ಆರಣ್ಯಕ ಪರ್ವ: ಅಜಗರ ಪರ್ವ
೧೭೪
ವೃಷಪರ್ವ ಮತ್ತು ಸುಬಾಹುಗಳ ರಾಜ್ಯಗಳನ್ನು ಭೇಟಿಮಾಡಿ ಯಮುನಾದ್ರಿಗೆ ಬಂದುದು (೧-೨೦). ಹನ್ನೆರಡನೆಯ ವರ್ಷ ಪುನಃ ದ್ವೈತವನಕ್ಕೆ ಬಂದುದು (೨೧-೨೪).
03174001 ವೈಶಂಪಾಯನ ಉವಾಚ|
03174001a ನಗೋತ್ತಮಂ ಪ್ರಸ್ರವಣೈರುಪೇತಂ|
ದಿಶಾಂ ಗಜೈಃ ಕಿನ್ನರಪಕ್ಷಿಭಿಶ್ಚ|
03174001c ಸುಖಂ ನಿವಾಸಂ ಜಹತಾಂ ಹಿ ತೇಷಾಂ|
ನ ಪ್ರೀತಿರಾಸೀದ್ ಭರತರ್ಷಭಾಣಾಂ||
ವೈಶಂಪಾಯನನು ಹೇಳಿದನು: “ಝರಿಗಳಿಂದ ಕೂಡಿದ್ದ, ದಿಗ್ಗಜಗಳಿಂದ, ಕಿನ್ನರರಿಂದ ಮತ್ತು ಪಕ್ಷಿಗಳಿಂದ ಕೂಡಿದ್ದ, ಸುಖನಿವಾಸವಾಗಿದ್ದ ಆ ಉತ್ತಮ ಪರ್ವತವನ್ನು ಬಿಟ್ಟುಬರುವಾಗ ಭರತರ್ಷಭರು ಸಂತಸಗೊಳ್ಳಲಿಲ್ಲ.
03174002a ತತಸ್ತು ತೇಷಾಂ ಪುನರೇವ ಹರ್ಷಃ|
ಕೈಲಾಸಮಾಲೋಕ್ಯ ಮಹಾನ್ಬಭೂವ|
03174002c ಕುಬೇರಕಾಂತಂ ಭರತರ್ಷಭಾಣಾಂ|
ಮಹೀಧರಂ ವಾರಿಧರಪ್ರಕಾಶಂ||
ಆದರೆ ಮರುಕ್ಷಣದಲ್ಲಿಯೇ ಕುಬೇರನಿಗೆ ಬಹುಪ್ರಿಯವಾಗಿದ್ದ ಕಪ್ಪಾದ ಮೋಡಗಳಿಂದ ಪ್ರಕಾಶಮಾನವಾಗಿ ಕಾಣುತ್ತಿದ್ದ ಕೈಲಾಸಪರ್ವತವನ್ನು ಕಂಡೊಡನೆಯೇ ಅವರ ಮನಸ್ಸು ಆಹ್ಲಾದಿತವಾಯಿತು.
03174003a ಸಮುಚ್ಚ್ರಯಾನ್ಪರ್ವತಸನ್ನಿರೋಧಾನ್|
ಗೋಷ್ಠಾನ್ಗಿರೀಣಾಂ ಗಿರಿಸೇತುಮಾಲಾಃ|
03174003c ಬಹೂನ್ಪ್ರಪಾತಾಂಶ್ಚ ಸಮೀಕ್ಷ್ಯ ವೀರಾಃ|
ಸ್ಥಲಾನಿ ನಿಮ್ನಾನಿ ಚ ತತ್ರ ತತ್ರ||
ಆ ವೀರರು ಪರ್ವತದ ದಾರಿಗಳನ್ನೂ, ಭಾರೀ ಕಣಿವೆಗಳನ್ನೂ, ಗುಡ್ಡಗಳ ರಾಶಿಯನ್ನೂ, ಗಿರಿಗಳ ನಡುವಿನ ಸೇತುವೆಗಳನ್ನೂ, ಬಹಳಷ್ಟು ಪ್ರಪಾತಗಳನ್ನೂ, ಮತ್ತು ಅಲ್ಲಲ್ಲಿ ತಗ್ಗಿನ ಪ್ರದೇಶಗಳನ್ನೂ ನೋಡಿದರು.
03174004a ತಥೈವ ಚಾನ್ಯಾನಿ ಮಹಾವನಾನಿ|
ಮೃಗದ್ವಿಜಾನೇಕಪಸೇವಿತಾನಿ|
03174004c ಆಲೋಕಯಂತೋಽಭಿಯಯುಃ ಪ್ರತೀತಾಸ್|
ತೇ ಧನ್ವಿನಃ ಖಡ್ಗಧರಾ ನರಾಗ್ರ್ಯಾಃ||
ಹಾಗೆಯೇ ಆ ನರವ್ಯಾಘ್ರರು ಧನುಸ್ಸು ಖಡ್ಗಗಳನ್ನು ಧರಿಸಿ ಅತಿ ವಿಶ್ವಾಸದಿಂದ ಇತರ ಮಹಾವನಗಳನ್ನೂ, ಮೃಗಗಳನ್ನೂ, ಆನೆಗಳನ್ನೂ ನೋಡುತ್ತಾ ಮುಂದುವರೆದರು.
03174005a ವನಾನಿ ರಮ್ಯಾಣಿ ಸರಾಂಸಿ ನದ್ಯೋ|
ಗುಹಾ ಗಿರೀಣಾಂ ಗಿರಿಗಃವರಾಣಿ|
03174005c ಏತೇ ನಿವಾಸಾಃ ಸತತಂ ಬಭೂವುರ್|
ನಿಶಾನಿಶಂ ಪ್ರಾಪ್ಯ ನರರ್ಷಭಾಣಾಂ||
ಆ ನರರ್ಷಭರು ರಾತ್ರಿಯ ನಂತರ ರಾತ್ರಿಗಳಲ್ಲಿ ವನಗಳಲ್ಲಿ, ರಮ್ಯ ಸರೋವರ-ನದೀ ದಡಗಳಲ್ಲಿ, ಗಿರಿಗಳಲ್ಲಿ, ಗಿರಿಕಂದರಗಳಲ್ಲಿ ಶಿಬಿರಗಳನ್ನು ನಿರ್ಮಿಸಿ ವಾಸಿಸುತ್ತಾ ಮುಂದುವರೆದರು.
03174006a ತೇ ದುರ್ಗವಾಸಂ ಬಹುಧಾ ನಿರುಷ್ಯ|
ವ್ಯತೀತ್ಯ ಕೈಲಾಸಮಚಿಂತ್ಯರೂಪಂ|
03174006c ಆಸೇದುರತ್ಯರ್ಥಮನೋರಮಂ ವೈ|
ತಮಾಶ್ರಮಾಗ್ರ್ಯಂ ವೃಷಪರ್ವಣಸ್ತೇ||
ಹಲವು ರಾತ್ರಿಗಳನ್ನು ಗಿರಿದುರ್ಗಗಳಲ್ಲಿ ಕಳೆಯುತ್ತಾ ಅಚಿಂತ್ಯ ರೂಪಿ ಕೈಲಾಸವನ್ನು ದಾಟಿ ಅವರು ಸುಂದರವೋ ಮನೋರಮವೂ ಆಗಿದ್ದ ವೃಷಪರ್ವಣನ ಆಶ್ರಮವನ್ನು ತಲುಪಿದರು.
03174007a ಸಮೇತ್ಯ ರಾಜ್ಞಾ ವೃಷಪರ್ವಣಸ್ತೇ|
ಪ್ರತ್ಯರ್ಚಿತಾಸ್ತೇನ ಚ ವೀತಮೋಹಾಃ|
03174007c ಶಶಂಸಿರೇ ವಿಸ್ತರಶಃ ಪ್ರವಾಸಂ|
ಶಿವಂ ಯಥಾವದ್ವೃಷಪರ್ವಣಸ್ತೇ||
ರಾಜ ವೃಷಪರ್ವನನ್ನು ಭೇಟಿಮಾಡಿ, ಅವನಿಂದ ಸತ್ಕಾರಗೊಂಡು ಆಯಾಸವನ್ನು ಕಳೆದುಕೊಂಡು ಅವರು ವೃಷಪರ್ವನಿಗೆ ವಿಸ್ತಾರವಾಗಿ ಮತ್ತು ಯಥಾವತ್ತಾಗಿ ಅವರ ಮಂಗಳ ಪ್ರವಾಸದ ಕುರಿತು ಹೇಳಿಕೊಂಡರು.
03174008a ಸುಖೋಷಿತಾಸ್ತತ್ರ ತ ಏಕರಾತ್ರಂ|
ಪುಣ್ಯಾಶ್ರಮೇ ದೇವಮಹರ್ಷಿಜುಷ್ಟೇ|
03174008c ಅಭ್ಯಾಯಯುಸ್ತೇ ಬದರೀಂ ವಿಶಾಲಾಂ|
ಸುಖೇನ ವೀರಾಃ ಪುನರೇವ ವಾಸಂ||
ದೇವ-ಮಹರ್ಷಿಗಳು ಅರಸುವ ಅವನ ಆ ಪುಣ್ಯಾಶ್ರಮದಲ್ಲಿ ಒಂದು ರಾತ್ರಿಯನ್ನು ಸುಖವಾಗಿ ಕಳೆದು ಆ ವೀರರು ವಿಶಾಲ ಬದರಿಯಲ್ಲಿ ಪುನಃ ವಾಸ್ತವ್ಯವನ್ನು ಮಾಡಿದರು.
03174009a ಊಷುಸ್ತತಸ್ತತ್ರ ಮಹಾನುಭಾವಾ|
ನಾರಾಯಣಸ್ಥಾನಗತಾ ನರಾಗ್ರ್ಯಾಃ|
03174009c ಕುಬೇರಕಾಂತಾಂ ನಲಿನೀಂ ವಿಶೋಕಾಃ|
ಸಂಪಶ್ಯಮಾನಾಃ ಸುರಸಿದ್ಧಜುಷ್ಟಾಂ||
ಅನಂತರ ಆ ಮಹಾನುಭಾವ ನರವ್ಯಾಘ್ರರು ನಾರಾಯಣಸ್ಥಾನಕ್ಕೆ ಹೋಗಿ ಅಲ್ಲಿ ಕುಬೇರನಿಗೆ ಇಷ್ಟವಾದ ಶೋಕವನ್ನು ನಾಶಪಡಿಸಬಲ್ಲ, ಸುರರು ಮತ್ತು ಸಿದ್ಧರು ಬಯಸುವ ಸರೋವರವನ್ನು ನೋಡಿದರು.
03174010a ತಾಂ ಚಾಥ ದೃಷ್ಟ್ವಾ ನಲಿನೀಂ ವಿಶೋಕಾಃ|
ಪಾಂಡೋಃ ಸುತಾಃ ಸರ್ವನರಪ್ರವೀರಾಃ|
03174010c ತೇ ರೇಮಿರೇ ನಂದನವಾಸಮೇತ್ಯ|
ದ್ವಿಜರ್ಷಯೋ ವೀತಭಯಾ ಯಥೈವ||
ಆ ಸರೋವರವನ್ನು ನೋಡಿ ನರಪ್ರವೀರ ಪಾಂಡುಸುತರೆಲ್ಲರೂ ನಂದನವನವನ್ನು ಸೇರಿದ ದ್ವಿಜರ್ಷಿಗಳು ಹೇಗೆ ವೀತಭಯರಾಗುತ್ತಾರೋ ಹಾಗೆ ವಿಶೋಕರಾಗಿ ರಮಿಸಿದರು.
03174011a ತತಃ ಕ್ರಮೇಣೋಪಯಯುರ್ನೃವೀರಾ|
ಯಥಾಗತೇನೈವ ಪಥಾ ಸಮಗ್ರಾಃ|
03174011c ವಿಹೃತ್ಯ ಮಾಸಂ ಸುಖಿನೋ ಬದರ್ಯಾಂ|
ಕಿರಾತರಾಜ್ಞೋ ವಿಷಯಂ ಸುಬಾಹೋಃ||
ಬದರಿಯಲ್ಲಿ ಅವರು ಒಂದು ತಿಂಗಳು ಸುಖದಿಂದ ಕಳೆದರು. ನಂತರ ಆ ವೀರರು ಕಿರಾತರಾಜ ಸುಬಾಹುವಿನ ರಾಜ್ಯವನ್ನು ಕ್ರಮೇಣವಾಗಿ ಹಿಂದೆ ಬಂದಿದ್ದ ದಾರಿಯನ್ನೇ ಅನುಸರಿಸಿ ಬಂದು ಸೇರಿದರು.
03174012a ಚೀನಾಂಸ್ತುಖಾರಾನ್ದರದಾನ್ಸದಾರ್ವಾನ್|
ದೇಶಾನ್ಕುಣಿಂದಸ್ಯ ಚ ಭೂರಿರತ್ನಾನ್|
03174012c ಅತೀತ್ಯ ದುರ್ಗಂ ಹಿಮವತ್ಪ್ರದೇಶಂ|
ಪುರಂ ಸುಬಾಹೋರ್ದದೃಶುರ್ನೃವೀರಾಃ||
ಆ ವೀರರು ರತ್ನಭರಿತ ಚೀನ, ತುಖಾರ, ದರದ, ದಾರ್ವ ಮತ್ತು ಕುಣಿಂದ ದೇಶಗಳನ್ನು ದಾಟಿ, ಹಿಮಾಲಯದ ದುರ್ಗದ ಮೂಲಕ ಸುಬಾಹುವಿನ ಪುರವನ್ನು ತಲುಪಿದರು.
03174013a ಶ್ರುತ್ವಾ ಚ ತಾನ್ಪಾರ್ಥಿವಪುತ್ರಪೌತ್ರಾನ್|
ಪ್ರಾಪ್ತಾನ್ಸುಬಾಹುರ್ವಿಷಯೇ ಸಮಗ್ರಾನ್|
03174013c ಪ್ರತ್ಯುದ್ಯಯೌ ಪ್ರೀತಿಯುತಃ ಸ ರಾಜಾ|
ತಂ ಚಾಭ್ಯನಂದನ್ವೃಷಭಾಃ ಕುರೂಣಾಂ||
ಆ ರಾಜಪುತ್ರರೂ ಪೌತ್ರರೂ ತನ್ನ ರಾಜ್ಯಕ್ಕೆ ಆಗಮಿಸಿದ್ದಾರೆಂದು ಕೇಳಿದ ರಾಜ ಸುಬಾಹುವು ಸಂತೋಷದಿಂದ ಹೊರಬಂದು ಸ್ವಾಗತಿಸಿದನು ಮತ್ತು ಕುರುವೃಷಭರು ಅವನನ್ನು ಅಭಿನಂದಿಸಿದರು.
03174014a ಸಮೇತ್ಯ ರಾಜ್ಞಾ ತು ಸುಬಾಹುನಾ ತೇ|
ಸೂತೈರ್ವಿಶೋಕಪ್ರಮುಖೈಶ್ಚ ಸರ್ವೈಃ|
03174014c ಸಹೇಂದ್ರಸೇನೈಃ ಪರಿಚಾರಕೈಶ್ಚ|
ಪೌರೋಗವೈರ್ಯೇ ಚ ಮಹಾನಸಸ್ಥಾಃ||
ಅವರು ರಾಜ ಸುಬಾಹುವನ್ನು, ಮತ್ತು ವಿಶೋಕನ ನಾಯಕತ್ವದಲ್ಲಿದ್ದ ಎಲ್ಲ ಸೂತರನ್ನೂ, ಇಂದ್ರಸೇನನೊಂದಿಗೆ ಪರಿಚಾರಕರನ್ನೂ, ಅಡುಗೆ ಭಟ್ಟರನ್ನೂ ಮತ್ತು ಅವರ ಮೇಲ್ವಿಚಾರಕರನ್ನೂ ಭೇಟಿಮಾಡಿದರು.
03174015a ಸುಖೋಷಿತಾಸ್ತತ್ರ ತ ಏಕರಾತ್ರಂ|
ಸೂತಾನುಪಾದಾಯ ರಥಾಂಶ್ಚ ಸರ್ವಾನ್|
03174015c ಘಟೋತ್ಕಚಂ ಸಾನುಚರಂ ವಿಸೃಜ್ಯ|
ತತೋಽಭ್ಯಯುರ್ಯಾಮುನಮದ್ರಿರಾಜಂ||
ಅವರು ಅಲ್ಲಿ ಒಂದು ರಾತ್ರಿಯನ್ನು ಸುಖದಿಂದ ಕಳೆದರು. ಘಟೋತ್ಕಚ ಮತ್ತು ಅವನ ಅನುಚರರನ್ನು ಕಳುಹಿಸಿ ಎಲ್ಲ ರಥಗಳಿಗೂ ಸೂತರನ್ನು ಕೂಡಿಸಿಕೊಂಡು ಯಮುನಾದ್ರಿಯ ಕಡೆ ಹೊರಟರು.
03174016a ತಸ್ಮಿನ್ಗಿರೌ ಪ್ರಸ್ರವಣೋಪಪನ್ನೇ|
ಹಿಮೋತ್ತರೀಯಾರುಣಪಾಂಡುಸಾನೌ|
03174016c ವಿಶಾಖಯೂಪಂ ಸಮುಪೇತ್ಯ ಚಕ್ರುಸ್|
ತದಾ ನಿವಾಸಂ ಪುರುಷಪ್ರವೀರಾಃ||
ಹರಿಯುತ್ತಿರುವ ಝರಿಗಳ ಮತ್ತು ಕೆಂಪು ಮತ್ತು ಬಿಳಿಬಣ್ಣಗಳ, ಉತ್ತರೀಯದಂತೆ ಹಿಮದಿಂದ ಆಚ್ಛಾದಿತವಾದ ಆ ಗಿರಿಯಮೇಲೆ ವಿಶಾಲವೆಂಬ ಯೂಪವನ್ನು ತಲುಪಿ ಅಲ್ಲಿ ಪುರುಷ ಪ್ರವೀರರು ನಿವಾಸಸ್ಥಾನವನ್ನು ರಚಿಸಿದರು.
03174017a ವರಾಹನಾನಾಮೃಗಪಕ್ಷಿಜುಷ್ಟಂ|
ಮಹದ್ವನಂ ಚೈತ್ರರಥಪ್ರಕಾಶಂ|
03174017c ಶಿವೇನ ಯಾತ್ವಾ ಮೃಗಯಾಪ್ರಧಾನಾಃ|
ಸಂವತ್ಸರಂ ತತ್ರ ವನೇ ವಿಜಃರುಃ||
ಚೈತ್ರರಥನ ವನದಂತಿರುವ ಆ ಮಹಾವನದಲ್ಲಿ ಹಂದಿ ಮತ್ತು ನಾನಾ ಮೃಗಪಕ್ಷಿಗಳ ಸಂಕುಲವಿತ್ತು. ಅವರು ಏನೂ ಆತಂಕವಿಲ್ಲದೆ ಮೃಗಗಳನ್ನು ಬೇಟೆಯಾಡುತ್ತಿದ್ದರು. ಹೀಗೆ ಆ ವನದಲ್ಲಿ ಒಂದು ವರ್ಷವನ್ನು ಕಳೆದರು.
03174018a ತತ್ರಾಸಸಾದಾತಿಬಲಂ ಭುಜಂಗಂ|
ಕ್ಷುಧಾರ್ದಿತಂ ಮೃತ್ಯುಮಿವೋಗ್ರರೂಪಂ|
03174018c ವೃಕೋದರಃ ಪರ್ವತಕಂದರಾಯಾಂ|
ವಿಷಾದಮೋಹವ್ಯಥಿತಾಂತರಾತ್ಮಾ||
ಅಲ್ಲಿಯೇ ವೃಕೋದರನು ಪರ್ವತ ಕಂದರದಲ್ಲಿ ಹಸಿವಿನಿಂದ ಬಳಲಿದ್ದ, ಅತಿಬಲಶಾಲಿ, ಮೃತ್ಯುವಿನಂತೆ ಉಗ್ರವಾಗಿ ತೋರುತ್ತಿದ್ದ, ಅಂತರಾತ್ಮವು ವಿಷಾದ ಮತ್ತು ಮೋಹಗಳಿಂದ ವ್ಯತಿಥವಾಗಿದ್ದ ಸರ್ಪವನ್ನು ಕಂಡನು.
03174019a ದ್ವೀಪೋಽಭವದ್ಯತ್ರ ವೃಕೋದರಸ್ಯ|
ಯುಧಿಷ್ಠಿರೋ ಧರ್ಮಭೃತಾಂ ವರಿಷ್ಠಃ|
03174019c ಅಮೋಕ್ಷಯದ್ಯಸ್ತಮನಂತತೇಜಾ|
ಗ್ರಾಹೇಣ ಸಂವೇಷ್ಟಿತಸರ್ವಗಾತ್ರಂ||
ಅಲ್ಲಿದ್ದ ಒಂದು ದ್ವೀಪದಲ್ಲಿ ಧರ್ಮಭೃತರಲ್ಲಿ ವರಿಷ್ಠ, ಅನಂತ ತೇಜಸ್ವಿ ಯುಧಿಷ್ಠಿರನು ದೇಹದ ಎಲ್ಲ ಅಂಗಾಂಗಗಳೂ ಹಿಡಿದವನ ಹಿಡಿತಕ್ಕೆ ಸಿಕ್ಕಾಗ ಅವನನ್ನು ಬಿಡುಗಡೆ ಮಾಡಿಸಿದನು.
03174020a ತೇ ದ್ವಾದಶಂ ವರ್ಷಮಥೋಪಯಾಂತಂ|
ವನೇ ವಿಹರ್ತುಂ ಕುರವಃ ಪ್ರತೀತಾಃ|
03174020c ತಸ್ಮಾದ್ವನಾಚ್ಚೈತ್ರರಥಪ್ರಕಾಶಾಚ್|
ಚ್ರಿಯಾ ಜ್ವಲಂತಸ್ತಪಸಾ ಚ ಯುಕ್ತಾಃ||
ಅವರು ಅಲ್ಲಿ ಹನ್ನೆರಡನೆಯ ವರ್ಷವು ಉರುಳಿ ಬರಲು ವನದಲ್ಲಿ ವಿಹರಿಸುತ್ತಾ ಕಳೆದರು. ಅನಂತರ ತಪಸ್ಸು ಮತ್ತು ಶ್ರೀಯಿಂದ ಬೆಳಗುತ್ತಾ ಚೈತ್ರರಥನ ವನದಂತಿದ್ದ ಆ ವನವನ್ನು ಬಿಟ್ಟರು.
03174021a ತತಶ್ಚ ಯಾತ್ವಾ ಮರುಧನ್ವಪಾರ್ಶ್ವಂ|
ಸದಾ ಧನುರ್ವೇದರತಿಪ್ರಧಾನಾಃ|
03174021c ಸರಸ್ವತೀಮೇತ್ಯ ನಿವಾಸಕಾಮಾಃ|
ಸರಸ್ತತೋ ದ್ವೈತವನಂ ಪ್ರತೀಯುಃ||
ಸದಾ ಧನುರ್ವೇದವನ್ನೇ ಅತಿ ಪ್ರಧಾನವಾಗಿಟ್ಟುಕೊಂಡಿದ್ದ ಅವರು ಅನಂತರ ಮರುಭೂಮಿಯ ಪಕ್ಕಕ್ಕೆ ಹೋಗಿ, ಅಲ್ಲಿಂದ ಸರಸ್ವತೀ ತೀರಕ್ಕೆ ಬಂದು ಅಲ್ಲಿ ದ್ವೈತವನದಲ್ಲಿದ್ದ ಸರೋವರದ ಬಳಿ ಬಂದರು.
03174022a ಸಮೀಕ್ಷ್ಯ ತಾನ್ದ್ವೈತವನೇ ನಿವಿಷ್ಟಾನ್|
ನಿವಾಸಿನಸ್ತತ್ರ ತತೋಽಭಿಜಗ್ಮುಃ|
03174022c ತಪೋದಮಾಚಾರಸಮಾಧಿಯುಕ್ತಾಸ್|
ತೃಣೋದಪಾತ್ರಾಹರಣಾಶ್ಮಕುಟ್ಟಾಃ||
ದ್ವೈತವನಕ್ಕೆ ಅವರ ಬರವನ್ನು ಕಂಡು ಅಲ್ಲಿರುವ ತಪಸ್ಸು, ದಮ, ಆಚಾರ ಮತ್ತು ಸಮಾಧಿಯುಕ್ತ ನಿವಾಸಿಗಳು ಹುಲ್ಲು, ನೀರು, ಪಾತ್ರ, ಆಹಾರ, ಮತ್ತು ಒರಲುಗಳೊಂದಿಗೆ ಆಗಮಿಸಿದರು.
03174023a ಪ್ಲಕ್ಷಾಕ್ಷರೌಹೀತಕವೇತಸಾಶ್ಚ|
ಸ್ನುಹಾ ಬದರ್ಯಃ ಖದಿರಾಃ ಶಿರೀಷಾಃ|
03174023c ಬಿಲ್ವೇಂಗುದಾಃ ಪೀಲುಶಮೀಕರೀರಾಃ|
ಸರಸ್ವತೀತೀರರುಹಾ ಬಭೂವುಃ||
ಅತ್ತಿಯ ಮರಗಳು, ರುದ್ರಾಕ್ಷದ ಮರಗಳು, ರೋಹೀತಕಗಳು, ಬಿದಿರು, ಬದರಿ, ಖದಿರ, ಶಿರೀಷ, ಬಿಲ್ವ, ಇಂಗುದ, ಪೀಲೂ, ಶಮೀಕರೀ ಮೊದರಾದ ವೃಕ್ಷಗಳು ಸರಸ್ವತೀ ತೀರದಲ್ಲಿ ತುಂಬಿಕೊಂಡಿದ್ದವು.
03174024a ತಾಂ ಯಕ್ಷಗಂಧರ್ವಮಹರ್ಷಿಕಾಂತಾಂ|
ಆಯಾಗಭೂತಾಮಿವ ದೇವತಾನಾಂ|
03174024c ಸರಸ್ವತೀಂ ಪ್ರೀತಿಯುತಾಶ್ಚರಂತಃ|
ಸುಖಂ ವಿಜಹ್ರುರ್ನರದೇವಪುತ್ರಾಃ||
ಆ ರಾಜಪುತ್ರರು ಯಕ್ಷ, ಗಂಧರ್ವ ಮತ್ತು ಮಹರ್ಷಿಗಳ ಪ್ರೀತಿಪಾತ್ರರಾಗಿ ದೇವತೆಗಳದ್ದೇ ಯಾಗಭೂಮಿಯಾಗಿದ್ದ ಆ ಸರಸ್ವತೀ ತೀರದಲ್ಲಿ ಸಂತೋಷದಿಂದ ಸಂಚರಿಸುತ್ತಾ ಸುಖವಾಗಿ ಕಾಲಕಳೆದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಪುನರ್ದ್ವೈತವನಪ್ರವೇಶೇ ಚತುಃಸಪ್ತತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಪುನರ್ದ್ವೈತವನಪ್ರವೇಶದಲ್ಲಿ ನೂರಾಎಪ್ಪತ್ನಾಲ್ಕನೆಯ ಅಧ್ಯಾಯವು.