Aranyaka Parva: Chapter 181

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೮೧

ಶುಭಾಶುಭ ಕರ್ಮಫಲ

ಶುಭಾಶುಭ ಕರ್ಮಫಲಗಳ ಕುರಿತ ಯುಧಿಷ್ಠಿರನ ಪ್ರಶ್ನೆಗಳಿಗೆ ಮಾರ್ಕಂಡೇಯನು ಉತ್ತರಿಸುವುದು (೧-೪೧).

03181001 ವೈಶಂಪಾಯನ ಉವಾಚ|

03181001a ತಂ ವಿವಕ್ಷಂತಮಾಲಕ್ಷ್ಯ ಕುರುರಾಜೋ ಮಹಾಮುನಿಂ|

03181001c ಕಥಾಸಂಜನನಾರ್ಥಾಯ ಚೋದಯಾಮಾಸ ಪಾಂಡವಃ||

ವೈಶಂಪಾಯನನು ಹೇಳಿದನು: “ಆ ಮಹಾಮುನಿಯು ಹೇಳಲು ಸಿದ್ಧನಾಗಿದ್ದಾನೆಂದು ನೋಡಿ ಕುರುರಾಜ ಪಾಂಡವನು ಕಥೆಗಳನ್ನು ಪ್ರಾರಂಭಿಸಲು ಒತ್ತಾಯಿಸಿದನು.

03181002a ಭವಾನ್ದೈವತದೈತ್ಯಾನಾಮೃಷೀಣಾಂ ಚ ಮಹಾತ್ಮನಾಂ|

03181002c ರಾಜರ್ಷೀಣಾಂ ಚ ಸರ್ವೇಷಾಂ ಚರಿತಜ್ಞಃ ಸನಾತನಃ||

“ನೀನು ಸನಾತನ ದೇವ, ದೈತ್ಯರ ಮತ್ತು ಮಹಾತ್ಮ ಋಷಿಗಳ ಮತ್ತು ರಾಜರ್ಷಿಗಳ ಚರಿತ್ರೆಗಳನ್ನು ಎಲ್ಲವನ್ನೂ ತಿಳಿದಿದ್ದೀಯೆ.

03181003a ಸೇವ್ಯಶ್ಚೋಪಾಸಿತವ್ಯಶ್ಚ ಮತೋ ನಃ ಕಾಂಕ್ಷಿತಶ್ಚಿರಂ|

03181003c ಅಯಂ ಚ ದೇವಕೀಪುತ್ರಃ ಪ್ರಾಪ್ತೋಽಸ್ಮಾನವಲೋಕಕಃ||

ತುಂಬಾ ಸಮಯದಿಂದ ನಾವು ನಿನ್ನ ಸೇವೆ ಮತ್ತು ಪೂಜೆಗಳಿಗೆ ಮಾನ್ಯರಾದ ನಿನ್ನ ಬರವನ್ನು ಕಾಯುತ್ತಿದ್ದೆವು. ಈಗ ದೇವಕೀಪುತ್ರನೂ ನಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದಾನೆ.

03181004a ಭವತ್ಯೇವ ಹಿ ಮೇ ಬುದ್ಧಿರ್ದೃಷ್ಟ್ವಾತ್ಮಾನಂ ಸುಖಾಚ್ಚ್ಯುತಂ|

03181004c ಧಾರ್ತರಾಷ್ಟ್ರಾಂಶ್ಚ ದುರ್ವೃತ್ತಾನೃಧ್ಯತಃ ಪ್ರೇಕ್ಷ್ಯ ಸರ್ವಶಃ||

03181005a ಕರ್ಮಣಃ ಪುರುಷಃ ಕರ್ತಾ ಶುಭಸ್ಯಾಪ್ಯಶುಭಸ್ಯ ಚ|

03181005c ಸ್ವಫಲಂ ತದುಪಾಶ್ನಾತಿ ಕಥಂ ಕರ್ತಾ ಸ್ವಿದೀಶ್ವರಃ||

ನಾನು ಸುಖವನ್ನು ಕಳೆದುಕೊಂಡಿರುವುದನ್ನು ಮತ್ತು ದುರ್ವೃತ್ತ ಧಾರ್ತರಾಷ್ಟ್ರರು ಉನ್ನತಿಹೊಂದಿದುದನ್ನು ನೋಡಿದರೆ ಮನುಷ್ಯನೇ ಶುಭವಾದ ಮತ್ತು ಅಶುಭವಾದ ಎಲ್ಲ ಕರ್ಮಗಳ ಕರ್ತ ಮತ್ತು ಅವನು ಅವುಗಳ ಫಲವನ್ನು ಸ್ವತಃ ಅನುಭವಿಸುತ್ತಾನೆ ಎಂದು ನನಗನ್ನಿಸುತ್ತದೆ. ಇದರಲ್ಲಿ ಈಶ್ವರನು ಹೇಗೆ ಕರ್ತನಾಗುತ್ತಾನೆ

03181006a ಅಥ ವಾ ಸುಖದುಃಖೇಷು ನೃಣಾಂ ಬ್ರಹ್ಮವಿದಾಂ ವರ|

03181006c ಇಹ ವಾ ಕೃತಮನ್ವೇತಿ ಪರದೇಹೇಽಥ ವಾ ಪುನಃ||

ಬ್ರಹ್ಮವಿದರಲ್ಲಿ ಶ್ರೇಷ್ಠ! ಅಥವಾ ನರರು ಸುಖದುಃಖಗಳನ್ನು ಇಲ್ಲಿಯೇ ಅನುಭವಿಸುತ್ತಾರೋ ಅಥವಾ ಅದು ಪರದೇಹದಲ್ಲಿಯೂ ಅವರನ್ನು ಅನುಸರಿಸುತ್ತವೆಯೋ?

03181007a ದೇಹೀ ಚ ದೇಹಂ ಸಂತ್ಯಜ್ಯ ಮೃಗ್ಯಮಾಣಃ ಶುಭಾಶುಭೈಃ|

03181007c ಕಥಂ ಸಮ್ಯುಜ್ಯತೇ ಪ್ರೇತ್ಯ ಇಹ ವಾ ದ್ವಿಜಸತ್ತಮ||

ದ್ವಿಜಸತ್ತಮ! ದೇಹಿಯು ದೇಹವನ್ನು ತೊರೆದಾಗ ಶುಭಾಶುಭಗಳು ಅವನನ್ನು ಹೇಗೆ ಹಿಂಬಾಲಿಸಿ ಬೇಟೆಯಾಡುತ್ತವೆ ಮತ್ತು ಪ್ರೇತವನ್ನು ಅಥವಾ ಇಲ್ಲಿ ಹೇಗೆ ಅವನನ್ನು ಸೇರುತ್ತವೆ?

03181008a ಐಹಲೌಕಿಕಮೇವೈತದುತಾಹೋ ಪಾರಲೌಕಿಕಂ|

03181008c ಕ್ವ ಚ ಕರ್ಮಾಣಿ ತಿಷ್ಠಂತಿ ಜಂತೋಃ ಪ್ರೇತಸ್ಯ ಭಾರ್ಗವ||

ಭಾರ್ಗವ! ಕರ್ಮವು ಈ ಲೋಕದಲ್ಲಿ ಮಾತ್ರ ಮಿತವಾಗಿರುತ್ತದೆಯೋ ಅಥವಾ ಪರಲೋಕದಲ್ಲಿಯೂ ಹಿಂಬಾಲಿಸುತ್ತದೆಯೋ? ಜೀವಿಯು ಪ್ರೇತವಾದಾಗ ಕರ್ಮಗಳು ಎಲ್ಲಿ ನಿಂತಿರುತ್ತವೆ?”

03181009 ಮಾರ್ಕಂಡೇಯ ಉವಾಚ|

03181009a ತ್ವದ್ಯುಕ್ತೋಽಯಮನುಪ್ರಶ್ನೋ ಯಥಾವದ್ವದತಾಂ ವರ|

03181009c ವಿದಿತಂ ವೇದಿತವ್ಯಂ ತೇ ಸ್ಥಿತ್ಯರ್ಥಮನುಪೃಚ್ಚಸಿ||

ಮಾರ್ಕಂಡೇಯನು ಹೇಳಿದನು: “ಮಾತುಗಾರರಲ್ಲಿ ಶ್ರೇಷ್ಠ! ಈ ಪ್ರಶ್ನೆಯು ನಿನಗೆ ಯುಕ್ತವಾಗಿದೆ. ಏನನ್ನು ತಿಳಿಯಬೇಕೆಂಬುದು ನಿನಗೆ ತಿಳಿದಿದೆ. ಅರ್ಥವನ್ನು ಸಿದ್ಧಾಂತಗೊಳಿಸಲು ನೀನು ಕೇಳುತ್ತಿದ್ದೀಯೆ.

03181010a ಅತ್ರ ತೇ ವರ್ತಯಿಷ್ಯಾಮಿ ತದಿಹೈಕಮನಾಃ ಶೃಣು|

03181010c ಯಥೇಹಾಮುತ್ರ ಚ ನರಃ ಸುಖದುಃಖಮುಪಾಶ್ನುತೇ||

ಈಗ ನಾನು ನರನು ಇಲ್ಲಿ ಮತ್ತು ಅಲ್ಲಿ ಸುಖದುಃಖಗಳನ್ನು ಹೇಗೆ ಹೊಂದುತ್ತಾನೆ ಎಂದು ಹೇಳುತ್ತೇನೆ. ಆದುದರಿಂದ ಏಕಮನಸ್ಕನಾಗಿ ಕೇಳು.

03181011a ನಿರ್ಮಲಾನಿ ಶರೀರಾಣಿ ವಿಶುದ್ಧಾನಿ ಶರೀರಿಣಾಂ|

03181011c ಸಸರ್ಜ ಧರ್ಮತಂತ್ರಾಣಿ ಪೂರ್ವೋತ್ಪನ್ನಃ ಪ್ರಜಾಪತಿಃ||

ಮೊದಲಿಗೆ ಪ್ರಜಾಪತಿಯು ನಿರ್ಮಲ ಶರೀರಗಳನ್ನೂ ಧರ್ಮವನ್ನೇ ಅನುಸರಿಸುತ್ತಿದ್ದ ವಿಶುದ್ಧ ಶರೀರಿಗಳನ್ನೂ ಸೃಷ್ಟಿಸಿದನು.

03181012a ಅಮೋಘಬಲಸಂಕಲ್ಪಾಃ ಸುವ್ರತಾಃ ಸತ್ಯವಾದಿನಃ|

03181012c ಬ್ರಹ್ಮಭೂತಾ ನರಾಃ ಪುಣ್ಯಾಃ ಪುರಾಣಾಃ ಕುರುನಂದನ||

ಕುರುನಂದನ! ಆ ನರರು ಅಮೋಘಬಲಸಂಕಲ್ಪರೂ, ಸುವ್ರತರೂ, ಸತ್ಯವಾದಿಗಳು, ಪುಣ್ಯರೂ, ಪುರಾಣರೂ, ಬ್ರಹ್ಮನಲ್ಲಿ ನೆಲೆಗೊಂಡವರೂ ಆಗಿದ್ದರು.

03181013a ಸರ್ವೇ ದೇವೈಃ ಸಮಾಯಾಂತಿ ಸ್ವಚ್ಚಂದೇನ ನಭಸ್ತಲಂ|

03181013c ತತಶ್ಚ ಪುನರಾಯಾಂತಿ ಸರ್ವೇ ಸ್ವಚ್ಚಂದಚಾರಿಣಃ||

ಅವರೆಲ್ಲರೂ ಸ್ವಚ್ಛಂದದಿಂದ ನಭಸ್ತಲದಲ್ಲಿ ದೇವತೆಗಳೊಂದಿಗೆ ಕೂಡುತ್ತಿದ್ದರು ಮತ್ತು ಆ ಎಲ್ಲ ಸ್ವಚ್ಛಂದಚಾರಿಗಳೂ ಪುನಃ ಇಲ್ಲಿಗೆ ಬರುತ್ತಿದ್ದರು.

03181014a ಸ್ವಚ್ಚಂದಮರಣಾಶ್ಚಾಸನ್ನರಾಃ ಸ್ವಚ್ಚಂದಜೀವಿನಃ|

03181014c ಅಲ್ಪಬಾಧಾ ನಿರಾತಂಕಾ ಸಿದ್ಧಾರ್ಥಾ ನಿರುಪದ್ರವಾಃ||

ಆ ನರರು ಬೇಕೆಂದಾಗ ಸಾಯುತ್ತಿದ್ದರು ಮತ್ತು ಬೇಕೆಂದಾಗ ಜೀವಿಸುತ್ತಿದ್ದರು. ಅವರಿಗೆ ಬಾಧೆಯೆನ್ನುವುದಿರಲಿಲ್ಲ. ನಿರಾತಂಕರಾಗಿದ್ದರು. ಸಿದ್ಧಾರ್ಥರಾಗಿದ್ದರು. ಉಪದ್ರವಗಳಿರಲಿಲ್ಲ.

03181015a ದ್ರಷ್ಟಾರೋ ದೇವಸಂಘಾನಾಮೃಷೀಣಾಂ ಚ ಮಹಾತ್ಮನಾಂ|

03181015c ಪ್ರತ್ಯಕ್ಷಾಃ ಸರ್ವಧರ್ಮಾಣಾಂ ದಾಂತಾ ವಿಗತಮತ್ಸರಾಃ||

ಅವರು ದೇವಸಂಘಗಳನ್ನೂ ಮಹಾತ್ಮ ಋಷಿಗಳನ್ನೂ ಕಣ್ಣಾರೆ ಕಾಣುತ್ತಿದ್ದರು. ಸರ್ವ ಧರ್ಮಗಳೂ ಅವರಿಗೆ ಪ್ರತ್ಯಕ್ಷವಾಗಿದ್ದವು, ತಮ್ಮನ್ನು ನಿಯಂತ್ರಿಸಿಕೊಂಡಿದ್ದರು ಮತ್ತು ಮಾತ್ಸರ್ಯವೇ ಇರಲಿಲ್ಲ. 

03181016a ಆಸನ್ವರ್ಷಸಹಸ್ರಾಣಿ ತಥಾ ಪುತ್ರಸಹಸ್ರಿಣಃ|

03181016c ತತಃ ಕಾಲಾಂತರೇಽನ್ಯಸ್ಮಿನ್ಪೃಥಿವೀತಲಚಾರಿಣಃ||

03181017a ಕಾಮಕ್ರೋಧಾಭಿಭೂತಾಸ್ತೇ ಮಾಯಾವ್ಯಾಜೋಪಜೀವಿನಃ|

03181017c ಲೋಭಮೋಹಾಭಿಭೂತಾಶ್ಚ ತ್ಯಕ್ತಾ ದೇವೈಸ್ತತೋ ನರಾಃ||

ಅವರು ಸಾವಿರಾರು ವರ್ಷಗಳು ಇರುತ್ತಿದ್ದರು ಮತ್ತು ಸಹಸ್ರಾರು ಮಕ್ಕಳನ್ನು ಪಡೆಯುತ್ತಿದ್ದರು. ಆಗ ಕಾಲಾಂತರದಲ್ಲಿ ಅವರು ಕೇವಲ ಭೂಮಿಯ ಮೇಲೆಯೇ ನಡೆಯುವವರಾದರು. ಅವರಲ್ಲಿ ಕಾಮಕ್ರೋಧಗಳುಂಟಾದವು. ಮಾಯ-ಮೋಸಗಳಿಂದ ಜೀವಿಸತೊಡಗಿದರು. ಲೋಭ-ಮೋಹಗಳೂ ಅವರಿಗುಂಟಾಯಿತು. ಮತ್ತು ದೇವತೆಗಳು ನರರನ್ನು ತ್ಯಜಿಸಿದರು.

03181018a ಅಶುಭೈಃ ಕರ್ಮಭಿಃ ಪಾಪಾಸ್ತಿರ್ಯಮ್ನರಕಗಾಮಿನಃ|

03181018c ಸಂಸಾರೇಷು ವಿಚಿತ್ರೇಷು ಪಚ್ಯಮಾನಾಃ ಪುನಃ ಪುನಃ||

ಅಶುಭಕರ್ಮಗಳಿಂದ ಆ ಪಾಪಿಗಳು ಪ್ರಾಣಿಗಳಾಗಿ ಹುಟ್ಟಿದರು ಅಥವಾ ನರಕಕ್ಕೆ ಹೋದರು. ಮತ್ತು ವಿಚಿತ್ರ ಸಂಸಾರಗಳಲ್ಲಿ ಪುನಃ ಪುನಃ ಪಚನಗೊಂಡರು.

03181019a ಮೋಘೇಷ್ಟಾ ಮೋಘಸಂಕಲ್ಪಾ ಮೋಘಜ್ಞಾನಾ ವಿಚೇತಸಃ|

03181019c ಸರ್ವಾತಿಶಂಕಿನಶ್ಚೈವ ಸಂವೃತ್ತಾಃ ಕ್ಲೇಶಭಾಗಿನಃ||

03181019e ಅಶುಭೈಃ ಕರ್ಮಭಿಶ್ಚಾಪಿ ಪ್ರಾಯಶಃ ಪರಿಚಿಹ್ನಿತಾಃ||

ಅವರ ಆಸೆಗಳು ನಿರರ್ಥಕವಾಗತೊಡಗಿದವು. ಸಂಕಲ್ಪಗಳು ನಿರರ್ಥಕವಾದವು. ಜ್ಞಾನವು ನಿರರ್ಥಕವಾಯಿತು. ತಿಳಿಯದೆಯೇ ಅವರು ಎಲ್ಲವುಗಳಲ್ಲಿ ಶಂಕಿತರಾಗತೊಡಗಿದರು ಮತ್ತು ತಮ್ಮ ಅಶುಭ ಕರ್ಮಗಳ ಗುರುತುಗಳನ್ನು ಇಟ್ಟುಕೊಂಡು ತಮ್ಮ ಪಾಲಿನ ಕ್ಲೇಷಗಳನ್ನು ಅನುಭವಿಸತೊಡಗಿದರು.

03181020a ದೌಷ್ಕುಲ್ಯಾ ವ್ಯಾಧಿಬಹುಲಾ ದುರಾತ್ಮಾನೋಽಪ್ರತಾಪಿನಃ|

03181020c ಭವಂತ್ಯಲ್ಪಾಯುಷಃ ಪಾಪಾ ರೌದ್ರಕರ್ಮಫಲೋದಯಾಃ||

03181020e ನಾಥಂತಃ ಸರ್ವಕಾಮಾನಾಂ ನಾಸ್ತಿಕಾ ಭಿನ್ನಸೇತವಃ||

03181021a ಜಂತೋಃ ಪ್ರೇತಸ್ಯ ಕೌಂತೇಯ ಗತಿಃ ಸ್ವೈರಿಹ ಕರ್ಮಭಿಃ|

03181021c ಪ್ರಾಜ್ಞಸ್ಯ ಹೀನಬುದ್ಧೇಶ್ಚ ಕರ್ಮಕೋಶಃ ಕ್ವ ತಿಷ್ಠತಿ||

ದುಷ್ಟ ಕುಲಗಳಲ್ಲಿ ಹುಟ್ಟತೊಡಗಿದರು. ಬಹಳ ರೀತಿಯ ವ್ಯಾಧಿಗಳಿಗೊಳಗಾದರು. ದುರಾತ್ಮರೂ ಅಪ್ರತಾಪಿಗಳೂ ಆದ ಅವರು ಅಲ್ಪಾಯುಷಿಗಳಾದರು. ರೌದ್ರಕರ್ಮಗಳ ಫಲವಾಗಿ ಪಾಪವು ಹುಟ್ಟಿತು. ಎಲ್ಲ ಕಾಮಗಳಿಗೂ ಅಂಟಿಕೊಂಡರು. ನಾಸ್ತಿಕರಾದರು. ತಮ್ಮ ಸೇತುವೆಗಳನ್ನು ಕತ್ತರಿಸಿಕೊಂಡರು. ಕೌಂತೇಯ! ಜೀವಿಯು ಇಲ್ಲಿಯೇ ಸ್ವತಃ ಮಾಡಿದ ಕರ್ಮಗಳು ಪ್ರೇತದ ಗತಿಯನ್ನು ನಿರ್ಧರಿಸುತ್ತವೆ. ಪ್ರಾಜ್ಞನ ಮತ್ತು ಹೀನಬುದ್ಧಿಯ ಕರ್ಮಕೋಶಗಳು ಎಲ್ಲಿ ನಿಲ್ಲುತ್ತವೆ?

03181022a ಕ್ವಸ್ಥಸ್ತತ್ಸಮುಪಾಶ್ನಾತಿ ಸುಕೃತಂ ಯದಿ ವೇತರತ್|

03181022c ಇತಿ ತೇ ದರ್ಶನಂ ಯಚ್ಚ ತತ್ರಾಪ್ಯನುನಯಂ ಶೃಣು||

ಮತ್ತು ಎಲ್ಲಿಂದ ಸುಕೃತ ದುಷ್ಕೃತಗಳ ಫಲವನ್ನು ಪಡೆಯುತ್ತಾನೆ? ಈಗ ಇವುಗಳಿಗೆ ಉತ್ತರವನ್ನು ಕೇಳು.

03181023a ಅಯಮಾದಿಶರೀರೇಣ ದೇವಸೃಷ್ಟೇನ ಮಾನವಃ|

03181023c ಶುಭಾನಾಮಶುಭಾನಾಂ ಚ ಕುರುತೇ ಸಂಚಯಂ ಮಹತ್||

ದೇವಸೃಷ್ಟಿಯಾದ ಈ ಮಾನವ ಆದಿಶರೀರವು ಶುಭ ಮತ್ತು ಅಶುಭವಾದ ಮಹಾ ಸಂಚಯವನ್ನು ಮಾಡಿಕೊಳ್ಳುತ್ತದೆ. 

03181024a ಆಯುಷೋಽಂತೇ ಪ್ರಹಾಯೇದಂ ಕ್ಷೀಣಪ್ರಾಯಂ ಕಲೇವರಂ|

03181024c ಸಂಭವತ್ಯೇವ ಯುಗಪದ್ಯೋನೌ ನಾಸ್ತ್ಯಂತರಾಭವಃ||

ಆಯುಷ್ಯವು ಮುಗಿದಾಗ ಪ್ರಾಯವನ್ನು ಕಳೆದುಕೊಂಡ ಕಲೇವರವನ್ನು ತೊರೆದು ತಕ್ಷಣವೇ ಯೋನಿಯಲ್ಲಿ ಪುನಃ ಹುಟ್ಟುತ್ತಾನೆ. ಅದರಲ್ಲಿ ಕಾಲಾಂತರವೇ ಇರುವುದಿಲ್ಲ.

03181025a ತತ್ರಾಸ್ಯ ಸ್ವಕೃತಂ ಕರ್ಮ ಚಾಯೇವಾನುಗತಂ ಸದಾ|

03181025c ಫಲತ್ಯಥ ಸುಖಾರ್ಹೋ ವಾ ದುಃಖಾರ್ಹೋ ವಾಪಿ ಜಾಯತೇ||

ಅವನನ್ನೇ ಸದಾ ಅನುಸರಿಸಿಬಂದ ಸುಕೃತ ಮತ್ತು ದುಷ್ಕೃತ ಕರ್ಮಗಳ ಫಲಾನುಸಾರವಾಗಿ ಅವನು ಸುಖಾರ್ಹನಾಗಿ ಅಥವಾ ದುಃಖಾರ್ಹನಾಗಿ ಜನ್ಮಪಡೆಯುತ್ತಾನೆ.

03181026a ಕೃತಾಂತವಿಧಿಸಮ್ಯುಕ್ತಃ ಸ ಜಂತುರ್ಲಕ್ಷಣೈಃ ಶುಭೈಃ|

03181026c ಅಶುಭೈರ್ವಾ ನಿರಾದಾನೋ ಲಕ್ಷ್ಯತೇ ಜ್ಞಾನದೃಷ್ಟಿಭಿಃ||

03181027a ಏಷಾ ತಾವದಬುದ್ಧೀನಾಂ ಗತಿರುಕ್ತಾ ಯುಧಿಷ್ಠಿರ|

03181027c ಅತಃ ಪರಂ ಜ್ಞಾನವತಾಂ ನಿಬೋಧ ಗತಿಮುತ್ತಮಾಂ||

ಜ್ಞಾನದೃಷ್ಟಿಯಿಲ್ಲದವರು ಆ ಜಂತುವು ಮರಣಧರ್ಮಕ್ಕೊಳಗಾಗಿ ಶುಭ ಅಥವಾ ಅಶುಭ ಲಕ್ಷಣಗಳನ್ನು ಪಡೆದಿರುವುದಿಲ್ಲ ಎಂದು ನಂಬುತ್ತಾರೆ. ಆದರೆ ಇದು ಬುದ್ಧಿಯಿಲ್ಲದವರ ದಾರಿಯೆಂದು ಹೇಳುತ್ತಾರೆ. ಯುಧಿಷ್ಠಿರ! ಈಗ ಇದರ ನಂತರದ ಜ್ಞಾನವಂತರ ಉತ್ತಮವಾದ ಗತಿಯನ್ನು ತಿಳಿಸುತ್ತೇನೆ.

03181028a ಮನುಷ್ಯಾಸ್ತಪ್ತತಪಸಃ ಸರ್ವಾಗಮಪರಾಯಣಾಃ|

03181028c ಸ್ಥಿರವ್ರತಾಃ ಸತ್ಯಪರಾ ಗುರುಶುಶ್ರೂಷಣೇ ರತಾಃ||

03181029a ಸುಶೀಲಾಃ ಶುಕ್ಲಜಾತೀಯಾಃ ಕ್ಷಾಂತಾ ದಾಂತಾಃ ಸುತೇಜಸಃ|

03181029c ಶುಭಯೋನ್ಯಂತರಗತಾಃ ಪ್ರಾಯಶಃ ಶುಭಲಕ್ಷಣಾಃ||

ತಪಸ್ಸನ್ನು ತಪಿಸಿದ ಮನುಷ್ಯರು, ಎಲ್ಲ ಆಗಮಗಳನ್ನೂ ತಿಳಿದುಕೊಂಡಿರುವವರು, ವ್ರತಗಳಲ್ಲಿ ಸ್ಥಿರರಾಗಿರುವವರು, ಸತ್ಯಪರರು, ಗುರುಶುಶ್ರೂಷಣೆಯಲ್ಲಿ ನಿರತರಾದವರು, ಸುಶೀಲರು, ಶುದ್ಧಜಾತಿಯವರು, ಕ್ಷಮಿಸುವವರು, ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡವರು, ಉತ್ತಮ ತೇಜಸ್ಸುಳ್ಳವರು, ಪ್ರಾಯಶಃ ಶುಭಯೋನಿಗಳನ್ನು ಸೇರುತ್ತಾರೆ ಮತ್ತು ಶುಭಲಕ್ಷಣಗಳನ್ನು ಹೊಂದಿರುತ್ತಾರೆ.

03181030a ಜಿತೇಂದ್ರಿಯತ್ವಾದ್ವಶಿನಃ ಶುಕ್ಲತ್ವಾನ್ಮಂದರೋಗಿಣಃ|

03181030c ಅಲ್ಪಬಾಧಪರಿತ್ರಾಸಾದ್ಭವಂತಿ ನಿರುಪದ್ರವಾಃ||

ಜಿತೇಂದ್ರಿಯರಾಗಿರುವುದರಿಂದ ಅವರು ನಿಯಂತ್ರಿಸುತ್ತಿರುತ್ತಾರೆ, ಶುದ್ಧರಾಗಿರುವುದರಿಂದ ರೋಗಿಗಳಾಗುವುದಿಲ್ಲ, ಬಾಧೆಗಳು ಕಡಿಮೆಯಿರುವುದರಿಂದ ಎಲ್ಲವೂ ಸುಲಭವಾಗಿರುತ್ತದೆ ಮತ್ತು ಉಪದ್ರವಗಳಿಲ್ಲದವರಾಗಿರುತ್ತಾರೆ.

03181031a ಚ್ಯವಂತಂ ಜಾಯಮಾನಂ ಚ ಗರ್ಭಸ್ಥಂ ಚೈವ ಸರ್ವಶಃ|

03181031c ಸ್ವಮಾತ್ಮಾನಂ ಪರಂ ಚೈವ ಬುಧ್ಯಂತೇ ಜ್ಞಾನಚಕ್ಷುಷಃ||

03181031e ಕರ್ಮಭೂಮಿಮಿಮಾಂ ಪ್ರಾಪ್ಯ ಪುನರ್ಯಾಂತಿ ಸುರಾಲಯಂ||

ಗರ್ಭಪತನವಾಗಿರಲಿ, ಹುಟ್ಟಿರಲಿ ಅಥವಾ ಗರ್ಭದಲ್ಲಿಯೇ ಇರಲಿ, ಅವರು ಜ್ಞಾನಚಕ್ಷುಗಳಿಂದ ಸ್ವಯಂ ತಮ್ಮನ್ನು ಮತ್ತು ಪರವನ್ನೂ ತಿಳಿದಿರುತ್ತಾರೆ. ಈ ಕರ್ಮಭೂಮಿಯನ್ನು ಪಡೆದು ಪುನಃ ಸುರಾಲಯಕ್ಕೆ ಹೋಗುತ್ತಾರೆ.

03181032a ಕಿಂ ಚಿದ್ದೈವಾದ್ಧಠಾತ್ಕಿಂ ಚಿತ್ಕಿಂ ಚಿದೇವ ಸ್ವಕರ್ಮಭಿಃ|

03181032c ಪ್ರಾಪ್ನುವಂತಿ ನರಾ ರಾಜನ್ಮಾ ತೇಽಸ್ತ್ವನ್ಯಾ ವಿಚಾರಣಾ||

ರಾಜನ್! ಕೆಲವೊಂದು ದೈವದಿಂದ, ಕೆಲವೊಂದು ಅದೃಷ್ಟದಿಂದ, ಕೆಲವೊಂದು ಸ್ವಕರ್ಮದಿಂದ ನರನು ಪಡೆಯುತ್ತಾನೆ. ಅದರ ಕುರಿತು ನೀನು ಇನ್ನೂ ಹೆಚ್ಚು ವಿಚಾರಮಾಡಬೇಡ.

03181033a ಇಮಾಮತ್ರೋಪಮಾಂ ಚಾಪಿ ನಿಬೋಧ ವದತಾಂ ವರ|

03181033c ಮನುಷ್ಯಲೋಕೇ ಯಚ್ಛ್ರೇಯಃ ಪರಂ ಮನ್ಯೇ ಯುಧಿಷ್ಠಿರ||

03181034a ಇಹ ವೈಕಸ್ಯ ನಾಮುತ್ರ ಅಮುತ್ರೈಕಸ್ಯ ನೋ ಇಹ|

03181034c ಇಹ ಚಾಮುತ್ರ ಚೈಕಸ್ಯ ನಾಮುತ್ರೈಕಸ್ಯ ನೋ ಇಹ||

ಮಾತುಗಾರರಲ್ಲಿ ಶ್ರೇಷ್ಠನೇ! ಇದಕ್ಕೆ ಸಂಬಂಧಿಸಿದಂತೆ ಒಂದು ಉಪಮೆಯಿದೆ. ಹೇಳುತ್ತೇನೆ. ಕೇಳು. ಯುಧಿಷ್ಠಿರ! ಈ ಲೋಕದಲ್ಲಿ ಮನುಷ್ಯನಿಗೆ ಶ್ರೇಯಸ್ಸಾದುದು ಆದರೆ ಪರಲೋಕದಲ್ಲಿ ಅಲ್ಲದಿರುವುದು ಒಂದಿದೆ. ಇನ್ನೊಂದು ಪರಲೋಕದಲ್ಲಿ ಶ್ರೇಯಸ್ಸನ್ನು ನೀಡುತ್ತದೆ ಆದರೆ ಇಲ್ಲಿ ಅಲ್ಲ. ಮೂರನೆಯದು ಇಲ್ಲಿ ಮತ್ತು ಅಲ್ಲಿ ಶ್ರೇಯಸ್ಸನ್ನು ಕೊಡುವಂಥಹುದು ಮತ್ತು ಕೊನೆಯದು ಇಲ್ಲಿಯೂ ಮತ್ತು ಅಲ್ಲಿಯೂ ಶ್ರೇಯಸ್ಸನ್ನು ಕೊಡದಿರುವಂಥಹುದು ಇವೆ ಎಂದು ನನಗನ್ನಿಸುತ್ತದೆ.

03181035a ಧನಾನಿ ಯೇಷಾಂ ವಿಪುಲಾನಿ ಸಂತಿ|

         ನಿತ್ಯಂ ರಮಂತೇ ಸುವಿಭೂಷಿತಾಂಗಾಃ|

03181035c ತೇಷಾಮಯಂ ಶತ್ರುವರಘ್ನ ಲೋಕೋ|

         ನಾಸೌ ಸದಾ ದೇಹಸುಖೇ ರತಾನಾಂ||

ಶತ್ರುವರಘ್ನ! ಯಾರಲ್ಲಿ ವಿಪುಲ ಧನವಿದೆಯೋ ಅವರು ಒಳ್ಳೆಯ ಭೂಷಿತಾಂಗರಾಗಿ ನಿತ್ಯವೂ ರಮಿಸುತ್ತಾರೆ. ಅವರು ಈ ಲೋಕದಲ್ಲಿ ಸದಾ ದೇಹಸುಖದಲ್ಲಿ ನಿರತರಾಗಿರುತ್ತಾರೆ.

03181036a ಯೇ ಯೋಗಯುಕ್ತಾಸ್ತಪಸಿ ಪ್ರಸಕ್ತಾಃ|

         ಸ್ವಾಧ್ಯಾಯಶೀಲಾ ಜರಯಂತಿ ದೇಹಾನ್|

03181036c ಜಿತೇಂದ್ರಿಯಾ ಭೂತಹಿತೇ ನಿವಿಷ್ಟಾಸ್|

         ತೇಷಾಮಸೌ ನಾಯಮರಿಘ್ನ ಲೋಕಃ||

ಅರಿಘ್ನ! ಆದರೆ ಯಾರು ಯೋಗಯುಕ್ತರಾಗಿ ತಪಸ್ಸಿನಲ್ಲಿ ಪ್ರಸಕ್ತರಾಗಿರುತ್ತಾರೋ, ಸ್ವಾಧ್ಯಾಯಶೀಲರಾಗಿರುತ್ತಾರೋ, ದೇಹವನ್ನು ಕ್ಷೀಣಿಸಿಕೊಳ್ಳುತ್ತಾರೋ, ಜಿತೇಂದ್ರಿಯರಾಗಿರುತ್ತಾರೋ, ಭೂತಹಿತರಾಗಿರುತ್ತಾರೋ, ಅವರಿಗೆ ಆ ಲೋಕ, ಇದಲ್ಲ.

03181037a ಯೇ ಧರ್ಮಮೇವ ಪ್ರಥಮಂ ಚರಂತಿ|

         ಧರ್ಮೇಣ ಲಬ್ಧ್ವಾ ಚ ಧನಾನಿ ಕಾಲೇ|

03181037c ದಾರಾನವಾಪ್ಯ ಕ್ರತುಭಿರ್ಯಜಂತೇ|

         ತೇಷಾಮಯಂ ಚೈವ ಪರಶ್ಚ ಲೋಕಃ||

03181038a ಯೇ ನೈವ ವಿದ್ಯಾಂ ನ ತಪೋ ನ ದಾನಂ|

         ನ ಚಾಪಿ ಮೂಢಾಃ ಪ್ರಜನೇ ಯತಂತೇ|

03181038c ನ ಚಾಧಿಗಚ್ಚಂತಿ ಸುಖಾನ್ಯಭಾಗ್ಯಾಸ್|

         ತೇಷಾಮಯಂ ಚೈವ ಪರಶ್ಚ ನಾಸ್ತಿ||

ಪ್ರಥಮವಾಗಿ ಯಾರು ಧರ್ಮದಲ್ಲಿಯೇ ನಡೆಯುತ್ತಾರೋ, ಕಾಲಧರ್ಮಕ್ಕೆ ತಕ್ಕಂತೆ ಧನವನ್ನೂ ಪತ್ನಿಯನ್ನೂ ಪಡೆದು ಕ್ರತುಗಳನ್ನು ಯಾಜಿಸುತ್ತಾರೋ ಅವರ ಈ ಲೋಕ ಮತ್ತು ಪರಲೋಕ ಎರಡೂ ಶ್ರೇಯಸ್ಕರವಾಗಿರುತ್ತದೆ. ಯಾರಿಗೆ ವಿದ್ಯೆಯಿಲ್ಲವೋ, ತಪಸ್ಸಿಲ್ಲವೋ, ದಾನವಿಲ್ಲವೋ, ಮಕ್ಕಳನ್ನು ಪಡೆಯುವುದಿಲ್ಲವೋ ಅಂಥಹ ಮೂಢ ಅಭಾಗ್ಯರು ಇಲ್ಲಿಯೂ ಮತ್ತು ಅಲ್ಲಿಯೂ ಸುಖವನ್ನು ಪಡೆಯುವುದಿಲ್ಲ.

03181039a ಸರ್ವೇ ಭವಂತಸ್ತ್ವತಿವೀರ್ಯಸತ್ತ್ವಾ|

         ದಿವ್ಯೌಜಸಃ ಸಂಹನನೋಪಪನ್ನಾಃ|

03181039c ಲೋಕಾದಮುಷ್ಮಾದವನಿಂ ಪ್ರಪನ್ನಾಃ|

         ಸ್ವಧೀತವಿದ್ಯಾಃ ಸುರಕಾರ್ಯಹೇತೋಃ||

03181040a ಕೃತ್ವೈವ ಕರ್ಮಾಣಿ ಮಹಾಂತಿ ಶೂರಾಸ್|

         ತಪೋದಮಾಚಾರವಿಹಾರಶೀಲಾಃ|

03181040c ದೇವಾನೃಷೀನ್ಪ್ರೇತಗಣಾಂಶ್ಚ ಸರ್ವಾನ್|

         ಸಂತರ್ಪಯಿತ್ವಾ ವಿಧಿನಾ ಪರೇಣ||

03181041a ಸ್ವರ್ಗಂ ಪರಂ ಪುಣ್ಯಕೃತಾಂ ನಿವಾಸಂ|

         ಕ್ರಮೇಣ ಸಂಪ್ರಾಪ್ಸ್ಯಥ ಕರ್ಮಭಿಃ ಸ್ವೈಃ|

03181041c ಮಾ ಭೂದ್ವಿಶಂಕಾ ತವ ಕೌರವೇಂದ್ರ|

         ದೃಷ್ಟ್ವಾತ್ಮನಃ ಕ್ಲೇಶಮಿಮಂ ಸುಖಾರ್ಹ||

ಆದರೆ ನೀವೆಲ್ಲರೂ ಸುರರ ಕಾರ್ಯಹಿತವನ್ನು ತಿಳಿದುಕೊಂಡು ಬೇರೆಯೇ ಲೋಕದಿಂದ ಈ ಭೂಮಿಗೆ ಬಂದಿರುವವರು. ಅತೀವ ವೀರ್ಯಸತ್ವವುಳ್ಳವರು, ದಿವ್ಯ ತೇಜಸ್ಸುಳ್ಳವರು, ಮತ್ತು ಆರೋಗ್ಯ ದೇಹವನ್ನುಳ್ಳವರು. ಮಹಾ ಶೂರರ ಕೆಲಸಗಳನ್ನು ಮಾಡುವವರಿದ್ದೀರಿ. ತಪಸ್ಸು ಮತ್ತು ಆತ್ಮನಿಯಂತ್ರಣಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಿ. ದೇವತೆಗಳನ್ನು, ಋಷಿಗಳನ್ನು, ಪ್ರೇತಗಣಗಳೆಲ್ಲರನ್ನೂ ಶ್ರೇಷ್ಠವಿಧಿಗಳಿಂದ ತೃಪ್ತಿಗೊಳಿಸಿದ್ದೀರಿ. ಕ್ರಮೇಣವಾಗಿ ನಿಮ್ಮದೇ ಕರ್ಮಗಳಿಂದ ಪುಣ್ಯಕೃತರು ವಾಸಿಸುವ ಪರಮ ಸ್ವರ್ಗವನ್ನು ಹೊಂದುತ್ತೀರಿ. ಕೌರವೇಂದ್ರ! ಸುಖಾರ್ಹ! ನಿನ್ನ ಈ ಕ್ಲೇಶವನ್ನು ನೋಡಿ ಇದರಲ್ಲಿ ಶಂಕೆಯನ್ನಿಟ್ಟುಕೊಳ್ಳಬೇಡ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಏಕಶೀತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ನೂರಾಎಂಭತ್ತೊಂದನೆಯ ಅಧ್ಯಾಯವು.

Related image

Comments are closed.