|
03256013c ರಥಮಾರೋಪಯಾಮಾಸ ವಿಸಂಜ್ಞಂ ಪಾಂಸುಗುಣ್ಠಿತಂ||
03256014a ತತಸ್ತಂ ರಥಮಾಸ್ಥಾಯ ಭೀಮಃ ಪಾರ್ಥಾನುಗಸ್ತದಾ|
03256014c ಅಭ್ಯೇತ್ಯಾಶ್ರಮಮಧ್ಯಸ್ಥಮಭ್ಯಗಚ್ಚದ್ಯುಧಿಷ್ಠಿ|ರಂ|
ಆಗ ಪಾರ್ಥ ವೃಕೋದರ ಭೀಮನು ಮೂರ್ಛಿತನಾದ ಅವನನ್ನು ಹಂದಾಡದಂತೆ ಕಟ್ಟಿ ರಥದಲ್ಲಿ ಏರಿಸಿ, ಆಶ್ರಮ ಮಧ್ಯದಲ್ಲಿ ಕುಳಿತಿದ್ದ ಪಾರ್ಥ ಯುಧಿಷ್ಠಿರನಲ್ಲಿಗೆ ಬಂದನು.
03256015a ದರ್ಶಯಾಮಾಸ ಭೀಮಸ್ತು ತದವಸ್ಥಂ ಜಯದ್ರಥಂ|
03256015c ತಂ ರಾಜಾ ಪ್ರಾಹಸದ್ದೃಷ್ಟ್ವಾ ಮುಚ್ಯತಾಮಿತಿ ಚಾಬ್ರವೀತ್||
ಆ ಅವಸ್ಥೆಯಲ್ಲಿದ್ದ ಜಯದ್ರಥನನ್ನು ಭೀಮನು ರಾಜನಿಗೆ ತೋರಿಸಲು ರಾಜನು ನೋಡಿ ನಕ್ಕು, “ಇವನನ್ನು ಬಿಟ್ಟುಬಿಡು” ಎಂದನು.
03256016a ರಾಜಾನಂ ಚಾಬ್ರವೀದ್ಭೀಮೋ ದ್ರೌಪದ್ಯೈ ಕಥಯೇತಿ ವೈ|
03256016c ದಾಸಭಾವಂ ಗತೋ ಹ್ಯೇಷ ಪಾಂಡೂನಾಂ ಪಾಪಚೇತನಃ||
ಭೀಮನು ರಾಜನಿಗೆ ಹೇಳಿದನು: “ಈ ಪಾಪಚೇತನನು ಪಾಂಡವರ ದಾಸನಾಗಿದ್ದಾನೆ ಎಂದು ದ್ರೌಪದಿಗೆ ಹೇಳು!”
03256017a ತಮುವಾಚ ತತೋ ಜ್ಯೇಷ್ಠೋ ಭ್ರಾತಾ ಸಪ್ರಣಯಂ ವಚಃ|
03256017c ಮುಂಚೈನಮಧಮಾಚಾರಂ ಪ್ರಮಾಣಂ ಯದಿ ತೇ ವಯಂ||
ಆಗ ಹಿರಿಯಣ್ಣನು ಮೃದುವಾಗಿ ಈ ಮಾತುಗಳನ್ನಾಡಿದನು: “ನನ್ನ ಮಾತುಗಳೇ ಪ್ರಮಾಣವೆಂದಾದರೆ ಈ ಅಧಮಾಚಾರನನ್ನು ಬಿಟ್ಟುಬಿಡು!”
03256018a ದ್ರೌಪದೀ ಚಾಬ್ರವೀದ್ಭೀಮಮಭಿಪ್ರೇಕ್ಷ್ಯ ಯುಧಿಷ್ಠಿರಂ|
03256018c ದಾಸೋಽಯಂ ಮುಚ್ಯತಾಂ ರಾಜ್ಞಸ್ತ್ವಯಾ ಪಂಚಸಟಃ ಕೃತಃ||
ಯುಧಿಷ್ಠಿರನನ್ನು ನೋಡಿ ದ್ರೌಪದಿಯು ಭೀಮನಿಗೆ ಹೇಳಿದಳು: “ರಾಜನ ದಾಸನನ್ನು ಬಿಡುಗಡೆಗೊಳಿಸು. ಐದು ಜುಟ್ಟುಗಳನ್ನು ಮಾಡಿದ್ದೀಯೆ!”
03256019a ಸ ಮುಕ್ತೋಽಭ್ಯೇತ್ಯ ರಾಜಾನಮಭಿವಾದ್ಯ ಯುಧಿಷ್ಠಿರಂ|
03256019c ವವಂದೇ ವಿಹ್ವಲೋ ರಾಜಾ ತಾಂಶ್ಚ ಸರ್ವಾನ್ಮುನೀಂಸ್ತದಾ||
ಬಿಡುಗಡೆಮಾಡಲ್ಪಟ್ಟ ರಾಜನು ಯುಧಿಷ್ಠಿರನ ಬಳಿಹೋಗಿ ವಂದಿಸಿದನು. ಆಗ ಅಲ್ಲಿ ಸೇರಿದ್ದ ಎಲ್ಲರೂ, ರಾಜನೂ ವಿಹ್ವಲರಾದರು.
03256020a ತಮುವಾಚ ಘೃಣೀ ರಾಜಾ ಧರ್ಮಪುತ್ರೋ ಯುಧಿಷ್ಠಿರಃ|
03256020c ತಥಾ ಜಯದ್ರಥಂ ದೃಷ್ಟ್ವಾ ಗೃಹೀತಂ ಸವ್ಯಸಾಚಿನಃ||
ಘೃಣೀ ರಾಜ ಧರ್ಮಪುತ್ರ ಯುಧಿಷ್ಠಿರನು ಸವ್ಯಸಾಚಿಯಿಂದ ಹಿಡಿದು ನಿಲ್ಲಿಸಲ್ಪಟ್ಟ ಜಯದ್ರಥನಿಗೆ ಹೀಗೆ ಹೇಳಿದನು:
03256021a ಅದಾಸೋ ಗಚ್ಚ ಮುಕ್ತೋಽಸಿ ಮೈವಂ ಕಾರ್ಷೀಃ ಪುನಃ ಕ್ವ ಚಿತ್|
03256021c ಸ್ತ್ರೀಕಾಮುಕ ಧಿಗಸ್ತು ತ್ವಾಂ ಕ್ಷುದ್ರಃ ಕ್ಷುದ್ರಸಹಾಯವಾನ್|
03256021e ಏವಂವಿಧಂ ಹಿ ಕಃ ಕುರ್ಯಾತ್ತ್ವದನ್ಯಃ ಪುರುಷಾಧಮಃ||
“ಅದಾಸನಾಗಿ ಹೋಗು! ಮುಕ್ತನಾಗಿದ್ದೀಯೆ! ಆದರೆ ಪುನಃ ಇದನ್ನು ಮಾಡಬೇಡ! ಸ್ತ್ರೀಕಾಮುಕನಾದ, ಕ್ಷುದ್ರನಾದ ನಿನಗೆ ಮತ್ತು ಕ್ಷುದ್ರರಾದ ನಿನ್ನ ಸಹಾಯಕರಿಗೆ ಧಿಕ್ಕಾರ! ನಿನ್ನಂಥಹ ನರಾಧಮನಲ್ಲದೇ ಇನ್ನ್ಯಾರು ಈ ರೀತಿ ಮಾಡುತ್ತಿದ್ದರು?”
03256022a ಗತಸತ್ತ್ವಮಿವ ಜ್ಞಾತ್ವಾ ಕರ್ತಾರಮಶುಭಸ್ಯ ತಂ|
03256022c ಸಂಪ್ರೇಕ್ಷ್ಯ ಭರತಶ್ರೇಷ್ಠಃ ಕೃಪಾಂ ಚಕ್ರೇ ನರಾಧಿಪಃ||
ಅಶುಭವನ್ನು ಮಾಡಿದ ಅವನಲ್ಲಿ ಸತ್ವವು ಹೊರಟುಹೋಗಿದೆ ಎಂದು ತಿಳಿದು ಭರತಶ್ರೇಷ್ಠ ನರಾಧಿಪನಿಗೆ ಕೃಪೆಯುಂಟಾಯಿತು.
03256023a ಧರ್ಮೇ ತೇ ವರ್ಧತಾಂ ಬುದ್ಧಿರ್ಮಾ ಚಾಧರ್ಮೇ ಮನಃ ಕೃಥಾಃ|
03256023c ಸಾಶ್ವಃ ಸರಥಪಾದಾತಃ ಸ್ವಸ್ತಿ ಗಚ್ಚ ಜಯದ್ರಥ||
“ನಿನ್ನ ಬುದ್ಧಿಯನ್ನು ಧರ್ಮದಲ್ಲಿ ಹೆಚ್ಚಿಸಬೇಕು! ಅಧರ್ಮಕ್ಕೆ ಮನಸ್ಸು ಕೊಡಬೇಡ. ಜಯದ್ರಥ! ಮಂಗಳವಾಗಲಿ! ಅಶ್ವ, ರಥ, ಪದಾತಿಗಳೊಂದಿಗೆ ಹೋಗು!”
03256024a ಏವಮುಕ್ತಸ್ತು ಸವ್ರೀಡಂ ತೂಷ್ಣೀಂ ಕಿಂ ಚಿದವಾಙ್ಮುಖಃ|
03256024c ಜಗಾಮ ರಾಜಾ ದುಃಖಾರ್ತೋ ಗಂಗಾದ್ವಾರಾಯ ಭಾರತ||
ಭಾರತ! ಇದನ್ನು ಕೇಳಿ ತುಂಬಾ ನಾಚಿಕೊಂಡು ಸುಮ್ಮನಾಗಿ ಮುಖವನ್ನು ಕೆಳಮಾಡಿಕೊಂಡು ದುಃಖಾರ್ತ ರಾಜನು ಗಂಗಾದ್ವಾರಕ್ಕೆ ಹೋದನು.
03256025a ಸ ದೇವಂ ಶರಣಂ ಗತ್ವಾ ವಿರೂಪಾಕ್ಷಮುಮಾಪತಿಂ|
03256025c ತಪಶ್ಚಚಾರ ವಿಪುಲಂ ತಸ್ಯ ಪ್ರೀತೋ ವೃಷಧ್ವ|ಜಃ|
ಅಲ್ಲಿ ಅವನು ವಿರೂಪಾಕ್ಷ, ಉಮಾಪತಿ ದೇವನಿಗೆ ಶರಣು ಹೊಕ್ಕು ವಿಪುಲ ತಪಸ್ಸನ್ನು ನಡೆಸಿದನು. ವೃಷಧ್ವಜನು ಅವನಮೇಲೆ ಪ್ರೀತನಾದನು.
03256026a ಬಲಿಂ ಸ್ವಯಂ ಪ್ರತ್ಯಗೃಹ್ಣಾತ್ಪ್ರೀಯಮಾಣಸ್ತ್ರಿಲೋಚನಃ|
03256026c ವರಂ ಚಾಸ್ಮೈ ದದೌ ದೇವಃ ಸ ಚ ಜಗ್ರಾಹ ತಚ್ಚೃಣು||
ಪ್ರೀತನಾದ ತ್ರಿಲೋಚನನು ಅವನಿಂದ ಸ್ವಯಂ ತಾನೇ ಬಲಿಯನ್ನು ಸ್ವೀಕರಿಸಿದನು. ಅವನಿಗೆ ದೇವನು ವರವನ್ನಿತ್ತನು, ಅವನು ಸ್ವೀಕರಿಸಿದನು. ಅದನ್ನು ಕೇಳು.
03256027a ಸಮಸ್ತಾನ್ಸರಥಾನ್ಪಂಚ ಜಯೇಯಂ ಯುಧಿ ಪಾಂಡವಾನ್|
03256027c ಇತಿ ರಾಜಾಬ್ರವೀದ್ದೇವಂ ನೇತಿ ದೇವಸ್ತಮಬ್ರವೀತ್||
“ಯುದ್ಧದಲ್ಲಿ ರಥಿಕರಾಗಿರುವ ಐವರು ಪಾಂಡವರೆಲ್ಲರನ್ನೂ ನಾನು ಜಯಿಸುವಂತಾಗಲಿ” ಎಂದು ರಾಜನು ದೇವನಿಗೆ ಹೇಳಲು “ಇದಾಗುವುದಿಲ್ಲ” ಎಂದು ದೇವನು ಅವನಿಗೆ ಹೇಳಿದನು.
03256028a ಅಜಯ್ಯಾಂಶ್ಚಾಪ್ಯವಧ್ಯಾಂಶ್ಚ ವಾರಯಿಷ್ಯಸಿ ತಾನ್ಯುಧಿ|
03256028c ಋತೇಽರ್ಜುನಂ ಮಹಾಬಾಹುಂ ದೇವೈರಪಿ ದುರಾಸದಂ||
“ದೇವತೆಗಳಿಗೂ ದುರಾಸದ ಮಹಾಬಾಹು ಅರ್ಜುನನನ್ನು ಬಿಟ್ಟು ಅಜೇಯರೂ ಅವಧ್ಯರೂ ಆದ ಅವರನ್ನು ನೀನು ಯುದ್ಧದಲ್ಲಿ ತಡೆಯಬಲ್ಲೆ.
03256029a ಯಮಾಹುರಜಿತಂ ದೇವಂ ಶಂಖಚಕ್ರಗದಾಧರಂ|
03256029c ಪ್ರಧಾನಃ ಸೋಽಸ್ತ್ರವಿದುಷಾಂ ತೇನ ಕೃಷ್ಣೇನ ರಕ್ಷ್ಯತೇ||
ನಾವು ಯಾರನ್ನು ಅಜಿತ ದೇವನೆಂದು ಹೇಳುತ್ತೇವೋ ಆ ಶಂಖಚಕ್ರಗದಾಧರ, ಅಸ್ತ್ರವಿದುಷರಲ್ಲಿ ಪ್ರಧಾನನಾದ ಕೃಷ್ಣನಿಂದ ಅವನು ರಕ್ಷಿತನಾಗಿದ್ದಾನೆ.”
03256030a ಏವಮುಕ್ತಸ್ತು ನೃಪತಿಃ ಸ್ವಮೇವ ಭವನಂ ಯಯೌ|
03256030c ಪಾಂಡವಾಶ್ಚ ವನೇ ತಸ್ಮಿನ್ನ್ಯವಸನ್ಕಾಮ್ಯಕೇ ತದಾ||
ಹೀಗೆ ಹೇಳಲ್ಪಟ್ಟ ನೃಪತಿಯು ತನ್ನ ಭವನಕ್ಕೆ ತೆರಳಿದನು. ಮತ್ತು ಪಾಂಡವರು ಆ ಕಾಮ್ಯಕ ವನದಲ್ಲಿಯೇ ವಾಸಿಸಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಜಯದ್ರಥವಿಮೋಕ್ಷಣೇ ಷಟ್‌ಪಂಚಾಶದಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಜಯದ್ರಥವಿಮೋಕ್ಷಣದಲ್ಲಿ ಇನ್ನೂರಾಐವತ್ತಾರನೆಯ ಅಧ್ಯಾಯವು.