ಆರಣ್ಯಕ ಪರ್ವ: ಕೈರಾತ ಪರ್ವ
೨೩
ಕೃಷ್ಣ-ಶಾಲ್ವರ ಮಾಯಾ ಯುದ್ಧ ಮುಂದುವರೆದುದು (೧-೧೯). ಸೌಭವಧೆ (೨೦-೪೧). ಕೃಷ್ಣನನ್ನೂ ಸೇರಿ ಕಾಮ್ಯಕಕ್ಕೆ ಪಾಂಡವರನ್ನು ಕಾಣಲು ಬಂದಿದ್ದವರೆಲ್ಲರೂ ಮರಳಿದುದು (೪೨-೪೮). ಪಾಂಡವರು ದ್ವೈತವನಕ್ಕೆ ಹೊರಟಿದುದು (೪೯-೫೦).
03023001 ವಾಸುದೇವ ಉವಾಚ|
03023001a ತತೋಽಹಂ ಭರತಶ್ರೇಷ್ಠ ಪ್ರಗೃಹ್ಯ ರುಚಿರಂ ಧನುಃ|
03023001c ಶರೈರಪಾತಯಂ ಸೌಭಾಚ್ಛಿರಾಂಸಿ ವಿಬುಧದ್ವಿಷಾಂ||
ವಾಸುದೇವನು ಹೇಳಿದನು: “ಭರತಶ್ರೇಷ್ಠ! ಆಗ ನಾನು ಸುಂದರ ಧನುಸ್ಸನ್ನು ಹಿಡಿದು ಸೌಭದಲ್ಲಿದ್ದ ದೇವತೆಗಳ ಶತ್ರುಗಳನ್ನು ಶರಗಳಿಂದ ತುಂಡರಿಸಿದನು.
03023002a ಶರಾಂಶ್ಚಾಶೀವಿಷಾಕಾರಾನೂರ್ಧ್ವಗಾಂಸ್ತಿಗ್ಮತೇಜಸಃ|
03023002c ಅಪ್ರೈಷಂ ಶಾಲ್ವರಾಜಾಯ ಶಾಙ್ರಮುಕ್ತಾನ್ಸುವಾಸಸಃ||
ನನ್ನ ಶಾಙ್ರದಿಂದ ವಿಷವನ್ನು ಕಾರುತ್ತಿದ್ದ ಸರ್ಪಗಳಂತಿರುವ ಅಗ್ನಿಯ ತೇಜಸ್ಸಿನಿಂದ ಮೇಲೆ ಹಾರುವ ಮೊನಚಾದ ಬಾಣಗಳನ್ನು ಪ್ರಯೋಗಿಸಿ ಶಾಲ್ವರಾಜನೆಡೆಗೆ ಎಸೆದೆನು.
03023003a ತತೋ ನಾದೃಶ್ಯತ ತದಾ ಸೌಭಂ ಕುರುಕುಲೋದ್ವಹ|
03023003c ಅಂತರ್ಹಿತಂ ಮಾಯಯಾಭೂತ್ತತೋಽಹಂ ವಿಸ್ಮಿತೋಽಭವಂ||
ಕುರುಕುಲೋದ್ಧಹ! ಆಗ ಸೌಭವು ಅದೃಶ್ಯವಾಯಿತು. ಮಾಯೆಯಿಂದ ಅದು ಅದೃಶ್ಯವಾದುದನ್ನು ನೋಡಿ ನಾನು ವಿಸ್ಮಿತನಾದೆನು.
03023004a ಅಥ ದಾನವಸಂಘಾಸ್ತೇ ವಿಕೃತಾನನಮೂರ್ಧಜಾಃ|
03023004c ಉದಕ್ರೋಶನ್ಮಹಾರಾಜ ವಿಷ್ಠಿತೇ ಮಯಿ ಭಾರತ||
ಭಾರತ! ಮಹಾರಾಜ! ಆಗ ನಾನು ನಿಂತಿರುವಂತೆಯೇ ವಿಕಾರ ಮುಖ-ಹಣೆಗಳ ದಾನವರ ಗುಂಪು ಜೋರಾಗಿ ಕಿರಿಚಿತು.
03023005a ತತೋಽಸ್ತ್ರಂ ಶಬ್ಧಸಾಹಂ ವೈ ತ್ವರಮಾಣೋ ಮಹಾಹವೇ|
03023005c ಅಯೋಜಯಂ ತದ್ವಧಾಯ ತತಃ ಶಬ್ಧ ಉಪಾರಮತ್||
ತಕ್ಷಣವೇ ನಾನು ಮಹಾರಣದಲ್ಲಿ ಅವರನ್ನು ವಧಿಸಲು ಶಬ್ಧಸಾಹ ಅಸ್ತ್ರವನ್ನು (ಶಬ್ಧವನ್ನು ಹುಡುಕಿ ಕೊಲ್ಲುವ ಅಸ್ತ್ರ) ಪ್ರಯೋಗಿಸಲು ಅವರ ಶಬ್ಧವು ನಿಂತಿತು.
03023006a ಹತಾಸ್ತೇ ದಾನವಾಃ ಸರ್ವೇ ಯೈಃ ಸ ಶಬ್ಧ ಉದೀರಿತಃ|
03023006c ಶರೈರಾದಿತ್ಯಸಂಕಾಶೈರ್ಜ್ವಲಿತೈಃ ಶಬ್ಧಸಾಧನೈಃ||
ಶಬ್ಧಸಾಧನಗಳಿಂದ ಹೊರಟ ಆದಿತ್ಯನಂತೆ ಉರಿಯುತ್ತಿರುವ ಶರಗಳಿಂದ ಆ ಎಲ್ಲ ದಾನವರೂ ಹತರಾಗಿ ಅವರ ಶಬ್ಧವು ಕಡಿಮೆಯಾಯಿತು.
03023007a ತಸ್ಮಿನ್ನುಪರತೇ ಶಬ್ದೇ ಪುನರೇವಾನ್ಯತೋಽಭವತ್|
03023007c ಶಬ್ಧೋಽಪರೋ ಮಹಾರಾಜ ತತ್ರಾಪಿ ಪ್ರಾಹರಂ ಶರಾನ್||
ಮಹಾರಾಜ! ಆ ಶಬ್ಧವು ಕಡಿಮೆಯಾಗಲು ಪುನಃ ಇನ್ನೊಂದು ಕಡೆಯಿಂದ ಹೊಸ ತುಮುಲವು ಪ್ರಾರಂಭವಾಯಿತು. ಆ ಕಡೆ ಕೂಡ ಬಾಣಗಳನ್ನು ಪ್ರಯೋಗಿಸಿದೆನು.
03023008a ಏವಂ ದಶ ದಿಶಃ ಸರ್ವಾಸ್ತಿರ್ಯಗೂರ್ಧ್ವಂ ಚ ಭಾರತ|
03023008c ನಾದಯಾಮಾಸುರಸುರಾಸ್ತೇ ಚಾಪಿ ನಿಹತಾ ಮಯಾ||
ಭಾರತ! ಹೀಗೆ ಹತ್ತೂ ದಿಕ್ಕುಗಳಲ್ಲಿ ಮೇಲೆ ಮತ್ತು ಕೆಳಗೆ ಎಲ್ಲಕಡೆಯಿಂದ ಅಸುರರು ಕಿರುಚಲು ಅವರೆಲ್ಲರನ್ನೂ ನಾನು ಸಂಹರಿಸಿದೆನು.
03023009a ತತಃ ಪ್ರಾಗ್ಜ್ಯೋತಿಷಂ ಗತ್ವಾ ಪುನರೇವ ವ್ಯದೃಶ್ಯತ|
03023009c ಸೌಭಂ ಕಾಮಗಮಂ ವೀರ ಮೋಹಯನ್ಮಮ ಚಕ್ಷುಷೀ||
ವೀರ! ಆಗ ಬೇಕಾದಲ್ಲಿ ಹೋಗಬಲ್ಲ ಸೌಭವು ಪ್ರಾಗ್ಜ್ಯೋತಿಷಕ್ಕೆ ಹೋಗಿ ಪುನಃ ಕಾಣಿಸಿಕೊಂಡಿತು ಮತ್ತು ನನ್ನ ಕಣ್ಣುಗಳನ್ನು ಕುರುಡುಮಾಡಿತು.
03023010a ತತೋ ಲೋಕಾಂತಕರಣೋ ದಾನವೋ ವಾನರಾಕೃತಿಃ|
03023010c ಶಿಲಾವರ್ಷೇಣ ಸಹಸಾ ಮಹತಾ ಮಾಂ ಸಮಾವೃಣೋತ್||
ನಂತರ ತಕ್ಷಣವೇ ಲೋಕಾಂತಕನಂತೆ ತೋರುತ್ತಿದ್ದ ದಾನವನು ವಾನರ ವೇಶದಲ್ಲಿ ಬಂದು ನನ್ನ ಮೇಲೆ ದೊಡ್ಡ ದೊಡ್ಡ ಕಲ್ಲುಗಳ ಮಳೆಯನ್ನೇ ಸುರಿಸಿದನು.
03023011a ಸೋಽಹಂ ಪರ್ವತವರ್ಷೇಣ ವಧ್ಯಮಾನಃ ಸಮಂತತಃ|
03023011c ವಲ್ಮೀಕ ಇವ ರಾಜೇಂದ್ರ ಪರ್ವತೋಪಚಿತೋಽಭವಂ||
ನಾನು ಎಲ್ಲ ಕಡೆಗಳಿಂದಲೂ ಪರ್ವತಗಳ ಮಳೆಯ ಹೊಡೆತಕ್ಕೆ ಸಿಕ್ಕೆ ಮತ್ತು ರಾಜೇಂದ್ರ! ನಾನು ಪರ್ವತಗಳಿಂದ ಮುಚ್ಚಲ್ಪಟ್ಟ ಒಂದು ಹುತ್ತದಂತೆ ಆದೆ.
03023012a ತತೋಽಹಂ ಪರ್ವತಚಿತಃ ಸಹಯಃ ಸಹಸಾರಥಿಃ|
03023012c ಅಪ್ರಖ್ಯಾತಿಮಿಯಾಂ ರಾಜನ್ಸಧ್ವಜಃ ಪರ್ವತೈಶ್ಚಿತಃ||
ರಾಜನ್! ಸಾರಥಿಯೊಂದಿಗೆ ಮತ್ತು ಧ್ವಜದೊಂದಿಗೆ ನಾನು ಪರ್ವತಗಳ ಕೆಳಗಿ ಹುಗಿಯಲ್ಪಟ್ಟು ಸಂಪೂರ್ಣವಾಗಿ ಕಾಣದೇ ಹೋದೆ.
03023013a ತತೋ ವೃಷ್ಣಿಪ್ರವೀರಾ ಯೇ ಮಮಾಸನ್ಸೈನಿಕಾಸ್ತದಾ|
03023013c ತೇ ಭಯಾರ್ತಾ ದಿಶಃ ಸರ್ವಾಃ ಸಹಸಾ ವಿಪ್ರದುದ್ರುವುಃ||
ನನ್ನೊಡನಿದ್ದ ವೃಷ್ಣಿ ಪ್ರವೀರ ಸೈನಿಕರೆಲ್ಲಾ ಆಗ ಭಯಾರ್ತರಾಗಿ ಎಲ್ಲ ದಿಕ್ಕುಗಳಲ್ಲಿ ಅವಸರದಿಂದ ಓಡಿಹೋಗ ತೊಡಗಿದರು.
03023014a ತತೋ ಹಾಹಾಕೃತಂ ಸರ್ವಮಭೂತ್ಕಿಲ ವಿಶಾಂ ಪತೇ|
03023014c ದ್ಯೌಶ್ಚ ಭೂಮಿಶ್ಚ ಖಂ ಚೈವಾದೃಶ್ಯಮಾನೇ ತಥಾ ಮಯಿ||
ವಿಶಾಂಪತೇ! ನಾನು ಹಾಗೆ ಕಾಣದಂತಾಗಲು ಇಡೀ ಆಕಾಶ, ಭೂಮಿ, ದೇವಲೋಕ ಸರ್ವವೂ ಹಾಹಾಕಾರಮಾಡಿದವು.
03023015a ತತೋ ವಿಷಣ್ಣಮನಸೋ ಮಮ ರಾಜನ್ಸುಹೃಜ್ಜನಾಃ|
03023015c ರುರುದುಶ್ಚುಕ್ರುಶುಶ್ಚೈವ ದುಃಖಶೋಕಸಮನ್ವಿತಾಃ||
ರಾಜನ್! ನನ್ನ ಸ್ನೇಹಿತರು ವಿಷಣ್ಣ ಮನಸ್ಕರಾಗಿ ದುಃಖಶೋಕಸಮನ್ವಿತರಾಗಿ ರೋದಿಸಿದರು ಮತ್ತು ಅತ್ತರು.
03023016a ದ್ವಿಷತಾಂ ಚ ಪ್ರಹರ್ಷೋಽಭೂದಾರ್ತಿಶ್ಚಾದ್ವಿಷತಾಮಪಿ|
03023016c ಏವಂ ವಿಜಿತವಾನ್ವೀರ ಪಶ್ಚಾದಶ್ರೌಷಮಚ್ಯುತ||
ವೀರ! ಅಚ್ಯುತ! ವಿಜಯದ ನಂತರ ನಾನು ಕೇಳಿದೆ - ಆಗ ವೈರಿಗಳು ಹರ್ಷಿತರಾದರು ಮತ್ತು ಸ್ನೇಹಿತರು ದುಃಖಿತರಾದರು.
03023017a ತತೋಽಹಮಸ್ತ್ರಂ ದಯಿತಂ ಸರ್ವಪಾಷಾಣಭೇದನಂ|
03023017c ವಜ್ರಮುದ್ಯಮ್ಯ ತಾನ್ಸರ್ವಾನ್ಪರ್ವತಾನ್ಸಮಶಾತಯಂ||
ಆಗ ನಾನು ಸರ್ವ ಪಾಷಾಣಗಳನ್ನೂ ಭೇದಿಸಬಲ್ಲ ವಜ್ರಾಸ್ತ್ರವನ್ನು ತೆಗೆದುಕೊಂಡು ಆ ಎಲ್ಲ ಪರ್ವತಗಳನ್ನೂ ಪುಡಿಪುಡಿಮಾಡಿದೆನು.
03023018a ತತಃ ಪರ್ವತಭಾರಾರ್ತಾ ಮಂದಪ್ರಾಣವಿಚೇಷ್ಟಿತಾಃ|
03023018c ಹಯಾ ಮಮ ಮಹಾರಾಜ ವೇಪಮಾನಾ ಇವಾಭವನ್||
ಮಹಾರಾಜ! ಪರ್ವತಗಳ ಭಾರದಿಂದ ಕಷ್ಟಪಟ್ಟ ನನ್ನ ಕುದುರೆಗಳು ತಮ್ಮ ಉಸಿರು ಮತ್ತು ಚಲನೆಗಳನ್ನು ಕಳೆದುಕೊಂಡು ನಡುಗುತ್ತಿದ್ದವು.
03023019a ಮೇಘಜಾಲಮಿವಾಕಾಶೇ ವಿದಾರ್ಯಾಭ್ಯುದಿತಂ ರವಿಂ|
03023019c ದೃಷ್ಟ್ವಾ ಮಾಂ ಬಾಂಧವಾಃ ಸರ್ವೇ ಹರ್ಷಮಾಹಾರಯನ್ಪುನಃ||
ಮೇಘಜಾಲಮುಕ್ತ ಆಕಾಶದಿಂದ ಮೇಲೇಳುವ ರವಿಯಂತೆ ಮೇಲೆದ್ದ ನನ್ನನ್ನು ನೋಡಿದ ಸರ್ವ ಬಾಂಧವರೂ ಪುನಃ ಹರ್ಷಿತರಾದರು.
03023020a ತತೋ ಮಾಮಬ್ರವೀತ್ಸೂತಃ ಪ್ರಾಂಜಲಿಃ ಪ್ರಣತೋ ನೃಪ|
03023020c ಸಾಧು ಸಂಪಶ್ಯ ವಾರ್ಷ್ಣೇಯ ಶಾಲ್ವಂ ಸೌಭಪತಿಂ ಸ್ಥಿತಂ||
ನೃಪ! ಆಗ ಅಂಜಲೀಬದ್ಧನಾಗಿ ನಮಸ್ಕರಿಸಿ ಸೂತನು ನನಗೆ ಹೇಳಿದನು: “ವಾರ್ಷ್ಣೇಯ! ನಿಂತಿರುವ ಸೌಭಪತಿಯನ್ನು ಚೆನ್ನಾಗಿ ನೋಡು!
03023021a ಅಲಂ ಕೃಷ್ಣಾವಮನ್ಯೈನಂ ಸಾಧು ಯತ್ನಂ ಸಮಾಚರ|
03023021c ಮಾರ್ದವಂ ಸಖಿತಾಂ ಚೈವ ಶಾಲ್ವಾದದ್ಯ ವ್ಯಪಾಹರ||
ಕೃಷ್ಣ! ಅಪಮಾನಗೊಳಿಸುವ ಇದನ್ನು ಸಾಕುಮಾಡು. ಇನ್ನೂ ಒಳ್ಳೆಯ ಪ್ರಯತ್ನವನ್ನು ಮಾಡು. ಶಾಲ್ವನ ಮೇಲಿದ್ದ ನಿನ್ನ ಸಖ್ಯಭಾವವನ್ನು ಅಥವಾ ಮೃದುತ್ವವನ್ನು ಹಿಂದೆ ತೆಗೆದುಕೋ!
03023022a ಜಹಿ ಶಾಲ್ವಂ ಮಹಾಬಾಹೋ ಮೈನಂ ಜೀವಯ ಕೇಶವ|
03023022c ಸರ್ವೈಃ ಪರಾಕ್ರಮೈರ್ವೀರ ವಧ್ಯಃ ಶತ್ರುರಮಿತ್ರಹನ್||
ಮಹಾಬಾಹು ಕೇಶವ! ಶಾಲ್ವನನ್ನು ಜೀವಂತ ಬಿಡಬೇಡ! ವೀರ! ಅಮಿತ್ರಹನ್! ನಿನ್ನ ಎಲ್ಲ ಪರಾಕ್ರಮವನ್ನೂ ಬಳಸಿ ಈ ಶತ್ರುವನ್ನು ವಧಿಸು!
03023023a ನ ಶತ್ರುರವಮಂತವ್ಯೋ ದುರ್ಬಲೋಽಪಿ ಬಲೀಯಸಾ|
03023023c ಯೋಽಪಿ ಸ್ಯಾತ್ಪೀಠಗಃ ಕಸ್ಚಿತ್ಕಿಂ ಪುನಃ ಸಮರೇ ಸ್ಥಿತಃ||
ಶತ್ರುವು ಎಷ್ಟೇ ದುರ್ಬಲನಾಗಿದ್ದರೂ, ಕಾಲಕೆಳಗಿನವನಾಗಿದ್ದರೂ, ಸಮರದಲ್ಲಿ ಎದುರಾದಾಗ ಬಲಶಾಲಿಯು ಅಪಮಾನಿಸ ಕೂಡದು.
03023024a ಸ ತ್ವಂ ಪುರುಷಶಾರ್ದೂಲ ಸರ್ವಯತ್ನೈರಿಮಂ ಪ್ರಭೋ|
03023024c ಜಹಿ ವೃಷ್ಣಿಕುಲಶ್ರೇಷ್ಠ ಮಾ ತ್ವಾಂ ಕಾಲೋಽತ್ಯಗಾತ್ಪುನಃ||
ಪ್ರಭೋ! ಪುರುಷಶಾರ್ದೂಲ! ಸರ್ವ ಯತ್ನಗಳಿಂದ ನೀನು ಈ ಶತ್ರುವನ್ನು ಕೊಲ್ಲಬೇಕು. ವೃಷ್ಣಿಕುಲಶ್ರೇಷ್ಠ! ಪುನಃ ಸುಮ್ಮನೆ ಕಾಲವನ್ನು ಕಳೆಯಬೇಡ.
03023025a ನೈಷ ಮಾರ್ದವಸಾಧ್ಯೋ ವೈ ಮತೋ ನಾಪಿ ಸಖಾ ತವ|
03023025c ಯೇನ ತ್ವಂ ಯೋಧಿತೋ ವೀರ ದ್ವಾರಕಾ ಚಾವಮರ್ದಿತಾ||
ಮೃದುತ್ವದಿಂದ ಅವನನ್ನು ಗೆಲ್ಲಲು ಸಾಧ್ಯವಿಲ್ಲ. ವೀರ! ದ್ವಾರಕೆಯನ್ನು ಅಸ್ತವ್ಯಸ್ತಗೊಳಿಸಿದ ನಿನ್ನೊಡನೆ ಯುದ್ಧ ಮಾಡುತ್ತಿರುವ ಅವನು ನಿನ್ನ ಸಖನಲ್ಲ ಎಂದು ನನ್ನ ಅಭಿಪ್ರಾಯ!”
03023026a ಏವಮಾದಿ ತು ಕೌಂತೇಯ ಶ್ರುತ್ವಾಹಂ ಸಾರಥೇರ್ವಚಃ|
03023026c ತತ್ತ್ವಮೇತದಿತಿ ಜ್ಞಾತ್ವಾ ಯುದ್ಧೇ ಮತಿಮಧಾರಯಂ||
03023027a ವಧಾಯ ಶಾಲ್ವರಾಜಸ್ಯ ಸೌಭಸ್ಯ ಚ ನಿಪಾತನೇ|
03023027c ದಾರುಕಂ ಚಾಬ್ರುವಂ ವೀರ ಮುಹೂರ್ತಂ ಸ್ಥೀಯತಾಮಿತಿ||
ಕೌಂತೇಯ! ಈ ರೀತಿಯ ಮಾತುಗಳನ್ನು ಸಾರಥಿಯಿಂದ ಕೇಳಿದ ನಾನು ಅವನು ಹೇಳಿದುದು ಸತ್ಯ ಎಂದು ತಿಳಿದು ಯುದ್ಧದಲ್ಲಿ ಶಾಲ್ವರಾಜನ ವಧೆ ಮತ್ತು ಸೌಭವನ್ನು ಉರುಳಿಸುವ ಕುರಿತು ಮನಸ್ಸನ್ನಿಟ್ಟೆನು. ವೀರ! “ಒಂದು ಕ್ಷಣ ನಿಲ್ಲು!” ಎಂದು ದಾರುಕನಿಗೆ ಹೇಳಿದೆನು.
03023028a ತತೋಽಪ್ರತಿಹತಂ ದಿವ್ಯಮಭೇದ್ಯಮತಿವೀರ್ಯವತ್|
03023028c ಆಗ್ನೇಯಮಸ್ತ್ರಂ ದಯಿತಂ ಸರ್ವಸಾಹಂ ಮಹಾಪ್ರಭಂ||
03023029a ಯಕ್ಷಾಣಾಂ ರಾಕ್ಷಸಾನಾಂ ಚ ದಾನವಾನಾಂ ಚ ಸಂಯುಗೇ|
03023029c ರಾಜ್ಞಾಂ ಚ ಪ್ರತಿಲೋಮಾನಾಂ ಭಸ್ಮಾಂತಕರಣಂ ಮಹತ್||
03023030a ಕ್ಷುರಾಂತಮಮಲಂ ಚಕ್ರಂ ಕಾಲಾಂತಕಯಮೋಪಮಂ|
03023030c ಅಭಿಮಂತ್ರ್ಯಾಹಮತುಲಂ ದ್ವಿಷತಾಂ ಚ ನಿಬರ್ಹಣಂ||
ನಂತರ ನಾನು ಯಾರನ್ನೂ ಸಂಹರಿಸಬಲ್ಲ, ದಿವ್ಯ, ಅಭೇದ್ಯ, ಅತಿವೀರ್ಯವಂತ, ಮಹಾಪ್ರಭೆಯನ್ನುಳ್ಳ, ಸರ್ವಸಾಹ, ಯಕ್ಷ-ರಾಕ್ಷಸ-ದಾನವರನ್ನು, ಮತ್ತು ಅಧರ್ಮಿ ರಾಜರನ್ನು ಒಟ್ಟಿಗೇ ಭಸ್ಮಮಾಡಬಲ್ಲ, ತೀಕ್ಷ್ಣ ಕೊನೆಗಳನ್ನುಳ್ಳ, ಅಮಲ, ಕಾಲಾಂತಕ ಯಮನಂತಿದ್ದ, ಆಗ್ನೇಯಾಸ್ತ್ರ ಚಕ್ರವನ್ನು ಹಿಡಿದು, ಶತ್ರುಗಳನ್ನು ಸಂಹರಿಸಬಲ್ಲ, ಸರಿಸಾಟಿಯಿಲ್ಲದ ಅದನ್ನು ಅಭಿಮಂತ್ರಿಸಿದೆನು:
03023031a ಜಹಿ ಸೌಭಂ ಸ್ವವೀರ್ಯೇಣ ಯೇ ಚಾತ್ರ ರಿಪವೋ ಮಮ|
03023031c ಇತ್ಯುಕ್ತ್ವಾ ಭುಜವೀರ್ಯೇಣ ತಸ್ಮೈ ಪ್ರಾಹಿಣವಂ ರುಷಾ||
“ನಿನ್ನ ವೀರತ್ವದಿಂದ ಸೌಭವನ್ನು ಮತ್ತು ಅದರಲ್ಲಿರುವ ನಾನಾ ಶತ್ರುಗಳನ್ನು ಕೊಲ್ಲು!” ಎಂದು ಹೇಳಿ ರೋಷಗೊಂಡು ನನ್ನ ಬಾಹುಬಲದಿಂದ ಅದನ್ನು ಪ್ರಯೋಗಿಸಿದೆನು.
03023032a ರೂಪಂ ಸುದರ್ಶನಸ್ಯಾಸೀದಾಕಾಶೇ ಪತತಸ್ತದಾ|
03023032c ದ್ವಿತೀಯಸ್ಯೇವ ಸೂರ್ಯಸ್ಯ ಯುಗಾಂತೇ ಪರಿವಿಷ್ಯತಃ||
ಆಕಾಶದಲ್ಲಿ ಹಾರಿಹೋಗುತ್ತಿದ್ದ ಆ ಸುದರ್ಶನವು ಯುಗಾಂತದಲ್ಲಿ ಪ್ರಕಾಶಿತ ಎರಡನೇ ಸೂರ್ಯನೋ ಎನ್ನುವಂತೆ ತೋರುತ್ತಿತ್ತು.
03023033a ತತ್ಸಮಾಸಾದ್ಯ ನಗರಂ ಸೌಭಂ ವ್ಯಪಗತತ್ವಿಷಂ|
03023033c ಮಧ್ಯೇನ ಪಾಟಯಾಮಾಸ ಕ್ರಕಚೋ ದಾರ್ವಿವೋಚ್ಚ್ರಿತಂ||
ಅದು ಸತ್ವವನ್ನು ಕಳೆದುಕೊಂಡ ಸೌಭನಗರವನ್ನು ತಲುಪಿ ಗರಗಸದಂತೆ ಅದನ್ನು ಮಧ್ಯದಲ್ಲಿ ಎರಡನ್ನಾಗಿ ಕತ್ತರಿಸಿತು.
03023034a ದ್ವಿಧಾ ಕೃತಂ ತತಃ ಸೌಭಂ ಸುದರ್ಶನಬಲಾದ್ಧತಂ|
03023034c ಮಹೇಶ್ವರಶರೋದ್ಧೂತಂ ಪಪಾತ ತ್ರಿಪುರಂ ಯಥಾ||
ಸುದರ್ಶನದ ಬಲಕ್ಕೆ ಸಿಲುಕಿ ಎರಡಾಗಿ ತುಂಡಾದ ಆ ಸೌಭವು ಮಹೇಶ್ವರನ ಶರದಿಂದ ಒಡೆದು ಕೆಳಗೆ ಬಿದ್ದ ತ್ರಿಪುರ[1]ದಂತೆ ಕಂಡಿತು.
03023035a ತಸ್ಮಿನ್ನಿಪತಿತೇ ಸೌಭೇ ಚಕ್ರಮಾಗಾತ್ಕರಂ ಮಮ|
03023035c ಪುನಶ್ಚೋದ್ಧೂಯ ವೇಗೇನ ಶಾಲ್ವಾಯೇತ್ಯಹಮಬ್ರುವಂ||
ಸೌಭವು ಕೆಳಗುರುಳಲು ಚಕ್ರವು ನನ್ನ ಕೈಗೆ ಬಂದು ಸೇರಿತು. ಪುನಃ ಅದನ್ನು ಪ್ರಯೋಗಿಸುತ್ತಾ “ವೇಗದಿಂದ ಶಾಲ್ವನನ್ನು ಕೊಲ್ಲು!” ಎಂದು ಹೇಳಿದೆನು.
03023036a ತತಃ ಶಾಲ್ವಂ ಗದಾಂ ಗುರ್ವೀಮಾವಿಧ್ಯಂತಂ ಮಹಾಹವೇ|
03023036c ದ್ವಿಧಾ ಚಕಾರ ಸಹಸಾ ಪ್ರಜಜ್ವಾಲ ಚ ತೇಜಸಾ||
ಆ ಮಹಾಯುದ್ಧದಲ್ಲಿ ಶಾಲ್ವನು ಭಾರೀ ಗದೆಯನ್ನು ಪ್ರಹಾರಿಸಲು ಮುಂದೆಬರುತ್ತಿರುವಾಗ ಅದು ತಕ್ಷಣವೇ ಅವನನ್ನು ಎರಡಾಗಿ ಕತ್ತರಿಸಿ ತೇಜಸ್ಸಿನಿಂದ ಬೆಳಗಿತು.
03023037a ತಸ್ಮಿನ್ನಿಪತಿತೇ ವೀರೇ ದಾನವಾಸ್ತ್ರಸ್ತಚೇತಸಃ|
03023037c ಹಾಹಾಭೂತಾ ದಿಶೋ ಜಗ್ಮುರರ್ದಿತಾ ಮಮ ಸಾಯಕೈಃ||
ಆ ವೀರನು ಕೆಳಗೆ ಬೀಳಲು ವೀರ ದಾನವರು ಅಸ್ತ್ರದಿಂದ ತತ್ತರಿಸಿ, ನನ್ನ ಬಾಣಗಳಿಂದ ಪೀಡಿತರಾಗಿ ಹಾಹಾಕಾರ ಮಾಡುತ್ತಾ ದಿಕ್ಕು ದಿಕ್ಕಿಗೆ ಚದುರಿದರು.
03023038a ತತೋಽಹಂ ಸಮವಸ್ಥಾಪ್ಯ ರಥಂ ಸೌಭಸಮೀಪತಃ|
03023038c ಶಂಖಂ ಪ್ರಧ್ಮಾಪ್ಯ ಹರ್ಷೇಣ ಸುಹೃದಃ ಪರ್ಯಹರ್ಷಯಂ||
ಸೌಭದ ಬಳಿಯಲ್ಲಿ ನನ್ನ ರಥವನ್ನು ನಿಲ್ಲಿಸಿ, ಸಂತೋಷದಿಂದ ಶಂಖವನ್ನು ಊದಿ ನನ್ನ ಸ್ನೇಹಿತರಿಗೆ ಹರ್ಷವನ್ನುಂಟುಮಾಡಿದೆನು.
03023039a ತನ್ಮೇರುಶಿಖರಾಕಾರಂ ವಿಧ್ವಸ್ತಾಟ್ಟಾಲಗೋಪುರಂ|
03023039c ದಹ್ಯಮಾನಮಭಿಪ್ರೇಕ್ಷ್ಯ ಸ್ತ್ರಿಯಸ್ತಾಃ ಸಂಪ್ರದುದ್ರುವುಃ||
ಮೇರುಶಿಖರದ ಆಕಾರದಲ್ಲಿದ್ದ ಮಹಾದ್ವಾರಗಳು ಮತ್ತು ಗೋಪುರಗಳಿಂದ ಕೂಡಿದ್ದ ಅದು ಉರಿಯುತ್ತಿರುವುದನ್ನು ನೋಡಿ ಸ್ತ್ರೀಯರು ಓಡಿ ಹೋದರು.
03023040a ಏವಂ ನಿಹತ್ಯ ಸಮರೇ ಶಾಲ್ವಂ ಸೌಭಂ ನಿಪಾತ್ಯ ಚ|
03023040c ಆನರ್ತಾನ್ಪುನರಾಗಮ್ಯ ಸುಹೃದಾಂ ಪ್ರೀತಿಮಾವಹಂ||
ಈ ರೀತಿ ಸಮರದಲ್ಲಿ ಶಾಲ್ವನನ್ನು ಕೊಂದು ಸೌಭವನ್ನು ಕೆಳಗುರುಳಿಸಿ, ಆನರ್ತರ ಪುರಕ್ಕೆ ಹಿಂದುರಿಗಿ ಸುಹೃದಯರಿಗೆ ಸಂತೋಷವನ್ನು ತಂದೆನು.
03023041a ಏತಸ್ಮಾತ್ಕಾರಣಾದ್ರಾಜನ್ನಾಗಮಂ ನಾಗಸಾಹ್ವಯಂ|
03023041c ಯದ್ಯಗಾಂ ಪರವೀರಘ್ನ ನ ಹಿ ಜೀವೇತ್ಸುಯೋಧನಃ||
ರಾಜನ್! ಪರವೀರಘ್ನ! ಈ ಕಾರಣದಿಂದಲೇ ನಾನು ನಾಗಸಾಹ್ವಯಕ್ಕೆ ಬರಲಿಕ್ಕಾಗಲಿಲ್ಲ. ಬಂದಿದ್ದರೆ ಸುಯೋಧನನು ಜೀವಿತವಿರುತ್ತಿರಲಿಲ್ಲ!””
03023042 ವೈಶಂಪಾಯನ ಉವಾಚ|
03023042a ಏವಮುಕ್ತ್ವಾ ಮಹಾಬಾಹುಃ ಕೌರವಂ ಪುರುಷೋತ್ತಮಃ|
03023042c ಆಮಂತ್ರ್ಯ ಪ್ರಯಯೌ ಧೀಮಾನ್ಪಾಂಡವಾನ್ಮಧುಸೂದನಃ||
ವೈಶಂಪಾಯನನು ಹೇಳಿದನು: “ಕೌರವನಿಗೆ ಈ ರೀತಿ ಹೇಳಿದ ಮಹಾಬಾಹು ಪುರುಷೋತ್ತಮ ಮಧುಸೂದನನು ಧೀಮಂತ ಪಾಂಡವರಿಂದ ಬೀಳ್ಕೊಂಡು ಹೊರಟನು.
03023043a ಅಭಿವಾದ್ಯ ಮಹಾಬಾಹುರ್ಧರ್ಮರಾಜಂ ಯುಧಿಷ್ಠಿರಂ|
03023043c ರಾಜ್ಞಾ ಮೂರ್ಧನ್ಯುಪಾಘ್ರಾತೋ ಭೀಮೇನ ಚ ಮಹಾಭುಜಃ||
03023044a ಸುಭದ್ರಾಮಭಿಮನ್ಯುಂ ಚ ರಥಮಾರೋಪ್ಯ ಕಾಂಚನಂ|
03023044c ಆರುರೋಹ ರಥಂ ಕೃಷ್ಣಃ ಪಾಂಡವೈರಭಿಪೂಜಿತಃ||
ಆ ಮಹಾಬಾಹುವು ಧರ್ಮರಾಜ ಯುಧಿಷ್ಠಿರನನ್ನು ಅಭಿವಂದಿಸಿದನು. ರಾಜ ಮತ್ತು ಮಹಾಭುಜ ಭೀಮರು ಅವನ ನೆತ್ತಿಯನ್ನು ಆಘ್ರಾಣಿಸಿದರು. ಪಾಂಡವರಿಂದ ಅಭಿಪೂಜಿತ ಕೃಷ್ಣನು ಸುಭದ್ರೆ ಮತ್ತು ಅಭಿಮನ್ಯುವನ್ನು ಕಾಂಚನರಥದಲ್ಲಿ ಕುಳ್ಳಿರಿಸಿ ರಥವನ್ನೇರಿದನು.
03023045a ಸೈನ್ಯಸುಗ್ರೀವಯುಕ್ತೇನ ರಥೇನಾದಿತ್ಯವರ್ಚಸಾ|
03023045c ದ್ವಾರಕಾಂ ಪ್ರಯಯೌ ಕೃಷ್ಣಃ ಸಮಾಶ್ವಾಸ್ಯ ಯುಧಿಷ್ಠಿರಂ||
ಯುಧಿಷ್ಠಿರನನ್ನು ಸಮಾಧಾನ ಪಡಿಸಿ, ಆದಿತ್ಯವರ್ಚಸ ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ರಥದಲ್ಲಿ ಕೃಷ್ಣನು ದ್ವಾರಕೆಗೆ ತೆರಳಿದನು.
03023046a ತತಃ ಪ್ರಯಾತೇ ದಾಶಾರ್ಹೇ ಧೃಷ್ಟದ್ಯುಮ್ನೋಽಪಿ ಪಾರ್ಷತಃ|
03023046c ದ್ರೌಪದೇಯಾನುಪಾದಾಯ ಪ್ರಯಯೌ ಸ್ವಪುರಂ ತದಾ||
ದಾಶಾರ್ಹನು ಹೋದ ನಂತರ ಪಾರ್ಷತ ಧೃಷ್ಟದ್ಯುಮ್ನನೂ ಕೂಡ ದ್ರೌಪದೇಯರನ್ನು ಕರೆದುಕೊಂಡು ತನ್ನ ನಗರಕ್ಕೆ ತೆರಳಿದನು.
03023047a ಧೃಷ್ಟಕೇತುಃ ಸ್ವಸಾರಂ ಚ ಸಮಾದಾಯಾಥ ಚೇದಿರಾಟ್|
03023047c ಜಗಾಮ ಪಾಂಡವಾನ್ದೃಷ್ಟ್ವಾ ರಮ್ಯಾಂ ಶುಕ್ತಿಮತೀಂ ಪುರೀಂ||
ಚೇದಿರಾಜ ಧೃಷ್ಟಕೇತುವು ಪಾಂಡವರನ್ನು ಕಂಡು ತನ್ನ ತಂಗಿ[2]ಯನ್ನು ಜೊತೆಯಲ್ಲಿ ಕರೆದುಕೊಂಡು ರಮ್ಯ ಶಕ್ತಿಮತೀ ಪುರಕ್ಕೆ ತೆರಳಿದನು.
03023048a ಕೇಕಯಾಶ್ಚಾಪ್ಯನುಜ್ಞಾತಾಃ ಕೌಂತೇಯೇನಾಮಿತೌಜಸಾ|
03023048c ಆಮಂತ್ರ್ಯ ಪಾಂಡವಾನ್ ಸರ್ವಾನ್ ಪ್ರಯಯುಸ್ತೇಽಪಿ ಭಾರತ||
ಭಾರತ! ಅಮಿತೌಜಸ ಕೌಂತೇಯರಿಂದ ಬೀಳ್ಕೊಂಡು ಕೇಕಯನೂ ಕೂಡ ಪಾಂಡವರೆಲ್ಲರನ್ನೂ ಆಮಂತ್ರಿಸಿ ಹೊರಟನು.
03023049a ಬ್ರಾಹ್ಮಣಾಶ್ಚ ವಿಶಶ್ಚೈವ ತಥಾ ವಿಷಯವಾಸಿನಃ|
03023049c ವಿಸೃಜ್ಯಮಾನಾಃ ಸುಭೃಶಂ ನ ತ್ಯಜಂತಿ ಸ್ಮ ಪಾಂಡವಾನ್||
ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರು ಮತ್ತು ಸಾಮಾನ್ಯ ಜನರು, ಒಂದೇ ಸಮನೆ ಹೋಗಿ ಎಂದು ಹೇಳಿದರೂ ಪಾಂಡವರನ್ನು ಬಿಟ್ಟು ಹೋಗಲು ನಿರಾಕರಿಸಿದರು.
03023050a ಸಮವಾಯಃ ಸ ರಾಜೇಂದ್ರ ಸುಮಹಾದ್ಭುತದರ್ಶನಃ|
03023050c ಆಸೀನ್ಮಹಾತ್ಮನಾಂ ತೇಷಾಂ ಕಾಮ್ಯಕೇ ಭರತರ್ಷಭ||
ರಾಜೇಂದ್ರ! ಭರತರ್ಷಭ! ಆ ಗುಂಪು ಕಾಮ್ಯಕ ವನದಲ್ಲಿ ಆ ಮಹಾತ್ಮರ ಜೊತೆಗೇ ಇದ್ದುದು ಒಂದು ಮಹಾ ಅದ್ಭುತವಾಗಿ ಕಾಣುತ್ತಿತ್ತು.
03023051a ಯುಧಿಷ್ಠಿರಸ್ತು ವಿಪ್ರಾಂಸ್ತಾನನುಮಾನ್ಯ ಮಹಾಮನಾಃ|
03023051c ಶಶಾಸ ಪುರುಷಾನ್ಕಾಲೇ ರಥಾನ್ಯೋಜಯತೇತಿ ಹ||
ಆ ಮಹಾಮನ ವಿಪ್ರರನ್ನು ಗೌರವಿಸಿ ಯುಧಿಷ್ಠಿರನು ಸಕಾಲದಲ್ಲಿ ರಥಗಳನ್ನು ಕಟ್ಟಲು ಸೇವಕರಿಗೆ ಅಪ್ಪಣೆಯನ್ನಿತ್ತನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ತ್ರಯೋವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತ್ಮೂರನೆಯ ಅಧ್ಯಾಯವು.
[1]ತ್ರಿಪುರ ಧ್ವಂಸದ ಕಥೆಯು ಕರ್ಣಪರ್ವದಲ್ಲಿ ಬರುತ್ತದೆ.
[2] ನಕುಲನ ಪತ್ನಿ ಕರೇಣುವತಿ (ಆದಿಪರ್ವ, ಅಧ್ಯಾಯ ೯೦).