ಅನುಶಾಸನ ಪರ್ವ: ದಾನಧರ್ಮ ಪರ್ವ
೮೧
ಶ್ರೀ-ಗೋ ಸಂವಾದ
ಶ್ರೀ ಮತ್ತು ಗೋವುಗಳ ಸಂವಾದ: ಶ್ರೀಯ ಪಾರ್ಥನೆಯಂತೆ ಆಕೆಯು ಗೋಮಯದಲ್ಲಿಯೂ ಗೋಮೂತ್ರದಲ್ಲಿರೂ ನಿವಾಸಿಸಲು ಗೋವುಗಳು ಸಮ್ಮತಿಸಿದುದು (೧-೨೭).
13081001 ಯುಧಿಷ್ಠಿರ ಉವಾಚ|
13081001a ಮಯಾ ಗವಾಂ ಪುರೀಷಂ ವೈ ಶ್ರಿಯಾ ಜುಷ್ಟಮಿತಿ ಶ್ರುತಮ್|
13081001c ಏತದಿಚ್ಚಾಮ್ಯಹಂ ಶ್ರೋತುಂ ಸಂಶಯೋಽತ್ರ ಹಿ ಮೇ ಮಹಾನ್||
ಯುಧಿಷ್ಠಿರನು ಹೇಳಿದನು: “ಗೋಮಯದಲ್ಲಿ ಶ್ರೀ[1]ಯು ವಾಸಿಸುತ್ತಿರುವಳೆಂದು ನಾನು ಕೇಳಿದ್ದೇನೆ. ಇದರ ಕುರಿತು ನನಗೆ ಸಂಶಯವಿದೆ. ಈ ವಿಷಯವನ್ನು ಕೇಳ ಬಯಸುತ್ತೇನೆ.”
13081002 ಭೀಷ್ಮ ಉವಾಚ|
13081002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
13081002c ಗೋಭಿರ್ನೃಪೇಹ ಸಂವಾದಂ ಶ್ರಿಯಾ ಭರತಸತ್ತಮ||
ಭೀಷ್ಮನು ಹೇಳಿದನು: “ಭರತಸತ್ತಮ! ನೃಪ! ಇದರ ವಿಷಯದಲ್ಲಿ ಪುರಾತನ ಇತಿಹಾಸವಾದ ಶ್ರೀ ಮತ್ತು ಗೋವುಗಳ ಸಂವಾದವನ್ನು ಉದಾಹರಿಸುತ್ತಾರೆ.
13081003a ಶ್ರೀಃ ಕೃತ್ವೇಹ ವಪುಃ ಕಾಂತಂ ಗೋಮಧ್ಯಂ ಪ್ರವಿವೇಶ ಹ|
13081003c ಗಾವೋಽಥ ವಿಸ್ಮಿತಾಸ್ತಸ್ಯಾ ದೃಷ್ಟ್ವಾ ರೂಪಸ್ಯ ಸಂಪದಮ್||
ಒಮ್ಮೆ ಶ್ರೀಯು ಮನೋಹರ ರೂಪವನ್ನು ಧರಿಸಿ ಗೋವುಗಳ ಕೊಟ್ಟಿಗೆಯನ್ನು ಪ್ರವೇಶಿಸಿದಳು. ಅವಳ ರೂಪಸಂಪತ್ತನ್ನು ನೋಡಿ ಅಚ್ಚರಿಗೊಂಡ ಗೋವುಗಳು ಅವಳನ್ನು ಪ್ರಶ್ನಿಸಿದವು.
13081004 ಗಾವ ಊಚುಃ|
13081004a ಕಾಸಿ ದೇವಿ ಕುತೋ ವಾ ತ್ವಂ ರೂಪೇಣಾಪ್ರತಿಮಾ ಭುವಿ|
13081004c ವಿಸ್ಮಿತಾಃ ಸ್ಮ ಮಹಾಭಾಗೇ ತವ ರೂಪಸ್ಯ ಸಂಪದಾ||
ಗೋವುಗಳು ಹೇಳಿದವು: “ದೇವೀ! ನೀನು ಯಾರು? ಎಲ್ಲಿಂದ ಬಂದಿರುವೆ? ಭುವಿಯಲ್ಲಿಯೇ ನೀನು ಅಪ್ರತಿಮ ರೂಪವತಿಯಾಗಿರುವೆ! ಮಹಾಭಾಗೇ! ನಿನ್ನ ರೂಪಸಂಪತ್ತನ್ನು ನೋಡಿ ನಾವು ವಿಸ್ಮಿತರಾಗಿದ್ದೇವೆ.
13081005a ಇಚ್ಚಾಮಸ್ತ್ವಾಂ ವಯಂ ಜ್ಞಾತುಂ ಕಾ ತ್ವಂ ಕ್ವ ಚ ಗಮಿಷ್ಯಸಿ|
13081005c ತತ್ತ್ವೇನ ಚ ಸುವರ್ಣಾಭೇ ಸರ್ವಮೇತದ್ಬ್ರವೀಹಿ ನಃ||
ಸುವರ್ಣಾಭೇ! ನೀನು ಯಾರೆಂದು ತಿಳಿಯಲು ನಾವು ಇಚ್ಛಿಸುತ್ತೇವೆ. ನೀನು ಯಾರು ಮತ್ತು ಎಲ್ಲಿಗೆ ಹೋಗುತ್ತಿರುವೆ ಎಲ್ಲವನ್ನೂ ನಮಗೆ ಹೇಳು.”
13081006 ಶ್ರೀರುವಾಚ|
13081006a ಲೋಕಕಾಂತಾಸ್ಮಿ ಭದ್ರಂ ವಃ ಶ್ರೀರ್ನಾಮ್ನೇಹ ಪರಿಶ್ರುತಾ|
13081006c ಮಯಾ ದೈತ್ಯಾಃ ಪರಿತ್ಯಕ್ತಾ ವಿನಷ್ಟಾಃ ಶಾಶ್ವತೀಃ ಸಮಾಃ||
ಶ್ರೀಯು ಹೇಳಿದಳು: “ನಿಮಗೆ ಮಂಗಳವಾಗಲಿ! ಶ್ರೀ ಎಂಬ ಹೆಸರಿನಿಂದ ನಾನು ಪ್ರಸಿದ್ಧಳು. ಲೋಕದಲ್ಲಿರುವವರೆಲ್ಲರಿಗೂ ಬೇಕಾದವಳು ನಾನು. ನನ್ನಿಂದ ಪರಿತ್ಯಜಿಸಲ್ಪಟ್ಟ ದೈತ್ಯರು ದೀರ್ಘಕಾಲದವರೆಗೆ ನಷ್ಟರಾಗಿರುತ್ತಾರೆ.
[2]13081007a ಇಂದ್ರೋ ವಿವಸ್ವಾನ್ಸೋಮಶ್ಚ ವಿಷ್ಣುರಾಪೋಽಗ್ನಿರೇವ ಚ|
13081007c ಮಯಾಭಿಪನ್ನಾ ಋಧ್ಯಂತೇ[3] ಋಷಯೋ ದೇವತಾಸ್ತಥಾ||
ನನ್ನನ್ನು ಮೊರೆಹೊಕ್ಕಿರುವ ಇಂದ್ರ, ಸೂರ್ಯ, ಚಂದ್ರ, ವಿಷ್ಣು, ವರುಣ, ಅಗ್ನಿ ಇವೇ ಮೊದಲಾದ ದೇವತೆಗಳು ಮತ್ತು ಋಷಿಗಳು ನನ್ನನ್ನು ಪಡೆದು ವೃದ್ಧಿಹೊಂದುತ್ತಾರೆ.
13081008a ಯಾಂಶ್ಚ ದ್ವಿಷಾಮ್ಯಹಂ[4] ಗಾವಸ್ತೇ ವಿನಶ್ಯಂತಿ ಸರ್ವಶಃ|
13081008c ಧರ್ಮಾರ್ಥಕಾಮಹೀನಾಶ್ಚ ತೇ ಭವಂತ್ಯಸುಖಾನ್ವಿತಾಃ||
ಗೋವುಗಳೇ! ನಾನು ಯಾರನ್ನು ದ್ವೇಷಿಸುತ್ತೇನೋ ಅವರು ಸಂಪೂರ್ಣವಾಗಿ ನಾಶಹೊಂದುತ್ತಾರೆ. ಧರ್ಮಾರ್ಥಕಾಮಗಳನ್ನು ಕಳೆದುಕೊಂಡು ಅವರು ಅಸುಖಿಗಳಾಗುತ್ತಾರೆ.
13081009a ಏವಂಪ್ರಭಾವಾಂ ಮಾಂ ಗಾವೋ ವಿಜಾನೀತ ಸುಖಪ್ರದಾಮ್|
13081009c ಇಚ್ಚಾಮಿ ಚಾಪಿ ಯುಷ್ಮಾಸು ವಸ್ತುಂ ಸರ್ವಾಸು ನಿತ್ಯದಾ|
13081009e ಆಗತಾ ಪ್ರಾರ್ಥಯಾನಾಹಂ[5] ಶ್ರೀಜುಷ್ಟಾ ಭವತಾನಘಾಃ||
ಗೋವುಗಳೇ! ನಾನು ಇಂಥಹ ಸುಖಪ್ರದ ಪ್ರಭಾವವುಳ್ಳವಳು ಎಂದು ತಿಳಿಯಿರಿ. ನಾನು ನಿಮ್ಮೆಲ್ಲರ ಶರೀರಗಳಲ್ಲಿ ನಿತ್ಯವೂ ಇರಬಯಸುತ್ತೇನೆ. ಅನಘರೇ! ನನ್ನ ಪ್ರಾರ್ಥನೆಯಂತೆ ನನಗೆ ಆಶ್ರಯವನ್ನಿತ್ತು ನೀವೆಲ್ಲರೂ ಶ್ರೀಸಂಪನ್ನರಾಗಿರಿ!”
13081010 ಗಾವ ಊಚುಃ|
13081010a ಅಧ್ರುವಾಂ ಚಂಚಲಾಂ ಚ ತ್ವಾಂ ಸಾಮಾನ್ಯಾಂ ಬಹುಭಿಃ ಸಹ|
13081010c ನ ತ್ವಾಮಿಚ್ಚಾಮ ಭದ್ರಂ ತೇ ಗಮ್ಯತಾಂ ಯತ್ರ ರೋಚತೇ||
ಗೋವುಗಳು ಹೇಳಿದವು: “ಎಲ್ಲಿಯೂ ಸ್ಥಿರಳಾಗಿರದ ನೀನು ಚಂಚಲೆಯು. ಒಂದೇ ಕಾಲದಲ್ಲಿ ಅನೇಕರೊಡನೆ ಇರುವವಳು. ನಾವು ನಿನ್ನನ್ನು ಇಷ್ಟಪಡುವುದಿಲ್ಲ. ನಿನಗೆ ಮಂಗಳವಾಗಲಿ! ನಿನಗಿಷ್ಟವಾದಲ್ಲಿಗೆ ಹೋಗಬಹುದು.
13081011a ವಪುಷ್ಮಂತ್ಯೋ ವಯಂ ಸರ್ವಾಃ ಕಿಮಸ್ಮಾಕಂ ತ್ವಯಾದ್ಯ ವೈ|
13081011c ಯತ್ರೇಷ್ಟಂ ಗಮ್ಯತಾಂ ತತ್ರ ಕೃತಕಾರ್ಯಾ ವಯಂ ತ್ವಯಾ||
ನಾವೆಲ್ಲರೂ ರೂಪವತಿಯರಾಗಿಯೇ ಇದ್ದೇವೆ. ನಿನ್ನಿಂದ ಇಂದು ನಮಗೇನಾಗಬೇಕಾಗಿದೆ? ನಿನ್ನನ್ನು ನೋಡಿ ನಾವು ಕೃತಕೃತ್ಯರಾಗಿದ್ದೇವೆ. ಇನ್ನು ನೀನು ನಿನಗಿಷ್ಟವಾದಲ್ಲಿಗೆ ಹೋಗಬಹುದು.”
13081012 ಶ್ರೀರುವಾಚ|
13081012a ಕಿಮೇತದ್ವಃ ಕ್ಷಮಂ ಗಾವೋ ಯನ್ಮಾಂ ನೇಹಾಭ್ಯನಂದಥ|
13081012c ನ ಮಾಂ ಸಂಪ್ರತಿ ಗೃಹ್ಣೀಥ ಕಸ್ಮಾದ್ವೈ ದುರ್ಲಭಾಂ ಸತೀಮ್||
ಶ್ರೀಯು ಹೇಳಿದಳು: “ಗೋವುಗಳೇ! ಇದೇನು ಹೀಗೆ ಹೇಳುತ್ತಿರುವಿರಿ? ನಾನಾಗಿಯೇ ಬಂದಿರುವಾಗ ನೀವು ನನ್ನನ್ನು ಅಭಿನಂದಿಸುತ್ತಿಲ್ಲವಲ್ಲ! ಸಾಧ್ವಿಯೂ ದುರ್ಲಭಳೂ ಆಗಿರುವ ನನ್ನನ್ನು ನೀವು ಏಕೆ ಸ್ವೀಕರಿಸುತ್ತಿಲ್ಲ?
13081013a ಸತ್ಯಶ್ಚ ಲೋಕವಾದೋಽಯಂ ಲೋಕೇ ಚರತಿ ಸುವ್ರತಾಃ|
13081013c ಸ್ವಯಂ ಪ್ರಾಪ್ತೇ ಪರಿಭವೋ ಭವತೀತಿ ವಿನಿಶ್ಚಯಃ||
ಸುವ್ರತರೇ! ಆಹ್ವಾನವಿಲ್ಲದೇ ತಾನಾಗಿಯೇ ಇನ್ನೊಬ್ಬರ ಮನೆಗೆ ಹೋದವನಿಗೆ ತಿರಸ್ಕಾರವು ನಿಶ್ಚಿತ ಎಂಬ ಗಾದೆಯು ನಿಮ್ಮ ಈ ವರ್ತನೆಯಿಂದ ಸತ್ಯವಾಯಿತು.
13081014a ಮಹದುಗ್ರಂ ತಪಃ ಕೃತ್ವಾ ಮಾಂ ನಿಷೇವಂತಿ ಮಾನವಾಃ|
13081014c ದೇವದಾನವಗಂಧರ್ವಾಃ ಪಿಶಾಚೋರಗರಾಕ್ಷಸಾಃ||
ಮಾನವರೂ, ದೇವ-ದಾನವ-ಗಂಧರ್ವರೂ, ಪಿಶಾಚ-ಉರಗ-ರಾಕ್ಷಸರೂ ಮಹಾ ಉಗ್ರ ತಪಸ್ಸನ್ನಾಚರಿಸಿ ನನ್ನ ಸೇವೆಮಾಡುತ್ತಾರೆ.
13081015a ಕ್ಷಮಮೇತದ್ಧಿ ವೋ ಗಾವಃ ಪ್ರತಿಗೃಹ್ಣೀತ ಮಾಮಿಹ|
13081015c ನಾವಮನ್ಯಾ ಹ್ಯಹಂ ಸೌಮ್ಯಾಸ್ತ್ರೈಲೋಕ್ಯೇ ಸಚರಾಚರೇ||
ಗೋವುಗಳೇ! ಸೌಮ್ಯರೇ! ಇಂತಹ ಪರಾಕ್ರಮವುಳ್ಳ ನಾನು ನಿಮ್ಮ ಬಳಿ ಬಂದಿದ್ದೇನೆ. ನನ್ನನ್ನು ಸ್ವೀಕರಿಸಿ. ಸಚರಾಚರ ಮೂರುಲೋಕಗಳಲ್ಲಿ ಯಾರಿಂದಲೂ ನಾನು ಅವಮಾನಿತಳಾಗುವವಳಲ್ಲ.”
13081016 ಗಾವ ಊಚುಃ|
13081016a ನಾವಮನ್ಯಾಮಹೇ ದೇವಿ ನ ತ್ವಾಂ ಪರಿಭವಾಮಹೇ|
13081016c ಅಧ್ರುವಾ ಚಲಚಿತ್ತಾಸಿ ತತಸ್ತ್ವಾಂ ವರ್ಜಯಾಮಹೇ||
ಗೋವುಗಳು ಹೇಳಿದವು: “ದೇವೀ! ನಾವು ನಿನ್ನನ್ನು ಅವಮಾನಿಸುವುದೂ ಇಲ್ಲ. ಅನಾದರಣೆ ಮಾಡುತ್ತಲೂ ಇಲ್ಲ. ನೀನು ಅಸ್ಥಿರಳು ಮತ್ತು ಚಂಚಲಳು ಎನ್ನುವ ಕಾರಣದಿಂದ ನಿನ್ನನ್ನು ವರ್ಜಿಸುತ್ತಿದ್ದೇವೆ.
13081017a ಬಹುನಾತ್ರ ಕಿಮುಕ್ತೇನ ಗಮ್ಯತಾಂ ಯತ್ರ ವಾಂಚಸಿ|
13081017c ವಪುಷ್ಮತ್ಯೋ ವಯಂ ಸರ್ವಾಃ ಕಿಮಸ್ಮಾಕಂ ತ್ವಯಾನಘೇ||
ಅನಘೇ! ಈ ವಿಷಯದಲ್ಲಿ ಹೆಚ್ಚು ಮಾತನಾಡುವುದರಿಂದ ಪ್ರಯೋಜನವಾದರೂ ಏನಿದೆ? ನಾವೆಲ್ಲರೂ ರೂಪಮತಿಯರು. ನಿನ್ನಿಂದ ನಮಗೇನಾಗಬೇಕಾಗಿದೆ?”
13081018 ಶ್ರೀರುವಾಚ|
13081018a ಅವಜ್ಞಾತಾ ಭವಿಷ್ಯಾಮಿ ಸರ್ವಲೋಕೇಷು ಮಾನದಾಃ|
13081018c ಪ್ರತ್ಯಾಖ್ಯಾನೇನ ಯುಷ್ಮಾಭಿಃ ಪ್ರಸಾದಃ ಕ್ರಿಯತಾಮಿತಿ||
ಶ್ರೀಯು ಹೇಳಿದಳು: “ಮಾನದರೇ! ಸ್ವಯಂ ಪ್ರೇರಿತಳಾಗಿ ಬಂದಿರುವ ನನ್ನನ್ನು ನೀವೇನಾದರೂ ತಿರಸ್ಕರಿಸಿದರೆ ಸಂಪೂರ್ಣ ಜಗತ್ತಿನಲ್ಲಿಯೇ ನಾನು ಉಪೇಕ್ಷಿತಳಾಗುತ್ತೇನೆ. ಆದುದರಿಂದ ನನ್ನ ಮೇಲೆ ಕೃಪೆತೋರಿ ನನ್ನನ್ನು ಸ್ವೀಕರಿಸಿರಿ.
13081019a ಮಹಾಭಾಗಾ ಭವತ್ಯೋ ವೈ ಶರಣ್ಯಾಃ ಶರಣಾಗತಾಮ್|
13081019c ಪರಿತ್ರಾಯಂತು ಮಾಂ ನಿತ್ಯಂ ಭಜಮಾನಾಮನಿಂದಿತಾಮ್|
ಮಹಾಭಾಗೆಯರೇ! ಶರಣಾಗತರಾದವರಿಗೆ ನೀವು ಆಶ್ರಯವನ್ನು ನೀಡುವವರು. ನಿತ್ಯವೂ ನಿಮ್ಮನ್ನೇ ಸೇವಿಸಲು ಇಚ್ಛಿಸುವ ಅನಿಂದಿತೆಯಾದ ನನಗೆ ಆಶ್ರಯವನ್ನಿತ್ತು ರಕ್ಷಿಸಿರಿ.
13081019e ಮಾನನಾಂ ತ್ವಹಮಿಚ್ಚಾಮಿ ಭವತ್ಯಃ ಸತತಂ ಶುಭಾಃ||
13081020a ಅಪ್ಯೇಕಾಂಗೇ ತು ವೋ ವಸ್ತುಮಿಚ್ಚಾಮಿ ಚ ಸುಕುತ್ಸಿತೇ|
ಸತತವೂ ಕಲ್ಯಾಣವನ್ನುಂಟುಮಾಡುವ ನಿಮ್ಮಿಂದ ಮಾನ್ಯತೆಯನ್ನು ಪಡೆಯ ಬಯಸುತ್ತೇನೆ. ನಿಮ್ಮ ಯಾವುದಾದರೂ ಅಂಗದಲ್ಲಿ – ಅದು ಕುತ್ಸಿತವಾದ ಅಂಗವೇ ಆಗಿದ್ದರೂ – ಅಲ್ಲಿ ವಾಸಮಾಡಿಕೊಂಡಿರಲು ಬಯಸುತ್ತೇನೆ.
13081020c ನ ವೋಽಸ್ತಿ ಕುತ್ಸಿತಂ ಕಿಂ ಚಿದಂಗೇಷ್ವಾಲಕ್ಷ್ಯತೇಽನಘಾಃ||
13081021a ಪುಣ್ಯಾಃ ಪವಿತ್ರಾಃ ಸುಭಗಾ ಮಮಾದೇಶಂ ಪ್ರಯಚ್ಚತ|
13081021c ವಸೇಯಂ ಯತ್ರ ಚಾಂಗೇಽಹಂ ತನ್ಮೇ ವ್ಯಾಖ್ಯಾತುಮರ್ಹಥ||
ಅನಘರೇ! ನಿಮ್ಮಲ್ಲಿ ಕುತ್ಸಿತ ಅಂಗವೆನ್ನುವುದೇ ಇಲ್ಲ. ನೀವೆಲ್ಲರೂ ಪುಣ್ಯಾತ್ಮರು. ಪವಿತ್ರರು. ಸುಭಗೆಯರು. ನನಗೆ ಆದೇಶವನ್ನು ನೀಡಿ. ನಿಮ್ಮ ಶರೀರದ ಯಾವ ಅಂಗದಲ್ಲಿ ನಾನು ವಾಸಿಸಬೇಕು ಎಂದು ಹೇಳಿ.””
13081022 ಭೀಷ್ಮ ಉವಾಚ|
13081022a ಏವಮುಕ್ತಾಸ್ತು ತಾ ಗಾವಃ ಶುಭಾಃ ಕರುಣವತ್ಸಲಾಃ|
13081022c ಸಂಮಂತ್ರ್ಯ ಸಹಿತಾಃ ಸರ್ವಾಃ ಶ್ರಿಯಮೂಚುರ್ನರಾಧಿಪ||
ಭೀಷ್ಮನು ಹೇಳಿದನು: “ನರಾಧಿಪ! ಅವಳು ಹೀಗೆ ಹೇಳಲು ಕರುಣವತ್ಸಲೆಯರಾದ ಶುಭ ಗೋವುಗಳು ಎಲ್ಲರೂ ಒಟ್ಟಾಗಿ ಆಲೋಚಿಸಿ ಶ್ರೀಗೆ ಹೇಳಿದರು:
13081023a ಅವಶ್ಯಂ ಮಾನನಾ ಕಾರ್ಯಾ ತವಾಸ್ಮಾಭಿರ್ಯಶಸ್ವಿನಿ|
13081023c ಶಕೃನ್ಮೂತ್ರೇ ನಿವಸ ನಃ ಪುಣ್ಯಮೇತದ್ಧಿ ನಃ ಶುಭೇ||
“ಯಶಸ್ವಿನೀ! ಶುಭೇ! ಅವಶ್ಯವಾಗಿ ನಾವು ನಿನ್ನನ್ನು ಸಮ್ಮಾನಿಸಲೇ ಬೇಕು. ನೀವು ನಮ್ಮ ಸಗಣಿ-ಮೂತ್ರಗಳಲ್ಲಿ ವಾಸಿಸು. ಇವೆರಡೂ ನಮ್ಮ ಪರಮ ಪವಿತ್ರ ವಸ್ತುಗಳಾಗಿವೆ.”
13081024 ಶ್ರೀರುವಾಚ|
13081024a ದಿಷ್ಟ್ಯಾ ಪ್ರಸಾದೋ ಯುಷ್ಮಾಭಿಃ ಕೃತೋ ಮೇಽನುಗ್ರಹಾತ್ಮಕಃ|
13081024c ಏವಂ ಭವತು ಭದ್ರಂ ವಃ ಪೂಜಿತಾಸ್ಮಿ ಸುಖಪ್ರದಾಃ||
ಶ್ರೀಯು ಹೇಳಿದಳು: “ಸುಖಪ್ರದೆಯರೇ! ನನ್ನ ಭಾಗ್ಯವಿಶೇಷದಿಂದ ನೀವು ನನಗೆ ಅನುಗ್ರಹಾತ್ಮಕ ಪ್ರಸಾದವನ್ನು ಕರುಣಿಸಿದ್ದೀರಿ. ನಿಮ್ಮಿಂದ ಸತ್ಕೃತಳಾಗಿದ್ದೇನೆ. ನಿಮಗೆ ಮಂಗಳವಾಗಲಿ!””
13081025 ಭೀಷ್ಮ ಉವಾಚ|
13081025a ಏವಂ ಕೃತ್ವಾ ತು ಸಮಯಂ ಶ್ರೀರ್ಗೋಭಿಃ ಸಹ ಭಾರತ|
13081025c ಪಶ್ಯಂತೀನಾಂ ತತಸ್ತಾಸಾಂ ತತ್ರೈವಾಂತರಧೀಯತ||
ಭೀಷ್ಮನು ಹೇಳಿದನು: “ಭಾರತ! ಹೀಗೆ ಗೋವುಗಳೊಂದಿಗೆ ಒಪ್ಪಂದ ಮಾಡಿಕೊಂಡು ಶ್ರೀಯು ಅವರು ನೋಡುತ್ತಿದ್ದಂತೆಯೇ ಅಲ್ಲಿಯೇ ಅಂತರ್ಧಾನಳಾದಳು.
13081026a ಏತದ್ಗೋಶಕೃತಃ ಪುತ್ರ ಮಾಹಾತ್ಮ್ಯಂ ತೇಽನುವರ್ಣಿತಮ್|
13081026c ಮಾಹಾತ್ಮ್ಯಂ ಚ ಗವಾಂ ಭೂಯಃ ಶ್ರೂಯತಾಂ ಗದತೋ ಮಮ||
ಪುತ್ರ! ಹೀಗೆ ನಾನು ನಿನಗೆ ಗೋಮಯದ ಮಹಾತ್ಮ್ಯೆಯನ್ನು ವರ್ಣಿಸಿದ್ದೇನೆ. ಗೋವುಗಳ ಮಹಾತ್ಮ್ಯೆಯನ್ನು ಇನ್ನೂ ಹೇಳುತ್ತೇನೆ. ಕೇಳು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರೀಗೋಸಂವಾದೋ ನಾಮ ಏಕಾಶೀತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರೀಗೋಸಂವಾದ ಎನ್ನುವ ಎಂಭತ್ತೊಂದನೇ ಅಧ್ಯಾಯವು.
[1] ಗೀತಾ ಪ್ರೆಸ್ ಮತ್ತು ಭಾರತ ದರ್ಶನಗಳಲ್ಲಿ ಶ್ರೀ ಎಂಬ ಪದಕ್ಕೆ ಲಕ್ಷ್ಮಿ ಎಂದು ಅನುವಾದಿಸಿದ್ದಾರೆ.
[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಮಯಾಭಿಪನ್ನಾ ದೇವಾಶ್ಚ ಮೋದಂತೇ ಶಾಶ್ವತೀಃ ಸಮಾಃ| (ಭಾರತ ದರ್ಶನ/ಗೀತಾ ಪ್ರೆಸ್).
[3] ಸಿಧ್ಯಂತೇ (ಭಾರತ ದರ್ಶನ/ಗೀತಾ ಪ್ರೆಸ್).
[4] ಯಾನ್ನಾವಿಶಾಮ್ಯಹಂ (ಭಾರತ ದರ್ಶನ/ಗೀತಾ ಪ್ರೆಸ್).
[5] ಆಗತ್ಯ ಪ್ರಾರ್ಥಯೇ ಯುಷ್ಮಾನ್ (ಭಾರತ ದರ್ಶನ/ಗೀತಾ ಪ್ರೆಸ್).