ಅನುಶಾಸನ ಪರ್ವ: ದಾನಧರ್ಮ ಪರ್ವ
೯
ಸೃಗಾಲ-ವಾನರ ಸಂವಾದ
“ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಕೊಡದೇ ಇದ್ದವರಿಗೆ ಏನಾಗುತ್ತದೆ?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ನರಿ ಮತ್ತು ಕಪಿಯ ಸಂವಾದವನ್ನು ಉದಾಹರಿಸಿ, ಅಂಥವರು ಅಶುಭ ಯೋನಿಗಳಲ್ಲಿ ಜನ್ಮತಳೆಯುತ್ತಾರೆ ಎನ್ನುವುದು (೧-೨೪).
13009001 ಯುಧಿಷ್ಠಿರ ಉವಾಚ|
13009001a ಬ್ರಾಹ್ಮಣಾನಾಂ ತು ಯೇ ಲೋಕೇ ಪ್ರತಿಶ್ರುತ್ಯ ಪಿತಾಮಹ|
13009001c ನ ಪ್ರಯಚ್ಚಂತಿ ಮೋಹಾತ್ತೇ ಕೇ ಭವಂತಿ ಮಹಾಮತೇ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಮತೇ! ಲೋಕದಲ್ಲಿ ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಮೋಹದಿಂದ ಕೊಡದೇ ಇದ್ದರೆ ಅಂಥವರಿಗೆ ಏನಾಗುತ್ತದೆ?
13009002a ಏತನ್ಮೇ ತತ್ತ್ವತೋ ಬ್ರೂಹಿ ಧರ್ಮಂ ಧರ್ಮಭೃತಾಂ ವರ|
13009002c ಪ್ರತಿಶ್ರುತ್ಯ ದುರಾತ್ಮಾನೋ ನ ಪ್ರಯಚ್ಚಂತಿ ಯೇ ನರಾಃ||
ಧರ್ಮಭೃತರಲ್ಲಿ ಶ್ರೇಷ್ಠ! ಕೊಡುತ್ತೇನೆಂದು ಹೇಳಿ ಕೊಡದೇ ಇರುವ ದುರಾತ್ಮ ನರರಿಗಾಗುವುದರ ಕುರಿತು ತತ್ತ್ವತಃ ಹೇಳು.”
13009003 ಭೀಷ್ಮ ಉವಾಚ|
13009003a ಯೋ ನ ದದ್ಯಾತ್ಪ್ರತಿಶ್ರುತ್ಯ ಸ್ವಲ್ಪಂ ವಾ ಯದಿ ವಾ ಬಹು|
13009003c ಆಶಾಸ್ತಸ್ಯ ಹತಾಃ ಸರ್ವಾಃ ಕ್ಲೀಬಸ್ಯೇವ ಪ್ರಜಾಫಲಮ್||
ಭೀಷ್ಮನು ಹೇಳಿದನು: “ಸ್ವಲ್ಪವಾಗಲೀ ಅಧಿಕವಾಗಲೀ ಕೊಡುತ್ತೇನೆಂದು ಹೇಳಿ ಕೊಡದೇ ಇರುವವನ ಆಶಯಗಳು ನಪುಂಸಕನಿಗೆ ಸಂತಾನದ ಆಶೆಯಂತೆ ಎಲ್ಲವೂ ನಿಷ್ಫಲವಾಗುತ್ತವೆ.
13009004a ಯಾಂ ರಾತ್ರಿಂ ಜಾಯತೇ ಪಾಪೋ ಯಾಂ ಚ ರಾತ್ರಿಂ ವಿನಶ್ಯತಿ|
13009004c ಏತಸ್ಮಿನ್ನಂತರೇ ಯದ್ಯತ್ಸುಕೃತಂ ತಸ್ಯ ಭಾರತ|
13009004e ಯಚ್ಚ ತಸ್ಯ ಹುತಂ ಕಿಂ ಚಿತ್ಸರ್ವಂ ತಸ್ಯೋಪಹನ್ಯತೇ||
ಭಾರತ! ಆ ಪಾಪಿಯು ಹುಟ್ಟಿದ ರಾತ್ರಿಯಿಂದ ಹಿಡಿದು ಮರಣಹೊಂದುವ ರಾತ್ರಿಯವರೆಗೆ ಏನೆಲ್ಲ ಮಾಡಿರುತ್ತಾನೋ, ಏನನ್ನಾದರೂ ಹೋಮ-ದಾನ-ತಪಸ್ಸುಗಳನ್ನು ಮಾಡಿದ್ದರೂ – ಅವೆಲ್ಲವೂ ನಷ್ಟವಾಗಿಹೋಗುತ್ತವೆ.
13009005a ಅತ್ರೈತದ್ವಚನಂ ಪ್ರಾಹುರ್ಧರ್ಮಶಾಸ್ತ್ರವಿದೋ ಜನಾಃ|
13009005c ನಿಶಮ್ಯ ಭರತಶ್ರೇಷ್ಠ ಬುದ್ಧ್ಯಾ ಪರಮಯುಕ್ತಯಾ||
ಇದರ ಕುರಿತು ಧರ್ಮಶಾಸ್ತ್ರಗಳನ್ನು ತಿಳಿದ ಜನರು ಹೇಳುತ್ತಾರೆ. ಭರತಶ್ರೇಷ್ಠ! ಇದನ್ನು ಪರಮ ಯುಕ್ತನಾಗಿ ಬುದ್ಧಿಯಿಂದ ಕೇಳು.
13009006a ಅಪಿ ಚೋದಾಹರಂತೀಮಂ ಧರ್ಮಶಾಸ್ತ್ರವಿದೋ ಜನಾಃ|
13009006c ಅಶ್ವಾನಾಂ ಶ್ಯಾಮಕರ್ಣಾನಾಂ ಸಹಸ್ರೇಣ ಸ ಮುಚ್ಯತೇ||
ಧರ್ಮಶಾಸ್ತ್ರಗಳನ್ನು ತಿಳಿದ ಜನರು ಇದನ್ನೂ ಕೂಡ ಉದಾಹರಿಸುತ್ತಾರೆ: ಶ್ಯಾಮವರ್ಣದ ಕಿವಿಗಳಿರುವ ಸಹಸ್ರ ಅಶ್ವಗಳನ್ನು ದಾನಮಾಡುವುದರಿಂದ ಪ್ರತಿಜ್ಞಾಭಂಗದ ಪಾಪದಿಂದ ವಿಮುಕ್ತನಾಗುತ್ತಾನೆ.
13009007a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್|
13009007c ಸೃಗಾಲಸ್ಯ ಚ ಸಂವಾದಂ ವಾನರಸ್ಯ ಚ ಭಾರತ||
ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ನರಿ ಮತ್ತು ಕಪಿಯ ಸಂವಾದವನ್ನು ಉದಾಹರಿಸುತ್ತಾರೆ.
13009008a ತೌ ಸಖಾಯೌ ಪುರಾ ಹ್ಯಾಸ್ತಾಂ ಮಾನುಷತ್ವೇ ಪರಂತಪ|
13009008c ಅನ್ಯಾಂ ಯೋನಿಂ ಸಮಾಪನ್ನೌ ಸಾರ್ಗಾಲೀಂ ವಾನರೀಂ ತಥಾ||
ಪರಂತಪ! ಹಿಂದೆ ಮನುಷ್ಯಜನ್ಮದಲ್ಲಿ ಸಖರಾಗಿದ್ದ ಇಬ್ಬರು ಇನ್ನೊಂದು ಜನ್ಮದಲ್ಲಿ ನರಿ ಮತ್ತು ಕಪಿಯ ಯೋನಿಗಳಲ್ಲಿ ಜನಿಸಿದರು.
13009009a ತತಃ ಪರಾಸೂನ್ಖಾದಂತಂ ಸೃಗಾಲಂ ವಾನರೋಽಬ್ರವೀತ್|
13009009c ಶ್ಮಶಾನಮಧ್ಯೇ ಸಂಪ್ರೇಕ್ಷ್ಯ ಪೂರ್ವಜಾತಿಮನುಸ್ಮರನ್||
ಆಗ ಶ್ಮಶಾನಮಧ್ಯದಲ್ಲಿ ಶವಗಳನ್ನು ತಿನ್ನುತ್ತಿದ್ದ ನರಿಯನ್ನು ನೋಡಿ ಪೂರ್ವಜನ್ಮವನ್ನು ಸ್ಮರಿಸಿಕೊಂಡು ಕಪಿಯು ಹೇಳಿತು:
13009010a ಕಿಂ ತ್ವಯಾ ಪಾಪಕಂ ಕರ್ಮ ಕೃತಂ ಪೂರ್ವಂ ಸುದಾರುಣಮ್|
13009010c ಯಸ್ತ್ವಂ ಶ್ಮಶಾನೇ ಮೃತಕಾನ್ಪೂತಿಕಾನತ್ಸಿ ಕುತ್ಸಿತಾನ್||
“ಶ್ಮಶಾನದಲ್ಲಿ ಈ ರೀತಿ ಕೊಳೆಯುತ್ತಿರುವ ಮೃತಶರೀರಗಳನ್ನು ತಿನ್ನುತ್ತಿರುವ ನೀನು ಹಿಂದಿನ ಜನ್ಮದಲ್ಲಿ ಯಾವ ಸುದಾರುಣ ಪಾಪಕರ್ಮವನ್ನು ಮಾಡಿದ್ದೆ?”
13009011a ಏವಮುಕ್ತಃ ಪ್ರತ್ಯುವಾಚ ಸೃಗಾಲೋ ವಾನರಂ ತದಾ|
13009011c ಬ್ರಾಹ್ಮಣಸ್ಯ ಪ್ರತಿಶ್ರುತ್ಯ ನ ಮಯಾ ತದುಪಾಕೃತಮ್||
ಇದನ್ನು ಕೇಳಿ ನರಿಯು ಕಪಿಗೆ ಹೇಳಿತು: “ಬ್ರಾಹ್ಮಣನಿಗೆ ಕೊಡುತ್ತೇನೆಂದು ಹೇಳಿ ಅದರಂತೆ ನಾನು ಮಾಡಲಿಲ್ಲ.
13009012a ತತ್ಕೃತೇ ಪಾಪಿಕಾಂ ಯೋನಿಮಾಪನ್ನೋಽಸ್ಮಿ ಪ್ಲವಂಗಮ|
13009012c ತಸ್ಮಾದೇವಂವಿಧಂ ಭಕ್ಷ್ಯಂ ಭಕ್ಷಯಾಮಿ ಬುಭುಕ್ಷಿತಃ||
ಕಪಿಯೇ! ಅದನ್ನು ಮಾಡಿದುದಕ್ಕಾಗಿ ನಾನು ಈ ಪಾಪಿ ಯೋನಿಯಲ್ಲಿ ಜನಿಸಿದ್ದೇನೆ. ಆದುದರಿಂದಲೇ ಹಸಿದ ನಾನು ಈ ವಿಧದ ಆಹಾರವನ್ನು ತಿನ್ನುತ್ತಿದ್ದೇನೆ.”
13009013a ಇತ್ಯೇತದ್ಬ್ರುವತೋ ರಾಜನ್ಬ್ರಾಹ್ಮಣಸ್ಯ ಮಯಾ ಶ್ರುತಮ್|
13009013c ಕಥಾಂ ಕಥಯತಃ ಪುಣ್ಯಾಂ ಧರ್ಮಜ್ಞಸ್ಯ ಪುರಾತನೀಮ್||
ರಾಜನ್! ಪುರಾತನ ಪುಣ್ಯ ಕಥೆಗಳನ್ನು ಹೇಳುತ್ತಿದ್ದ ಬ್ರಾಹ್ಮಣನಿಂದ ನಾನು ಇದನ್ನು ಕೇಳಿದೆನು.
13009014a ಶ್ರುತಂ ಚಾಪಿ ಮಯಾ ಭೂಯಃ ಕೃಷ್ಣಸ್ಯಾಪಿ ವಿಶಾಂ ಪತೇ|
13009014c ಕಥಾಂ ಕಥಯತಃ ಪೂರ್ವಂ ಬ್ರಾಹ್ಮಣಂ ಪ್ರತಿ ಪಾಂಡವ||
ವಿಶಾಂಪತೇ! ಪಾಂಡವ! ಅಲ್ಲದೇ ಇದೇ ಕಥೆಯನ್ನು ಹಿಂದೆ ಕೃಷ್ಣನು ಬ್ರಾಹ್ಮಣನೊಬ್ಬನಿಗೆ ಹೇಳುತ್ತಿರುವಾಗಲೂ ಕೇಳಿದ್ದೆ.
13009015a ಏವಮೇವ ಚ ಮಾಂ ನಿತ್ಯಂ ಬ್ರಾಹ್ಮಣಾಃ ಸಂದಿಶಂತಿ ವೈ|
13009015c ಪ್ರತಿಶ್ರುತ್ಯ ಭವೇದ್ದೇಯಂ ನಾಶಾ ಕಾರ್ಯಾ ಹಿ ಬ್ರಾಹ್ಮಣೈಃ||
ಬ್ರಾಹ್ಮಣರೂ ಕೂಡ ನಿತ್ಯವೂ ನನಗೆ ಇದನ್ನೇ ಉಪದೇಶಿಸುತ್ತಿದ್ದರು. ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಕೊಡಲೇ ಬೇಕು. ಅವರಲ್ಲಿ ಆಶೆಯನ್ನು ಹುಟ್ಟಿಸಬಾರದು.
13009016a ಬ್ರಾಹ್ಮಣೋ ಹ್ಯಾಶಯಾ ಪೂರ್ವಂ ಕೃತಯಾ ಪೃಥಿವೀಪತೇ|
13009016c ಸುಸಮಿದ್ಧೋ ಯಥಾ ದೀಪ್ತಃ ಪಾವಕಸ್ತದ್ವಿಧಃ ಸ್ಮೃತಃ||
ಪೃಥಿವೀಪತೇ! ಮೊದಲೇ ಹುಟ್ಟಿಸಿದ ಆಶೆಯಿಂದ ಬ್ರಾಹ್ಮಣನು ಕಾಷ್ಠಗಳಿಂದ ಪ್ರಜ್ವಲಿತನಾದ ಯಜ್ಞೇಶ್ವರನಂತೆ ಉದ್ದೀಪ್ತನಾಗುತ್ತಾನೆ.
13009017a ಯಂ ನಿರೀಕ್ಷೇತ ಸಂಕ್ರುದ್ಧ ಆಶಯಾ ಪೂರ್ವಜಾತಯಾ|
13009017c ಪ್ರದಹೇತ ಹಿ ತಂ ರಾಜನ್ಕಕ್ಷಮಕ್ಷಯ್ಯಭುಗ್ಯಥಾ||
ರಾಜನ್! ಮೊದಲು ಅವನಲ್ಲಿ ಆಶೆಯನ್ನು ಹುಟ್ಟಿಸಿದ್ದವನನ್ನು ನೋಡಿಯೇ ಅಕ್ಷಯಭುಂಜಿಯಾದ ಅಗ್ನಿಯಂತೆ ಅವನನ್ನು ಸುಟ್ಟುಬಿಡುತ್ತಾನೆ.
13009018a ಸ ಏವ ಹಿ ಯದಾ ತುಷ್ಟೋ ವಚಸಾ ಪ್ರತಿನಂದತಿ|
13009018c ಭವತ್ಯಗದಸಂಕಾಶೋ ವಿಷಯೇ ತಸ್ಯ ಭಾರತ||
ಭಾರತ! ಅದೇ ರೀತಿ ತುಷ್ಟನಾದವನು ಒಳ್ಳೆಯ ಮಾತುಗಳಿಂದ ರಾಜನನ್ನು ಪ್ರತಿನಂದಿಸುತ್ತಾನೆ. ಅವನ ರಾಜ್ಯದಲ್ಲಿ ಚಿಕಿತ್ಸಕನಂತೆ ಇರುತ್ತಾನೆ.
13009019a ಪುತ್ರಾನ್ಪೌತ್ರಾನ್ಪಶೂಂಶ್ಚೈವ ಬಾಂಧವಾನ್ಸಚಿವಾಂಸ್ತಥಾ|
13009019c ಪುರಂ ಜನಪದಂ ಚೈವ ಶಾಂತಿರಿಷ್ಟೇವ ಪುಷ್ಯತಿ||
ಸಂತುಷ್ಟ ಬ್ರಾಹ್ಮಣನು ದಾನಿಯನ್ನೂ, ದಾನಿಯ ಪುತ್ರ-ಪೌತ್ರರನ್ನೂ, ಪಶುಗಳನ್ನೂ, ಬಾಂಧವರನ್ನೂ, ಸಚಿವರನ್ನೂ, ಪುರ-ಗ್ರಾಮ ಪ್ರದೇಶಗಳನ್ನೂ ಶಾಂತಿ-ಕ್ಷೇಮದಿಂದ ಪಾಲಿಸಬಲ್ಲನು.
13009020a ಏತದ್ಧಿ ಪರಮಂ ತೇಜೋ ಬ್ರಾಹ್ಮಣಸ್ಯೇಹ ದೃಶ್ಯತೇ|
13009020c ಸಹಸ್ರಕಿರಣಸ್ಯೇವ ಸವಿತುರ್ಧರಣೀತಲೇ||
ಈ ರೀತಿ ಸಹಸ್ರಕಿರಣ ಸವಿತುವಿನ ತೇಜಸ್ಸಿನಂತೆ ಬ್ರಾಹ್ಮಣನ ಪರಮ ತೇಜಸ್ಸು ಭೂಮಿಯಲ್ಲಿ ಕಂಗೊಳಿಸುತ್ತದೆ.
13009021a ತಸ್ಮಾದ್ದಾತವ್ಯಮೇವೇಹ ಪ್ರತಿಶ್ರುತ್ಯ ಯುಧಿಷ್ಠಿರ|
13009021c ಯದೀಚ್ಚೇಚ್ಚೋಭನಾಂ ಜಾತಿಂ ಪ್ರಾಪ್ತುಂ ಭರತಸತ್ತಮ||
ಯುಧಿಷ್ಠಿರ! ಭರತಸತ್ತಮ! ಆದುದರಿಂದ ಶುಭ ಜನ್ಮವನ್ನು ಪಡೆಯಲು ಬಯಸುವವನು ಕೊಡುತ್ತೇನೆಂದು ಹೇಳಿದುದನ್ನು ಕೊಡಬೇಕು.
13009022a ಬ್ರಾಹ್ಮಣಸ್ಯ ಹಿ ದತ್ತೇನ ಧ್ರುವಂ ಸ್ವರ್ಗೋ ಹ್ಯನುತ್ತಮಃ|
13009022c ಶಕ್ಯಂ ಪ್ರಾಪ್ತುಂ ವಿಶೇಷೇಣ ದಾನಂ ಹಿ ಮಹತೀ ಕ್ರಿಯಾ||
ಬ್ರಾಹ್ಮಣನಿಗೆ ನೀಡಿದ ದಾನವು ವಿಶೇಷವಾಗಿ ಅನುತ್ತಮ ಸ್ವರ್ಗವನ್ನು ನಿಶ್ಚಿತವಾಗಿ ಪಡೆಯಲು ಶಕ್ಯವಾಗುತ್ತದೆ. ದಾನವೇ ಮಹಾಕ್ರಿಯೆಯು.
13009023a ಇತೋ ದತ್ತೇನ ಜೀವಂತಿ ದೇವತಾಃ ಪಿತರಸ್ತಥಾ|
13009023c ತಸ್ಮಾದ್ದಾನಾನಿ ದೇಯಾನಿ ಬ್ರಾಹ್ಮಣೇಭ್ಯೋ ವಿಜಾನತಾ||
ಈ ರೀತಿಯ ದಾನದಿಂದಲೇ ದೇವತೆಗಳು ಮತ್ತು ಪಿತೃಗಳು ಜೀವಿಸುತ್ತಾರೆ. ಆದುದರಿಂದ ಬ್ರಾಹ್ಮಣರಿಗೆ ದಾನಮಾಡಬೇಕು ಎಂದು ತಿಳಿದಿದ್ದಾರೆ.
13009024a ಮಹದ್ಧಿ ಭರತಶ್ರೇಷ್ಠ ಬ್ರಾಹ್ಮಣಸ್ತೀರ್ಥಮುಚ್ಯತೇ|
13009024c ವೇಲಾಯಾಂ ನ ತು ಕಸ್ಯಾಂ ಚಿದ್ಗಚ್ಚೇದ್ವಿಪ್ರೋ ಹ್ಯಪೂಜಿತಃ||
ಭರತಶ್ರೇಷ್ಠ! ಬ್ರಾಹ್ಮಣನೇ ಮಹಾತೀರ್ಥ ಎಂದು ಹೇಳುತ್ತಾರೆ. ಯಾವುದೇ ಸಮದಲ್ಲಿಯೂ ಆಗಮಿಸಿದ ಬ್ರಾಹ್ಮಣನು ಸತ್ಕೃತನಾಗದೇ ಹಿಂತಿರುಗಿ ಹೋಗಬಾರದು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸೃಗಾಲವಾನರಸಂವಾದೇ ನವಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸೃಗಾಲವಾನರಸಂವಾದ ಎನ್ನುವ ಒಂಭತ್ತನೇ ಅಧ್ಯಾಯವು.