|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ: ಅರಣ್ಯ ಪರ್ವ
೧
ಪಾಂಡವರ ವನನಿರ್ಗಮನ
ಜನಮೇಜಯನು ಪಾಂಡವರ ವನವಾಸದ ಕುರಿತು ಪ್ರಶ್ನಿಸುವುದು (೧-೭). ಪಾಂಡವರು ಹಸ್ತಿನಾಪುರದಿಂದ ನಿರ್ಗಮಿಸುವಾಗ ಪುರಜನರು ಹಿಂಬಾಲಿಸಿದುದು (೮-೩೦). ಯುಧಿಷ್ಠಿರನು ಅವರನ್ನು ಹಿಂದಿರುಗಲು ಕೇಳಿಕೊಂಡನಂತರ ಪುರಜನರು ಹಿಂದಿರುಗಿದುದು (೩೧-೩೮). ಪಾಂಡವರು ವನದಲ್ಲಿ ಮೊದಲನೆಯ ರಾತ್ರಿಯನ್ನು ಕಳೆದುದು (೩೯-೪೩).
03001001 ಜನಮೇಜಯ ಉವಾಚ|
03001001a ಏವಂ ದ್ಯೂತಜಿತಾಃ ಪಾರ್ಥಾಃ ಕೋಪಿತಾಶ್ಚ ದುರಾತ್ಮಭಿಃ|
03001001c ಧಾರ್ತರಾಷ್ಟ್ರೈಃ ಸಹಾಮಾತ್ಯೈರ್ನಿಕೃತ್ಯಾ ದ್ವಿಜಸತ್ತಮ||
03001002a ಶ್ರಾವಿತಾಃ ಪರುಷಾ ವಾಚಃ ಸೃಜದ್ಭಿರ್ವೈರಮುತ್ತಮಂ|
03001002c ಕಿಮಕುರ್ವಂತ ಕೌರವ್ಯಾ ಮಮ ಪೂರ್ವಪಿತಾಮಹಾಃ||
ಜನಮೇಜಯನು ಹೇಳಿದನು: “ದ್ವಿಜಸತ್ತಮ! ಈ ರೀತಿ ದ್ಯೂತದಲ್ಲಿ ಸೋತು, ಅಮಾತ್ಯರೊಂದಿಗೆ ದುರಾತ್ಮ ಧಾರ್ತರಾಷ್ಟ್ರರು ಮಾಡಿದ ಮೋಸಕ್ಕೆ ಮುನಿದು, ಸ್ವಜರರೊಂದಿಗೆ ಉತ್ತಮ ವೈರವನ್ನು ಹುಟ್ಟಿಸಿದವರ ಮೂದಲ ಮಾತುಗಳನ್ನು ಕೇಳಿಸಿಕೊಂಡು ನನ್ನ ಪೂರ್ವ ಪಿತಾಮಹ ಕೌರವ ಪಾರ್ಥರು ಏನುಮಾಡಿದರು?
03001003a ಕಥಂ ಚೈಶ್ವರ್ಯವಿಭ್ರಷ್ಟಾಃ ಸಹಸಾ ದುಃಖಮೇಯುಷಃ|
03001003c ವನೇ ವಿಜಹ್ರಿರೇ ಪಾರ್ಥಾಃ ಶಕ್ರಪ್ರತಿಮತೇಜಸಃ||
ಐಶ್ವರ್ಯ ಭ್ರಷ್ಟರಾಗಿ ಒಮ್ಮಿಂದೊಮ್ಮೆಗೇ ಮಹತ್ತರ ದುಃಖವನ್ನು ಹೊಂದಿದ, ತೇಜಸ್ಸಿನಲ್ಲಿ ಶಕ್ರನನ್ನು ಹೋಲುವ ಪಾರ್ಥರು ವನದಲ್ಲಿ ಸಮಯವನ್ನು ಹೇಗೆ ಕಳೆದರು?
03001004a ಕೇ ಚೈನಾನನ್ವವರ್ತಂತ ಪ್ರಾಪ್ತಾನ್ವ್ಯಸನಮುತ್ತಮಂ|
03001004c ಕಿಮಾಹಾರಾಃ ಕಿಮಾಚಾರಾಃ ಕ್ವ ಚ ವಾಸೋ ಮಹಾತ್ಮನಾಂ||
ಮತ್ತು ಆ ಮಹತ್ತರ ವ್ಯಸನವನ್ನು ಹೊಂದಿದ ಅವರನ್ನು ಯಾರು ಅನುಸರಿಸಿದರು? ಏನನ್ನು ಸೇವಿಸುತ್ತಿದ್ದರು? ಏನು ಮಾಡುತ್ತಿದ್ದರು? ಆ ಮಹಾತ್ಮರು ಎಲ್ಲಿ ವಾಸಿಸುತ್ತಿದ್ದರು?
03001005a ಕಥಂ ದ್ವಾದಶ ವರ್ಷಾಣಿ ವನೇ ತೇಷಾಂ ಮಹಾತ್ಮನಾಂ|
03001005c ವ್ಯತೀಯುರ್ಬ್ರಾಹ್ಮಣಶ್ರೇಷ್ಠ ಶೂರಾಣಾಮರಿಘಾತಿನಾಂ||
ಬ್ರಾಹ್ಮಣಶ್ರೇಷ್ಠ! ಆ ಮಹಾತ್ಮ, ಅರಿಘಾತಿ ಶೂರರಿಗೆ ವನದಲ್ಲಿ ಹನ್ನೆರಡು ವರುಷಗಳು ಹೇಗೆ ಕಳೆದವು?
03001006a ಕಥಂ ಚ ರಾಜಪುತ್ರೀ ಸಾ ಪ್ರವರಾ ಸರ್ವಯೋಷಿತಾಂ|
03001006c ಪತಿವ್ರತಾ ಮಹಾಭಾಗಾ ಸತತಂ ಸತ್ಯವಾದಿನೀ|
03001006e ವನವಾಸಮದುಃಖಾರ್ಹಾ ದಾರುಣಂ ಪ್ರತ್ಯಪದ್ಯತ||
ಮತ್ತು ಸರ್ವ ಸ್ತ್ರೀಯರಲ್ಲಿ ಶ್ರೇಷ್ಠಳಾದ ಪತಿವ್ರತೆ, ಮಹಾಭಾಗೆ, ಸತತವೂ ಸತ್ಯವಾದಿನಿ, ದುಃಖಕ್ಕೆ ಅನರ್ಹ ಆ ರಾಜಪುತ್ರಿಯು ಈ ದಾರುಣ ವನವಾಸವನ್ನು ಹೇಗೆ ಕಳೆದಳು?
03001007a ಏತದಾಚಕ್ಷ್ವ ಮೇ ಸರ್ವಂ ವಿಸ್ತರೇಣ ತಪೋಧನ|
03001007c ಶ್ರೋತುಮಿಚ್ಚಾಮಿ ಚರಿತಂ ಭೂರಿದ್ರವಿಣತೇಜಸಾಂ|
03001007e ಕಥ್ಯಮಾನಂ ತ್ವಯಾ ವಿಪ್ರ ಪರಂ ಕೌತೂಹಲಂ ಹಿ ಮೇ||
ತಪೋಧನ! ಈ ಎಲ್ಲವನ್ನೂ ವಿಸ್ತಾರವಾಗಿ ಹೇಳು. ವಿಪ್ರ! ಭೂರಿದ್ರವಿಣತೇಜಸರ ಚರಿತ್ರೆಯನ್ನು ನಿನ್ನಿಂದ ಕೇಳಲು ಬಯಸುತ್ತೇನೆ. ನನಗೆ ಇದರಲ್ಲಿ ಬಹಳ ಕುತೂಹಲವಿದೆ.”
03001008 ವೈಶಂಪಾಯನ ಉವಾಚ|
03001008a ಏವಂ ದ್ಯೂತಜಿತಾಃ ಪಾರ್ಥಾಃ ಕೋಪಿತಾಶ್ಚ ದುರಾತ್ಮಭಿಃ|
03001008c ಧಾರ್ತರಾಷ್ಟ್ರೈಃ ಸಹಾಮಾತ್ಯೈರ್ನಿರ್ಯಯುರ್ಗಜಸಾಹ್ವಯಾತ್||
ವೈಶಂಪಾಯನನು ಹೇಳಿದನು: “ಈ ರೀತಿ ದ್ಯೂತದಲ್ಲಿ ಸೋತ ಪಾರ್ಥರು ದುರಾತ್ಮ ಧಾರ್ತರಾಷ್ಟ್ರರು ಮತ್ತು ಅವರ ಅಮಾತ್ಯರೊಂದಿಗೆ ಕುಪಿತಗೊಂಡು ಗಜಸಾಹ್ವಯದಿಂದ ನಿರ್ಗಮಿಸಿದರು.
03001009a ವರ್ಧಮಾನಪುರದ್ವಾರೇಣಾಭಿನಿಷ್ಕ್ರಮ್ಯ ತೇ ತದಾ|
03001009c ಉದಙ್ಮುಖಾಃ ಶಸ್ತ್ರಭೃತಃ ಪ್ರಯಯುಃ ಸಹ ಕೃಷ್ಣಯಾ||
ಅವರು ವರ್ಧಮಾನ ದ್ವಾರದಿಂದ ಹೊರಬಂದು ಕೃಷ್ಣೆಯನ್ನೊಡಗೊಂಡು ಶಸ್ತ್ರಧಾರಿಗಳಾಗಿ ಉತ್ತಾರಾಭಿಮುಖವಾಗಿ ಹೊರಟರು.
03001010a ಇಂದ್ರಸೇನಾದಯಶ್ಚೈನಾನ್ಭೃತ್ಯಾಃ ಪರಿಚತುರ್ದಶ|
03001010c ರಥೈರನುಯಯುಃ ಶೀಘ್ರೈಃ ಸ್ತ್ರಿಯ ಆದಾಯ ಸರ್ವಶಃ||
ಇಂದ್ರಸೇನಾದಿ ಅವರ ಸೇವಕರು, ಒಟ್ಟು ಹದಿನಾಲ್ಕು ಮಂದಿ, ತಮ್ಮ ಪತ್ನಿಯರೊನ್ನೊಡಗೂಡಿ ಶೀಘ್ರ ರಥಗಳಲ್ಲಿ ಅವರನ್ನು ಹಿಂಬಾಲಿಸಿದರು.
03001011a ವ್ರಜತಸ್ತಾನ್ವಿದಿತ್ವಾ ತು ಪೌರಾಃ ಶೋಕಾಭಿಪೀಡಿತಾಃ|
03001011c ಗರ್ಹಯಂತೋಽಸಕೃದ್ಭೀಷ್ಮವಿದುರದ್ರೋಣಗೌತಮಾನ್|
03001011e ಊಚುರ್ವಿಗತಸಂತ್ರಾಸಾಃ ಸಮಾಗಮ್ಯ ಪರಸ್ಪರಂ||
ಅವರು ಹೊರಡುತ್ತಿರುವುದನ್ನು ತಿಳಿದ ಪೌರಜನರು ಶೋಕಪೀಡಿತರಾಗಿ ಭೀಷ್ಮ, ವಿದುರ, ದ್ರೋಣ ಮತ್ತು ಗೌತಮರನ್ನು ನಿಂದಿಸುತ್ತಾ ಗುಂಪುಗೂಡಿ ಪರಸ್ಪರರಲ್ಲಿ ನಿರ್ಭಯರಾಗಿ ಮಾತನಾಡತೊಡಗಿದರು.
03001012a ನೇದಮಸ್ತಿ ಕುಲಂ ಸರ್ವಂ ನ ವಯಂ ನ ಚ ನೋ ಗೃಹಾಃ|
03001012c ಯತ್ರ ದುರ್ಯೋಧನಃ ಪಾಪಃ ಸೌಬಲೇಯೇನ ಪಾಲಿತಃ|
03001012e ಕರ್ಣದುಃಶಾಸನಾಭ್ಯಾಂ ಚ ರಾಜ್ಯಮೇತಚ್ಚಿಕೀರ್ಷತಿ||
“ಪಾಪಿ ದುರ್ಯೋಧನನು ಸೌಬಲನಿಂದ ಪ್ರೋತ್ಸಾಹಗೊಂಡು, ಕರ್ಣ ದುಃಶಾಸನರಿಂದೊಡಗೂಡಿ ರಾಜ್ಯವನ್ನು ಕಬಳಿಸಲು ಯೋಚಿಸಿದರೆ ಈ ಕುಲವೂ, ನಾವೂ ಮತ್ತು ನಮ್ಮ ಮನೆ ಇವು ಯಾವುವೂ ಸುರಕ್ಷಿತವಲ್ಲ.
03001013a ನೋ ಚೇತ್ಕುಲಂ ನ ಚಾಚಾರೋ ನ ಧರ್ಮೋಽರ್ಥಃ ಕುತಃ ಸುಖಂ|
03001013c ಯತ್ರ ಪಾಪಸಹಾಯೋಽಯಂ ಪಾಪೋ ರಾಜ್ಯಂ ಬುಭೂಷತೇ||
ಪಾಪಿಗಳ ಸಹಾಯದಿಂದ ಆ ಪಾಪಿಯು ರಾಜ್ಯವನ್ನು ಪಡೆದರೆ ಕುಲವೂ ಇರುವುದಿಲ್ಲ, ಆಚಾರವೂ ಇರುವುದಿಲ್ಲ, ಧರ್ಮವೂ ಇರುವುದಿಲ್ಲ, ಸುಖವಾದರೂ ಹೇಗಿದ್ದೀತು?
03001014a ದುರ್ಯೋಧನೋ ಗುರುದ್ವೇಷೀ ತ್ಯಕ್ತಾಚಾರಸುಹೃಜ್ಜನಃ|
03001014c ಅರ್ಥಲುಬ್ಧೋಽಭಿಮಾನೀ ಚ ನೀಚಃ ಪ್ರಕೃತಿನಿರ್ಘೃಣಃ||
ದುರ್ಯೋಧನನು ಗುರುದ್ವೇಷಿ, ಆಚಾರ ಮತ್ತು ಸುಹೃಜ್ಜನರನ್ನು ಬಿಟ್ಟವನು. ಅವನು ಸಂಪತ್ತಿನ ದುರಾಸಿ, ಅಭಿಮಾನಿ, ನೀಚ ಮತ್ತು ಸ್ವಭಾವದಲ್ಲಿ ಕ್ರೂರಿ.
03001015a ನೇಯಮಸ್ತಿ ಮಹೀ ಕೃತ್ಸ್ನಾ ಯತ್ರ ದುರ್ಯೋಧನೋ ನೃಪಃ|
03001015c ಸಾಧು ಗಚ್ಚಾಮಹೇ ಸರ್ವೇ ಯತ್ರ ಗಚ್ಚಂತಿ ಪಾಂಡವಾಃ||
ದುರ್ಯೋಧನನು ರಾಜನಾದ ಈ ಭೂಮಿಯು ಶ್ರೇಷ್ಠವಲ್ಲ. ನಾವೆಲ್ಲರೂ ಪಾಂಡವರು ಎಲ್ಲಿ ಹೋಗುತ್ತಾರೋ ಅಲ್ಲಿಗೇ ಹೋಗುವುದು ಒಳ್ಳೆಯದು.
03001016a ಸಾನುಕ್ರೋಶಾ ಮಹಾತ್ಮಾನೋ ವಿಜಿತೇಂದ್ರಿಯಶತ್ರವಃ|
03001016c ಹ್ರೀಮಂತಃ ಕೀರ್ತಿಮಂತಶ್ಚ ಧರ್ಮಾಚಾರಪರಾಯಣಾಃ||
ಅವರು ಅನುಕಂಪಿಗಳು, ಮಹಾತ್ಮರು, ಶತೃಗಳನ್ನೂ ಇಂದ್ರಿಯಗಳನ್ನೂ ಗೆದ್ದವರು, ವಿನೀತರು, ಕೀರ್ತಿವಂತರು ಮತ್ತು ಧರ್ಮಾಚಾರ ಪರಾಯಣರು.”
03001017a ಏವಮುಕ್ತ್ವಾನುಜಗ್ಮುಸ್ತಾನ್ಪಾಂಡವಾಂಸ್ತೇ ಸಮೇತ್ಯ ಚ|
03001017c ಊಚುಃ ಪ್ರಾಂಜಲಯಃ ಸರ್ವೇ ತಾನ್ಕುಂತೀಮಾದ್ರಿನಂದನಾನ್||
ಈ ರೀತಿ ಮಾತನಾಡಿಕೊಳ್ಳುತ್ತಾ, ಎಲ್ಲರೂ ಒಟ್ಟುಗೂಡಿ ಪಾಂಡವರಲ್ಲಿಗೆ ಹೋಗಿ ಅಂಜಲೀಬದ್ಧರಾಗಿ ಆ ಕುಂತೀ-ಮಾದ್ರಿ ನಂದನರಲ್ಲಿ ಕೇಳಿಕೊಂಡರು.
03001018a ಕ್ವ ಗಮಿಷ್ಯಥ ಭದ್ರಂ ವಸ್ತ್ಯಕ್ತ್ವಾಸ್ಮಾನ್ದುಃಖಭಾಗಿನಃ|
03001018c ವಯಮಪ್ಯನುಯಾಸ್ಯಾಮೋ ಯತ್ರ ಯೂಯಂ ಗಮಿಷ್ಯಥ||
“ನಿಮಗೆ ಮಂಗಳವಾಗಲಿ! ನಿಮ್ಮ ದುಃಖದಲ್ಲಿ ಭಾಗಿಗಳಾದ ನಮ್ಮನ್ನು ತೊರೆದು ಎಲ್ಲಿ ಹೋಗುತ್ತಿದ್ದೀರಿ? ನೀವು ಎಲ್ಲಿ ಹೋಗುತ್ತೀರೋ ಅಲ್ಲಿಗೆ ನಾವೂ ಬರುತ್ತೇವೆ.
03001019a ಅಧರ್ಮೇಣ ಜಿತಾಂ ಶ್ರುತ್ವಾ ಯುಷ್ಮಾಂಸ್ತ್ಯಕ್ತಘೃಣೈಃ ಪರೈಃ|
03001019c ಉದ್ವಿಗ್ನಾಃ ಸ್ಮ ಭೃಶಂ ಸರ್ವೇ ನಾಸ್ಮಾನ್ ಹಾತುಮಿಹಾರ್ಹಥ||
ದಯವನ್ನೇ ಬಿಟ್ಟ ಶತ್ರುಗಳಿಂದ ಅಧರ್ಮಪೂರ್ವಕವಾಗಿ ನೀನು ಗೆಲ್ಲಲ್ಪಟ್ಟೆ ಎಂದು ಕೇಳಿ ನಾವೆಲ್ಲರೂ ತುಂಬಾ ಉದ್ವಿಗ್ನರಾಗಿದ್ದೇವೆ.
03001020a ಭಕ್ತಾನುರಕ್ತಾಃ ಸುಹೃದಃ ಸದಾ ಪ್ರಿಯಹಿತೇ ರತಾನ್|
03001020c ಕುರಾಜಾಧಿಷ್ಠಿತೇ ರಾಜ್ಯೇ ನ ವಿನಶ್ಯೇಮ ಸರ್ವಶಃ||
ಭಕ್ತಾನುರಗ! ಸದಾ ಪ್ರಿಯಹಿತ ರತ! ಸುಹೃದಯ! ನಮ್ಮನ್ನು ಕುರಾಜನಿಂದ ಆಳಲ್ಪಡುವ ರಾಜ್ಯದಲ್ಲಿ ವಿನಾಶಹೊಂದಲು ಸರ್ವಥಾ ಬಿಡಬೇಡ.
03001021a ಶ್ರೂಯತಾಂ ಚಾಭಿಧಾಸ್ಯಾಮೋ ಗುಣದೋಷಾನ್ನರರ್ಷಭಾಃ|
03001021c ಶುಭಾಶುಭಾಧಿವಾಸೇನ ಸಂಸರ್ಗಂ ಕುರುತೇ ಯಥಾ||
ಪುರುಷರ್ಷಭರೇ! ಗುಣ-ದೋಷಗಳ ಸಂಸರ್ಗದಿಂದ ಶುಭಾಶುಭಗಳು ಹೇಗೆ ಆಗುತ್ತವೆ ಎನ್ನುವುದನ್ನು ಕೇಳಿ.
03001022a ವಸ್ತ್ರಮಾಪಸ್ತಿಲಾನ್ಭೂಮಿಂ ಗಂಧೋ ವಾಸಯತೇ ಯಥಾ|
03001022c ಪುಷ್ಪಾಣಾಮಧಿವಾಸೇನ ತಥಾ ಸಂಸರ್ಗಜಾ ಗುಣಾಃ||
ಸುಗಂಧವು ಹೇಗೆ ವಸ್ತ್ರವನ್ನು ಸುಹಾಸಯುಕ್ತವನ್ನಾಗಿ ಮಾಡುತ್ತದೆಯೋ, ಮಳೆ, ತಿಲ, ಮತ್ತು ಪುಷ್ಪಗಳು ಭೂಮಿಯನ್ನು ಹೇಗೆ ಸುಗಂಧಯುಕ್ತವನಾಗಿ ಮಾಡುತ್ತವೆಯೋ ಹಾಗೆ ಸಂಸರ್ಗದಿಂದ ಒಳ್ಳೆಯದಾಗುತ್ತದೆ.
03001023a ಮೋಹಜಾಲಸ್ಯ ಯೋನಿರ್ಹಿ ಮೂಢೈರೇವ ಸಮಾಗಮಃ|
03001023c ಅಹನ್ಯಹನಿ ಧರ್ಮಸ್ಯ ಯೋನಿಃ ಸಾಧುಸಮಾಗಮಃ||
ಮೂಢರ ಸಹವಾಸವೇ ಮೋಹಜಾಲದ ಮೂಲ ಮತ್ತು ಸಾಧುಸಮಾಗಮವು ಧರ್ಮದ ಮೂಲ.
03001024a ತಸ್ಮಾತ್ಪ್ರಾಜ್ಞೈಶ್ಚ ವೃದ್ಧೈಶ್ಚ ಸುಸ್ವಭಾವೈಸ್ತಪಸ್ವಿಭಿಃ|
03001024c ಸದ್ಭಿಶ್ಚ ಸಹ ಸಂಸರ್ಗಃ ಕಾರ್ಯಃ ಶಮಪರಾಯಣೈಃ||
ಆದ್ದರಿಂದಲೇ ಶಮಪರಾಯಣರು ಪ್ರಾಜ್ಞರ, ವೃದ್ಧರ, ಸುಸ್ವಭಾವಿಗಳ, ತಪಸ್ವಿಗಳ ಮತ್ತು ಒಳ್ಳೆಯವರ ಜೊತೆ ಸಂಸರ್ಗಮಾಡಬೇಕು.
03001025a ಯೇಷಾಂ ತ್ರೀಣ್ಯವದಾತಾನಿ ಯೋನಿರ್ವಿದ್ಯಾ ಚ ಕರ್ಮ ಚ|
03001025c ತಾನ್ಸೇವೇತ್ತೈಃ ಸಮಾಸ್ಯಾ ಹಿ ಶಾಸ್ತ್ರೇಭ್ಯೋಽಪಿ ಗರೀಯಸೀ||
ಯಾರ ಕುಲ, ವಿದ್ಯೆ, ಮತ್ತು ಕರ್ಮಗಳು ಉತ್ತಮವೋ ಅವರನ್ನು ಸೇವಿಸಬೇಕು. ಅವರ ಸಮಾಗಮವು ಶಾಸ್ತ್ರಗಳಿಗಿಂತಲೂ ಶ್ರೇಷ್ಠವಾದದ್ದು.
03001026a ನಿರಾರಂಭಾ ಹ್ಯಪಿ ವಯಂ ಪುಣ್ಯಶೀಲೇಷು ಸಾಧುಷು|
03001026c ಪುಣ್ಯಮೇವಾಪ್ನುಯಾಮೇಹ ಪಾಪಂ ಪಾಪೋಪಸೇವನಾತ್||
ಪಾಪಿಗಳ ಉಪಸೇವನೆಯಿಂದ ಪಾಪವನ್ನು ಹೇಗೋ ಹಾಗೆ ಯಾವ ಕ್ರಿಯೆಗಳನ್ನು ಮಾಡದಿದ್ದರೂ ಪುಣ್ಯಶೀಲ ಸಾಧುಗಳ ಉಪಸೇವನೆಯಿಂದ ಪುಣ್ಯವನ್ನು ಹೊಂದುತ್ತೇವೆ.
03001027a ಅಸತಾಂ ದರ್ಶನಾತ್ಸ್ಪರ್ಶಾತ್ಸಂಜಲ್ಪನಸಹಾಸನಾತ್|
03001027c ಧರ್ಮಾಚಾರಾಃ ಪ್ರಹೀಯಂತೇ ನ ಚ ಸಿಧ್ಯಂತಿ ಮಾನವಾಃ||
ಅಸತ್ಯರನ್ನು ನೋಡುವುದರಿಂದ, ಮುಟ್ಟುವುದರಿಂದ ಮತ್ತು ಅವರೊಂದಿಗೆ ಕುಳಿತುಕೊಳ್ಳುವುದರಿಂದ ಧರ್ಮಾಚಾರಿ ಮಾನವರು ತಮ್ಮನ್ನು ತಾವೇ ಕೀಳುಮಾಡಿಕೊಳ್ಳುತ್ತಾರೆ.
03001028a ಬುದ್ಧಿಶ್ಚ ಹೀಯತೇ ಪುಂಸಾಂ ನೀಚೈಃ ಸಹ ಸಮಾಗಮಾತ್|
03001028c ಮಧ್ಯಮೈರ್ಮಧ್ಯತಾಂ ಯಾತಿ ಶ್ರೇಷ್ಠತಾಂ ಯಾತಿ ಚೋತ್ತಮೈಃ||
ಬುದ್ಧಿಯೂ ಕೂಡ ನೀಚರ ಸಮಾಗಮದಿಂದ ಕೆಳಹೋಗುತ್ತದೆ, ಮದ್ಯಮರ ಸಮಾಗಮದಿಂದ ಮದ್ಯಮವಾಗಿರುತ್ತದೆ ಮತ್ತು ಶ್ರೇಷ್ಠರ ಸಮಾಗಮದಿಂದ ಉತ್ತಮಸ್ಥಿತಿಯನ್ನು ಹೊಂದುತ್ತದೆ.
03001029a ಯೇ ಗುಣಾಃ ಕೀರ್ತಿತಾ ಲೋಕೇ ಧರ್ಮಕಾಮಾರ್ಥಸಂಭವಾಃ|
03001029c ಲೋಕಾಚಾರಾತ್ಮಸಂಭೂತಾ ವೇದೋಕ್ತಾಃ ಶಿಷ್ಟಸಮ್ಮತಾಃ||
03001030a ತೇ ಯುಷ್ಮಾಸು ಸಮಸ್ತಾಶ್ಚ ವ್ಯಸ್ತಾಶ್ಚೈವೇಹ ಸದ್ಗುಣಾಃ|
03001030c ಇಚ್ಚಾಮೋ ಗುಣವನ್ಮಧ್ಯೇ ವಸ್ತುಂ ಶ್ರೇಯೋಽಭಿಕಾಂಕ್ಷಿಣಃ||
ಶಿಷ್ಟಸಮ್ಮತ, ವೇದೋಕ್ತ, ಲೋಕಾಚಾರಗಳಿಂದ ಹುಟ್ಟುವ ಯಾವ ಗುಣಗಳಿಂದ ಧರ್ಮ-ಕಾಮ-ಅರ್ಥಗಳು ಸಂಭವಿಸುತ್ತವೆಯೆಂದು ಲೋಕದಲ್ಲಿ ಕೀರ್ತಿತವಾಗಿವೆಯೋ ಆ ಎಲ್ಲ ಸದ್ಗುಣಗಳೂ ಸಮನಾಗಿ ಇರುವ ಗುಣವಂತ ನಿಮ್ಮ ಮದ್ಯದಲ್ಲಿ ವಾಸಿಸಲು ನಮ್ಮ ಶ್ರೇಯೋಕಾಂಕ್ಷಿಗಳಾದ ನಾವು ಇಚ್ಚಿಸುತ್ತೇವೆ.”
03001031 ಯುಧಿಷ್ಠಿರ ಉವಾಚ|
03001031a ಧನ್ಯಾ ವಯಂ ಯದಸ್ಮಾಕಂ ಸ್ನೇಹಕಾರುಣ್ಯಯಂತ್ರಿತಾಃ|
03001031c ಅಸತೋಽಪಿ ಗುಣಾನಾಹುರ್ಬ್ರಾಹ್ಮಣಪ್ರಮುಖಾಃ ಪ್ರಜಾಃ||
ಯುಧಿಷ್ಠಿರನು ಹೇಳಿದನು: “ಬ್ರಾಹ್ಮಣಪ್ರಮುಖ ಪ್ರಜೆಗಳು ನಮ್ಮ ಮೇಲಿನ ಸ್ನೇಹ-ಕರುಣೆಗಳಿಂದ ಭಾವಿತರಾಗಿ ನಮ್ಮಲ್ಲಿ ಇಲ್ಲದೇ ಇರುವ ಗುಣಗಳ ಕುರಿತು ಹೇಳುತ್ತಾರೆಂದರೆ ನಾವು ಧನ್ಯರಾದೆವು.
03001032a ತದಹಂ ಭ್ರಾತೃಸಹಿತಃ ಸರ್ವಾನ್ವಿಜ್ಞಾಪಯಾಮಿ ವಃ|
03001032c ನಾನ್ಯಥಾ ತದ್ಧಿ ಕರ್ತವ್ಯಮಸ್ಮತ್ಸ್ನೇಹಾನುಕಂಪಯಾ||
ಆದ್ದರಿಂದ ನಮ್ಮ ಮೇಲಿನ ಸ್ನೇಹ ಅನುಕಂಪಗಳಿಂದಾಗಿ ಅನ್ಯಥಾ ಕಾರ್ಯವನ್ನು ಮಾಡಬೇಡಿ ಎಂದು ಭ್ರಾತೃಸಹಿತನಾಗಿ ನಿಮ್ಮೆಲ್ಲರಲ್ಲಿ ವಿಜ್ಞಾಪಿಸಿಕೊಳ್ಳುತ್ತೇನೆ.
03001033a ಭೀಷ್ಮಃ ಪಿತಾಮಹೋ ರಾಜಾ ವಿದುರೋ ಜನನೀ ಚ ಮೇ|
03001033c ಸುಹೃಜ್ಜನಶ್ಚ ಪ್ರಾಯೋ ಮೇ ನಗರೇ ನಾಗಸಾಹ್ವಯೇ||
ಭೀಷ್ಮ ಪಿತಾಮಹ, ರಾಜ, ವಿದುರ, ನಮ್ಮ ಜನನಿ ಮತ್ತು ಇತರ ಸುಹೃಜ್ಜನರು ಈ ನಾಗಸಾಹ್ವಯ ನಗರದಲ್ಲಿ ಇದ್ದಾರೆ.
03001034a ತೇ ತ್ವಸ್ಮದ್ಧಿತಕಾಮಾರ್ಥಂ ಪಾಲನೀಯಾಃ ಪ್ರಯತ್ನತಃ|
03001034c ಯುಷ್ಮಾಭಿಃ ಸಹಿತೈಃ ಸರ್ವೈಃ ಶೋಕಸಂತಾಪವಿಹ್ವಲಾಃ||
ನಮ್ಮ ಹಿತಕ್ಕಾಗಿ ನೀವೆಲ್ಲರೂ ಸೇರಿ ಶೋಕಸಂತಾಪವಿಹ್ವಲರಾದ ಅವರನ್ನು ಪಾಲಿಸಲು ಪ್ರಯತ್ನಿಸಬೇಕು.
03001035a ನಿವರ್ತತಾಗತಾ ದೂರಂ ಸಮಾಗಮನಶಾಪಿತಾಃ|
03001035c ಸ್ವಜನೇ ನ್ಯಾಸಭೂತೇ ಮೇ ಕಾರ್ಯಾ ಸ್ನೇಹಾನ್ವಿತಾ ಮತಿಃ||
ದೂರ ಬಂದಿದ್ದೀರಿ. ಹಿಂದುರಿಗಿರಿ. ಪುನಃ ಭೇಟಿಯಾಗುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇನೆ. ನಿಮ್ಮ ಸ್ನೇಹಾನ್ವಿತ ಮನಸ್ಸನ್ನು ನಿಮ್ಮಲ್ಲಿ ಇಟ್ಟುಹೋಗುತ್ತಿರುವ ಸ್ವಜನರಕಡೆ ತಿರುಗಿಸಿ.
03001036a ಏತದ್ಧಿ ಮಮ ಕಾರ್ಯಾಣಾಂ ಪರಮಂ ಹೃದಿ ಸಂಸ್ಥಿತಂ|
03001036c ಸುಕೃತಾನೇನ ಮೇ ತುಷ್ಟಿಃ ಸತ್ಕಾರಶ್ಚ ಭವಿಷ್ಯತಿ||
ಇದೊಂದು ಕಾರ್ಯವು ಈಗ ನನ್ನ ಹೃದಯದಲ್ಲಿ ಮುಖ್ಯವಾಗಿ ಉಳಿದುಕೊಂಡಿದೆ. ಈ ಸುಕೃತ್ಯದಿಂದ ನಾನು ಸಂತುಷ್ಟನಾಗುತ್ತೇನೆ ಮತ್ತು ನನಗೆ ಸತ್ಕಾರವಾದಂಥಾಗುತ್ತದೆ.””
03001037 ವೈಶಂಪಾಯನ ಉವಾಚ|
03001037a ತಥಾನುಮಂತ್ರಿತಾಸ್ತೇನ ಧರ್ಮರಾಜೇನ ತಾಃ ಪ್ರಜಾಃ|
03001037c ಚಕ್ರುರಾರ್ತಸ್ವರಂ ಘೋರಂ ಹಾ ರಾಜನ್ನಿತಿ ದುಃಖಿತಾಃ||
ವೈಶಂಪಾಯನನು ಹೇಳಿದನು: “ಈ ರೀತಿ ಧರ್ಮರಾಜನಿಂದ ಹಿಂದೆ ಕಳುಹಿಸಲ್ಪಟ್ಟ ಪ್ರಜೆಗಳೆಲ್ಲರೂ ದುಃಖಿತರಾಗಿ “ಹಾ ರಾಜ!” ಎಂದು ಘೋರ ಆರ್ತಸ್ವರದಲ್ಲಿ ಕೂಗಿದರು.
03001038a ಗುಣಾನ್ಪಾರ್ಥಸ್ಯ ಸಂಸ್ಮೃತ್ಯ ದುಃಖಾರ್ತಾಃ ಪರಮಾತುರಾಃ|
03001038c ಅಕಾಮಾಃ ಸಂನ್ಯವರ್ತಂತ ಸಮಾಗಮ್ಯಾಥ ಪಾಂಡವಾನ್||
ಪಾಂಡವರನ್ನು ಭೇಟಿಮಾಡಿ, ಪಾರ್ಥರ ಗುಣಗಳನ್ನು ಸಂಸ್ಮರಿಸುತ್ತಾ, ದುಃಖಾರ್ತರಾಗಿ, ಸ್ವಲ್ಪವೂ ಮನಸ್ಸಿಲ್ಲದೇ ಹಿಂದಿರುಗಿದರು.
03001039a ನಿವೃತ್ತೇಷು ತು ಪೌರೇಷು ರಥಾನಾಸ್ಥಾಯ ಪಾಂಡವಾಃ|
03001039c ಪ್ರಜಗ್ಮುರ್ಜಾಹ್ನವೀತೀರೇ ಪ್ರಮಾಣಾಖ್ಯಂ ಮಹಾವಟಂ||
ಪುರಜನರು ಹಿಂದಿರುಗಿದ ನಂತರ ಪಾಂಡವರು ರಥಗಳನ್ನೇರಿ ಜಾಹ್ನವೀತೀರದಲ್ಲಿ ಪ್ರಮಾಣ ಎಂಬ ಹೆಸರಿನ ಆಲದ ಮಹಾ ವೃಕ್ಷವೊಂದನ್ನು ತಲುಪಿದರು.
03001040a ತಂ ತೇ ದಿವಸಶೇಷೇಣ ವಟಂ ಗತ್ವಾ ತು ಪಾಂಡವಾಃ|
03001040c ಊಷುಸ್ತಾಂ ರಜನೀಂ ವೀರಾಃ ಸಂಸ್ಪೃಶ್ಯ ಸಲಿಲಂ ಶುಚಿ|
03001040e ಉದಕೇನೈವ ತಾಂ ರಾತ್ರಿಮೂಷುಸ್ತೇ ದುಃಖಕರ್ಶಿತಾಃ||
ದಿವಸವಿಡೀ ಪ್ರಯಾಣಮಾಡಿ ವಟವನ್ನು ತಲುಪಿ, ವೀರ ಪಾಂಡವರು ದುಃಖಾಕರ್ಷಿತರಾಗಿ ಶುಚಿ ಸಲಿಲ ನೀರನ್ನು ಮಾತ್ರ ಕುಡಿದು ರಾತ್ರಿಯನ್ನು ಅಲ್ಲಿಯೇ ಕಳೆದರು.
03001041a ಅನುಜಗ್ಮುಶ್ಚ ತತ್ರೈತಾನ್ಸ್ನೇಹಾತ್ಕೇ ಚಿದ್ದ್ವಿಜಾತಯಃ|
03001041c ಸಾಗ್ನಯೋಽನಗ್ನಯಶ್ಚೈವ ಸಶಿಷ್ಯಗಣಬಾಂಧವಾಃ|
03001041e ಸ ತೈಃ ಪರಿವೃತೋ ರಾಜಾ ಶುಶುಭೇ ಬ್ರಹ್ಮವಾದಿಭಿಃ||
ಅವರ ಮೇಲಿನ ಸ್ನೇಹದಿಂದಾಗಿ ಕೆಲವು ದ್ವಿಜರು ಅಗ್ನಿಯೊಂದಿಗೆ ಅಥವಾ ಅಗ್ನಿಯಿಲ್ಲದೇ ಶಿಷ್ಯಗಣ ಬಾಂಧವರೊಡಗೂಡಿ ಅವರನ್ನು ಅಲ್ಲಿಯವರೆಗೂ ಹಿಂಬಾಲಿಸಿದ್ದರು. ಆ ಬ್ರಹ್ಮವಾದಿಗಳಿಂದ ಪರಿವೃತ ರಾಜನು ಕಂಗೊಳಿಸುತ್ತಿದ್ದನು.
03001042a ತೇಷಾಂ ಪ್ರಾದುಷ್ಕೃತಾಗ್ನೀನಾಂ ಮುಹೂರ್ತೇ ರಮ್ಯದಾರುಣೇ|
03001042c ಬ್ರಹ್ಮಘೋಷಪುರಸ್ಕಾರಃ ಸಂಜಲ್ಪಃ ಸಮಜಾಯತ||
ರಮ್ಯವೂ ದಾರುಣವೂ ಆದ ಮುಹೂರ್ತದಲ್ಲಿ ಅವರವರ ಅಗ್ನಿಗಳನ್ನು ಹೊರತಂದರು ಮತ್ತು ಬ್ರಹ್ಮಘೋಶದೊಂದಿಗೆ ಚರ್ಚೆಯು ಪ್ರಾರಂಭವಾಯಿತು.
03001043a ರಾಜಾನಂ ತು ಕುರುಶ್ರೇಷ್ಠಂ ತೇ ಹಂಸಮಧುರಸ್ವರಾಃ|
03001043c ಆಶ್ವಾಸಯಂತೋ ವಿಪ್ರಾಗ್ರ್ಯಾಃ ಕ್ಷಪಾಂ ಸರ್ವಾಂ ವ್ಯನೋದಯನ್||
ಹಂಸಗಳಂತೆ ಮಧುರಸ್ವರಗಳಲ್ಲಿ ವಿಪ್ರಾಗ್ರರೆಲ್ಲರೂ ಕುರುಶ್ರೇಷ್ಠ ರಾಜನಿಗೆ ಆಶ್ವಾಸನೆ ನೀಡುತ್ತಿರಲು ಎಲ್ಲರೂ ರಾತ್ರಿಯನ್ನು ಕಳೆದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ಪೌರಪ್ರತ್ಯಾಗಮನೇ ಪ್ರಥಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ಪೌರಪ್ರತ್ಯಾಗಮನ ಎನ್ನುವ ಮೊದಲನೆಯ ಅಧ್ಯಾಯವು.