Aranyaka Parva: Chapter 128

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೨೮

ತಾಯಂದಿರು ಚೀರಿ ಪ್ರತಿಭಟಿಸಿದರೂ ಯಾಜಕನು ಜಂತುವನ್ನು ಬಲಾತ್ಕಾರವಾಗಿ ಯಜ್ಞಕ್ಕೆ ಆಹುತಿಯನ್ನಾಗಿತ್ತುದು; ಹೋಮಧೂಮವನ್ನು ಸೇವಿಸಿ ಗರ್ಭಿಣಿಯರಾದ ರಾಜಪತ್ನಿಯರಲ್ಲಿ ಒಂದು ನೂರು ಮಕ್ಕಳು ಜನಿಸುವುದು; ಜಂತುವು ಹಿರಿಯವನಾಗಿ ಚಿಹ್ನೆಯೊಂದಿಗೆ ಅವನದೇ ತಾಯಿಯಲ್ಲಿ ಪುನಃ ಜನಿಸಿದುದು (೧-೯). ರಾಜ ಸೋಮಕನು ಮರಣ ಹೊಂದಿದಾಗ ತನ್ನ ಪುರೋಹಿತನು ನರಕದಲ್ಲಿ ನರಳುತ್ತಿರುವುದನ್ನು ನೋಡಿ, ಅವನಿಗೆ ಕೊಡುವ ಶಿಕ್ಷೆಯನ್ನು ತನಗೆ ಕೊಡಬೇಕೆಂದು ಧರ್ಮರಾಜನಿಗೆ ಕೇಳಿದುದು (೧೦-೧೨). ಒಬ್ಬನು ಮಾಡಿದುದರ ಫಲವನ್ನು ಇನ್ನೊಬ್ಬನು ಅನುಭವಿಸಲಿಕ್ಕಾಗುವುದಿಲ್ಲವೆಂದು ಧರ್ಮನು ಹೇಳಲು ಸೋಮಕನು ತನ್ನ ಪುರೋಹಿತನೊಂದಿಗೆ ತಾನೂ ಇದ್ದುಕೊಂಡು ನರಕವನ್ನು ಅನುಭವಿಸಿ ನಂತರ ಸದ್ಗತಿಯನ್ನು ಪಡೆದುದು (೧೩-೧೯).

03128001 ಸೋಮಕ ಉವಾಚ|

03128001a ಬ್ರಹ್ಮನ್ಯದ್ಯದ್ಯಥಾ ಕಾರ್ಯಂ ತತ್ತತ್ಕುರು ತಥಾ ತಥಾ|

03128001c ಪುತ್ರಕಾಮತಯಾ ಸರ್ವಂ ಕರಿಷ್ಯಾಮಿ ವಚಸ್ತವ||

ಸೋಮಕನು ಹೇಳಿದನು: “ಬ್ರಹ್ಮನ್! ಯಾವ್ಯಾವಾಗ ಏನೇನನ್ನು ಮಾಡಬೇಕೋ ಹಾಗೆಯೇ ಮಾಡು. ಮಕ್ಕಳನ್ನು ಪಡೆಯುವ ಆಸೆಯಿಂದ ನೀನು ಹೇಳಿದುದೆಲ್ಲವನ್ನೂ ಮಾಡುತ್ತೇನೆ.””

03128002 ಲೋಮಶ ಉವಾಚ|

03128002a ತತಃ ಸ ಯಾಜಯಾಮಾಸ ಸೋಮಕಂ ತೇನ ಜಂತುನಾ|

03128002c ಮಾತರಸ್ತು ಬಲಾತ್ಪುತ್ರಮಪಾಕರ್ಷುಃ ಕೃಪಾನ್ವಿತಾಃ||

ಲೋಮಶನು ಹೇಳಿದನು: “ಅನಂತರ ಅವನು ಸೋಮಕನಿಗಾಗಿ ಜಂತುವನ್ನು ಆಹುತಿಯನ್ನಾಗಿತ್ತನು. ಆದರೆ ಕೃಪಾನ್ವಿತ ತಾಯಂದಿರು ಆ ಬಾಲಕನನ್ನು ಬಲಾತ್ಕಾರವಾಗಿ ಎಳೆದಿಟ್ಟುಕೊಂಡರು.

03128003a ಹಾ ಹತಾಃ ಸ್ಮೇತಿ ವಾಶಂತ್ಯಸ್ತೀವ್ರಶೋಕಸಮನ್ವಿತಾಃ|

03128003c ತಂ ಮಾತರಃ ಪ್ರತ್ಯಕರ್ಷನ್ಗೃಹೀತ್ವಾ ದಕ್ಷಿಣೇ ಕರೇ||

03128003e ಸವ್ಯೇ ಪಾಣೌ ಗೃಹೀತ್ವಾ ತು ಯಾಜಕೋಽಪಿ ಸ್ಮ ಕರ್ಷತಿ||

“ಅಯ್ಯೋ ನಾವು ನಾಶಗೊಂಡೆವು!” ಎಂದು ತೀವ್ರ ಶೋಕಸಮಾನ್ವಿತರಾಗಿ ಆ ತಾಯಂದಿರು ಅವನ ಬಲಗೈಯನ್ನು ಹಿಡಿದು ಎಳೆದರು. ಆದರೆ ಯಾಜಕನು ಅವನ ಎಡಗೈಯನ್ನು ಹಿಡಿದು ಹಿಂದಕ್ಕೆ ಎಳೆದುಕೊಂಡನು.

03128004a ಕುರರೀಣಾಮಿವಾರ್ತಾನಾಮಪಾಕೃಷ್ಯ ತು ತಂ ಸುತಂ|

03128004c ವಿಶಸ್ಯ ಚೈನಂ ವಿಧಿನಾ ವಪಾಮಸ್ಯ ಜುಹಾವ ಸಃ||

ಚೀರಾಡುತ್ತಿರುವ ಆರ್ತರಿಂದ ಆ ಮಗನನನ್ನು ಎಳೆದು ವಿಧಿವತ್ತಾಗಿ ಅವನನ್ನು ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು.

03128005a ವಪಾಯಾಂ ಹೂಯಮಾನಾಯಾಂ ಗಂಧಮಾಘ್ರಾಯ ಮಾತರಃ|

03128005c ಆರ್ತಾ ನಿಪೇತುಃ ಸಹಸಾ ಪೃಥಿವ್ಯಾಂ ಕುರುನಂದನ||

03128005e ಸರ್ವಾಶ್ಚ ಗರ್ಭಾನಲಭಂಸ್ತತಸ್ತಾಃ ಪಾರ್ಥಿವಾಂಗನಾಃ||

ಕುರುನಂದನ! ಅವನ ದೇಹವನ್ನು ಆಹುತಿಯನ್ನಾಗಿ ಕೊಡುತ್ತಿರುವಾಗ ಆರ್ತ ತಾಯಂದಿರು ಆ ಹೊಗೆಯನ್ನು ಸೇವಿಸಿ ತಕ್ಷಣವೇ ಭುವಿಯ ಮೇಲೆ ಉರುಳಿ ಬಿದ್ದರು. ಅನಂತರ ರಾಜನ ಪತ್ನಿಯರೆಲ್ಲರೂ ಗರ್ಭವತಿಯರಾದರು.

03128006a ತತೋ ದಶಸು ಮಾಸೇಷು ಸೋಮಕಸ್ಯ ವಿಶಾಂ ಪತೇ|

03128006c ಜಜ್ಞೇ ಪುತ್ರಶತಂ ಪೂರ್ಣಂ ತಾಸು ಸರ್ವಾಸು ಭಾರತ||

ಭಾರತ! ವಿಶಾಂಪತೇ! ಹತ್ತು ತಿಂಗಳಿನ ನಂತರ ಸೋಮಕನಿಗೆ ಅವರೆಲ್ಲರಲ್ಲಿ ಸಂಪೂರ್ಣವಾಗಿ ಒಂದು ನೂರು ಮಕ್ಕಳು ಜನಿಸಿದರು.

03128007a ಜಂತುರ್ಜ್ಯೇಷ್ಠಃ ಸಮಭವಜ್ಜನಿತ್ರ್ಯಾಮೇವ ಭಾರತ|

03128007c ಸ ತಾಸಾಮಿಷ್ಟ ಏವಾಸೀನ್ನ ತಥಾನ್ಯೇ ನಿಜಾಃ ಸುತಾಃ||

ಭಾರತ! ಅದೇ ತಾಯಿಯಲ್ಲಿ ಜಂತುವು ಹಿರಿಯವನಾಗಿ ಜನಿಸಿದನು. ಮತ್ತು ಅವರೆಲ್ಲರೂ ತಮ್ಮದೇ ಮಕ್ಕಳಿಗಿಂತ ಅಧಿಕವಾಗಿ ಅವನನ್ನು ಪ್ರೀತಿಸಿದರು.

03128008a ತಚ್ಚ ಲಕ್ಷಣಮಸ್ಯಾಸೀತ್ಸೌವರ್ಣಂ ಪಾರ್ಶ್ವ ಉತ್ತರ|

03128008c ತಸ್ಮಿನ್ಪುತ್ರಶತೇ ಚಾಗ್ರ್ಯಃ ಸ ಬಭೂವ ಗುಣೈರ್ಯುತಃ||

ಅವನ ಎಡಭಾಗದಲ್ಲಿ ಬಂಗಾರದ ಚಿಹ್ನೆಯಿತ್ತು. ಗುಣಗಳಿಂದ ಸಮಾಯುಕ್ತನಾಗಿ ಅವನು ನೂರು ಮಕ್ಕಳಲ್ಲಿ ಅಗ್ರನೆನಿಸಿಕೊಂಡನು.

03128009a ತತಃ ಸ ಲೋಕಮಗಮತ್ಸೋಮಕಸ್ಯ ಗುರುಃ ಪರಂ|

03128009c ಅಥ ಕಾಲೇ ವ್ಯತೀತೇ ತು ಸೋಮಕೋಽಪ್ಯಗಮತ್ಪರಂ||

ಅನಂತರ ಸೋಮಕನ ಗುರುವು ಪರಮ ಲೋಕವನ್ನು ಸೇರಿದನು. ಕಾಲಕಳೆದಂತೆ ಸೋಮಕನೂ ಕೂಡ ಪರಮ ಗತಿಯನ್ನು ಹೊಂದಿದನು.

03128010a ಅಥ ತಂ ನರಕೇ ಘೋರೇ ಪಚ್ಯಮಾನಂ ದದರ್ಶ ಸಃ|

03128010c ತಮಪೃಚ್ಚತ್ಕಿಮರ್ಥಂ ತ್ವಂ ನರಕೇ ಪಚ್ಯಸೇ ದ್ವಿಜ||

ಅಲ್ಲಿ ಅವನು ಘೋರ ನರಕದಲ್ಲಿ ಸುಡುತ್ತಿರುವುದನ್ನು ಕಂಡನು. ಆಗ ನೀನು ಏಕೆ ನರಕದಲ್ಲಿ ಸುಡುತ್ತಿದ್ದೀಯೆ ಎಂದು ಆ ದ್ವಿಜನನ್ನು ಕೇಳಿದನು.

03128011a ತಮಬ್ರವೀದ್ಗುರುಃ ಸೋಽಥ ಪಚ್ಯಮಾನೋಽಗ್ನಿನಾ ಭೃಶಂ|

03128011c ತ್ವಂ ಮಯಾ ಯಾಜಿತೋ ರಾಜಂಸ್ತಸ್ಯೇದಂ ಕರ್ಮಣಃ ಫಲಂ||

ಆಗ ಅಗ್ನಿಯಲ್ಲಿ ಚೆನ್ನಾಗಿ ಸುಡುತ್ತಿರುವ ಅವನ ಗುರುವು ಹೇಳಿದನು: “ರಾಜನ್! ನಿನಗೋಸ್ಕರ ನಾನು ಆ ಯಜ್ಞವನ್ನು ನಡೆಸಿದೆ. ಆ ಕರ್ಮದ ಫಲವೇ ಇದು!”

03128012a ಏತಚ್ಛೃತ್ವಾ ಸ ರಾಜರ್ಷಿರ್ಧರ್ಮರಾಜಾನಮಬ್ರವೀತ್|

03128012c ಅಹಮತ್ರ ಪ್ರವೇಕ್ಷ್ಯಾಮಿ ಮುಚ್ಯತಾಂ ಮಮ ಯಾಜಕಃ||

03128012e ಮತ್ಕೃತೇ ಹಿ ಮಹಾಭಾಗಃ ಪಚ್ಯತೇ ನರಕಾಗ್ನಿನಾ||

ಇದನ್ನು ಕೇಳಿದ ಆ ರಾಜರ್ಷಿಯು ಧರ್ಮರಾಜನಿಗೆ ಹೇಳಿದನು: “ನನ್ನ ಯಾಜಕನನ್ನು ಬಿಡುಗಡೆಮಾಡು. ನಾನು ಅವನ ಜಾಗಕ್ಕೆ ಹೋಗುತ್ತೇನೆ. ನನಗಾಗಿ ಮಾಡಿದ ಕಾರ್ಯದಿಂದಲೇ ಆ ಮಹಾಭಾಗನು ನರಕಾಗ್ನಿಯಲ್ಲಿ ಸುಡುತ್ತಿದ್ದಾನೆ.”

03128013 ಧರ್ಮ ಉವಾಚ|

03128013a ನಾನ್ಯಃ ಕರ್ತುಃ ಫಲಂ ರಾಜನ್ನುಪಭುಂಕ್ತೇ ಕದಾ ಚನ|

03128013c ಇಮಾನಿ ತವ ದೃಶ್ಯಂತೇ ಫಲಾನಿ ದದತಾಂ ವರ||

ಧರ್ಮನು ಹೇಳಿದನು: “ರಾಜನ್! ಒಬ್ಬನು ಮಾಡಿದುದರ ಫಲವನ್ನು ಇನ್ನೊಬ್ಬನು ಎಂದೂ ಅನುಭವಿಸುವುದಿಲ್ಲ. ದಾನಿಗಳಲ್ಲಿ ಶ್ರೇಷ್ಠ! ನೀನು ನೋಡುತ್ತಿರುವುದು ನಿನ್ನ ಫಲಗಳು.”

03128014 ಸೋಮಕ ಉವಾಚ|

03128014a ಪುಣ್ಯಾನ್ನ ಕಾಮಯೇ ಲೋಕಾನೃತೇಽಹಂ ಬ್ರಹ್ಮವಾದಿನಂ|

03128014c ಇಚ್ಚಾಮ್ಯಹಮನೇನೈವ ಸಹ ವಸ್ತುಂ ಸುರಾಲಯೇ||

03128015a ನರಕೇ ವಾ ಧರ್ಮರಾಜ ಕರ್ಮಣಾಸ್ಯ ಸಮೋ ಹ್ಯಹಂ|

03128015c ಪುಣ್ಯಾಪುಣ್ಯಫಲಂ ದೇವ ಸಮಮಸ್ತ್ವಾವಯೋರಿದಂ||

ಸೋಮಕನು ಹೇಳಿದನು: “ಈ ಬ್ರಹ್ಮವಾದಿನಿಯಿಲ್ಲದೇ ನಾನು ಲೋಕದ ಪುಣ್ಯಗಳನ್ನು ಬಯಸುವುದಿಲ್ಲ. ಧರ್ಮರಾಜ! ಇವನೊಟ್ಟಿಗೆ ವಾಸಿಸಲು - ಸುರಾಲಯವಿರಲಿ ಅಥವಾ ನರಕದಲ್ಲಿರಲಿ – ಬಯಸುತ್ತೇನೆ. ಇವನ ಕರ್ಮವೂ ನನ್ನ ಕರ್ಮವೂ ಒಂದೇ. ದೇವ! ಪುಣ್ಯವಾಗಿರಲಿ ಅಪುಣ್ಯವಾಗಿರಲಿ ನಾವಿಬ್ಬರು ಒಂದೇ ಫಲವನ್ನು ಹಂಚಿಕೊಳ್ಳಬೇಕು.”

03128016 ಧರ್ಮ ಉವಾಚ|

03128016a ಯದ್ಯೇವಮೀಪ್ಸಿತಂ ರಾಜನ್ಭುಂಕ್ಷ್ವಾಸ್ಯ ಸಹಿತಃ ಫಲಂ|

03128016c ತುಲ್ಯಕಾಲಂ ಸಹಾನೇನ ಪಶ್ಚಾತ್ಪ್ರಾಪ್ಸ್ಯಸಿ ಸದ್ಗತಿಂ||

ಧರ್ಮನು ಹೇಳಿದನು: “ರಾಜನ್! ಅದನ್ನೇ ನೀನು ಬಯಸುವೆಯಾದರೆ ಅವನೊಂದಿಗೆ ಅವನ ಫಲವನ್ನು ಅಷ್ಟೇ ಕಾಲ ಅನುಭವಿಸು. ಅನಂತರ ಸದ್ಗತಿಯನ್ನು ಹೊಂದುತ್ತೀಯೆ.””

03128017 ಲೋಮಶ ಉವಾಚ|

03128017a ಸ ಚಕಾರ ತಥಾ ಸರ್ವಂ ರಾಜಾ ರಾಜೀವಲೋಚನಃ|

03128017c ಪುನಶ್ಚ ಲೇಭೇ ಲೋಕಾನ್ಸ್ವಾನ್ಕರ್ಮಣಾ ನಿರ್ಜಿತಾಂ ಶುಭಾನ್||

03128017e ಸಹ ತೇನೈವ ವಿಪ್ರೇಣ ಗುರುಣಾ ಸ ಗುರುಪ್ರಿಯಃ||

ಲೋಮಶನು ಹೇಳಿದನು: “ಆ ರಾಜೀವಲೋಚನ ರಾಜನು ಹಾಗೆಯೇ ಎಲ್ಲವನ್ನೂ ಮಾಡಿದನು ಮತ್ತು ಗುರುಪ್ರಿಯನಾದ ಅವನು ಆ ವಿಪ್ರ ಗುರುವಿನೊಂದಿಗೆ ಪುನಃ ತನ್ನ ಕರ್ಮಗಳಿಂದ ಗೆದ್ದಿದ್ದ ಶುಭ ಲೋಕಗಳನ್ನು ಪಡೆದನು.

03128018a ಏಷ ತಸ್ಯಾಶ್ರಮಃ ಪುಣ್ಯೋ ಯ ಏಷೋಽಗ್ರೇ ವಿರಾಜತೇ|

03128018c ಕ್ಷಾಂತ ಉಷ್ಯಾತ್ರ ಷಡ್ರಾತ್ರಂ ಪ್ರಾಪ್ನೋತಿ ಸುಗತಿಂ ನರ||

ನಮಗೆ ತೋರುತ್ತಿರುವ ಇದೇ ಅವನ ಪುಣ್ಯಾಶ್ರಮ. ಇಲ್ಲಿ ಆರು ರಾತ್ರಿಗಳನ್ನು ಕಳೆದವನು ಒಳ್ಳೆಯ ಗತಿಯನ್ನು ಹೊಂದುತ್ತಾನೆ.

03128019a ಏತಸ್ಮಿನ್ನಪಿ ರಾಜೇಂದ್ರ ವತ್ಸ್ಯಾಮೋ ವಿಗತಜ್ವರಾಃ|

03128019c ಷಡ್ರಾತ್ರಂ ನಿಯತಾತ್ಮಾನಃ ಸಜ್ಜೀಭವ ಕುರೂದ್ವಹ||

ಕುರೂದ್ವಹ! ರಾಜೇಂದ್ರ! ಇಲ್ಲಿ ನಾವೂ ಕೂಡ ಚಿಂತೆಯಿಲ್ಲದೇ ನಿಯತಾತ್ಮರಾಗಿ ಆರು ರಾತ್ರಿಗಳನ್ನು ಕಳೆಯೋಣ! ಅಣಿಯಾಗು!”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಜಂತೂಪಖ್ಯಾನೇ ಅಷ್ಟವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಜಂತೂಪಖ್ಯಾನದಲ್ಲಿ ನೂರಾಇಪ್ಪತ್ತೆಂಟನೆಯ ಅಧ್ಯಾಯವು.

Related image

Comments are closed.