Anushasana Parva: Chapter 82

ಅನುಶಾಸನ ಪರ್ವ: ದಾನಧರ್ಮ ಪರ್ವ

೮೨

ಗೋಲೋಕಪ್ರಶ್ನೆ

ಬ್ರಹ್ಮನು ಇಂದ್ರನಿಗೆ ಗೋವುಗಳ ಮತ್ತು ಗೋಲೋಕಗಳ ಉತ್ಕರ್ಷವನ್ನು ಹೇಳಿದುದು (೧-೪೭).

13082001 ಭೀಷ್ಮ ಉವಾಚ|

13082001a ಯೇ ಚ ಗಾಃ ಸಂಪ್ರಯಚ್ಚಂತಿ ಹುತಶಿಷ್ಟಾಶಿನಶ್ಚ ಯೇ|

13082001c ತೇಷಾಂ ಸತ್ರಾಣಿ ಯಜ್ಞಾಶ್ಚ ನಿತ್ಯಮೇವ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ನಿತ್ಯವೂ ಗೋವುಗಳನ್ನು ದಾನಮಾಡುವ ಮತ್ತು ಯಜ್ಞಶಿಷ್ಟವನ್ನು ಭುಂಜಿಸುವವನಿಗೆ ನಿತ್ಯ ಅನ್ನದಾನಮಾಡಿದ ಮತ್ತು ಯಜ್ಞಮಾಡಿದ ಫಲವು ಲಭಿಸುತ್ತದೆ.

13082002a ಋತೇ ದಧಿಘೃತೇನೇಹ ನ ಯಜ್ಞಃ ಸಂಪ್ರವರ್ತತೇ|

13082002c ತೇನ ಯಜ್ಞಸ್ಯ ಯಜ್ಞತ್ವಮತೋಮೂಲಂ ಚ ಲಕ್ಷ್ಯತೇ||

ಮೊಸರು-ತುಪ್ಪಗಳಿಲ್ಲದೇ ಯಜ್ಞವು ಸಂಪನ್ನವಾಗುವುದಿಲ್ಲ. ಅವುಗಳಿಂದಲೇ ಯಜ್ಞಕ್ಕೆ ಯಜ್ಞತ್ವವು ಪ್ರಾಪ್ತವಾಗುತ್ತದೆ. ಆದುದರಿಂದಲೇ ಗೋವು ಯಜ್ಞಕ್ಕೆ ಮೂಲವೆಂದು ಹೇಳುತ್ತಾರೆ.

13082003a ದಾನಾನಾಮಪಿ ಸರ್ವೇಷಾಂ ಗವಾಂ ದಾನಂ ಪ್ರಶಸ್ಯತೇ|

13082003c ಗಾವಃ ಶ್ರೇಷ್ಠಾಃ ಪವಿತ್ರಾಶ್ಚ ಪಾವನಂ ಹ್ಯೇತದುತ್ತಮಮ್||

ಎಲ್ಲ ದಾನಕ್ಕಿಂತಲೂ ಗೋದಾನವನ್ನು ಪ್ರಶಂಸಿಸುತ್ತಾರೆ. ಗೋವುಗಳು ಶ್ರೇಷ್ಠವಾದವುಗಳು, ಪವಿತ್ರವಾದವುಗಳು, ಪಾವನವು ಮತ್ತು ಉತ್ತಮೋತ್ತಮವಾದವುಗಳು.

13082004a ಪುಷ್ಟ್ಯರ್ಥಮೇತಾಃ ಸೇವೇತ ಶಾಂತ್ಯರ್ಥಮಪಿ ಚೈವ ಹ|

13082004c ಪಯೋ ದಧಿ ಘೃತಂ ಯಾಸಾಂ ಸರ್ವಪಾಪಪ್ರಮೋಚನಮ್||

ಪುಷ್ಟಿಗಾಗಿ ಮತ್ತು ಶಾಂತಿಗಾಗಿ ಗೋವಿನ ಸೇವೆಮಾಡಬೇಕು. ಗೋವಿನ ಹಾಲು, ಮೊಸರು ಮತ್ತು ತುಪ್ಪ ಇವು ಸರ್ವಪಾಪಗಳಿಂದ ಮುಕ್ತರನ್ನಾಗಿಸುತ್ತದೆ.

13082005a ಗಾವಸ್ತೇಜಃ ಪರಂ ಪ್ರೋಕ್ತಮಿಹ ಲೋಕೇ ಪರತ್ರ ಚ|

13082005c ನ ಗೋಭ್ಯಃ ಪರಮಂ ಕಿಂ ಚಿತ್ಪವಿತ್ರಂ ಪುರುಷರ್ಷಭ||

ಪುರುಷರ್ಷಭ! ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಗೋವುಗಳು ಪರಮತೇಜಸ್ವಿಗಳೆಂದು ಹೇಳುತ್ತಾರೆ. ಗೋವುಗಳಿಗಿಂತ ಪರಮ ಪವಿತ್ರವಾದುದು ಬೇರೆ ಯಾವುದೂ ಇಲ್ಲ.

13082006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13082006c ಪಿತಾಮಹಸ್ಯ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ||

ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಪಿತಾಮಹ ಮತ್ತು ಇಂದ್ರರ ಸಂವಾದವನ್ನು ಉದಾಹರಿಸುತ್ತಾರೆ.

13082007a ಪರಾಭೂತೇಷು ದೈತ್ಯೇಷು ಶಕ್ರೇ ತ್ರಿಭುವನೇಶ್ವರೇ|

13082007c ಪ್ರಜಾಃ ಸಮುದಿತಾಃ ಸರ್ವಾಃ ಸತ್ಯಧರ್ಮಪರಾಯಣಾಃ||

ಶಕ್ರನು ದೈತ್ಯರನ್ನು ಪರಾಭವಗೊಳಿಸಿ ತ್ರಿಭುವನಗಳ ಈಶ್ವರನಾದಾಗ ಸರ್ವ ಪ್ರಜೆಗಳೂ ಸತ್ಯಧರ್ಮಪರಾಯಣರಾಗಿದ್ದುಕೊಂಡು ಮುದಿತರಾಗಿದ್ದರು.

13082008a ಅಥರ್ಷಯಃ ಸಗಂಧರ್ವಾಃ ಕಿಂನರೋರಗರಾಕ್ಷಸಾಃ|

13082008c ದೇವಾಸುರಸುಪರ್ಣಾಶ್ಚ ಪ್ರಜಾನಾಂ ಪತಯಸ್ತಥಾ|

13082008e ಪರ್ಯುಪಾಸಂತ ಕೌರವ್ಯ ಕದಾ ಚಿದ್ವೈ ಪಿತಾಮಹಮ್||

ಕೌರವ್ಯ! ಆಗ ಒಮ್ಮೆ ಋಷಿಗಳು, ಗಂಧರ್ವರು, ಕಿನ್ನರ-ಉರಗ-ರಾಕ್ಷಸರು, ದೇವ-ಅಸುರ-ಸುಪರ್ಣರು ಪ್ರಜೆಗಳೊಂದಿಗೆ ಪಿತಾಮಹನನ್ನು ಉಪಾಸಿಸುತ್ತಿದ್ದರು.

13082009a ನಾರದಃ ಪರ್ವತಶ್ಚೈವ ವಿಶ್ವಾವಸುಹಹಾಹುಹೂ|

13082009c ದಿವ್ಯತಾನೇಷು ಗಾಯಂತಃ ಪರ್ಯುಪಾಸಂತ ತಂ ಪ್ರಭುಮ್||

ನಾರದ-ಪರ್ವತರೂ, ವಿಶ್ವಾವಸು, ಹಹಾ ಮತ್ತು ಹುಹೂ ಇವರೂ ಕೂಡ ದಿವ್ಯ ತಾಳ-ಗಾನಗಳಿಂದ ಪ್ರಭುವನ್ನು ಉಪಾಸಿಸುತ್ತಿದ್ದರು.

13082010a ತತ್ರ ದಿವ್ಯಾನಿ ಪುಷ್ಪಾಣಿ ಪ್ರಾವಹತ್ಪವನಸ್ತಥಾ|

13082010c ಆಜಹ್ರುರೃತವಶ್ಚಾಪಿ ಸುಗಂಧೀನಿ ಪೃಥಕ್ ಪೃಥಕ್|

ಪವನನು ಅಲ್ಲಿಗೆ ದಿವ್ಯ ಪುಷ್ಪಗಳನ್ನು ಹೊತ್ತುತಂದನು. ಋತುಗಳು ಪ್ರತ್ಯೇಕ ಪ್ರತ್ಯೇಕವಾಗಿ ಸುಗಂಧಿತ ಪುಷ್ಪಗಳನ್ನು ತಂದವು.

13082011a ತಸ್ಮಿನ್ದೇವಸಮಾವಾಯೇ ಸರ್ವಭೂತಸಮಾಗಮೇ|

13082011c ದಿವ್ಯವಾದಿತ್ರಸಂಘುಷ್ಟೇ ದಿವ್ಯಸ್ತ್ರೀಚಾರಣಾವೃತೇ|

13082011e ಇಂದ್ರಃ ಪಪ್ರಚ್ಚ ದೇವೇಶಮಭಿವಾದ್ಯ ಪ್ರಣಮ್ಯ ಚ||

ಆ ದೇವತೆಗಳ ಮತ್ತು ಸರ್ವಭೂತಗಳ ಸಮಾಗಮದಲ್ಲಿ ದಿವ್ಯವಾದ್ಯಗಳು ಮೊಳಗುತ್ತಿರಲು ಮತ್ತು ದಿವ್ಯಸ್ತ್ರೀಯರು ಮತ್ತು ಚಾರಣರು ಸುತ್ತುವರೆದಿರಲು ಇಂದ್ರನು ದೇವೇಶನನ್ನು ಅಭಿವಾದಿಸಿ ನಮಸ್ಕರಿಸಿ ಕೇಳಿದನು:

13082012a ದೇವಾನಾಂ ಭಗವನ್ಕಸ್ಮಾಲ್ಲೋಕೇಶಾನಾಂ ಪಿತಾಮಹ|

13082012c ಉಪರಿಷ್ಟಾದ್ಗವಾಂ ಲೋಕ ಏತದಿಚ್ಚಾಮಿ ವೇದಿತುಮ್||

“ಭಗವನ್! ಪಿತಾಮಹ! ಯಾವ ಕಾರಣಕ್ಕಾಗಿ ಗೋಲೋಕವು ದೇವತೆಗಳ ಮತ್ತು ಲೋಕಪಾಲರ ಲೋಕಗಳಿಗಿಂತಲೂ ಮೇಲಿದೆ? ಈ ವಿಷಯವನ್ನು ತಿಳಿಯ ಬಯಸುತ್ತೇನೆ.

13082013a ಕಿಂ ತಪೋ ಬ್ರಹ್ಮಚರ್ಯಂ ವಾ ಗೋಭಿಃ ಕೃತಮಿಹೇಶ್ವರ|

13082013c ದೇವಾನಾಮುಪರಿಷ್ಟಾದ್ಯದ್ವಸಂತ್ಯರಜಸಃ ಸುಖಮ್||

ಈಶ್ವರ! ಅವರು ಯಾವ ತಪಸ್ಸನ್ನು ಮಾಡಿದರೆಂದು ಅಥವಾ ಬ್ರಹ್ಮಚರ್ಯವನ್ನು ನಡೆಸಿದರೆಂದು ಗೋವುಗಳು ರಜೋಗುಣರಹಿತರಾಗಿ ಸುಖದಿಂದ ವಾಸಿಸುತ್ತಿದ್ದಾರೆ?”

13082014a ತತಃ ಪ್ರೋವಾಚ ತಂ ಬ್ರಹ್ಮಾ ಶಕ್ರಂ ಬಲನಿಷೂದನಮ್|

13082014c ಅವಜ್ಞಾತಾಸ್ತ್ವಯಾ ನಿತ್ಯಂ ಗಾವೋ ಬಲನಿಷೂದನ||

ಆಗ ಬ್ರಹ್ಮನು ಬಲನಿಷೂದನ ಶಕ್ರನಿಗೆ ಹೇಳಿದನು: “ಬಲನಿಷೂದನ! ನಿತ್ಯವೂ ನೀನು ಗೋವುಗಳನ್ನು ಅನಾದರಿಸುತ್ತಿದ್ದೀಯೆ.

13082015a ತೇನ ತ್ವಮಾಸಾಂ ಮಾಹಾತ್ಮ್ಯಂ ನ ವೇತ್ಥ ಶೃಣು ತತ್ಪ್ರಭೋ|

13082015c ಗವಾಂ ಪ್ರಭಾವಂ ಪರಮಂ ಮಾಹಾತ್ಮ್ಯಂ ಚ ಸುರರ್ಷಭ||

ಪ್ರಭೋ! ಆದುದರಿಂದ ನೀನು ಅವುಗಳ ಮಹಾತ್ಮೆಯನ್ನು ತಿಳಿದಿಲ್ಲ. ಸುರರ್ಷಭ! ಗೋವುಗಳ ಪ್ರಭಾವವನ್ನೂ ಪರಮ ಮಹಾತ್ಮೆಯನ್ನೂ ಹೇಳುತ್ತೇನೆ. ಕೇಳು.

13082016a ಯಜ್ಞಾಂಗಂ ಕಥಿತಾ ಗಾವೋ ಯಜ್ಞ ಏವ ಚ ವಾಸವ|

13082016c ಏತಾಭಿಶ್ಚಾಪ್ಯೃತೇ ಯಜ್ಞೋ ನ ಪ್ರವರ್ತೇತ್ಕಥಂ ಚನ||

ವಾಸವ! ಗೋವುಗಳನ್ನು ಯಜ್ಞಾಂಗವೆಂದೂ ಸಾಕ್ಷಾತ್ ಯಜ್ಞವೇ ಎಂದೂ ಹೇಳುತ್ತಾರೆ. ಏಕೆಂದರೆ ಅವುಗಳಿಲ್ಲದೇ ಯಜ್ಞವೇ ನಡೆಯುವುದಿಲ್ಲ.

13082017a ಧಾರಯಂತಿ ಪ್ರಜಾಶ್ಚೈವ ಪಯಸಾ ಹವಿಷಾ ತಥಾ|

13082017c ಏತಾಸಾಂ ತನಯಾಶ್ಚಾಪಿ ಕೃಷಿಯೋಗಮುಪಾಸತೇ||

ಗೋವುಗಳು ಹಾಲು-ಹವಿಸ್ಸುಗಳಿಂದ ಪ್ರಜೆಗಳನ್ನು ಪಾಲಿಸುತ್ತವೆ. ಇವುಗಳಲ್ಲಿ ಹುಟ್ಟುವ ಗಂಡುಕರುಗಳು ಕೃಷಿಯ ಕೆಲಸಕ್ಕೆ ಅನುವಾಗುತ್ತವೆ.

13082018a ಜನಯಂತಿ ಚ ಧಾನ್ಯಾನಿ ಬೀಜಾನಿ ವಿವಿಧಾನಿ ಚ|

13082018c ತತೋ ಯಜ್ಞಾಃ ಪ್ರವರ್ತಂತೇ ಹವ್ಯಂ ಕವ್ಯಂ ಚ ಸರ್ವಶಃ||

ಗೋವುಗಳು ಧಾನ್ಯಗಳನ್ನೂ ವಿವಿಧ ಬೀಜಗಳನ್ನೂ ಉತ್ಪಾದಿಸುತ್ತವೆ. ಅದರಿಂದಲೇ ಎಲ್ಲೆಡೆ ಯಜ್ಞಗಳು ಮತ್ತು ಹವ್ಯ-ಕವ್ಯಗಳು[1] ನಡೆಯುತ್ತವೆ.

13082019a ಪಯೋ ದಧಿ ಘೃತಂ ಚೈವ ಪುಣ್ಯಾಶ್ಚೈತಾಃ ಸುರಾಧಿಪ|

13082019c ವಹಂತಿ ವಿವಿಧಾನ್ಭಾರಾನ್ ಕ್ಷುತ್ತೃಷ್ಣಾಪರಿಪೀಡಿತಾಃ||

ಸುರಾಧಿಪ! ಪುಣ್ಯರೂಪೀ ಗೋವುಗಳು ಹಾಲು, ಮೊಸರು ಮತ್ತು ತುಪ್ಪವನ್ನು ನೀಡುತ್ತವೆ. ಎತ್ತುಗಳು ಹಸಿವು-ಬಾಯಾರಿಕೆಗಳಿಂದ ಬಳಲಿದ್ದರೂ ವಿವಿಧ ಭಾರಗಳನ್ನು ಹೊರುತ್ತವೆ.

13082020a ಮುನೀಂಶ್ಚ ಧಾರಯಂತೀಹ ಪ್ರಜಾಶ್ಚೈವಾಪಿ ಕರ್ಮಣಾ|

13082020c ವಾಸವಾಕೂಟವಾಹಿನ್ಯಃ ಕರ್ಮಣಾ ಸುಕೃತೇನ ಚ|

13082020e ಉಪರಿಷ್ಟಾತ್ತತೋಽಸ್ಮಾಕಂ ವಸಂತ್ಯೇತಾಃ ಸದೈವ ಹಿ||

ಹೀಗೆ ಗೋವುಗಳು ತಮ್ಮ ಕರ್ಮಗಳಿಂದ ಮುನಿಗಳನ್ನು ಮತ್ತು ಪ್ರಜೆಗಳನ್ನು ಪರಿಪಾಲಿಸುತ್ತವೆ. ವಾಸವ! ಅವುಗಳ ವ್ಯವಹಾರಗಳಲ್ಲಿ ಕೌಟಿಲ್ಯವೆಂಬುದೇ ಇಲ್ಲ. ಸದಾ ಸತ್ಕರ್ಮಗಳಲ್ಲಿಯೇ ತೊಡಗಿರುತ್ತವೆ. ಈ ಕಾರಣಗಳಿಂದಲೇ ಗೋವುಗಳು ಸದೈವ ನಮಗಿಂತಲೂ ಮೇಲಿನ ಲೋಕದಲ್ಲಿ ವಾಸಿಸುತ್ತವೆ.

13082021a ಏತತ್ತೇ ಕಾರಣಂ ಶಕ್ರ ನಿವಾಸಕೃತಮದ್ಯ ವೈ|

13082021c ಗವಾಂ ದೇವೋಪರಿಷ್ಟಾದ್ಧಿ ಸಮಾಖ್ಯಾತಂ ಶತಕ್ರತೋ||

ಶಕ್ರ! ಶತಕ್ರತೋ! ಹೀಗೆ ಗೋವುಗಳು ದೇವತೆಗಳಿಗಿಂತ ಮೇಲಿನ ಲೋಕಗಳಲ್ಲಿ ವಾಸಿಸುವುದಕ್ಕೆ ಕಾರಣವನ್ನು ಹೇಳಿದ್ದೇನೆ.

13082022a ಏತಾ ಹಿ ವರದತ್ತಾಶ್ಚ ವರದಾಶ್ಚೈವ ವಾಸವ|

13082022c ಸೌರಭ್ಯಃ ಪುಣ್ಯಕರ್ಮಿಣ್ಯಃ ಪಾವನಾಃ ಶುಭಲಕ್ಷಣಾಃ||

ವಾಸವ! ಇಷ್ಟೇ ಅಲ್ಲದೇ ಪುಣ್ಯಕರ್ಮಿಗಳಾದ ಪಾವನರಾದ ಮತ್ತು ಶುಭಲಕ್ಷಣಯುತರಾದ ಸುರಭಿಯ ಮಕ್ಕಳಾದ ಗೋವುಗಳು ವರವನ್ನು ಪಡೆದುಕೊಂಡಿವೆ ಮತ್ತು ವರವನ್ನು ನೀಡುತ್ತವೆ ಕೂಡ.

13082023a ಯದರ್ಥಂ ಗಾ ಗತಾಶ್ಚೈವ ಸೌರಭ್ಯಃ ಸುರಸತ್ತಮ|

13082023c ತಚ್ಚ ಮೇ ಶೃಣು ಕಾರ್ತ್ಸ್ನ್ಯೇನ ವದತೋ ಬಲಸೂದನ||

ಸುರಸತ್ತಮ! ಬಲಸೂದನ! ಯಾವ ಕಾರಣದಿಂದ ಸುರಭಿಯ ಮಕ್ಕಳಾದ ಗೋವುಗಳು ಭೂಲೋಕಕ್ಕೆ ಹೋದವು ಎನ್ನುವುದನ್ನು ಸಂಪೂರ್ಣವಾಗಿ ಹೇಳುತ್ತೇನೆ. ಕೇಳು.

13082024a ಪುರಾ ದೇವಯುಗೇ ತಾತ ದೈತ್ಯೇಂದ್ರೇಷು[2] ಮಹಾತ್ಮಸು|

13082024c ತ್ರೀಽಲ್ಲೋಕಾನನುಶಾಸತ್ಸು ವಿಷ್ಣೌ ಗರ್ಭತ್ವಮಾಗತೇ||

13082025a ಅದಿತ್ಯಾಸ್ತಪ್ಯಮಾನಾಯಾಸ್ತಪೋ ಘೋರಂ ಸುದುಶ್ಚರಮ್|

13082025c ಪುತ್ರಾರ್ಥಮಮರಶ್ರೇಷ್ಠ ಪಾದೇನೈಕೇನ ನಿತ್ಯದಾ||

ಅಯ್ಯಾ! ಹಿಂದೆ ದೇವಯುಗದಲ್ಲಿ ಮಹಾತ್ಮ ದೈತ್ರೇಂದ್ರರು ತ್ರಿಲೋಕಗಳನ್ನು ಆಳುತ್ತಿರುವಾಗ, ಅದಿತಿಯು ಪುತ್ರನಿಗಾಗಿ ನಿತ್ಯವೂ ಒಂದೇ ಕಾಲಮೇಲೆ ನಿಂತು ಘೋರವಾದ ಮತ್ತು ದುಶ್ಚರವಾದ ತಪಸ್ಸನ್ನು ತಪಿಸುತ್ತಿರುವಾಗ, ಮತ್ತು ವಿಷ್ಣುವು ಅವಳ ಗರ್ಭವನ್ನು ಸೇರಿದಾಗಿನ ಸಮಯ.

13082026a ತಾಂ ತು ದೃಷ್ಟ್ವಾ ಮಹಾದೇವೀಂ ತಪ್ಯಮಾನಾಂ ಮಹತ್ತಪಃ|

13082026c ದಕ್ಷಸ್ಯ ದುಹಿತಾ ದೇವೀ ಸುರಭಿರ್ನಾಮ ನಾಮತಃ||

13082027a ಅತಪ್ಯತ ತಪೋ ಘೋರಂ ಹೃಷ್ಟಾ ಧರ್ಮಪರಾಯಣಾ|

13082027c ಕೈಲಾಸಶಿಖರೇ ರಮ್ಯೇ ದೇವಗಂಧರ್ವಸೇವಿತೇ||

ಮಹಾದೇವೀ ಅದಿತಿಯು ಮಹಾತಪಸ್ಸನ್ನು ತಪಿಸುತ್ತಿರುವುದನ್ನು ನೋಡಿ ಸುರಭಿ ಎಂಬ ಹೆಸರಿನ ದಕ್ಷನ ಪುತ್ರಿಯೂ ಕೂಡ ಧರ್ಮಪರಾಯಣಳಾಗಿ ಹೃಷ್ಟಳಾಗಿ ದೇವಗಂಧರ್ವರು ಸೇವಿಸುತ್ತಿದ್ದ ರಮ್ಯ ಕೈಲಾಸಶಿಖರದಲ್ಲಿ ಘೋರ ತಪಸ್ಸನ್ನು ತಪಿಸಿದಳು.

13082028a ವ್ಯತಿಷ್ಠದೇಕಪಾದೇನ ಪರಮಂ ಯೋಗಮಾಸ್ಥಿತಾ|

13082028c ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ||

ಹನ್ನೊಂದು ಸಾವಿರ ವರ್ಷಗಳ ಪರ್ಯಂತ ಪರಮ ಯೋಗಸ್ಥಿತಳಾಗಿ ಅವಳು ಒಂದೇ ಕಾಲಿನ ಮೇಲೆ ನಿಂತಿದ್ದಳು.

13082029a ಸಂತಪ್ತಾಸ್ತಪಸಾ ತಸ್ಯಾ ದೇವಾಃ ಸರ್ಷಿಮಹೋರಗಾಃ|

13082029c ತತ್ರ ಗತ್ವಾ ಮಯಾ ಸಾರ್ಧಂ ಪರ್ಯುಪಾಸಂತ ತಾಂ ಶುಭಾಮ್||

ಋಷಿ-ಮಹಾ ಉರಗಗಳೊಂದಿಗೆ ದೇವತೆಗಳೂ ಕೂಡ ಅವಳ ಆ ತಪಸ್ಸಿನಿಂದ ಸಂತಪ್ತರಾದರು. ಆಗ ಅವರೊಂದಿಗೆ ನಾನು ಆ ಶುಭೆಯು ಇರುವಲ್ಲಿ ಉಪಸ್ಥಿತರಾದೆವು.

13082030a ಅಥಾಹಮಬ್ರುವಂ ತತ್ರ ದೇವೀಂ ತಾಂ ತಪಸಾನ್ವಿತಾಮ್|

13082030c ಕಿಮರ್ಥಂ ತಪ್ಯತೇ ದೇವಿ ತಪೋ ಘೋರಮನಿಂದಿತೇ||

ಆಗ ನಾನು ಆ ತಪಸಾನ್ವಿತೆ ದೇವಿಯಲ್ಲಿ ಕೇಳಿದೆ: “ದೇವಿ! ಅನಿಂದಿತೇ! ಯಾವ ಕಾರಣದಿಂದ ನೀನು ಈ ಘೋರ ತಪಸ್ಸನ್ನು ತಪಿಸುತ್ತಿದ್ದೀಯೆ?”

13082031a ಪ್ರೀತಸ್ತೇಽಹಂ ಮಹಾಭಾಗೇ ತಪಸಾನೇನ ಶೋಭನೇ|

13082031c ವರಯಸ್ವ ವರಂ ದೇವಿ ದಾತಾಸ್ಮೀತಿ ಪುರಂದರ||

ಪುರಂದರ! ಆಗ ನಾನು “ಮಹಾಭಾಗೇ! ಶೋಭನೇ! ದೇವೀ! ನಾನು ಪ್ರೀತನಾಗಿದ್ದೇನೆ. ವರವನ್ನು ವರಿಸು. ಕೊಡುತ್ತೇನೆ.” ಎಂದೆನು.

13082032 ಸುರಭ್ಯುವಾಚ|

13082032a ವರೇಣ ಭಗವನ್ಮಹ್ಯಂ ಕೃತಂ ಲೋಕಪಿತಾಮಹ|

13082032c ಏಷ ಏವ ವರೋ ಮೇಽದ್ಯ ಯತ್ಪ್ರೀತೋಽಸಿ ಮಮಾನಘ||

ಸುರಭಿಯು ಹೇಳಿದಳು: “ಭಗವನ್! ಲೋಕಪಿತಾಮಹ! ಅನಘ! ನೀನು ನನಗೆ ವರವನ್ನಿತ್ತಿದ್ದೀಯೆ. ಇಂದು ನೀನು ನನ್ನ ಮೇಲೆ ಪ್ರೀತನಾಗಿರುವೆಯಾದರೆ ಅದೇ ನನ್ನ ವರವು.””

13082033 ಬ್ರಹ್ಮೋವಾಚ|

13082033a ತಾಮೇವಂ ಬ್ರುವತೀಂ ದೇವೀಂ ಸುರಭೀಂ ತ್ರಿದಶೇಶ್ವರ|

13082033c ಪ್ರತ್ಯಬ್ರುವಂ ಯದ್ದೇವೇಂದ್ರ ತನ್ನಿಬೋಧ ಶಚೀಪತೇ||

ಬ್ರಹ್ಮನು ಹೇಳಿದನು: “ತ್ರಿದಶೇಶ್ವರ! ದೇವೇಂದ್ರ! ಶಚೀಪತೇ! ಹಾಗೆ ಹೇಳಿದ ದೇವೀ ಸುರಭಿಗೆ ನಾನು ಏನು ಹೇಳಿದೆ ಎನ್ನುವುದನ್ನು ಕೇಳು.

13082034a ಅಲೋಭಕಾಮ್ಯಯಾ ದೇವಿ ತಪಸಾ ಚ ಶುಭೇನ ತೇ[3]|

13082034c ಪ್ರಸನ್ನೋಽಹಂ ವರಂ ತಸ್ಮಾದಮರತ್ವಂ ದದಾನಿ ತೇ||

“ದೇವಿ! ಲೋಭ-ಕಾಮನೆಗಳಿಲ್ಲದೇ ನೀನು ಶುಭ ತಪಸ್ಸನ್ನಾಚರಿಸಿರುವೆ. ಆದುದರಿಂದ ಪ್ರಸನ್ನನಾದ ನಾನು ನಿನಗೆ ಅಮರತ್ವದ ವರವನ್ನು ನೀಡುತ್ತೇನೆ.

13082035a ತ್ರಯಾಣಾಮಪಿ ಲೋಕಾನಾಮುಪರಿಷ್ಟಾನ್ನಿವತ್ಸ್ಯಸಿ|

13082035c ಮತ್ಪ್ರಸಾದಾಚ್ಚ ವಿಖ್ಯಾತೋ ಗೋಲೋಕಃ ಸ ಭವಿಷ್ಯತಿ||

ನನ್ನ ಕೃಪೆಯಿಂದ ನೀನು ಮೂರು ಲೋಕಗಳಿಗೂ ಮೇಲಿರುವ ಲೋಕದಲ್ಲಿ ವಾಸಿಸುತ್ತೀಯೆ. ಅದು ಗೋಲೋಕವೆಂದು ವಿಖ್ಯಾತವಾಗುತ್ತದೆ.

13082036a ಮಾನುಷೇಷು ಚ ಕುರ್ವಾಣಾಃ ಪ್ರಜಾಃ ಕರ್ಮ ಸುತಾಸ್ತವ|

13082036c ನಿವತ್ಸ್ಯಂತಿ ಮಹಾಭಾಗೇ ಸರ್ವಾ ದುಹಿತರಶ್ಚ ತೇ||

ಮಹಾಭಾಗೇ! ನಿನ್ನ ಸರ್ವ ಶುಭ ಸಂತಾನಗಳೂ – ಸುತರು ಮತ್ತು ಸುತೆಯರು – ಮನುಷ್ಯರಲ್ಲಿ ಉಪಯುಕ್ತ ಕರ್ಮಗಳನ್ನು ಮಾಡುತ್ತಾ ಭೂಲೋಕದಲ್ಲಿ ವಾಸಿಸುತ್ತವೆ.

13082037a ಮನಸಾ ಚಿಂತಿತಾ ಭೋಗಾಸ್ತ್ವಯಾ ವೈ ದಿವ್ಯಮಾನುಷಾಃ|

13082037c ಯಚ್ಚ ಸ್ವರ್ಗಸುಖಂ ದೇವಿ ತತ್ತೇ ಸಂಪತ್ಸ್ಯತೇ ಶುಭೇ||

ದೇವೀ! ಶುಭೇ! ನೀನು ಮನಸ್ಸಿನಲ್ಲಿ ಚಿಂತಿಸುವ ದೇವ-ಮನುಷ್ಯ ಭೋಗಗಳು ಲಭಿಸುತ್ತವೆ. ಸ್ವರ್ಗಸುಖವೂ ದೊರೆಯುತ್ತದೆ.”

13082038a ತಸ್ಯಾ ಲೋಕಾಃ ಸಹಸ್ರಾಕ್ಷ ಸರ್ವಕಾಮಸಮನ್ವಿತಾಃ|

13082038c ನ ತತ್ರ ಕ್ರಮತೇ ಮೃತ್ಯುರ್ನ ಜರಾ ನ ಚ ಪಾವಕಃ||

13082038e ನ ದೈನ್ಯಂ[4] ನಾಶುಭಂ ಕಿಂ ಚಿದ್ವಿದ್ಯತೇ ತತ್ರ ವಾಸವ|

ಸಹಸ್ರಾಕ್ಷ! ಅವಳ ಲೋಕಗಳು ಸರ್ವಕಾಮಗಳಿಂದಲೂ ಸಂಪನ್ನವಾಗಿವೆ. ಅಲ್ಲಿ ಮೃತ್ಯುವಾಗಲೀ, ಮುಪ್ಪಾಗಲೀ, ಬೆಂಕಿಯ ಬಾಧೆಯಾಗಲೀ ಇಲ್ಲ. ವಾಸವ! ಅಲ್ಲಿ ದೈನ್ಯಭಾವವಿಲ್ಲ. ಯಾವುದೇ ಅಶುಭಭಾವಗಳೂ ಇಲ್ಲ.

13082039a ತತ್ರ ದಿವ್ಯಾನ್ಯರಣ್ಯಾನಿ ದಿವ್ಯಾನಿ ಭವನಾನಿ ಚ||

13082039c ವಿಮಾನಾನಿ ಚ ಯುಕ್ತಾನಿ[5] ಕಾಮಗಾನಿ ಚ ವಾಸವ|

ಅಲ್ಲಿ ದಿವ್ಯ ಅರಣ್ಯಗಳೂ ದಿವ್ಯ ಭವನಗಳೂ ಇವೆ. ವಾಸವ! ಅಲ್ಲಿ ಬೇಕಾದಲ್ಲಿ ಹೋಗಬಲ್ಲ ಸುಸಜ್ಜಿತ ವಿಮಾನಗಳಿವೆ.

[6]13082040a ವ್ರತೈಶ್ಚ[7] ವಿವಿಧೈಃ ಪುಣ್ಯೈಸ್ತಥಾ ತೀರ್ಥಾನುಸೇವನಾತ್||

13082040c ತಪಸಾ ಮಹತಾ ಚೈವ ಸುಕೃತೇನ ಚ ಕರ್ಮಣಾ|

13082040e ಶಕ್ಯಃ ಸಮಾಸಾದಯಿತುಂ ಗೋಲೋಕಃ ಪುಷ್ಕರೇಕ್ಷಣ||

ಪುಷ್ಕರಾಕ್ಷ! ವಿವಿಧ ವ್ರತಗಳು, ಪುಣ್ಯಕರ್ಮಗಳು, ತೀರ್ಥಯಾತ್ರೆ, ಮಹಾತಪಸ್ಸು, ಮತ್ತು ಸತ್ಕರ್ಮಗಳ ಅನುಷ್ಠಾನ ಇವುಗಳಿಂದ ಗೋಲೋಕಕ್ಕೆ ಹೋಗಲು ಸಾಧ್ಯವಾಗುತ್ತದೆ.

13082041a ಏತತ್ತೇ ಸರ್ವಮಾಖ್ಯಾತಂ ಮಯಾ ಶಕ್ರಾನುಪೃಚ್ಚತೇ|

13082041c ನ ತೇ ಪರಿಭವಃ ಕಾರ್ಯೋ ಗವಾಮರಿನಿಸೂದನ||

ಶಕ್ರ! ಅರಿಸೂದನ! ಹೀಗೆ ನಾನು ಗೋವುಗಳ ವಿಷಯದಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಇನ್ನು ಮುಂದಾದರೂ ನೀನು ಗೋವುಗಳನ್ನು ಅನಾದರಿಸಬೇಡ.””

13082042 ಭೀಷ್ಮ ಉವಾಚ|

13082042a ಏತಚ್ಚ್ರುತ್ವಾ ಸಹಸ್ರಾಕ್ಷಃ ಪೂಜಯಾಮಾಸ ನಿತ್ಯದಾ|

13082042c ಗಾಶ್ಚಕ್ರೇ ಬಹುಮಾನಂ ಚ ತಾಸು ನಿತ್ಯಂ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದನ್ನು ಕೇಳಿ ಸಹಸ್ರಾಕ್ಷನು ನಿತ್ಯವೂ ಗೋವುಗಳನ್ನು ಪೂಜಿಸಿದನು. ನಿತ್ಯವೂ ಗೋವುಗಳನ್ನು ಬಹಳವಾಗಿ ಗೌರವಿಸಿದನು.

13082043a ಏತತ್ತೇ ಸರ್ವಮಾಖ್ಯಾತಂ ಪಾವನಂ ಚ ಮಹಾದ್ಯುತೇ|

13082043c ಪವಿತ್ರಂ ಪರಮಂ ಚಾಪಿ ಗವಾಂ ಮಾಹಾತ್ಮ್ಯಮುತ್ತಮಮ್|

13082043e ಕೀರ್ತಿತಂ ಪುರುಷವ್ಯಾಘ್ರ ಸರ್ವಪಾಪವಿನಾಶನಮ್||

ಮಹಾದ್ಯುತೇ! ಪುರುಷವ್ಯಾಘ್ರ! ಹೀಗೆ ನಾನು ಪಾವನ, ಪರಮ ಪವಿತ್ರ ಗೋವುಗಳ ಉತ್ತಮ ಮಹಾತ್ಮೆಯನ್ನು ಸಂಪೂರ್ಣವಾಗಿ ಹೇಳಿದ್ದೇನೆ. ಇದರ ಕೀರ್ತನೆಯು ಸರ್ವಪಾಪಗಳನ್ನು ನಾಶಗೊಳಿಸುತ್ತದೆ.

13082044a ಯ ಇದಂ ಕಥಯೇನ್ನಿತ್ಯಂ ಬ್ರಾಹ್ಮಣೇಭ್ಯಃ ಸಮಾಹಿತಃ|

13082044c ಹವ್ಯಕವ್ಯೇಷು ಯಜ್ಞೇಷು ಪಿತೃಕಾರ್ಯೇಷು ಚೈವ ಹ|

13082044e ಸಾರ್ವಕಾಮಿಕಮಕ್ಷಯ್ಯಂ ಪಿತೄಂಸ್ತಸ್ಯೋಪತಿಷ್ಠತಿ||

ಸಮಾಹಿತನಾಗಿ ಹವ್ಯ-ಕವ್ಯಗಳಲ್ಲಿ, ಯಜ್ಞಗಳಲ್ಲಿ, ಪಿತೃಕಾರ್ಯಗಳಲ್ಲಿ ಬ್ರಾಹ್ಮಣರಿಗೆ ಇದನ್ನು ಕೇಳಿಸುವುದರಿಂದ ಪಿತೃಗಳ ಸರ್ಮಕಾಮನೆಗಳೂ ಅಕ್ಷಯವಾಗಿ ಪೂರೈಸುತ್ತವೆ.

13082045a ಗೋಷು ಭಕ್ತಶ್ಚ ಲಭತೇ ಯದ್ಯದಿಚ್ಚತಿ ಮಾನವಃ|

13082045c ಸ್ತ್ರಿಯೋಽಪಿ ಭಕ್ತಾ ಯಾ ಗೋಷು ತಾಶ್ಚ ಕಾಮಾನವಾಪ್ನುಯುಃ||

ಗೋವುಗಳ ಭಕ್ತನು ಅಪೇಕ್ಷಿಸಿದುದೆಲ್ಲವನ್ನೂ ಪಡೆದುಕೊಳ್ಳುತ್ತಾನೆ. ಗೋವಿನಲ್ಲಿ ಭಕ್ತಿಯನ್ನಿಟ್ಟಿರುವ ಸ್ತ್ರೀಯರೂ ಸಕಲ ಕಾಮನೆಗಳನ್ನೂ ಹೊಂದುತ್ತಾರೆ.

13082046a ಪುತ್ರಾರ್ಥೀ ಲಭತೇ ಪುತ್ರಂ ಕನ್ಯಾ ಪತಿಮವಾಪ್ನುಯಾತ್|

13082046c ಧನಾರ್ಥೀ ಲಭತೇ ವಿತ್ತಂ ಧರ್ಮಾರ್ಥೀ ಧರ್ಮಮಾಪ್ನುಯಾತ್||

ಪುತ್ರಾರ್ಥಿಗಳು ಪುತ್ರನನ್ನು ಪಡೆಯುತ್ತಾರೆ. ಕನ್ಯೆಯರು ಪತಿಯನ್ನು ಪಡೆಯುತ್ತಾರೆ. ಧನಾರ್ಥಿಗಳಿಗೆ ವಿತ್ತವು ದೊರೆಯುತ್ತದೆ. ಧರ್ಮಾರ್ಥಿಗಳಿಗೆ ಧರ್ಮವು ದೊರೆಯುತ್ತದೆ.

13082047a ವಿದ್ಯಾರ್ಥೀ ಪ್ರಾಪ್ನುಯಾದ್ವಿದ್ಯಾಂ ಸುಖಾರ್ಥೀ ಪ್ರಾಪ್ನುಯಾತ್ಸುಖಮ್|

13082047c ನ ಕಿಂ ಚಿದ್ದುರ್ಲಭಂ ಚೈವ ಗವಾಂ ಭಕ್ತಸ್ಯ ಭಾರತ||

ಭಾರತ! ವಿದ್ಯಾರ್ಥಿಯು ವಿದ್ಯೆಯನ್ನು ಹೊಂದುತ್ತಾನೆ. ಮತ್ತು ಸುಖಾರ್ಥಿಯು ಸುಖವನ್ನು ಪಡೆದುಕೊಳ್ಳುತ್ತಾನೆ. ಗೋವುಗಳ ಭಕ್ತನಿಗೆ ಯಾವುದೂ ದುರ್ಲಭವಲ್ಲ!”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಲೋಕವರ್ಣನೇ ದ್ವಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಲೋಕವರ್ಣನ ಎನ್ನುವ ಎಂಭತ್ತೆರಡನೇ ಅಧ್ಯಾಯವು.

[1] ದೇವತೆಗಳಿಗೆ ಕೊಡುವ ಆಹುತಿಯು ಹವ್ಯ ಮತ್ತು ಪಿತೃಗಳಿಗೆ ಕೊಡುವ ಆಹುತಿಯು ಕವ್ಯ (ಭಾರತ ದರ್ಶನ).

[2] ದೇವೇಂದ್ರೇಷು (ಗೀತಾ ಪ್ರೆಸ್).

[3] ಶುಭಾನನೇ (ಭಾರತ ದರ್ಶನ/ಗೀತಾ ಪ್ರೆಸ್).

[4] ದೈವಂ (ಭಾರತ ದರ್ಶನ/ಗೀತಾ ಪ್ರೆಸ್).

[5] ಸುಯುಕ್ತಾನಿ (ಗೀತಾ ಪ್ರೆಸ್/ಭಾರತ ದರ್ಶನ).

[6] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಬ್ರಹ್ಮಚರ್ಯೇಣ ತಪಸಾ ಯತ್ನೇನ ಚ ದಮೇನ ಚ| (ಭಾರತ ದರ್ಶನ/ಗೀತಾ ಪ್ರೆಸ್).

[7] ದಾನೈಶ್ಚ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.