Aranyaka Parva: Chapter 14

ಆರಣ್ಯಕ ಪರ್ವ: ಕೈರಾತ ಪರ್ವ

೧೪

ದ್ಯೂತದ ವೇಳೆಯಲ್ಲಿ ತಾನು ದ್ವಾರಕೆಯಲ್ಲಿದ್ದಿದ್ದರೆ ಯುಧಿಷ್ಠಿರನು ಈ ಕಷ್ಟಕ್ಕೊಳಗಾಗುತ್ತಿರಲಿಲ್ಲ ಎಂದು ಕೃಷ್ಣನು ಹೇಳುವುದು (೧-೧೭).

03014001 ವಾಸುದೇವ ಉವಾಚ|

03014001a ನೇದಂ ಕೃಚ್ಚ್ರಮನುಪ್ರಾಪ್ತೋ ಭವಾನ್ಸ್ಯಾದ್ವಸುಧಾಧಿಪ|

03014001c ಯದ್ಯಹಂ ದ್ವಾರಕಾಯಾಂ ಸ್ಯಾಂ ರಾಜನ್ಸನ್ನಿಹಿತಃ ಪುರಾ||

ವಾಸುದೇವನು ಹೇಳಿದನು: “ವಸುಧಾಧಿಪ! ರಾಜನ್! ಆಗ ನಾನು ದ್ವಾರಕೆಯಲ್ಲಿ ಇದ್ದಿದ್ದರೆ ನೀನು ಈ ಕಷ್ಟಕ್ಕೆ ಒಳಗಾಗುತ್ತಿರಲಿಲ್ಲ.

03014002a ಆಗಚ್ಚೇಯಮಹಂ ದ್ಯೂತಮನಾಹೂತೋಽಪಿ ಕೌರವೈಃ|

03014002c ಆಂಬಿಕೇಯೇನ ದುರ್ಧರ್ಷ ರಾಜ್ಞಾ ದುರ್ಯೋಧನೇನ ಚ||

ಕೌರವರು, ರಾಜ ಅಂಬಿಕೇಯ ಮತ್ತು ದುರ್ಯೋಧನನು ನನ್ನನ್ನು ಕರೆಯದೇ ಇದ್ದರೂ ದ್ಯೂತಕ್ಕೆ ಬರುತ್ತಿದ್ದೆ[1].

03014003a ವಾರಯೇಯಮಹಂ ದ್ಯೂತಂ ಬಹೂನ್ದೋಷಾನ್ಪ್ರದರ್ಶಯನ್|

03014003c ಭೀಷ್ಮದ್ರೋಣೌ ಸಮಾನಾಯ್ಯ ಕೃಪಂ ಬಾಹ್ಲೀಕಮೇವ ಚ||

ಭೀಷ್ಮ, ದ್ರೋಣ, ಕೃಪ, ಮತ್ತು ಬಾಹ್ಲೀಕರನ್ನೂ ಸೇರಿ ಎಲ್ಲರಿಗೂ ದ್ಯೂತದ ಹಲವಾರು ದೋಷಗಳನ್ನು ತೋರಿಸಿಕೊಟ್ಟು ಅದನ್ನು ನಿಲ್ಲಿಸುತ್ತಿದ್ದೆ.

03014004a ವೈಚಿತ್ರವೀರ್ಯಂ ರಾಜಾನಮಲಂ ದ್ಯೂತೇನ ಕೌರವ|

03014004c ಪುತ್ರಾಣಾಂ ತವ ರಾಜೇಂದ್ರ ತ್ವನ್ನಿಮಿತ್ತಮಿತಿ ಪ್ರಭೋ||

03014005a ತತ್ರ ವಕ್ಷ್ಯಾಮ್ಯಹಂ ದೋಷಾನ್ಯೈರ್ಭವಾನವರೋಪಿತಃ|

03014005c ವೀರಸೇನಸುತೋ ಯೈಶ್ಚ ರಾಜ್ಯಾತ್ಪ್ರಭ್ರಂಶಿತಃ ಪುರಾ||

ನಿಮ್ಮ ಪರವಾಗಿ ರಾಜ ವೈಚಿತ್ರವೀರ್ಯನಿಗೆ “ರಾಜೇಂದ್ರ! ಪ್ರಭೋ! ನಿನ್ನ ಮಕ್ಕಳು ಆಡುತ್ತಿರುವ ಈ ದ್ಯೂತವನ್ನು ನಿಲ್ಲಿಸು!” ಎಂದು ಹೇಳಿ ಹಿಂದೆ ವೀರಸೇನನ ಮಗ[2]ನನ್ನು ಹೇಗೆ ರಾಜ್ಯಭ್ರಷ್ಠನನ್ನಾಗಿ ಮಾಡಲಾಗಿತ್ತೋ ಅದೇ ಮೋಸದಿಂದ ನಿಮ್ಮನ್ನೂ ರಾಜ್ಯಭ್ರಷ್ಠರನ್ನಾಗಿ ಮಾಡುತ್ತಿದ್ದಾರೆ ಎನ್ನುವುದನ್ನು ನೆನಪಿಸಿಕೊಡುತ್ತಿದ್ದೆ.

03014006a ಅಭಕ್ಷಿತವಿನಾಶಂ ಚ ದೇವನೇನ ವಿಶಾಂ ಪತೇ|

03014006c ಸಾತತ್ಯಂ ಚ ಪ್ರಸಂಗಸ್ಯ ವರ್ಣಯೇಯಂ ಯಥಾತಥಂ||

ವಿಶಾಂಪತೇ! ದ್ಯೂತವಾಡುವುದರಿಂದ ಇನ್ನೂ ಭಕ್ಷಿಸದೇ ಇರುವುದನ್ನು ಹೇಗೆ ಕಳೆದುಕೊಳ್ಳುತ್ತಾನೆ ಮತ್ತು ದ್ಯೂತದ ವ್ಯಸನವು ಹೇಗೆ ಮುಂದುವರೆಯುತ್ತದೆ ಎನ್ನುವ ಸತ್ಯವನ್ನು ತೋರಿಸಿಕೊಡುತ್ತಿದ್ದೆ.

03014007a ಸ್ತ್ರಿಯೋಽಕ್ಷಾ ಮೃಗಯಾ ಪಾನಮೇತತ್ಕಾಮಸಮುತ್ಥಿತಂ|

03014007c ವ್ಯಸನಂ ಚತುಷ್ಟಯಂ ಪ್ರೋಕ್ತಂ ಯೈ ರಾಜನ್ಭ್ರಶ್ಯತೇ ಶ್ರಿಯಃ||

ರಾಜನ್! ಹೆಂಗಸರು, ಜೂಜು, ಬೇಟೆ ಮತ್ತು ಮದ್ಯಪಾನ ಇವು ನಾಲ್ಕೂ ವ್ಯಸನಗಳು ಕಾಮದಿಂದ ಹುಟ್ಟುತ್ತವೆ ಮತ್ತು ಮನುಷ್ಯನ ಭಾಗ್ಯವನ್ನು ಕಳೆಯುತ್ತವೆ.

03014008a ತತ್ರ ಸರ್ವತ್ರ ವಕ್ತವ್ಯಂ ಮನ್ಯಂತೇ ಶಾಸ್ತ್ರಕೋವಿದಾಃ|

03014008c ವಿಶೇಷತಶ್ಚ ವಕ್ತವ್ಯಂ ದ್ಯೂತೇ ಪಶ್ಯಂತಿ ತದ್ವಿದಃ||

ಶಾಸ್ತ್ರಗಳನ್ನು ತಿಳಿದವರು ನಾನು ಹೇಳಿದುದೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ. ಆದರೆ ವಿಶೇಷವಾಗಿ ದ್ಯೂತದ ಕುರಿತು ಇದನ್ನು ಹೇಳಬಹುದು ಎಂದು ತಿಳಿದಿದ್ದಾರೆ.

03014009a ಏಕಾಹ್ನಾ ದ್ರವ್ಯನಾಶೋಽತ್ರ ಧ್ರುವಂ ವ್ಯಸನಮೇವ ಚ|

03014009c ಅಭುಕ್ತನಾಶಶ್ಚಾರ್ಥಾನಾಂ ವಾಕ್ಪಾರುಷ್ಯಂ ಚ ಕೇವಲಂ||

ಒಬ್ಬನು ಒಂದೇ ದಿನದಲ್ಲಿ ಎಲ್ಲ ಸಂಪತ್ತನ್ನೂ ಕಳೆದುಕೊಳ್ಳುತ್ತಾನೆ ಮತ್ತು ಖಂಡಿತವಾಗಿಯೂ ದುಃಖವನ್ನು ಹೊಂದುತ್ತಾನೆ. ಇನ್ನೂ ಭೋಗಿಸದೇ ಇದ್ದ ಐಶ್ವರ್ಯವನ್ನು ಕಳೆದುಕೊಂಡು ಕೇವಲ ಪೌರುಷದ ಮಾತುಗಳು ಉಳಿದುಕೊಳ್ಳುತ್ತವೆ.

03014010a ಏತಚ್ಚಾನ್ಯಚ್ಚ ಕೌರವ್ಯ ಪ್ರಸಂಗಿ ಕಟುಕೋದಯಂ|

03014010c ದ್ಯೂತೇ ಬ್ರೂಯಾಂ ಮಹಾಬಾಹೋ ಸಮಾಸಾದ್ಯಾಂಬಿಕಾಸುತಂ||

ಮಹಾಬಾಹೋ! ಇದು ಮತ್ತು ಇನ್ನೂ ಇತರ ವಿಷವನ್ನು ಹುಟ್ಟಿಸುವ ಪ್ರಸಂಗಗಳ ಕುರಿತು ಅಂಬಿಕಾಸುತನ ಎದುರಿಗೆ ಹೇಳುತ್ತಿದ್ದೆ.

03014011a ಏವಮುಕ್ತೋ ಯದಿ ಮಯಾ ಗೃಹ್ಣೀಯಾದ್ವಚನಂ ಮಮ|

03014011c ಅನಾಮಯಂ ಸ್ಯಾದ್ಧರ್ಮಸ್ಯ ಕುರೂಣಾಂ ಕುರುನಂದನ||

ಕುರುನಂದನ! ನಾನು ಹೇಳಿದ ಈ ಮಾತುಗಳನ್ನು ಸ್ವೀಕರಿಸಿದ್ದರೆ ಕುರುಗಳ ಧರ್ಮವು ಕೆಡದೇ ಇರುತ್ತಿತ್ತು.

03014012a ನ ಚೇತ್ಸ ಮಮ ರಾಜೇಂದ್ರ ಗೃಹ್ಣೀಯಾನ್ಮಧುರಂ ವಚಃ|

03014012c ಪಥ್ಯಂ ಚ ಭರತಶ್ರೇಷ್ಠ ನಿಗೃಹ್ಣೀಯಾಂ ಬಲೇನ ತಂ||

ರಾಜೇಂದ್ರ! ಭರತಶ್ರೇಷ್ಠ! ಒಂದು ವೇಳೆ ನನ್ನ ಈ ಸೌಮ್ಯ ಮತ್ತು ಸರಿಯಾದ ಮಾತುಗಳನ್ನು ಕೇಳದೇ ಇದ್ದಿದ್ದರೆ ಅವನನ್ನು ಬಲವನ್ನುಪಯೋಗಿಸಿ ಸರಿಯಾದ ದಾರಿಗೆ ತರುತ್ತಿದ್ದೆ.

03014013a ಅಥೈನಾನಭಿನೀಯೈವಂ ಸುಹೃದೋ ನಾಮ ದುರ್ಹೃದಃ|

03014013c ಸಭಾಸದಶ್ಚ ತಾನ್ಸರ್ವಾನ್ಭೇದಯೇಯಂ ದುರೋದರಾನ್||

ಇದೇ ರೀತಿಯಲ್ಲಿ ಆ ಸಭೆಯಲ್ಲಿದ್ದ ಇತರ ಸ್ನೇಹಿತರೆಂದು ತೋರಿಸಿಕೊಳ್ಳುವ ಶತ್ರುಗಳಿಗೂ ತೋರಿಸಿಕೊಡುತ್ತಿದ್ದೆ ಮತ್ತು ಮೋಸದಿಂದ ಜೂಜಾಡುತ್ತಿದ್ದ ಎಲ್ಲರನ್ನೂ ಸಂಹರಿಸುತ್ತಿದ್ದೆ.

03014014a ಅಸಾನ್ನಿಧ್ಯಂ ತು ಕೌರವ್ಯ ಮಮಾನರ್ತೇಷ್ವಭೂತ್ತದಾ|

03014014c ಯೇನೇದಂ ವ್ಯಸನಂ ಪ್ರಾಪ್ತಾ ಭವಂತೋ ದ್ಯೂತಕಾರಿತಂ||

ಕೌರವ್ಯ! ಅನಾರ್ತದಿಂದ ನಾನು ದೂರವಿದ್ದೆನಾದುದರಿಂದಲೇ ನೀವು ದ್ಯೂತದಿಂದ ಉಂಟಾದ ಈ ಎಲ್ಲ ಕಷ್ಟಗಳನ್ನು ಅನುಭವಿಸಬೇಕಾಗಿದೆ.

03014015a ಸೋಽಹಮೇತ್ಯ ಕುರುಶ್ರೇಷ್ಠ ದ್ವಾರಕಾಂ ಪಾಂಡುನಂದನ|

03014015c ಅಶ್ರೌಷಂ ತ್ವಾಂ ವ್ಯಸನಿನಂ ಯುಯುಧಾನಾದ್ಯಥಾತಥಂ||

ಕುರುಶ್ರೇಷ್ಠ! ಪಾಂಡುನಂದನ! ನಾನು ದ್ವಾರಕೆಗೆ ಮರಳಿ ಬಂದ ನಂತರವೇ ನನಗೆ ಯುಯುಧಾನನಿಂದ ನಿಮಗಾದ ಕಷ್ಟದ ಕುರಿತು ಯಥಾವತ್ತಾಗಿ ತಿಳಿಯಿತು.

03014016a ಶ್ರುತ್ವೈವ ಚಾಹಂ ರಾಜೇಂದ್ರ ಪರಮೋದ್ವಿಗ್ನಮಾನಸಃ|

03014016c ತೂರ್ಣಮಭ್ಯಾಗತೋಽಸ್ಮಿ ತ್ವಾಂ ದ್ರಷ್ಟುಕಾಮೋ ವಿಶಾಂ ಪತೇ||

ರಾಜೇಂದ್ರ! ವಿಶಾಂಪತೇ! ಇದನ್ನು ಕೇಳಿದ ಕೂಡಲೇ ಮನಸ್ಸಿನಲ್ಲಿ ತುಂಬಾ ಬೇಸರಪಟ್ಟು ತ್ವರೆಮಾಡಿ ನಿನ್ನನ್ನು ನೋಡಲು ಇಲ್ಲಿಗೆ ಬಂದಿದ್ದೇನೆ.

03014017a ಅಹೋ ಕೃಚ್ಚ್ರಮನುಪ್ರಾಪ್ತಾಃ ಸರ್ವೇ ಸ್ಮ ಭರತರ್ಷಭ|

03014017c ಯೇ ವಯಂ ತ್ವಾಂ ವ್ಯಸನಿನಂ ಪಶ್ಯಾಮಃ ಸಹ ಸೋದರೈಃ||

ಭರತರ್ಷಭ! ಸಹೋದರರ ಸಹಿತ ಕಷ್ಟದಲ್ಲಿರುವ ನಿನ್ನನ್ನು ನೋಡಿ ನಾವೆಲ್ಲರೂ ತುಂಬಾ ದುಃಖದಲ್ಲಿದ್ದೇವೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ವಾಸುದೇವವಾಕ್ಯೇ ಚತುರ್ದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ವಾಸುದೇವನ ಮಾತು ಎನ್ನುವ ಹದಿನಾಲ್ಕನೆಯ ಅಧ್ಯಾಯವು.

Image result for indian motifs forests

[1]ಕೆಲವು ಜಾನಪದ ಗೀತೆಗಳ ಪ್ರಕಾರ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ದ್ವಾರಕೆಯಲ್ಲಿ ರುಕ್ಮಿಣೀ ಸತ್ಯಭಾಮೆಯವರೊಂದಿಗೆ ಪಗಡೆಯಾಟ ಆಡುತ್ತಿದ್ದನು ಎಂದಿದೆ.

[2]ನಳನ ಚರಿತ್ರೆಯನ್ನು ಬೃಹದಶ್ವನು ಈ ವನಪರ್ವದ ಮುಂದಿನ ಅಧ್ಯಾಯಗಳಲ್ಲಿ ಪಾಂಡವರಿಗೆ ಹೇಳುತ್ತಾನೆ.

Comments are closed.