Aranyaka Parva: Chapter 112

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೧೨

ಋಷ್ಯಶೃಂಗನು ತಂದೆಗೆ ಆ ದಿನ ತಾನು ಭೇಟಿಯಾದ ವ್ಯಕ್ತಿಯ ವರ್ಣನೆಯನ್ನು ಮಾಡಿ ಅವನೊಂದಿಗೆ ಹೋಗಲು ಬಯಸುತ್ತೇನೆಂದು ಹೇಳುವುದು (೧-೧೮).

Image result for rishyashringa03112001 ಋಶ್ಯಶೃಂಗ ಉವಾಚ|

03112001a ಇಹಾಗತೋ ಜಟಿಲೋ ಬ್ರಹ್ಮಚಾರೀ|

        ನ ವೈ ಹ್ರಸ್ವೋ ನಾತಿದೀರ್ಘೋ ಮನಸ್ವೀ|

03112001c ಸುವರ್ಣವರ್ಣಃ ಕಮಲಾಯತಾಕ್ಷಃ|

        ಸುತಃ ಸುರಾಣಾಮಿವ ಶೋಭಮಾನಃ||

ಋಷ್ಯಶೃಂಗನು ಹೇಳಿದನು: “ಇಲ್ಲಿಗೆ ಒಬ್ಬ ಜಡೆಹಾಕಿದ ಬ್ರಹ್ಮಚಾರಿಯು ಬಂದಿದ್ದ. ಅವನು ಕುಳ್ಳಗೂ ಇರಲಿಲ್ಲ ಮತ್ತು ಅತಿಯಾಗಿ ಎತ್ತರವೂ ಇರಲಿಲ್ಲ. ತುಂಬಾ ಉತ್ಸಾಹಿಯಾಗಿದ್ದ. ಬಂಗಾರದ ಬಣ್ಣವನ್ನು ಹೊಂದಿದ್ದ ಅವನ ಕಣ್ಣುಗಳು ಕಮಲದ ಎಸಳುಗಳಂತಿದ್ದವು. ಸುರರ ಮಗನಂತೆ ಶೋಭಿಸುತ್ತಿದ್ದನು.

03112002a ಸಮೃದ್ಧರೂಪಃ ಸವಿತೇವ ದೀಪ್ತಃ|

        ಸುಶುಕ್ಲಕೃಷ್ಣಾಕ್ಷತರಶ್ಚಕೋರೈಃ|

03112002c ನೀಲಾಃ ಪ್ರಸನ್ನಾಶ್ಚ ಜಟಾಃ ಸುಗಂಧಾ|

        ಹಿರಣ್ಯರಜ್ಜುಗ್ರಥಿತಾಃ ಸುದೀರ್ಘಾಃ||

ಅವನ ಸಮೃದ್ಧ ದೇಹವು ಸೂರ್ಯನಂತೆ ಬೆಳಗುತ್ತಿತ್ತು. ಅವನ ಕಣ್ಣುಗಳು ಚಕೋರಗಳಂತೆ ಬಿಳಿ ಮತ್ತು ಕಪ್ಪಾಗಿದ್ದವು. ಅವನ ಜಡೆಯು ನೀಲವಾಗಿ, ನೋಡಲು ಸುಂದರವಾಗಿ, ಸುಗಂಧಿತವಾಗಿತ್ತು. ಅದು ನೀಳವಾಗಿದ್ದು ಬಂಗಾರದ ದಾರದಿಂದ ಕಟ್ಟಲ್ಪಟ್ಟಿತ್ತು.

03112003a ಆಧಾರರೂಪಾ ಪುನರಸ್ಯ ಕಂಠೇ|

        ವಿಭ್ರಾಜತೇ ವಿದ್ಯುದಿವಾಂತರಿಕ್ಷೇ|

03112003c ದ್ವೌ ಚಾಸ್ಯ ಪಿಂಡಾವಧರೇಣ ಕಂಠ|

        ಅಜಾತರೋಮೌ ಸುಮನೋಹರೌ ಚ||

ಅವನ ಕಂಠದಲ್ಲಿ ಅಂತರಿಕ್ಷದಲ್ಲಿ ಬೆಳಗುವ ಮಿಂಚಿನಂತೆ ಹೊಳೆಯುವ ಲೋಟಗಳಿಂತಿರುವವುಗಳನ್ನು ಧರಿಸಿದ್ದನು. ಅವನ ಕಂಠದ ಕೆಳಗೆ ರೋಮಗಳೇ ಇಲ್ಲದ ಅತಿ ಸುಂದರ ಎರಡು ಗೋಲಗಳಿದ್ದವು.

03112004a ವಿಲಗ್ನಮಧ್ಯಶ್ಚ ಸ ನಾಭಿದೇಶೇ|

        ಕಟಿಶ್ಚ ತಸ್ಯಾತಿಕೃತಪ್ರಮಾಣಾ|

03112004c ತಥಾಸ್ಯ ಚೀರಾಂತರಿತಾ ಪ್ರಭಾತಿ|

        ಹಿರಣ್ಮಯೀ ಮೇಖಲಾ ಮೇ ಯಥೇಯಂ||

ಅವನ ಹೊಕ್ಕಳು ಪ್ರದೇಶದಲ್ಲಿ ಚುಚ್ಚಲಾಗಿತ್ತು. ಅವನ ಸೊಂಟವೂ ದೊಡ್ಡದಾಗಿತ್ತು. ಅವನ ಪೋಷಾಕಿನ ಕೆಳಗಿ ನನಗಿದ್ದಹಾಗೆ ಪಟ್ಟಿಯಿತ್ತು ಆದರೆ ಅದು ಬಂಗಾರದ್ದಾಗಿತ್ತು.

03112005a ಅನ್ಯಚ್ಚ ತಸ್ಯಾದ್ಭುತದರ್ಶನೀಯಂ|

        ವಿಕೂಜಿತಂ ಪಾದಯೋಃ ಸಂಪ್ರಭಾತಿ|

03112005c ಪಾಣ್ಯೋಶ್ಚ ತದ್ವತ್ಸ್ವನವನ್ನಿಬದ್ಧೌ|

        ಕಲಾಪಕಾವಕ್ಷಮಾಲಾ ಯಥೇಯಂ||

ಇನ್ನೂ ಅನೇಕ ಅದ್ಭುತಗಳು ಅವನಲ್ಲಿ ಕಂಡುಬಂದವು. ಅವನ ಕಾಲುಗಳಲ್ಲಿ ಧ್ವನಿಮಾಡುವ ಗೆಜ್ಜೆಗಳಿದ್ದವು. ಕೈಗಳಲ್ಲಿಯೂ ಕೂಡ ಅಂತಹದೇ, ನನ್ನ ರುದ್ರಾಕ್ಷದಂತಿರುವ ದಾರವನ್ನು ಕಟ್ಟಿದ್ದನು. ಆದರೆ ಅದು ಝಣ ಝಣ ಶಬ್ಧಮಾಡುತ್ತಿತ್ತು.

03112006a ವಿಚೇಷ್ಟಮಾನಸ್ಯ ಚ ತಸ್ಯ ತಾನಿ|

        ಕೂಜಂತಿ ಹಂಸಾ ಸರಸೀವ ಮತ್ತಾಃ|

03112006c ಚೀರಾಣಿ ತಸ್ಯಾದ್ಭುತದರ್ಶನಾನಿ|

        ನೇಮಾನಿ ತದ್ವನ್ಮಮ ರೂಪವಂತಿ||

ಅವನು ಹಂದಾಡಿದಾಗಲೆಲ್ಲ ಅವುಗಳು ಸರೋವರದಲ್ಲಿ ಮತ್ತೇರಿದ ಹಂಸಗಳಂತೆ ಶಬ್ಧಮಾಡುತ್ತಿದ್ದವು. ಅವನ ಉಡುಪು ನೋಡಲು ಅದ್ಭುತವಾಗಿತ್ತು. ಅವು ನನ್ನ ಉಡುಪಿನ ಹಾಗಿರದೇ, ತುಂಬಾ ಸುಂದರವಾಗಿತ್ತು.

03112007a ವಕ್ತ್ರಂ ಚ ತಸ್ಯಾದ್ಭುತದರ್ಶನೀಯಂ

        ಪ್ರವ್ಯಾಹೃತಂ ಹ್ಲಾದಯತೀವ ಚೇತಃ|

03112007c ಪುಂಸ್ಕೋಕಿಲಸ್ಯೇವ ಚ ತಸ್ಯ ವಾಣೀ|

        ತಾಂ ಶೃಣ್ವತೋ ಮೇ ವ್ಯಥಿತೋಽಂತರಾತ್ಮಾ||

ಅವನ ಮುಖವೂ ನೋಡಲು ಅದ್ಭುತವಾಗಿತ್ತು. ಅವನ ಮಾತು ಹೃದಯಕ್ಕೆ ಸಂತಸವನ್ನು ನೀಡುತ್ತಿತ್ತು. ಅವನ ಮಾತು ಕೋಗಿಲೆಯ ಹಾಡಿನಂತಿತ್ತು. ಅವನನ್ನು ಕೇಳಿದಾಗಲೆಲ್ಲ ನನ್ನ ಅಂತರಾತ್ಮವು ವ್ಯಥಿತಗೊಳ್ಳುತ್ತಿತ್ತು.

03112008a ಯಥಾ ವನಂ ಮಾಧವಮಾಸಿ ಮಧ್ಯೇ|

        ಸಮೀರಿತಂ ಶ್ವಸನೇನಾಭಿವಾತಿ|

03112008c ತಥಾ ಸ ವಾತ್ಯುತ್ತಮಪುಣ್ಯಗಂಧೀ|

        ನಿಷೇವ್ಯಮಾಣಃ ಪವನೇನ ತಾತ||

ಮಾಧವ ಮಾಸದ ಮಧ್ಯೆ ವನದಲ್ಲಿ ಗಾಳಿಯು ಪರಿಮಳವನ್ನು ಹೊತ್ತು ತರುವಂತೆ ಅವನೂ ಕೂಡ ಗಾಳಿಯು ಅವನ ಮೇಲೆ ಬಿದ್ದಾಗಲೆಲ್ಲ ಉತ್ತಮ ಪುಣ್ಯ ಸುಗಂಧವನ್ನು ಸೂಸುತ್ತಿದ್ದನು. 

03112009a ಸುಸಮ್ಯತಾಶ್ಚಾಪಿ ಜಟಾ ವಿಭಕ್ತಾ|

        ದ್ವೈಧೀಕೃತಾ ಭಾಂತಿ ಸಮಾ ಲಲಾಟೇ|

03112009c ಕರ್ಣೌ ಚ ಚಿತ್ರೈರಿವ ಚಕ್ರವಾಲೈಃ|

        ಸಮಾವೃತೌ ತಸ್ಯ ಸುರೂಪವದ್ಭಿಃ||

ನೆತ್ತಿಯಮೇಲೆ ಸಮನಾಗಿ ಎರಡು ಭಾಗಗಳನ್ನಾಗಿಸಿ ಚೆನ್ನಾಗಿ ಜಡೆಕಟ್ಟಿದ್ದನು. ಸರಿಯಾದ ದುಂಡಾಗಿ ಕೂದಲುಗಳು ಗುಂಗುರಾಗಿ ಅವನ ಕಿವಿಗಳನ್ನು ಸುಂದರವಾಗಿ ಮುಚ್ಚಿದ್ದವು.

03112010a ತಥಾ ಫಲಂ ವೃತ್ತಮಥೋ ವಿಚಿತ್ರಂ|

        ಸಮಾಹನತ್ಪಾಣಿನಾ ದಕ್ಷಿಣೇನ|

03112010c ತದ್ಭೂಮಿಮಾಸಾದ್ಯ ಪುನಃ ಪುನಶ್ಚ|

        ಸಮುತ್ಪತತ್ಯದ್ಭುತರೂಪಮುಚ್ಚೈಃ||

ಅವನ ಬಲಗೈನಲ್ಲಿ ಹಣ್ಣಿನಂತೆ ಗೋಲಾಕಾರದ ಬಣ್ಣಬಣ್ಣದ ವಸ್ತುವೊಂದನ್ನು ಹಿಡಿದಿದ್ದನು. ಅದು ಭೂಮಿಯನ್ನು ಮುಟ್ಟಿದ ಕೂಡಲೆ ಪುನಃ ಪುನಃ ಮೇಲೆ ಅದ್ಭುತವಾಗಿ ಪುಟಿಯುತ್ತಿತ್ತು.

03112011a ತಚ್ಚಾಪಿ ಹತ್ವಾ ಪರಿವರ್ತತೇಽಸೌ|

        ವಾತೇರಿತೋ ವೃಕ್ಷ ಇವಾವಘೂರ್ಣಃ|

03112011c ತಂ ಪ್ರೇಕ್ಷ್ಯ ಮೇ ಪುತ್ರಮಿವಾಮರಾಣಾಂ|

        ಪ್ರೀತಿಃ ಪರಾ ತಾತ ರತಿಶ್ಚ ಜಾತಾ||

ಅದನ್ನು ಹೊಡೆದು ಅವನು ತನ್ನ ದೇಹವನ್ನು ಗಾಳಿಗೆ ಸಿಕ್ಕ ಮರದಂತೆ ತಿರುಗಿಸುತ್ತಿದ್ದನು. ಅಪ್ಪಾ! ಅಮರರ ಮಗನಂತಿರುವ ಅವನನ್ನು ನೋಡಿದಾಗಲೆಲ್ಲ ನನ್ನ ಅತ್ಯಂತ ಪ್ರೀತಿ ಮತ್ತು ಸಂತೋಷವು ಹುಟ್ಟುತ್ತಿತ್ತು.

03112012a ಸ ಮೇ ಸಮಾಶ್ಲಿಷ್ಯ ಪುನಃ ಶರೀರಂ|

        ಜಟಾಸು ಗೃಹ್ಯಾಭ್ಯವನಾಮ್ಯ ವಕ್ತ್ರಂ|

03112012c ವಕ್ತ್ರೇಣ ವಕ್ತ್ರಂ ಪ್ರಣಿಧಾಯ ಶಬ್ಧಂ|

        ಚಕಾರ ತನ್ಮೇಽಜನಯತ್ಪ್ರಹರ್ಷಂ||

ಅವನು ನನ್ನ ಶರೀರವನ್ನು ಪುನಃ ಪುನಃ ಅಪ್ಪಿ ಹಿಡಿದು ನನ್ನ ಕೂದಲನ್ನು ಎಳೆದು ನನ್ನ ಮುಖವನ್ನು ಕೆಳಮಾಡಿ ಬಾಯಿಯ ಮೇಲೆ ಬಾಯಿಯನ್ನಿಟ್ಟು ಶಬ್ಧಮಾಡಿದನು. ಅದರಿಂದ ನನ್ನಲ್ಲಿ ಅತ್ಯಂತ ಸಂತೋಷವು ಹುಟ್ಟಿತು.

03112013a ನ ಚಾಪಿ ಪಾದ್ಯಂ ಬಹು ಮನ್ಯತೇಽಸೌ|

        ಫಲಾನಿ ಚೇಮಾನಿ ಮಯಾಹೃತಾನಿ|

03112013c ಏವಂವ್ರತೋಽಸ್ಮೀತಿ ಚ ಮಾಮವೋಚತ್|

        ಫಲಾನಿ ಚಾನ್ಯಾನಿ ನವಾನ್ಯದಾನ್ಮೇ||

ಅವನು ಪಾದ್ಯಕ್ಕೆ ಹೆಚ್ಚು ಗಮನಕೊಡಲಿಲ್ಲ. ನಾನು ಕೊಟ್ಟ ಹಣ್ಣುಗಳನ್ನೂ ಸ್ವೀಕರಿಸಲಿಲ್ಲ. ಇದೇ ನನ್ನ ವ್ರತ ಎಂದು ನನಗೆ ಹೇಳಿದನು ಮತ್ತು ನನಗೆ ಬೇರೆ ಹೊಸ ಹಣ್ಣುಗಳನ್ನು ಕೊಟ್ಟ.

03112014a ಮಯೋಪಯುಕ್ತಾನಿ ಫಲಾನಿ ತಾನಿ|

        ನೇಮಾನಿ ತುಲ್ಯಾನಿ ರಸೇನ ತೇಷಾಂ|

03112014c ನ ಚಾಪಿ ತೇಷಾಂ ತ್ವಗಿಯಂ ಯಥೈಷಾಂ|

        ಸಾರಾಣಿ ನೈಷಾಮಿವ ಸಂತಿ ತೇಷಾಂ||

ಅವನ ಎಲ್ಲ ಹಣ್ಣುಗಳನ್ನೂ ನಾನು ತಿಂದೆ. ಅವುಗಳ ರುಚಿಯು ಈ ಹಣ್ಣುಗಳಂತೆ ಇರಲೇ ಇಲ್ಲ. ಈ ಹಣ್ಣುಗಳಿಗಿರುವಂತೆ ಅವುಗಳಲ್ಲಿ ತೊಗಟೆಯೂ ಇರಲಿಲ್ಲ ಮತ್ತು ನಮ್ಮ ಹಣ್ಣುಗಳಲ್ಲಿರುವಂತೆ ಅವುಗಳಲ್ಲಿ ಕಲ್ಲುಗಳಿರಲಿಲ್ಲ.

03112015a ತೋಯಾನಿ ಚೈವಾತಿರಸಾನಿ ಮಃಯಂ|

        ಪ್ರಾದಾತ್ಸ ವೈ ಪಾತುಮುದಾರರೂಪಃ|

03112015c ಪೀತ್ವೈವ ಯಾನ್ಯಭ್ಯಧಿಕಃ ಪ್ರಹರ್ಷೋ|

        ಮಮಾಭವದ್ಭೂಶ್ಚಲಿತೇವ ಚಾಸೀತ್||

ಆ ಉದಾರರೂಪಿಯು ನನಗೆ ಈ ಅತಿ ರುಚಿಯಾಗುಳ್ಳ ಪಾನೀಯವನ್ನು ನೀಡಿದನು. ಅದನ್ನು ಕುಡಿಯುತ್ತಲೇ ಅತೀವ ಸಂತಸವು ನನ್ನನ್ನು ಸೆರೆಹಿಡಿಯಿತು ಮತ್ತು ಭೂಮಿಯೇ ಓಲಾಡುವಂತೆ ಆಯಿತು.

03112016a ಇಮಾನಿ ಚಿತ್ರಾಣಿ ಚ ಗಂಧವಂತಿ|

        ಮಾಲ್ಯಾನಿ ತಸ್ಯೋದ್ಗ್ರಥಿತಾನಿ ಪಟ್ಟೈಃ|

03112016c ಯಾನಿ ಪ್ರಕೀರ್ಯೇಹ ಗತಃ ಸ್ವಮೇವ|

        ಸ ಆಶ್ರಮಂ ತಪಸಾ ದ್ಯೋತಮಾನಃ||

ಇವು ರಂಗುರಂಗಿನ ಸುಗಂಧಯುಕ್ತ, ಅವನೇ ಕಟ್ಟಿದ ಮಾಲೆಗಳು. ಈ ಮಾಲೆಗಳನ್ನು ಇಲ್ಲಿ ಚೆಲ್ಲಿ ಅವನು ಬೆಳಗುತ್ತಾ ತನ್ನ ಆಶ್ರಮಕ್ಕೆ ತಪಸ್ಸಿಗೆಂದು ಹೊರಟುಹೋದನು.

03112017a ಗತೇನ ತೇನಾಸ್ಮಿ ಕೃತೋ ವಿಚೇತಾ|

        ಗಾತ್ರಂ ಚ ಮೇ ಸಂಪರಿತಪ್ಯತೀವ|

03112017c ಇಚ್ಚಾಮಿ ತಸ್ಯಾಂತಿಕಮಾಶು ಗಂತುಂ|

        ತಂ ಚೇಹ ನಿತ್ಯಂ ಪರಿವರ್ತಮಾನಂ||

ಅವನು ಬಿಟ್ಟುಹೋದದ್ದು ನನ್ನನ್ನು ಮನಸ್ಸು ಕಳೆದುಕೊಂಡವನಂತೆ ಮಾಡಿದೆ. ನನ್ನ ದೇಹವು ಜ್ವರಬಂದವರಂತೆ ಬಿಸಿಯಾಗಿದೆ. ನೇರವಾಗಿ ಅವನಿರುವಲ್ಲಿಗೆ ಹೋಗ ಬಯಸುತ್ತೇನೆ ಮತ್ತು ಪ್ರತಿದಿನ ಅವನು ಇಲ್ಲಿಗೆ ಬರುವಂತೆ ಮಾಡಬಯಸುತ್ತೇನೆ.

03112018a ಗಚ್ಚಾಮಿ ತಸ್ಯಾಂತಿಕಮೇವ ತಾತ|

        ಕಾ ನಾಮ ಸಾ ವ್ರತಚರ್ಯಾ ಚ ತಸ್ಯ|

03112018c ಇಚ್ಚಾಮ್ಯಹಂ ಚರಿತುಂ ತೇನ ಸಾರ್ಧಂ|

        ಯಥಾ ತಪಃ ಸ ಚರತ್ಯುಗ್ರಕರ್ಮಾ||

ಅಪ್ಪಾ! ಅವನಿರುವಲ್ಲಿ ತಿರುಗಿ ಹೋಗುತ್ತಿದ್ದೇನೆ. ಅವನ ವ್ರತಚರ್ಯದ ಹೆಸರೇನು? ಅವನೊಂದಿಗೆ ಅವನ ಹಾಗೆ ಇರಲು ಮತ್ತು ಆ ಉಗ್ರತಪಸ್ಸನ್ನು ಆಚರಿಸಲು ಬಯಸುತ್ತೇನೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನೇ ದ್ವಾದಶಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಋಷ್ಯಶೃಂಗೋಪಾಖ್ಯಾನದಲ್ಲಿ ನೂರಾಹನ್ನೆರಡನೆಯ ಅಧ್ಯಾಯವು.

Related image

Comments are closed.