ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೩೭
ಯವಕ್ರಿಯು ರೈಭ್ಯನ ಸೊಸೆಯನ್ನು ಬಲಾತ್ಕಾರವಾಗಿ ಕೂಡಿದುದು (೧-೬). ಕುಪಿತನಾದ ರೈಭ್ಯನು ತನ್ನ ಸೊಸೆಯಂತಿರುವ ನಾರಿಯೋರ್ವಳನ್ನು ಮತ್ತು ರಾಕ್ಷಸನೋರ್ವನನ್ನು ಸೃಷ್ಟಿಸಿ ಯವಕ್ರಿಯ ವಧೆಯನ್ನು ಆಜ್ಞಾಪಿಸುವುದು (೭-೧೨). ಸೃಷ್ಟಿಸಿದ ರಾಕ್ಷಸನು ಯವಕ್ರಿಯನ್ನು ಕೊಲ್ಲುವುದು (೭-೧೯). ಸೃಷ್ಟಿಸಿದ ನಾರಿಯೊಂದಿಗೆ ರೈಭ್ಯನು ವಾಸಿಸುವುದು (೨೦).
03137001 ಲೋಮಶ ಉವಾಚ|
03137001a ಚಂಕ್ರಮ್ಯಮಾಣಃ ಸ ತದಾ ಯವಕ್ರೀರಕುತೋಭಯಃ|
03137001c ಜಗಾಮ ಮಾಧವೇ ಮಾಸಿ ರೈಭ್ಯಾಶ್ರಮಪದಂ ಪ್ರತಿ||
ಲೋಮಶನು ಹೇಳಿದನು: “ಹೀಗೆಯೇ ಅಲೆದಾಡುತ್ತಿರುವಾಗ ಯಾವುದಕ್ಕೂ ಹೆದರದ ಯವಕ್ರಿಯು ಮಾಧವ ಮಾಸದಲ್ಲಿ ರೈಭ್ಯನ ಆಶ್ರಮದ ಕಡೆ ನಡೆದನು.
03137002a ಸ ದದರ್ಶಾಶ್ರಮೇ ಪುಣ್ಯೇ ಪುಷ್ಪಿತದ್ರುಮಭೂಷಿತೇ|
03137002c ವಿಚರಂತೀಂ ಸ್ನುಷಾಂ ತಸ್ಯ ಕಿನ್ನರೀಮಿವ ಭಾರತ||
ಭಾರತ! ಹೂತುಂಬಿತ ಮರಗಳಿಂದ ಅಲಂಕರಿಸಲ್ಪಟ್ಟ ಆ ಪುಣ್ಯ ಆಶ್ರಮದಲ್ಲಿ ಅವನು ಕಿನ್ನರಿಯಂತೆ ಓಡಾಡುತ್ತಿದ್ದ ಅವನ ಸೊಸೆಯನ್ನು ಕಂಡನು.
03137003a ಯವಕ್ರೀಸ್ತಾಮುವಾಚೇದಮುಪತಿಷ್ಠಸ್ವ ಮಾಮಿತಿ|
03137003c ನಿರ್ಲಜ್ಜೋ ಲಜ್ಜಯಾ ಯುಕ್ತಾಂ ಕಾಮೇನ ಹೃತಚೇತನಃ||
ಆಗ ಕಾಮದಿಂದ ತನ್ನ ಮನಸ್ಸನ್ನೇ ಕಳೆದುಕೊಂಡ ಯವಕ್ರಿಯು ನಿರ್ಲಜ್ಜನಾಗಿ ಲಜ್ಜೆಗೊಂಡ ಅವಳಿಗೆ “ನನ್ನೊಟ್ಟಿಗೆ ಮಲಗು!” ಎಂದು ಕೇಳಿದನು.
03137004a ಸಾ ತಸ್ಯ ಶೀಲಮಾಜ್ಞಾಯ ತಸ್ಮಾಚ್ಛಾಪಾಚ್ಚ ಬಿಭ್ಯತೀ|
03137004c ತೇಜಸ್ವಿತಾಂ ಚ ರೈಭ್ಯಸ್ಯ ತಥೇತ್ಯುಕ್ತ್ವಾ ಜಗಾಮ ಸಾ||
ಅವನ ಗುಣವನ್ನು ಅರಿತ ಮತ್ತು ಅವನ ಶಾಪಕ್ಕೆ ಹೆದರಿದ ಮತ್ತು ರೈಭ್ಯನ ತೇಜಸ್ಸನ್ನು ತಿಳಿದಿದ್ದ ಅವಳು ಹಾಗೆಯೇ ಆಗಲಿ ಎಂದು ಹೋದಳು.
03137005a ತತ ಏಕಾಂತಮುನ್ನೀಯ ಮಜ್ಜಯಾಮಾಸ ಭಾರತ|
03137005c ಆಜಗಾಮ ತದಾ ರೈಭ್ಯಃ ಸ್ವಮಾಶ್ರಮಮರಿಂದಮ||
03137006a ರುದಂತೀಂ ಚ ಸ್ನುಷಾಂ ದೃಷ್ಟ್ವಾ ಭಾರ್ಯಾಮಾರ್ತಾಂ ಪರಾವಸೋಃ|
03137006c ಸಾಂತ್ವಯಂ ಶ್ಲಕ್ಷ್ಣಯಾ ವಾಚಾ ಪರ್ಯಪೃಚ್ಚದ್ಯುಧಿಷ್ಠಿರ||
ಭಾರತ! ಆಗ ಅವನು ಏಕಾಂತಕ್ಕೆ ಕರೆದೊಯ್ದು ಬಲಾತ್ಕಾರದಿಂದ ಸಂಭೋಗಿಸಿದನು. ಅನಂತರ ಅರಿಂದಮ ರೈಭ್ಯನು ತನ್ನ ಆಶ್ರಮಕ್ಕೆ ಹಿಂದಿರುಗಿದನು. ಯುಧಿಷ್ಠಿರ! ಆರ್ತಳಾಗಿ ಅಳುತ್ತಿರುವ ಪರಾವಸುವಿನ ಹೆಂಡತಿ ಮತ್ತು ತನ್ನ ಸೊಸೆಯನ್ನು ನೋಡಿ ಅವನು ಮೃದುವಾದ ಮಾತುಗಳಿಂದ ಅವಳನ್ನು ಸಂತವಿಸಿ ಕೇಳಿದನು.
03137007a ಸಾ ತಸ್ಮೈ ಸರ್ವಮಾಚಷ್ಟ ಯವಕ್ರೀಭಾಷಿತಂ ಶುಭಾ|
03137007c ಪ್ರತ್ಯುಕ್ತಂ ಚ ಯವಕ್ರೀತಂ ಪ್ರೇಕ್ಷಾಪೂರ್ವಂ ತದಾತ್ಮನಾ||
ಆ ಶುಭೆಯು ಅವನಿಗೆ - ಯವಕ್ರಿಯು ಮಾತನಾಡಿದುದನ್ನು ಮತ್ತು ಸಾಕಷ್ಟು ವಿಚಾರಮಾಡಿ ತಾನು ಯವಕ್ರಿಗೆ ಕೊಟ್ಟ ಉತ್ತರ - ಎಲ್ಲವನ್ನೂ ವರದಿಮಾಡಿದಳು.
03137008a ಶೃಣ್ವಾನಸ್ಯೈವ ರೈಭ್ಯಸ್ಯ ಯವಕ್ರೀತವಿಚೇಷ್ಟಿತಂ|
03137008c ದಹನ್ನಿವ ತದಾ ಚೇತಃ ಕ್ರೋಧಃ ಸಮಭವನ್ಮಹಾನ್||
ಯವಕ್ರಿಯ ವಿಚೇಷ್ಟೆಯನ್ನು ಕೇಳಿದ ರೈಭ್ಯನು ತನ್ನ ಚೇತಸ್ಸೇ ಸುಡುತ್ತಿರುವಂತೆ ಮಹಾ ಕೋಪಿಷ್ಟನಾದನು.
03137009a ಸ ತದಾ ಮನ್ಯುನಾವಿಷ್ಟಸ್ತಪಸ್ವೀ ಭೃಶಕೋಪನಃ|
03137009c ಅವಲುಪ್ಯ ಜಟಾಮೇಕಾಂ ಜುಹಾವಾಗ್ನೌ ಸುಸಂಸ್ಕೃತೇ||
ಆ ಭೃಷಕೋಪನ ತಪಸ್ವಿಯು ಕೋಪಾವಿಷ್ಟನಾಗಿ ತನ್ನ ತಲೆಯ ಒಂದು ಕೂದಲನ್ನು ಕಿತ್ತು ಸುಸಂಸ್ಕೃತವಾದ ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು.
03137010a ತತಃ ಸಮಭವನ್ನಾರೀ ತಸ್ಯಾ ರೂಪೇಣ ಸಮ್ಮಿತಾ|
03137010c ಅವಲುಪ್ಯಾಪರಾಂ ಚಾಥ ಜುಹಾವಾಗ್ನೌ ಜಟಾಂ ಪುನಃ||
03137011a ತತಃ ಸಮಭವದ್ರಕ್ಷೋ ಘೋರಾಕ್ಷಂ ಭೀಮದರ್ಶನಂ|
03137011c ಅಬ್ರೂತಾಂ ತೌ ತದಾ ರೈಭ್ಯಂ ಕಿಂ ಕಾರ್ಯಂ ಕರವಾಮಹೇ||
ಆಗ ಅಲ್ಲಿಂದ ರೂಪದಲ್ಲಿ ತನ್ನ ಸೊಸೆಯಂತದೇ ರೂಪವನ್ನುಳ್ಳ ನಾರಿಯು ಮೇಲೆದ್ದಳು. ಆಗ ಅವನು ತನ್ನ ತಲೆಯಿಂದ ಪುನಃ ಇನ್ನೊಂದು ಕೂದಲನ್ನು ಕಿತ್ತು ಅಗ್ನಿಯಲ್ಲಿ ಹಾಕಲು ಅಲ್ಲಿಂದ ಭಯಂಕರನಾಗಿ ಕಾಣುತ್ತಿದ್ದ ಘೋರ ಕಣ್ಣುಗಳುಳ್ಳ ರಾಕ್ಷಸನು ಮೇಲೆ ಬಂದನು. ಅವರಿಬ್ಬರೂ ರೈಭ್ಯನಲ್ಲಿ ನಾವು ಯಾವ ಕಾರ್ಯವನ್ನು ಮಾಡಬೇಕು ಎಂದು ಕೇಳಿದರು.
03137012a ತಾವಬ್ರವೀದೃಷಿಃ ಕ್ರುದ್ಧೋ ಯವಕ್ರೀರ್ವಧ್ಯತಾಮಿತಿ|
03137012c ಜಗ್ಮತುಸ್ತೌ ತಥೇತ್ಯುಕ್ತ್ವಾ ಯವಕ್ರೀತಜಿಘಾಂಸಯಾ||
ಅವರಿಗೆ ಕೃದ್ಧನಾದ ಋಷಿಯು “ಯವಕ್ರಿಯನ್ನು ಕೊಲ್ಲಿ!” ಎಂದು ಹೇಳಿದನು. “ಹಾಗೆಯೇ ಆಗಲಿ!” ಎಂದು ಅವರೀರ್ವರು ಯವಕ್ರಿಯನ್ನು ಕೊಲ್ಲಲು ಹೋದರು.
03137013a ತತಸ್ತಂ ಸಮುಪಾಸ್ಥಾಯ ಕೃತ್ಯಾ ಸೃಷ್ಟಾ ಮಹಾತ್ಮನಾ|
03137013c ಕಮಂಡಲುಂ ಜಹಾರಾಸ್ಯ ಮೋಹಯಿತ್ವಾ ತು ಭಾರತ||
ಭಾರತ! ಆಗ ಆ ಮಹಾತ್ಮನು ಸೃಷ್ಟಿಸಿದ ಅವಳು ಯವಕ್ರಿಯನ್ನು ಸಮೀಪಿಸಿ, ಮೋಹಿಸಿ, ಅವನ ಕಮಂಡಲನ್ನು ಅಪಹರಿಸಿದಳು.
03137014a ಉಚ್ಚಿಷ್ಟಂ ತು ಯವಕ್ರೀತಮಪಕೃಷ್ಟಕಮಂಡಲುಂ|
03137014c ತತ ಉದ್ಯತಶೂಲಃ ಸ ರಾಕ್ಷಸಃ ಸಮುಪಾದ್ರವತ್||
ತನ್ನ ಕಮಂಡಲುವನ್ನು ಕಳೆದುಕೊಂಡ ಯವಕ್ರಿಯು ಮಲಿನನಾದಾಗ ಆ ರಾಕ್ಷಸನು ಮೇಲಿತ್ತಿದ ಶೂಲದಿಂದ ಅವನ ಮೇಲೆ ಧಾಳಿಮಾಡಿದನು.
03137015a ತಮಾಪತಂತಂ ಸಂಪ್ರೇಕ್ಷ್ಯ ಶೂಲಹಸ್ತಂ ಜಿಘಾಂಸಯಾ|
03137015c ಯವಕ್ರೀಃ ಸಹಸೋತ್ಥಾಯ ಪ್ರಾದ್ರವದ್ಯೇನ ವೈ ಸರಃ||
ಕೊಲ್ಲುವ ಆಸೆಯಿಂದ ಶೂಲವನ್ನು ಹಿಡಿದು ತನ್ನ ಮೇಲೆಗಿರುದುದನ್ನು ನೋಡಿದ ಯವಕ್ರಿಯು ತಕ್ಷಣವೇ ಎದ್ದು ಸರೋವರದ ಕಡೆಗೆ ಓಡಿದನು.
03137016a ಜಲಹೀನಂ ಸರೋ ದೃಷ್ಟ್ವಾ ಯವಕ್ರೀಸ್ತ್ವರಿತಃ ಪುನಃ|
03137016c ಜಗಾಮ ಸರಿತಃ ಸರ್ವಾಸ್ತಾಶ್ಚಾಪ್ಯಾಸನ್ವಿಶೋಷಿತಾಃ||
ಸರೋವರದಲ್ಲಿ ನೀರಿಲ್ಲದಿರುವುದನ್ನು ಕಂಡು ಯವಕ್ರಿಯು ಪುನಃ ಅವಸರದಲ್ಲಿ ನದಿಯಕಡೆ ಹೋದನು. ಆದರೆ ಎಲ್ಲ ನದಿಗಳೂ ಬತ್ತಿಹೋಗಿದ್ದವು.
03137017a ಸ ಕಾಲ್ಯಮಾನೋ ಘೋರೇಣ ಶೂಲಹಸ್ತೇನ ರಕ್ಷಸಾ|
03137017c ಅಗ್ನಿಹೋತ್ರಂ ಪಿತುರ್ಭೀತಃ ಸಹಸಾ ಸಮುಪಾದ್ರವತ್||
ಶೂಲವನ್ನು ಹಿಡಿದ ಆ ಘೋರ ರಾಕ್ಷಸನು ಬೆನ್ನತ್ತಿ ಬರುತ್ತಿರಲು ಭಯಭೀತನಾಗಿ ಅವನು ತನ್ನ ತಂದೆಯ ಅಗ್ನಿಹೋತ್ರದ ಬಳಿ ಓಡಿ ಬಂದನು.
03137018a ಸ ವೈ ಪ್ರವಿಶಮಾನಸ್ತು ಶೂದ್ರೇಣಾಂಧೇನ ರಕ್ಷಿಣಾ|
03137018c ನಿಗೃಹೀತೋ ಬಲಾದ್ದ್ವಾರಿ ಸೋಽವಾತಿಷ್ಠತ ಪಾರ್ಥಿವ||
ಪಾರ್ಥಿವ! ಆದರೆ ಅವನು ಪ್ರವೇಶಿಸುತ್ತಿರುವಾಗ ಕಾವಲುಗಾರನಾಗಿದ್ದ ಕುರುಡ ಶೂದ್ರನು ಅವನನ್ನು ಬಲವಂತವಾಗಿ ಬಾಗಿಲಲ್ಲಿಯೇ ತಡೆದನು.
03137019a ನಿಗೃಹೀತಂ ತು ಶೂದ್ರೇಣ ಯವಕ್ರೀತಂ ಸ ರಾಕ್ಷಸಃ|
03137019c ತಾಡಯಾಮಾಸ ಶೂಲೇನ ಸ ಭಿನ್ನಹೃದಯೋಽಪತತ್||
ಶೂದ್ರನು ಅವನನ್ನು ತಡೆಹಿಡಿದಿರಲು ಆ ರಾಕ್ಷಸನು ಯವಕ್ರಿಯನ್ನು ಶೂಲದಿಂದ ಹೊಡೆದನು ಮತ್ತು ಅವನು ಹೃದಯ ಸೀಳಿ ಕೆಳಗೆ ಬಿದ್ದನು.
03137020a ಯವಕ್ರೀತಂ ಸ ಹತ್ವಾ ತು ರಾಕ್ಷಸೋ ರೈಭ್ಯಮಾಗಮತ್|
03137020c ಅನುಜ್ಞಾತಸ್ತು ರೈಭ್ಯೇಣ ತಯಾ ನಾರ್ಯಾ ಸಹಾಚರತ್||
ಯವಕ್ರಿಯನ್ನು ಕೊಂದು ಆ ರಾಕ್ಷಸನಾದರೋ ರೈಭ್ಯನಲ್ಲಿಗೆ ಮರಳಿದನು. ರೈಭ್ಯನು ಅವನಿಗೆ ಹೋಗಲು ಅನುಮತಿಯನ್ನಿತ್ತನು. ಆದರೆ ಆ ನಾರಿಯೊಡನೆ ಇರತೊಡಗಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಸಪ್ತತ್ರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತೇಳನೆಯ ಅಧ್ಯಾಯವು.