ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೨೩
ಒಮ್ಮೆ ಬತ್ತಲೆಯಾಗಿ ಸ್ನಾನಮಾಡುತ್ತಿದ್ದ ಸುಕನ್ಯೆಯನ್ನು ನೋಡಿ ಅಶ್ವಿನೀ ಕುಮಾರರು ತಮ್ಮಲ್ಲಿ ಒಬ್ಬನನ್ನು ವರಿಸೆಂದು ಕೇಳಿಕೊಂಡಿದುದು (೧-೯). ಚ್ಯವನನಲ್ಲೇ ಅವಳು ಅನುರತಳೆಂದು ಹೇಳಲು, ಅಶ್ಚಿನೀ ಕುಮಾರರು ಚ್ಯವನನನ್ನೂ ಯುವ ರೂಪವಂತನಾಗಿ ಮಾಡಿದ ನಂತರ ಮೂವರಲ್ಲಿ ಯಾರನ್ನಾದರೂ ಅವಳು ಆರಿಸಿಕೊಳ್ಳಬೇಕೆಂದು ಕೇಳುವುದು (೧೦-೧೨). ಚ್ಯವನನು ಒಪ್ಪಿಕೊಳ್ಳಲು ಅಶ್ವಿನೀ ಕುಮಾರರು ಮತ್ತು ಚ್ಯವನ ಮೂವರೂ ಸರೋವರಕ್ಕಿಳಿದುದು; ಒಂದೇ ರೂಪವನ್ನು ಧರಿಸಿ ಮೇಲೆದ್ದುದು (೧೩-೧೮). ಸುಕನ್ಯೆಯು ತನ್ನ ಗಂಡನನ್ನೇ ವರಿಸಿದ್ದುದು (೧೯). ಸಂತೋಷಗೊಂಡ ಚ್ಯವನನು ಇಂದ್ರನು ನೋಡುತ್ತಿದ್ದಂತೆಯೇ ಅಶ್ವಿನೀಕುಮಾರರಿಗೆ ಸೋಮವನ್ನು ಕುಡಿಸುತ್ತೇನೆಂದು ಹೇಳಿದುದು (೨೦-೨೩).
03123001 ಲೋಮಶ ಉವಾಚ|
03123001a ಕಸ್ಯ ಚಿತ್ತ್ವಥ ಕಾಲಸ್ಯ ಸುರಾಣಾಮಶ್ವಿನೌ ನೃಪ|
03123001c ಕೃತಾಭಿಷೇಕಾಂ ವಿವೃತಾಂ ಸುಕನ್ಯಾಂ ತಾಮಪಶ್ಯತಾಂ||
ಲೋಮಶನು ಹೇಳಿದನು: “ನೃಪ ! ಕೆಲವು ಕಾಲದ ನಂತರ ಸುರರ ಅಶ್ವಿನೀ ಕುಮಾರರು ಬತ್ತಲೆಯಾಗಿ ಸ್ನಾನಮಾಡುತ್ತಿದ್ದ ಸುಕನ್ಯೆಯನ್ನು ನೋಡಿದರು.
03123002a ತಾಂ ದೃಷ್ಟ್ವಾ ದರ್ಶನೀಯಾಂಗೀಂ ದೇವರಾಜಸುತಾಮಿವ|
03123002c ಊಚತುಃ ಸಮಭಿದ್ರುತ್ಯ ನಾಸತ್ಯಾವಶ್ವಿನಾವಿದಂ||
ಇಂದ್ರನ ಮಗಳಂತಿರುವ ಆ ಸುಂದರಾಂಗಿಯನ್ನು ನೋಡಿ ನಾಸತ್ಯ ಅಶ್ವಿನೀ ಕುಮಾರರು ಅವಸರದಲ್ಲಿ ಅವಳ ಬಳಿ ಹೋಗಿ ಹೇಳಿದರು:
03123003a ಕಸ್ಯ ತ್ವಮಸಿ ವಾಮೋರು ಕಿಂ ವನೇ ವೈ ಕರೋಷಿ ಚ|
03123003c ಇಚ್ಚಾವ ಭದ್ರೇ ಜ್ಞಾತುಂ ತ್ವಾಂ ತತ್ತ್ವಮಾಖ್ಯಾಹಿ ಶೋಭನೇ||
“ಭದ್ರೇ! ಶೋಭನೇ! ವಾಮೋರು! ನೀನು ಯಾರವಳು ಮತ್ತು ಈ ವನದಲ್ಲಿ ಏನು ಮಾಡುತಿದ್ದೀಯೆ? ನಿನ್ನ ಕುರಿತು ತಿಳಿಯಬಯಸಿದ್ದೇವೆ. ಹೇಳು.”
03123004a ತತಃ ಸುಕನ್ಯಾ ಸಂವೀತಾ ತಾವುವಾಚ ಸುರೋತ್ತಮೌ|
03123004c ಶರ್ಯಾತಿತನಯಾಂ ವಿತ್ತಂ ಭಾರ್ಯಾಂ ಚ ಚ್ಯವನಸ್ಯ ಮಾಂ||
ಆಗ ಸುಕನ್ಯೆಯು ಮೈಮುಚ್ಚಿಕೊಂಡು ಆ ಸುರೋತ್ತಮರಿಗೆ ಹೇಳಿದಳು: “ನಾನು ಶರ್ಯಾತಿಯ ಮಗಳು ಮತ್ತು ಚ್ಯವನನ ಪತ್ನಿಯೆಂದು ತಿಳಿಯಿರಿ.”
03123005a ಅಥಾಶ್ವಿನೌ ಪ್ರಹಸ್ಯೈತಾಮಬ್ರೂತಾಂ ಪುನರೇವ ತು|
03123005c ಕಥಂ ತ್ವಮಸಿ ಕಲ್ಯಾಣಿ ಪಿತ್ರಾ ದತ್ತಾ ಗತಾಧ್ವನೇ||
ಅಶ್ವಿನೀ ಕುಮಾರರು ಜೋರಾಗಿ ನಕ್ಕು ಪುನಃ ಅವಳಿಗೆ ಹೇಳಿದರು: “ನಿನ್ನ ತಂದೆಯು ನಿನ್ನಂಥಹ ಕಲ್ಯಾಣಿಯನ್ನು ಹೇಗೆ ಮುದುಕನಿಗೆ ಕೊಟ್ಟ?
03123006a ಭ್ರಾಜಸೇ ವನಮಧ್ಯೇ ತ್ವಂ ವಿದ್ಯುತ್ಸೌದಾಮಿನೀ ಯಥಾ|
03123006c ನ ದೇವೇಷ್ವಪಿ ತುಲ್ಯಾಂ ಹಿ ತ್ವಯಾ ಪಶ್ಯಾವ ಭಾಮಿನಿ||
ಕಾಡಿನ ಮಧ್ಯದಲ್ಲಿ ನೀನು ಮಿಂಚಿನ ಮಾಲೆಯಂತೆ ಬೆಳಗುತ್ತಿದ್ದೀಯೆ. ಭಾಮಿನಿ! ದೇವತೆಗಳಲ್ಲಿಯೂ ಕೂಡ ನಿನ್ನ ಸರಿಸಮಳಾದವಳನ್ನು ನಾವು ಕಂಡಿಲ್ಲ.
03123007a ಸರ್ವಾಭರಣಸಂಪನ್ನಾ ಪರಮಾಂಬರಧಾರಿಣೀ|
03123007c ಶೋಭೇಥಾಸ್ತ್ವನವದ್ಯಾಂಗಿ ನ ತ್ವೇವಂ ಮಲಪಂಕಿನೀ||
ಸರ್ವಾಭರಣ ಭೂಷಿತೆಯಾಗಿ ಉತ್ತಮ ಉಡುಪುಗಳನ್ನು ಧರಿಸಿದರೆ ಅನವದ್ಯಾಂಗಿ ನೀನು ಶೋಭಿಸುತ್ತೀಯೆ. ಹೀಗೆ ಕೊಳಕು ತುಂಬಿ ಇದ್ದರೆ ಇಲ್ಲ.
03123008a ಕಸ್ಮಾದೇವಂವಿಧಾ ಭೂತ್ವಾ ಜರಾಜರ್ಜರಿತಂ ಪತಿಂ|
03123008c ತ್ವಮುಪಾಸ್ಸೇ ಹ ಕಲ್ಯಾಣಿ ಕಾಮಭೋಗಬಹಿಷ್ಕೃತಂ||
03123009a ಅಸಮರ್ಥಂ ಪರಿತ್ರಾಣೇ ಪೋಷಣೇ ಚ ಶುಚಿಸ್ಮಿತೇ|
ಕಲ್ಯಾಣಿ! ಶುಚಿಸ್ಮಿತೇ! ಈ ರೀತಿ ಇರುವ ನೀನು ಯಾವ ಕಾರಣಕ್ಕಾಗಿ ಕಾಮಭೋಗಗಳಿಲ್ಲದೇ ಮುದಿತನದಿಂದ ಹಾಳುಬಿದ್ದ, ಪೋಷಣೆ ಮತ್ತು ರಕ್ಷಣೆಗಳಿಗೆ ಅಸಮರ್ಥನಾದ ಗಂಡನ ಸೇವೆಯನ್ನು ಮಾಡುತ್ತಿದ್ದೀಯೆ?
03123009c ಸಾಧು ಚ್ಯವನಮುತ್ಸೃಜ್ಯ ವರಯಸ್ವೈಕಮಾವಯೋಃ||
03123009e ಪತ್ಯರ್ಥಂ ದೇವಗರ್ಭಾಭೇ ಮಾ ವೃಥಾ ಯೌವನಂ ಕೃಥಾಃ||
ಚ್ಯವನನನ್ನು ಬಿಟ್ಟು ನಮ್ಮಲ್ಲಿ ಯಾರಾದರೊಬ್ಬನನ್ನು ನಿನ್ನ ಪತಿಯನ್ನಾಗಿ ಸ್ವೀಕರಿಸಿದರೆ ಒಳ್ಳೆಯದು. ವೃಥಾ ನಿನ್ನ ಯೌವನವನ್ನು ಕಳೆಯಬೇಡ!”
03123010a ಏವಮುಕ್ತಾ ಸುಕನ್ಯಾ ತು ಸುರೌ ತಾವಿದಮಬ್ರವೀತ್|
03123010c ರತಾಹಂ ಚ್ಯವನೇ ಪತ್ಯೌ ಮೈವಂ ಮಾ ಪರ್ಯಶಂಕಿಥಾಃ||
ಈ ಮಾತುಗಳಿಗೆ ಸುಕನ್ಯೆಯು ಆ ಸುರರಿಗೆ ಹೇಳಿದಳು: “ನಾನು ಪತಿ ಚ್ಯವನನಲ್ಲಿ ಅನುರತಳಾಗಿದ್ದೇನೆ. ನನ್ನನ್ನು ಶಂಕಿಸಬೇಡಿ!”
03123011a ತಾವಬ್ರೂತಾಂ ಪುನಸ್ತ್ವೇನಾಮಾವಾಂ ದೇವಭಿಷಗ್ವರೌ|
03123011c ಯುವಾನಂ ರೂಪಸಂಪನ್ನಂ ಕರಿಷ್ಯಾವಃ ಪತಿಂ ತವ||
03123012a ತತಸ್ತಸ್ಯಾವಯೋಶ್ಚೈವ ಪತಿಮೇಕತಮಂ ವೃಣು|
03123012c ಏತೇನ ಸಮಯೇನೈನಮಾಮಂತ್ರಯ ವರಾನನೇ||
ಪುನಃ ಅವರು ಹೇಳಿದರು: “ನಾವು ದೇವತೆಗಳ ವೈದ್ಯರು. ನಿನ್ನ ಪತಿಯನ್ನು ಯುವಕನನ್ನಾಗಿಯೂ ರೂಪ ಸಂಪನ್ನನನ್ನಾಗಿಯೂ ಮಾಡುತ್ತೇವೆ. ಅನಂತರ ನಾವು ಮೂರರಲ್ಲಿ ಒಬ್ಬನನ್ನು ಪತಿಯನ್ನಾಗಿ ವರಿಸು. ವರಾನನೆ! ಈ ಒಪ್ಪಂದವನ್ನು ಅವನಿಗೆ ಹೇಳು.”
03123013a ಸಾ ತಯೋರ್ವಚನಾದ್ರಾಜನ್ನುಪಸಂಗಮ್ಯ ಭಾರ್ಗವಂ|
03123013c ಉವಾಚ ವಾಕ್ಯಂ ಯತ್ತಾಭ್ಯಾಮುಕ್ತಂ ಭೃಗುಸುತಂ ಪ್ರತಿ||
ರಾಜನ್! ಅವರ ಮಾತಿನಂತೆ ಅವಳು ಭಾರ್ಗವನ ಬಳಿ ಹೋಗಿ ಅವರು ಹೇಳಿದ ಮಾತನ್ನು ಭೃಗುಸುತನಿಗೆ ಪುನಃ ಹೇಳಿದಳು.
03123014a ತಚ್ಛೃತ್ವಾ ಚ್ಯವನೋ ಭಾರ್ಯಾಮುವಾಚ ಕ್ರಿಯತಾಮಿತಿ|
03123014c ಭರ್ತ್ರಾ ಸಾ ಸಮನುಜ್ಞಾತಾ ಕ್ರಿಯತಾಮಿತ್ಯಥಾಬ್ರವೀತ್||
ಅದನ್ನು ಕೇಳಿದ ಚ್ಯವನನು ಪತ್ನಿಗೆ “ಹಾಗೆಯೇ ಮಾಡೋಣ” ಎಂದನು. ಗಂಡನ ಒಪ್ಪಿಗೆಯನ್ನು ಪಡೆದು ಅವಳು “ಹಾಗೆಯೇ ಮಾಡೋಣ” ಎಂದಳು.
03123015a ಶ್ರುತ್ವಾ ತದಶ್ವಿನೌ ವಾಕ್ಯಂ ತತ್ತಸ್ಯಾಃ ಕ್ರಿಯತಾಮಿತಿ|
03123015c ಊಚತೂ ರಾಜಪುತ್ರೀಂ ತಾಂ ಪತಿಸ್ತವ ವಿಶತ್ವಪಃ||
“ಹಾಗೆಯೇ ಮಾಡೋಣ” ಎಂದು ಅವಳ ಮಾತನ್ನು ಕೇಳಿ ಅಶ್ವಿನೀ ದೇವತೆಗಳು ರಾಜಕುಮಾರಿಗೆ “ನಿನ್ನ ಪತಿಯು ನೀರಿಗಿಳಿಯಬೇಕು” ಎಂದರು.
03123016a ತತೋಽಂಭಶ್ಚ್ಯವನಃ ಶೀಘ್ರಂ ರೂಪಾರ್ಥೀ ಪ್ರವಿವೇಶ ಹ|
03123016c ಅಶ್ವಿನಾವಪಿ ತದ್ರಾಜನ್ಸರಃ ಪ್ರವಿಶತಾಂ ಪ್ರಭೋ||
ಪ್ರಭೋ! ರಾಜನ್! ಆಗ ರೂಪವನ್ನು ಬಯಸಿದ ಚ್ಯವನನು ಬೇಗನೆ ಸರೋವರವನ್ನು ಪ್ರವೇಶಿಸಿದನು. ಅಶ್ವಿನೀ ಕುಮಾರರೂ ಅದೇ ಸರೋವರಕ್ಕೆ ಇಳಿದರು.
03123017a ತತೋ ಮುಹೂರ್ತಾದುತ್ತೀರ್ಣಾಃ ಸರ್ವೇ ತೇ ಸರಸಸ್ತತಃ|
03123017c ದಿವ್ಯರೂಪಧರಾಃ ಸರ್ವೇ ಯುವಾನೋ ಮೃಷ್ಟಕುಂಡಲಾಃ||
03123017e ತುಲ್ಯರೂಪಧರಾಶ್ಚೈವ ಮನಸಃ ಪ್ರೀತಿವರ್ಧನಾಃ||
ಅನಂತರ ಕ್ಷಣದಲ್ಲಿಯೇ ಅವರೆಲ್ಲರೂ ಸರೋವರದಿಂದ ಮೇಲೆದ್ದರು. ಎಲ್ಲರೂ ದಿವ್ಯರೂಪಗಳನ್ನು ಧರಿಸಿದ್ದರು, ಯುವಕರಾಗಿದ್ದರು, ಹೊಳೆಯುವ ಕರ್ಣಕುಂಡಲಗಳನ್ನು ಧರಿಸಿದ್ದರು. ಒಂದೇಸಮನಾದ ರೂಪ ಧರಿಸಿದ್ದ ಅವರು ಅವಳ ಮನಸ್ಸಿನಲ್ಲಿ ಪ್ರೀತಿಯನ್ನು ಹೆಚ್ಚಿಸಿದರು.
03123018a ತೇಽಬ್ರುವನ್ಸಹಿತಾಃ ಸರ್ವೇ ವೃಣೀಷ್ವಾನ್ಯತಮಂ ಶುಭೇ|
03123018c ಅಸ್ಮಾಕಮೀಪ್ಸಿತಂ ಭದ್ರೇ ಪತಿತ್ವೇ ವರವರ್ಣಿನಿ||
03123018e ಯತ್ರ ವಾಪ್ಯಭಿಕಾಮಾಸಿ ತಂ ವೃಣೀಷ್ವ ಸುಶೋಭನೇ||
ಅವರೆಲ್ಲರೂ ಒಂದೇ ಧ್ವನಿಯಲ್ಲಿ ಅವಳಿಗೆ ಹೇಳಿದರು: “ಶುಭೇ! ಭದ್ರೇ! ವರವರ್ಣಿನೀ! ಸುಶೋಭನೇ! ನಮ್ಮಲ್ಲಿ ನಿನಗಿಷ್ಟನಾದ ಒಬ್ಬನನ್ನು ನಿನ್ನ ಪತಿಯನ್ನಾಗಿ ಆರಿಸಿಕೋ!”
03123019a ಸಾ ಸಮೀಕ್ಷ್ಯ ತು ತಾನ್ಸರ್ವಾಂಸ್ತುಲ್ಯರೂಪಧರಾನ್ಸ್ಥಿತಾನ್|
03123019c ನಿಶ್ಚಿತ್ಯ ಮನಸಾ ಬುದ್ಧ್ಯಾ ದೇವೀ ವವ್ರೇ ಸ್ವಕಂ ಪತಿಂ||
ಒಂದೇ ರೂಪಧರಿಸಿ ನಿಂತಿದ್ದ ಅವರೆಲ್ಲರನ್ನೂ ಮನಸ್ಸು ಮತ್ತು ಬುದ್ಧಿಗಳೆರಡರಿಂದಲೂ ವೀಕ್ಷಿಸಿ, ಆ ದೇವಿಯು ತನ್ನ ಗಂಡನನ್ನೇ ವರಿಸಿದಳು.
03123020a ಲಬ್ಧ್ವಾ ತು ಚ್ಯವನೋ ಭಾರ್ಯಾಂ ವಯೋರೂಪಂ ಚ ವಾಂಚಿತಂ|
03123020c ಹೃಷ್ಟೋಽಬ್ರವೀನ್ಮಹಾತೇಜಾಸ್ತೌ ನಾಸತ್ಯಾವಿದಂ ವಚಃ||
ತಾನು ಬಯಸಿದ್ದ ವಯಸ್ಸನ್ನೂ ರೂಪವನ್ನೂ ಮತ್ತು ಪತ್ನಿಯನ್ನೂ ಪಡೆದು ಸಂತೋಷಗೊಂಡ ಚ್ಯವನನು ಆ ಮಹಾತೇಜಸ್ವಿ ನಾಸತ್ಯ ಅಶ್ವಿನೀ ದೇವತೆಗಳಿಗೆ ವಚನವನ್ನಿತ್ತನು:
03123021a ಯಥಾಹಂ ರೂಪಸಂಪನ್ನೋ ವಯಸಾ ಚ ಸಮನ್ವಿತಃ|
03123021c ಕೃತೋ ಭವದ್ಭ್ಯಾಂ ವೃದ್ಧಃ ಸನ್ಭಾರ್ಯಾಂ ಚ ಪ್ರಾಪ್ತವಾನಿಮಾಂ||
03123022a ತಸ್ಮಾದ್ಯುವಾಂ ಕರಿಷ್ಯಾಮಿ ಪ್ರೀತ್ಯಾಹಂ ಸೋಮಪೀಥಿನೌ|
03123022c ಮಿಷತೋ ದೇವರಾಜಸ್ಯ ಸತ್ಯಮೇತದ್ಬ್ರವೀಮಿ ವಾಂ||
“ವೃದ್ಧನಾಗಿದ್ದ ನನ್ನನ್ನು ಈಗ ರೂಪಸಂಪನ್ನನಾಗಿಯೂ ವಯಸ್ಸಿನಲ್ಲಿ ಸರಿಯಾದವನನ್ನಾಗಿಯೂ ನೀವು ಮಾಡಿ ನನಗೆ ಇವಳನ್ನು ಪತ್ನಿಯನ್ನಾಗಿ ಒದಗಿಸಿದ್ದೀರಿ. ಆದುದರಿಂದ ಸಂತೋಷಗೊಂಡ ನಾನು ದೇವರಾಜನ ಕಣ್ಣೆದುರಿಗೇ ನೀವು ಸೋಮವನ್ನು ಕುಡಿಯುವ ಹಾಗೆ ಮಾಡುತ್ತೇನೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.”
03123023a ತಚ್ಛೃತ್ವಾ ಹೃಷ್ಟಮನಸೌ ದಿವಂ ತೌ ಪ್ರತಿಜಗ್ಮತುಃ|
03123023c ಚ್ಯವನೋಽಪಿ ಸುಕನ್ಯಾ ಚ ಸುರಾವಿವ ವಿಜಹ್ರತುಃ||
ಅದನ್ನು ಕೇಳಿ ಸಂತೋಷಗೊಂಡ ಅಶ್ವಿನೀ ಕುಮಾರರೀರ್ವರು ದಿವಿಗೆ ತೆರಳಿದರು. ಚ್ಯವನ-ಸುಕನ್ಯೆಯರಾದರೋ ಸುರರಂತೆ ಒಂದಾಗಿ ವಿಹರಿಸಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಕನ್ಯೇ ತ್ರಯೋವಿಂಶತ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಕನ್ಯದಲ್ಲಿ ನೂರಾಇಪ್ಪತ್ತ್ಮೂರನೆಯ ಅಧ್ಯಾಯವು.