ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೦೬
ಸಂಕೃದ್ಧನಾದ ಕಪಿಲನಿಂದ ಸಗರನ ೬೦,೦೦೦ ಪುತ್ರರು ಸುಟ್ಟು ಭಸ್ಮವಾಗಲು, ವಿಷಯವನ್ನು ನಾರದನು ಸಗರನಿಗೆ ತಿಳಿಸಿದುದು (೧-೫). ಸಗರನು ತನ್ನ ಮಗ ಅಸಮಂಜಸನನ್ನು ತ್ಯಜಿಸಿದ್ದುದು (೬-೧೭). ಸಗರನು ಯಜ್ಞಾಶ್ವವನ್ನು ಅರಸಲು ಅಸಮಂಜಸನ ಮಗ ಅಂಶುಮಂತನನ್ನು ಕಳುಹಿಸಿದ್ದುದು (೧೮-೨೦). ಕಪಿಲ ಮಹರ್ಷಿಯನ್ನು ಮೆಚ್ಚಿಸಿ ಅಂಶುಮಂತನು ಯಜ್ಞಾಶ್ವವನ್ನು ಪಡೆದುದು; ಚಿಕ್ಕಪ್ಪರನ್ನು ಪಾವನಗೊಳಿಸಲು ತನ್ನ ಮೊಮ್ಮಗನು ಗಂಗೆಯನ್ನು ಭೂಮಿಗೆ ತರುತ್ತಾನೆ ಎಂದು ಕಪಿಲನಿಂದ ತಿಳಿದುಕೊಂಡಿದುದು (೨೧-೨೯). ಯಜ್ಞ ಸಮಾಪ್ತಿ; ಸಗರನ ಮರಣ; ಅಂಶುಮಂತನ ರಾಜ್ಯಭಾರ; ಮಗ ದಿಲೀಪ; ದಿಲೀಪನ ಮಗ ಭಗೀರಥನ ರಾಜ್ಯಭಾರ (೩೦-೪೦).
03106001 ಲೋಮಶ ಉವಾಚ|
03106001a ತೇ ತಂ ದೃಷ್ಟ್ವಾ ಹಯಂ ರಾಜನ್ಸಂಪ್ರಹೃಷ್ಟತನೂರುಹಾಃ|
03106001c ಅನಾದೃತ್ಯ ಮಹಾತ್ಮಾನಂ ಕಪಿಲಂ ಕಾಲಚೋದಿತಾಃ||
03106001e ಸಂಕ್ರುದ್ಧಾಃ ಸಮಧಾವಂತ ಅಶ್ವಗ್ರಹಣಕಾಂಕ್ಷಿಣಃ||
ಲೋಮಶನು ಹೇಳಿದನು: “ರಾಜನ್! ಆ ಕುದುರೆಯನ್ನು ಕಂಡ ಅವರ ದೇಹವು ಸಂತೋಷದಿಂದ ಪುಳಕಿತಗೊಂಡಿತು. ಕಾಲಚೋದಿತರಾಗಿ, ಅಲ್ಲಿದ್ದ ಮಹಾತ್ಮ ಕಪಿಲನನ್ನು ಅನಾದರಿಸಿ, ಸಂಕೃದ್ಧರಾಗಿ ಅಶ್ವವನ್ನು ಹಿಡಿಯಲು ಬಯಸಿ ಓಡಿ ಬಂದರು.
03106002a ತತಃ ಕ್ರುದ್ಧೋ ಮಹಾರಾಜ ಕಪಿಲೋ ಮುನಿಸತ್ತಮಃ|
03106002c ವಾಸುದೇವೇತಿ ಯಂ ಪ್ರಾಹುಃ ಕಪಿಲಂ ಮುನಿಸತ್ತಮಂ||
ಮಹಾರಾಜ! ಆಗ ಯಾವ ಮುನಿಸತ್ತಮ ಕಪಿಲನನ್ನು ವಾಸುದೇವನೆಂದು ಹೇಳುತ್ತಾರೋ[1] ಆ ಮುನಿಸತ್ತಮ ಕಪಿಲನು ಕೃದ್ಧನಾದನು.
03106003a ಸ ಚಕ್ಷುರ್ವಿವೃತಂ ಕೃತ್ವಾ ತೇಜಸ್ತೇಷು ಸಮುತ್ಸೃಜನ್|
03106003c ದದಾಹ ಸುಮಹಾತೇಜಾ ಮಂದಬುದ್ಧೀನ್ಸ ಸಾಗರಾನ್||
ಅವನು ಕಣ್ಣನ್ನು ತೆರೆದು ತನ್ನ ತೇಜಸ್ಸನ್ನು ಅವರ ಮೇಲೆ ಎಸೆದನು. ಆ ಸುಮಹಾತೇಜಸ್ವಿಯು ಮಂದಬುದ್ಧಿ ಸಾಗರರನ್ನು ಸುಟ್ಟುಹಾಕಿದನು.
03106004a ತಾನ್ದೃಷ್ಟ್ವಾ ಭಸ್ಮಸಾದ್ಭೂತಾನ್ನಾರದಃ ಸುಮಹಾತಪಾಃ|
03106004c ಸಗರಾಂತಿಕಮಾಗಚ್ಚತ್ತಚ್ಚ ತಸ್ಮೈ ನ್ಯವೇದಯತ್||
ಅವರು ಭಸ್ಮೀಭೂತರಾದುದನ್ನು ನೋಡಿದ ಸುಮಹಾತಪ ನಾರದನು ಸಗರನಲ್ಲಿಗೆ ಬಂದು ಅವನಿಗೆ ಅಲ್ಲಿ ನಡೆದುದನ್ನು ನಿವೇದಿಸಿದನು.
03106005a ಸ ತಚ್ಛೃತ್ವಾ ವಚೋ ಘೋರಂ ರಾಜಾ ಮುನಿಮುಖೋದ್ಗತಂ|
03106005c ಮುಹೂರ್ತಂ ವಿಮನಾ ಭೂತ್ವಾ ಸ್ಥಾಣೋರ್ವಾಕ್ಯಮಚಿಂತಯತ್||
03106005e ಆತ್ಮಾನಮಾತ್ಮನಾಶ್ವಾಸ್ಯ ಹಯಮೇವಾನ್ವಚಿಂತಯತ್||
ಮುನಿಯ ಬಾಯಿಂದ ಆ ಘೋರ ವಚನವನ್ನು ಕೇಳಿದ ರಾಜನು ಒಂದು ಮುಹೂರ್ತಕಾಲ ಮನಸ್ಸನ್ನೇ ಕಳೆದುಕೊಂಡು ಸ್ಥಾಣುವಿನ ವಾಕ್ಯವನ್ನು ನೆನಪಿಸಿಕೊಂಡನು. ತನಗೆ ತಾನೇ ಆಶ್ವಾಸನೆಯನ್ನಿತ್ತು, ಕುದುರೆಯ ಕುರಿತು ಚಿಂತಿಸಿದನು.
03106006a ಅಂಶುಮಂತಂ ಸಮಾಹೂಯ ಅಸಮಜ್ಞಹ್ಸುತಂ ತದಾ|
03106006c ಪೌತ್ರಂ ಭರತಶಾರ್ದೂಲ ಇದಂ ವಚನಮಬ್ರವೀತ್||
ಭರತಶಾರ್ದೂಲ! ಆಗ ಅಸಮಂಜಸನ ಮಗ, ತನ್ನ ಮೊಮ್ಮಗ ಅಂಶುಮಂತನನ್ನು ಕರೆದು ಹೇಳಿದನು:
03106007a ಷಷ್ಟಿಸ್ತಾನಿ ಸಹಸ್ರಾಣಿ ಪುತ್ರಾಣಾಮಮಿತೌಜಸಾಂ|
03106007c ಕಾಪಿಲಂ ತೇಜ ಆಸಾದ್ಯ ಮತ್ಕೃತೇ ನಿಧನಂ ಗತಾಃ||
“ಆ ಅರವತ್ತು ಸಾವಿರ ಅಮಿತೌಜಸ ಪುತ್ರರು ನನಗಾಗಿ ತೇಜಸ್ವಿ ಕಪಿಲನ ತೇಜಸ್ಸಿಗೆ ಸಿಲುಕಿ ನಿಧನಹೊಂದಿದ್ದಾರೆ.
03106008a ತವ ಚಾಪಿ ಪಿತಾ ತಾತ ಪರಿತ್ಯಕ್ತೋ ಮಯಾನಘ|
03106008c ಧರ್ಮಂ ಸಂರಕ್ಷಮಾಣೇನ ಪೌರಾಣಾಂ ಹಿತಮಿಚ್ಚತಾ||
ಅನಘ! ಮಗೂ! ನಿನ್ನ ತಂದೆಯನ್ನು ನಾನು ಧರ್ಮಸಂರಕ್ಷಣೆ ಮಾಡಲೋಸುಗ ಪೌರರ ಹಿತವನ್ನು ಬಯಸಿ ಪರಿತ್ಯಜಿಸಿದ್ದೇನೆ.””
03106009 ಯುಧಿಷ್ಠಿರ ಉವಾಚ|
03106009a ಕಿಮರ್ಥಂ ರಾಜಶಾರ್ದೂಲಃ ಸಗರಃ ಪುತ್ರಮಾತ್ಮಜಂ|
03106009c ತ್ಯಕ್ತವಾನ್ದುಸ್ತ್ಯಜಂ ವೀರಂ ತನ್ಮೇ ಬ್ರೂಹಿ ತಪೋಧನ||
ಯುಧಿಷ್ಠಿರನು ಹೇಳಿದನು: “ಆ ರಾಜಶಾರ್ದೂಲ ಸಗರನು ತ್ಯಜಿಸಲು ಕಷ್ಟವಾದ[2] ತನ್ನದೇ ಮಗನನ್ನು ಏಕೆ ಪರಿತ್ಯಜಿಸಿದನು? ಅದನ್ನು ನನಗೆ ಹೇಳು ತಪೋಧನ!”
03106010 ಲೋಮಶ ಉವಾಚ|
03106010a ಅಸಮಂಜಾ ಇತಿ ಖ್ಯಾತಃ ಸಗರಸ್ಯ ಸುತೋ ಹ್ಯಭೂತ್|
03106010c ಯಂ ಶೈಬ್ಯಾ ಜನಯಾಮಾಸ ಪೌರಾಣಾಂ ಸ ಹಿ ದಾರಕಾನ್||
03106010e ಖುರೇಷು ಕ್ರೋಶತೋ ಗೃಹ್ಯ ನದ್ಯಾಂ ಚಿಕ್ಷೇಪ ದುರ್ಬಲಾನ್||
ಲೋಮಶನು ಹೇಳಿದನು: “ಅಸಮಂಜಸನೆಂದು ಖ್ಯಾತ ಸಗರನ ಮಗನಿದ್ದನು. ಅವನು ಶೈಬ್ಯೆಯಲ್ಲಿ ಜನಿಸಿದ್ದನು. ಅವನು ದುರ್ಬಲ ಪೌರರ ಮಕ್ಕಳನ್ನು ಕಾಲುಗಳಲ್ಲಿ ಹಿಡಿದು ನದಿಯಲ್ಲಿ ಎಸೆಯತ್ತಿದ್ದನು.
03106011a ತತಃ ಪೌರಾಃ ಸಮಾಜಗ್ಮುರ್ಭಯಶೋಕಪರಿಪ್ಲುತಾಃ|
03106011c ಸಗರಂ ಚಾಭ್ಯಯಾಚಂತ ಸರ್ವೇ ಪ್ರಾಂಜಲಯಃ ಸ್ಥಿತಾಃ||
ಆಗ ಭಯ-ಶೋಕ ಪೀಡಿತ ಪೌರರು ಒಂದಾಗಿ ಸಗರನಲ್ಲಿಗೆ ಹೋಗಿ ಎಲ್ಲರೂ ಕೈಜೋಡಿಸಿ ನಿಂತು ಬೇಡಿಕೊಂಡರು.
03106012a ತ್ವಂ ನಸ್ತ್ರಾತಾ ಮಹಾರಾಜ ಪರಚಕ್ರಾದಿಭಿರ್ಭಯೈಃ|
03106012c ಅಸಮಂಜೋಭಯಾದ್ಘೋರಾತ್ತತೋ ನಸ್ತ್ರಾತುಮರ್ಹಸಿ||
“ಮಹಾರಾಜ! ಶತ್ರುಗಳ ರಥಗಳ ಚಕ್ರಗಳ ಭಯದಿಂದ ನಮ್ಮನ್ನು ರಕ್ಷಿಸುವ ನೀನು ಈ ಅಸಮಂಜಸನ ಭಯದಿಂದ ನಮ್ಮನ್ನು ರಕ್ಷಿಸಬೇಕು.”
03106013a ಪೌರಾಣಾಂ ವಚನಂ ಶ್ರುತ್ವಾ ಘೋರಂ ನೃಪತಿಸತ್ತಮಃ|
03106013c ಮುಹೂರ್ತಂ ವಿಮನಾ ಭೂತ್ವಾ ಸಚಿವಾನಿದಮಬ್ರವೀತ್||
ಪೌರರ ಘೋರ ವಚನವನ್ನು ಕೇಳಿದ ನೃಪತಿಸತ್ತಮನು ಒಂದು ಮುಹೂರ್ತ ಮನಸ್ಸನ್ನು ಕಳೆದುಕೊಂಡು ಸಚಿವರಿಗೆ ಹೇಳಿದನು:
03106014a ಅಸಮಂಜಾಃ ಪುರಾದದ್ಯ ಸುತೋ ಮೇ ವಿಪ್ರವಾಸ್ಯತಾಂ|
03106014c ಯದಿ ವೋ ಮತ್ಪ್ರಿಯಂ ಕಾರ್ಯಮೇತಚ್ಛೀಘ್ರಂ ವಿಧೀಯತಾಂ||
“ಇಂದೇ ನನ್ನ ಮಗ ಅಸಮಂಜಸನನ್ನು ಪುರದಿಂದ ಹೊರಗೆ ಕಳುಹಿಸಿ. ನನಗೆ ಪ್ರಿಯವಾದುದನ್ನು ಮಾಡಬೇಕೆಂದರೆ ಇದನ್ನು ಶೀಘ್ರದಲ್ಲಿಯೇ ಮಾಡಬೇಕು.”
03106015a ಏವಮುಕ್ತಾ ನರೇಂದ್ರೇಣ ಸಚಿವಾಸ್ತೇ ನರಾಧಿಪ|
03106015c ಯಥೋಕ್ತಂ ತ್ವರಿತಾಶ್ಚಕ್ರುರ್ಯಥಾಜ್ಞಾಪಿತವಾನ್ನೃಪಃ||
03106016a ಏತತ್ತೇ ಸರ್ವಮಾಖ್ಯಾತಂ ಯಥಾ ಪುತ್ರೋ ಮಹಾತ್ಮನಾ|
03106016c ಪೌರಾಣಾಂ ಹಿತಕಾಮೇನ ಸಗರೇಣ ವಿವಾಸಿತಃ||
ನರಾಧಿಪ! ನರೇಂದ್ರನು ಹೀಗೆ ಹೇಳಲು ಅವನ ಸಚಿವರು ತಕ್ಷಣವೇ ನೃಪನು ಹೇಳಿದಂತೆ, ಅವನ ಆಜ್ಞೆಯನ್ನು ನೆರವೇರಿಸಿದರು. ಮಹಾತ್ಮ ಸಗರನು ಪೌರರ ಹಿತವನ್ನು ಬಯಸಿ ತನ್ನ ಪುತ್ರನನ್ನು ಹೊರಗಟ್ಟಿದನು ಎನ್ನುವುದೆಲ್ಲವನ್ನೂ ಹೇಳಿದ್ದೇನೆ.
03106017a ಅಂಶುಮಾಂಸ್ತು ಮಹೇಷ್ವಾಸೋ ಯದುಕ್ತಃ ಸಗರೇಣ ಹ|
03106017c ತತ್ತೇ ಸರ್ವಂ ಪ್ರವಕ್ಷ್ಯಾಮಿ ಕೀರ್ತ್ಯಮಾನಂ ನಿಬೋಧ ಮೇ||
ಈಗ ಮಹೇಷ್ವಾಸ ಸಗರನು ಅಂಶುಮಂತನಿಗೆ ಏನು ಹೇಳಿದನೆನ್ನುವುದೆಲ್ಲವನ್ನೂ ನಿನಗೆ ಹೇಳುತ್ತೇನೆ. ನಾನು ಹೇಳುವುದನ್ನು ಕೇಳು.
03106018 ಸಗರ ಉವಾಚ|
03106018a ಪಿತುಶ್ಚ ತೇಽಹಂ ತ್ಯಾಗೇನ ಪುತ್ರಾಣಾಂ ನಿಧನೇನ ಚ|
03106018c ಅಲಾಭೇನ ತಥಾಶ್ವಸ್ಯ ಪರಿತಪ್ಯಾಮಿ ಪುತ್ರಕ||
ಸಗರನು ಹೇಳಿದನು: “ಮಗೂ! ಪುತ್ರಕ! ನಿನ್ನ ತಂದೆಯನ್ನು ತ್ಯಜಿಸಿದುದರಿಂದ, ನನ್ನ ಮಕ್ಕಳ ಸಾವಿನಿಂದ ಮತ್ತು ಕುದುರೆಯು ದೊರೆಯದೇ ಇದ್ದುದರಿಂದ ಪರಿತಪಿಸುತ್ತಿದ್ದೇನೆ.
03106019a ತಸ್ಮಾದ್ದುಃಖಾಭಿಸಂತಪ್ತಂ ಯಜ್ಞವಿಘ್ನಾಚ್ಚ ಮೋಹಿತಂ|
03106019c ಹಯಸ್ಯಾನಯನಾತ್ಪೌತ್ರ ನರಕಾನ್ಮಾಂ ಸಮುದ್ಧರ||
ಮೊಮ್ಮಗನೇ! ಆ ದುಃಖದಿಂದ ಪರಿತಪಿಸುತ್ತಿರುವ, ಯಜ್ಞದ ವಿಘ್ನವಾಗುವುದೆಂದು ಮೂರ್ಛೆಗೊಂಡಿರುವ ನನ್ನನ್ನು ಆ ಕುದುರೆಯನ್ನು ತರುವುದರ ಮೂಲಕ ಈ ನರಕದಿಂದ ಮೇಲೆತ್ತು.””
03106020 ಲೋಮಶ ಉವಾಚ|
03106020a ಅಂಶುಮಾನೇವಮುಕ್ತಸ್ತು ಸಗರೇಣ ಮಹಾತ್ಮನಾ|
03106020c ಜಗಾಮ ದುಃಖಾತ್ತಂ ದೇಶಂ ಯತ್ರ ವೈ ದಾರಿತಾ ಮಹೀ||
ಲೋಮಶನು ಹೇಳಿದನು: “ಮಹಾತ್ಮ ಸಗರನ ಈ ಮಾತುಗಳಂತೆ ಅಂಶುಮಂತನು ದುಃಖದಿಂದ ಭೂಮಿಯನ್ನು ಅಗೆದ ಪ್ರದೇಶಕ್ಕೆ ಹೋದನು.
03106021a ಸ ತು ತೇನೈವ ಮಾರ್ಗೇಣ ಸಮುದ್ರಂ ಪ್ರವಿವೇಶ ಹ|
03106021c ಅಪಶ್ಯಚ್ಚ ಮಹಾತ್ಮಾನಂ ಕಪಿಲಂ ತುರಗಂ ಚ ತಂ||
ಅದೇ ಮಾರ್ಗದಲ್ಲಿ ಸಮುದ್ರವನ್ನು ಪ್ರವೇಶಿಸಿ ಮುಂದುವರೆದು ಮಹಾತ್ಮ ಕಪಿಲನನ್ನೂ ಕುದುರೆಯನ್ನೂ ಕಂಡನು.
03106022a ಸ ದೃಷ್ಟ್ವಾ ತೇಜಸೋ ರಾಶಿಂ ಪುರಾಣಮೃಷಿಸತ್ತಮಂ|
03106022c ಪ್ರಣಮ್ಯ ಶಿರಸಾ ಭೂಮೌ ಕಾರ್ಯಮಸ್ಮೈ ನ್ಯವೇದಯತ್||
ಆ ತೇಜಸ್ಸಿನ ರಾಶಿ ಪುರಾಣ ಋಷಿಸತ್ತಮನನಿಗೆ ಶಿರಬಾಗಿ ನಮಸ್ಕರಿಸಿ ತಾನು ಬಂದ ಕಾರ್ಯದ ಕುರಿತು ನಿವೇದಿಸಿದನು.
03106023a ತತಃ ಪ್ರೀತೋ ಮಹಾತೇಜಾಃ ಕಲಿಪೋಽಮ್ಶುಮತೋಽಭವತ್|
03106023c ಉವಾಚ ಚೈನಂ ಧರ್ಮಾತ್ಮಾ ವರದೋಽಸ್ಮೀತಿ ಭಾರತ||
ಭಾರತ! ಆಗ ಮಹಾತೇಜಸ್ವಿ ಧರ್ಮಾತ್ಮನು ಕಪಿಲನು ಅಂಶುಮತನಿಂದ ಪ್ರೀತನಾಗಿ ಅವನಿಗೆ “ವರವನ್ನು ಕೇಳು!” ಎಂದನು.
03106024a ಸ ವವ್ರೇ ತುರಗಂ ತತ್ರ ಪ್ರಥಮಂ ಯಜ್ಞಕಾರಣಾತ್|
03106024c ದ್ವಿತೀಯಮುದಕಂ ವವ್ರೇ ಪಿತೄಣಾಂ ಪಾವನೇಪ್ಸಯಾ||
ಅವನು ಯಜ್ಞಕಾಗಿ ಕುದುರೆಯನ್ನು ಮೊದಲನೆಯ ವರವಾಗಿ ಕೇಳಿದನು. ಪಿತೃಗಳನ್ನು ಪಾವನಗೊಳಿಸಲು ಇಚ್ಛಿಸಿ ನೀರನ್ನು ಎರಡನೆಯ ವರವಾಗಿ ಕೇಳಿದನು.
03106025a ತಮುವಾಚ ಮಹಾತೇಜಾಃ ಕಪಿಲೋ ಮುನಿಪುಂಗವಃ|
03106025c ದದಾನಿ ತವ ಭದ್ರಂ ತೇ ಯದ್ಯತ್ಪ್ರಾರ್ಥಯಸೇಽನಘ||
ಮಹಾತೇಜಸ್ವಿ ಮುನಿಪುಂಗವ ಕಪಿಲನು ಅವನಿಗೆ ಹೇಳಿದನು: “ನಿನಗೆ ಮಂಗಳವಾಗಲಿ! ಅನಘ! ನಿನ್ನ ಮೊದಲನೆಯ ವರವನ್ನು ಕೊಡುತ್ತೇನೆ.
03106026a ತ್ವಯಿ ಕ್ಷಮಾ ಚ ಧರ್ಮಶ್ಚ ಸತ್ಯಂ ಚಾಪಿ ಪ್ರತಿಷ್ಠಿತಂ|
03106026c ತ್ವಯಾ ಕೃತಾರ್ಥಃ ಸಗರಃ ಪುತ್ರವಾಂಶ್ಚ ತ್ವಯಾ ಪಿತಾ||
ನಿನ್ನಲ್ಲಿ ಕ್ಷಮೆ, ಧರ್ಮ ಮತ್ತು ಸತ್ಯವೂ ನೆಲೆಸಿವೆ. ನಿನ್ನಿಂದ ಸಗರನು ಕೃತಾರ್ಥನಾಗುತ್ತಾನೆ ಮತ್ತು ನಿನ್ನ ತಂದೆಯು ಪುತ್ರರನ್ನು ಪಡೆಯುತ್ತಾನೆ.
03106027a ತವ ಚೈವ ಪ್ರಭಾವೇನ ಸ್ವರ್ಗಂ ಯಾಸ್ಯಂತಿ ಸಾಗರಾಃ|
03106027c ಪೌತ್ರಶ್ಚ ತೇ ತ್ರಿಪಥಗಾಂ ತ್ರಿದಿವಾದಾನಯಿಷ್ಯತಿ||
03106027e ಪಾವನಾರ್ಥಂ ಸಾಗರಾಣಾಂ ತೋಷಯಿತ್ವಾ ಮಹೇಶ್ವರಂ||
ನಿನ್ನ ಪ್ರಭಾವದಿಂದಲೇ ಸಾಗರರು ಸ್ವರ್ಗವನ್ನು ಸೇರುತ್ತಾರೆ. ನಿನ್ನ ಮೊಮ್ಮಗನು, ಸಾಗರರನ್ನು ಪಾವನಗೊಳಿಸಲು ಮಹೇಶ್ವರನನ್ನು ತೃಪ್ತಿಪಡಿಸಿ ತ್ರಿದಿವದಿಂದ ತ್ರಿಪಥಗೆಯನ್ನು ಬರಿಸುತ್ತಾನೆ.
03106028a ಹಯಂ ನಯಸ್ವ ಭದ್ರಂ ತೇ ಯಜ್ಞಿಯಂ ನರಪುಂಗವ|
03106028c ಯಜ್ಞಃ ಸಮಾಪ್ಯತಾಂ ತಾತ ಸಗರಸ್ಯ ಮಹಾತ್ಮನಃ||
ನರಪುಂಗವ! ನಿನಗೆ ಮಂಗಳವಾಗಲಿ! ಈ ಯಜ್ಞಕುದುರೆಯನ್ನು ಕೊಂಡೊಯ್ಯಿ! ಮಗೂ! ಮಹಾತ್ಮ ಸಗರನ ಯಜ್ಞವನ್ನು ಸಮಾಪ್ತಿಗೊಳಿಸು!”
03106029a ಅಂಶುಮಾನೇವಮುಕ್ತಸ್ತು ಕಪಿಲೇನ ಮಹಾತ್ಮನಾ|
03106029c ಆಜಗಾಮ ಹಯಂ ಗೃಹ್ಯ ಯಜ್ಞವಾಟಂ ಮಹಾತ್ಮನಃ||
ಮಹಾತ್ಮ ಕಪಿಲನ ಆ ಮಾತುಗಳನ್ನು ಕೇಳಿ ಅಂಶುಮಂತನು ಕುದುರೆಯನ್ನು ಹಿಡಿದು ಮಹಾತ್ಮನ ಯಜ್ಞಶಾಲೆಗೆ ಬಂದನು.
03106030a ಸೋಽಭಿವಾದ್ಯ ತತಃ ಪಾದೌ ಸಗರಸ್ಯ ಮಹಾತ್ಮನಃ|
03106030c ಮೂರ್ಧ್ನಿ ತೇನಾಪ್ಯುಪಾಘ್ರಾತಸ್ತಸ್ಮೈ ಸರ್ವಂ ನ್ಯವೇದಯತ್||
ಆಗ ಅವನು ಮಹಾತ್ಮ ಸಗರನಿಗೆ ನಮಸ್ಕರಿಸಿದನು. ಅವನು ಅವನ ನೆತ್ತಿಯನ್ನು ಆಘ್ರಾಣಿಸಲು, ಎಲ್ಲವನ್ನೂ ನಿವೇದಿಸಿದನು.
03106031a ಯಥಾ ದೃಷ್ಟಂ ಶ್ರುತಂ ಚಾಪಿ ಸಾಗರಾಣಾಂ ಕ್ಷಯಂ ತಥಾ|
03106031c ತಂ ಚಾಸ್ಮೈ ಹಯಮಾಚಷ್ಟ ಯಜ್ಞವಾಟಮುಪಾಗತಂ||
ಸಾಗರರ ನಾಶದ ಕುರಿತು ತಾನು ಕಂಡಿದ್ದುದು ಕೇಳಿದ್ದುದನ್ನು ಮತ್ತು ಯಜ್ಞಶಾಲೆಗೆ ಕುದುರೆಯು ಆಗಮಿಸಿದುದನ್ನು ಹೇಳಿದನು.
03106032a ತಚ್ಛೃತ್ವಾ ಸಗರೋ ರಾಜಾ ಪುತ್ರಜಂ ದುಃಖಮತ್ಯಜತ್|
03106032c ಅಂಶುಮಂತಂ ಚ ಸಂಪೂಜ್ಯ ಸಮಾಪಯತ ತಂ ಕ್ರತುಂ||
ಅದನ್ನು ಕೇಳಿದ ರಾಜ ಸಗರನು ತನ್ನ ಪುತ್ರರಿಂದಾದ ದುಃಖವನ್ನು ತೊರೆದು, ಅಂಶುಮಂತನನ್ನು ಸತ್ಕರಿಸಿ, ಯಜ್ಞವನ್ನು ಪೂರೈಸಿದನು.
03106033a ಸಮಾಪ್ತಯಜ್ಞಃ ಸಗರೋ ದೇವೈಃ ಸರ್ವೈಃ ಸಭಾಜಿತಃ|
03106033c ಪುತ್ರತ್ವೇ ಕಲ್ಪಯಾಮಾಸ ಸಮುದ್ರಂ ವರುಣಾಲಯಂ||
ಯಜ್ಞವನ್ನು ಸಮಾಪ್ತಿಗೊಳಿಸಿ ಸಗರನು ಎಲ್ಲ ದೇವತೆಗಳೊಂದಿಗೆ ಸಹಭೋಜನ ಮಾಡಿದನು. ವರುಣಾಲಯ ಸಮುದ್ರವನ್ನು ತನ್ನ ಪುತ್ರನಾಗಿ ಮಾಡಿಕೊಂಡನು[3].
03106034a ಪ್ರಶಾಸ್ಯ ಸುಚಿರಂ ಕಾಲಂ ರಾಜ್ಯಂ ರಾಜೀವಲೋಚನಃ|
03106034c ಪೌತ್ರೇ ಭಾರಂ ಸಮಾವೇಶ್ಯ ಜಗಾಮ ತ್ರಿದಿವಂ ತದಾ||
ಬಹುಕಾಲದ ವರೆಗೆ ರಾಜ್ಯವನ್ನಾಳಿ ಆ ರಾಜೀವಲೋಚನನು ಮೊಮ್ಮಗನಿಗೆ ಪಟ್ಟವನ್ನು ಕಟ್ಟಿ ಸ್ವರ್ಗವನ್ನು ಸೇರಿದನು.
03106035a ಅಂಶುಮಾನಪಿ ಧರ್ಮಾತ್ಮಾ ಮಹೀಂ ಸಾಗರಮೇಖಲಾಂ|
03106035c ಪ್ರಶಶಾಸ ಮಹಾರಾಜ ಯಥೈವಾಸ್ಯ ಪಿತಾಮಹಃ||
ಮಹಾರಾಜ! ಧರ್ಮಾತ್ಮ ಅಂಶುಮತನಾದರೋ ಸಾಗರ ಮೇಖಲ ಭೂಮಿಯನ್ನು ತನ್ನ ಪಿತಾಮಹನಂತೆ ರಾಜ್ಯವನಾಳಿದನು.
03106036a ತಸ್ಯ ಪುತ್ರಃ ಸಮಭವದ್ದಿಲೀಪೋ ನಾಮ ಧರ್ಮವಿತ್|
03106036c ತಸ್ಮೈ ರಾಜ್ಯಂ ಸಮಾಧಾಯ ಅಂಶುಮಾನಪಿ ಸಂಸ್ಥಿತಃ||
ಅವನಿಗೆ ದಿಲೀಪ ಎಂಬ ಹೆಸರಿನ ಧರ್ಮವಂತ ಮಗನು ಜನಿಸಿದನು. ಅವನಿಗೆ ರಾಜ್ಯವನ್ನು ಕೊಟ್ಟು ಅಂಶುಮಂತನು ನಿವೃತ್ತನಾದನು.
03106037a ದಿಲೀಪಸ್ತು ತತಃ ಶ್ರುತ್ವಾ ಪಿತೄಣಾಂ ನಿಧನಂ ಮಹತ್|
03106037c ಪರ್ಯತಪ್ಯತ ದುಃಖೇನ ತೇಷಾಂ ಗತಿಮಚಿಂತಯತ್||
ಆಗ ಪಿತೃಗಳ ಮಹಾನಾಶದ ಕುರಿತು ಕೇಳಿದ ದಿಲೀಪನು ಅವರ ಗತಿಯನ್ನು ಚಿಂತಿಸಿ ದುಃಖದಿಂದ ಪರಿತಪಿಸಿದನು.
03106038a ಗಂಗಾವತರಣೇ ಯತ್ನಂ ಸುಮಹಚ್ಚಾಕರೋನ್ನೃಪಃ|
03106038c ನ ಚಾವತಾರಯಾಮಾಸ ಚೇಷ್ಟಮಾನೋ ಯಥಾಬಲಂ||
ಆ ನೃಪನು ಗಂಗಾವತರಣಕ್ಕೆ ಬಹಳಷ್ಟು ಪ್ರಯತ್ನಮಾಡಿದನು. ಶಕ್ತಿಯಿದ್ದಷ್ಟು ಪ್ರಯತ್ನಿಸಿದರೂ ಅವನಿಗೆ ಅವಳನ್ನು ಕೆಳತರಲು ಸಾಧ್ಯವಾಗಲಿಲ್ಲ.
03106039a ತಸ್ಯ ಪುತ್ರಃ ಸಮಭವಚ್ಛ್ರೀಮಾನ್ಧರ್ಮಪರಾಯಣಃ|
03106039c ಭಗೀರಥ ಇತಿ ಖ್ಯಾತಃ ಸತ್ಯವಾಗನಸೂಯಕಃ||
ಅವನ ಮಗ ಶ್ರೀಮಾನ್ ಧರ್ಮಪರಾಯಣ, ಸತ್ಯವಾದಿ, ಅನಸೂಯಕನು ಭಗೀರಥನೆಂದು ಖ್ಯಾತನಾದನು.
03106040a ಅಭಿಷಿಚ್ಯ ತು ತಂ ರಾಜ್ಯೇ ದಿಲೀಪೋ ವನಮಾಶ್ರಿತಃ|
03106040c ತಪಃಸಿದ್ಧಿಸಮಾಯೋಗಾತ್ಸ ರಾಜಾ ಭರತರ್ಷಭ||
03106040e ವನಾಜ್ಜಗಾಮ ತ್ರಿದಿವಂ ಕಾಲಯೋಗೇನ ಭಾರತ||
ಅವನಿಗೆ ರಾಜ್ಯಾಭಿಷೇಕವನ್ನು ಮಾಡಿ ದಿಲೀಪನು ವನವನ್ನು ಸೇರಿದನು. ಭರತರ್ಷಭ! ಭಾರತ! ತಪಸ್ಸು ಮತ್ತು ಸಿದ್ಧಿಗಳ ಸಮಾಯೋಗದಿಂದ ಆ ರಾಜನು ಸ್ವರ್ಗದ ಕಾಲಯೋಗದಿಂದ ವನಕ್ಕೆ ಹೋದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಷಡಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿಕಥನದಲ್ಲಿ ನೂರಾಆರನೆಯ ಅಧ್ಯಾಯವು.
[1]ಶ್ರೀಮದ್ಭಾವಗವತದಲ್ಲಿ ಕಪಿಲನನ್ನೂ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ.
[2]ತನ್ನದೇ ಮಗನನ್ನು ತ್ಯಜಿಸುವುದು ಕಷ್ಟವಲ್ಲವೇ? ಸೂರ್ಯವಂಶದಲ್ಲಿ ಹುಟ್ಟಿದ ಸಗರನು ತನ್ನ ಮಗನು ಅಧರ್ಮಿಯೆಂದು ತಿಳಿದು ರಾಜ್ಯದ ಹಿತಕಾಗಿ ಅವನನ್ನು ರಾಜ್ಯದಿಂದ ಹೊರಹಾಕಿದನು. ಆದರೆ ದುರ್ಯೋಧನನಂತಹ ಅಧರ್ಮಿ ಮಗನನ್ನು ಚಂದ್ರವಂಶದ ರಾಜರಲ್ಲೊಬ್ಬನಾದ ಕುರುಡ ಧೃತರಾಷ್ಟ್ರನು ಮಾಡಲಿಲ್ಲವಲ್ಲ!
[3]ಸಗರನು ಸಮುದ್ರನನ್ನು ಮಗನಾಗಿ ದತ್ತು ತೆಗೆದುಕೊಂಡಿದುದರಿಂದಲೇ ಸಮದ್ರಕ್ಕೆ ಸಾಗರವೆಂದೂ ಕರೆಯುವುದಕ್ಕೆ ಕಾರಣ.