ಆರಣ್ಯಕ ಪರ್ವ: ಕೈರಾತ ಪರ್ವ
೧೬
ಸೌಭವಧೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಕೇಳಲು ಕೃಷ್ಣನು ಸೌಭನು ದ್ವಾರಕೆಯನ್ನು ಆಕ್ರಮಣ ಮಾಡಿದುದರ ಕುರಿತು ಹೇಳುವುದು (೧-೪). ದ್ವಾರಕೆಯ ಸುರಕ್ಷತೆಯ ವರ್ಣನೆ (೫-೨೩).
03016001 ಯುಧಿಷ್ಠಿರ ಉವಾಚ|
03016001a ವಾಸುದೇವ ಮಹಾಬಾಹೋ ವಿಸ್ತರೇಣ ಮಹಾಮತೇ|
03016001c ಸೌಭಸ್ಯ ವಧಮಾಚಕ್ಷ್ವ ನ ಹಿ ತೃಪ್ಯಾಮಿ ಕಥ್ಯತಃ||
ಯುಧಿಷ್ಠಿರನು ಹೇಳಿದನು: “ವಾಸುದೇವ! ಮಹಾಬಾಹೋ! ಮಹಾಮತೇ! ನೀನು ಹೇಳಿದುದರಿಂದ ತೃಪ್ತನಾಗಿಲ್ಲ. ಸೌಭನ ವಧೆಯನ್ನು ವಿಸ್ತಾರವಾಗಿ ಹೇಳು!”
03016002 ವಾಸುದೇವ ಉವಾಚ|
03016002a ಹತಂ ಶ್ರುತ್ವಾ ಮಹಾಬಾಹೋ ಮಯಾ ಶ್ರೌತಶ್ರವಂ ನೃಪಂ|
03016002c ಉಪಾಯಾದ್ಭರತಶ್ರೇಷ್ಠ ಶಾಲ್ವೋ ದ್ವಾರವತೀಂ ಪುರೀಂ||
ವಾಸುದೇವನು ಹೇಳಿದನು: “ಭರತಶ್ರೇಷ್ಠ! ಮಹಾಬಾಹು ನೃಪ ಶ್ರೌತಶ್ರವನು ನನ್ನಿಂದ ಹತನಾದನು ಎಂದು ಕೇಳಿ ಶಾಲ್ವನು ಉಪಾಯದಿಂದ ದ್ವಾರವತೀ ಪುರಕ್ಕೆ ಧಾಳಿಯಿಟ್ಟನು.
03016003a ಅರುಂಧತ್ತಾಂ ಸುದುಷ್ಟಾತ್ಮಾ ಸರ್ವತಃ ಪಾಂಡುನಂದನ|
03016003c ಶಾಲ್ವೋ ವೈಹಾಯಸಂ ಚಾಪಿ ತತ್ಪುರಂ ವ್ಯೂಹ್ಯ ವಿಷ್ಠಿತಃ||
ಪಾಂಡುನಂದನ! ಆ ಸುದುಷ್ಟಾತ್ಮ ಶಾಲ್ವನು ಎಲ್ಲ ಕಡೆಯಿಂದಲೂ ಮತ್ತು ಆಕಾಶದಿಂದಲೂ ತನ್ನ ಸೇನೆಯೊಂದಿಗೆ ಪುರವನ್ನು ಮುತ್ತಿಗೆ ಹಾಕಿದನು.
03016004a ತತ್ರಸ್ಥೋಽಥ ಮಹೀಪಾಲೋ ಯೋಧಯಾಮಾಸ ತಾಂ ಪುರೀಂ|
03016004c ಅಭಿಸಾರೇಣ ಸರ್ವೇಣ ತತ್ರ ಯುದ್ಧಮವರ್ತತ||
ಪುರವನ್ನು ಹಿಡಿದಿಟ್ಟು ನಿಂತ ಆ ಮಹೀಪಾಲನು ಯುದ್ಧಮಾಡಿದನು. ಅಲ್ಲಿ ಎಲ್ಲಕಡೆಯಲ್ಲಿಯೂ ಎಲ್ಲರ ನಡುವೆಯೂ ಯುದ್ಧವು ನಡೆಯಿತು.
03016005a ಪುರೀ ಸಮಂತಾದ್ವಿಹಿತಾ ಸಪತಾಕಾ ಸತೋರಣಾ|
03016005c ಸಚಕ್ರಾ ಸಹುಡಾ ಚೈವ ಸಯಂತ್ರಖನಕಾ ತಥಾ||
03016006a ಸೋಪತಲ್ಪಪ್ರತೋಲೀಕಾ ಸಾಟ್ಟಾಟ್ಟಾಲಕಗೋಪುರಾ|
03016006c ಸಕಚಗ್ರಹಣೀ ಚೈವ ಸೋಲ್ಕಾಲಾತಾವಪೋಥಿಕಾ||
03016007a ಸೋಷ್ಟ್ರಿಕಾ ಭರತಶ್ರೇಷ್ಠ ಸಭೇರೀಪಣವಾನಕಾ|
03016007c ಸಮಿತ್ತೃಣಕುಶಾ ರಾಜನ್ಸಶತಘ್ನೀಕಲಾಂಗಲಾ||
03016008a ಸಭುಶುಂಡ್ಯಶ್ಮಲಗುಡಾ ಸಾಯುಧಾ ಸಪರಶ್ವಧಾ|
03016008c ಲೋಹಚರ್ಮವತೀ ಚಾಪಿ ಸಾಗ್ನಿಃ ಸಹುಡಶೃಂಗಿಕಾ||
03016009a ಶಾಸ್ತ್ರದೃಷ್ಟೇನ ವಿಧಿನಾ ಸಂಯುಕ್ತಾ ಭರತರ್ಷಭ|
ರಾಜನ್! ಭರತಶ್ರೇಷ್ಠ! ಭರತರ್ಷಭ! ಆ ಪುರಿಯು ಎಲ್ಲೆಲ್ಲಿಯೂ ಸುರಕ್ಷತೆಯ ತಯಾರಿ ನಡೆಸಿತ್ತು - ಎಲ್ಲೆಡೆಯೂ ಪತಾಕೆಗಳು, ತೋರಣಗಳು, ಚಕ್ರಗಳು, ಪಹರೆಗಳು, ಶೌಚಾಲಯಗಳು, ಯಂತ್ರಗಳು, ಕಂದಕಗಳು, ಬೇಕಾದಲ್ಲಿ ಸಾಗಿಸಬಲ್ಲ ಮಂಚಗಳು, ಅಟ್ಟಗಳು, ಏಣಿಗಳು, ಗೋಪುರಗಳು, ಕೂದಲು ಎಳೆಯುವ ಸಾಧನಗಳು, ದೀವಟಿಗೆ ಮತ್ತು ಬೆಂಕಿಯ ಚಂಡುಗಳನ್ನು ಹಾರಿಸಬಲ್ಲ ಚಾಟಿಬಿಲ್ಲುಗಳು, ಒಂಟೆಗಳು, ಭೇರಿ-ನಗಾರಿಗಳು, ಉರಿಸಲು ಕಟ್ಟಿಗೆ ಮತ್ತು ಹುಲ್ಲು, ನೂರಾರು ಕೊಲ್ಲುವ ಆಯುಧಗಳು - ಕಲ್ಲುಗಳು, ಬೆಂಕಿಚಂಡುಗಳು, ಕಬ್ಬಿಣದ ಮತ್ತು ಚರ್ಮದ ಆಯುಧಗಳು, ಕೊಡಲಿಗಳು, ಮಲವನ್ನು ಎಸೆಯುವವರು ಹೀಗೆ ಶಾಸ್ತ್ರದಲ್ಲಿ ತೋರಿಸಿದ ವಿಧದಲ್ಲಿಯೇ ತಯಾರಿಗೊಂಡಿತ್ತು.
03016009c ದ್ರವ್ಯೈರನೇಕೈರ್ವಿವಿಧೈರ್ಗದಸಾಂಬೋದ್ಧವಾದಿಭಿಃ||
03016010a ಪುರುಷೈಃ ಕುರುಶಾರ್ದೂಲ ಸಮರ್ಥೈಃ ಪ್ರತಿಬಾಧನೇ|
03016010c ಅಭಿಖ್ಯಾತಕುಲೈರ್ವೀರೈರ್ದೃಷ್ಟವೀರ್ಯೈಶ್ಚ ಸಂಯುಗೇ||
ಕುರುಶಾರ್ದೂಲ! ಅನೇಕ ವಿಧದ ದ್ರವ್ಯಗಳಿಂದ ತುಂಬಿದ್ದ ಪುರಿಯನ್ನು ಹಿಂದಿರುಗಿ ಆಕ್ರಮಿಸಬಲ್ಲ, ಯುದ್ಧದಲ್ಲಿ ತಮ್ಮ ವೀರತ್ವವನ್ನು ಹಿಂದೆ ತೋರಿಸಿದ್ದ, ಅಭಿಖ್ಯಾತ ಕುಲಗಳಲ್ಲಿ ಹುಟ್ಟಿದ್ದ ಗದ, ಸಾಂಬ ಮತ್ತು ಉದ್ಧವ ಮೊದಲಾದ ಸಮರ್ಥ ಪುರುಷರು ಕಾಯುತ್ತಿದ್ದರು.
03016011a ಮಧ್ಯಮೇನ ಚ ಗುಲ್ಮೇನ ರಕ್ಷಿತಾ ಸಾರಸಂಜ್ಞಿತಾ|
03016011c ಉತ್ಕ್ಷಿಪ್ತಗುಲ್ಮೈಶ್ಚ ತಥಾ ಹಯೈಶ್ಚೈವ ಪದಾತಿಭಿಃ||
ಅದರ ಸಾರಕ್ಕೆ ಹೆಸರಾದ ಸೇನೆಯು ಮಧ್ಯದಲ್ಲಿ ಉತ್ತಮ ಸೇನೆಯಿಂದಲೂ ಕುದುರೆಗಳಿಂದಲೂ ಪದಾತಿಗಳಿಂದಲೂ ರಕ್ಷಿತಗೊಂಡಿತ್ತು.
03016012a ಆಘೋಷಿತಂ ಚ ನಗರೇ ನ ಪಾತವ್ಯಾ ಸುರೇತಿ ಹ|
03016012c ಪ್ರಮಾದಂ ಪರಿರಕ್ಷದ್ಭಿರುಗ್ರಸೇನೋದ್ಧವಾದಿಭಿಃ||
ಉಗ್ರಸೇನ, ಉದ್ಧವ ಮೊದಲಾದ ಅಧಿಕಾರಿಗಳು, ಪ್ರಮಾದವಾಗಬಾರದೆಂದು ನಗರದಲ್ಲಿ ಯಾರೂ ಮದ್ಯಸೇವನೆ ಮಾಡಬಾರದು ಎಂದು ಆದೇಶವನ್ನು ಘೋಷಿಸಿದರು.
03016013a ಪ್ರಮತ್ತೇಷ್ವಭಿಘಾತಂ ಹಿ ಕುರ್ಯಾಚ್ಶಾಲ್ವೋ ನರಾಧಿಪಃ|
03016013c ಇತಿ ಕೃತ್ವಾಪ್ರಮತ್ತಾಸ್ತೇ ಸರ್ವೇ ವೃಷ್ಣ್ಯಂಧಕಾಃ ಸ್ಥಿತಾಃ||
ಕುಡಿದ ಅಮಲಿನಲ್ಲಿದ್ದರೆ ನರಾಧಿಪ ಶಾಲ್ವನು ನಮ್ಮನ್ನು ಸುಲಭವಾಗಿ ನಾಶಪಡಿಸಬಲ್ಲನು ಎಂದು ಎಲ್ಲ ವೃಷ್ಣಿ ಅಂಧಕರೂ ಕುಡಿಯದೇ ಇದ್ದರು.
03016014a ಆನರ್ತಾಶ್ಚ ತಥಾ ಸರ್ವೇ ನಟನರ್ತಕಗಾಯನಾಃ|
03016014c ಬಹಿರ್ವಿವಾಸಿತಾಃ ಸರ್ವೇ ರಕ್ಷದ್ಭಿರ್ವಿತ್ತಸಂಚಯಾನ್||
ಆನರ್ತದ ಎಲ್ಲ ನಟ, ನರ್ತಕ, ಗಾಯಕರನ್ನು ಪುರದ ಹೊರಗೆ ವಾಸಿಸುವಂತೆ ಎಲ್ಲ ವಿತ್ತಸಂಚಯದ ರಕ್ಷಕರು ಏರ್ಪಡಿಸಿದರು.
03016015a ಸಂಕ್ರಮಾ ಭೇದಿತಾಃ ಸರ್ವೇ ನಾವಶ್ಚ ಪ್ರತಿಷೇಧಿತಾಃ|
03016015c ಪರಿಖಾಶ್ಚಾಪಿ ಕೌರವ್ಯ ಕೀಲೈಃ ಸುನಿಚಿತಾಃ ಕೃತಾಃ||
03016016a ಉದಪಾನಾಃ ಕುರುಶ್ರೇಷ್ಠ ತಥೈವಾಪ್ಯಂಬರೀಷಕಾಃ|
03016016c ಸಮಂತಾತ್ಕ್ರೋಶಮಾತ್ರಂ ಚ ಕಾರಿತಾ ವಿಷಮಾ ಚ ಭೂಃ||
ಸೇತುವೆಗಳನ್ನು ಒಡೆಯಲಾಯಿತು ಮತ್ತು ಎಲ್ಲ ನೌಕೆಗಳ ಪ್ರಯಾಣವನ್ನೂ ಪ್ರತಿಬಂಧಿಸಲಾಯಿತು. ಕೌರವ್ಯ! ಎಲ್ಲ ಗೋಡೆಗಳನ್ನೂ ಮೊಳೆಗಳನ್ನಿರಿಸಿ ಸುರಕ್ಷಿತಗೊಳಿಸಲಾಯಿತು ಮತ್ತು ಕಣಿವೆ ಕಂದರಗಳನ್ನು ಮುಚ್ಚಿಸಲಾಯಿತು. ಕುರುಶ್ರೇಷ್ಠ! ಎರಡು ಯೋಜನೆಯ ದೂರದವರೆಗೆ ಪುರದ ಸುತ್ತಲೂ ಭೂಮಿಯನ್ನು ವಿಷಮವನ್ನಾಗಿ ಮಾಡಲಾಯಿತು.
03016017a ಪ್ರಕೃತ್ಯಾ ವಿಷಮಂ ದುರ್ಗಂ ಪ್ರಕೃತ್ಯಾ ಚ ಸುರಕ್ಷಿತಂ|
03016017c ಪ್ರಕೃತ್ಯಾ ಚಾಯುಧೋಪೇತಂ ವಿಶೇಷೇಣ ತದಾನಘ||
ಅನಘ! ಪ್ರಾಕೃತಿಕವಾಗಿ ನಮ್ಮ ದುರ್ಗವು ವಿಷಮವಾದುದು, ಮತ್ತು ಪ್ರಾಕೃತಿಕವಾಗಿ ಸುರಕ್ಷಿತವಾಗಿದೆ, ಮತ್ತು ವಿಶೇಷವಾಗಿ ಪ್ರಾಕೃತಿಕವಾಗಿ ಆಯುಧಗಳಿಂದ ತುಂಬಿದೆ.
03016018a ಸುರಕ್ಷಿತಂ ಸುಗುಪ್ತಂ ಚ ಸರ್ವಾಯುಧಸಮನ್ವಿತಂ|
03016018c ತತ್ಪುರಂ ಭರತಶ್ರೇಷ್ಠ ಯಥೇಂದ್ರಭವನಂ ತಥಾ||
ಭರತಶ್ರೇಷ್ಠ! ಸುರಕ್ಷಿತವೂ, ಗುಪ್ತವೂ, ಸರ್ವಾಯುಧಗಳಿಂದ ಕೂಡಿದ ಆ ಪುರವು ಇಂದ್ರನ ಪುರದಂತೆ ತೋರುತ್ತಿತ್ತು.
03016019a ನ ಚಾಮುದ್ರೋಽಭಿನಿರ್ಯಾತಿ ನ ಚಾಮುದ್ರಃ ಪ್ರವೇಶ್ಯತೇ|
03016019c ವೃಷ್ಣ್ಯಂಧಕಪುರೇ ರಾಜಂಸ್ತದಾ ಸೌಭಸಮಾಗಮೇ||
ರಾಜನ್! ಸೌಭನು ಆಕ್ರಮಣ ಮಾಡಿದ ಸಮಯದಲ್ಲಿ ವೃಷ್ಣಿ-ಅಂಧಕರ ಪುರದಿಂದ ಮುದ್ರೆಯಿಲ್ಲದೇ ಯಾರೂ ಹೊರಹೋಗಲು ಸಾಧ್ಯವಿರಲಿಲ್ಲ ಮತ್ತು ಮುದ್ರೆಯಿಲ್ಲದೇ ಒಳಬರಲೂ ಸಾಧ್ಯವಿರಲಿಲ್ಲ.
03016020a ಅನು ರಥ್ಯಾಸು ಸರ್ವಾಸು ಚತ್ವರೇಷು ಚ ಕೌರವ|
03016020c ಬಲಂ ಬಭೂವ ರಾಜೇಂದ್ರ ಪ್ರಭೂತಗಜವಾಜಿಮತ್||
ರಾಜೇಂದ್ರ! ಕೌರವ! ಪ್ರತಿಯೊಂದು ರಥದಾರಿಗಳಲ್ಲೂ ಮತ್ತು ಎಲ್ಲ ಚೌಕಗಳಲ್ಲಿಯೂ ಕುದುರೆ ಮತ್ತು ಆನೆಗಳನ್ನೇರಿದ ಸೈನಿಕರು ಇರುತ್ತಿದ್ದರು.
03016021a ದತ್ತವೇತನಭಕ್ತಂ ಚ ದತ್ತಾಯುಧಪರಿಚ್ಚದಂ|
03016021c ಕೃತಾಪದಾನಂ ಚ ತದಾ ಬಲಮಾಸೀನ್ಮಹಾಭುಜ||
ಮಹಾಭುಜ! ಸೇನೆಗೆ ವೇತನಭತ್ತೆಗಳನ್ನು ಕೊಡಲಾಗಿತ್ತು. ಆಯುಧ-ಕವಚಗಳನ್ನು ಕೊಡಲಾಗಿತ್ತು ಮತ್ತು ಅಲ್ಲಿಯವರೆಗೆ ಸೇನೆಗೆ ಕೊಡಬೇಕಾದ ಎಲ್ಲವನ್ನೂ ಕೊಡಲಾಗಿತ್ತು.
03016022a ನ ಕುಪ್ಯವೇತನೀ ಕಶ್ಚಿನ್ನ ಚಾತಿಕ್ರಾಂತವೇತನೀ|
03016022c ನಾನುಗ್ರಹಭೃತಃ ಕಶ್ಚಿನ್ನ ಚಾದೃಷ್ಟಪರಾಕ್ರಮಃ||
ಯಾರೂ ತನ್ನ ವೇತನದ ಕುರಿತು ಸಿಟ್ಟುಮಾಡಿರಲಿಲ್ಲ. ಯಾರಿಗೂ ಅಧಿಕ ವೇತನವನ್ನು ನೀಡಿರಲಿಲ್ಲ. ಯಾರಿಗೂ ವಿಶೇಷ ಅನುಗ್ರಹವಿರಲಿಲ್ಲ ಮತ್ತು ಯಾರ ಪರಾಕ್ರಮವನ್ನೂ ನೋಡದೇ ಇರಲಿಲ್ಲ.
03016023a ಏವಂ ಸುವಿಹಿತಾ ರಾಜನ್ದ್ವಾರಕಾ ಭೂರಿದಕ್ಷಿಣೈಃ|
03016023c ಆಹುಕೇನ ಸುಗುಪ್ತಾ ಚ ರಾಜ್ಞಾ ರಾಜೀವಲೋಚನ||
ರಾಜನ್! ರಾಜೀವಲೋಚನ! ಹೀಗೆ ದ್ವಾರಕೆಯು ಚೆನ್ನಾದ ವೇತನವನ್ನು ಹೊಂದಿದ್ದ ಸೇನೆಯೊಂದಿಗೆ ಆಹುಕನಿಂದ ರಕ್ಷಿತಗೊಂಡಿತ್ತು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಷೋಡಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹದಿನಾರನೆಯ ಅಧ್ಯಾಯವು.