Aranyaka Parva: Chapter 209

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೦೯

ಅಗ್ನಿಗಳ ವರ್ಣನೆಯು ಮುಂದುವರೆದುದು (೧-೨೫).

Image result for agni03209001 ಮಾರ್ಕಂಡೇಯ ಉವಾಚ|

03209001a ಬೃಹಸ್ಪತೇಶ್ಚಾಂದ್ರಮಸೀ ಭಾರ್ಯಾಭೂದ್ಯಾ ಯಶಸ್ವಿನೀ|

03209001c ಅಗ್ನೀನ್ಸಾಜನಯತ್ಪುಣ್ಯಾನ್ಷಡೇಕಾಂ ಚಾಪಿ ಪುತ್ರಿಕಾಂ||

ಮಾರ್ಕಂಡೇಯನು ಹೇಳಿದನು: “ಬೃಹಸ್ಪತಿಯ ಭಾರ್ಯೆ ಯಶಸ್ವಿನೀ ಚಂದ್ರಮಸೀ[1]. ಅವಳು ಆರು ಪುಣ್ಯ ಅಗ್ನಿಗಳಿಗೂ ಮತ್ತು ಓರ್ವ ಪುತ್ರಿಗೂ ಜನ್ಮವಿತ್ತಳು.

03209002a ಆಹುತಿಷ್ವೇವ ಯಸ್ಯಾಗ್ನೇರ್ಹವಿಷಾಜ್ಯಂ ವಿಧೀಯತೇ|

03209002c ಸೋಽಗ್ನಿರ್ಬೃಹಸ್ಪತೇಃ ಪುತ್ರಃ ಶಮ್ಯುರ್ನಾಮ ಮಹಾಪ್ರಭಃ||

ತುಪ್ಪದ ಹವಿಸ್ಸಿನ ಮೊದಲ ಆಹುತಿಯನ್ನಾಗಿ ಯಾವ ಅಗ್ನಿಯಲ್ಲಿ ಹಾಕುತ್ತಾರೋ ಆ ಅಗ್ನಿಯು ಬೃಹಸ್ಪತಿಯ ಮಹಾಪ್ರಭೆಯುಳ್ಳ ಶಮ್ಯು ಎಂಬ ಹೆಸರಿನ ಪುತ್ರ.

03209003a ಚಾತುರ್ಮಾಸ್ಯೇಷು ಯಸ್ಯೇಷ್ಟ್ಯಾಮಶ್ವಮೇಧೇಽಗ್ರಜಃ ಪಶುಃ|

03209003c ದೀಪ್ತೋ ಜ್ವಾಲೈರನೇಕಾಭೈರಗ್ನಿರೇಕೋಽಥ ವೀರ್ಯವಾನ್||

ಚಾತುರ್ಮಾಸದ[2] ಇಷ್ಟಿಯಲ್ಲಿ ಮತ್ತು ಅಶ್ವಮೇಧದಲ್ಲಿ ಮೊದಲ ಪಶುವನ್ನು ಅನೇಕ ಜ್ವಾಲೆಗಳಾಗಿ ಉರಿಯುವ ಈ ಮಹಾವೀರ್ಯನಲ್ಲಿ ಮಾತ್ರ ಆಹುತಿಯನ್ನಾಗಿ ಹಾಕುತ್ತಾರೆ.

03209004a ಶಮ್ಯೋರಪ್ರತಿಮಾ ಭಾರ್ಯಾ ಸತ್ಯಾ ಸತ್ಯಾ ಚ ಧರ್ಮಜಾ|

03209004c ಅಗ್ನಿಸ್ತಸ್ಯ ಸುತೋ ದೀಪ್ತಸ್ತಿಸ್ರಃ ಕನ್ಯಾಶ್ಚ ಸುವ್ರತಾಃ||

ಶಮ್ಯನ ಅಪ್ರತಿಮ ಭಾರ್ಯೆಯು ಸತ್ಯ. ಸತ್ಯೆಯು ಧರ್ಮನ ಮಗಳು. ಆ ಅಗ್ನಿಗೆ ಉರಿಯುತ್ತಿರುವ ಓರ್ವ ಮಗ ಮತ್ತು ಮೂರು ಸುವ್ರತ ಕನ್ಯೆಯರು.

03209005a ಪ್ರಥಮೇನಾಜ್ಯಭಾಗೇನ ಪೂಜ್ಯತೇ ಯೋಽಗ್ನಿರಧ್ವರೇ|

03209005c ಅಗ್ನಿಸ್ತಸ್ಯ ಭರದ್ವಾಜಃ ಪ್ರಥಮಃ ಪುತ್ರ ಉಚ್ಯತೇ||

ಅಧ್ವರದಲ್ಲಿ ಪ್ರಥಮ ಆಜ್ಯಭಾಗದಲ್ಲಿ ಪೂಜಿತನಾಗುವ ಅಗ್ನಿ ಭರದ್ವಾಜನನ್ನು ಅವನ ಪ್ರಥಮ ಪುತ್ರನೆಂದು ಹೇಳುತ್ತಾರೆ.

03209006a ಪೌರ್ಣಮಾಸ್ಯೇಷು ಸರ್ವೇಷು ಹವಿಷಾಜ್ಯಂ ಸ್ರುವೋದ್ಯತಂ|

03209006c ಭರತೋ ನಾಮತಃ ಸೋಽಗ್ನಿರ್ದ್ವಿತೀಯಃ ಶಮ್ಯುತಃ ಸುತಃ||

ಎಲ್ಲ ಪೂರ್ಣಿಮೆಗಳಲ್ಲಿ ಸ್ರುವದ ಮೂಲಕ ತುಪ್ಪದ ಹವಿಸ್ಸನ್ನು ಹಾಕುವ ಭರತ ಎಂಬ ಹೆಸರಿನ ಅಗ್ನಿಯು ಶಮ್ಯುವಿನ ಎರಡನೆಯ ಮಗ.

03209007a ತಿಸ್ರಃ ಕನ್ಯಾ ಭವಂತ್ಯನ್ಯಾ ಯಾಸಾಂ ಸ ಭರತಃ ಪತಿಃ|

03209007c ಭರತಸ್ತು ಸುತಸ್ತಸ್ಯ ಭರತ್ಯೇಕಾ ಚ ಪುತ್ರಿಕಾ||

ಭರತನಿಗೆ ಮೂರುಕನ್ಯೆಯರಿದ್ದರು[3], ಅವರನ್ನು ಮದುವೆಮಾಡಿಕೊಟ್ಟನು. ಅವನಿಗೆ ಭರತನೆಂಬ ಮಗನೂ ಭರತೀ ಎನ್ನುವ ಮಗಳೂ ಇದ್ದರು.

03209008a ಭರತೋ ಭರತಸ್ಯಾಗ್ನೇಃ ಪಾವಕಸ್ತು ಪ್ರಜಾಪತೇಃ|

03209008c ಮಹಾನತ್ಯರ್ಥಮಹಿತಸ್ತಥಾ ಭರತಸತ್ತಮ||

ಭರತಸತ್ತಮ! ಪಾವಕ ಭರತನು ಅಗ್ನಿ ಪ್ರಜಾಪತಿಯ ಮಗನು. ಜೋರಾಗಿ ಉರಿಯುತ್ತಿರುವಾಗ ಅವನು ತುಂಬಾ ಅಹಿತನಾಗಿರುತ್ತಾನೆ[4].

03209009a ಭರದ್ವಾಜಸ್ಯ ಭಾರ್ಯಾ ತು ವೀರಾ ವೀರಶ್ಚ ಪಿಂಡದಃ|

03209009c ಪ್ರಾಹುರಾಜ್ಯೇನ ತಸ್ಯೇಜ್ಯಾಂ ಸೋಮಸ್ಯೇವ ದ್ವಿಜಾಃ ಶನೈಃ||

ಭರದ್ವಾಜನ ಪತ್ನಿಯು ವೀರಾ ಮತ್ತು ಮಗನು ವೀರ. ಇವನಿಗೆ ಆಜ್ಯದಲ್ಲಿ ಸೋಮನಷ್ಟೇ ಪೂಜೆಯಾಗುತ್ತದೆ ಎಂದು ಬ್ರಾಹ್ಮಣರು ಹೇಳುತ್ತಾರೆ, ಆದರೆ ಮೆಲ್ಲಗೆ.

03209010a ಹವಿಷಾ ಯೋ ದ್ವಿತೀಯೇನ ಸೋಮೇನ ಸಹ ಯುಜ್ಯತೇ|

03209010c ರಥಪ್ರಭೂ ರಥಧ್ವಾನಃ ಕುಂಭರೇತಾಃ ಸ ಉಚ್ಯತೇ||

ಸೋಮದೊಂದಿಗೆ ಯಜಿಸುವ ಈ ಎರಡನೆಯ ಹವಿಸ್ಸನ್ನು ರಥಪ್ರಭು, ರಥಧ್ವಾನ ಮತ್ತು ಕುಂಭರೇತಾ ಎಂದೂ ಕರೆಯುತ್ತಾರೆ.

03209011a ಸರಯ್ವಾಂ ಜನಯತ್ಸಿದ್ಧಿಂ ಭಾನುಂ ಭಾಭಿಃ ಸಮಾವೃಣೋತ್|

03209011c ಆಗ್ನೇಯಮಾನಯನ್ನಿತ್ಯಮಾಹ್ವಾನೇಷ್ವೇಷ ಕಥ್ಯತೇ||

ಅವನು ಸರಯೂವಿನಲ್ಲಿ ಸಿದ್ಧಿಯನ್ನು ಹುಟ್ಟಿಸಿದನು ಮತ್ತು ತನ್ನ ಪ್ರಭೆಯಿಂದ ಸೂರ್ಯನ ಪ್ರಭೆಯನ್ನು ಕುಂದಿಸಿದನು. ಅವನೇ ಅಗ್ನಿಯನ್ನು ತಂದ ಎಂದು ನಿತ್ಯವೂ ಆವಾಹನಗಳಲ್ಲಿ ಹೇಳುತ್ತಾರೆ.

03209012a ಯಸ್ತು ನ ಚ್ಯವತೇ ನಿತ್ಯಂ ಯಶಸಾ ವರ್ಚಸಾ ಶ್ರಿಯಾ|

03209012c ಅಗ್ನಿರ್ನಿಶ್ಚ್ಯವನೋ ನಾಮ ಪೃಥಿವೀಂ ಸ್ತೌತಿ ಕೇವಲಂ||

ಯಶಸ್ಸು, ವರ್ಚಸ್ಸು ಮತ್ತು ಶ್ರಿಯಲ್ಲಿ ನಿತ್ಯವೂ ಕಡಿಮೆಯಾಗದ ನಿಶ್ಚ್ಯವನ ಎಂಬ ಹೆಸರಿನ ಅಗ್ನಿಯು ಸದಾ ಪೃಥ್ವಿಯನ್ನು ಸ್ತುತಿಸುತ್ತಿರುತ್ತಾನೆ[5].

03209013a ವಿಪಾಪ್ಮಾ ಕಲುಷೈರ್ಮುಕ್ತೋ ವಿಶುದ್ಧಶ್ಚಾರ್ಚಿಷಾ ಜ್ವಲನ್|

03209013c ವಿಪಾಪೋಽಗ್ನಿಃ ಸುತಸ್ತಸ್ಯ ಸತ್ಯಃ ಸಮಯಕರ್ಮಸು||

ಪಾಪವಿಲ್ಲದ, ಕಲ್ಮಷಗಳಿಂದ ಮುಕ್ತನಾದ, ವಿಶುದ್ಧನಾದ, ಜ್ವಾಲೆಗಳಲ್ಲಿ ಉರಿಯುತ್ತಿರುವ ವಿಪಾಪ ಅಗ್ನಿಯು ಅವನ ಮಗ. ಸಮಯಕರ್ಮಗಳಲ್ಲಿ ಸತ್ಯನು.

03209014a ಆಕ್ರೋಶತಾಂ ಹಿ ಭೂತಾನಾಂ ಯಃ ಕರೋತಿ ಹಿ ನಿಷ್ಕೃತಿಂ|

03209014c ಅಗ್ನಿಃ ಸ ನಿಷ್ಕೃತಿರ್ನಾಮ ಶೋಭಯತ್ಯಭಿಸೇವಿತಃ||

ಆಕ್ರೋಶಪಡುತ್ತಿರುವ ಭೂತಗಳನ್ನು ಯಾರು ನಿಷ್ಕೃತಿಗೊಳಿಸುತ್ತಾನೋ ಅವನೇ ನಿಷ್ಕೃತಿ ಎಂಬ ಹೆಸರಿನ ಅಗ್ನಿ. ಅವನನ್ನು ಸೇವಿಸಿದರೆ ಶೋಭಿಸುತ್ತಾನೆ.

03209015a ಅನುಕೂಜಂತಿ ಯೇನೇಹ ವೇದನಾರ್ತಾಃ ಸ್ವಯಂ ಜನಾಃ|

03209015c ತಸ್ಯ ಪುತ್ರಃ ಸ್ವನೋ ನಾಮ ಪಾವಕಃ ಸ ರುಜಸ್ಕರಃ||

ವೇದನೆಯಿಂದ ಆರ್ತರಾದ ಜನರು ಯಾವುದರಿಂದ ಸ್ವಯಂ ಪರಿತಪಿಸುತ್ತಾರೋ ಅದೇ ಸ್ವನ ಎಂಬ ಹೆಸರಿನ ಅವನ ಪುತ್ರ. ಅವನು ನೋವನ್ನುಂಟುಮಾಡುವವನು.

03209016a ಯಸ್ತು ವಿಶ್ವಸ್ಯ ಜಗತೋ ಬುದ್ಧಿಮಾಕ್ರಮ್ಯ ತಿಷ್ಠತಿ|

03209016c ತಂ ಪ್ರಾಹುರಧ್ಯಾತ್ಮವಿದೋ ವಿಶ್ವಜಿನ್ನಾಮ ಪಾವಕಂ||

ಯಾವುದು ವಿಶ್ವದ ಜಗತ್ತಿನ ಬುದ್ಧಿಯನ್ನು ಆಕ್ರಮಿಸಿ ನಿಂತಿದೆಯೋ ಆ ಪಾವಕನನ್ನು ಆಧ್ಯಾತ್ಮವನ್ನು ತಿಳಿದವರು ವಿಶ್ವಜಿತ ಎಂಬ ಹೆಸರಿನಿಂದ ಕರೆಯುತ್ತಾರೆ.

03209017a ಅಂತರಾಗ್ನಿಃ ಶ್ರಿತೋ ಯೋ ಹಿ ಭುಕ್ತಂ ಪಚತಿ ದೇಹಿನಾಂ|

03209017c ಸ ಯಜ್ಞೇ ವಿಶ್ವಭುಮ್ನಾಮ ಸರ್ವಲೋಕೇಷು ಭಾರತ||

ಭಾರತ! ದೇಹದ ಕರುಳುಗಳಲ್ಲಿದ್ದುಕೊಂಡು ತಿನ್ನುವ ಆಹಾರವನ್ನು ಪಚನಮಾಡುವ, ಸರ್ವಲೋಕದ ಯಜ್ಞಗಳಲ್ಲಿರುವ ಅಂತರಾಗ್ನಿಯ ಹೆಸರು ವಿಶ್ವಭುಕ್.

03209018a ಬ್ರಹ್ಮಚಾರೀ ಯತಾತ್ಮಾ ಚ ಸತತಂ ವಿಪುಲವ್ರತಃ|

03209018c ಬ್ರಾಹ್ಮಣಾಃ ಪೂಜಯಂತ್ಯೇನಂ ಪಾಕಯಜ್ಞೇಷು ಪಾವಕಂ||

03209019a ಪ್ರಥಿತೋ ಗೋಪತಿರ್ನಾಮ ನದೀ ಯಸ್ಯಾಭವತ್ಪ್ರಿಯಾ|

03209019c ತಸ್ಮಿನ್ಸರ್ವಾಣಿ ಕರ್ಮಾಣಿ ಕ್ರಿಯಂತೇ ಕರ್ಮಕರ್ತೃಭಿಃ||

ಪಾಕಯಜ್ಞಗಳಲ್ಲಿ ಬ್ರಾಹ್ಮಣರು ಪೂಜಿಸುವ ಈ ಬ್ರಹ್ಮಚಾರೀ, ನಿಯತಾತ್ಮ, ಸತತವೂ ವಿಪುಲವ್ರತನಾಗಿರುವ ಪಾವಕನು ಗೋಪತಿ ಎಂಬ ಹೆಸರಿನಿಂದ ಪ್ರಖ್ಯಾತನಾಗಿದ್ದಾನೆ. ಇವನಿಗೆ ನದಿಯೊಂದಿಗೆ ಪ್ರೀತಿಯಾಯಿತು. ಅವನಿಂದ ಕರ್ಮ ಕರ್ತೃಗಳ ಎಲ್ಲ ಕರ್ಮಗಳೂ ನಡೆಯುತ್ತವೆ.

03209020a ವಡವಾಮುಖಃ ಪಿಬತ್ಯಂಭೋ ಯೋಽಸೌ ಪರಮದಾರುಣಃ|

03209020c ಊರ್ಧ್ವಭಾಗೂರ್ಧ್ವಭಾಮ್ನಾಮ ಕವಿಃ ಪ್ರಾಣಾಶ್ರಿತಸ್ತು ಸಃ||

ಪರಮದಾರುಣವಾದ, ವಡವಾಮುಖನಾದ, ನೀರನ್ನು ಕುಡಿಯುವ, ಮೇಲ್ಮುಖವಾಗಿರುವವನ ಹೆಸರು ಊರ್ಧ್ವಭಾಮ. ಈ ಋಷಿಯು ಪ್ರಾಣದಲ್ಲಿರುತ್ತಾನೆ.

03209021a ಉದಗ್ದ್ವಾರಂ ಹವಿರ್ಯಸ್ಯ ಗೃಹೇ ನಿತ್ಯಂ ಪ್ರದೀಯತೇ|

03209021c ತತಃ ಸ್ವಿಷ್ಟಂ ಭವೇದಾಜ್ಯಂ ಸ್ವಿಷ್ಟಕೃತ್ಪರಮಃ ಸ್ಮೃತಃ||

ಮನೆಯ ಉತ್ತರ ದ್ವಾರದಲ್ಲಿ ನಿತ್ಯವೂ ಉರಿಯುತ್ತಿರುವ, ಯಾವುದರಿಂದ ಬೆಣ್ಣೆಯು ತುಪ್ಪವಾಗುತ್ತದೆಯೋ ಅದನ್ನು ಸ್ವಿಷ್ಟಕೃತ್ ಎಂದು ಕರೆಯುತ್ತಾರೆ.

03209022a ಯಃ ಪ್ರಶಾಂತೇಷು ಭೂತೇಷು ಮನ್ಯುರ್ಭವತಿ ಪಾವಕಃ|

03209022c ಕ್ರೋಧಸ್ಯ ತು ರಸೋ ಜಜ್ಞೇ ಮನ್ಯತೀ ಚಾಥ ಪುತ್ರಿಕಾ|

03209022e ಸ್ವಾಹೇತಿ ದಾರುಣಾ ಕ್ರೂರಾ ಸರ್ವಭೂತೇಷು ತಿಷ್ಠತಿ||

ಪ್ರಶಾಂತರಾಗಿರುವವರಲ್ಲಿ ಸಿಟ್ಟಿನ ಅಗ್ನಿಯಾಗುವವಳು, ಕ್ರೋಧದ ರಸವನ್ನು ಹುಟ್ಟಿಸುವವಳು ಇವನ ಮಗಳು ಸ್ವಾಹಾ ಎನ್ನುವವಳು. ದಾರುಣಳೂ, ಕ್ರೂರಳೂ ಆದ ಇವಳು ಸರ್ವಭೂತಗಳಲ್ಲಿ ನೆಲೆಮಾಡಿರುತ್ತಾಳೆ.

03209023a ತ್ರಿದಿವೇ ಯಸ್ಯ ಸದೃಶೋ ನಾಸ್ತಿ ರೂಪೇಣ ಕಶ್ಚನ|

03209023c ಅತುಲ್ಯತ್ವಾತ್ಕೃತೋ ದೇವೈರ್ನಾಮ್ನಾ ಕಾಮಸ್ತು ಪಾವಕಃ||

ಮೂರು ಲೋಕಗಳಲ್ಲಿಯೂ ರೂಪದಲ್ಲಿ ಯಾರ ಸದೃಶನಾದವನು ಯಾರೂ ಇಲ್ಲವೋ, ಅತುಲ್ಯನಾದುದರಿಂದ ಅವನಿಗೆ ಕಾಮಾಗ್ನಿ ಎಂದು ದೇವತೆಗಳು ಹೆಸರನ್ನಿಟ್ಟರು.

03209024a ಸಂಹರ್ಷಾದ್ಧಾರಯನ್ಕ್ರೋಧಂ ಧನ್ವೀ ಸ್ರಗ್ವೀ ರಥೇ ಸ್ಥಿತಃ|

03209024c ಸಮರೇ ನಾಶಯೇಚ್ಚತ್ರೂನಮೋಘೋ ನಾಮ ಪಾವಕಃ||

ಸಂಹರ್ಷದಿಂದ ಕ್ರೋಧವನ್ನು ಧರಿಸಿ, ಧನುಸ್ಸನ್ನು ಹಿಡಿದು, ಮಾಲೆಯನ್ನು ಧರಿಸಿ ರಥದಲ್ಲಿ ನಿಂತು ಸಮರದಲ್ಲಿ ಶತ್ರುಗಳನ್ನು ನಾಶಪಡಿಸುವ ಅಗ್ನಿಯ ಹೆಸರು ಅಮೋಘ.

03209025a ಉಕ್ಥೋ ನಾಮ ಮಹಾಭಾಗ ತ್ರಿಭಿರುಕ್ಥೈರಭಿಷ್ಟುತಃ|

03209025c ಮಹಾವಾಚಂ ತ್ವಜನಯತ್ಸಕಾಮಾಶ್ವಂ ಹಿ ಯಂ ವಿದುಃ||

ಮಹಾಭಾಗ! ಮೂರು ಉಕ್ತಗಳನ್ನು ಬಳಸಿ ಹೇಳುವ ಉಕ್ಥ ಎಂಬ ಹೆಸರಿನ ಮಹಾವಾಕ್ಯವನ್ನು ಸಕಾಮಾಶ್ವ ಎಂದು ತಿಳಿದವರು ಹೇಳುತ್ತಾರೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ನವಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಒಂಭತ್ತನೆಯ ಅಧ್ಯಾಯವು.

Related image

[1]ಚಂದ್ರನ ಕಾಂತಿಯಿಂದ ಕೂಡಿದ್ದ ತಾರಾ.

[2]ವೈಶ್ವದೇವ-ವರುಣಪ್ರಘಾಸ-ಸಾಕಮೇಧ-ಶುನಾಸೀರಿಯಗಳೆಂಬ ಚಾತುರ್ಮಾಸ್ಯಜ್ಞ

[3]ಭರತನಿಗೆ ಮೂವರು ಪತ್ನಿಯರಿದ್ದರು.

[4]ಯಜ್ಞದಲ್ಲಿ ಈ ಭರತಾಗ್ನಿಯನ್ನು ಹೊತ್ತಿರುವುದೇ ಪ್ರಾಜಾಪತಾಗ್ನಿ. ಈ ಅಗ್ನಿಯು ಮಹಾಫಲವನ್ನು ಕೊಡುವವನಾದ್ದರಿಂದ ಇವನನ್ನು ‘ಮಹಾನ್’ ಎಂದೂ ಕರೆಯುವರು.

[5]ಭೂದೇವಿಗೆ ಅರ್ಪಿಸಬೇಕಾದ ಆಹುತಿಯನ್ನು ನಿಶ್ಚ್ಯವನಾಗ್ನಿಯ ಮೂಲಕ ಅರ್ಪಿಸುತ್ತಾರೆ.

Comments are closed.