Aranyaka Parva: Chapter 214

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೧೪

ಸ್ವಾಹಾಳು ಅಂಗಿರಸನ ಪತ್ನಿ ಶಿವೆಯ ರೂಪವನ್ನು ತಾಳಿ ವನದಲ್ಲಿದ್ದ ಅಗ್ನಿಯನ್ನು ಕೂಡಿದುದು; ಅವನ ವೀರ್ಯವನ್ನು ಕರಗಳಲ್ಲಿ ಹಿಡಿದು ಯಾರಿಗೂ ತಿಳಿಯಬಾರದೆಂದು ಗರುಡಿಯ ರೂಪವನ್ನು ತಾಳಿ ಶ್ವೇತಪರ್ವತ ಶಿಖರದ ಮೇಲಿರುವ ಕಾಂಚನಸರೋವರದಲ್ಲಿ ಹಾಕಿದುದು (೧-೧೨). ಅರುಂಧತಿಯ ರೂಪವನ್ನು ತಾಳಲಿಕ್ಕಾಗದೇ ಉಳಿದ ಆರು ಋಷಿಪತ್ನಿಯರ ರೂಪವನ್ನು ತಾಳಿ ಪ್ರತಿಪದೆಯಂದು ಆರುಬಾರಿ ಅಗ್ನಿಯ ವೀರ್ಯವನ್ನು ಕಾಂಚನಸರೋವರದಲ್ಲಿ ಹಾಕಿದುದು; ಅದರಿಂದ ಜನಿಸಿದ ಮಗನು ಸ್ಕಂದನೆನಿಸಿಕೊಂಡುದು (೧೩-೧೬). ಸ್ಕಂದನ ವರ್ಣನೆ (೧೭-೩೭).

03214001 ಮಾರ್ಕಂಡೇಯ ಉವಾಚ|

03214001a ಶಿವಾ ಭಾರ್ಯಾ ತ್ವಂಗಿರಸಃ ಶೀಲರೂಪಗುಣಾನ್ವಿತಾ|

03214001c ತಸ್ಯಾಃ ಸಾ ಪ್ರಥಮಂ ರೂಪಂ ಕೃತ್ವಾ ದೇವೀ ಜನಾಧಿಪ|

03214001e ಜಗಾಮ ಪಾವಕಾಭ್ಯಾಶಂ ತಂ ಚೋವಾಚ ವರಾಂಗನಾ||

ಮಾರ್ಕಂಡೇಯನು ಹೇಳಿದನು: “ಜನಾಧಿಪ! ಆ ವರಾಂಗನೆ ದೇವಿಯು ಪ್ರಥಮವಾಗಿ ಅಂಗಿರಸನ ಭಾರ್ಯೆ ಶೀಲರೂಪಗುಣಾನ್ವಿತೆ ಶಿವೆಯ ರೂಪವನ್ನು ಧರಿಸಿ ಪಾವಕನ ಬಳಿ ಹೋಗಿ ಹೇಳಿದಳು:

03214002a ಮಾಮಗ್ನೇ ಕಾಮಸಂತಪ್ತಾಂ ತ್ವಂ ಕಾಮಯಿತುಮರ್ಹಸಿ|

03214002c ಕರಿಷ್ಯಸಿ ನ ಚೇದೇವಂ ಮೃತಾಂ ಮಾಮುಪಧಾರಯ||

“ಅಗ್ನಿ! ಕಾಮಸಂತಪ್ತಳಾಗಿರುವ ನನ್ನನ್ನು ನೀನು ಕಾಮಿಸಬೇಕು. ಇದನ್ನು ನೀನು ಮಾಡದೇ ಇದ್ದರೆ ನಾನು ಸಾಯುತ್ತೇನೆ.

03214003a ಅಹಮಂಗಿರಸೋ ಭಾರ್ಯಾ ಶಿವಾ ನಾಮ ಹುತಾಶನ|

03214003c ಸಖೀಭಿಃ ಸಹಿತಾ ಪ್ರಾಪ್ತಾ ಮಂತ್ರಯಿತ್ವಾ ವಿನಿಶ್ಚಯಂ||

ಹುತಾಶನ! ನಾನು ಶಿವಾ ಎಂಬ ಹೆಸರಿನ ಅಂಗಿರಸನ ಪತ್ನಿ. ಸಖಿಗಳ ಸಹಿತ ಮಂತ್ರಾಲೋಚನೆ ಮಾಡಿ ನಿರ್ಧರಿಸಿ ಬಂದಿದ್ದೇನೆ.”

03214004 ಅಗ್ನಿರುವಾಚ|

03214004a ಕಥಂ ಮಾಂ ತ್ವಂ ವಿಜಾನೀಷೇ ಕಾಮಾರ್ತಮಿತರಾಃ ಕಥಂ|

03214004c ಯಾಸ್ತ್ವಯಾ ಕೀರ್ತಿತಾಃ ಸರ್ವಾಃ ಸಪ್ತರ್ಷೀಣಾಂ ಪ್ರಿಯಾಃ ಸ್ತ್ರಿಯಃ||

ಅಗ್ನಿಯು ಹೇಳಿದನು: “ನಾನು ಕಾಮಾರ್ತನಾಗಿದ್ದೇನೆಂದು ನಿನಗೆ ಹೇಗೆ ತಿಳಿಯಿತು? ಮತ್ತು ಇದರ ಕುರಿತು ನೀನು ಹೇಳಿದ ಎಲ್ಲ ಸಪ್ತರ್ಷಿಗಳ ಪ್ರಿಯ ಸ್ತ್ರೀಯರಿಗೆ ಹೇಗೆ ತಿಳಿಯಿತು?”

03214005 ಶಿವೋವಾಚ|

03214005a ಅಸ್ಮಾಕಂ ತ್ವಂ ಪ್ರಿಯೋ ನಿತ್ಯಂ ಬಿಭೀಮಸ್ತು ವಯಂ ತವ|

03214005c ತ್ವಚ್ಚಿತ್ತಮಿಂಗಿತೈರ್ಜ್ಞಾತ್ವಾ ಪ್ರೇಷಿತಾಸ್ಮಿ ತವಾಂತಿಕಂ||

ಶಿವೆಯು ಹೇಳಿದಳು: “ನಿತ್ಯವೂ ನೀನು ನಮಗೆ ಪ್ರಿಯನಾದವನು. ಆದರೆ ನಾವು ನಿನಗೆ ಹೆದರುತ್ತಿದ್ದೆವು. ಈಗ ನಿನ್ನ ಚಿತ್ತದ ಇಂಗಿತವನ್ನು ತಿಳಿದು ಅವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ.

03214006a ಮೈಥುನಾಯೇಹ ಸಂಪ್ರಾಪ್ತಾ ಕಾಮಂ ಪ್ರಾಪ್ತಂ ದ್ರುತಂ ಚರ|

03214006c ಮಾತರೋ ಮಾಂ ಪ್ರತೀಕ್ಷಂತೇ ಗಮಿಷ್ಯಾಮಿ ಹುತಾಶನ||

ಹುತಾಶನ! ನನ್ನೊಡನೆ ಬೇಗನೇ ಮೈಥುನಗೈದು ಕಾಮವನ್ನು ಹೋಗಲಾಡಿಸಿಕೋ. ನನ್ನ ಅತ್ತಿಗೆಯಂದಿರು ಕಾಯುತ್ತಿದ್ದಾರೆ. ನನಗೆ ಹೋಗಬೇಕು.””

03214007 ಮಾರ್ಕಂಡೇಯ ಉವಾಚ|

03214007a ತತೋಽಗ್ನಿರುಪಯೇಮೇ ತಾಂ ಶಿವಾಂ ಪ್ರೀತಿಮುದಾಯುತಃ|

03214007c ಪ್ರೀತ್ಯಾ ದೇವೀ ಚ ಸಂಯುಕ್ತಾ ಶುಕ್ರಂ ಜಗ್ರಾಹ ಪಾಣಿನಾ||

ಮಾರ್ಕಂಡೇಯನು ಹೇಳಿದನು: “ಆಗ ಅಗ್ನಿಯು ಪ್ರೀತಿ ಸಂತೋಷಗಳಿಂದ ಆ ಶಿವೆಯನ್ನು ಕೂಡಿದನು. ದೇವಿಯು ಪ್ರೀತಿಯಿಂದ ಅವನ ವೀರ್ಯವನ್ನು ತನ್ನ ಕರಗಳಲ್ಲಿ ಹಿಡಿದುಕೊಂಡಳು.

03214008a ಅಚಿಂತಯನ್ಮಮೇದಂ ಯೇ ರೂಪಂ ದ್ರಕ್ಷ್ಯಂತಿ ಕಾನನೇ|

03214008c ತೇ ಬ್ರಾಹ್ಮಣೀನಾಮನೃತಂ ದೋಷಂ ವಕ್ಷ್ಯಂತಿ ಪಾವಕೇ||

03214009a ತಸ್ಮಾದೇತದ್ರಕ್ಷ್ಯಮಾಣಾ ಗರುಡೀ ಸಂಭವಾಮ್ಯಹಂ|

03214009c ವನಾನ್ನಿರ್ಗಮನಂ ಚೈವ ಸುಖಂ ಮಮ ಭವಿಷ್ಯತಿ||

“ಕಾನನದಲ್ಲಿ ನನ್ನನ್ನು ಈ ರೂಪದಲ್ಲಿ ನೋಡಿದರೆ ಆ ಬ್ರಾಹ್ಮಣಿಯರಿಗೆ ಅಗ್ನಿಯ ಸಂಬಂಧವಾಗಿ ಸುಳ್ಳು ದೋಷಬರುತ್ತದೆ. ಆದುದರಿಂದ ಇದನ್ನು ತಪ್ಪಿಸಲು ನಾನು ಗರುಡಳಾಗುತ್ತೇನೆ. ಹೀಗೆ ನಾನು ಸುಖವಾಗಿ ವನದಿಂದ ಹೊರಹೋಗಬಲ್ಲೆ” ಎಂದು ಅವಳು ಯೋಚಿಸಿದಳು.

03214010a ಸುಪರ್ಣೀ ಸಾ ತದಾ ಭೂತ್ವಾ ನಿರ್ಜಗಾಮ ಮಹಾವನಾತ್|

03214010c ಅಪಶ್ಯತ್ಪರ್ವತಂ ಶ್ವೇತಂ ಶರಸ್ತಂಬೈಃ ಸುಸಂವೃತಂ||

03214011a ದೃಷ್ಟೀವಿಷೈಃ ಸಪ್ತಶೀರ್ಷೈರ್ಗುಪ್ತಂ ಭೋಗಿಭಿರದ್ಭುತೈಃ|

03214011c ರಕ್ಷೋಭಿಶ್ಚ ಪಿಶಾಚೈಶ್ಚ ರೌದ್ರೈರ್ಭೂತಗಣೈಸ್ತಥಾ|

03214011e ರಾಕ್ಷಸೀಭಿಶ್ಚ ಸಂಪೂರ್ಣಮನೇಕೈಶ್ಚ ಮೃಗದ್ವಿಜೈಃ||

ಆಗ ಅವಳು ಸುಪರ್ಣಿಯಾಗಿ ಆ ಮಹಾವನದಿಂದ ನಿರ್ಗಮಿಸಿದಳು. ಅವಳು ಶರಸ್ತಂಭಗಳಿಂದ ಸುಸಂವೃತವಾಗಿದ್ದ, ದೃಷ್ಟಿಯಿಂದಲೇ ವಿಷವನ್ನು ಕಾರುವ ಅದ್ಭುತ ಏಳು ಹೆಡೆಯ ಸರ್ಪಗಳಿಂದ ರಕ್ಷಿತವಾದ, ರಾಕ್ಷಸರು, ಪಿಶಾಚಿಗಳು, ರೌದ್ರ ಭೂತಗಣಗಳಿಂದ, ರಾಕ್ಷಸಿಯರಿಂದ, ಮತ್ತು ಅನೇಕ ಮೃಗಪಕ್ಷಿಗಳಿಂದ ತುಂಬಿದ್ದ ಶ್ವೇತ ಪರ್ವತವನ್ನು ನೋಡಿದಳು.

03214012a ಸಾ ತತ್ರ ಸಹಸಾ ಗತ್ವಾ ಶೈಲಪೃಷ್ಠಂ ಸುದುರ್ಗಮಂ|

03214012c ಪ್ರಾಕ್ಷಿಪತ್ಕಾಂಚನೇ ಕುಂಡೇ ಶುಕ್ರಂ ಸಾ ತ್ವರಿತಾ ಸತೀ||

ಅಲ್ಲಿ ಆ ಸತಿಯು ಬೇಗನೇ ಸುದುರ್ಗಮವಾದ ಶೈಲಶಿಖರದ ಮೇಲಿರುವ ಕಾಂಚನ ಸರೋವರದಲ್ಲಿ ಆ ವೀರ್ಯವನ್ನು ಹಾಕಿದಳು.

03214013a ಶಿಷ್ಟಾನಾಮಪಿ ಸಾ ದೇವೀ ಸಪ್ತರ್ಷೀಣಾಂ ಮಹಾತ್ಮನಾಂ|

03214013c ಪತ್ನೀಸರೂಪತಾಂ ಕೃತ್ವಾ ಕಾಮಯಾಮಾಸ ಪಾವಕಂ||

ಹೀಗೆ ಕ್ರಮವಾಗಿ ಮಹಾತ್ಮ ಸಪ್ತರ್ಷಿಗಳ ಪತ್ನಿಯರ ರೂಪಗಳನ್ನು ಧರಿಸಿಕೊಂಡು ಆ ದೇವಿಯು ಪಾವಕನನ್ನು ಕಾಮಿಸಿದಳು.

03214014a ದಿವ್ಯರೂಪಮರುಂಧತ್ಯಾಃ ಕರ್ತುಂ ನ ಶಕಿತಂ ತಯಾ|

03214014c ತಸ್ಯಾಸ್ತಪಹ್ಪ್ರಭಾವೇಣ ಭರ್ತೃಶುಶ್ರೂಷಣೇನ ಚ||

ಆದರೆ ಅರುಂಧತಿಯ ತಪಸ್ಸಿನ ಮತ್ತು ಪತಿಸೇವೆಯ ಪ್ರಭಾವದಿಂದ ಅವಳ ದಿವ್ಯರೂಪವನ್ನು ಧರಿಸಲು ಅವಳಿಗೆ ಶಕ್ಯವಾಗಲಿಲ್ಲ.

03214015a ಷಟ್ಕೃತ್ವಸ್ತತ್ತು ನಿಕ್ಷಿಪ್ತಮಗ್ನೇ ರೇತಃ ಕುರೂತ್ತಮ|

03214015c ತಸ್ಮಿನ್ಕುಂಡೇ ಪ್ರತಿಪದಿ ಕಾಮಿನ್ಯಾ ಸ್ವಾಹಯಾ ತದಾ||

ಕುರೂತ್ತಮ! ಪ್ರತಿಪದಿಯ ದಿನದಂದು ಕಾಮಿನೀ ಸ್ವಾಹಳು ಆ ಕುಂಡದಲ್ಲಿ ಅಗ್ನಿಯ ರೇತಸ್ಸನ್ನು ಆರುಬಾರು ಹಾಕಿದಳು.

03214016a ತತ್ಸ್ಕನ್ನಂ ತೇಜಸಾ ತತ್ರ ಸಂಭೃತಂ ಜನಯತ್ಸುತಂ|

03214016c ಋಷಿಭಿಃ ಪೂಜಿತಂ ಸ್ಕನ್ನಮನಯತ್ಸ್ಕಂದತಾಂ ತತಃ||

ಅಲ್ಲಿ ಎಸೆಯಲ್ಪಟ್ಟ ತೇಜಸ್ಸಿನಿಂದ ಮಗನೊಬ್ಬನು ಜನಿಸಿದನು. ಋಷಿಗಳು ಪೂಜಿಸದೇ ಬಿಟ್ಟಿದುದರಿಂದ ಅವನಿಗೆ ಸ್ಕಂದ ಎಂಬ ಹೆಸರಿನಿಂದ ಕರೆದರು.

03214017a ಷಟ್ಶಿರಾ ದ್ವಿಗುಣಶ್ರೋತ್ರೋ ದ್ವಾದಶಾಕ್ಷಿಭುಜಕ್ರಮಃ|

03214017c ಏಕಗ್ರೀವಸ್ತ್ವೇಕಕಾಯಃ ಕುಮಾರಃ ಸಮಪದ್ಯತ||

ಆ ಕುಮಾರನಿಗೆ ಆರು ಶಿರಗಳಿದ್ದವು, ಎರಡು ಪಟ್ಟು ಕಿವಿಗಳಿದ್ದವು, ಹನ್ನೆರಡು ಕಣ್ಣುಗಳು, ಕೈಗಳು ಮತ್ತು ಕಾಲುಗಳಿದ್ದವು. ಒಂದೇ ಕುತ್ತಿಗೆಯಿತ್ತು ಮತ್ತು ಒಂದೇ ದೇಹವಿತ್ತು.

03214018a ದ್ವಿತೀಯಾಯಾಮಭಿವ್ಯಕ್ತಸ್ತೃತೀಯಾಯಾಂ ಶಿಶುರ್ಬಭೌ|

03214018c ಅಂಗಪ್ರತ್ಯಂಗಸಂಭೂತಶ್ಚತುರ್ಥ್ಯಾಮಭವದ್ಗುಹಃ||

ಬಿದಿಗೆಯಂದು ಅವನು ಆವಿರ್ಭವಿಸಿದನು, ತದಿಗೆಯಂದು ಶಿಶುವಾದನು, ಮತ್ತು ಆ ಗುಹನ ಅಂಗಪ್ರತ್ಯಾಂಗಗಳು ಚತುರ್ಥಿಯಂದು ಬೆಳೆದವು.

03214019a ಲೋಹಿತಾಭ್ರೇಣ ಮಹತಾ ಸಂವೃತಃ ಸಹ ವಿದ್ಯುತಾ|

03214019c ಲೋಹಿತಾಭ್ರೇ ಸುಮಹತಿ ಭಾತಿ ಸೂರ್ಯ ಇವೋದಿತಃ||

ಮಿಂಚಿನಿಂದ ಕೂಡಿದ ಕೆಂಪು ಮೋಡಗಳಿಂದ ಸುತ್ತುವರೆಯಲ್ಪಟ್ಟ ಅವನು ಕೆಂಪುಮೋಡಗಳ ಮಧ್ಯದಿಂದ ಉದಯಿಸುತ್ತಿರುವ ಸೂರ್ಯನಂತೆ ಕಂಡನು.

03214020a ಗೃಹೀತಂ ತು ಧನುಸ್ತೇನ ವಿಪುಲಂ ಲೋಮಹರ್ಷಣ|

03214020c ನ್ಯಸ್ತಂ ಯತ್ತ್ರಿಪುರಘ್ನೇನ ಸುರಾರಿವಿನಿಕೃಂತನಂ||

03214021a ತದ್ಗೃಹೀತ್ವಾ ಧನುಃಶ್ರೇಷ್ಠಂ ನನಾದ ಬಲವಾಂಸ್ತದಾ|

03214021c ಸಮ್ಮೋಹಯನ್ನಿವೇಮಾನ್ಸ ತ್ರೀಽಲ್ಲೋಕಾನ್ಸಚರಾಚರಾನ್||

ಸುರಾರಿ ತ್ರಿಪುರನನ್ನು ಸಂಹರಿಸಿದ ಮೈನವಿರೇಳಿಸುವ ಮಹಾ ಧನುಸ್ಸನ್ನು ಹಿಡಿದು ಮೇಲೆದ್ದನು. ಆ ಶ್ರೇಷ್ಠ ಧನುಸ್ಸನ್ನು ಹಿಡಿದು ಸಚರಾಚರಗಳ ಮೂರು ಲೋಕಗಳನ್ನೂ ತಲ್ಲಣಿಸುವಂತೆ ಜೋರಾಗಿ ನಿನಾದಿಸಿದನು.

03214022a ತಸ್ಯ ತಂ ನಿನದಂ ಶ್ರುತ್ವಾ ಮಹಾಮೇಘೌಘನಿಸ್ವನಂ|

03214022c ಉತ್ಪೇತತುರ್ಮಹಾನಾಗೌ ಚಿತ್ರಶ್ಚೈರಾವತಶ್ಚ ಹ||

ಅವನ ಆ ಮಹಾಮೇಘನಿಸ್ವನದ ನಿನಾದವನ್ನು ಕೇಳಿ ವಿಚಿತ್ರವಾದ ಆ ಮಹಾನಾಗಗಳೆರಡೂ ಐರಾವತವೂ ಭಯದಿಂದ ನಡುಗಿದವು.

03214023a ತಾವಾಪತಂತೌ ಸಂಪ್ರೇಕ್ಷ್ಯ ಸ ಬಾಲಾರ್ಕಸಮದ್ಯುತಿಃ|

03214023c ದ್ವಾಭ್ಯಾಂ ಗೃಹೀತ್ವಾ ಪಾಣಿಭ್ಯಾಂ ಶಕ್ತಿಂ ಚಾನ್ಯೇನ ಪಾಣಿನಾ||

03214023e ಅಪರೇಣಾಗ್ನಿದಾಯಾದಸ್ತಾಂರಚೂಡಂ ಭುಜೇನ ಸಃ||

03214024a ಮಹಾಕಾಯಮುಪಶ್ಲಿಷ್ಟಂ ಕುಕ್ಕುಟಂ ಬಲಿನಾಂ ವರಂ|

03214024c ಗೃಹೀತ್ವಾ ವ್ಯನದದ್ಭೀಮಂ ಚಿಕ್ರೀಡ ಚ ಮಹಾಬಲಃ||

ಅವುಗಳು ನಡುಗುತ್ತಿದ್ದುದನ್ನು ನೋಡಿ ಆ ಬಾಲಾರ್ಕಸಮದ್ಯುತಿಯು ಅವುಗಳೆರಡನ್ನೂ ತನ್ನ ಕೈಗಳಿಂದ ಹಿಡಿದನು. ಇತರ ಕೈಯಲ್ಲಿ ಶಕ್ತಿಯನ್ನೂ, ಇನ್ನೊಂದರಲ್ಲಿ ಮಹಾಕಾಯದ ಕೆಂಪುಬಣ್ಣದ ಕುಕ್ಕುಟವನ್ನೂ ಹಿಡಿದು ಆ ಅಗ್ನಿಯ ಮಗ ತಾಮ್ರಚೂಡ ಮಹಾ ಭುಜ, ಬಲಿಗಳಲ್ಲಿ ಶ್ರೇಷ್ಠ ಮಹಾಬಲನು ಜೋರಾಗಿ ಕೂಗಿ ಆಡಿದನು.

03214025a ದ್ವಾಭ್ಯಾಂ ಭುಜಾಭ್ಯಾಂ ಬಲವಾನ್ಗೃಹೀತ್ವಾ ಶಂಖಮುತ್ತಮಂ|

03214025c ಪ್ರಾಧ್ಮಾಪಯತ ಭೂತಾನಾಂ ತ್ರಾಸನಂ ಬಲಿನಾಮಪಿ||

ಎರಡೂ ಭುಜಗಳಲ್ಲಿ ಉತ್ತಮ ಶಂಖವನ್ನು ಹಿಡಿದು ಆ ಬಲಿಯು ಜೋರಾಗಿ ಊದಿ ಭೂತಗಳನ್ನು ನಡುಗಿಸಿದನು.

03214026a ದ್ವಾಭ್ಯಾಂ ಭುಜಾಭ್ಯಾಮಾಕಾಶಂ ಬಹುಶೋ ನಿಜಘಾನ ಸಃ|

03214026c ಕ್ರೀಡನ್ಭಾತಿ ಮಹಾಸೇನಸ್ತ್ರೀಽಲ್ಲೋಕಾನ್ವದನೈಃ ಪಿಬನ್|

03214026e ಪರ್ವತಾಗ್ರೇಽಪ್ರಮೇಯಾತ್ಮಾ ರಶ್ಮಿಮಾನುದಯೇ ಯಥಾ||

ಎರಡೂ ಭುಜಗಳನ್ನೂ ಭೂಮಿ ಮತ್ತು ಆಕಾಶಗಳಿಗೆ ಬಹಳಷ್ಟು ಬಾರಿ ಹೊಡೆದು ಆಡುತ್ತಿದ್ದ ಆ ಮಹಾಸೇನನು ತನ್ನ ಬಾಯಿಗಳಿಂದ ಲೋಕಗಳನ್ನು ನುಂಗಿಬಿಡುವಂತೆ, ಮತ್ತು ಆ ಪರ್ವತಾಗ್ರದಲ್ಲಿ ಅಪ್ರಮೇಯ ಸೂರ್ಯನು ಉದಯಿಸುತ್ತಿದ್ದಂತೆ ತೋರುತ್ತಿದ್ದನು.

03214027a ಸ ತಸ್ಯ ಪರ್ವತಸ್ಯಾಗ್ರೇ ನಿಷಣ್ಣೋಽದ್ಭುತವಿಕ್ರಮಃ|

03214027c ವ್ಯಲೋಕಯದಮೇಯಾತ್ಮಾ ಮುಖೈರ್ನಾನಾವಿಧೈರ್ದಿಶಃ|

03214027e ಸ ಪಶ್ಯನ್ವಿವಿಧಾನ್ಭಾವಾಂಶ್ಚಕಾರ ನಿನದಂ ಪುನಃ||

ಆ ಪರ್ವತಾಗ್ರದಲಿದ್ದ ಆ ಅದ್ಭುತ ವಿಕ್ರಮಿ, ಅಮೇಯಾತ್ಮನು ತನ್ನ ಅನೇಕ ಮುಖಗಳಿಂದ ನಾನಾವಿಧದ ದಿಕ್ಕುಗಳನ್ನು ನೋಡಿ ವಿವಿಧ ಭಾವಗಳಲ್ಲಿ ಪುನಃ ಜೋರಾಗಿ ನಿನಾದಿಸಿದನು.

03214028a ತಸ್ಯ ತಂ ನಿನದಂ ಶ್ರುತ್ವಾ ನ್ಯಪತನ್ಬಹುಧಾ ಜನಾಃ|

03214028c ಭೀತಾಶ್ಚೋದ್ವಿಗ್ನಮನಸಸ್ತಮೇವ ಶರಣಂ ಯಯುಃ||

ಅವನ ಆ ನಿನಾದವನ್ನು ಕೇಳಿ ಬಹಳ ಜನರು ಉರುಳಿ ಬಿದ್ದರು ಮತ್ತು ಭೀತಿ ಮತ್ತು ಉದ್ವಿಗ್ನಮನಸ್ಕರಾಗಿ ಅವನನ್ನೇ ಶರಣು ಹೊಕ್ಕರು.

03214029a ಯೇ ತು ತಂ ಸಂಶ್ರಿತಾ ದೇವಂ ನಾನಾವರ್ಣಾಸ್ತದಾ ಜನಾಃ|

03214029c ತಾನಪ್ಯಾಹುಃ ಪಾರಿಷದಾನ್ಬ್ರಾಹ್ಮಣಾಃ ಸುಮಹಾಬಲಾನ್||

ಆಗ ಆ ದೇವನ ಶರಣುಹೋದ ನಾನಾ ವರ್ಣದ ಜನರನ್ನು ಸುಮಹಾಬಲಶಾಲಿಗಳಾದ ಪಾರಿಷದ ಬ್ರಾಹ್ಮಣರೆಂದು ಕರೆಯುತ್ತಾರೆ.

03214030a ಸ ತೂತ್ಥಾಯ ಮಹಾಬಾಹುರುಪಸಾಂತ್ವ್ಯ ಚ ತಾಂ ಜನಾನ್|

03214030c ಧನುರ್ವಿಕೃಷ್ಯ ವ್ಯಸೃಜದ್ಬಾಣಾಂ ಶ್ವೇತೇ ಮಹಾಗಿರೌ||

ಆಗ ಆ ಮಹಾಬಾಹುವು ಮೇಲೆದ್ದು ಜನರನ್ನು ಸಂತವಿಸಿ, ಧನುವನ್ನು ಎಳೆದು ಬಾಣಗಳನ್ನು ಶ್ವೇತಮಹಾಗಿರಿಯ ಮೇಲಿಂದ ಪ್ರಯೋಗಿಸಿದನು.

03214031a ಬಿಭೇದ ಸ ಶರೈಃ ಶೈಲಂ ಕ್ರೌಂಚಂ ಹಿಮವತಃ ಸುತಂ|

03214031c ತೇನ ಹಂಸಾಶ್ಚ ಗೃಧ್ರಾಶ್ಚ ಮೇರುಂ ಗಚ್ಚಂತಿ ಪರ್ವತಂ||

ಆ ಶರಗಳಿಂದ ಅವನು ಹಿಮವತನ ಮಗ ಕ್ರೌಂಚ ಶೈಲವನ್ನು ತುಂಡರಿಸಿದನು. ಇದರಿಂದಾಗಿ ಹಂಸ ಮತ್ತು ಹದ್ದುಗಳು ಮೇರು ಪರ್ವತಕ್ಕೆ ಹೋಗುತ್ತವೆ.

03214032a ಸ ವಿಶೀರ್ಣೋಽಪತಚ್ಚೈಲೋ ಭೃಶಮಾರ್ತಸ್ವರಾನ್ರುವನ್|

03214032c ತಸ್ಮಿನ್ನಿಪತಿತೇ ತ್ವನ್ಯೇ ನೇದುಃ ಶೈಲಾ ಭೃಶಂ ಭಯಾತ್||

ಚೆನ್ನಾಗಿ ಪೆಟ್ಟುತಿಂದ ಆ ಶೈಲನು ಆರ್ತಸ್ವರದಲ್ಲಿ ರೋದಿಸುತ್ತಾ ಅಲ್ಲಿಯೇ ಬಿದ್ದನು. ಅವನು ಬಿದ್ದಿದನ್ನು ನೋಡಿ ಅನ್ಯ ಪರ್ವತಗಳು ಕೂಡ ಭಯದಿಂದ ಕೂಗಿದವು.

03214033a ಸ ತಂ ನಾದಂ ಭೃಶಾರ್ತಾನಾಂ ಶ್ರುತ್ವಾಪಿ ಬಲಿನಾಂ ವರಃ|

03214033c ನ ಪ್ರಾವ್ಯಥದಮೇಯಾತ್ಮಾ ಶಕ್ತಿಮುದ್ಯಮ್ಯ ಚಾನದತ್||

ಅವರ ಭಯದ ಕೂಗುಗಳನ್ನು ಕೇಳಿಯೂ ಕೂಡ ಆ ಬಲಿಗಳಲ್ಲಿ ಶ್ರೇಷ್ಠನು ಅವರಮೇಲೆ ಕರಗಲಿಲ್ಲ. ಆ ಅಮೇಯಾತ್ಮನು ಶಕ್ತಿಯನ್ನು ಮೇಲೆತ್ತಿ ಕೂಗಿದನು.

03214034a ಸಾ ತದಾ ವಿಪುಲಾ ಶಕ್ತಿಃ ಕ್ಷಿಪ್ತಾ ತೇನ ಮಹಾತ್ಮನಾ|

03214034c ಬಿಭೇದ ಶಿಖರಂ ಘೋರಂ ಶ್ವೇತಸ್ಯ ತರಸಾ ಗಿರೇಃ||

ಆಗ ಆ ಮಹಾತ್ಮನು ವಿಪುಲ ಘೋರ ಶಕ್ತಿಯನ್ನು ಎಸೆದು ತಕ್ಷಣವೇ ಶ್ವೇತಗಿರಿಯ ಶಿಖರವನ್ನು ಕತ್ತರಿಸಿದನು.

03214035a ಸ ತೇನಾಭಿಹತೋ ದೀನೋ ಗಿರಿಃ ಶ್ವೇತೋಽಚಲೈಃ ಸಹ|

03214035c ಉತ್ಪಪಾತ ಮಹೀಂ ತ್ಯಕ್ತ್ವಾ ಭೀತಸ್ತಸ್ಮಾನ್ಮಹಾತ್ಮನಃ||

ಅವನಿಂದ ಪೆಟ್ಟುತಿಂದು ದೀನನಾದ ಶ್ವೇತಗಿರಿಯು ಇತರ ಪರ್ವತಗಳೊಂದಿಗೆ, ಆ ಮಹಾತ್ಮನಿಗೆ ಹೆದರಿ, ಭೂಮಿಯಿಂದ ಬೇರ್ಪಟ್ಟು, ಮೇಲೆ ಹಾರಿದನು.

03214036a ತತಃ ಪ್ರವ್ಯಥಿತಾ ಭೂಮಿರ್ವ್ಯಶೀರ್ಯತ ಸಮಂತತಃ|

03214036c ಆರ್ತಾ ಸ್ಕಂದಂ ಸಮಾಸಾದ್ಯ ಪುನರ್ಬಲವತೀ ಬಭೌ||

ಆಗ ತನ್ನ ಸುತ್ತಲಿದ್ದ ಆಭರಣಗಳನ್ನು ಕಳೆದುಕೊಂಡು ವ್ಯಥಿತಳಾದ ಭೂಮಿಯು ಆರ್ತಳಾಗಿ ಸ್ಕಂದನನ್ನು ಮೊರೆಹೊಕ್ಕು ಪುನಃ ಬಲವತಿಯಾದಳು.

03214037a ಪರ್ವತಾಶ್ಚ ನಮಸ್ಕೃತ್ಯ ತಮೇವ ಪೃಥಿವೀಂ ಗತಾಃ|

03214037c ಅಥಾಯಮಭಜಲ್ಲೋಕಃ ಸ್ಕಂದಂ ಶುಕ್ಲಸ್ಯ ಪಂಚಮೀಂ||

ಪರ್ವತಗಳು ಕೂಡ ಅವನನ್ನು ನಮಸ್ಕರಿಸಿ ಪೃಥ್ವಿಗೆ ಅಂಟಿಕೊಂಡವು. ಶುಕ್ಲಪಕ್ಷದ ಪಂಚಮಿಯಂದು ಲೋಕವು ಸ್ಕಂದನನ್ನು ಭಜಿಸಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ಚತುರ್ದಶಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿನಾಲ್ಕನೆಯ ಅಧ್ಯಾಯವು.

Related image

Comments are closed.