ಅನುಶಾಸನ ಪರ್ವ: ದಾನಧರ್ಮ ಪರ್ವ
೯೮
ಸೂರ್ಯನು ಜಮದಗ್ನಿಗೆ ತನ್ನ ತಾಪದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಛತ್ರಿ-ಪಾದರಕ್ಷೆಗಳನ್ನು ನೀಡಿದುದು (೧-೧೫); ಛತ್ರಿ-ಪಾದರಕ್ಷೆಗಳ ದಾನದ ಫಲ (೧೬-೨೨).
13098001 ಯುಧಿಷ್ಠಿರ ಉವಾಚ|
13098001a ಏವಂ ತದಾ ಪ್ರಯಾಚಂತಂ ಭಾಸ್ಕರಂ ಮುನಿಸತ್ತಮಃ|
13098001c ಜಮದಗ್ನಿರ್ಮಹಾತೇಜಾಃ ಕಿಂ ಕಾರ್ಯಂ ಪ್ರತ್ಯಪದ್ಯತ||
ಯುಧಿಷ್ಠಿರನು ಹೇಳಿದನು: “ಭಾಸ್ಕರನು ಹಾಗೆ ಯಾಚಿಸುತ್ತಿರುವಾಗ ಮುನಿಸತ್ತಮ ಮಹಾತೇಜಸ್ವೀ ಜಮದಗ್ನಿಯು ಏನು ಮಾಡಿದನು?”
13098002 ಭೀಷ್ಮ ಉವಾಚ|
13098002a ತಥಾ ಪ್ರಯಾಚಮಾನಸ್ಯ ಮುನಿರಗ್ನಿಸಮಪ್ರಭಃ|
13098002c ಜಮದಗ್ನಿಃ ಶಮಂ ನೈವ ಜಗಾಮ ಕುರುನಂದನ||
ಭೀಷ್ಮನು ಹೇಳಿದನು: “ಕುರುನಂದನ! ಹಾಗೆ ಯಾಚಿಸುತ್ತಿದ್ದರೂ ಅಗ್ನಿಸಮಪ್ರಭನಾದ ಮುನಿ ಜಮದಗ್ನಿಯು ಶಾಂತನಾಗಲಿಲ್ಲ.
13098003a ತತಃ ಸೂರ್ಯೋ ಮಧುರಯಾ ವಾಚಾ ತಮಿದಮಬ್ರವೀತ್|
13098003c ಕೃತಾಂಜಲಿರ್ವಿಪ್ರರೂಪೀ ಪ್ರಣಮ್ಯೇದಂ ವಿಶಾಂ ಪತೇ||
ವಿಶಾಂಪತೇ! ಆಗ ವಿಪ್ರರೂಪೀ ಸೂರ್ಯನು ಅಂಜಲೀಬದ್ಧನಾಗಿ ಮಧುರ ಮಾತಿನಿಂದ ಹೇಳಿದನು:
13098004a ಚಲಂ ನಿಮಿತ್ತಂ ವಿಪ್ರರ್ಷೇ ಸದಾ ಸೂರ್ಯಸ್ಯ ಗಚ್ಚತಃ|
13098004c ಕಥಂ ಚಲಂ ವೇತ್ಸ್ಯಸಿ ತ್ವಂ ಸದಾ ಯಾಂತಂ ದಿವಾಕರಮ್||
“ವಿಪ್ರರ್ಷೇ! ಸೂರ್ಯನು ಸದಾ ಚಲಿಸುತ್ತಿರುವಾಗ ನಿನ್ನ ಲಕ್ಷ್ಯವು ಚಂಚಲವಾಗುತ್ತಲೇ ಇರುತ್ತದೆ. ನಿರಂತರವಾದ ಚಲಿಸುತ್ತಿರುವ ದಿವಾಕರನನ್ನು ನೀನು ಹೇಗೆ ಭೇದಿಸುವೆ?”
13098005 ಜಮದಗ್ನಿರುವಾಚ|
13098005a ಸ್ಥಿರಂ ವಾಪಿ ಚಲಂ ವಾಪಿ ಜಾನೇ ತ್ವಾಂ ಜ್ಞಾನಚಕ್ಷುಷಾ|
13098005c ಅವಶ್ಯಂ ವಿನಯಾಧಾನಂ ಕಾರ್ಯಮದ್ಯ ಮಯಾ ತವ||
ಜಮದಗ್ನಿಯು ಹೇಳಿದನು: “ನನ್ನ ಲಕ್ಷ್ಯವು ಚಲಿಸುತ್ತಿರಲಿ ಅಥವಾ ಸ್ಥಿರವಾಗಿರಲಿ. ಜ್ಞಾನದೃಷ್ಟಿಯಿಂದ ನಿನ್ನನ್ನು ನಾನು ತಿಳಿದಿದ್ದೇನೆ. ಇಂದು ನಿನ್ನನ್ನು ದಂಡಿಸಿ ವಿನಯಶೀಲನನ್ನಾಗಿ ಮಾಡುವುದು ನನ್ನ ಕರ್ತವ್ಯವಾಗಿದೆ.
13098006a ಅಪರಾಹ್ಣೇ ನಿಮೇಷಾರ್ಧಂ ತಿಷ್ಠಸಿ ತ್ವಂ ದಿವಾಕರ|
13098006c ತತ್ರ ವೇತ್ಸ್ಯಾಮಿ ಸೂರ್ಯ ತ್ವಾಂ ನ ಮೇಽತ್ರಾಸ್ತಿ ವಿಚಾರಣಾ||
ದಿವಾಕರ! ಅಪರಾಹ್ಣದಲ್ಲಿ ಅರ್ಧ ನಿಮಿಷದ ಕಾಲ ನೀನು ಸ್ಥಿರನಾಗಿ ಆಕಾಶದಲ್ಲಿ ನಿಲ್ಲುತ್ತೀಯೆ. ಸೂರ್ಯ! ಆಗ ನಿನ್ನನ್ನು ಹೊಡೆಯುತ್ತೇನೆ. ಆ ವಿಷಯದಲ್ಲಿ ವಿಚಾರಿಸದಿರು.”
13098007 ಸೂರ್ಯ ಉವಾಚ|
13098007a ಅಸಂಶಯಂ ಮಾಂ ವಿಪ್ರರ್ಷೇ ವೇತ್ಸ್ಯಸೇ ಧನ್ವಿನಾಂ ವರ|
13098007c ಅಪಕಾರಿಣಂ ತು ಮಾಂ ವಿದ್ಧಿ ಭಗವನ್ ಶರಣಾಗತಮ್||
ಸೂರ್ಯನು ಹೇಳಿದನು: “ವಿಪ್ರರ್ಷೇ! ಧನ್ವಿಗಳಲ್ಲಿ ಶ್ರೇಷ್ಠ! ನೀನು ನನ್ನನ್ನು ಹೊಡೆಯುತ್ತೀಯೆ ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ. ಭಗವನ್! ಅಪಕಾರವನ್ನೆಸಗಿದ ನಾನು ನಿನಗೆ ಶರಣುಬಂದಿದ್ದೇನೆ ಎಂದು ತಿಳಿ.””
13098008 ಭೀಷ್ಮ ಉವಾಚ|
13098008a ತತಃ ಪ್ರಹಸ್ಯ ಭಗವಾನ್ ಜಮದಗ್ನಿರುವಾಚ ತಮ್|
13098008c ನ ಭೀಃ ಸೂರ್ಯ ತ್ವಯಾ ಕಾರ್ಯಾ ಪ್ರಣಿಪಾತಗತೋ ಹ್ಯಸಿ||
ಭೀಷ್ಮನು ಹೇಳಿದನು: “ಆಗ ಭಗವಾನ್ ಜಮದಗ್ನಿಯು ನಗುತ್ತಾ ಅವನಿಗೆ ಹೇಳಿದನು: “ಶರಣಾಗತನಾಗಿರುವ ನೀನು ಭಯಪಡಬೇಕಾಗಿಲ್ಲ.
13098009a ಬ್ರಾಹ್ಮಣೇಷ್ವಾರ್ಜವಂ ಯಚ್ಚ ಸ್ಥೈರ್ಯಂ ಚ ಧರಣೀತಲೇ|
13098009c ಸೌಮ್ಯತಾಂ ಚೈವ ಸೋಮಸ್ಯ ಗಾಂಭೀರ್ಯಂ ವರುಣಸ್ಯ ಚ||
13098010a ದೀಪ್ತಿಮಗ್ನೇಃ ಪ್ರಭಾಂ ಮೇರೋಃ ಪ್ರತಾಪಂ ತಪನಸ್ಯ ಚ|
13098010c ಏತಾನ್ಯತಿಕ್ರಮೇದ್ಯೋ ವೈ ಸ ಹನ್ಯಾಚ್ಚರಣಾಗತಮ್||
ಬ್ರಾಹ್ಮಣನ ಸರಳತೆಯನ್ನು, ಧರಣಿಯಲ್ಲಿರುವ ಸ್ಥೈರ್ಯವನ್ನು, ಸೋಮನ ಸೌಮ್ಯತೆಯನ್ನು, ವರುಣನ ಗಾಂಭೀರ್ಯವನ್ನು, ಅಗ್ನಿಯ ಬೆಳಕನ್ನೂ, ಮೇರುವಿನ ಪ್ರಭೆಯನ್ನೂ, ಸೂರ್ಯನ ಪ್ರತಾಪವನ್ನೂ ಅತಿಕ್ರಮಿಸುವವನು ಮಾತ್ರ ಶರಣಾಗತನನ್ನು ಸಂಹರಿಸಿಯಾನು.
13098011a ಭವೇತ್ಸ ಗುರುತಲ್ಪೀ ಚ ಬ್ರಹ್ಮಹಾ ಚ ತಥಾ ಭವೇತ್|
13098011c ಸುರಾಪಾನಂ ಚ ಕುರ್ಯಾತ್ಸ ಯೋ ಹನ್ಯಾಚ್ಚರಣಾಗತಮ್||
ಶರಣಾಗತನಾಗಿ ಬಂದವನನ್ನು ಕೊಲ್ಲುವವನು ಗುರುಪತ್ನಿಯನ್ನು ಕೂಡಿದವನು, ಬ್ರಹ್ಮಹತ್ಯೆಯನ್ನು ಮಾಡಿದವನು, ಮತ್ತು ಸುರಾಪಾನವನ್ನು ಮಾಡಿದವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗುತ್ತಾನೆ.
13098012a ಏತಸ್ಯ ತ್ವಪನೀತಸ್ಯ ಸಮಾಧಿಂ ತಾತ ಚಿಂತಯ|
13098012c ಯಥಾ ಸುಖಗಮಃ ಪಂಥಾ ಭವೇತ್ತ್ವದ್ರಶ್ಮಿತಾಪಿತಃ||
ಅಯ್ಯಾ! ಈ ಅಪರಾಧಕ್ಕೆ ಸಮಾಧಾನವನ್ನು ಯೋಚಿಸು. ನಿನ್ನ ಕಿರಣಗಳಿಂದ ಸುಡುತ್ತಿರುವ ಮಾರ್ಗವು ಸಂಚರಿಸಲು ಸುಖಮಯವಾಗಿರುವಂತೆ ಮಾಡಲು ಒಂದು ಉಪಾಯವನ್ನು ಸೂಚಿಸು.””
13098013 ಭೀಷ್ಮ ಉವಾಚ|
13098013a ಏತಾವದುಕ್ತ್ವಾ ಸ ತದಾ ತೂಷ್ಣೀಮಾಸೀದ್ ಭೃಗೂದ್ವಹಃ|
13098013c ಅಥ ಸೂರ್ಯೋ ದದೌ ತಸ್ಮೈ ಚತ್ರೋಪಾನಹಮಾಶು ವೈ||
ಭೀಷ್ಮನು ಹೇಳಿದನು: “ಭೃಗೂದ್ವಹನು ಹೀಗಿ ಹೇಳಿ ಸುಮ್ಮನಾದನು. ಆಗ ಸೂರ್ಯನು ಅವನಿಗೆ ಛತ್ರಿ ಮತ್ತು ಪಾದರಕ್ಷೆಗಳನ್ನು ಕೊಟ್ಟು ಹೇಳಿದನು.
13098014 ಸೂರ್ಯ ಉವಾಚ|
13098014a ಮಹರ್ಷೇ ಶಿರಸಸ್ತ್ರಾಣಂ ಚತ್ರಂ ಮದ್ರಶ್ಮಿವಾರಣಮ್|
13098014c ಪ್ರತಿಗೃಹ್ಣೀಷ್ವ ಪದ್ಭ್ಯಾಂ ಚ ತ್ರಾಣಾರ್ಥಂ ಚರ್ಮಪಾದುಕೇ||
ಸೂರ್ಯನು ಹೇಳಿದನು: “ಮಹರ್ಷೇ! ನನ್ನ ಕಿರಣಗಳನ್ನು ತಡೆದು ಶಿರವನ್ನು ರಕ್ಷಿಸುವ ಈ ಛತ್ರಿಯನ್ನೂ ಕಾಲುಗಳ ರಕ್ಷಣೆಗಾಗಿ ಈ ಚರ್ಮಪಾದುಕೆಗಳನ್ನೂ ಸ್ವೀಕರಿಸು.
13098015a ಅದ್ಯಪ್ರಭೃತಿ ಚೈವೈತಲ್ಲೋಕೇ ಸಂಪ್ರಚರಿಷ್ಯತಿ|
13098015c ಪುಣ್ಯದಾನೇಷು ಸರ್ವೇಷು ಪರಮಕ್ಷಯ್ಯಮೇವ ಚ||
ಇಂದಿನಿಂದ ಇವು ಲೋಕದಲ್ಲಿ ಪ್ರಚಲಿತವಾಗಿರುತ್ತವೆ. ಸರ್ವ ಪುಣ್ಯಕರ್ಮಗಳಲ್ಲಿ ಇವುಗಳ ದಾನವು ಅಕ್ಷಯ ಫಲವನ್ನು ಕೊಡುತ್ತದೆ.””
13098016 ಭೀಷ್ಮ ಉವಾಚ|
13098016a ಉಪಾನಚ್ಚತ್ರಮೇತದ್ವೈ ಸೂರ್ಯೇಣೇಹ ಪ್ರವರ್ತಿತಮ್|
13098016c ಪುಣ್ಯಮೇತದಭಿಖ್ಯಾತಂ ತ್ರಿಷು ಲೋಕೇಷು ಭಾರತ||
ಭೀಷ್ಮನು ಹೇಳಿದನು: “ಹೀಗೆ ಛತ್ರಿ ಮತ್ತು ಪಾದರಕ್ಷೆಗಳು ಸೂರ್ಯನಿಂದಲೇ ಪ್ರಚುರಗೊಳಿಸಲ್ಪಟ್ಟಿವೆ. ಭಾರತ! ಇವುಗಳ ದಾನವು ಪುಣ್ಯಕರವಾದುದೆಂದು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾಗಿದೆ.
13098017a ತಸ್ಮಾತ್ ಪ್ರಯಚ್ಚ ವಿಪ್ರೇಭ್ಯಶ್ಚತ್ರೋಪಾನಹಮುತ್ತಮಮ್|
13098017c ಧರ್ಮಸ್ತೇ ಸುಮಹಾನ್ ಭಾವೀ ನ ಮೇಽತ್ರಾಸ್ತಿ ವಿಚಾರಣಾ||
ಆದುದರಿಂದ ವಿಪ್ರರಿಗೆ ಛತ್ರಿ-ಪಾದರಕ್ಷೆಗಳನ್ನು ದಾನಮಾಡುವುದು ಉತ್ತಮವು. ಅದರಿಂದ ಮಹಾಫಲವು ಲಭಿಸುತ್ತದೆ ಎನ್ನುವುದರಲ್ಲಿ ವಿಚಾರಿಸಬೇಕಾದುದೇ ಇಲ್ಲ.
13098018a ಚತ್ರಂ ಹಿ ಭರತಶ್ರೇಷ್ಠ ಯಃ ಪ್ರದದ್ಯಾದ್ದ್ವಿಜಾತಯೇ|
13098018c ಶುಭ್ರಂ ಶತಶಲಾಕಂ ವೈ ಸ ಪ್ರೇತ್ಯ ಸುಖಮೇಧತೇ||
ಭರತಶ್ರೇಷ್ಠ! ನೂರು ಕಡ್ಡಿಗಳಿಂದ ಕೂಡಿದ ಸುಂದರ ಛತ್ರಿಯನ್ನು ಬ್ರಾಹ್ಮಣನಿಗೆ ದಾನಮಾಡುವವನು ಪರಲೋಕದಲ್ಲಿ ಸುಖಿಯಾಗಿರುತ್ತಾನೆ.
13098019a ಸ ಶಕ್ರಲೋಕೇ ವಸತಿ ಪೂಜ್ಯಮಾನೋ ದ್ವಿಜಾತಿಭಿಃ|
13098019c ಅಪ್ಸರೋಭಿಶ್ಚ ಸತತಂ ದೇವೈಶ್ಚ ಭರತರ್ಷಭ||
ಭರತರ್ಷಭ! ಅವನು ಶಕ್ರಲೋಕದಲ್ಲಿ ದ್ವಿಜಾತಿಯರಿಂದಲೂ, ಅಪ್ಸರೆಯರಿಂದಲೂ ಮತ್ತು ದೇವತೆಗಳಿಂದಲೂ ಸತತವಾಗಿ ಪೂಜಿಸಲ್ಪಟ್ಟು ವಾಸಿಸುತ್ತಾನೆ.
13098020a ದಹ್ಯಮಾನಾಯ ವಿಪ್ರಾಯ ಯಃ ಪ್ರಯಚ್ಚತ್ಯುಪಾನಹೌ|
13098020c ಸ್ನಾತಕಾಯ ಮಹಾಬಾಹೋ ಸಂಶಿತಾಯ ದ್ವಿಜಾತಯೇ||
13098021a ಸೋಽಪಿ ಲೋಕಾನವಾಪ್ನೋತಿ ದೈವತೈರಭಿಪೂಜಿತಾನ್|
13098021c ಗೋಲೋಕೇ ಸ ಮುದಾ ಯುಕ್ತೋ ವಸತಿ ಪ್ರೇತ್ಯ ಭಾರತ||
ಮಹಾಬಾಹೋ! ಭಾರತ! ಸ್ನಾತಕನಾದ, ವ್ರತನಿಷ್ಠನಾದ ಮತ್ತು ಬಿಸಿಲಿನಿಂದ ಸುಡುತ್ತಿರುವ ಬ್ರಾಹ್ಮಣನಿಗೆ ಪಾದರಕ್ಷೆಗಳನ್ನು ಕೊಡುವವನು ಅವಸಾನಾನಂತರದಲ್ಲಿ ದೇವತೆಗಳೂ ಪೂಜಿಸುವ ಲೋಕಗಳಿಗೆ ಹೋಗುತ್ತಾನೆ. ಅಲ್ಲದೇ ಗೋಲೋಕದಲ್ಲಿಯೂ ಸಂತೋಷದಿಂದ ವಾಸಿಸುತ್ತಾನೆ.
13098022a ಏತತ್ತೇ ಭರತಶ್ರೇಷ್ಠ ಮಯಾ ಕಾರ್ತ್ಸ್ನ್ಯೇನ ಕೀರ್ತಿತಮ್|
13098022c ಚತ್ರೋಪಾನಹದಾನಸ್ಯ ಫಲಂ ಭರತಸತ್ತಮ||
ಭರತಶ್ರೇಷ್ಠ! ಭರತಸತ್ತಮ! ಹೀಗೆ ನಾನು ನಿನಗೆ ಛತ್ರಿ-ಪಾದರಕ್ಷೆಗಳ ದಾನದ ಫಲವನ್ನು ಸಂಪೂರ್ಣವಾಗಿ ಹೇಳಿದ್ದೇನೆ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಛತ್ರೋಪಾನದ್ದಾನಪ್ರಶಂಸಾ ನಾಮ ಅಷ್ಟನವತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಛತ್ರೋಪಾನದ್ದಾನಪ್ರಶಂಸಾ ಎನ್ನುವ ತೊಂಭತ್ತೆಂಟನೇ ಅಧ್ಯಾಯವು.