ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೧೬
ಜಮದಗ್ನಿಯು ರಾಜ ಪ್ರಸೇನಜಿತನ ಮಗಳು ರೇಣುಕೆಯನ್ನು ಮದುವೆಯಾಗಿ ರಾಮನನ್ನೂ ಸೇರಿ ಐವರು ಕುಮಾರರನ್ನು ಪಡೆದುದು (೧-೪). ರೇಣುಕೆಯ ಚ್ಯುತಳಾಗಿದ್ದಾಳೆಂದು ಜಮದಗ್ನಿಯು ಅವಳನ್ನು ಕೊಲ್ಲಲು ತನ್ನ ಮೊದಲ ನಾಲ್ವರು ಮಕ್ಕಳು - ರುಮಣ್ವಂತ, ಸುಷೇಣ, ವಸು ಮತ್ತು ವಿಶ್ವಾವಸು - ಮಕ್ಕಳಿಗೆ ಆಜ್ಞಾಪಿಸುವುದು; ಅವರು ಹಾಗೆ ನಡೆದುಕೊಳ್ಳದೇ ಇರಲು, ಅವರನ್ನು ಶಪಿಸಿದುದು (೫-೧೨). ತಂದೆಯ ಆಜ್ಞೆಯನ್ನು ಪಾಲಿಸಿದ ರಾಮನಿಗೆ ಜಮದಗ್ನಿಯು ವರಗಳನ್ನಿತ್ತುದು (೧೩-೧೮). ಕಾರ್ತವೀರ್ಯನೊಂದಿಗೆ ರಾಮನ ಯುದ್ಧ; ಕಾರ್ತವೀರ್ಯನ ಜನರು ಜಮದಗ್ನಿಯನ್ನು ಸಂಹರಿಸಿದುದು; ರಾಮನ ಪಿತೃಶೋಕ (೧೯-೨೯).
03116001 ಅಕೃತವ್ರಣ ಉವಾಚ|
03116001a ಸ ವೇದಾಧ್ಯಯನೇ ಯುಕ್ತೋ ಜಮದಗ್ನಿರ್ಮಹಾತಪಾಃ|
03116001c ತಪಸ್ತೇಪೇ ತತೋ ದೇವಾನ್ನಿಯಮಾದ್ವಶಮಾನಯತ್||
ಅಕೃತವ್ರಣನು ಹೇಳಿದನು: “ಆ ಮಹಾತಪಸ್ವಿ ಜಮದಗ್ನಿಯು ವೇದಾಧ್ಯಯನದಲ್ಲಿ ನಿರತನಾಗಿ ತಪಸ್ಸನ್ನು ತಪಿಸಿ ತನ್ನ ನಿಯಮದಿಂದ ದೇವತೆಗಳನ್ನೂ ವಶಪಡಿಸಿಕೊಂಡನು.
03116002a ಸ ಪ್ರಸೇನಜಿತಂ ರಾಜನ್ನಧಿಗಮ್ಯ ನರಾಧಿಪಂ|
03116002c ರೇಣುಕಾಂ ವರಯಾಮಾಸ ಸ ಚ ತಸ್ಮೈ ದದೌ ನೃಪಃ||
ರಾಜನ್! ಅವನು ನರಾಧಿಪ ಪ್ರಸೇನಜಿತನಲ್ಲಿಗೆ ಹೋಗಿ ರೇಣುಕೆಯನ್ನು ವರಿಸಿದನು. ರಾಜನು ಅವಳನ್ನು ಅವನಿಗೆ ಕೊಟ್ಟನು.
03116003a ರೇಣುಕಾಂ ತ್ವಥ ಸಂಪ್ರಾಪ್ಯ ಭಾರ್ಯಾಂ ಭಾರ್ಗವನಂದನಃ|
03116003c ಆಶ್ರಮಸ್ಥಸ್ತಯಾ ಸಾರ್ಧಂ ತಪಸ್ತೇಪೇಽನುಕೂಲಯಾ||
ರೇಣುಕೆಯನ್ನು ಪತ್ನಿಯಾಗಿ ಪಡೆದ ಭಾರ್ಗವನಂದನನು ಆ ಅನುಕೂಲೆಯೊಂದಿಗೆ ತನ್ನ ಆಶ್ರಮದಲ್ಲಿ ಇನ್ನೂ ಹೆಚ್ಚು ತಪಸ್ಸನ್ನು ತಪಿಸಿದನು.
03116004a ತಸ್ಯಾಃ ಕುಮಾರಾಶ್ಚತ್ವಾರೋ ಜಜ್ಞಿರೇ ರಾಮಪಂಚಮಾಃ|
03116004c ಸರ್ವೇಷಾಮಜಘನ್ಯಸ್ತು ರಾಮ ಆಸೀಜ್ಜಘನ್ಯಜಃ||
ಅವಳಲ್ಲಿ ನಾಲ್ಕು ಕುಮಾರರು ಜನಿಸಿದರು. ರಾಮನು ಐದನೆಯವನು. ಎಲ್ಲರಿಗಿಂತ ಕಡೆಯವನಾಗಿದ್ದರೂ ರಾಮನು ಎಲ್ಲದರಲ್ಲಿಯೂ ಎಲ್ಲರಿಗಿಂತ ಮೊದಲನೆಯವನಾಗಿದ್ದನು.
03116005a ಫಲಾಹಾರೇಷು ಸರ್ವೇಷು ಗತೇಷ್ವಥ ಸುತೇಷು ವೈ|
03116005c ರೇಣುಕಾ ಸ್ನಾತುಮಗಮತ್ಕದಾ ಚಿನ್ನಿಯತವ್ರತಾ||
ಒಮ್ಮೆ ಮಕ್ಕಳೆಲ್ಲರೂ ಹಣ್ಣು ಹುಡುಕಿ ತರಲು ಹೋಗಿದ್ದಾಗ ನಿಯತವ್ರತೆ ರೇಣುಕೆಯು ಸ್ನಾನಕ್ಕೆಂದು ಹೋದಳು.
03116006a ಸಾ ತು ಚಿತ್ರರಥಂ ನಾಮ ಮಾರ್ತ್ತಿಕಾವತಕಂ ನೃಪಂ|
03116006c ದದರ್ಶ ರೇಣುಕಾ ರಾಜನ್ನಾಗಚ್ಚಂತೀ ಯದೃಚ್ಚಯಾ||
03116007a ಕ್ರೀಡಂತಂ ಸಲಿಲೇ ದೃಷ್ಟ್ವಾ ಸಭಾರ್ಯಂ ಪದ್ಮಮಾಲಿನಂ|
03116007c ಋದ್ಧಿಮಂತಂ ತತಸ್ತಸ್ಯ ಸ್ಪೃಹಯಾಮಾಸ ರೇಣುಕಾ||
ರಾಜನ್! ಆ ರೇಣುಕೆಯಾದರೋ ಬರುತ್ತಿರುವಾಗ ಚಿತ್ರರಥನೆಂಬ ಹೆಸರಿನ ಮಾರ್ತ್ತಿಕಾವತಕದ ರಾಜನನ್ನು ನೋಡಿದಳು. ಸರೋವರದಲ್ಲಿ ಭಾರ್ಯೆಯರೊಂದಿಗೆ ಆಡುತ್ತಿದ್ದ ಆ ಶ್ರೀಮಂತ ಪದ್ಮಮಾಲಿನಿಯನ್ನು ನೋಡಿ ರೇಣುಕೆಯು ಅವನ ಸಾಮೀಪ್ಯವನ್ನು ಬಯಸಿದಳು.
03116008a ವ್ಯಭಿಚಾರಾತ್ತು ಸಾ ತಸ್ಮಾತ್ಕ್ಲಿನ್ನಾಂಭಸಿ ವಿಚೇತನಾ|
03116008c ಪ್ರವಿವೇಶಾಶ್ರಮಂ ತ್ರಸ್ತಾ ತಾಂ ವೈ ಭರ್ತಾನ್ವಬುಧ್ಯತ||
ಆ ವ್ಯಭಿಚಾರದಿಂದ ಬುದ್ಧಿಕಳೆದುಕೊಂಡ ಅವಳು ನೀರಿನಲ್ಲಿ ಒದ್ದೆಯಾಗಿ ನಡುಗುತ್ತಾ ಆಶ್ರಮವನ್ನು ಪ್ರವೇಶಿಸಿದಳು. ಅವಳ ಗಂಡನು ಎಲ್ಲವನ್ನೂ ತಿಳಿದುಕೊಂಡನು.
03116009a ಸ ತಾಂ ದೃಷ್ಟ್ವಾ ಚ್ಯುತಾಂ ಧೈರ್ಯಾದ್ಬ್ರಾಹ್ಮ್ಯಾ ಲಕ್ಷ್ಮ್ಯಾ ವಿವರ್ಜಿತಾಂ|
03116009c ಧಿಕ್ಶಬ್ಧೇನ ಮಹಾತೇಜಾ ಗರ್ಹಯಾಮಾಸ ವೀರ್ಯವಾನ್||
ಅವಳು ತನ್ನ ಧೈರ್ಯದಿಂದ ಚ್ಯುತಳಾಗಿದ್ದಾಳೆ ಮತ್ತು ತನ್ನ ಬ್ರಹ್ಮಲಕ್ಷ್ಮಿಯನ್ನು ತೊರೆದಿದ್ದಾಳೆ ಎಂದು ತಿಳಿದ ಆ ವೀರ್ಯವಂತ ಮಹಾತೇಜಸ್ವಿಯು ಅವಳನ್ನು ಧಿಕ್ಕರಿಸುವ ಮಾತುಗಳಿಂದ ಜರೆದನು.
03116010a ತತೋ ಜ್ಯೇಷ್ಠೋ ಜಾಮದಗ್ನ್ಯೋ ರುಮಣ್ವಾನ್ನಾಮ ನಾಮತಃ|
03116010c ಆಜಗಾಮ ಸುಷೇಣಶ್ಚ ವಸುರ್ವಿಶ್ವಾವಸುಸ್ತಥಾ||
ಆಗ ರುಮಣ್ವಂತ ಎಂಬ ಹೆಸರಿನ ಜಮದಗ್ನಿಯ ಜ್ಯೇಷ್ಠ ಪುತ್ರನೂ, ಹಾಗೆಯೇ ಸುಷೇಣನೂ, ವಸುವೂ ಮತ್ತು ವಿಶ್ವಾವಸುವೂ ಬಂದರು.
03116011a ತಾನಾನುಪೂರ್ವ್ಯಾದ್ಭಗವಾನ್ವಧೇ ಮಾತುರಚೋದಯತ್|
03116011c ನ ಚ ತೇ ಜಾತಸಮ್ಮೋಹಾಃ ಕಿಂ ಚಿದೂಚುರ್ವಿಚೇತಸಃ||
ಆ ಭಗವಾನನು ಅವರಲ್ಲಿ ಅನುಕ್ರಮವಾಗಿ ಒಬ್ಬಬ್ಬರಲ್ಲಿಯೂ ತಾಯಿಯನ್ನು ವಧಿಸಲು ಅಜ್ಞಾಪಿಸಿದನು. ಆದರೆ ತಾಯಿಯ ಮೇಲಿನ ಮೋಹದಿಂದ ಬುದ್ಧಿಕಳೆದುಕೊಂಡ ಅವರು ಯಾರೂ ಉತ್ತರಿಸಲಿಲ್ಲ.
03116012a ತತಃ ಶಶಾಪ ತಾನ್ಕೋಪಾತ್ತೇ ಶಪ್ತಾಶ್ಚೇತನಾಂ ಜಹುಃ|
03116012c ಮೃಗಪಕ್ಷಿಸಧರ್ಮಾಣಃ ಕ್ಷಿಪ್ರಮಾಸಂ ಜಡೋಪಮಾಃ||
ಆಗ ಕೋಪದಿಂದ ಅವರನ್ನು ಶಪಿಸಿದನು. ಅವರು ಶಾಪದಿಂದ ತಮ್ಮ ಚೇತನಗಳನ್ನು ಕಳೆದುಕೊಂಡು ತಕ್ಷಣವೇ ಮೃಗಪಕ್ಷಿಗಳಂತೆ ಮತ್ತು ಜಡವಸ್ತುಗಳಂತೆ ವರ್ತಿಸತೊಡಗಿದರು.
03116013a ತತೋ ರಾಮೋಽಭ್ಯಗಾತ್ಪಶ್ಚಾದಾಶ್ರಮಂ ಪರವೀರಹಾ|
03116013c ತಮುವಾಚ ಮಹಾಮನ್ಯುರ್ಜಮದಗ್ನಿರ್ಮಹಾತಪಾಃ||
ಅನಂತರ ಅಲ್ಲಿಗೆ ಪರವೀರಹ ರಾಮನು ಆಶ್ರಮಕ್ಕೆ ಬಂದನು. ಮಹಾತಪಸ್ವಿ ಜಮದಗ್ನಿಯು ಮಹಾಕೋಪದಿಂದ ಅವನಿಗೆ ಹೇಳಿದನು:
03116014a ಜಹೀಮಾಂ ಮಾತರಂ ಪಾಪಾಂ ಮಾ ಚ ಪುತ್ರ ವ್ಯಥಾಂ ಕೃಥಾಃ|
03116014c ತತ ಆದಾಯ ಪರಶುಂ ರಾಮೋ ಮಾತುಃ ಶಿರೋಽಹರತ್||
“ಮಗಾ! ಈ ಪಾಪಿ ತಾಯಿಯನ್ನು ಕೊಲ್ಲು. ವ್ಯಥೆಮಾಡಬೇಡ!” ಆಗ ರಾಮನು ಕೊಡಲಿಯನ್ನು ಹಿಡಿದು ತಾಯಿಯ ತಲೆಯನ್ನು ಕಡಿದನು.
03116015a ತತಸ್ತಸ್ಯ ಮಹಾರಾಜ ಜಮದಗ್ನೇರ್ಮಹಾತ್ಮನಃ|
03116015c ಕೋಪೋ ಅಗಚ್ಚತ್ಸಹಸಾ ಪ್ರಸನ್ನಶ್ಚಾಬ್ರವೀದಿದಂ||
ಮಹಾರಾಜ! ಆಗ ಮಹಾತ್ಮ ಜಮದಗ್ನಿಯ ಕೋಪವು ತಕ್ಷಣವೇ ಕಡಿಮೆಯಾಯಿತು ಮತ್ತು ಪ್ರಸನ್ನನಾಗಿ ಅವನು ಹೇಳಿದನು:
03116016a ಮಮೇದಂ ವಚನಾತ್ತಾತ ಕೃತಂ ತೇ ಕರ್ಮ ದುಷ್ಕರಂ|
03116016c ವೃಣೀಷ್ವ ಕಾಮಾನ್ಧರ್ಮಜ್ಞ ಯಾವತೋ ವಾಂಚಸೇ ಹೃದಾ||
“ಮಗೂ! ನನ್ನ ಈ ಮಾತಿನಂತೆ ನೀನು ಈ ದುಷ್ಕರ ಕೆಲಸವನ್ನು ಮಾಡಿದ್ದೀಯೆ! ಧರ್ಮಜ್ಞ! ನಿನ್ನ ಹೃದಯದಲ್ಲಿ ಎಷ್ಟನ್ನು ಬಯಸುತ್ತೀಯೋ ಅಷ್ಟು ವರಗಳನ್ನು ಕೇಳು!”
03116017a ಸ ವವ್ರೇ ಮಾತುರುತ್ಥಾನಮಸ್ಮೃತಿಂ ಚ ವಧಸ್ಯ ವೈ|
03116017c ಪಾಪೇನ ತೇನ ಚಾಸ್ಪರ್ಶಂ ಭ್ರಾತೄಣಾಂ ಪ್ರಕೃತಿಂ ತಥಾ||
ಅವನು ತಾಯಿಯು ಎದ್ದೇಳಲೆಂದೂ, ವಧೆಯನ್ನು ಮರೆಯುವಂತೆಯೂ, ಪಾಪವು ತನಗೆ ತಾಗದಿರಲೆಂದೂ, ಮತ್ತು ತನ್ನ ಸಹೋದರರು ತಮ್ಮ ಹಿಂದಿನ ಸ್ವಭಾವಕ್ಕೆ ಹಿಂದಿರುಗಲೆಂದೂ ಕೇಳಿಕೊಂಡನು.
03116018a ಅಪ್ರತಿದ್ವಂದ್ವತಾಂ ಯುದ್ಧೇ ದೀರ್ಘಮಾಯುಶ್ಚ ಭಾರತ|
03116018c ದದೌ ಚ ಸರ್ವಾನ್ಕಾಮಾಂಸ್ತಾಂ ಜಮದಗ್ನಿರ್ಮಹಾತಪಾಃ||
ಭಾರತ! ಮಹಾತಪಸ್ವಿ ಜಮದಗ್ನಿಯು ದ್ವಂದ್ವಯುದ್ಧದಲ್ಲಿ ಅಜೇಯತ್ವವನ್ನೂ, ದೀರ್ಘಾಯುಸ್ಸನ್ನೂ ಮತ್ತು ಅವನು ಬಯಸಿದುದೆಲ್ಲವನ್ನೂ ನೀಡಿದನು.
03116019a ಕದಾ ಚಿತ್ತು ತಥೈವಾಸ್ಯ ವಿನಿಷ್ಕ್ರಾಂತಾಃ ಸುತಾಃ ಪ್ರಭೋ|
03116019c ಅಥಾನೂಪಪತಿರ್ವೀರಃ ಕಾರ್ತವೀರ್ಯೋಽಭ್ಯವರ್ತತ||
ಪ್ರಭೂ! ಅನಂತರ ಒಂದು ದಿನ ಅವನ ಮಕ್ಕಳೆಲ್ಲರೂ ಹೊರಗೆ ಹೋಗಿದ್ದಾಗ ಕರಾವಳಿಯ ರಾಜ ಕಾರ್ತವೀರ್ಯನು ಅಲ್ಲಿಗೆ ಆಗಮಿಸಿದನು.
03116020a ತಮಾಶ್ರಮಪದಂ ಪ್ರಾಪ್ತಮೃಷೇರ್ಭಾರ್ಯಾ ಸಮರ್ಚಯತ್|
03116020c ಸ ಯುದ್ಧಮದಸಮ್ಮತ್ತೋ ನಾಭ್ಯನಂದತ್ತಥಾರ್ಚನಂ||
ಅವನು ಆಶ್ರಮಕ್ಕೆ ಬಂದಾಗ ಋಷಿಪತ್ನಿಯು ಅವನನ್ನು ಅರ್ಚಿಸಿದಳು. ಆದರೆ ಆ ಯುದ್ಧಮದಸಮ್ಮತ್ತನು ಅವಳ ಆತಿಥ್ಯವನ್ನು ಸ್ವೀಕರಿಸಲಿಲ್ಲ.
03116021a ಪ್ರಮಥ್ಯ ಚಾಶ್ರಮಾತ್ತಸ್ಮಾದ್ಧೋಮಧೇನ್ವಾಸ್ತದಾ ಬಲಾತ್|
03116021c ಜಹಾರ ವತ್ಸಂ ಕ್ರೋಶಂತ್ಯಾ ಬಭಂಜ ಚ ಮಹಾದ್ರುಮಾನ್||
ಅವನು ಆಶ್ರಮವನ್ನು ಧ್ವಂಸಮಾಡಿ, ಕೂಗುತ್ತಿರುವ ಹೋಮಧೇನುವಿನ ಕರುವನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗುತ್ತಾ ಮಹಾವೃಕ್ಷಗಳನ್ನು ಕಡಿದುರುಳಿಸಿದನು.
03116022a ಆಗತಾಯ ಚ ರಾಮಾಯ ತದಾಚಷ್ಟ ಪಿತಾ ಸ್ವಯಂ|
03116022c ಗಾಂ ಚ ರೋರೂಯತೀಂ ದೃಷ್ಟ್ವಾ ಕೋಪೋ ರಾಮಂ ಸಮಾವಿಶತ್||
ರಾಮನು ಮರಳಿ ಬಂದಾಗ ಸ್ವಯಂ ತಂದೆಯು ಎಲ್ಲವನ್ನೂ ಹೇಳಿದನು ಮತ್ತು ಕೂಗುತ್ತಿರುವ ಗೋವನ್ನು ನೋಡಿ ರಾಮನು ಕೋಪದಿಂದ ಆವೇಶಗೊಂಡನು,
03116023a ಸ ಮನ್ಯುವಶಮಾಪನ್ನಃ ಕಾರ್ತವೀರ್ಯಮುಪಾದ್ರವತ್|
03116023c ತಸ್ಯಾಥ ಯುಧಿ ವಿಕ್ರಮ್ಯ ಭಾರ್ಗವಃ ಪರವೀರಹಾ||
ಕೋಪಾವಿಷ್ಟನಾದ ಪರವೀರಹ ಭಾರ್ಗವನು ಕಾರ್ತವೀರ್ಯನನ್ನು ಆಕ್ರಮಣಮಾಡಿ ಅವನೊಂದಿಗೆ ಯುದ್ಧದಲ್ಲಿ ತೊಡಗಿದನು.
03116024a ಚಿಚ್ಚೇದ ನಿಶಿತೈರ್ಭಲ್ಲೈರ್ಬಾಹೂನ್ಪರಿಘಸನ್ನಿಭಾನ್|
03116024c ಸಹಸ್ರಸಮ್ಮಿತಾನ್ರಾಜನ್ಪ್ರಗೃಹ್ಯ ರುಚಿರಂ ಧನುಃ||
ರಾಜನ್! ತನ್ನ ಉತ್ತಮ ಧನುಸ್ಸನ್ನು ಹಿಡಿದು ಹರಿತವಾದ ಬಾಣಗಳಿಂದ ಪರಿಘಗಳಂತಿದ್ದ ಅವನ ಸಹಸ್ರ ಬಾಹುಗಳನ್ನು ಕತ್ತರಿಸಿದನು.
03116025a ಅರ್ಜುನಸ್ಯಾಥ ದಾಯಾದಾ ರಾಮೇಣ ಕೃತಮನ್ಯವಃ|
03116025c ಆಶ್ರಮಸ್ಥಂ ವಿನಾ ರಾಮಂ ಜಮದಗ್ನಿಮುಪಾದ್ರವನ್||
ರಾಮನ ಮೇಲೆ ಕುಪಿತರಾಗಿ ಅರ್ಜುನನ ದಾಯಾದಿಗಳು ರಾಮನಿಲ್ಲದಿದ್ದಾಗ ಆಶ್ರಮದಲ್ಲಿದ್ದ ಜಮದಗ್ನಿಯ ಮೇಲೆ ದಾಳಿಮಾಡಿದರು.
03116026a ತೇ ತಂ ಜಘ್ನುರ್ಮಹಾವೀರ್ಯಮಯುಧ್ಯಂತಂ ತಪಸ್ವಿನಂ|
03116026c ಅಸಕೃದ್ರಾಮ ರಾಮೇತಿ ವಿಕ್ರೋಶಂತಮನಾಥವತ್||
ಅವರು ಯುದ್ಧಮಾಡಲು ನಿರಾಕರಿಸಿದ ಆ ತಪಸ್ವಿಯನ್ನು, “ರಾಮಾ ರಾಮಾ” ಎಂದು ಕೂಗುತ್ತಿರುವಾಗಲೇ, ಯಾರ ರಕ್ಷಣೆಯಲ್ಲಿಯೂ ಇಲ್ಲದಿರುವಾಗ ಸಂಹರಿಸಿದರು.
03116027a ಕಾರ್ತವೀರ್ಯಸ್ಯ ಪುತ್ರಾಸ್ತು ಜಮದಗ್ನಿಂ ಯುಧಿಷ್ಠಿರ|
03116027c ಘಾತಯಿತ್ವಾ ಶರೈರ್ಜಗ್ಮುರ್ಯಥಾಗತಮರಿಂದಮಾಃ||
ಯುಧಿಷ್ಠಿರ! ಕಾರ್ತವೀರ್ಯನ ಆ ಅರಿಂದಮ ಪುತ್ರರು ಜಮದಗ್ನಿಯನ್ನು ಬಾಣಗಳಿಂದ ಕೊಂದು ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
03116028a ಅಪಕ್ರಾಂತೇಷು ಚೈತೇಷು ಜಮದಗ್ನೌ ತಥಾಗತೇ|
03116028c ಸಮಿತ್ಪಾಣಿರುಪಾಗಚ್ಚದಾಶ್ರಮಂ ಭೃಗುನಂದನಃ||
ಜಮದಗ್ನಿಯನ್ನು ಹಾಗೆಯೇ ಬಿಟ್ಟು ಅವರು ಹೊರಟುಹೋದನಂತರ ಸಮಿತ್ತುಗಳನ್ನು ಹಿಡಿದು ಭೃಗುನಂದನನು ಆಶ್ರಮಕ್ಕೆ ಮರಳಿದನು.
03116029a ಸ ದೃಷ್ಟ್ವಾ ಪಿತರಂ ವೀರಸ್ತಥಾ ಮೃತ್ಯುವಶಂ ಗತಂ|
03116029c ಅನರ್ಹಂತಂ ತಥಾಭೂತಂ ವಿಲಲಾಪ ಸುದುಃಖಿತಃ||
ಮೃತ್ಯುವಶನಾಗಿದ್ದ ತನ್ನ ತಂದೆಯನ್ನು ನೋಡಿ ಆ ವೀರನು ಅನರ್ಹನಾದವನಿಗೆ ಹೀಗಾಗಿದ್ದುದನ್ನು ಕಂಡು ಬಹಳ ದುಃಖಿತನಾಗಿ ವಿಲಪಿಸಿದನು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಕಾರ್ತವೀರ್ಯೋಪಾಖ್ಯಾನೇ ಷೋಡಶಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಕಾರ್ತವೀರ್ಯೋಪಾಖ್ಯಾನದಲ್ಲಿ ನೂರಾಹದಿನಾರನೆಯ ಅಧ್ಯಾಯವು.