Aranyaka Parva: Chapter 124

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೨೪

ಚ್ಯವನನ ನೇತೃತ್ವದಲ್ಲಿ ರಾಜಾ ಶರ್ಯಾತಿಯು ಯಾಗವನ್ನು ನೆರವೇರಿಸಿದ್ದುದು; ಯಾಗದಲ್ಲಿ ಚ್ಯವನನು ಅಶ್ವಿನೀಕುಮಾರರಿಗೆ ಸೋಮವನ್ನು ನೀಡಲು ಇಂದ್ರನು ತಡೆದುದು (೧-೯). ಇಂದ್ರನು ಚ್ಯವನನ ಮೇಲೆ ವಜ್ರವನ್ನು ಎಸೆಯುತ್ತಿರುವಾಗ ಅವನನ್ನು ಹಾಗೆಯೇ ನಿಲ್ಲಿಸಿದ್ದುದು (೧೦-೧೭). ಇಂದ್ರನನ್ನು ನುಂಗಲು ಚ್ಯವನನು ಮದ ಎಂಬ ರಾಕ್ಷಸನನ್ನು ಸೃಷ್ಟಿಸಿದುದು (೧೮-೨೪).

03124001 ಲೋಮಶ ಉವಾಚ|

03124001a ತತಃ ಶ್ರುತ್ವಾ ತು ಶರ್ಯಾತಿರ್ವಯಃಸ್ಥಂ ಚ್ಯವನಂ ಕೃತಂ|

03124001c ಸಂಹೃಷ್ಟಃ ಸೇನಯಾ ಸಾರ್ಧಮುಪಾಯಾದ್ಭಾರ್ಗವಾಶ್ರಮಂ||

ಲೋಮಶನು ಹೇಳಿದನು: “ಆಗ ಚ್ಯವನನು ಯೌವನಾವಸ್ಥೆಯನ್ನು ಪಡೆದಿದ್ದಾನೆ ಎಂದು ಕೇಳಿದ ಶರ್ಯಾತಿಯು ಸಂತೋಷಗೊಂಡು ಸೇನೆಯೊಂದಿಗೆ ಭಾರ್ಗವಾಶ್ರಮಕ್ಕೆ ಬಂದನು.

03124002a ಚ್ಯವನಂ ಚ ಸುಕನ್ಯಾಂ ಚ ದೃಷ್ಟ್ವಾ ದೇವಸುತಾವಿವ|

03124002c ರೇಮೇ ಮಹೀಪಃ ಶರ್ಯಾತಿಃ ಕೃತ್ಸ್ನಾಂ ಪ್ರಾಪ್ಯ ಮಹೀಮಿವ||

ದೇವಸುತರಂತಿದ್ದ ಚ್ಯವನ-ಸುಕನ್ಯೆಯರನ್ನು ನೋಡಿ ಮಹೀಪ ಶರ್ಯಾತಿಯು ಇಡೀ ಭೂಮಿಯನ್ನೇ ಗೆದ್ದೆನೋ ಎನ್ನುವಷ್ಟು ಸಂತೋಷದಿಂದ ನಲಿದಾಡಿದನು.

03124003a ಋಷಿಣಾ ಸತ್ಕೃತಸ್ತೇನ ಸಭಾರ್ಯಃ ಪೃಥಿವೀಪತಿಃ|

03124003c ಉಪೋಪವಿಷ್ಟಃ ಕಲ್ಯಾಣೀಃ ಕಥಾಶ್ಚಕ್ರೇ ಮಹಾಮನಾಃ||

ಋಷಿಯು ಪತ್ನೀಸಮೇತ ರಾಜನನ್ನು ಸತ್ಕರಿಸಿ ಸ್ವಾಗತಿಸಿದನು. ಆ ಮಹಾತ್ಮರೆಲ್ಲರೂ ಕುಳಿತು ಶುಭ ಸಮಾಚಾರಗಳ ಕುರಿತು ಮಾತನಾಡಿದರು.

03124004a ಅಥೈನಂ ಭಾರ್ಗವೋ ರಾಜನ್ನುವಾಚ ಪರಿಸಾಂತ್ವಯನ್|

03124004c ಯಾಜಯಿಷ್ಯಾಮಿ ರಾಜಂಸ್ತ್ವಾಂ ಸಂಭಾರಾನುಪಕಲ್ಪಯ||

ಆಗ ಭಾರ್ಗವನು ರಾಜನಿಗೆ ಪರಿಸಂತವಿಸುತ್ತಾ ಹೇಳಿದನು: “ರಾಜನ್! ನಿನ್ನಿಂದ ಒಂದು ಯಾಗವನ್ನು ಮಾಡಿಸುತ್ತೇನೆ. ಸಾಮಗ್ರಿಗಳ ವ್ಯವಸ್ಥೆ ಮಾಡು.”

03124005a ತತಃ ಪರಮಸಂಹೃಷ್ಟಃ ಶರ್ಯಾತಿಃ ಪೃಥಿವೀಪತಿಃ|

03124005c ಚ್ಯವನಸ್ಯ ಮಹಾರಾಜ ತದ್ವಾಕ್ಯಂ ಪ್ರತ್ಯಪೂಜಯತ್||

03124006a ಪ್ರಶಸ್ತೇಽಹನಿ ಯಜ್ಞೀಯೇ ಸರ್ವಕಾಮಸಮೃದ್ಧಿಮತ್|

03124006c ಕಾರಯಾಮಾಸ ಶರ್ಯಾತಿರ್ಯಜ್ಞಾಯತನಮುತ್ತಮಂ||

ಆಗ ಪರಮ ಹರ್ಷದಿಂದ ರಾಜ ಶರ್ಯಾತಿಯು ಚ್ಯವನನ ಆ ಮಾತನ್ನು ಗೌರವಿಸಿ, ಪ್ರಶಸ್ತ ದಿನದಲ್ಲಿ ಯಜ್ಞಭೂಮಿಯನ್ನು ರಚಿಸಿ ಸರ್ವಕಾಮಗಳನ್ನೂ ಪೂರೈಸುವ ಅನುತ್ತಮ ಯಜ್ಞವನ್ನು ನೆರವೇರಿಸಿದನು.

03124007a ತತ್ರೈನಂ ಚ್ಯವನೋ ರಾಜನ್ಯಾಜಯಾಮಾಸ ಭಾರ್ಗವಃ|

03124007c ಅದ್ಭುತಾನಿ ಚ ತತ್ರಾಸನ್ಯಾನಿ ತಾನಿ ನಿಬೋಧ ಮೇ||

ರಾಜನ್! ಚ್ಯವನ ಭಾರ್ಗವನು ಮಾಡಿಸಿಕೊಟ್ಟ ಅದೇ ಯಜ್ಞದಲ್ಲಿ ಅದ್ಭುತಗಳು ನಡೆದವು. ಅವುಗಳ ಕುರಿತು ಹೇಳುತ್ತೇನೆ.

03124008a ಅಗೃಹ್ಣಾಚ್ಚ್ಯವನಃ ಸೋಮಮಶ್ವಿನೋರ್ದೇವಯೋಸ್ತದಾ|

03124008c ತಮಿಂದ್ರೋ ವಾರಯಾಮಾಸ ಗೃಹ್ಯಮಾಣಂ ತಯೋರ್ಗ್ರಹಂ||

ಆಗ ಚ್ಯವನನು ಅಶ್ವಿನೀ ದೇವತೆಗಳಿಗೆ ಸೋಮವನ್ನು ನೀಡಿದನು. ಕೊಡುತ್ತಿದ್ದ ಬಟ್ಟಲನ್ನು ಇಂದ್ರನು ತಡೆದನು.

03124009 ಇಂದ್ರ ಉವಾಚ|

03124009a ಉಭಾವೇತೌ ನ ಸೋಮಾರ್ಹೌ ನಾಸತ್ಯಾವಿತಿ ಮೇ ಮತಿಃ|

03124009c ಭಿಷಜೌ ದೇವಪುತ್ರಾಣಾಂ ಕರ್ಮಣಾ ನೈವಮರ್ಹತಃ||

ಇಂದ್ರನು ಹೇಳಿದನು: “ಈ ಇಬ್ಬರೂ ನಾಸತ್ಯರು ಸೋಮಕ್ಕೆ ಅರ್ಹರಲ್ಲ ಎಂದು ನನ್ನ ಅಭಿಪ್ರಾಯ. ಅವರು ದೇವಪುತ್ರರ ವೈದ್ಯರಾದುದರಿಂದ, ವೃತ್ತಿಯಿಂದ ಅವರು ಇದಕ್ಕೆ ಅರ್ಹರಲ್ಲ!”

03124010 ಚ್ಯವನ ಉವಾಚ|

03124010a ಮಾವಮಂಸ್ಥಾ ಮಹಾತ್ಮಾನೌ ರೂಪದ್ರವಿಣವತ್ತರೌ|

03124010c ಯೌ ಚಕ್ರತುರ್ಮಾಂ ಮಘವನ್ವೃಂದಾರಕಮಿವಾಜರಂ||

ಚ್ಯವನನು ಹೇಳಿದನು: “ರೂಪ ಮತ್ತು ಆರ್ಥಿಕ ಸಂಪತ್ತುಗಳನ್ನು ಹೊಂದಿದ ಈ ಮಹಾತ್ಮರನ್ನು ಅಪಮಾನಗೊಳಿಸಬೇಡ! ಮಘವನ್! ಅವರು ನನ್ನನ್ನು ವೃದ್ಧಾಪ್ಯವೇ ಇಲ್ಲದ ದೇವತೆಗಳಂತೆ ಮಾಡಿದ್ದಾರೆ.

03124011a ಋತೇ ತ್ವಾಂ ವಿಬುಧಾಂಶ್ಚಾನ್ಯಾನ್ಕಥಂ ವೈ ನಾರ್ಹತಃ ಸವಂ|

03124011c ಅಶ್ವಿನಾವಪಿ ದೇವೇಂದ್ರ ದೇವೌ ವಿದ್ಧಿ ಪುರಂದರ||

ಏಕೆ ಅವರು ನಿನ್ನ ಮತ್ತು ಇತರ ದೇವತೆಗಳ ಸಾಲಿನಲ್ಲಿ ಅರ್ಹರಲ್ಲ? ಪುರಂದರ! ದೇವೇಂದ್ರ! ಅಶ್ವಿನಿಯರೂ ಕೂಡ ದೇವತೆಗಳೆನ್ನುವುದನ್ನು ತಿಳಿ!”

03124012 ಇಂದ್ರ ಉವಾಚ|

03124012a ಚಿಕಿತ್ಸಕೌ ಕರ್ಮಕರೌ ಕಾಮರೂಪಸಮನ್ವಿತೌ|

03124012c ಲೋಕೇ ಚರಂತೌ ಮರ್ತ್ಯಾನಾಂ ಕಥಂ ಸೋಮಮಿಹಾರ್ಹತಃ||

ಇಂದ್ರನು ಹೇಳಿದನು: “ಅವರು ಚಿಕಿತ್ಸಕರು. ಕರ್ಮವನ್ನೆಸಗುವವರು. ಕಾಮರೂಪದಿಂದಿರುವವರು. ಮತ್ತು ಮರ್ತ್ಯರ ಲೋಕಗಳಿಗೆ ತಿರುಗುತ್ತಿರುತ್ತಾರೆ. ಅವರು ಹೇಗೆ ಸೋಮಕ್ಕೆ ಅರ್ಹರಾಗುತ್ತಾರೆ?””

03124013 ಲೋಮಶ ಉವಾಚ|

03124013a ಏತದೇವ ಯದಾ ವಾಕ್ಯಮಾಂರೇಡಯತಿ ವಾಸವಃ|

03124013c ಅನಾದೃತ್ಯ ತತಃ ಶಕ್ರಂ ಗ್ರಹಂ ಜಗ್ರಾಹ ಭಾರ್ಗವಃ||

ಲೋಮಶನು ಹೇಳಿದನು: “ವಾಸವನು ಅದನ್ನೇ ಪುನಃ ಪುನಃ ಹೇಳುತ್ತಿದ್ದರೂ, ಶಕ್ರನನ್ನು ಅನಾದರಿಸಿ ಭಾರ್ಗವನು ಸೋಮದ ಪಾತ್ರೆಯನ್ನು ನೀಡಿದನು.

03124014a ಗ್ರಹೀಷ್ಯಂತಂ ತು ತಂ ಸೋಮಮಶ್ವಿನೋರುತ್ತಮಂ ತದಾ|

03124014c ಸಮೀಕ್ಷ್ಯ ಬಲಭಿದ್ದೇವ ಇದಂ ವಚನಮಬ್ರವೀತ್||

ಆದರೆ ಅವನು ಪಾತ್ರೆಯಲ್ಲಿ ಸೋಮವನ್ನು ಸುರುಗಲು ಹೊರಡುತ್ತಿದ್ದುದನ್ನು ನೋಡಿದ ಬಲದೇವ ಇಂದ್ರನು ಈ ಮಾತನ್ನಾಡಿದನು:

03124015a ಆಭ್ಯಾಮರ್ಥಾಯ ಸೋಮಂ ತ್ವಂ ಗ್ರಹೀಷ್ಯಸಿ ಯದಿ ಸ್ವಯಂ|

03124015c ವಜ್ರಂ ತೇ ಪ್ರಹರಿಷ್ಯಾಮಿ ಘೋರರೂಪಮನುತ್ತಮಂ||

“ಸ್ವಯಂ ನೀನಾಗಿಯೇ ಅವರಿಗೆ ಸೋಮವನ್ನು ಸುರಿಯುತ್ತಿದ್ದೀಯೆ ಎಂದಾದರೆ ನನ್ನ ಈ ಘೋರರೂಪೀ, ಅನುತ್ತಮ ವಜ್ರವನ್ನು ನಿನ್ನ ಮೇಲೆ ಪ್ರಹರಿಸುತ್ತೇನೆ.”

03124016a ಏವಮುಕ್ತಃ ಸ್ಮಯನ್ನಿಂದ್ರಮಭಿವೀಕ್ಷ್ಯ ಸ ಭಾರ್ಗವಃ|

03124016c ಜಗ್ರಾಹ ವಿಧಿವತ್ಸೋಮಮಶ್ವಿಭ್ಯಾಮುತ್ತಮಂ ಗ್ರಹಂ||

ಹೀಗೆ ಹೇಳಲು ಭಾರ್ಗವನು ಮುಗುಳ್ನಕ್ಕು ಇಂದ್ರನನ್ನೇ ನೋಡುತ್ತಾ ಉತ್ತಮ ಸೋಮವನ್ನು ಅಶ್ವಿನೀ ದೇವತೆಗಳ ಪಾತ್ರೆಗೆ ವಿಧಿವತ್ತಾಗಿ ಸುರಿದನು.

03124017a ತತೋಽಸ್ಮೈ ಪ್ರಾಹರದ್ವಜ್ರಂ ಘೋರರೂಪಂ ಶಚೀಪತಿಃ|

03124017c ತಸ್ಯ ಪ್ರಹರತೋ ಬಾಹುಂ ಸ್ತಂಭಯಾಮಾಸ ಭಾರ್ಗವಃ||

ಅಷ್ಟರಲ್ಲಿಯೇ ಶಚೀಪತಿ ಇಂದ್ರನು ಘೋರರೂಪೀ ವಜ್ರವನ್ನು ಅವನೆಡೆಗೆ ಎಸೆದನು ಮತ್ತು ಅವನು ಪ್ರಹರಿಸುವಾಗ ಭಾರ್ಗವನು ಅವನನ್ನು ಹಾಗೆಯೇ ನಿಲ್ಲಿಸಿಬಿಟ್ಟನು.

03124018a ಸಂಸ್ತಂಭಯಿತ್ವಾ ಚ್ಯವನೋ ಜುಹುವೇ ಮಂತ್ರತೋಽನಲಂ|

03124018c ಕೃತ್ಯಾರ್ಥೀ ಸುಮಹಾತೇಜಾ ದೇವಂ ಹಿಂಸಿತುಮುದ್ಯತಃ||

ಅವನನ್ನು ಸ್ತಂಭನನ್ನಾಗಿ ಮಾಡಿ ಆ ಸುಮಹಾತೇಜಸ್ವಿ ಚ್ಯವನನು ಮಂತ್ರಪೂರ್ವಕ ಆಹುತಿಯನ್ನು ಅಗ್ನಿಯಲ್ಲಿ ಹಾಕಿ ದೇವ ಇಂದ್ರನನ್ನು ಹಿಂಸಿಸಲು ಎದುರಾದನು.

03124019a ತತಃ ಕೃತ್ಯಾ ಸಮಭವದೃಷೇಸ್ತಸ್ಯ ತಪೋಬಲಾತ್|

03124019c ಮದೋ ನಾಮ ಮಹಾವೀರ್ಯೋ ಬೃಹತ್ಕಾಯೋ ಮಹಾಸುರಃ||

03124019e ಶರೀರಂ ಯಸ್ಯ ನಿರ್ದೇಷ್ಟುಮಶಕ್ಯಂ ತು ಸುರಾಸುರೈಃ||

ಅನಂತರ ಕಲ್ಪನೆಯೋ ಎಂಬಂತೆ ಅವನ ತಪೋಬಲದಿಂದ ಮದ ಎಂಬ ಹೆಸರಿನ ಮಹಾವೀರ, ಮಹಾಕಾಯ, ಮಹಾಸುರನು ಹುಟ್ಟಿದನು. ಅವನ ಶರೀರವನ್ನು ನಿಯಂತ್ರಿಸಲು ಸುರರೂ ಅಸುರರೂ ಅಶಕ್ತರಾಗಿದ್ದರು.

03124020a ತಸ್ಯಾಸ್ಯಮಭವದ್ಘೋರಂ ತೀಕ್ಷ್ಣಾಗ್ರದಶನಂ ಮಹತ್|

03124020c ಹನುರೇಕಾ ಸ್ಥಿತಾ ತಸ್ಯ ಭೂಮಾವೇಕಾ ದಿವಂ ಗತಾ||

ಅವನ ಬಾಯಿಯು ಘೋರವಾಗಿತ್ತು. ತೀಕ್ಷ್ಣವಾಗಿ ಉಗ್ರವಾಗಿ ಕಾಣುತ್ತಿರುವ ಎರಡು ಕೋರೆದಾಡೆಗಳಿದ್ದವು - ಒಂದು ಭೂಮಿಯ ಮೇಲಿದ್ದರೆ ಎನ್ನೊಂದು ಆಕಾಶವನ್ನು ಮುಟ್ಟುತ್ತಿತ್ತು.

03124021a ಚತಸ್ರ ಆಯತಾ ದಂಷ್ಟ್ರಾ ಯೋಜನಾನಾಂ ಶತಂ ಶತಂ|

03124021c ಇತರೇ ತ್ವಸ್ಯ ದಶನಾ ಬಭೂವುರ್ದಶಯೋಜನಾಃ||

03124021e ಪ್ರಾಕಾರಸದೃಶಾಕಾರಾಃ ಶೂಲಾಗ್ರಸಮದರ್ಶನಾಃ||

ಅವನ ನಾಲ್ಕು ನಾಲಿಗೆಗಳು ನೂರು ನೂರು ಯೋಜನೆಗಳಿದ್ದವು, ಅವನ ಇತರ ಹಲ್ಲುಗಳು ಹತ್ತು ಯೋಜನೆಗಳಿದ್ದು ಕೋಟೆಯ ಗೋಪುರಗಳಂತೆ ಮತ್ತು ಈಟಿಯ ಮೊನಚಾದ ತುದಿಯಂತೆ ಕಾಣುತ್ತಿದ್ದವು.

03124022a ಬಾಹೂ ಪರ್ವತಸಂಕಾಶಾವಾಯತಾವಯುತಂ ಸಮೌ|

03124022c ನೇತ್ರೇ ರವಿಶಶಿಪ್ರಖ್ಯೇ ವಕ್ತ್ರಮಂತಕಸನ್ನಿಭಂ||

ಅವನ ಬಾಹುಗಳು ಪರ್ವತಸಮಾನವಾಗಿದ್ದವು, ಒಂದೊಂದೂ ಅನಂತ ಯೋಜನೆಗಳಷ್ಟು ಉದ್ದವಾಗಿದ್ದವು. ಅವನ ಕಣ್ಣುಗಳು ಸೂರ್ಯ-ಚಂದ್ರಗಳಂತೆ ಮತ್ತು ಮುಖವು ಸಾವಿನ ಹಾಗೆ ತೋರುತ್ತಿದ್ದವು.

03124023a ಲೇಲಿಹಂ ಜಿಹ್ವಯಾ ವಕ್ತ್ರಂ ವಿದ್ಯುಚ್ಚಪಲಲೋಲಯಾ|

03124023c ವ್ಯಾತ್ತಾನನೋ ಘೋರದೃಷ್ಟಿರ್ಗ್ರಸನ್ನಿವ ಜಗದ್ಬಲಾತ್||

03124024a ಸ ಭಕ್ಷಯಿಷ್ಯನ್ಸಂಕ್ರುದ್ಧಃ ಶತಕ್ರತುಮುಪಾದ್ರವತ್|

03124024c ಮಹತಾ ಘೋರರೂಪೇಣ ಲೋಕಾಂ ಶಬ್ದೇನ ನಾದಯನ್||

ಮಿಂಚಿನಂತೆ ಹರಿದಾಡುತ್ತಿರುವ ನಾಲಿಗೆಗಳಿಂದ ಮುಖವನ್ನು ಸವರುತ್ತಾ, ಬಲಾತ್ಕಾರವಾಗಿ ಇಡೀ ಜಗತ್ತನ್ನೇ ನುಂಗಿಬಿಡುತ್ತಾನೋ ಎಂದು ದೊಡ್ಡಕ್ಕೆ ಬಾಯಿ ಕಳೆದು, ತನ್ನ ಘೋರರೂಪದ ಮಹಾ ಗರ್ಜನೆಯು ಲೋಕಗಳಲ್ಲಿ ಮೊಳಗುತ್ತಿರಲು, ಕೋಪದಿಂದ ಶತಕ್ರತು ಇಂದ್ರನನ್ನು ತಿನ್ನಲು ಓಡಿ ಬಂದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಕನ್ಯೇ ಚತುರ್ವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಕನ್ಯದಲ್ಲಿ ನೂರಾಇಪ್ಪತ್ನಾಲ್ಕನೆಯ ಅಧ್ಯಾಯವು.

Related image

Comments are closed.