ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೧೯೩
ಇಕ್ಷ್ವಾಕು ವಂಶಾವಳಿ - ಇಕ್ಷ್ವಾಕು, ಶಶಾದ, ಕಕುತ್ಸ್ಥ, ಅನೇನ, ಪೃಥು, ವಿಶ್ವಗಶ್ವ, ಆದ್ರ, ಯುವನಾಶ್ವ, ಶ್ರಾವಸ್ತ, ಬೃಹದಶ್ವ ಮತ್ತು ಕುವಲಾಶ್ವ (೧-೪). ಬೃಹದಶ್ವನು ಕುವಲಾಶ್ವನಿಗೆ ರಾಜ್ಯವನ್ನಿತ್ತು ವನಕ್ಕೆ ತೆರಳುವಾಗ ಉತ್ತಂಕನು ಮರುಭೂಮಿಯಲ್ಲಿ ತಪಸ್ಸನ್ನಾಚರಿಸುತ್ತಿರುವ ಮಧು-ಕೈಟಭರ ಮಗ ಧುಂಧುವನ್ನು ವಧಿಸಿ ಹೋಗಬೇಕೆಂದು ತಡೆದುದು (೫-೨೭).
03193001 ಮಾರ್ಕಂಡೇಯ ಉವಾಚ|
03193001a ಇಕ್ಷ್ವಾಕೌ ಸಂಸ್ಥಿತೇ ರಾಜಂ ಶಶಾದಃ ಪೃಥಿವೀಮಿಮಾಂ|
03193001c ಪ್ರಾಪ್ತಃ ಪರಮಧರ್ಮಾತ್ಮಾ ಸೋಽಯೋಧ್ಯಾಯಾಂ ನೃಪೋಽಭವತ್||
ಮಾರ್ಕಂಡೇಯನು ಹೇಳಿದನು: “ರಾಜನ್! ಇಕ್ಷ್ವಾಕುವಿನ ಮರಣದ ನಂತರ ಶಶಾದನು ಈ ಪೃಥ್ವಿಯನ್ನು ಪಡೆದನು ಮತ್ತು ಪರಮಧರ್ಮಾತ್ಮನಾಗಿ ಅಯೋಧ್ಯೆಯ ನೃಪನಾದನು.
03193002a ಶಶಾದಸ್ಯ ತು ದಾಯಾದಃ ಕಕುತ್ಸ್ಥೋ ನಾಮ ವೀರ್ಯವಾನ್|
03193002c ಅನೇನಾಶ್ಚಾಪಿ ಕಾಕುತ್ಸ್ಥಃ ಪೃಥುಶ್ಚಾನೇನಸಃ ಸುತಃ||
ವೀರ್ಯವಾನ್ ಕಕುಸ್ಥ ಎಂಬ ಹೆಸರಿನವನು ಶಶಾದನ ಮಗನು. ಅನೇನನು ಕಕುಸ್ಥನ ಮಗ ಮತ್ತು ಪೃಥುವು ಅನೇನನ ಮಗ.
03193003a ವಿಷ್ವಗಶ್ವಃ ಪೃಥೋಃ ಪುತ್ರಸ್ತಸ್ಮಾದಾರ್ದ್ರಸ್ತು ಜಜ್ಞಿವಾನ್|
03193003c ಆರ್ದ್ರಸ್ಯ ಯುವನಾಶ್ವಸ್ತು ಶ್ರಾವಸ್ತಸ್ತಸ್ಯ ಚಾತ್ಮಜಃ||
ವಿಶ್ವಗಶ್ವನು ಪೃಥುವಿನ ಮಗ. ಅವನಲ್ಲಿ ಆದ್ರನು ಜನಿಸಿದನು. ಆದ್ರನ ಮಗ ಯುವನಾಶ್ವ. ಅವನ ಮಗ ಶ್ರಾವಸ್ತ.
03193004a ಜಜ್ಞೇ ಶ್ರಾವಸ್ತಕೋ ರಾಜಾ ಶ್ರಾವಸ್ತೀ ಯೇನ ನಿರ್ಮಿತಾ|
03193004c ಶ್ರಾವಸ್ತಸ್ಯ ತು ದಾಯಾದೋ ಬೃಹದಶ್ವೋ ಮಹಾಬಲಃ||
03193004e ಬೃಹದಶ್ವಸುತಶ್ಚಾಪಿ ಕುವಲಾಶ್ವ ಇತಿ ಸ್ಮೃತಃ||
ರಾಜ ಶ್ರಾವಸ್ತನು ಶ್ರಾವಸ್ತಿಯನ್ನು ನಿರ್ಮಿಸಿದನು. ಶ್ರಾವಸ್ತನ ಮಗ ಮಹಾಬಲಿ ಬೃಹದಶ್ವ. ಬೃಹದಶ್ವನ ಮಗ ಕುವಲನೆಂದು ಖ್ಯಾತನಾದನು.
03193005a ಕುವಲಾಶ್ವಸ್ಯ ಪುತ್ರಾಣಾಂ ಸಹಸ್ರಾಣ್ಯೇಕವಿಂಶತಿಃ|
03193005c ಸರ್ವೇ ವಿದ್ಯಾಸು ನಿಷ್ಣಾತಾ ಬಲವಂತೋ ದುರಾಸದಾಃ||
ಕುವಲಾಶ್ವನಿಗೆ ಇಪ್ಪತ್ತೊಂದು ಸಾವಿರ ಪುತ್ರರು. ಎಲ್ಲರೂ ವಿದ್ಯಾಪ್ರವೀಣರು, ಬಲಬಂತರು, ಮತ್ತು ದುರಾಸದರು.
03193006a ಕುವಲಾಶ್ವಸ್ತು ಪಿತೃತೋ ಗುಣೈರಭ್ಯಧಿಕೋಽಭವತ್|
03193006c ಸಮಯೇ ತಂ ತತೋ ರಾಜ್ಯೇ ಬೃಹದಶ್ವೋಽಭ್ಯಷೇಚಯತ್||
03193006e ಕುವಲಾಶ್ವಂ ಮಹಾರಾಜ ಶೂರಮುತ್ತಮಧಾರ್ಮಿಕಂ||
ಮಹಾರಾಜ! ಕುವಲಾಶ್ವನು ಗುಣಗಳಲ್ಲಿ ತಂದೆಗಿಂತ ಅಧಿಕನಾಗಿದ್ದನು. ಸಮಯವು ಬಂದಾಗ ಬೃಹದಶ್ವನು ಶೂರನೂ ಉತ್ತಮ ಧಾರ್ಮಿಕನೂ ಆದ ಕುವಲಾಶ್ವನನ್ನು ರಾಜನನ್ನಾಗಿ ಅಭಿಷೇಕಿಸಿದನು.
03193007a ಪುತ್ರಸಂಕ್ರಾಮಿತಶ್ರೀಸ್ತು ಬೃಹದಶ್ವೋ ಮಹೀಪತಿಃ|
03193007c ಜಗಾಮ ತಪಸೇ ಧೀಮಾಂಸ್ತಪೋವನಮಮಿತ್ರಹಾ||
ಆ ಅಮಿತ್ರಹ ಮಹೀಪತಿ ಧೀಮಂತ ಬೃಹದಾಶ್ವನು ಪುತ್ರನಿಗೆ ಸಂಪತ್ತನ್ನು ಕೊಟ್ಟು ತಪೋವನಕ್ಕೆ ತಪಸ್ಸಿಗೆ ಹೊರಟನು.
03193008a ಅಥ ಶುಶ್ರಾವ ರಾಜರ್ಷಿಂ ತಮುತ್ತಂಕೋ ಯುಧಿಷ್ಠಿರ|
03193008c ವನಂ ಸಂಪ್ರಸ್ಥಿತಂ ರಾಜನ್ಬೃಹದಶ್ವಂ ದ್ವಿಜೋತ್ತಮಃ||
ರಾಜನ್! ಯುಧಿಷ್ಠಿರ! ದ್ವಿಜೋತ್ತಮ ಉತ್ತಂಕನು ರಾಜರ್ಷಿ ಬೃಹದಶ್ವನು ವನಕ್ಕೆ ಹೋಗುತ್ತಿದ್ದಾನೆಂದು ಕೇಳಿದನು.
03193009a ತಮುತ್ತಂಕೋ ಮಹಾತೇಜಾಃ ಸರ್ವಾಸ್ತ್ರವಿದುಷಾಂ ವರಂ|
03193009c ನ್ಯವಾರಯದಮೇಯಾತ್ಮಾ ಸಮಾಸಾದ್ಯ ನರೋತ್ತಮಂ||
ಆಗ ಮಹಾತೇಜ ಅಮೇಯಾತ್ಮ ಉತ್ತಂಕನು ಸರ್ವ ಅಸ್ತ್ರವಿದುಷರಲ್ಲಿ ಶ್ರೇಷ್ಠನಾದ ನರೋತ್ತಮನ ಬಳಿಸಾರಿ ತಡೆದನು.
03193010 ಉತ್ತಂಕ ಉವಾಚ|
03193010a ಭವತಾ ರಕ್ಷಣಂ ಕಾರ್ಯಂ ತತ್ತಾವತ್ಕರ್ತುಮರ್ಹಸಿ|
03193010c ನಿರುದ್ವಿಗ್ನಾ ವಯಂ ರಾಜಂಸ್ತ್ವತ್ಪ್ರಸಾದಾದ್ವಸೇಮಹಿ||
ಉತ್ತಂಕನು ಹೇಳಿದನು: “ರಾಜನ್! ರಕ್ಷಣೆಯು ನಿನ್ನ ಕಾರ್ಯ. ಆದುದರಿಂದ ನೀನು ಅದನ್ನು ಮಾಡಬೇಕು. ನಿನ್ನ ಪ್ರಸಾದದಿಂದ ನಾವು ನಿರುದ್ವಿಗ್ನರಾಗಿರುತ್ತೇವೆ.
03193011a ತ್ವಯಾ ಹಿ ಪೃಥಿವೀ ರಾಜನ್ರಕ್ಷ್ಯಮಾಣಾ ಮಹಾತ್ಮನಾ|
03193011c ಭವಿಷ್ಯತಿ ನಿರುದ್ವಿಗ್ನಾ ನಾರಣ್ಯಂ ಗಂತುಮರ್ಹಸಿ||
ರಾಜನ್! ಮಹಾತ್ಮನಾದ ನಿನ್ನಿಂದ ರಕ್ಷಿಸಲ್ಪಟ್ಟ ಈ ಭೂಮಿಯು ನಿರುದ್ವಿಗ್ನವಾಗಿರುತ್ತದೆ. ನೀನು ಅರಣ್ಯಕ್ಕೆ ಹೋಗಬಾರದು.
03193012a ಪಾಲನೇ ಹಿ ಮಹಾನ್ಧರ್ಮಃ ಪ್ರಜಾನಾಮಿಹ ದೃಶ್ಯತೇ|
03193012c ನ ತಥಾ ದೃಶ್ಯತೇಽರಣ್ಯೇ ಮಾ ತೇ ಭೂದ್ಬುದ್ಧಿರೀದೃಶೀ||
ಇಲ್ಲಿ ಪ್ರಜೆಗಳ ಪಾಲನೆಯೇ ಮಹಾ ಧರ್ಮವೆಂದು ತೋರುತ್ತದೆ. ಅರಣ್ಯದಲ್ಲಿ ಇದು ಹೀಗೆಯೇ ಇರುವುದಿಲ್ಲ. ಆದುದರಿಂದ ನಿನ್ನ ಈ ನಿಶ್ಚಯವನ್ನು ಬಿಟ್ಟುಬಿಡು.
03193013a ಈದೃಶೋ ನ ಹಿ ರಾಜೇಂದ್ರ ಧರ್ಮಃ ಕ್ವ ಚನ ದೃಶ್ಯತೇ|
03193013c ಪ್ರಜಾನಾಂ ಪಾಲನೇ ಯೋ ವೈ ಪುರಾ ರಾಜರ್ಷಿಭಿಃ ಕೃತಃ||
03193013e ರಕ್ಷಿತವ್ಯಾಃ ಪ್ರಜಾ ರಾಜ್ಞಾ ತಾಸ್ತ್ವಂ ರಕ್ಷಿತುಮರ್ಹಸಿ||
ರಾಜೇಂದ್ರ! ರಾಜರ್ಷಿಗಳು ಹಿಂದಿನಿಂದ ಮಾಡಿಕೊಂಡು ಬಂದಿರುವ ಪ್ರಜಾಪಾಲನೆಗಿಂತ ಹೆಚ್ಚಿನದಾದ ಧರ್ಮವು ಬೇರೆ ಎಲ್ಲಿಯೂ ಇಲ್ಲ. ರಾಜನಿಂದ ರಕ್ಷಿಸಲ್ಪಡಬೇಕಾದ ಪ್ರಜೆಗಳ ರಕ್ಷಣೆಯನ್ನು ನೀನು ಮಾಡಬೇಕು.
03193014a ನಿರುದ್ವಿಗ್ನಸ್ತಪಶ್ಚರ್ತುಂ ನ ಹಿ ಶಕ್ನೋಮಿ ಪಾರ್ಥಿವ|
03193014c ಮಮಾಶ್ರಮಸಮೀಪೇ ವೈ ಸಮೇಷು ಮರುಧನ್ವಸು||
03193015a ಸಮುದ್ರೋ ವಾಲುಕಾಪೂರ್ಣ ಉಜ್ಜಾನಕ ಇತಿ ಸ್ಮೃತಃ|
03193015c ಬಹುಯೋಜನವಿಸ್ತೀರ್ಣೋ ಬಹುಯೋಜನಮಾಯತಃ||
ಪಾರ್ಥಿವ! ನಾನು ನಿರುದ್ವಿಗ್ನನಾಗಿ ತಪಸ್ಸನ್ನು ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಆಶ್ರಮದ ಸಮೀಪದಲ್ಲಿ ಮರುಭೂಮಿಯ ಸಮಭೂಮಿಯಲ್ಲಿ ಉಜ್ಜನಕ ಎಂದು ಹೇಳಿಕೊಂಡು ಬಂದಿರುವ, ಬಹುಯೋಜನ ವಿಸ್ತೀರ್ಣದ ಬಹುಯೋಜನ ವಿಶಾಲವಾದ ಮರಳಿನ ರಾಶಿಯಿದೆ.
03193016a ತತ್ರ ರೌದ್ರೋ ದಾನವೇಂದ್ರೋ ಮಹಾವೀರ್ಯಪರಾಕ್ರಮಃ|
03193016c ಮಧುಕೈಟಭಯೋಃ ಪುತ್ರೋ ಧುಂಧುರ್ನಾಮ ಸುದಾರುಣಃ||
ಅಲ್ಲಿ ಮಧು-ಕೈಟಭರ ಪುತ್ರ ಧುಂಧು ಎಂಬ ಹೆಸರಿನ ಸುದಾರುಣ, ರೌದ್ರ, ಮಹಾವೀರ್ಯಪರಾಕ್ರಮಿ ದಾನವೇಂದ್ರನಿದ್ದಾನೆ.
03193017a ಅಂತರ್ಭೂಮಿಗತೋ ರಾಜನ್ವಸತ್ಯಮಿತವಿಕ್ರಮಃ|
03193017c ತಂ ನಿಹತ್ಯ ಮಹಾರಾಜ ವನಂ ತ್ವಂ ಗಂತುಮರ್ಹಸಿ||
ರಾಜನ್! ಆ ಅಮಿತವಿಕ್ರಮನು ಭೂಮಿಯು ಆಳದಲ್ಲಿ ವಾಸಿಸುತ್ತಾನೆ. ಮಹಾರಾಜ! ಅವನನ್ನು ಕೊಂದು ನೀನು ವನಕ್ಕೆ ಹೋಗಬೇಕು.
03193018a ಶೇತೇ ಲೋಕವಿನಾಶಾಯ ತಪ ಆಸ್ಥಾಯ ದಾರುಣಂ|
03193018c ತ್ರಿದಶಾನಾಂ ವಿನಾಶಾಯ ಲೋಕಾನಾಂ ಚಾಪಿ ಪಾರ್ಥಿವ||
ಪಾರ್ಥಿವ! ತ್ರಿದಶರ ಮತ್ತು ಲೋಕಗಳ ವಿನಾಶಕ್ಕಾಗಿ ದಾರುಣವಾದ ತಪಸ್ಸನ್ನಾಚರಿಸುತ್ತಿದ್ದಾನೆ.
03193019a ಅವಧ್ಯೋ ದೇವತಾನಾಂ ಸ ದೈತ್ಯಾನಾಮಥ ರಕ್ಷಸಾಂ|
03193019c ನಾಗಾನಾಮಥ ಯಕ್ಷಾಣಾಂ ಗಂಧರ್ವಾಣಾಂ ಚ ಸರ್ವಶಃ||
03193019e ಅವಾಪ್ಯ ಸ ವರಂ ರಾಜನ್ಸರ್ವಲೋಕಪಿತಾಮಹಾತ್||
ಅವನು ದೇವತೆಗಳಿಗಾಗಲೀ, ದೈತ್ಯರಾಕ್ಷಸರಿಗಾಗಲೀ, ನಾಗಗಳಿಗಾಗಲೀ, ಯಕ್ಷರಿಗಾಗಲೀ, ಗಂಧರ್ವರಿಗಾಗಲೀ, ಎಲ್ಲರಿಗೂ ಅವಧ್ಯ. ರಾಜನ್! ಆ ವರವನ್ನು ಅವನು ಸರ್ವಲೋಕ ಪಿತಾಮಹನಿಂದ ಪಡೆದಿದ್ದಾನೆ.
03193020a ತಂ ವಿನಾಶಯ ಭದ್ರಂ ತೇ ಮಾ ತೇ ಬುದ್ಧಿರತೋಽನ್ಯಥಾ|
03193020c ಪ್ರಾಪ್ಸ್ಯಸೇ ಮಹತೀಂ ಕೀರ್ತಿಂ ಶಾಶ್ವತೀಮವ್ಯಯಾಂ ಧ್ರುವಾಂ||
ನಿನಗೆ ಮಂಗಳವಾಗಲಿ! ಅವನನ್ನು ನಾಶಪಡಿಸು. ಬೇರೆ ಯಾವ ನಿಶ್ಚಯವನ್ನೂ ತೆಗೆದುಕೊಳ್ಳಬೇಡ! ಮಹತ್ತರವಾದ, ಶಾಶ್ವತವಾದ, ಅವ್ಯಯವಾದ, ನಿಶ್ಚಯವಾದ ಕೀರ್ತಿಯನ್ನು ಹೊಂದುತ್ತೀಯೆ.
03193021a ಕ್ರೂರಸ್ಯ ಸ್ವಪತಸ್ತಸ್ಯ ವಾಲುಕಾಂತರ್ಹಿತಸ್ಯ ವೈ|
03193021c ಸಂವತ್ಸರಸ್ಯ ಪರ್ಯಂತೇ ನಿಃಶ್ವಾಸಃ ಸಂಪ್ರವರ್ತತೇ||
03193021e ಯದಾ ತದಾ ಭೂಶ್ಚಲತಿ ಸಶೈಲವನಕಾನನಾ||
ಒಂದುವರ್ಷದ ನಂತರ ಮರಳಿನ ಅಡಿಯಲ್ಲಿ ವಾಸಿಸುವ ಆ ಕ್ರೂರನು ನಿಟ್ಟುಸಿರು ಬಿಟ್ಟಾಗ ಇಡೀ ಭೂಮಿಯು, ಗಿರಿ, ವನ ಕಾನನಗಳೊಂದಿಗೆ ನಡುಗುತ್ತದೆ.
03193022a ತಸ್ಯ ನಿಃಶ್ವಾಸವಾತೇನ ರಜ ಉದ್ಧೂಯತೇ ಮಹತ್|
03193022c ಆದಿತ್ಯಪಥಮಾವೃತ್ಯ ಸಪ್ತಾಹಂ ಭೂಮಿಕಂಪನಂ||
03193022e ಸವಿಸ್ಫುಲಿಂಗಂ ಸಜ್ವಾಲಂ ಸಧೂಮಂ ಹ್ಯತಿದಾರುಣಂ||
ಅವನ ನಿಶ್ವಾಸದೊಂದಿಗೆ ಧೂಳಿನ ಮಹಾ ಭಿರುಗಾಳಿಯೇ ಎದ್ದು ಸೂರ್ಯನ ದಾರಿಯನ್ನು ಮುಸುಕುಹಾಕುತ್ತದೆ. ಕಿಡಿಗಳಿಂದ ಜ್ವಾಲೆಗಳಿಂದ ಮತ್ತು ಹೊಗೆಯಿಂದ ಕೂಡಿದ ಆ ಅತಿದಾರುಣ ಭೂಕಂಪನವು ಏಳುದಿನವಿರುತ್ತದೆ.
03193023a ತೇನ ರಾಜನ್ನ ಶಕ್ನೋಮಿ ತಸ್ಮಿನ್ಸ್ಥಾತುಂ ಸ್ವ ಆಶ್ರಮೇ|
03193023c ತಂ ವಿನಾಶಯ ರಾಜೇಂದ್ರ ಲೋಕಾನಾಂ ಹಿತಕಾಮ್ಯಯಾ||
03193023e ಲೋಕಾಃ ಸ್ವಸ್ಥಾ ಭವಂತ್ವದ್ಯ ತಸ್ಮಿನ್ವಿನಿಹತೇಽಸುರೇ||
ರಾಜನ್! ಇದೇ ಕಾರಣದಿಂದ ನನ್ನ ಆ ಆಶ್ರಮದಲ್ಲಿ ನಾನೇ ನಿಲ್ಲಲು ಸಾಧ್ಯವಾಗುತ್ತಿಲ್ಲ. ರಾಜೇಂದ್ರ! ಲೋಕಗಳ ಹಿತವನ್ನು ಬಯಸಿ ಅವನನ್ನು ನಾಶಪಡಿಸು. ಆ ಅಸುರನನ್ನು ನೀನು ಇಂದು ಸಂಹರಿಸಿ ಲೋಕಗಳು ಸ್ವಾಸ್ಥ್ಯದಿಂದಿರಲಿ.
03193024a ತ್ವಂ ಹಿ ತಸ್ಯ ವಿನಾಶಾಯ ಪರ್ಯಾಪ್ತ ಇತಿ ಮೇ ಮತಿಃ|
03193024c ತೇಜಸಾ ತವ ತೇಜಶ್ಚ ವಿಷ್ಣುರಾಪ್ಯಾಯಯಿಷ್ಯತಿ||
ಅವನ ವಿನಾಶಕ್ಕೆ ನೀನೇ ಪರ್ಯಾಪ್ತನೆಂದು ನನ್ನ ಮತ. ವಿಷ್ಣುವೂ ಕೂಡ ತನ್ನ ತೇಜಸ್ಸಿನಿಂದ ನಿನ್ನ ತೇಜಸ್ಸನ್ನು ವೃದ್ಧಿಸುತ್ತಾನೆ.
03193025a ವಿಷ್ಣುನಾ ಚ ವರೋ ದತ್ತೋ ಮಮ ಪೂರ್ವಂ ತತೋ ವಧೇ|
03193025c ಯಸ್ತಂ ಮಹಾಸುರಂ ರೌದ್ರಂ ವಧಿಷ್ಯತಿ ಮಹೀಪತಿಃ||
03193025e ತೇಜಸ್ತಂ ವೈಷ್ಣವಮಿತಿ ಪ್ರವೇಕ್ಷ್ಯತಿ ದುರಾಸದಂ||
ಹಿಂದೆ ವಿಷ್ಣುವು ನನಗೆ ವರವನ್ನಿತ್ತಿದ್ದನು: “ಯಾವ ರಾಜನು ಆ ರೌದ್ರ ಮಹಾ ಅಸುರನನ್ನು ವಧಿಸುತ್ತಾನೋ ಅವನನ್ನು ವಿಷ್ಣುವಿನ ದುರಾಸದ ತೇಜಸ್ಸು ಪ್ರವೇಶಿಸುತ್ತದೆ.”
03193026a ತತ್ತೇಜಸ್ತ್ವಂ ಸಮಾಧಾಯ ರಾಜೇಂದ್ರ ಭುವಿ ದುಃಸ್ಸಹಂ|
03193026c ತಂ ನಿಷೂದಯ ಸಂದುಷ್ಟಂ ದೈತ್ಯಂ ರೌದ್ರಪರಾಕ್ರಮಂ||
ರಾಜೇಂದ್ರ! ಭೂಮಿಯಲ್ಲಿ ದುಃಸ್ಸಹವಾದ ಆ ತೇಜಸ್ಸನ್ನು ನೀನು ಪಡೆ. ರೌದ್ರ ಪರಾಕ್ರಮಿ ಆ ದುಷ್ಟ ದೈತ್ಯನನ್ನು ಸಂಹರಿಸು.
03193027a ನ ಹಿ ಧುಂಧುರ್ಮಹಾತೇಜಾಸ್ತೇಜಸಾಲ್ಪೇನ ಶಕ್ಯತೇ|
03193027c ನಿರ್ದಗ್ಧುಂ ಪೃಥಿವೀಪಾಲ ಸ ಹಿ ವರ್ಷಶತೈರಪಿ||
ಪೃಥಿವೀಪಾಲ! ಧುಂಧುವಿನ ಮಹಾತೇಜಸ್ಸನ್ನು ಅಲ್ಪತೇಜಸ್ಸಿನಿಂದ ಸುಟ್ಟುಹಾಕಲು ನೂರುವರ್ಷಗಳವರೆಗಾದರೂ ಸಾಧ್ಯವಿಲ್ಲ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ತ್ರಿನವತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ಮೂರನೆಯ ಅಧ್ಯಾಯವು.