Aranyaka Parva: Chapter 197

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೯೭

ಮರದ ಕೆಳಗೆ ಕುಳಿತು ವೇದಾಧ್ಯಯನ ಮಾಡುವಾಗ ತನ್ನ ಮೇಲೆ ಪಿಷ್ಟವನ್ನು ಹಾಕಿತೆಂದು ಕುಪಿತನಾಗಿ ಕೌಶಿಕ ಬ್ರಾಹ್ಮಣನು ಬಲಾಕಾ ಪಕ್ಷಿಯನ್ನು ಕೇವಲ ಯೋಚನೆಯನ್ನು ಪ್ರಯೋಗಿಸಿ ಕೊಂದು, ಆಮೇಲೆ ಸಂತಾಪಗೊಂಡಿದುದು (೧-೬). ಭಿಕ್ಷೆಬೇಡಲು ಹೋದಾಗ ಗೃಹಿಣಿಯೋರ್ವಳು ನಿಲ್ಲು ಎಂದು ಕೌಶಿಕನನ್ನು ನಿಲ್ಲಿಸಿ, ಅಷ್ಟರಲ್ಲಿಯೇ ಹಸಿದು ಮನೆಗೆ ಬಂದ ಗಂಡನನ್ನು ಉಪಚರಿಸುವಾಗ ಬ್ರಾಹ್ಮಣನನ್ನು ಮರೆತದ್ದು (೭-೧೫). ನೆನಪು ಬಂದಾಗ ಭಿಕ್ಷವನ್ನು ನೀಡಲು ಬಂದ ಗೃಹಿಣಿಯ ಮೇಲೆ ಕೌಶಿಕನು ಬ್ರಾಹ್ಮಣನನ್ನು ನಿರ್ಲಕ್ಷಿಸಿದುದಕ್ಕೆ ಕುಪಿತನಾಗುವುದು (೧೬-೨೨). ಬ್ರಹ್ಮವಾದಿಗಳು ಕೋಪಗೊಂಡಾಗ ಮತ್ತು ಪ್ರಸನ್ನರಾದಾಗ ಮಹಾ ಪ್ರಭಾವಶಾಲಿಗಳೆಂದು ತಿಳಿದುಕೊಂಡಿದ್ದರೂ ತನಗೆ ಪತಿಶುಶ್ರೂಷೆಯೇ ಪರಮ ಧರ್ಮವೆಂದೂ, ಅದರಿಂದ ಕೌಶಿಕನು ಪಕ್ಷಿಯೊಂದನ್ನು ಕೋಪದಿಂದ ಸಾಯಿಸಿದ ವಿಷಯವನ್ನೂ ಬಲ್ಲೆ ಎಂದು ಗೃಹಿಣಿಯು ಉತ್ತರಿಸುವುದು (೨೩-೩೦); ಬಾಹ್ಮಣರ ಗುಣಲಕ್ಷಣಗಳನ್ನು ವರ್ಣಿಸಿ, ಮಿಥಿಲೆಯಲ್ಲಿರುವ ವ್ಯಾಧನೊಬ್ಬನು ಧರ್ಮದ ಮಾರ್ಗವನ್ನು ತೋರಿಸುತ್ತಾನೆ ಎಂದು ಹೇಳಿದುದು (೩೧-೪೪).

03197001 ಮಾರ್ಕಂಡೇಯ ಉವಾಚ|

03197001a ಕಶ್ಚಿದ್ದ್ವಿಜಾತಿಪ್ರವರೋ ವೇದಾಧ್ಯಾಯೀ ತಪೋಧನಃ|

03197001c ತಪಸ್ವೀ ಧರ್ಮಶೀಲಶ್ಚ ಕೌಶಿಕೋ ನಾಮ ಭಾರತ||

ಮಾರ್ಕಂಡೇಯನು ಹೇಳಿದನು: “ಭಾರತ! ಓರ್ವ ದ್ವಿಜಾತಿಪ್ರವರ, ವೇದಧ್ಯಾಯೀ, ತಪೋಧನ, ಧರ್ಮಶೀಲ ಕೌಶಿಕ ಎಂಬ ಹೆಸರಿನ ತಪಸ್ವಿಯಿದ್ದನು.

03197002a ಸಾಂಗೋಪನಿಷದಾನ್ವೇದಾನಧೀತೇ ದ್ವಿಜಸತ್ತಮಃ|

03197002c ಸ ವೃಕ್ಷಮೂಲೇ ಕಸ್ಮಿಂಶ್ಚಿದ್ವೇದಾನುಚ್ಚಾರಯನ್ಸ್ಥಿತಃ||

ಆ ದ್ವಿಜಸತ್ತಮನು ಉಪನಿಷತ್ತುಗಳೊಂದಿಗೆ ವೇದಗಳನ್ನು ತಿಳಿದುಕೊಂಡಿದ್ದನು. ಒಮ್ಮೆ ಅವನು ಒಂದು ಮರದ ಕೆಳಗೆ ವೇದಗಳನ್ನು ಉಚ್ಚರಿಸುತ್ತಾ ನಿಂತಿದ್ದನು.

03197003a ಉಪರಿಷ್ಟಾಚ್ಚ ವೃಕ್ಷಸ್ಯ ಬಲಾಕಾ ಸಂನ್ಯಲೀಯತ|

03197003c ತಯಾ ಪುರೀಷಮುತ್ಸೃಷ್ಟಂ ಬ್ರಾಹ್ಮಣಸ್ಯ ತದೋಪರಿ||

ಆ ವೃಕ್ಷದ ಮೇಲೆ ಒಂದು ಹೆಣ್ಣು ಬಲಾಕಾ ಪಕ್ಷಿಯು ಕುಳಿತಿತ್ತು. ಅದು ಬ್ರಾಹ್ಮಣನ ಮೇಲೆ ಪಿಷ್ಟವನ್ನು ಹಾಕಿತು.

03197004a ತಾಮವೇಕ್ಷ್ಯ ತತಃ ಕ್ರುದ್ಧಃ ಸಮಪಧ್ಯಾಯತ ದ್ವಿಜಃ|

03197004c ಭೃಶಂ ಕ್ರೋಧಾಭಿಭೂತೇನ ಬಲಾಕಾ ಸಾ ನಿರೀಕ್ಷಿತಾ||

ಆಗ ಕೃದ್ಧನಾದ ದ್ವಿಜನು ಅದನ್ನು ನೋಡಿ, ಆ ಬಲಾಕದ ಮೇಲೆ ಕ್ರೋಧಯುಕ್ತವಾದ ಯೋಚನೆಯನ್ನು ಪ್ರಯೋಗಿಸಿದನು.

03197005a ಅಪಧ್ಯಾತಾ ಚ ವಿಪ್ರೇಣ ನ್ಯಪತದ್ವಸುಧಾತಲೇ|

03197005c ಬಲಾಕಾಂ ಪತಿತಾಂ ದೃಷ್ಟ್ವಾ ಗತಸತ್ತ್ವಾಮಚೇತನಾಂ|

03197005e ಕಾರುಣ್ಯಾದಭಿಸಂತಪ್ತಃ ಪರ್ಯಶೋಚತ ತಾಂ ದ್ವಿಜಃ||

ನೃಪತೇ! ವಿಪ್ರನ ಆ ಯೋಚನೆಯ ಪೆಟ್ಟು ತಿಂದ ಬಲಾಕವು ನೆಲದಮೇಲೆ ಬಿದ್ದಿತು. ಸತ್ತು ಅಚೇತಸವಾಗಿ ಬಿದ್ದಿದ್ದ ಅದನ್ನು ನೋಡಿ ದ್ವಿಜನು ಕಾರುಣ್ಯದಿಂದ ಸಂತಪ್ತನಾಗಿ ಶೋಕಿಸಿದನು.

03197006a ಅಕಾರ್ಯಂ ಕೃತವಾನಸ್ಮಿ ರಾಗದ್ವೇಷಬಲಾತ್ಕೃತಃ|

03197006c ಇತ್ಯುಕ್ತ್ವಾ ಬಹುಶೋ ವಿದ್ವಾನ್ಗ್ರಾಮಂ ಭೈಕ್ಷಾಯ ಸಂಶ್ರಿತಃ||

“ರಾಗದ್ವೇಷಗಳ ಬಲಕ್ಕೆ ಬಂದು ನಾನು ಅಕಾರ್ಯವನ್ನು ಮಾಡಿಬಿಟ್ಟೆ!” ಎಂದು ಬಹುಬಾರಿ ಹೇಳಿಕೊಳ್ಳುತ್ತಾ ಆ ವಿದ್ವಾಂಸಿ ಸಂಶ್ರಿತನು ಗ್ರಾಮಕ್ಕೆ ಭಿಕ್ಷೆ ಬೇಡಲು ಹೋದನು.

03197007a ಗ್ರಾಮೇ ಶುಚೀನಿ ಪ್ರಚರನ್ಕುಲಾನಿ ಭರತರ್ಷಭ|

03197007c ಪ್ರವಿಷ್ಟಸ್ತತ್ಕುಲಂ ಯತ್ರ ಪೂರ್ವಂ ಚರಿತವಾಂಸ್ತು ಸಃ||

ಭರತರ್ಷಭ! ಗ್ರಾಮದಲ್ಲಿ ಶುಚಿಯಾದ ಕುಲಗಳನ್ನು ಸುತ್ತಾಡಿಕೊಂಡು ಹಿಂದೆ ಭೇಟಿಕೊಟ್ಟಿದ್ದ ಕುಲವನ್ನು ಪ್ರವೇಶಿಸಿದನು.

03197008a ದೇಹೀತಿ ಯಾಚಮಾನೋ ವೈ ತಿಷ್ಠೇತ್ಯುಕ್ತಃ ಸ್ತ್ರಿಯಾ ತತಃ|

03197008c ಶೌಚಂ ತು ಯಾವತ್ಕುರುತೇ ಭಾಜನಸ್ಯ ಕುಟುಂಬಿನೀ||

“ದೇಹಿ!” ಎಂದು ಬೇಡುತ್ತಾ ನಿಂತಿದ್ದ ಅವನಿಗೆ “ನಿಲ್ಲು!” ಎಂದು ಸ್ತ್ರೀಯು ಹೇಳಿ, ಆ ಕುಂಟುಂಬಿನಿಯು ಪಾತ್ರೆಯನ್ನು ತೊಳೆಯತೊಡಗಿದಳು.

03197009a ಏತಸ್ಮಿನ್ನಂತರೇ ರಾಜನ್ ಕ್ಷುಧಾಸಂಪೀಡಿತೋ ಭೃಶಂ|

03197009c ಭರ್ತಾ ಪ್ರವಿಷ್ಟಃ ಸಹಸಾ ತಸ್ಯಾ ಭರತಸತ್ತಮ||

ರಾಜನ್! ಭರತಸತ್ತಮ! ಇದೇ ಸಮಯದಲ್ಲಿ ತುಂಬಾ ಹಸಿವೆಯಿಂದ ಬಳಲಿದ ಅವಳ ಪತಿಯು ಅವಸರದಲ್ಲಿ ಪ್ರವೇಶಿಸಿದನು.

03197010a ಸಾ ತು ದೃಷ್ಟ್ವಾ ಪತಿಂ ಸಾಧ್ವೀ ಬ್ರಾಹ್ಮಣಂ ವ್ಯಪಹಾಯ ತಂ|

03197010c ಪಾದ್ಯಮಾಚಮನೀಯಂ ಚ ದದೌ ಭರ್ತ್ರೇ ತಥಾಸನಂ||

ಪತಿಯನ್ನು ನೋಡಿ ಆ ಸಾಧ್ವಿಯು ಬ್ರಾಹ್ಮಣನನ್ನು ಮರೆತುಬಿಟ್ಟಳು. ಗಂಡನಿಗೆ ಪಾದ್ಯ ಆಚಮನೀಯಗಳನ್ನೂ ಆಸನವನ್ನು ನೀಡಿದಳು.

03197011a ಪ್ರಹ್ವಾ ಪರ್ಯಚರಚ್ಚಾಪಿ ಭರ್ತಾರಮಸಿತೇಕ್ಷಣಾ|

03197011c ಆಹಾರೇಣಾಥ ಭಕ್ಷ್ಯೈಶ್ಚ ವಾಕ್ಯೈಃ ಸುಮಧುರೈಸ್ತಥಾ||

ಆ ಕಪ್ಪುಕಣ್ಣಿನವಳು ವಿನಯದಿಂದ ಆಹಾರ-ಭಕ್ಷಗಳಿಂದ ಮತ್ತು ಸುಮಧುರ ಮಾತುಗಳಿಂದ ತನ್ನ ಪತಿಯ ಸೇವೆಗಳನ್ನು ಮಾಡಿದಳು.

03197012a ಉಚ್ಚಿಷ್ಟಂ ಭುಂಜತೇ ಭರ್ತುಃ ಸಾ ತು ನಿತ್ಯಂ ಯುಧಿಷ್ಠಿರ|

03197012c ದೈವತಂ ಚ ಪತಿಂ ಮೇನೇ ಭರ್ತುಶ್ಚಿತ್ತಾನುಸಾರಿಣೀ||

ಯುಧಿಷ್ಠಿರ! ನಿತ್ಯವೂ ಅವಳು ಪತಿಯು ತಿಂದು ಬಿಟ್ಟುದುದನ್ನು ತಿನ್ನುತ್ತಿದ್ದಳು. ಪತಿಯು ದೇವರೆಂದು ತಿಳಿದು ಪತಿಯ ಮನಸ್ಸಿನಂತೆ ನಡೆದುಕೊಳ್ಳುತ್ತಿದ್ದಳು.

03197013a ನ ಕರ್ಮಣಾ ನ ಮನಸಾ ನಾತ್ಯಶ್ನಾನ್ನಾಪಿ ಚಾಪಿಬತ್|

03197013c ತಂ ಸರ್ವಭಾವೋಪಗತಾ ಪತಿಶುಶ್ರೂಷಣೇ ರತಾ||

ಕರ್ಮದಲ್ಲಿಯಾಗಲೀ ಮನಸ್ಸಿನಲ್ಲಿಯಾಗಲೀ ಅವಳು ಅವನ ಮೊದಲು ಉಣ್ಣುತ್ತಿರಲಿಲ್ಲ; ಅವಳು ಎಲ್ಲ ಭಾವಗಳಲ್ಲಿ ಪತಿಯ ಸೇವೆಮಾಡುವುದರಲ್ಲಿ ಆನಂದ ಹೊಂದುತ್ತಿದ್ದಳು.

03197014a ಸಾಧ್ವಾಚಾರಾ ಶುಚಿರ್ದಕ್ಷಾ ಕುಟುಂಬಸ್ಯ ಹಿತೈಷಿಣೀ|

03197014c ಭರ್ತುಶ್ಚಾಪಿ ಹಿತಂ ಯತ್ತತ್ಸತತಂ ಸಾನುವರ್ತತೇ||

ಒಳ್ಳೆಯ ನಡತೆಯ, ಶುಚಿ, ದಕ್ಷೆಯಾಗಿದ್ದು, ಕುಟುಂಬದ ಹಿತೈಷಿಣಿಯಾಗಿದ್ದು ಅವಳು ಸತತವೂ ತನ್ನ ಪತಿಯ ಒಳಿತಿಗಾಗಿ ನಡೆದುಕೊಳ್ಳುತ್ತಿದ್ದಳು.

03197015a ದೇವತಾತಿಥಿಭೃತ್ಯಾನಾಂ ಶ್ವಶ್ರೂಶ್ವಶುರಯೋಸ್ತಥಾ|

03197015c ಶುಶ್ರೂಷಣಪರಾ ನಿತ್ಯಂ ಸತತಂ ಸಂಯತೇಂದ್ರಿಯಾ||

ಸತತವೂ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಅವಳು ದೇವತೆಗಳ, ಅತಿಥಿಗಳ, ಪತಿಯ, ಅತ್ತೆಮಾವಂದಿರ ಸೇವೆಯಲ್ಲಿ ನಿತ್ಯವೂ ನಿರತಳಾಗಿದ್ದಳು.

03197016a ಸಾ ಬ್ರಾಹ್ಮಣಂ ತದಾ ದೃಷ್ಟ್ವಾ ಸಂಸ್ಥಿತಂ ಭೈಕ್ಷಕಾಂಕ್ಷಿಣಂ|

03197016c ಕುರ್ವತೀ ಪತಿಶುಶ್ರೂಷಾಂ ಸಸ್ಮಾರಾಥ ಶುಭೇಕ್ಷಣಾ||

ಅಗ ಪತಿಸೇವೆಯನ್ನು ಮಾಡುತ್ತಿದ್ದ ಆ ಶುಭೇಕ್ಷಣೆಯು ಭಿಕ್ಷೆಯನ್ನು ಬೇಡಿ ನಿಂತಿದ್ದ ಆ ಬ್ರಾಹ್ಮಣನನ್ನು ನೋಡಿ ನೆನಪಿಸಿಕೊಂಡಳು.

03197017a ವ್ರೀಡಿತಾ ಸಾಭವತ್ಸಾಧ್ವೀ ತದಾ ಭರತಸತ್ತಮ|

03197017c ಭಿಕ್ಷಾಮಾದಾಯ ವಿಪ್ರಾಯ ನಿರ್ಜಗಾಮ ಯಶಸ್ವಿನೀ||

ಭರತಸತ್ತಮ! ಆಗ ಆ ಯಶಸ್ವಿನೀ ಸಾಧ್ವಿಯು ನಾಚಿಕೊಂಡು ವಿಪ್ರನಿಗೆ ಭಿಕ್ಷವನ್ನು ತೆಗೆದುಕೊಂಡು ಹೊರಬಂದಳು.

03197018 ಬ್ರಾಹ್ಮಣ ಉವಾಚ|

03197018a ಕಿಮಿದಂ ಭವತಿ ತ್ವಂ ಮಾಂ ತಿಷ್ಠೇತ್ಯುಕ್ತ್ವಾ ವರಾಂಗನೇ|

03197018c ಉಪರೋಧಂ ಕೃತವತೀ ನ ವಿಸರ್ಜಿತವತ್ಯಸಿ||

ಬ್ರಾಹ್ಮಣನು ಹೇಳಿದನು: “ವರಾಂಗನೇ! ಇದೇನಾಯಿತು? ನನಗೆ ನಿಲ್ಲಲು ಹೇಳಿ, ಹೋಗು ಎಂದೂ ಹೇಳದೇ, ತಡಮಾಡಿದೆ!””

03197019 ಮಾರ್ಕಂಡೇಯ ಉವಾಚ|

03197019a ಬ್ರಾಹ್ಮಣಂ ಕ್ರೋಧಸಂತಪ್ತಂ ಜ್ವಲಂತಮಿವ ತೇಜಸಾ|

03197019c ದೃಷ್ಟ್ವಾ ಸಾಧ್ವೀ ಮನುಷ್ಯೇಂದ್ರ ಸಾಂತ್ವಪೂರ್ವಂ ವಚೋಽಬ್ರವೀತ್||

ಮಾರ್ಕಂಡೇಯನು ಹೇಳಿದನು: “ಮನುಷ್ಯೇಂದ್ರ! ಕ್ರೋಧಸಂತಪ್ತನಾದ ಬ್ರಾಹ್ಮಣನು ತೇಜಸ್ಸಿನಿಂದ ಸುಟ್ಟುಬಿಡುವನೋ ಎಂದು ಅವಳನ್ನು ನೋಡಲು, ಸಾಧ್ವಿಯು ಸಾಂತ್ವನದ ಮಾತುಗಳನ್ನಾಡಿದಳು.

03197020a ಕ್ಷಂತುಮರ್ಹಸಿ ಮೇ ವಿಪ್ರ ಭರ್ತಾ ಮೇ ದೈವತಂ ಮಹತ್|

03197020c ಸ ಚಾಪಿ ಕ್ಷುಧಿತಃ ಶ್ರಾಂತಃ ಪ್ರಾಪ್ತಃ ಶುಶ್ರೂಷಿತೋ ಮಯಾ||

“ವಿಪ್ರ! ಕ್ಷಮಿಸಬೇಕು. ನನಗೆ ನನ್ನ ಪತಿಯು ಮಹಾ ದೇವತೆ. ಅವನೂ ಕೂಡ ಹಸಿದಿದ್ದ, ಬಳಲಿದ್ದ. ಅವನಿಗೆ ನಾನು ಶುಶ್ರೂಷೆ ಮಾಡುತ್ತಿದ್ದೆ.”

03197021 ಬ್ರಾಹ್ಮಣ ಉವಾಚ|

03197021a ಬ್ರಾಹ್ಮಣಾ ನ ಗರೀಯಾಂಸೋ ಗರೀಯಾಂಸ್ತೇ ಪತಿಃ ಕೃತಃ|

03197021c ಗೃಹಸ್ಥಧರ್ಮೇ ವರ್ತಂತೀ ಬ್ರಾಹ್ಮಣಾನವಮನ್ಯಸೇ||

ಬ್ರಾಹ್ಮಣನು ಹೇಳಿದನು: “ಬ್ರಾಹ್ಮಣರು ಹೆಚ್ಚಿನವರಲ್ಲವೇ? ನೀನು ನಿನ್ನ ಪತಿಯನ್ನು ಹೆಚ್ಚಿನವನನ್ನಾಗಿ ಮಾಡಿಬಿಟ್ಟೆಯಲ್ಲ! ಗೃಹಸ್ಥ ಧರ್ಮದಲ್ಲಿದ್ದುಕೊಂಡು ನೀನು ಬ್ರಾಹ್ಮಣನನ್ನು ಕೀಳಾಗಿ ಮಾಡಿಬಿಟ್ಟೆಯಲ್ಲ!

03197022a ಇಂದ್ರೋಽಪ್ಯೇಷಾಂ ಪ್ರಣಮತೇ ಕಿಂ ಪುನರ್ಮಾನುಷಾ ಭುವಿ|

03197022c ಅವಲಿಪ್ತೇ ನ ಜಾನೀಷೇ ವೃದ್ಧಾನಾಂ ನ ಶ್ರುತಂ ತ್ವಯಾ|

03197022e ಬ್ರಾಹ್ಮಣಾ ಹ್ಯಗ್ನಿಸದೃಶಾ ದಹೇಯುಃ ಪೃಥಿವೀಮಪಿ||

ಇಂದ್ರನೇ ಅವನಿಗೆ ತಲೆಬಾಗುವಾಗ ಭುವಿಯಲ್ಲಿರುವ ಮನುಷ್ಯರೇನು? ಅವಲಿಪ್ತೇ! ನಿನಗೆ ಇದು ತಿಳಿದಿಲ್ಲವೇ? ಹಿರಿಯರಿಂದ ಇದನ್ನು ನೀನು ಕೇಳಿಲ್ಲವೇ? ಅಗ್ನಿಯಂತೆ ಬ್ರಾಹ್ಮಣರು ಇಡೀ ಭೂಮಿಯನ್ನೇ ಸುಡಬಲ್ಲರು!”

03197023 ಸ್ತ್ರೀ ಉವಾಚ|

03197023a ನಾವಜಾನಾಮ್ಯಹಂ ವಿಪ್ರಾನ್ದೇವೈಸ್ತುಲ್ಯಾನ್ಮನಸ್ವಿನಃ|

03197023c ಅಪರಾಧಮಿಮಂ ವಿಪ್ರ ಕ್ಷಂತುಮರ್ಹಸಿ ಮೇಽನಘ||

ಸ್ತ್ರೀಯು ಹೇಳಿದಳು: “ವಿಪ್ರ! ಅನಘ! ನಾನು ದೇವಸಮರಾದ ಮನಸ್ವಿ ವಿಪ್ರರನ್ನು ಕೀಳಾಗಿ ನೋಡುತ್ತಿಲ್ಲ! ಈ ಅಪರಾಧವನ್ನು ಕ್ಷಮಿಸಬೇಕು.

03197024a ಜಾನಾಮಿ ತೇಜೋ ವಿಪ್ರಾಣಾಂ ಮಹಾಭಾಗ್ಯಂ ಚ ಧೀಮತಾಂ|

03197024c ಅಪೇಯಃ ಸಾಗರಃ ಕ್ರೋಧಾತ್ಕೃತೋ ಹಿ ಲವಣೋದಕಃ||

ಧೀಮಂತ ಮಹಾಭಾಗ್ಯ ವಿಪ್ರರ ತೇಜಸ್ಸನ್ನು ತಿಳಿದಿದ್ದೇನೆ. ಕ್ರೋಧದಿಂದ ಅವರು ಸಾಗರವನ್ನು ಉಪ್ಪಾಗಿ, ಕುಡಿಯಲು ಅಯೋಗ್ಯವಾಗಿ ಮಾಡಿದರು.

03197025a ತಥೈವ ದೀಪ್ತತಪಸಾಂ ಮುನೀನಾಂ ಭಾವಿತಾತ್ಮನಾಂ|

03197025c ಯೇಷಾಂ ಕ್ರೋಧಾಗ್ನಿರದ್ಯಾಪಿ ದಂಡಕೇ ನೋಪಶಾಮ್ಯತಿ||

ಹಾಗೆಯೇ ದೀಪ್ತತಪಸ್ವಿಗಳ, ಭಾವಿತಾತ್ಮ ಮುನಿಗಳ ಕ್ರೋಧಾಗ್ನಿಯು ಇಂದೂ ಕೂಡ ದಂಡಕದಲ್ಲಿ ಆರದೇ ಉರಿಯುತ್ತಿದೆ.

03197026a ಬ್ರಾಹ್ಮಣಾನಾಂ ಪರಿಭವಾದ್ವಾತಾಪಿಶ್ಚ ದುರಾತ್ಮವಾನ್|

03197026c ಅಗಸ್ತ್ಯಮೃಷಿಮಾಸಾದ್ಯ ಜೀರ್ಣಃ ಕ್ರೂರೋ ಮಹಾಸುರಃ||

ಬ್ರಾಹ್ಮಣರನ್ನು ಪೀಡಿಸುತ್ತಿದ್ದ ದುರಾತ್ಮ ಕ್ರೂರ ಮಹಾಸುರ ವಾತಾಪಿಯೂ ಕೂಡ ಅಗಸ್ತ್ಯಮುನಿಗಳಿಂದ ಜೀರ್ಣಗೊಂಡನು.

03197027a ಪ್ರಭಾವಾ ಬಹವಶ್ಚಾಪಿ ಶ್ರೂಯಂತೇ ಬ್ರಹ್ಮವಾದಿನಾಂ|

03197027c ಕ್ರೋಧಃ ಸುವಿಪುಲೋ ಬ್ರಹ್ಮನ್ಪ್ರಸಾದಶ್ಚ ಮಹಾತ್ಮನಾಂ||

ಬ್ರಹ್ಮನ್! ಬ್ರಹ್ಮವಾದಿಗಳ ಬಹಳಷ್ಟು ಪ್ರಭಾವಗಳ ಕುರಿತು ಕೇಳಿದ್ದೇವೆ. ಆ ಮಹಾತ್ಮರ ಕ್ರೋಧದಷ್ಟೇ ಪ್ರಸಾದವೂ ತುಂಬಾ ಫಲವನ್ನೀಯುತ್ತದೆ.

03197028a ಅಸ್ಮಿಂಸ್ತ್ವತಿಕ್ರಮೇ ಬ್ರಹ್ಮನ್ ಕ್ಷಂತುಮರ್ಹಸಿ ಮೇಽನಘ|

03197028c ಪತಿಶುಶ್ರೂಷಯಾ ಧರ್ಮೋ ಯಃ ಸ ಮೇ ರೋಚತೇ ದ್ವಿಜ||

ಬ್ರಹ್ಮನ್! ಅನಘ! ಈ ಅತಿಕ್ರಮವನ್ನು ಕ್ಷಮಿಸಬೇಕು. ದ್ವಿಜ! ಪತಿಶುಶ್ರೂಷವೇ ನನ್ನ ಧರ್ಮವೆಂದು ನನಗನ್ನಿಸುತ್ತದೆ.

03197029a ದೈವತೇಷ್ವಪಿ ಸರ್ವೇಷು ಭರ್ತಾ ಮೇ ದೈವತಂ ಪರಂ|

03197029c ಅವಿಶೇಷೇಣ ತಸ್ಯಾಹಂ ಕುರ್ಯಾಂ ಧರ್ಮಂ ದ್ವಿಜೋತ್ತಮ||

ಎಲ್ಲ ದೇವತೆಗಳಲ್ಲಿಯೂ ಕೂಡ ಪತಿಯು ನನ್ನ ಪರಮ ದೇವತೆ. ದ್ವಿಜೋತ್ತಮ! ಏನನ್ನೂ ಬಿಡದೇ ಅವನ ಧರ್ಮವನ್ನು ನಾನು ಮಾಡುತ್ತೇನೆ.

03197030a ಶುಶ್ರೂಷಾಯಾಃ ಫಲಂ ಪಶ್ಯ ಪತ್ಯುರ್ಬ್ರಾಹ್ಮಣ ಯಾದೃಶಂ|

03197030c ಬಲಾಕಾ ಹಿ ತ್ವಯಾ ದಗ್ಧಾ ರೋಷಾತ್ತದ್ವಿದಿತಂ ಮಮ||

ಬ್ರಾಹ್ಮಣ! ಪತಿಯ ಶುಶ್ರೂಷೆಯ ಫಲವು ಎಂಥಹುದೆಂದು ನೋಡು! ನಿನ್ನ ರೋಷದಿಂದ ಬಲಾಕ ಪಕ್ಷಿಯೊಂದು ಸುಟ್ಟುಹೋಯಿತೆಂದು ನನಗೆ ತಿಳಿದಿದೆ.

03197031a ಕ್ರೋಧಃ ಶತ್ರುಃ ಶರೀರಸ್ಥೋ ಮನುಷ್ಯಾಣಾಂ ದ್ವಿಜೋತ್ತಮ|

03197031c ಯಃ ಕ್ರೋಧಮೋಹೌ ತ್ಯಜತಿ ತಂ ದೇವಾ ಬ್ರಾಹ್ಮಣಂ ವಿದುಃ||

ದ್ವಿಜೋತ್ತಮ! ಕ್ರೋಧವು ಮನುಷ್ಯರ ಶರೀರದಲ್ಲಿರುವ ಶತ್ರು. ಕ್ರೋಧ ಮೋಹಗಳನ್ನು ತ್ಯಜಿಸಿದವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

03197032a ಯೋ ವದೇದಿಹ ಸತ್ಯಾನಿ ಗುರುಂ ಸಂತೋಷಯೇತ ಚ|

03197032c ಹಿಂಸಿತಶ್ಚ ನ ಹಿಂಸೇತ ತಂ ದೇವಾ ಬ್ರಾಹ್ಮಣಂ ವಿದುಃ||

ಯಾರು ಸತ್ಯವನ್ನೇ ಮಾತನಾಡುತ್ತಾರೋ, ಗುರುವನ್ನು ಸಂತೋಷಪಡಿಸುತ್ತಾರೋ, ಮತ್ತು ಹಿಂಸೆಯನ್ನು ಹಿಂಸೆಯಿಂದ ಉತ್ತರಿಸುವುದಿಲ್ಲವೋ ಅಂಥವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿಯುತ್ತಾರೆ.

03197033a ಜಿತೇಂದ್ರಿಯೋ ಧರ್ಮಪರಃ ಸ್ವಾಧ್ಯಾಯನಿರತಃ ಶುಚಿಃ|

03197033c ಕಾಮಕ್ರೋಧೌ ವಶೇ ಯಸ್ಯ ತಂ ದೇವಾ ಬ್ರಾಹ್ಮಣಂ ವಿದುಃ||

ಜಿತೇಂದ್ರಿಯರನ್ನು, ಧರ್ಮಪರರನ್ನು, ಸ್ವಾಧ್ಯಾಯನಿರತರನ್ನು, ಶುಚಿಯಾಗಿರುವವರನ್ನು, ಮತ್ತು ಕಾಮಕ್ರೋಧಗಳನ್ನು ವಶದಲ್ಲಿಟ್ಟುಕೊಂಡವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿದಿದ್ದಾರೆ.

03197034a ಯಸ್ಯ ಚಾತ್ಮಸಮೋ ಲೋಕೋ ಧರ್ಮಜ್ಞಸ್ಯ ಮನಸ್ವಿನಃ|

03197034c ಸರ್ವಧರ್ಮೇಷು ಚ ರತಸ್ತಂ ದೇವಾ ಬ್ರಾಹ್ಮಣಂ ವಿದುಃ||

ಲೋಕಗಳನ್ನು ತನ್ನಂತಯೇ ಕಾಣುವ, ಮನಸ್ವಿ, ಧರ್ಮಜ್ಞ, ಸರ್ವಧರ್ಮಗಳನ್ನೂ ಪ್ರೀತಿಸುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.

03197035a ಯೋಽಧ್ಯಾಪಯೇದಧೀಯೀತ ಯಜೇದ್ವಾ ಯಾಜಯೀತ ವಾ|

03197035c ದದ್ಯಾದ್ವಾಪಿ ಯಥಾಶಕ್ತಿ ತಂ ದೇವಾ ಬ್ರಾಹ್ಮಣಂ ವಿದುಃ||

ಕಲಿಸುವ ಮತ್ತು ಕಲಿಯುವ, ಯಜ್ಞಗಳನ್ನು ಮಾಡುವ ಮತ್ತು ಮಾಡಿಸುವ, ಶಕ್ತಿಯಿದ್ದಷ್ಟು ದಾನಮಾಡುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.

03197036a ಬ್ರಹ್ಮಚಾರೀ ಚ ವೇದಾನ್ಯೋ ಅಧೀಯೀತ ದ್ವಿಜೋತ್ತಮಃ|

03197036c ಸ್ವಾಧ್ಯಾಯೇ ಚಾಪ್ರಮತ್ತೋ ವೈ ತಂ ದೇವಾ ಬ್ರಾಹ್ಮಣಂ ವಿದುಃ||

ಬ್ರಹ್ಮಚಾರಿಯಾಗಿದ್ದು ಕೊಂಡು, ವೇದಗಳನ್ನು ಅಧ್ಯಯನ ಮಾಡುವ, ಸ್ವಾಧ್ಯಾಯದಲ್ಲಿ ಅಪ್ರಮತ್ತನಾಗದೇ ಇರುವ ದ್ವಿಜೋತ್ತಮನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.

03197037a ಯದ್ಬ್ರಾಹ್ಮಣಾನಾಂ ಕುಶಲಂ ತದೇಷಾಂ ಪರಿಕೀರ್ತಯೇತ್|

03197037c ಸತ್ಯಂ ತಥಾ ವ್ಯಾಹರತಾಂ ನಾನೃತೇ ರಮತೇ ಮನಃ||

ಬ್ರಾಹ್ಮಣರಿಗೆ ಕುಶಲವಾದುದೇನೆಂದು ಅವರೇ ಹೇಳುತ್ತಾರೆ. ಸತ್ಯದಲ್ಲಿಯೇ ವ್ಯವಹರಿಸುವ ಅವರ ಮನಸ್ಸು ಸುಳ್ಳಿನಲ್ಲಿ ಸಂತೋಷ ಹೊಂದುವುದಿಲ್ಲ.

03197038a ಧನಂ ತು ಬ್ರಾಹ್ಮಣಸ್ಯಾಹುಃ ಸ್ವಾಧ್ಯಾಯಂ ದಮಮಾರ್ಜವಂ|

03197038c ಇಂದ್ರಿಯಾಣಾಂ ನಿಗ್ರಹಂ ಚ ಶಾಶ್ವತಂ ದ್ವಿಜಸತ್ತಮ|

03197038e ಸತ್ಯಾರ್ಜವೇ ಧರ್ಮಮಾಹುಃ ಪರಂ ಧರ್ಮವಿದೋ ಜನಾಃ||

ದ್ವಿಜಸತ್ತಮ! ಬ್ರಾಹ್ಮಣರ ಸಂಪತ್ತು ಅವರ ಸ್ವಾಧ್ಯಾಯ, ದಮ, ಆರ್ಜವ, ಮತ್ತು ಶಾಶ್ವತವಾದ ಇಂದ್ರಿಯಗಳ ನಿಗ್ರಹಗಳೆಂದು ಹೇಳುತ್ತಾರೆ. ಧರ್ಮವಿದರು ಸತ್ಯ ಮತ್ತು ಆರ್ಜವಗಳು ಪರಮ ಧರ್ಮವೆಂದು ಹೇಳುತ್ತಾರೆ.

03197039a ದುರ್ಜ್ಞೇಯಃ ಶಾಶ್ವತೋ ಧರ್ಮಃ ಸ ತು ಸತ್ಯೇ ಪ್ರತಿಷ್ಠಿತಃ|

03197039c ಶ್ರುತಿಪ್ರಮಾಣೋ ಧರ್ಮಃ ಸ್ಯಾದಿತಿ ವೃದ್ಧಾನುಶಾಸನಂ||

ಶಾಶ್ವತವಾದ ಧರ್ಮವನ್ನು ತಿಳಿದುಕೊಳ್ಳುವುದು ಕಷ್ಟ. ಅದು ಸತ್ಯದಲ್ಲಿ ಪ್ರತಿಷ್ಠಿತವಾಗಿದೆ. ಧರ್ಮವು ಶ್ರುತಿಪ್ರಮಾಣವಾಗಿರಬೇಕೆಂದು ವೃದ್ಧರು ಉಪದೇಶಿಸುತ್ತಾರೆ.

03197040a ಬಹುಧಾ ದೃಶ್ಯತೇ ಧರ್ಮಃ ಸೂಕ್ಷ್ಮ ಏವ ದ್ವಿಜೋತ್ತಮ|

03197040c ಭವಾನಪಿ ಚ ಧರ್ಮಜ್ಞಃ ಸ್ವಾಧ್ಯಾಯನಿರತಃ ಶುಚಿಃ|

03197040e ನ ತು ತತ್ತ್ವೇನ ಭಗವನ್ಧರ್ಮಾನ್ವೇತ್ಸೀತಿ ಮೇ ಮತಿಃ||

ದ್ವಿಜೋತ್ತಮ! ಬಹುಬಾರಿ ಧರ್ಮವು ಸೂಕ್ಷ್ಮವೆಂದು ತೋರುತ್ತದೆ. ನೀನಾದರೋ ಶುಚಿಯಾಗಿದ್ದು ಸ್ವಾಧ್ಯಾಯದಲ್ಲಿ ನಿರತನಾಗಿದ್ದು ಧರ್ಮವನ್ನು ತಿಳಿದುಕೊಂಡಿದ್ದೀಯೆ. ಭಗವನ್! ಆದರೂ ನೀನು ಧರ್ಮವನ್ನು ನಿಜವಾಗಿ ತಿಳಿದುಕೊಂಡಿಲ್ಲವೆಂದು ನನಗನ್ನಿಸುತ್ತದೆ.

03197041a ಮಾತಾಪಿತೃಭ್ಯಾಂ ಶುಶ್ರೂಷುಃ ಸತ್ಯವಾದೀ ಜಿತೇಂದ್ರಿಯಃ|

03197041c ಮಿಥಿಲಾಯಾಂ ವಸನ್ವ್ಯಾಧಃ ಸ ತೇ ಧರ್ಮಾನ್ಪ್ರವಕ್ಷ್ಯತಿ|

03197041e ತತ್ರ ಗಚ್ಚಸ್ವ ಭದ್ರಂ ತೇ ಯಥಾಕಾಮಂ ದ್ವಿಜೋತ್ತಮ||

ಮಾತಾಪಿತೃಗಳ ಸೇವಾನಿರತನಾದ, ಸತ್ಯವಾದೀ, ಜಿತೇಂದ್ರಿಯ ವ್ಯಾಧನೊಬ್ಬನು ಮಿಥಿಲೆಯಲ್ಲಿ ವಾಸಿಸುತ್ತಾನೆ. ಅವನು ನಿನಗೆ ಧರ್ಮಗಳನ್ನು ತೋರಿಸಿಕೊಡುತ್ತಾನೆ. ದ್ವಿಜೋತ್ತಮ! ನಿನಗಿಷ್ಟವಾದರೆ ಅಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ!

03197042a ಅತ್ಯುಕ್ತಮಪಿ ಮೇ ಸರ್ವಂ ಕ್ಷಂತುಮರ್ಹಸ್ಯನಿಂದಿತ|

03197042c ಸ್ತ್ರಿಯೋ ಹ್ಯವಧ್ಯಾಃ ಸರ್ವೇಷಾಂ ಯೇ ಧರ್ಮವಿದುಷೋ ಜನಾಃ||

ಅನಿಂದಿತ! ನಾನು ಹೆಚ್ಚಾಗಿಯೇ ಮಾತನಾಡಿದ್ದಿದ್ದರೆ ಅವೆಲ್ಲವನ್ನೂ ಕ್ಷಮಿಸಬೇಕು. ಯಾಕೆಂದರೆ ಧರ್ಮವಿದುಷ ಜನರಿಗೆ ಸ್ತ್ರೀಯರು ಅವಧ್ಯರಲ್ಲವೇ?”

03197043 ಬ್ರಾಹ್ಮಣ ಉವಾಚ|

03197043a ಪ್ರೀತೋಽಸ್ಮಿ ತವ ಭದ್ರಂ ತೇ ಗತಃ ಕ್ರೋಧಶ್ಚ ಶೋಭನೇ|

03197043c ಉಪಾಲಂಭಸ್ತ್ವಯಾ ಹ್ಯುಕ್ತೋ ಮಮ ನಿಃಶ್ರೇಯಸಂ ಪರಂ|

03197043e ಸ್ವಸ್ತಿ ತೇಽಸ್ತು ಗಮಿಷ್ಯಾಮಿ ಸಾಧಯಿಷ್ಯಾಮಿ ಶೋಭನೇ||

ಬ್ರಾಹ್ಮಣನು ಹೇಳಿದನು: “ಶೋಭನೇ! ನಿನಗೆ ಮಂಗಳವಾಗಲಿ. ನಿನ್ನಿಂದ ಸಂತೋಷಗೊಂಡಿದ್ದೇನೆ. ಸಿಟ್ಟು ಹೊರಟುಹೋಗಿದೆ. ನೀನು ನೀಡಿದ ಟೀಕೆಗಳು ನನಗೆ ಪರಮ ಶ್ರೇಯಸ್ಕರವಾದವುಗಳು. ಶೋಭನೇ! ನಾನು ಹೋಗಿ ಉತ್ತಮ ಪುರುಷನಾಗುವುದನ್ನು ಸಾಧಿಸುತ್ತೇನೆ.””

03197044 ಮಾರ್ಕಂಡೇಯ ಉವಾಚ|

03197044a ತಯಾ ವಿಸೃಷ್ಟೋ ನಿರ್ಗಮ್ಯ ಸ್ವಮೇವ ಭವನಂ ಯಯೌ|

03197044c ವಿನಿಂದನ್ಸ ದ್ವಿಜೋಽತ್ಮಾನಂ ಕೌಶಿಕೋ ನರಸತ್ತಮ||

ಮಾರ್ಕಂಡೇಯನು ಹೇಳಿದನು: “ಅವಳಿಂದ ಬೀಳ್ಕೊಂಡು ಆ ದ್ವಿಜ ನರಸತ್ತಮ ಕೌಶಿಕನು ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ ತನ್ನ ಮನೆಗೆ ಹಿಂದುರಿಗಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಪತಿವ್ರತೋಪಾಖ್ಯಾನೇ ಸಪ್ತನವತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ನೂರಾತೊಂಭತ್ತೇಳನೆಯ ಅಧ್ಯಾಯವು.

Related image

Comments are closed.