ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೨೧
ಚ್ಯವನ
ಯುಧಿಷ್ಠಿರನು ಸಹೋದರರೊಂದಿಗೆ ಪಯೋಷ್ಣಿಯಲ್ಲಿ ಸ್ನಾನ ಮಾಡಿದುದು (೧-೧೫). ನರ್ಮದಾ ನದಿಯ ಬಳಿ ಯುಧಿಷ್ಠಿರನು ಕೇಳಲು ಲೋಮಶನು ಚ್ಯವನ ಮಹರ್ಷಿಯು ಅಶ್ವಿನಿಯರಿಗೆ ಸೋಮವನ್ನಿತ್ತ ಚರಿತ್ರೆಯನ್ನು ಪ್ರಾರಂಭಿಸಿದುದು (೧೬-೨೨).
03121001 ಲೋಮಶ ಉವಾಚ|
03121001a ನೃಗೇಣ ಯಜಮಾನೇನ ಸೋಮೇನೇಹ ಪುರಂದರಃ|
03121001c ತರ್ಪಿತಃ ಶ್ರೂಯತೇ ರಾಜನ್ಸ ತೃಪ್ತೋ ಮದಮಭ್ಯಗಾತ್||
ಲೋಮಶನು ಹೇಳಿದನು: “ರಾಜನ್! ಇಲ್ಲಿ ನೃಗನು ಯಜಮಾನನಾಗಿ ಸೋಮದಿಂದ ಪುರಂದರ ಇಂದ್ರನನ್ನು ತೃಪ್ತಿಪಡಿಸಿದನೆಂದೂ ಮತ್ತು ಮತ್ತೇರುವಷ್ಟು ಕುಡಿದು ತೃಪ್ತನಾದನೆಂದೂ ಕೇಳಿದ್ದೇವೆ.
03121002a ಇಹ ದೇವೈಃ ಸಹೇಂದ್ರೈರ್ಹಿ ಪ್ರಜಾಪತಿಭಿರೇವ ಚ|
03121002c ಇಷ್ಟಂ ಬಹುವಿಧೈರ್ಯಜ್ಞೈರ್ಮಹದ್ಭಿರ್ಭೂರಿದಕ್ಷಿಣೈಃ||
ಇಲ್ಲಿಯೇ ಇಂದ್ರನೂ ಸೇರಿ ದೇವತೆಗಳು ಮತ್ತು ಪ್ರಜಾಪತಿಯೂ ಕೂಡ ಬಹಳ ಭೂರಿದಕ್ಷಿಣೆಗಳನ್ನಿತ್ತು ಬಹುವಿಧದ ಯಜ್ಞಗಳನ್ನು ಮಾಡಿದರು.
03121003a ಆಮೂರ್ತರಯಸಶ್ಚೇಹ ರಾಜಾ ವಜ್ರಧರಂ ಪ್ರಭುಂ|
03121003c ತರ್ಪಯಾಮಾಸ ಸೋಮೇನ ಹಯಮೇಧೇಷು ಸಪ್ತಸು||
ಇಲ್ಲಿಯೇ ರಾಜಾ ಆಮೂರ್ತರಯಸನು ಪ್ರಭೂ ವಜ್ರಧರ ಇಂದ್ರನನ್ನು ಏಳು ಅಶ್ವಮೇಧಯಾಗಗಳಲ್ಲಿ ಸೋಮವನ್ನಿತ್ತು ತೃಪ್ತಿಪಡಿಸಿದನು.
03121004a ತಸ್ಯ ಸಪ್ತಸು ಯಜ್ಞೇಷು ಸರ್ವಮಾಸೀದ್ಧಿರಣ್ಮಯಂ|
03121004c ವಾನಸ್ಪತ್ಯಂ ಚ ಭೌಮಂ ಚ ಯದ್ದ್ರವ್ಯಂ ನಿಯತಂ ಮಖೇ||
ಯಾವಾಗಲೂ ಯಜ್ಞಗಳಲ್ಲಿ ಮರದಿಂದ ಅಥವಾ ಮಣ್ಣಿನಿಂದ ಮಾಡಿರುತ್ತಿದ್ದ ಎಲ್ಲ ದ್ರವ್ಯಗಳೂ ಅವನ ಏಳೂ ಯಜ್ಞಗಳಲ್ಲಿ ಬಂಗಾರದಿಂದ ಮಾಡಲ್ಪಟ್ಟಿದ್ದವು.
03121005a ತೇಷ್ವೇವ ಚಾಸ್ಯ ಯಜ್ಞೇಷು ಪ್ರಯೋಗಾಃ ಸಪ್ತ ವಿಶ್ರುತಾಃ|
03121005c ಸಪ್ತೈಕೈಕಸ್ಯ ಯೂಪಸ್ಯ ಚಷಾಲಾಶ್ಚೋಪರಿ ಸ್ಥಿತಾಃ||
03121006a ತಸ್ಯ ಸ್ಮ ಯೂಪಾನ್ಯಜ್ಞೇಷು ಭ್ರಾಜಮಾನಾನ್ ಹಿರಣ್ಮಯಾನ್|
03121006c ಸ್ವಯಮುತ್ಥಾಪಯಾಮಾಸುರ್ದೇವಾಃ ಸೇಂದ್ರಾ ಯುಧಿಷ್ಠಿರ||
ಅವನ ಯಜ್ಞಗಳಲ್ಲಿಯ ಪ್ರಯೋಗಗಳು ಏಳು ಪ್ರಯೋಗಗಳೆಂದು ವಿಶ್ರುತವಾಗಿವೆ. ಏಳರಲ್ಲಿ ಒಂದೊಂದು ಯೂಪಗಳ ಮೇಲೂ ಉಂಗುರಗಳನ್ನು ಏರಿಸಲಾಗಿತ್ತು[1]. ಯುಧಿಷ್ಠಿರ! ಅವನ ಯಜ್ಞದಲ್ಲಿ ಇಂದ್ರನೊಂದಿಗೆ ದೇವತೆಗಳು ತಾವೇ ಹೊಳೆಯುತ್ತಿರುವ ಬಂಗಾರದಿಂದ ಮಾಡಿದ್ದ ಯೂಪಗಳನ್ನು ನಿಲ್ಲಿಸಿದ್ದರಂತೆ.
03121007a ತೇಷು ತಸ್ಯ ಮಖಾಗ್ರ್ಯೇಷು ಗಯಸ್ಯ ಪೃಥಿವೀಪತೇಃ|
03121007c ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ||
ಗಯರಾಜನ ಆ ಉತ್ತಮ ಯಜ್ಞಗಳಲ್ಲಿ ಇಂದ್ರನು ಸೋಮದಿಂದ ಬುದ್ಧಿಕಳೆದುಕೊಂಡನು ಮತ್ತು ದ್ವಿಜಾತಿಯವರು ದಕ್ಷಿಣೆಗಳಿಂದ ಹುಚ್ಚಾದರು.
03121008a ಸಿಕತಾ ವಾ ಯಥಾ ಲೋಕೇ ಯಥಾ ವಾ ದಿವಿ ತಾರಕಾಃ|
03121008c ಯಥಾ ವಾ ವರ್ಷತೋ ಧಾರಾ ಅಸಂಖ್ಯೇಯಾಶ್ಚ ಕೇನ ಚಿತ್||
03121009a ತಥೈವ ತದಸಂಖ್ಯೇಯಂ ಧನಂ ಯತ್ಪ್ರದದೌ ಗಯಃ|
03121009c ಸದಸ್ಯೇಭ್ಯೋ ಮಹಾರಾಜ ತೇಷು ಯಜ್ಞೇಷು ಸಪ್ತಸು||
ಭೂಮಿಯಲ್ಲಿರುವ ಮರಳನ್ನು, ಆಕಾಶದಲ್ಲಿ ನಕ್ಷತ್ರಗಳನ್ನು, ಮಳೆಯ ನೀರಿನ ಹನಿಗಳನ್ನು ಹೇಗೆ ಸಂಖ್ಯೆಮಾಡಲಿಕ್ಕಾಗುವುದಿಲ್ಲವೋ ಹಾಗೆ ಆ ಏಳು ಯಜ್ಞಗಳಲ್ಲಿ ಗಯನು ಸದಸ್ಯರಿಗೆ ದಾನವಾಗಿ ನೀಡಿದ ಸಂಪತ್ತು ಅಸಂಖ್ಯವಾಗಿತ್ತು.
03121010a ಭವೇತ್ಸಂಖ್ಯೇಯಮೇತದ್ವೈ ಯದೇತತ್ಪರಿಕೀರ್ತಿತಂ|
03121010c ನ ಸಾ ಶಕ್ಯಾ ತು ಸಂಖ್ಯಾತುಂ ದಕ್ಷಿಣಾ ದಕ್ಷಿಣಾವತಃ||
ಒಂದು ವೇಳೆ ಮರಳು, ನಕ್ಷತ್ರಗಳು, ಮತ್ತು ಹನಿಗಳನ್ನು ಲೆಕ್ಕಮಾಡಲು ಸಾಧ್ಯವಾಗುತ್ತಿದ್ದರೂ, ಎಣಿಕೆಯಿಂದ ಬಂದ ಸಂಖ್ಯೆಗಿಂತ ಹೆಚ್ಚು ಆ ದಾನಕೊಡುವವನ ದಕ್ಷಿಣೆಯಾಗಿತ್ತು.
03121011a ಹಿರಣ್ಮಯೀಭಿರ್ಗೋಭಿಶ್ಚ ಕೃತಾಭಿರ್ವಿಶ್ವಕರ್ಮಣಾ|
03121011c ಬ್ರಾಹ್ಮಣಾಂಸ್ತರ್ಪಯಾಮಾಸ ನಾನಾದಿಗ್ಭ್ಯಃ ಸಮಾಗತಾನ್||
ವಿಶ್ವಕರ್ಮನಿಂದ ಮಾಡಿಸಿದ್ದ ಬಂಗಾರದ ಗೋವುಗಳಿಂದ ನಾನಾ ದಿಕ್ಕುಗಳಿಂದ ಬಂದು ಸೇರಿದ್ದ ಬ್ರಾಹ್ಮಣರನ್ನು ಅವನು ತೃಪ್ತಿಪಡಿಸಿದನು.
03121012a ಅಲ್ಪಾವಶೇಷಾ ಪೃಥಿವೀ ಚೈತ್ಯೈರಾಸೀನ್ಮಹಾತ್ಮನಃ|
03121012c ಗಯಸ್ಯ ಯಜಮಾನಸ್ಯ ತತ್ರ ತತ್ರ ವಿಶಾಂ ಪತೇ||
ವಿಶಾಂಪತೇ! ಮಹಾತ್ಮ ಗಯನ ಯಜಮಾನತ್ವದಲ್ಲಿ ಎಲ್ಲೆಲ್ಲಿಯೂ ಚೈತ್ಯಗಳಿದ್ದು ಭೂಮಿಯೇ ಚಿಕ್ಕದಾಯಿತೆಂದು ತೋರುತ್ತಿತ್ತು.
03121013a ಸ ಲೋಕಾನ್ಪ್ರಾಪ್ತವಾನೈಂದ್ರಾನ್ಕರ್ಮಣಾ ತೇನ ಭಾರತ|
03121013c ಸಲೋಕತಾಂ ತಸ್ಯ ಗಚ್ಚೇತ್ಪಯೋಷ್ಣ್ಯಾಂ ಯ ಉಪಸ್ಪೃಶೇತ್||
ಭಾರತ! ತನ್ನ ಕರ್ಮಗಳಿಂದ ಅವನು ಇಂದ್ರನ ಲೋಕಗಳನ್ನು ಹೊಂದಿದನು. ಪಯೋಷ್ಣಿಯಲ್ಲಿ ಸ್ನಾನಮಾಡುವವರು ಅವನ ಲೋಕಗಳಿಗೆ ಹೋಗುತ್ತಾರೆ.
03121014a ತಸ್ಮಾತ್ತ್ವಮತ್ರ ರಾಜೇಂದ್ರ ಭ್ರಾತೃಭಿಃ ಸಹಿತೋಽನಘ|
03121014c ಉಪಸ್ಪೃಶ್ಯ ಮಹೀಪಾಲ ಧೂತಪಾಪ್ಮಾ ಭವಿಷ್ಯಸಿ||
ಅನಘ! ರಾಜೇಂದ್ರ! ಮಹೀಪಾಲ! ಆದುದರಿಂದ ನೀನು ಸಹೋದರರೊಂದಿಗೆ ಇಲ್ಲಿ ಸ್ನಾನಮಾಡಿದರೆ ಪಾಪಗಳನ್ನು ತೊಳೆದಂತಾಗುತ್ತದೆ.””
03121015 ವೈಶಂಪಾಯನ ಉವಾಚ|
03121015a ಸ ಪಯೋಷ್ಣ್ಯಾಂ ನರಶ್ರೇಷ್ಠಃ ಸ್ನಾತ್ವಾ ವೈ ಭ್ರಾತೃಭಿಃ ಸಹ|
03121015c ವೈಡೂರ್ಯಪರ್ವತಂ ಚೈವ ನರ್ಮದಾಂ ಚ ಮಹಾನದೀಂ||
03121015e ಸಮಾಜಗಾಮ ತೇಜಸ್ವೀ ಭ್ರಾತೃಭಿಃ ಸಹಿತೋಽನಘಃ||
ವೈಶಂಪಾಯನನು ಹೇಳಿದನು: “ಆ ನರಶ್ರೇಷ್ಠನು ಸಹೋದರರೊಂದಿಗೆ ಪಯೋಷ್ಣಿಯಲ್ಲಿ ಸ್ನಾನಮಾಡಿದನು. ಅನಂತರ, ಆ ಅನಘ ತೇಜಸ್ವಿಯು ವೈಡೂರ್ಯ ಪರ್ವತ ಮತ್ತು ಮಹಾನದಿಗೆ ತನ್ನ ಸಹೋದರರೊಂದಿಗೆ ಹೋದನು.
03121016a ತತೋಽಸ್ಯ ಸರ್ವಾಣ್ಯಾಚಖ್ಯೌ ಲೋಮಶೋ ಭಗವಾನೃಷಿಃ|
03121016c ತೀರ್ಥಾನಿ ರಮಣೀಯಾನಿ ತತ್ರ ತತ್ರ ವಿಶಾಂ ಪತೇ||
ವಿಶಾಂಪತೇ! ಅಲ್ಲಿ ಅವನಿಗೆ ಭಗವಾನ್ ಋಷಿ ಲೋಮಶನು ಅಲ್ಲಲ್ಲಿದ್ದ ರಮಣೀಯ ತೀರ್ಥಗಳ ಕುರಿತು ಎಲ್ಲವನ್ನೂ ಹೇಳಿದನು.
03121017a ಯಥಾಯೋಗಂ ಯಥಾಪ್ರೀತಿ ಪ್ರಯಯೌ ಭ್ರಾತೃಭಿಃ ಸಹ|
03121017c ದದಮಾನೋಽಸಕೃದ್ವಿತ್ತಂ ಬ್ರಾಹ್ಮಣೇಭ್ಯಃ ಸಹಸ್ರಶಃ||
ಸಮಯ ಸಿಕ್ಕಹಾಗೆ, ಬೇಕಾದಷ್ಟು ಸಂಪತ್ತನ್ನು ಸಹಸ್ರಾರು ಬ್ರಾಹ್ಮಣರಿಗೆ ಸತ್ಕರಿಸಿ ದಾನವನ್ನಾಗಿತ್ತು ಅವನು ಸಹೋದರರೊಂದಿಗೆ ಪ್ರಯಾಣಿಸಿದನು.
03121018 ಲೋಮಶ ಉವಾಚ|
03121018a ದೇವಾನಾಮೇತಿ ಕೌಂತೇಯ ತಥಾ ರಾಜ್ಞಾಂ ಸಲೋಕತಾಂ|
03121018c ವೈಡೂರ್ಯಪರ್ವತಂ ದೃಷ್ಟ್ವಾ ನರ್ಮದಾಮವತೀರ್ಯ ಚ||
ಲೋಮಶನು ಹೇಳಿದನು: “ಕೌಂತೇಯ! ವೈಡೂರ್ಯ ಪರ್ವತವನ್ನು ನೋಡಿ ನರ್ಮದಾ ನದಿಗೆ ಇಳಿದವನು ದೇವತೆಗಳ ಮತ್ತು ರಾಜರ ಲೋಕವನ್ನು ಸೇರುತ್ತಾನೆ.
03121019a ಸಂಧಿರೇಷ ನರಶ್ರೇಷ್ಠ ತ್ರೇತಾಯಾ ದ್ವಾಪರಸ್ಯ ಚ|
03121019c ಏತಮಾಸಾದ್ಯ ಕೌಂತೇಯ ಸರ್ವಪಾಪೈಃ ಪ್ರಮುಚ್ಯತೇ||
ನರಶ್ರೇಷ್ಠ! ಇದು ತ್ರೇತ ಮತ್ತು ದ್ವಾಪರಗಳ ಸಂಧಿ. ಕೌಂತೇಯ! ಇಲ್ಲಿಗೆ ಬಂದವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
03121020a ಏಷ ಶರ್ಯಾತಿಯಜ್ಞಸ್ಯ ದೇಶಸ್ತಾತ ಪ್ರಕಾಶತೇ|
03121020c ಸಾಕ್ಷಾದ್ಯತ್ರಾಪಿಬತ್ಸೋಮಮಶ್ವಿಭ್ಯಾಂ ಸಹ ಕೌಶಿಕಃ||
ಮಗೂ! ಇಲ್ಲಿ ಕಾಂತಿಯುಕ್ತ ಪ್ರದೇಶದಲ್ಲಿ ಶರ್ಯಾತಿಯ ಯಜ್ಞದಲ್ಲಿ ಸಾಕ್ಷಾತ್ ಅಶ್ವಿನೀ ದೇವತೆಗಳೊಂದಿಗೆ ಕೌಶಿಕ ವಿಶ್ವಾಮಿತ್ರನು ಸೋಮವನ್ನು ಸೇವಿಸಿದ್ದನು.
03121021a ಚುಕೋಪ ಭಾರ್ಗವಶ್ಚಾಪಿ ಮಹೇಂದ್ರಸ್ಯ ಮಹಾತಪಾಃ|
03121021c ಸಂಸ್ತಂಭಯಾಮಾಸ ಚ ತಂ ವಾಸವಂ ಚ್ಯವನಃ ಪ್ರಭುಃ||
03121021e ಸುಕನ್ಯಾಂ ಚಾಪಿ ಭಾರ್ಯಾಂ ಸ ರಾಜಪುತ್ರೀಮಿವಾಪ್ತವಾನ್||
ಮಹಾತಪಸ್ವಿ ಭಾರ್ಗವ ಪ್ರಭು ಚ್ಯವನನು ಮಹೇಂದ್ರ ವಾಸವ ಇಂದ್ರನ ಮೇಲೆ ಸಿಟ್ಟಿಗೆದ್ದು ಅವನನ್ನು ಗರಬಡಿಸಿದನು. ಅವನು ರಾಜಪುತ್ರೀ ಸುಕನ್ಯೆಯನ್ನು ಪತ್ನಿಯನ್ನಾಗಿ ಪಡೆದನು.”
03121022 ಯುಧಿಷ್ಠಿರ ಉವಾಚ|
03121022a ಕಥಂ ವಿಷ್ಟಂಭಿತಸ್ತೇನ ಭಗವಾನ್ಪಾಕಶಾಸನಃ|
03121022c ಕಿಮರ್ಥಂ ಭಾರ್ಗವಶ್ಚಾಪಿ ಕೋಪಂ ಚಕ್ರೇ ಮಹಾತಪಾಃ||
ಯುಧಿಷ್ಠಿರನು ಹೇಳಿದನು: “ಅವನಿಂದ ಹೇಗೆ ಭಗವಾನ್ ಪಾಕಶಾಸನ ಇಂದ್ರನು ಗರಹೊಡೆದಂತಾದನು ಮತ್ತು ಆ ಮಹಾತಪಸ್ವಿ ಭಾರ್ಗವನಾದರೂ ಅವನಲ್ಲಿ ಏಕೆ ಕೋಪಗೊಂಡನು?
03121023a ನಾಸತ್ಯೌ ಚ ಕಥಂ ಬ್ರಹ್ಮನ್ಕೃತವಾನ್ಸೋಮಪೀಥಿನೌ|
03121023c ಏತತ್ಸರ್ವಂ ಯಥಾವೃತ್ತಮಾಖ್ಯಾತು ಭಗವಾನ್ಮಮ||
ಬ್ರಹ್ಮನ್! ನಾಸತ್ಯ ಅಶ್ವಿನೀ ದೇವತೆಗಳು ಹೇಗೆ ಸೋಮಪಾನ ಮಾಡುವಂತಾದರು? ಭಗವಾನ್! ಇವೆಲ್ಲವನ್ನು ನಡೆದಹಾಗೆ ನನಗೆ ಹೇಳಬೇಕು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಕನ್ಯೇ ಏಕವಿಂಶತ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಕನ್ಯದಲ್ಲಿ ನೂರಾಇಪ್ಪತ್ತೊಂದನೆಯ ಅಧ್ಯಾಯವು.
[1]ಅವನ ಪ್ರತಿಯೊಂದು ಯೂಪದ ಮೇಲೂ ಏಳು ಉಂಗುರಗಳನ್ನು ಏರಿಸಲಾಗಿತ್ತು ಎಂದೂ ಅನುವಾದಿಸಿದ್ದಾರೆ.