ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ
೧೫೯
ಕುಬೇರನು ಯುಧಿಷ್ಠಿರನಿಗಿತ್ತ ಉಪದೇಶ (೧-೨೪). ಕುಬೇರನ ಅರಮನೆಯಲ್ಲಿ ಪಾಂಡವರ ವಾಸ (೨೫-೩೫).
03159001 ವೈಶ್ರವಣ ಉವಾಚ|
03159001a ಯುಧಿಷ್ಠಿರ ಧೃತಿರ್ದಾಕ್ಷ್ಯಂ ದೇಶಕಾಲೌ ಪರಾಕ್ರಮಃ|
03159001c ಲೋಕತಂತ್ರವಿಧಾನಾನಾಮೇಷ ಪಂಚವಿಧೋ ವಿಧಿಃ||
ವೈಶ್ರವಣನು ಹೇಳಿದನು: “ಯುಧಿಷ್ಠಿರ! ಧೃತಿ, ದಕ್ಷತೆ, ದೇಶ, ಕಾಲ ಮತ್ತು ಪರಾಕ್ರಮ ಈ ಐದು ವಿಧಗಳನ್ನು ಲೋಕತಂತ್ರಗಳೆಂದು ತಿಳಿಯಬಹುದು.
03159002a ಧೃತಿಮಂತಶ್ಚ ದಕ್ಷಾಶ್ಚ ಸ್ವೇ ಸ್ವೇ ಕರ್ಮಣಿ ಭಾರತ|
03159002c ಪರಾಕ್ರಮವಿಧಾನಜ್ಞಾ ನರಾಃ ಕೃತಯುಗೇಽಭವನ್||
ಭಾರತ! ಕೃತಯುಗದಲ್ಲಿ ಮನುಷ್ಯರು ತಮ್ಮ ತಮ್ಮ ಕಾರ್ಯಗಳಲ್ಲಿ ಧೃತಿಮಂತರೂ, ದಕ್ಷರೂ, ಪರಾಕ್ರಮಿಗಳೂ, ಮತ್ತು ವಿಧಾನಗಳನ್ನು ತಿಳಿದವರೂ ಆಗಿದ್ದರು.
03159003a ಧೃತಿಮಾನ್ದೇಶಕಾಲಜ್ಞಃ ಸರ್ವಧರ್ಮವಿಧಾನವಿತ್|
03159003c ಕ್ಷತ್ರಿಯಃ ಕ್ಷತ್ರಿಯಶ್ರೇಷ್ಠ ಪೃಥಿವೀಮನುಶಾಸ್ತಿ ವೈ||
ಕ್ಷತ್ರಿಯಶ್ರೇಷ್ಠ ! ಧೃತಿಮಂತ, ದೇಶಕಾಲಗಳನ್ನು ತಿಳಿದವನು ಸರ್ವಧರ್ಮಗಳನ್ನು ತಿಳಿದಿರುತ್ತಾನೆ ಮತ್ತು ಅಂಥಹ ಕ್ಷತ್ರಿಯನು ಪೃಥ್ವಿಯನ್ನು ಆಳುತ್ತಾನೆ.
03159004a ಯ ಏವಂ ವರ್ತತೇ ಪಾರ್ಥ ಪುರುಷಃ ಸರ್ವಕರ್ಮಸು|
03159004c ಸ ಲೋಕೇ ಲಭತೇ ವೀರ ಯಶಃ ಪ್ರೇತ್ಯ ಚ ಸದ್ಗತಿಂ||
ವೀರ ಪಾರ್ಥ! ಸರ್ವಕರ್ಮಗಳಲ್ಲಿ ಹೀಗೆ ನಡೆದುಕೊಳ್ಳುವ ಪುರುಷನು ಲೋಕದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಮತ್ತು ಸಾವಿನನಂತರ ಸದ್ಗತಿಯನ್ನು ಪಡೆಯುತ್ತಾನೆ.
03159005a ದೇಶಕಾಲಾಂತರಪ್ರೇಪ್ಸುಃ ಕೃತ್ವಾ ಶಕ್ರಃ ಪರಾಕ್ರಮಂ|
03159005c ಸಂಪ್ರಾಪ್ತಸ್ತ್ರಿದಿವೇ ರಾಜ್ಯಂ ವೃತ್ರಹಾ ವಸುಭಿಃ ಸಹ||
ವೃತ್ರಹ ಶಕ್ರನು ದೇಶಕಾಲಗಳ ಅವಕಾಶವನ್ನು ಆಧರಿಸಿ ಪರಾಕ್ರಮದಿಂದ ನಡೆದುಕೊಂಡು, ವಸುಗಳೊಂದಿಗೆ ತ್ರಿದಿವ ರಾಜ್ಯವನ್ನು ಪಡೆದನು.
03159006a ಪಾಪಾತ್ಮಾ ಪಾಪಬುದ್ಧಿರ್ಯಃ ಪಾಪಮೇವಾನುವರ್ತತೇ|
03159006c ಕರ್ಮಣಾಮವಿಭಾಗಜ್ಞಃ ಪ್ರೇತ್ಯ ಚೇಹ ಚ ನಶ್ಯತಿ||
ಪಾಪವನ್ನೇ ಅನುಸರಿಸುವ ಪಾಪಾತ್ಮ ಪಾಪಬುದ್ಧಿಯು ಕರ್ಮಫಲವನ್ನು ತಿಳಿಯದೇ ಇಲ್ಲಿ ಮತ್ತು ನಂತರದಲ್ಲಿ ನಾಶವನ್ನು ಹೊಂದುತ್ತಾನೆ.
03159007a ಅಕಾಲಜ್ಞಃ ಸುದುರ್ಮೇಧಾಃ ಕಾರ್ಯಾಣಾಮವಿಶೇಷವಿತ್|
03159007c ವೃಥಾಚಾರಸಮಾರಂಭಃ ಪ್ರೇತ್ಯ ಚೇಹ ಚ ನಶ್ಯತಿ||
ಅಕಾಲಜ್ಞನು ಕಾರ್ಯಗಳ ವ್ಯತ್ಯಾಸವನ್ನು ತಿಳಿಯದೇ ಪ್ರಾರಂಭಿಸಿದುದೆಲ್ಲವನ್ನೂ ಕಳೆದುಕೊಳ್ಳುತ್ತಾನೆ ಮತ್ತು ಇಲ್ಲಿ ಹಾಗೂ ನಂತರ ನಾಶವನ್ನು ಹೊಂದುತ್ತಾನೆ.
03159008a ಸಾಹಸೇ ವರ್ತಮಾನಾನಾಂ ನಿಕೃತೀನಾಂ ದುರಾತ್ಮನಾಂ|
03159008c ಸರ್ವಸಾಮರ್ಥ್ಯಲಿಪ್ಸೂನಾಂ ಪಾಪೋ ಭವತಿ ನಿಶ್ಚಯಃ||
ಹಾಗಿನ ಮೋಸಗಾರ ದುರಾತ್ಮರು ಸಾಹಸದಲ್ಲಿಯೇ ತೊಡಗಿರುತ್ತಾರೆ ಮತ್ತು ಸರ್ವ ಸಾಮಾರ್ಥ್ಯವನ್ನೂ ಸೇರಿಸಿ ಪಾಪದಲ್ಲಿ ತೊಡಗಿರುತ್ತಾರೆ.
03159009a ಅಧರ್ಮಜ್ಞೋಽವಲಿಪ್ತಶ್ಚ ಬಾಲಬುದ್ಧಿರಮರ್ಷಣಃ|
03159009c ನಿರ್ಭಯೋ ಭೀಮಸೇನೋಽಯಂ ತಂ ಶಾಧಿ ಪುರುಷರ್ಷಭ||
ಪುರುಷರ್ಷಭ! ನಿನ್ನ ನಿರ್ಭಯಿ ಭೀಮಸೇನನು ಧರ್ಮವನ್ನು ತಿಳಿದಿಲ್ಲ. ಹಿಂಸೆಗಳಲ್ಲಿ ತೊಡಗುತ್ತಾನೆ. ಬಾಲಬುದ್ಧಿಯುಳ್ಳವನು ಮತ್ತು ದುರ್ಬಲಮನಸ್ಸಿನವನು. ಅವನಿಗೆ ಉಪದೇಶಮಾಡು.
03159010a ಆರ್ಷ್ಟಿಷೇಣಸ್ಯ ರಾಜರ್ಷೇಃ ಪ್ರಾಪ್ಯ ಭೂಯಸ್ತ್ವಮಾಶ್ರಮಂ|
03159010c ತಾಮಿಸ್ರಂ ಪ್ರಥಮಂ ಪಕ್ಷಂ ವೀತಶೋಕಭಯೋ ವಸ||
ರಾಜರ್ಷಿ ಆರ್ಷ್ಟಿಷೇಣನ ಆಶ್ರಮಕ್ಕೆ ಹಿಂದಿರುಗಿ ಅಲ್ಲಿಯೇ ಕೃಷ್ಣಪಕ್ಷದಲ್ಲಿ ಶೋಕ-ಭಯಗಳನ್ನು ಕಳೆದು ವಾಸಿಸು.
03159011a ಅಲಕಾಃ ಸಹ ಗಂಧರ್ವೈರ್ಯಕ್ಷೈಶ್ಚ ಸಹ ರಾಕ್ಷಸೈಃ|
03159011c ಮನ್ನಿಯುಕ್ತಾ ಮನುಷ್ಯೇಂದ್ರ ಸರ್ವೇ ಚ ಗಿರಿವಾಸಿನಃ||
03159011e ರಕ್ಷಂತು ತ್ವಾ ಮಹಾಬಾಹೋ ಸಹಿತಂ ದ್ವಿಜಸತ್ತಮೈಃ||
ಮಹಾಬಾಹೋ! ಮನುಷ್ಯೇಂದ್ರ! ಈ ಗಿರಿವಾಸಿಗಳು ಅಲಕರು, ಗಂಧರ್ವರು, ಯಕ್ಷರು, ಮತ್ತು ರಾಕ್ಷಸರು ನನ್ನ ಅಪ್ಪಣೆಯಂತೆ ಈ ಬ್ರಾಹ್ಮಣರೊಂದಿಗೆ ನಿನ್ನನ್ನು ರಕ್ಷಿಸುತ್ತಾರೆ.
03159012a ಸಾಹಸೇಷು ಚ ಸಂತಿಷ್ಠನ್ನಿಹ ಶೈಲೇ ವೃಕೋದರಃ|
03159012c ವಾರ್ಯತಾಂ ಸಾಧ್ವಯಂ ರಾಜಂಸ್ತ್ವಯಾ ಧರ್ಮಭೃತಾಂ ವರ||
ಧರ್ಮನಿರತ ರಾಜನೇ! ಈ ನಿನ್ನ ಭೀಮನು ಗಿರಿಯಲ್ಲಿ ಸಾಹಸ ಮಾಡುತ್ತಿದ್ದಾನೆ. ಅವನನ್ನು ನೀನು ತಡೆಹಿಡಿಯಬೇಕು.
03159013a ಇತಃ ಪರಂ ಚ ರಾಜೇಂದ್ರ ದ್ರಕ್ಷ್ಯಂತಿ ವನಗೋಚರಾಃ|
03159013c ಉಪಸ್ಥಾಸ್ಯಂತಿ ಚ ಸದಾ ರಕ್ಷಿಷ್ಯಂತಿ ಚ ಸರ್ವಶಃ||
ರಾಜೇಂದ್ರ! ಇನ್ನು ಮುಂದೆ ವನಗೋಚರರು ಎಲ್ಲರೂ ನಿನ್ನನ್ನು ನೋಡಿಕೊಳ್ಳುತ್ತಾರೆ ಮತ್ತು ಸದಾ ರಕ್ಷಿಸುತ್ತಾರೆ.
03159014a ತಥೈವ ಚಾನ್ನಪಾನಾನಿ ಸ್ವಾದೂನಿ ಚ ಬಹೂನಿ ಚ|
03159014c ಉಪಸ್ಥಾಸ್ಯಂತಿ ವೋ ಗೃಹ್ಯ ಮತ್ಪ್ರೇಷ್ಯಾಃ ಪುರುಷರ್ಷಭ||
03159015a ಯಥಾ ಜಿಷ್ಣುರ್ಮಹೇಂದ್ರಸ್ಯ ಯಥಾ ವಾಯೋರ್ವೃಕೋದರಃ|
03159015c ಧರ್ಮಸ್ಯ ತ್ವಂ ಯಥಾ ತಾತ ಯೋಗೋತ್ಪನ್ನೋ ನಿಜಃ ಸುತಃ||
03159016a ಆತ್ಮಜಾವಾತ್ಮಸಂಪನ್ನೌ ಯಮೌ ಚೋಭೌ ಯಥಾಶ್ವಿನೋಃ|
03159016c ರಕ್ಷ್ಯಾಸ್ತದ್ವನ್ಮಮಾಪೀಹ ಯೂಯಂ ಸರ್ವೇ ಯುಧಿಷ್ಠಿರ||
ಪುರುಷರ್ಷಭ! ನನ್ನವರು ನಿನಗೆ ನೀಡುವ ರುಚಿಯಾಗಿರುವ ಬಹುತರಹದ ಅನ್ನಪಾನೀಯಗಳನ್ನು ಸ್ವೀಕರಿಸು. ಮಗೂ ಯುಧಿಷ್ಠಿರ! ಇಂದ್ರನಿಂದ ಅರ್ಜುನ, ವಾಯುವಿನಿಂದ ಭೀಮ ಮತ್ತು ಧರ್ಮನಿಂದ ಯೋಗದಲ್ಲಿ ನಿಜಸುತನಾಗಿ ಜನಿಸಿದ ನೀನು, ಮತ್ತು ಅಶ್ವಿನೀ ದೇವತೆಗಳ ಆತ್ಮಸಂಪನ್ನರಾದ ನಕು ಸಹದೇವರು ನೀವೆಲ್ಲರೂ ಇಲ್ಲಿಯೂ ಕೂಡ ನನ್ನ ರಕ್ಷಣೆಯಲ್ಲಿ ಇರುತ್ತೀರಿ.
03159017a ಅರ್ಥತತ್ತ್ವವಿಭಾಗಜ್ಞಃ ಸರ್ವಧರ್ಮವಿಶೇಷವಿತ್|
03159017c ಭೀಮಸೇನಾದವರಜಃ ಫಲ್ಗುನಃ ಕುಶಲೀ ದಿವಿ||
ಭೀಮಸೇನನ ತಮ್ಮ ಫಲ್ಗುನ ಅರ್ಜುನನು ಅರ್ಥತತ್ವಗಳ ವಿಭಾಗಗಳನ್ನು ತಿಳಿದಿದ್ದಾನೆ. ಸರ್ವಧರ್ಮಗಳ ವಿಶೇಷತೆಗಳನ್ನು ತಿಳಿದಿದ್ದಾನೆ. ಮತ್ತು ಸ್ವರ್ಗದಲ್ಲಿ ಪರಿಣಿತನಾಗುತ್ತಿದ್ದಾನೆ.
03159018a ಯಾಃ ಕಾಶ್ಚನ ಮತಾ ಲೋಕೇಷ್ವಗ್ರ್ಯಾಃ ಪರಮಸಂಪದಃ|
03159018c ಜನ್ಮಪ್ರಭೃತಿ ತಾಃ ಸರ್ವಾಃ ಸ್ಥಿತಾಸ್ತಾತ ಧನಂಜಯೇ||
ಮಗೂ! ಲೋಕಗಳಲ್ಲಿ ಅಗ್ರರು ಮತ್ತು ಪರಮ ಸಂಪದರೆನ್ನುವವರು ಯಾರೆಲ್ಲ ಇದ್ದಾರೋ ಅವರು ಎಲ್ಲರೂ ಹುಟ್ಟಿನಿಂದಲೇ ಅರ್ಜುನನನ್ನು ನೋಡಿಕೊಳ್ಳುತ್ತಿದ್ದಾರೆ.
03159019a ದಮೋ ದಾನಂ ಬಲಂ ಬುದ್ಧಿರ್ಹ್ರೀರ್ಧೃತಿಸ್ತೇಜ ಉತ್ತಮಂ|
03159019c ಏತಾನ್ಯಪಿ ಮಹಾಸತ್ತ್ವೇ ಸ್ಥಿತಾನ್ಯಮಿತತೇಜಸಿ||
ದಮ, ದಾನ, ಬಲ, ಬುದ್ಧಿ, ಧೃತಿ, ತೇಜಸ್ಸು ಮತ್ತು ಇನ್ನೂ ಇತರ ಮಹಾಸತ್ವಗಳು ಆ ಅಮಿತ ತೇಜಸ್ವಿ ಉತ್ತಮ ಅರ್ಜುನನಲ್ಲಿವೆ.
03159020a ನ ಮೋಹಾತ್ಕುರುತೇ ಜಿಷ್ಣುಃ ಕರ್ಮ ಪಾಂಡವ ಗರ್ಹಿತಂ|
03159020c ನ ಪಾರ್ಥಸ್ಯ ಮೃಷೋಕ್ತಾನಿ ಕಥಯಂತಿ ನರಾ ನೃಷು||
ಅರ್ಜುನನು ಮೋಹದಿಂದ ಏನನ್ನೂ ಮಾಡುವುದಿಲ್ಲ. ಅವನು ಮೂಢತನದಿಂದಲೂ ಏನನ್ನೂ ಮಾಡುವುದಿಲ್ಲ. ಮತ್ತು ಅರ್ಜುನನು ಸುಳ್ಳನ್ನಾಡಿದನೆಂದು ಜನರು ಯಾರೂ ಇತರರೊಂದಿಗೆ ಹೇಳಿದುದಿಲ್ಲ.
03159021a ಸ ದೇವಪಿತೃಗಂಧರ್ವೈಃ ಕುರೂಣಾಂ ಕೀರ್ತಿವರ್ಧನಃ|
03159021c ಮಾನಿತಃ ಕುರುತೇಽಸ್ತ್ರಾಣಿ ಶಕ್ರಸದ್ಮನಿ ಭಾರತ||
ಭಾರತ! ಕುರುಗಳ ಕೀರ್ತಿವರ್ಧನ ಅರ್ಜುನನು ದೇವತೆಗಳು, ಪಿತೃಗಳು ಮತ್ತು ಗಂಧರ್ವರಿಂದ ಗೌರವಸಲ್ಪಟ್ಟು ಇಂದ್ರನ ಸನ್ನಿಧಿಯಲ್ಲಿ ಅಸ್ತ್ರಾಭ್ಯಾಸವನ್ನು ಮಾಡುತ್ತಿದ್ದಾನೆ.
03159022a ಯೋಽಸೌ ಸರ್ವಾನ್ಮಹೀಪಾಲಾನ್ಧರ್ಮೇಣ ವಶಮಾನಯತ್|
03159022c ಸ ಶಂತನುರ್ಮಹಾತೇಜಾಃ ಪಿತುಸ್ತವ ಪಿತಾಮಹಃ||
03159022e ಪ್ರೀಯತೇ ಪಾರ್ಥ ಪಾರ್ಥೇನ ದಿವಿ ಗಾಂಡೀವಧನ್ವನಾ||
ಪಾರ್ಥ! ಧರ್ಮದಿಂದ ಸರ್ವ ರಾಜರನ್ನೂ ವಶದಲ್ಲಿಟ್ಟುಕೊಂಡಿದ್ದ ನಿನ್ನ ತಂದೆಯ ಅಜ್ಜ ಮಹಾತೇಜಸ್ವಿ ಶಂತನುವು ಸ್ವರ್ಗದಲ್ಲಿ ಗಾಂಡೀವ ಧನುಸ್ಸನ್ನು ಹಿಡಿದಿರುವ ಅರ್ಜುನನಿಂದ ಸಂತೋಷಗೊಂಡಿದ್ದಾನೆ.
03159023a ಸಮ್ಯಕ್ಚಾಸೌ ಮಹಾವೀರ್ಯಃ ಕುಲಧುರ್ಯ ಇವ ಸ್ಥಿತಃ|
03159023c ಪಿತೄನ್ದೇವಾಂಸ್ತಥಾ ವಿಪ್ರಾನ್ಪೂಜಯಿತ್ವಾ ಮಹಾಯಶಾಃ||
03159023e ಸಪ್ತ ಮುಖ್ಯಾನ್ಮಹಾಮೇಧಾನಾಹರದ್ಯಮುನಾಂ ಪ್ರತಿ||
03159024a ಅಧಿರಾಜಃ ಸ ರಾಜಂಸ್ತ್ವಾಂ ಶಂತನುಃ ಪ್ರಪಿತಾಮಹಃ|
03159024c ಸ್ವರ್ಗಜಿಚ್ಛಕ್ರಲೋಕಸ್ಥಃ ಕುಶಲಂ ಪರಿಪೃಚ್ಚತಿ||
ಆ ಮಹಾವೀರ, ಕುಲವನ್ನು ಹೊತ್ತಿರುವ, ಪಿತೃಗಳು, ದೇವತೆಗಳು ಮತ್ತು ಬ್ರಾಹ್ಮಣರನ್ನು ಪೂಜಿಸಿ ಯಮುನಾ ತೀರದಲ್ಲಿ ಏಳು ಮುಖ್ಯವಾದ ಮಹಾ ಯಜ್ಞಗಳನ್ನು ನಡೆಸಿ ಮಹಾಯಶಸ್ವಿಯಾಗಿ ಸ್ವರ್ಗವನ್ನು ಗೆದ್ದು ಈಗ ಇಂದ್ರಲೋಕದಲ್ಲಿ ವಾಸಿಸುತ್ತಿರುವ ನಿನ್ನ ಮುತ್ತಜ್ಜ ಅಧಿರಾಜ ಶಂತನುವು ನಿನ್ನ ಆರೋಗ್ಯದ ಕುರಿತು ಕೇಳಿದ್ದಾನೆ.””
03159025 ವೈಶಂಪಾಯನ ಉವಾಚ|
03159025a ತತಃ ಶಕ್ತಿಂ ಗದಾಂ ಖಡ್ಗಂ ಧನುಶ್ಚ ಭರತರ್ಷಭ|
03159025c ಪ್ರಾಧ್ವಂ ಕೃತ್ವಾ ನಮಶ್ಚಕ್ರೇ ಕುಬೇರಾಯ ವೃಕೋದರಃ||
ವೈಶಂಪಾಯನನು ಹೇಳಿದನು: “ಭರತರ್ಷಭ! ಅನಂತರ ವೃಕೋದರ ಭೀಮಸೇನನು ಶಕ್ತಿ, ಗದೆ, ಖಡ್ಗ ಮತ್ತು ಧನುಸ್ಸನ್ನು ಕೆಳಗಿಟ್ಟು ಕುಬೇರನಿಗೆ ನಮಸ್ಕರಿಸಿದನು.
03159026a ತತೋಽಬ್ರವೀದ್ಧನಾಧ್ಯಕ್ಷಃ ಶರಣ್ಯಃ ಶರಣಾಗತಂ|
03159026c ಮಾನಹಾ ಭವ ಶತ್ರೂಣಾಂ ಸುಹೃದಾಂ ನಂದಿವರ್ಧನಃ||
ಆಗ ಆ ಶರಣ್ಯ ಧನಾದ್ಯಕ್ಷ ಕುಬೇರನು ಶರಣಾಗತನಾದ ಭೀಮನಿಗೆ ಹೇಳಿದನು: “ಶತ್ರುಗಳ ಮಾನಭಂಗ ಮಾಡು ಮತ್ತು ಸುಹೃದಯರ ಆನಂದವನ್ನು ಹೆಚ್ಚಿಸು.
03159027a ಸ್ವೇಷು ವೇಶ್ಮಸು ರಮ್ಯೇಷು ವಸತಾಮಿತ್ರತಾಪನಾಃ|
03159027c ಕಾಮಾನುಪಹರಿಷ್ಯಂತಿ ಯಕ್ಷಾ ವೋ ಭರತರ್ಷಭಾಃ||
ಶತ್ರುತಾಪನರೇ! ಈ ಸುಂದರ ಮನೆಗಳಲ್ಲಿ ವಾಸಿಸಿ. ಭರತರ್ಷಭರೇ! ಯಕ್ಷರು ನಿಮ್ಮ ಕಾಮನೆಗಳನ್ನು ಪೂರೈಸುತ್ತಾರೆ.
03159028a ಶೀಘ್ರಮೇವ ಗುಡಾಕೇಶಃ ಕೃತಾಸ್ತ್ರಃ ಪುರುಷರ್ಷಭಃ|
03159028c ಸಾಕ್ಷಾನ್ಮಘವತಾ ಸೃಷ್ಟಃ ಸಂಪ್ರಾಪ್ಸ್ಯತಿ ಧನಂಜಯಃ||
ಶೀಘ್ರದಲ್ಲಿಯೇ ಆ ಪುರುಷರ್ಷಭ ಗುಡಾಕೇಶ ಧನಂಜಯ ಅರ್ಜುನನು ಅಸ್ತ್ರಗಳನ್ನು ಕಲಿತು, ಸಾಕ್ಷಾತ್ ಮಘವತ ಇಂದ್ರನಿಂದ ಬೀಳ್ಕೊಂಡು ಬಂದು ಸೇರುತ್ತಾನೆ.”
03159029a ಏವಮುತ್ತಮಕರ್ಮಾಣಮನುಶಿಷ್ಯ ಯುಧಿಷ್ಠಿರಂ|
03159029c ಅಸ್ತಂ ಗಿರಿವರಶ್ರೇಷ್ಠಂ ಪ್ರಯಯೌ ಗುಃಯಕಾಧಿಪಃ||
ಈ ರೀತಿ ಉತ್ತಮಕರ್ಮಿ ಯುಧಿಷ್ಠಿರನಿಗೆ ಉಪದೇಶಗಳನ್ನಿತ್ತು ಆ ಗುಹ್ಯಕಾಧಿಪ ಕುಬೇರನು ಪರ್ವತಗಳಲ್ಲಿ ಅಂತರ್ಧಾನನಾದನು.
03159030a ತಂ ಪರಿಸ್ತೋಮಸಂಕೀರ್ಣೈರ್ನಾನಾರತ್ನವಿಭೂಷಿತೈಃ|
03159030c ಯಾನೈರನುಯಯುರ್ಯಕ್ಷಾ ರಾಕ್ಷಸಾಶ್ಚ ಸಹಸ್ರಶಃ||
ಅವನನ್ನು ಸಹಸ್ರಾರು ಯಕ್ಷರೂ ರಾಕ್ಷಸರೂ ನಾನಾ ರತ್ನಗಳಿಂದ ಸಿಂಗರಿಸಲ್ಪಟ್ಟ ರಥಸಂಕುಲಗಳನ್ನೇರಿ ಹಿಂಬಾಲಿಸಿ ಹೋದರು.
03159031a ಪಕ್ಷಿಣಾಮಿವ ನಿರ್ಘೋಷಃ ಕುಬೇರಸದನಂ ಪ್ರತಿ|
03159031c ಬಭೂವ ಪರಮಾಶ್ವಾನಾಮೈರಾವತಪಥೇ ಯತಾಂ||
ಕುಬೇರನ ಮನೆಗೆ ಹೋಗುವ ಐರಾವತದ ದಾರಿಯಲ್ಲಿ ಹೋಗುತ್ತಿರುವ ಪರಮಾಶ್ವಗಳು ಪಕ್ಷಿಗಳಂತೆ ಶಬ್ಧಮಾಡುತ್ತಾ ಸಾಗಿದವು.
03159032a ತೇ ಜಗ್ಮುಸ್ತೂರ್ಣಮಾಕಾಶಂ ಧನಾಧಿಪತಿವಾಜಿನಃ|
03159032c ಪ್ರಕರ್ಷಂತ ಇವಾಭ್ರಾಣಿ ಪಿಬಂತ ಇವ ಮಾರುತಂ||
ಧನಾಧಿಪತಿ ಕುಬೇರನ ಆ ಕುದುರೆಗಳು ಒಂದು ಸಾಲಿನಲ್ಲಿ ಆಕಾಶವನ್ನೇರಿ ಮಿಂಚಿನಂತೆ ಪ್ರಕಾಶಿಸುತ್ತಾ ಗಾಳಿಯನ್ನು ಏರಿ ಸಾಗಿದವು.
03159033a ತತಸ್ತಾನಿ ಶರೀರಾಣಿ ಗತಸತ್ತ್ವಾನಿ ರಕ್ಷಸಾಂ|
03159033c ಅಪಾಕೃಷ್ಯಂತ ಶೈಲಾಗ್ರಾದ್ಧನಾಧಿಪತಿಶಾಸನಾತ್||
03159034a ತೇಷಾಂ ಹಿ ಶಾಪಕಾಲೋಽಸೌ ಕೃತೋಽಗಸ್ತ್ಯೇನ ಧೀಮತಾ|
03159034c ಸಮರೇ ನಿಹತಾಸ್ತಸ್ಮಾತ್ಸರ್ವೇ ಮಣಿಮತಾ ಸಹ||
ಅನಂತರ ಧನಾಧಿಪತಿ ಕುಬೇರನ ಆಜ್ಞೆಯಂತೆ ಸಾವನ್ನಪ್ಪಿದ್ದ ಆ ರಾಕ್ಷಸರ ಶರೀರಗಳನ್ನು ಎಳೆದು ಪರ್ವತಗಳ ಮೇಲೆ ಹಾಕಲಾಯಿತು. ಮಣಿಮತನೊಂದಿಗೆ ಅವರೆಲ್ಲರಿಗೂ ಧೀಮಂತ ಅಗಸ್ತ್ಯಮುನಿಯ ಶಾಪಕಾಲವು ಪ್ರಾಪ್ತವಾಗಿತ್ತು.
03159035a ಪಾಂಡವಾಸ್ತು ಮಹಾತ್ಮಾನಸ್ತೇಷು ವೇಶ್ಮಸು ತಾಂ ಕ್ಷಪಾಂ|
03159035c ಸುಖಮೂಷುರ್ಗತೋದ್ವೇಗಾಃ ಪೂಜಿತಾಃ ಸರ್ವರಾಕ್ಷಸೈಃ||
ಮಹಾತ್ಮ ಪಾಂಡವರು ಅಲ್ಲಿಯ ಮನೆಗಳಲ್ಲಿ ಎಲ್ಲ ರಾಕ್ಷಸರಿಂದ ಪೂಜಿತರಾಗಿ ಸುಖದಿಂದ ನಿರ್ಭೀತರಾಗಿ ರಾತ್ರಿಯನ್ನು ಕಳೆದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಕುಬೇರವಾಕ್ಯೇ ಏಕೋನಷಷ್ಟ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಕುಬೇರವಾಕ್ಯದಲ್ಲಿ ನೂರಾಐವತ್ತೊಂಭತ್ತನೆಯ ಅಧ್ಯಾಯವು.