Aranyaka Parva: Chapter 191

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೯೧

ಇಂದ್ರದ್ಯುಮ್ನ

ತನಗಿಂತಲೂ ದೀರ್ಘಾಯುಷಿಗಳು ಬೇರೆ ಯಾರಾದರೂ ಇದ್ದಾರಾ ಎಂಬ ಪ್ರಶ್ನೆಗೆ ಮಾರ್ಕಂಡೇಯನು ಇಂದ್ರದ್ಯುಮ್ನನ ಕುರಿತು ಹೇಳಿದುದು (೧). ತನ್ನ ಪುಣ್ಯವು ಕ್ಷೀಣವಾಗಿ ದಿವಿಯಿಂದ ಕೆಳಗೆ ಬಿದ್ದ ಇಂದ್ರದ್ಯುಮ್ನನು ಮಾರ್ಕಂಡೇಯನಲ್ಲಿ ಬಂದು ತನ್ನ ಪರಿಚಯವಿದೆಯೇ ಎಂದು ಕೇಳಲು, ತನಗೆ ಪರಿಚಯವಾಗಲಿಲ್ಲ ಆದರೆ ಹಿಮಾಲದಲ್ಲಿರುವ ಪ್ರಾಕಾರಕರ್ಣ ಎಂಬ ಗೂಬೆಯು ಅವನನ್ನು ಗುರುತಿಸಬಹುದೆಂದು ಹೇಳಲು ಇಂದ್ರದ್ಯುಮ್ನನು ಕುದುರೆಯಾಗಿ ಮಾರ್ಕಂಡೇಯನನ್ನು ಕರೆದುಕೊಂಡು ಗೂಬೆಯ ಬಳಿ ಬಂದುದು (೨-೫). ಗೂಬೆಯು ಅವನನ್ನು ಗುರಿತಿಸಲಾಗದೇ ಇಂದ್ರದ್ಯುಮ್ನಸರೋವರದ ಬಳಿ ಇರುವ ತನಗಿಂತಲೂ ವೃದ್ಧನಾದ ನಾಡೀಜಂಘವೆಂಬ ಬಕಪಕ್ಷಿಗೆ ತಿಳಿದಿರಬಹುದೆನ್ನಲು ಮೂವರೂ ಸರೋವರದ ಬಳಿ ಬಂದುದು (೬-೧೦). ಬಕಪಕ್ಷಿಗೂ ಇಂದ್ರದ್ಯುಮ್ನನನ್ನು ಗುರುತಿಸಲು ಸಾಧ್ಯವಾಗದಾಗ ಅದಕ್ಕಿಂತಲೂ ಹಿರಿಯವನಾದ, ಅದೇ ಸರೋವರದಲ್ಲಿದ್ದ ಆಮೆ ಅಕೂಪಾರನಲ್ಲಿ ಕೇಳಿದುದು (೧೧-೧೭). ಅಕೂಪಾರನು ಇಂದ್ರದ್ಯುಮ್ನನ ಯಾಗಗಳ ಮತ್ತು ದಕ್ಷಿಣೆಗಳನ್ನು ನೆನಪಿಸಿ ಕಣ್ಣೀರಿಟ್ಟುದುದು; ಇಂದ್ರದ್ಯುಮ್ನನು ದೇವಲೋಕಕ್ಕೆ ಹೋದುದು (೧೮-೨೮).

03191001 ವೈಶಂಪಾಯನ ಉವಾಚ|

03191001A ಮಾರ್ಕಂಡೇಯಮೃಷಯಃ ಪಾಂಡವಾಶ್ಚ ಪರ್ಯಪೃಚ್ಚನ್|

ವೈಶಂಪಾಯನನು ಹೇಳಿದನು: “ಪಾಂಡವರು ಋಷಿ ಮಾರ್ಕಂಡೇಯನಲ್ಲಿ ಪುನಃ ಕೇಳಿದರು.

03191001B ಅಸ್ತಿ ಕಶ್ಚಿದ್ಭವತಶ್ಚಿರಜಾತತರ ಇತಿ|

“ನಿನಗಿಂತಲೂ ದೀರ್ಘಾಯುಷಿಗಳಾದ ಬೇರೆ ಯಾರಾದರೂ ಇದ್ದಾರೆಯೇ” ಎಂದು.

03191002A ಸ ತಾನುವಾಚ|

03191002B ಅಸ್ತಿ ಖಲು ರಾಜರ್ಷಿರಿಂದ್ರದ್ಯುಮ್ನೋ ನಾಮ    ಕ್ಷೀಣಪುಣ್ಯಸ್ತ್ರಿದಿವಾತ್ಪ್ರಚ್ಯುತಃ|

03191002C ಕೀರ್ತಿಸ್ತೇ ವ್ಯುಚ್ಚಿನ್ನೇತಿ|

03191002d ಸ ಮಾಮುಪಾತಿಷ್ಠತ್|

03191002e ಅಥ ಪ್ರತ್ಯಭಿಜಾನಾತಿ ಮಾಂ ಭವಾನಿತಿ|

ಅವನು ಅವರಿಗೆ ಹೇಳಿದನು: “ಇಂದ್ರದ್ಯುಮ್ನನೆಂಬ ಹೆಸರಿನ ರಾಜರ್ಷಿಯಿದ್ದಾನಲ್ಲ! ಅವನ ಪುಣ್ಯವು ಕ್ಷೀಣವಾದಾಗ ದಿವಿಯಿಂದ ಕೆಳಗೆ ಬಿದ್ದನು. “ನಿನ್ನ ಕೀರ್ತಿಯು ಮುಗಿದುಹೋಯಿತು” ಎಂದು ಅವರು ಹೇಳಿದರು. ಅವನು ನನ್ನ ಬಳಿ ಬಂದು ಕೇಳಿದನು: “ನಿಮಗೆ ನನ್ನ ಪರಿಚಯವಿದೆಯೇ” ಎಂದು.

03191003A ತಮಹಮಬ್ರುವಂ|

03191003B ನ ವಯಂ ರಾಸಾಯನಿಕಾಃ ಶರೀರೋಪತಾಪೇನಾತ್ಮನಃ

        ಸಮಾರಭಾಮಹೇಽರ್ಥಾನಾಮನುಷ್ಠಾನಂ|

ಅವನಿಗೆ ನಾನು ಹೇಳಿದೆನು: “ನಾವು ರಾಸಾಯನಿಕರಲ್ಲ! ನಮ್ಮ ಶರೀರವನ್ನು ಅದುಮಿಟ್ಟುಕೊಂಡು ಅನುಷ್ಠಾನಮಾಡಿ ನಾವು ಗುರಿಯನ್ನು ತಲುಪುವವರು.

03191004A ಅಸ್ತಿ ಖಲು ಹಿಮವತಿ ಪ್ರಾಕಾರಕರ್ಣೋ ನಾಮೋಲೂಕಃ|

03191004B ಸ ಭವಂತಂ ಯದಿ ಜಾನೀಯಾತ್|

03191004C ಪ್ರಕೃಷ್ಟೇ ಚಾಧ್ವನಿ ಹಿಮವಾನ್|

03191004d ತತ್ರಾಸೌ ಪ್ರತಿವಸತೀತಿ|

ಆದರೆ ಹಿಮಾಲಯದಲ್ಲಿ ಪ್ರಾಕಾರಕರ್ಣ ಎಂಬ ಹೆಸರಿನ ಗೂಬೆಯಿದೆ. ಬಹುಷಃ ಅವನು ನಿನ್ನನ್ನು ಗುರುತಿಸಬಲ್ಲ. ಹಿಮಾಲಯವು ಬಹಳ ದೂರದಲ್ಲಿದೆ. ಅವನು ಅಲ್ಲಿ ವಾಸಿಸುತ್ತಾನೆ.”

03191005A ಸ ಮಾಮಶ್ವೋ ಭೂತ್ವಾ ತತ್ರಾವಹದ್ಯತ್ರ ಬಭೂವೋಲೂಕಃ|

ಅವನು ಅಶ್ವವಾಗಿ ನನ್ನನ್ನು ಗೂಬೆಯಿರುವಲ್ಲಿಗೆ ಕರೆದೊಯ್ದನು.

03191006A ಅಥೈನಂ ಸ ರಾಜರ್ಷಿಃ ಪರ್ಯಪೃಚ್ಚತ್|

03191006B ಪ್ರತ್ಯಭಿಜಾನಾತಿ ಮಾಂ ಭವಾನಿತಿ|

ಆ ರಾಜರ್ಷಿಯು ಅವನಿಗೆ ಕೇಳಿದನು: “ನೀನು ನನ್ನನ್ನು ಗುರುತಿಸಬಲ್ಲೆಯಾ” ಎಂದು.

03191007A ಸ ಮುಹೂರ್ತಂ ಧ್ಯಾತ್ವಾಬ್ರವೀದೇನಂ|

03191007B ನಾಭಿಜಾನೇ ಭವಂತಮಿತಿ|

ಅವನು ಒಂದು ಕ್ಷಣ ಯೋಚಿಸಿ “ನಿನ್ನನ್ನು ನಾನು ಗುರುತು ಹಿಡಿಯಲಾರೆ” ಎಂದು ಹೇಳಿದನು.

03191008A ಸ ಏವಮುಕ್ತೋ ರಾಜರ್ಷಿರಿಂದ್ರದ್ಯುಮ್ನಃ       ಪುನಸ್ತಮುಲೂಕಮಬ್ರವೀತ್|

03191008B ಅಸ್ತಿ ಕಶ್ಚಿದ್ಭವತಶ್ಚಿರಜಾತತರ ಇತಿ|

ಇದಕ್ಕೆ ರಾಜರ್ಷಿ ಇಂದ್ರದ್ಯುಮ್ನನು ಪುನಃ ಆ ಗೂಬೆಗೆ ಕೇಳಿದನು: “ನಿನಗಿಂತಲೂ ದೀರ್ಘಾಯುಷಿಗಳಾದ ಬೇರೆ ಯಾರಾದರೂ ಇದ್ದಾರೆಯೇ?”

03191009A ಸ ಏವಮುಕ್ತೋಽಬ್ರವೀದೇನಂ|

03191009B ಅಸ್ತಿ ಖಲ್ವಿಂದ್ರದ್ಯುಮ್ನಸರೋ ನಾಮ|

03191009C ತಸ್ಮಿನ್ನಾಡೀಜಂಘೋ ನಾಮ ಬಕಃ ಪ್ರತಿವಸತಿ|

03191009d ಸೋಽಸ್ಮತ್ತಶ್ಚಿರಜಾತತರಃ|

03191009e ತಂ ಪೃಚ್ಚೇತಿ|

ಇದಕ್ಕೆ ಅವನು ಉತ್ತರಿಸಿದನು: “ಇಂದ್ರದ್ಯುಮ್ನಸರ ಎಂಬ ಹೆಸರಿನ ಸರೋವರವೊಂದಿದೆ. ಅಲ್ಲಿ ನಾಡೀಜಂಘ ಎಂಬ ಹೆಸರಿನ ಬಕಪಕ್ಷಿಯು ವಾಸಿಸುತ್ತಿದೆ. ಅವನು ನನಗಿಂತಲೂ ಹೆಚ್ಚು ವರ್ಷ ಬಾಳಿದವನು. ಅವನನ್ನು ಕೇಳು.”

 03191010A ತತ ಇಂದ್ರದ್ಯುಮ್ನೋ ಮಾಂ ಚೋಲೂಕಂ ಚಾದಾಯ

        ತತ್ಸರೋಽಗಚ್ಚದ್ಯತ್ರಾಸೌ ನಾಡೀಜಂಘೋ ನಾಮ ಬಕೋ        ಬಭೂವ|

ಆಗ ಇಂದ್ರದ್ಯುಮ್ನನು ನನ್ನನ್ನೂ ಉಲೂಕನನ್ನೂ ಕರೆದುಕೊಂಡು ನಾಡೀಜಂಘ ಬಕನು ಇರುವ ಆ ಸರೋವರಕ್ಕೆ ಹೋದನು.

03191011A ಸೋಽಸ್ಮಾಭಿಃ ಪೃಷ್ಟಃ|

03191011B ಭವಾನಿಂದ್ರದ್ಯುಮ್ನಂ ರಾಜಾನಂ ಪ್ರತ್ಯಭಿಜಾನಾತೀತಿ|

ನಾವು ಅವನನ್ನು ಕೇಳಿದೆವು: “ನೀನು ರಾಜಾ ಇಂದ್ರದ್ಯುಮ್ನನನ್ನು ಗುರುತಿಸಬಲ್ಲೆಯಾ” ಎಂದು.

03191012A ಸ ಏವಮುಕ್ತೋಽಬ್ರವೀನ್ಮುಹೂರ್ತಂ ಧ್ಯಾತ್ವಾ|

03191012B ನಾಭಿಜಾನಾಮ್ಯಹಮಿಂದ್ರದ್ಯುಮ್ನಂ ರಾಜಾನಮಿತಿ|

ಅವನು ಒಂದು ಕ್ಷಣ ಯೋಚಿಸಿ ಹೇಳಿದನು: “ನಾನು ಇಂದ್ರದ್ಯುಮ್ನನೆನ್ನುವ ರಾಜನನ್ನು ತಿಳಿದಿಲ್ಲ.”

03191013A ತತಃ ಸೋಽಸ್ಮಾಭಿಃ ಪೃಷ್ಟಃ|

03191013B ಅಸ್ತಿ ಕಶ್ಚಿದನ್ಯೋ ಭವತಶ್ಚಿರಜಾತತರ ಇತಿ|

ಆಗ ನಾವು ಕೇಳಿದೆವು: “ನಿನಗಿಂತಲೂ ಹೆಚ್ಚುವರ್ಷ ಜೀವಿಸಿರುವ ಬೇರೆ ಯಾರಾದರೂ ಇದ್ದಾರೆಯೇ?” ಎಂದು.

03191014A ಸ ನೋಽಬ್ರವೀದಸ್ತಿ ಖಲ್ವಿಹೈವ ಸರಸ್ಯಕೂಪಾರೋ ನಾಮ ಕಚ್ಚಪಃ ಪ್ರತಿವಸತಿ|

03191014B ಸ ಮತ್ತಶ್ಚಿರಜಾತತರ ಇತಿ|

03191014C ಸ ಯದಿ ಕಥಂ ಚಿದಭಿಜಾನೀಯಾದಿಮಂ ರಾಜಾನಂ

        ತಮಕೂಪಾರಂ ಪೃಚ್ಚಾಮ ಇತಿ|

ಅವನು ಹೇಳಿದನು: “ಇಲ್ಲಿಯೇ ಸರೋವರದಲ್ಲಿ ಅಕೂಪಾರ ಎಂಬ ಹೆಸರಿನ ಆಮೆಯು ವಾಸಿಸುತ್ತಿದೆ. ಅವನು ನನಗಿಂತಲೂ ಮೊದಲು ಹುಟ್ಟಿದವನು. ಬಹುಷಃ ಅವನು ರಾಜನನ್ನು ಗುರುತಿಸಬಲ್ಲ. ಅಕೂಪಾರನನ್ನು ಕೇಳೋಣ” ಎಂದು.

03191015A ತತಃ ಸ ಬಕಸ್ತಮಕೂಪಾರಂ ಕಚ್ಚಪಂ ವಿಜ್ಞಾಪಯಾಮಾಸ|

03191015B ಅಸ್ತ್ಯಸ್ಮಾಕಮಭಿಪ್ರೇತಂ ಭವಂತಂ ಕಂ ಚಿದರ್ಥಮಭಿಪ್ರಷ್ಟುಂ|

03191015C ಸಾಧ್ವಾಗಮ್ಯತಾಂ ತಾವದಿತಿ|

ಆಗ ಬಕನು ಆ ಅಕೂಪಾರ ಕಚ್ಛಪವನ್ನು ಕೇಳಿದನು: “ಒಂದು ವಿಷಯದ ಕುರಿತು ನಿನ್ನಲ್ಲಿ ನಾವು ಕೇಳಬಯಸುತ್ತೇವೆ. ದಯವಿಟ್ಟು ಹೊರಗೆ ಬಾ!” ಎಂದು.

03191016A ಏತಚ್ಛೃತ್ವಾ ಸ ಕಚ್ಚಪಸ್ತಸ್ಮಾತ್ಸರಸ ಉತ್ಥಾಯಾಭ್ಯಗಚ್ಚದ್ಯತ್ರ

        ತಿಷ್ಠಾಮೋ ವಯಂ ತಸ್ಯ ಸರಸಸ್ತೀರೇ|

ಇದನ್ನು ಕೇಳಿ ಆ ಆಮೆಯು ಸರೋವರದಿಂದ ಮೇಲೆದ್ದು ಸರೋವರದ ದಡದಲ್ಲಿ ನಿಂತಿದ್ದ ನಮ್ಮ ಬಳಿ ಬಂದಿತು.

03191017A ಆಗತಂ ಚೈನಂ ವಯಮಪೃಚ್ಚಾಮ|

03191017B ಭವಾನಿಂದ್ರದ್ಯುಮ್ನಂ ರಾಜಾನಮಭಿಜಾನಾತೀತಿ|

ಬಂದ ಅವನನ್ನು ನಾವು ಪ್ರಶ್ನಿಸಿದೆವು: “ನೀನು ರಾಜ ಇಂದ್ರದ್ಯುಮ್ನನನ್ನು ತಿಳಿದಿದ್ದೀಯಾ?” ಎಂದು.

03191018A ಸ ಮುಹೂರ್ತಂ ಧ್ಯಾತ್ವಾ ಬಾಷ್ಪಪೂರ್ಣನಯನ

        ಉದ್ವಿಗ್ನಹೃದಯೋ ವೇಪಮಾನೋ ವಿಸಂಜ್ಞಕಲ್ಪಃ

        ಪ್ರಾಂಜಲಿರಬ್ರವೀತ್|

03191018B ಕಿಮಹಮೇನಂ ನ ಪ್ರತ್ಯಭಿಜಾನಾಮಿ|

03191018C ಅಹಂ ಹ್ಯನೇನ ಸಹಸ್ರಕೃತ್ವಃ

        ಪೂರ್ವಮಗ್ನಿಚಿತಿಷೂಪಹಿತಪೂರ್ವಃ|

03191018d ಸರಶ್ಚೇದಮಸ್ಯ ದಕ್ಷಿಣಾದತ್ತಾಭಿರ್

        ಗೋಭಿರತಿಕ್ರಮಮಾಣಾಭಿಃ ಕೃತಂ|

03191018e ಅತ್ರ ಚಾಹಂ ಪ್ರತಿವಸಾಮೀತಿ|

ಅವನು ಒಂದು ಕ್ಷಣ ಯೋಚಿಸಿ, ಕಣ್ಣಲ್ಲಿ ನೀರನ್ನು ತಂದುಕೊಂಡು, ಉದ್ವಿಗ್ನಹೃದಯನಾಗಿ ಕಂಪಿಸುತ್ತಾ, ಮೂರ್ಛೆಹೋಗುವನೋ ಎಂದು ತೋರುತ್ತಾ, ಕೈಮುಗಿದು ಹೇಳಿದನು: “ಅವನನ್ನು ಹೇಗೆತಾನೇ ಗುರುತಿಸಲಾರೆ? ಹಿಂದೆ ಒಂದು ಸಾವಿರ ಬಾರಿ ಅವನು ನನ್ನ ಮೇಲೆ ಯಜ್ಞದ ವೇದಿಕೆಗಳನ್ನು ಕಟ್ಟಿದ್ದ. ಅವನು ದಕ್ಷಿಣೆಯಾಗಿ ಕೊಟ್ಟ ಹಸುಗಳ ಗೊರಸಿನಿಂದಲೇ ಈ ಸರೋವರವು ನಿರ್ಮಿತವಾಗಿದೆ. ಮತ್ತು ನಾನು ಇನ್ನೂ ಇದರಲ್ಲಿ ವಾಸಿಸುತ್ತಿದ್ದೇನೆ.”

03191019A ಅಥೈತತ್ಕಚ್ಚಪೇನೋದಾಹೃತಂ ಶ್ರುತ್ವಾ ಸಮನಂತರಂ

        ದೇವಲೋಕಾದ್ದೇವರಥಃ ಪ್ರಾದುರಾಸೀತ್|

ಆ ಕಚ್ಛಪವು ಹೇಳಿದ್ದುದನ್ನು ಕೇಳುತ್ತಿದ್ದಂತೆಯೇ ದೇವಲೋಕದಿಂದ ದೇವರಥವು ಕಾಣಿಸಿಕೊಂಡಿತು.

03191020A ವಾಚಶ್ಚಾಶ್ರೂಯಂತೇಂದ್ರದ್ಯುಮ್ನಂ ಪ್ರತಿ|

03191020B ಪ್ರಸ್ತುತಸ್ತೇ ಸ್ವರ್ಗಃ

03191020C ಯಥೋಚಿತಂ ಸ್ಥಾನಮಭಿಪದ್ಯಸ್ವ|

03191020d ಕೀರ್ತಿಮಾನಸಿ|

03191020e ಅವ್ಯಗ್ರೋ ಯಾಹೀತಿ|

ಇಂದ್ರದ್ಯುಮ್ನನ ಕುರಿತಾದ ಈ ಮಾತುಗಳು ಕೇಳಿಬಂದವು: “ಸ್ವರ್ಗವು ನಿನಗಾಗಿ ತೆರೆದಿದೆ. ಯಥೋಚಿತವಾದ ಸ್ಥಾನವನ್ನು ಸ್ವೀಕರಿಸು. ನೀನು ಕೀರ್ತಿವಂತನಾಗಿದ್ದೀಯೆ. ಏನೂ ಯೋಚಿಸದೇ ಬಾ” ಎಂದು.

03191021a ದಿವಂ ಸ್ಪೃಶತಿ ಭೂಮಿಂ ಚ ಶಬ್ದಃ ಪುಣ್ಯಸ್ಯ ಕರ್ಮಣಃ|

03191021c ಯಾವತ್ಸ ಶಬ್ಧೋ ಭವತಿ ತಾವತ್ಪುರುಷ ಉಚ್ಯತೇ||

ಪುಣ್ಯ ಕರ್ಮಗಳ ಶಬ್ಧವು ದಿವಿ ಭೂಮಿಗಳಲ್ಲಿ ಮೊಳಗುತ್ತದೆ. ಎಲ್ಲಿಯವರೆಗೆ ಈ ಶಬ್ದವು ಕೇಳಿಬರುತ್ತದೆಯೋ ಅಲ್ಲಿಯವರೆಗೆ ಪುರುಷನಿರುತ್ತಾನೆ.

03191022a ಅಕೀರ್ತಿಃ ಕೀರ್ತ್ಯತೇ ಯಸ್ಯ ಲೋಕೇ ಭೂತಸ್ಯ ಕಸ್ಯ ಚಿತ್|

03191022c ಪತತ್ಯೇವಾಧಮಾಽಲ್ಲೋಕಾನ್ಯಾವಚ್ಛಬ್ಧಃ ಸ ಕೀರ್ತ್ಯತೇ||

ಇರುವ ಯಾವುದರ ಅಕೀರ್ತಿಯನ್ನು ಲೋಕದಲ್ಲಿ ಹೇಳಲಾಗುತ್ತದೆಯೋ, ಆ ಅಕೀರ್ತಿಯ ಶಬ್ಧವು ಇರುವವರೆಗೆ ಅದು ಅಧಮಲೋಕಗಳಲ್ಲಿ ಬಿದ್ದಿರುತ್ತದೆ.

03191023a ತಸ್ಮಾತ್ಕಲ್ಯಾಣವೃತ್ತಃ ಸ್ಯಾದತ್ಯಂತಾಯ ನರೋ ಭುವಿ|

03191023c ವಿಹಾಯ ವೃತ್ತಂ ಪಾಪಿಷ್ಠಂ ಧರ್ಮಮೇವಾಭಿಸಂಶ್ರಯೇತ್||

ಆದುದರಿಂದ ಭುವಿಯಲ್ಲಿ ನರನು ಅಂತ್ಯದವರೆಗೂ ಕಲ್ಯಾಣಕರವಾಗಿ ನಡೆದುಕೊಳ್ಳಬೇಕು. ಪಾಪಿಷ್ಠ ನಡವಳಿಕೆಗಳನ್ನು ತೊರೆಯಬೇಕು. ಧರ್ಮವನ್ನೇ ಒಟ್ಟುಮಾಡಿಕೊಳ್ಳಬೇಕು.”

03191024A ಇತ್ಯೇತಚ್ಛೃತ್ವಾ ಸ ರಾಜಾಬ್ರವೀತ್|

03191024B ತಿಷ್ಠ ತಾವದ್ಯಾವದಿದಾನೀಮಿಮೌ ವೃದ್ಧೌ ಯಥಾಸ್ಥಾನಂ

        ಪ್ರತಿಪಾದಯಾಮೀತಿ|

ಇದನ್ನು ಕೇಳಿದ ಆ ರಾಜನು ಹೇಳಿದನು: “ನಾನು ಈ ವೃದ್ಧರನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದೀನೋ ಅಲ್ಲಿಗೆ ಕರೆದೊಯ್ದು ಬರುವವರೆಗೆ ನಿಲ್ಲು!”

03191025A ಸ ಮಾಂ ಪ್ರಾಕಾರಕರ್ಣಂ ಚೋಲೂಕಂ ಯಥೋಚಿತೇ    ಸ್ಥಾನೇ ಪ್ರತಿಪಾದ್ಯ ತೇನೈವ ಯಾನೇನ ಸಂಸಿದ್ಧೋ       ಯಥೋಚಿತಂ ಸ್ಥಾನಂ ಪ್ರತಿಪನ್ನಃ|

ಅವನು ನನ್ನನ್ನು, ಪ್ರಾಕಾರಕರ್ಣ ಗೂಬೆಯನ್ನು ಯಥೋಚಿತ ಸ್ಥಳಗಳಲ್ಲಿರಿಸಿ, ಅವನಿಗೆ ಯಥೋಚಿತವಾದ ಸ್ಥಾನವನ್ನು ನೀಡಲು ಸಿದ್ಧವಾಗಿದ್ದ ಯಾನದಲ್ಲಿಗೆ ಹಿಂದಿರುಗಿದನು.”

03191026A ಏತನ್ಮಯಾನುಭೂತಂ ಚಿರಜೀವಿನಾ ದೃಷ್ಟಮಿತಿ

        ಪಾಂಡವಾನುವಾಚ ಮಾರ್ಕಂಡೇಯಃ|

ಈ ರೀತಿ ನನಗಿಂತಲೂ ಚಿರಜೀವಿಗಳಿರುವುದನ್ನು ಕಂಡಿದ್ದೇನೆಂದು ಮಾರ್ಕಂಡೇಯನು ಪಾಂಡವರಿಗೆ ಹೇಳಿದನು.

03191027A ಪಾಂಡವಾಶ್ಚೋಚುಃ ಪ್ರೀತಾಃ|

03191027B ಸಾಧು|

03191027C ಶೋಭನಂ ಕೃತಂ ಭವತಾ ರಾಜಾನಮಿಂದ್ರದ್ಯುಮ್ನಂ

        ಸ್ವರ್ಗಲೋಕಾಚ್ಚ್ಯುತಂ ಸ್ವೇ ಸ್ಥಾನೇ ಸ್ವರ್ಗೇ ಪುನಃ       ಪ್ರತಿಪಾದಯತೇತಿ|

ಕೇಳಿದ ಪಾಂಡವರು ಪ್ರೀತರಾಗಿ “ಸಾಧು! ಸ್ವರ್ಗಲೋಕದಿಂದ ಚ್ಯುತನಾಗಿದ್ದ ರಾಜ ಇಂದ್ರದ್ಯುಮ್ನನನ್ನು ಸ್ವರ್ಗದಲ್ಲಿದ್ದ ಅವನ ಸ್ಥಾನಕ್ಕೆ ಪುನಃ ಕಳುಹಿಸಿ ಒಳ್ಳೆಯದನ್ನೇ ಮಾಡಿದೆ!”

03191028A ಅಥೈನಾನಬ್ರವೀದಸೌ|

03191028B ನನು ದೇವಕೀಪುತ್ರೇಣಾಪಿ ಕೃಷ್ಣೇನ ನರಕೇ ಮಜ್ಜಮಾನೋ

        ರಾಜರ್ಷಿರ್ನೃಗಸ್ತಸ್ಮಾತ್ಕೃಚ್ಚ್ರಾತ್ಸಮುದ್ಧೃತ್ಯ ಪುನಃ      ಸ್ವರ್ಗಂ ಪ್ರತಿಪಾದಿತ ಇತಿ|

ಅದಕ್ಕೆ ಅವನು ಹೇಳಿದನು: “ದೇವಕೀಪುತ್ರ ಕೃಷ್ಣನೂ ನರಕದಲ್ಲಿ ಬಳಲುತ್ತಿದ್ದ ರಾಜರ್ಷಿ ನೃಗನನ್ನು ಕಷ್ಟಗಳಿಂದ ಮೇಲಕ್ಕೆತ್ತಿ ಪುನಃ ಸ್ವರ್ಗವನ್ನು ದೊರಕಿಸಿಕೊಡಲಿಲ್ಲವೇ?” ಎಂದು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಇಂದ್ರದ್ಯುಮ್ನೋಪಾಖ್ಯಾನೇ ಏಕನವತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಇಂದ್ರದ್ಯುಮ್ನೋಪಾಖ್ಯಾನದಲ್ಲಿ ನೂರಾತೊಂಭತ್ತೊಂದನೆಯ ಅಧ್ಯಾಯವು.

Related image

Comments are closed.