ಆರಣ್ಯಕ ಪರ್ವ: ಅಜಗರ ಪರ್ವ
೧೭೫
ಯಮುನಾದ್ರಿಯಲ್ಲಿ ವನವನ್ನು ನೋಡಲು ಭೀಮನು ಹೊರಟಾಗ ಅವನನ್ನು ಅಜಗರವೊಂದು ಹಿಡಿದುದು; ಭೀಮನು ಹಾವಿನ ಬಲವನ್ನು ಮೀರಿಸದೇ ಹೋದುದು (೧-೨೧).
03175001 ಜನಮೇಜಯ ಉವಾಚ|
03175001a ಕಥಂ ನಾಗಾಯುತಪ್ರಾಣೋ ಭೀಮಸೇನೋ ಮಹಾಬಲಃ|
03175001c ಭಯಮಾಹಾರಯತ್ತೀವ್ರಂ ತಸ್ಮಾದಜಗರಾನ್ಮುನೇ||
ಜನಮೇಜಯನು ಹೇಳಿದನು: “ಮುನೇ! ಆನೆಯ ಹಿಂಡುಗಳಷ್ಟೇ ಮಹಾಬಲಶಾಲಿಯಾಗಿದ್ದ ಭೀಮಸೇನನು ಹೇಗೆ ತಾನೇ ಆ ಹೆಬ್ಬಾವಿನಿಂದ ಅತೀವ ಭಯವನ್ನು ಅನುಭವಿಸಿದನು?
03175002a ಪೌಲಸ್ತ್ಯಂ ಯೋಽಹ್ವಯದ್ಯುದ್ಧೇ ಧನದಂ ಬಲದರ್ಪಿತಃ|
03175002c ನಲಿನ್ಯಾಂ ಕದನಂ ಕೃತ್ವಾ ವರಾಣಾಂ ಯಕ್ಷರಕ್ಷಸಾಂ||
ಬಲದರ್ಪಿತನಾದ ಅವನು ಸರೋವರದಲ್ಲಿ ಕದನವಾಡಿ ಯಕ್ಷ-ರಾಕ್ಷಸರನ್ನೂ ಸಂಹರಿಸಿ, ಪುಲಸ್ತ್ಯನ ಮಗ ಧನದ ಕುಬೇರನನ್ನೂ ಯುದ್ಧಕ್ಕೆ ಅಹ್ವಾನಿಸಿದ್ದನು.
03175003a ತಂ ಶಂಸಸಿ ಭಯಾವಿಷ್ಟಮಾಪನ್ನಮರಿಕರ್ಷಣಂ|
03175003c ಏತದಿಚ್ಚಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ||
ಆ ಅರಿಕರ್ಷಣನು ಆಪತ್ತಿಗೊಳಗಾಗಿ ಭಯಾವಿಷ್ಟನಾಗಿದ್ದನೆಂದು ಹೇಳಿದೆಯಲ್ಲ, ಅದರ ಕುರಿತು ಕೇಳಲು ಬಯಸುತ್ತೇನೆ. ನನಗೆ ಕುತೂಹಲವಾಗಿದೆ.”
03175004 ವೈಶಂಪಾಯನ ಉವಾಚ|
03175004a ಬಹ್ವಾಶ್ಚರ್ಯೇ ವನೇ ತೇಷಾಂ ವಸತಾಮುಗ್ರಧನ್ವಿನಾಂ|
03175004c ಪ್ರಾಪ್ತಾನಾಮಾಶ್ರಮಾದ್ರಾಜನ್ರಾಜರ್ಷೇರ್ವೃಷಪರ್ವಣಃ||
03175005a ಯದೃಚ್ಚಯಾ ಧನುಷ್ಪಾಣಿರ್ಬದ್ಧಖಡ್ಗೋ ವೃಕೋದರಃ|
03175005c ದದರ್ಶ ತದ್ವನಂ ರಮ್ಯಂ ದೇವಗಂಧರ್ವಸೇವಿತಂ||
ವೈಶಂಪಾಯನನು ಹೇಳಿದನು: “ರಾಜನ್! ವೃಷಪರ್ವಣನ ಆಶ್ರಮದಿಂದ ಬಂದ ಆ ಉಗ್ರ ಧನ್ವಿಗಳು ಬಹಳ ಆಶ್ಚರ್ಯದ ಆ ವನದಲ್ಲಿ ವಾಸಿಸುತ್ತಿರಲು ವೃಕೋದರನು ಧನುಸ್ಸನ್ನು ಹಿಡಿದು ಖಡ್ಗವನ್ನು ಧರಿಸಿ ರಮ್ಯವಾದ ದೇವಗಂಧರ್ವ ಸೇವಿತ ಆ ವನವನ್ನು ನೋಡಲು ಹೊರಟನು.
03175006a ಸ ದದರ್ಶ ಶುಭಾನ್ದೇಶಾನ್ಗಿರೇರ್ಹಿಮವತಸ್ತದಾ|
03175006c ದೇವರ್ಷಿಸಿದ್ಧಚರಿತಾನಪ್ಸರೋಗಣಸೇವಿತಾನ್||
ದೇವತೆಗಳು, ಋಷಿಗಳು, ಸಿದ್ಧರು ಸಂಚರಿಸುವ, ಅಪ್ಸರಗಣಗಳು ಸೇವಿಸುವ ಹಿಮವತ್ಪರ್ವತದ ಶುಭ ಪ್ರದೇಶಗಳನ್ನು ಅವನು ನೋಡಿದನು.
03175007a ಚಕೋರೈಶ್ಚಕ್ರವಾಕೈಶ್ಚ ಪಕ್ಷಿಭಿರ್ಜೀವಜೀವಕೈಃ|
03175007c ಕೋಕಿಲೈರ್ಭೃಂಗರಾಜೈಶ್ಚ ತತ್ರ ತತ್ರ ವಿನಾದಿತಾನ್||
03175008a ನಿತ್ಯಪುಷ್ಪಫಲೈರ್ವೃಕ್ಷೈರ್ಹಿಮಸಂಸ್ಪರ್ಶಕೋಮಲೈಃ|
03175008c ಉಪೇತಾನ್ಬಹುಲಚ್ಚಾಯೈರ್ಮನೋನಯನನಂದನೈಃ||
ಎಲ್ಲ ಕಡೆಯೂ ಪಕ್ಷಿಗಳ - ಚಕ್ರವಾಕ, ಕಾಡುಕೋಳಿಗಳು, ಕೋಗಿಲೆಗಳು ಮತ್ತು ದುಂಬಿಗಳ - ಕೂಗು ಜೋರಾಗಿ ಕೇಳಿಬರುತ್ತಿತ್ತು. ನಿತ್ಯವೂ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳಿಂದ ತುಂಬಿತ್ತು.
03175009a ಸ ಸಂಪಶ್ಯನ್ಗಿರಿನದೀರ್ವೈಡೂರ್ಯಮಣಿಸನ್ನಿಭೈಃ|
03175009c ಸಲಿಲೈರ್ಹಿಮಸಂಸ್ಪರ್ಶೈರ್ಹಂಸಕಾರಂಡವಾಯುತೈಃ||
03175010a ವನಾನಿ ದೇವದಾರೂಣಾಂ ಮೇಘಾನಾಮಿವ ವಾಗುರಾಃ|
03175010c ಹರಿಚಂದನಮಿಶ್ರಾಣಿ ತುಂಗಕಾಲೀಯಕಾನ್ಯಪಿ||
03175011a ಮೃಗಯಾಂ ಪರಿಧಾವನ್ಸ ಸಮೇಷು ಮರುಧನ್ವಸು|
03175011c ವಿಧ್ಯನ್ಮೃಗಾಂ ಶರೈಃ ಶುದ್ಧೈಶ್ಚಚಾರ ಸುಮಹಾಬಲಃ||
ಅವನು ಗಿರಿಗಳಿಂದ ಹರಿದು ಬರುತ್ತಿರುವ, ವೈಡೂರ್ಯ ಮಣಿಯಂತೆ ಹೊಳೆಯುತ್ತಿರುವ ನದಿಗಳನ್ನು, ಬಾತುಕೋಳಿ ಮತ್ತು ಕಾರಂಡಗಳಿಂದ ಕೂಡಿದ ಹಿಮಕ್ಕೆ ತಾಗಿದ ಸರೋವರಗಳನ್ನು, ಮೋಡಗಳನ್ನು ತಡೆಹಿಡಿಯುವವೋ ಎಂದಿದ್ದ ದೇವದಾರುಗಳ ವನಗಳನ್ನು, ಕೆಂಪು ಮತ್ತು ಹಳದಿಬಣ್ಣಗಳ ಮಿಶ್ರಣದಂತೆ ತೋರುತ್ತಿದ್ದ ಗಿರಿಶಿಖರಗಳನ್ನು ನೋಡಿದನು. ತಪ್ಪಲು ಮತ್ತು ಮರುಭೂಮಿ ಪ್ರದೇಶಗಳಲ್ಲಿ ಮೃಗಗಳನ್ನು ಬೇಟೆಯಾಡುತ್ತಾ, ಜಿಂಕೆಗಳನ್ನು ವಿಷಗಳಿಲ್ಲದ ಬಾಣಗಳಿಂದ ಹೊಡೆಯುತ್ತಾ ಆ ಸುಮಹಾಬಲನು ತಿರುಗಾಡಿದನು.
03175012a ಸ ದದರ್ಶ ಮಹಾಕಾಯಂ ಭುಜಂಗಂ ಲೋಮಹರ್ಷಣಂ|
03175012c ಗಿರಿದುರ್ಗೇ ಸಮಾಪನ್ನಂ ಕಾಯೇನಾವೃತ್ಯ ಕಂದರಂ||
ಗಿರಿಕಣಿವೆಗೆ ಬಂದು ಅವನು ಕಂದರವನ್ನಿಡೀ ತನ್ನ ದೇಹದಿಂದ ಆವೃತವಾಗಿದ್ದ ಮೈನವಿರೇಳಿಸುವ, ಮಹಾಕಾಯ ಹಾವನ್ನು ಕಂಡನು.
03175013a ಪರ್ವತಾಭೋಗವರ್ಷ್ಮಾಣಂ ಭೋಗೈಶ್ಚಂದ್ರಾರ್ಕಮಂಡಲೈಃ|
03175013c ಚಿತ್ರಾಂಗಮಜಿನೈಶ್ಚಿತ್ರೈರ್ಹರಿದ್ರಾಸದೃಶಚ್ಚವಿಂ||
ಅದರ ಸುತ್ತು ಪರ್ವತದಷ್ಟೇ ಎತ್ತರವಾಗಿತ್ತು. ಅದರ ದೇಹವು ಬಣ್ಣಬಣ್ಣದ ಸೂರ್ಯ ಮತ್ತು ಚಂದ್ರಾಕಾರದ ಚುಕ್ಕೆಗಳಿಂದ ತುಂಬಿತ್ತು ಮತ್ತು ಒಟ್ಟಾರೆ ಅರಿಶಿಣ ಬಣ್ಣದ್ದಾಗಿತ್ತು.
03175014a ಗುಹಾಕಾರೇಣ ವಕ್ತ್ರೇಣ ಚತುರ್ದಂಷ್ಟ್ರೇಣ ರಾಜತಾ|
03175014c ದೀಪ್ತಾಕ್ಷೇಣಾತಿತಾಂರೇಣ ಲಿಹಂತಂ ಸೃಕ್ಕಿಣೀ ಮುಹುಃ||
03175015a ತ್ರಾಸನಂ ಸರ್ವಭೂತಾನಾಂ ಕಾಲಾಂತಕಯಮೋಪಮಂ|
03175015c ನಿಃಶ್ವಾಸಕ್ಷ್ವೇಡನಾದೇನ ಭರ್ತ್ಸಯಂತಮಿವ ಸ್ಥಿತಂ||
ಅದು ನಾಲ್ಕು ಕೋರೆದಾಡೆಗಳನ್ನುಳ್ಳ ಗುಹಾಕಾರದ ಬಾಯಿಯ ಸುತ್ತ ನೆಕ್ಕುತ್ತಿತ್ತು. ಅದರ ಉರಿಯುತ್ತಿದ್ದ ಕಣ್ಣುಗಳು ತಾಮ್ರದ ದಟ್ಟ ಕೆಂಪುಬಣ್ಣದ್ದಾಗಿದ್ದವು. ಕಾಲಾಂತಕ ಯಮನಂತಿದ್ದ ಅದು ಸರ್ವಭೂತಗಳಲ್ಲಿಯೂ ಭಯವನ್ನುಂಟುಮಾಡುತ್ತಿತ್ತು. ಅದರ ತೇವಯುಕ್ತ ಉಛ್ವಾಸ ನಿಶ್ವಾಸಗಳು ಎಲ್ಲರಿಗೂ ಭಯಂಕರವಾಗಿತ್ತು.
03175016a ಸ ಭೀಮಂ ಸಹಸಾಭ್ಯೇತ್ಯ ಪೃದಾಕುಃ ಕ್ಷುಧಿತೋ ಭೃಶಂ|
03175016c ಜಗ್ರಾಹಾಜಗರೋ ಗ್ರಾಹೋ ಭುಜಯೋರುಭಯೋರ್ಬಲಾತ್||
ತಂಬಾ ಹಸಿದಿದ್ದ, ಆಡುಗಳನ್ನು ಹಿಡಿದು ತಿನ್ನುವ ಆ ಹೆಬ್ಬಾವು ತಕ್ಷಣವೇ ಭೀಮನ ಮೇಲೆ ಆಕ್ರಮಣ ಮಾಡಿ ಅವನ ಎರಡೂ ಭುಜಗಳನ್ನು ಬಲವಾಗಿ ಹಿಡಿಯಿತು.
03175017a ತೇನ ಸಂಸ್ಪೃಷ್ಟಮಾತ್ರಸ್ಯ ಭಿಮಸೇನಸ್ಯ ವೈ ತದಾ|
03175017c ಸಂಜ್ಞಾ ಮುಮೋಹ ಸಹಸಾ ವರದಾನೇನ ತಸ್ಯ ಹ||
ಅದಕ್ಕೆ ತಗುಲಿದಾಕ್ಷಣವೇ ಭೀಮಸೇನನು ಸಂಜ್ಞೆಗಳನ್ನು ಕಳೆದುಕೊಂಡನು. ಅದಕ್ಕಿದ್ದ ವರದಾನವೇ ಹಾಗಿತ್ತು.
03175018a ದಶ ನಾಗಸಹಸ್ರಾಣಿ ಧಾರಯಂತಿ ಹಿ ಯದ್ಬಲಂ|
03175018c ತದ್ಬಲಂ ಭೀಮಸೇನಸ್ಯ ಭುಜಯೋರಸಮಂ ಪರೈಃ||
03175019a ಸ ತೇಜಸ್ವೀ ತಥಾ ತೇನ ಭುಜಗೇನ ವಶೀಕೃತಃ|
03175019c ವಿಸ್ಫುರಂ ಶನಕೈರ್ಭೀಮೋ ನ ಶಶಾಕ ವಿಚೇಷ್ಟಿತುಂ||
ಭೀಮಸೇನನ ಬಾಹುಗಳಿಗೆ, ಬೇರೆಯಾರಲ್ಲಿಯೂ ಇಲ್ಲದ ಹತ್ತು ಸಾವಿರ ಆನೆಗಳ ಬಲವಿದ್ದಿದ್ದರೂ ತೇಜಸ್ವಿ ಭೀಮನು ಆ ಹಾವಿನ ಹಿಡಿತಕ್ಕೆ ಸಿಕ್ಕಿ ನಿಧಾನವಾಗಿ ಅಲುಗಾಡಲಿಕ್ಕೂ ಸಮರ್ಥನಾಗದೇ ವಿಚೇಷ್ಟಿತನಾದನು.
03175020a ನಾಗಾಯುತಸಮಪ್ರಾಣಃ ಸಿಂಹಸ್ಕಂಧೋ ಮಹಾಭುಜಃ|
03175020c ಗೃಹೀತೋ ವ್ಯಜಹಾತ್ಸತ್ತ್ವಂ ವರದಾನೇನ ಮೋಹಿತಃ||
03175021a ಸ ಹಿ ಪ್ರಯತ್ನಮಕರೋತ್ತೀವ್ರಮಾತ್ಮವಿಮೋಕ್ಷಣೇ|
03175021c ನ ಚೈನಮಶಕದ್ವೀರಃ ಕಥಂ ಚಿತ್ಪ್ರತಿಬಾಧಿತುಂ||
ಆನೆಗಳ ಹಿಂಡಿನ ಪ್ರಮಾಣಕ್ಕೆ ಸಮನಾದ, ಸಿಂಹಸ್ಕಂಧ, ಮಹಾಭುಜನು ಅದರಿಂದ ಹಿಡಿಯಲ್ಪಟ್ಟು ಅದರ ವರದಾನದಂತೆ ಮೋಹಿತನಾಗಿ ಸತ್ವವನ್ನು ಕಳೆದುಕೊಂಡನು. ತನ್ನನ್ನು ಬಿಡಿಸಿಕೊಳ್ಳಲು ತುಂಬಾ ಪ್ರಯತ್ನಿಸಿದರೂ ಆ ವೀರನು ಹಾವಿನ ಬಲವನ್ನು ಮೀರಿಸದೇ ಹೋದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಅಜಗರಗ್ರಹಣೇ ಪಂಚಸಪ್ತತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಅಜಗರಗ್ರಹಣದಲ್ಲಿ ನೂರಾಎಪ್ಪತ್ತೈದನೆಯ ಅಧ್ಯಾಯವು.