Anushasana Parva: Chapter 80

ಅನುಶಾಸನ ಪರ್ವ: ದಾನಧರ್ಮ ಪರ್ವ

೮೦

ಗೋವುಗಳ ಮಹಾತ್ಮೆ ಮತ್ತು ವ್ಯಾಸನು ಶುಕನಿಗೆ ಗೋವುಗಳ, ಗೋಲೋಕದ ಮತ್ತು ಗೋದಾನದ ಶ್ರೇಷ್ಠತೆಯನ್ನು ವರ್ಣಿಸಿದುದು (೧-೪೫).

13080001 ಯುಧಿಷ್ಠಿರ ಉವಾಚ|

13080001a ಪವಿತ್ರಾಣಾಂ ಪವಿತ್ರಂ ಯಚ್ಚ್ರೇಷ್ಠಂ ಲೋಕೇ ಚ ಯದ್ಭವೇತ್|

13080001c ಪಾವನಂ ಪರಮಂ ಚೈವ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಲೋಕದಲ್ಲಿ ಯಾವುದು ಪವಿತ್ರವಾದವುಗಳಲ್ಲಿಯೇ ಪವಿತ್ರವೋ, ಯಾವುದು ಶ್ರೇಷ್ಠವೋ ಮತ್ತು ಪರಮ ಪಾವನವೋ ಅದರ ಕುರಿತು ನನಗೆ ಹೇಳು.”

13080002 ಭೀಷ್ಮ ಉವಾಚ|

13080002a ಗಾವೋ ಮಹಾರ್ಥಾಃ ಪುಣ್ಯಾಶ್ಚ ತಾರಯಂತಿ ಚ ಮಾನವಾನ್|

13080002c ಧಾರಯಂತಿ ಪ್ರಜಾಶ್ಚೇಮಾಃ ಪಯಸಾ ಹವಿಷಾ ತಥಾ||

ಭೀಷ್ಮನು ಹೇಳಿದನು: “ಗೋವುಗಳು ಮಹಾ ಪ್ರಯೋಜನಕಾರಿಗಳು, ಪರಮ ಪವಿತ್ರವಾದವುಗಳು ಮತ್ತು ಮಾನವರನ್ನು ಉದ್ಧರಿಸುವವು. ಅವು ತಮ್ಮ ಹಾಲು ಮತ್ತು ತುಪ್ಪಗಳಿಂದ ಪ್ರಜೆಗಳ ಜೀವನವನ್ನು ರಕ್ಷಿಸುತ್ತವೆ.

13080003a ನ ಹಿ ಪುಣ್ಯತಮಂ ಕಿಂ ಚಿದ್ಗೋಭ್ಯೋ ಭರತಸತ್ತಮ|

13080003c ಏತಾಃ ಪವಿತ್ರಾಃ ಪುಣ್ಯಾಶ್ಚ ತ್ರಿಷು ಲೋಕೇಷ್ವನುತ್ತಮಾಃ[1]||

ಭರತಸತ್ತಮ! ಗೋವುಗಳಿಗಿಂತ ಪುಣ್ಯತಮವಾದುದು ಯಾವುದೂ ಇಲ್ಲ. ಇವು ಪವಿತ್ರವಾದವುಗಳು, ಪುಣ್ಯವನ್ನು ನೀಡುವವು ಮತ್ತು ಮೂರು ಲೋಕಗಳಲ್ಲಿಯೂ ಅನುತ್ತಮವಾದವುಗಳು.

13080004a ದೇವಾನಾಮುಪರಿಷ್ಟಾಚ್ಚ ಗಾವಃ ಪ್ರತಿವಸಂತಿ ವೈ|

13080004c ದತ್ತ್ವಾ ಚೈತಾ ನರಪತೇ[2] ಯಾಂತಿ ಸ್ವರ್ಗಂ ಮನೀಷಿಣಃ||

ನರಪತೇ! ಗೋವುಗಳು ದೇವತೆಗಳಿಗಿಂತಲೂ ಮೇಲಿನ ಲೋಕಗಳಲ್ಲಿ ವಾಸಿಸುತ್ತವೆ. ಗೋದಾನಮಾಡಿದ ಮನೀಷಿಣರು ಸ್ವರ್ಗಕ್ಕೆ ಹೋಗುತ್ತಾರೆ.

13080005a ಮಾಂಧಾತಾ ಯೌವನಾಶ್ವಶ್ಚ ಯಯಾತಿರ್ನಹುಷಸ್ತಥಾ|

13080005c ಗಾವೋ ದದಂತಃ ಸತತಂ ಸಹಸ್ರಶತಸಂಮಿತಾಃ|

13080005e ಗತಾಃ ಪರಮಕಂ ಸ್ಥಾನಂ ದೇವೈರಪಿ ಸುದುರ್ಲಭಮ್||

ಯೌವನಾಶ್ವ ಮಾಂಧಾತ, ಯಯಾತಿ, ಮತ್ತು ನಹುಷ ಇವರು ಸತತವೂ ಲಕ್ಷಗಟ್ಟಲೆ ಗೋವುಗಳನ್ನು ದಾನಮಾಡುತ್ತಿದ್ದರು. ಇದರಿಂದ ಅವರಿಗೆ, ದೇವತೆಗಳಿಗೂ ದುರ್ಲಭವಾದ, ಉತ್ತಮ ಲೋಕಗಳು ಪ್ರಾಪ್ತವಾದವು.

13080006a ಅಪಿ ಚಾತ್ರ ಪುರಾವೃತ್ತಂ ಕಥಯಿಷ್ಯಾಮಿ ತೇಽನಘ|

13080007a ಋಷೀಣಾಮುತ್ತಮಂ ಧೀಮಾನ್ ಕೃಷ್ಣದ್ವೈಪಾಯನಂ ಶುಕಃ|

13080007c ಅಭಿವಾದ್ಯಾಹ್ನಿಕಂ ಕೃತ್ವಾ ಶುಚಿಃ ಪ್ರಯತಮಾನಸಃ|

13080007e ಪಿತರಂ ಪರಿಪಪ್ರಚ್ಚ ದೃಷ್ಟಲೋಕಪರಾವರಮ್||

ಅನಘ! ಈ ವಿಷಯದಲ್ಲಿ ನಾನು ಹಿಂದೆ ನಡೆದುದನ್ನು ಹೇಳುತ್ತೇನೆ. ಒಮ್ಮೆ ಪ್ರಯತಮಾನಸ ಶುಚಿ ಶುಕನು ಆಹ್ನಿಕವನ್ನು ಮುಗಿಸಿ ಲೋಕಪರಾವರಗಳ ದ್ರಷ್ಟನಾದ ತಂದೆ ಧೀಮಾನ್ ಋಷಿಗಳಲ್ಲಿ ಉತ್ತಮನಾದ ಕೃಷ್ಣದ್ವೈಪಾಯನನನ್ನು ಪ್ರಶ್ನಿಸಿದನು:

13080008a ಕೋ ಯಜ್ಞಃ ಸರ್ವಯಜ್ಞಾನಾಂ ವರಿಷ್ಠ ಉಪಲಕ್ಷ್ಯತೇ|

13080008c ಕಿಂ ಚ ಕೃತ್ವಾ ಪರಂ ಸ್ವರ್ಗಂ ಪ್ರಾಪ್ನುವಂತಿ ಮನೀಷಿಣಃ||

“ಸರ್ವಯಜ್ಞಗಳಲ್ಲಿ ಯಾವ ಯಜ್ಞವನ್ನು ವರಿಷ್ಠವೆಂದು ನೋಡುತ್ತಾರೆ? ಏನನ್ನು ಮಾಡಿ ಮನೀಷಿಣರು ಪರಮ ಸ್ವರ್ಗವನ್ನು ಪಡೆಯುತ್ತಾರೆ?

13080009a ಕೇನ ದೇವಾಃ ಪವಿತ್ರೇಣ ಸ್ವರ್ಗಮಶ್ನಂತಿ ವಾ ವಿಭೋ|

13080009c ಕಿಂ ಚ ಯಜ್ಞಸ್ಯ ಯಜ್ಞತ್ವಂ ಕ್ವ ಚ ಯಜ್ಞಃ ಪ್ರತಿಷ್ಠಿತಃ||

ವಿಭೋ! ಯಾವ ಪವಿತ್ರತೆಯಿಂದ ದೇವತೆಗಳು ಸ್ವರ್ಗವನ್ನು ಪಡೆದುಕೊಂಡರು? ಯಜ್ಞದ ಯಜ್ಞತ್ವವು ಯಾವುದು? ಯಜ್ಞವು ಯಾವುದರಲ್ಲಿ ಪ್ರತಿಷ್ಠಿತವಾಗಿದೆ?

13080010a ದಾನಾನಾಮುತ್ತಮಂ[3] ಕಿಂ ಚ ಕಿಂ ಚ ಸತ್ರಮತಃ ಪರಮ್|

13080010c ಪವಿತ್ರಾಣಾಂ ಪವಿತ್ರಂ ಚ ಯತ್ತದ್ಬ್ರೂಹಿ ಮಮಾನಘ[4]||

ಅನಘ! ದಾನಗಳಲ್ಲಿಯೇ ಉತ್ತಮವಾದುದು ಯಾವುದು? ಅದಕ್ಕಿಂತಲೂ ಹೆಚ್ಚಿನ ಯಜ್ಞವು ಯಾವುದು? ಪವಿತ್ರವಾದವುಗಳಲ್ಲಿಯೂ ಪವಿತ್ರವಾದುದು ಯಾವುದು? ಇದನ್ನು ಹೇಳು.”

13080011a ಏತಚ್ಚ್ರುತ್ವಾ ತು ವಚನಂ ವ್ಯಾಸಃ ಪರಮಧರ್ಮವಿತ್|

13080011c ಪುತ್ರಾಯಾಕಥಯತ್ಸರ್ವಂ ತತ್ತ್ವೇನ ಭರತರ್ಷಭ||

ಭರತರ್ಷಭ! ಈ ಮಾತನ್ನು ಕೇಳಿದ ಪರಮಧರ್ಮವಿದು ವ್ಯಾಸನು ಮಗನಿಗೆ ಎಲ್ಲವನ್ನೂ ತತ್ತ್ವತಃ ಹೇಳಿದನು.

13080012 ವ್ಯಾಸ ಉವಾಚ|

13080012a ಗಾವಃ ಪ್ರತಿಷ್ಠಾ ಭೂತಾನಾಂ ತಥಾ ಗಾವಃ ಪರಾಯಣಮ್|

13080012c ಗಾವಃ ಪುಣ್ಯಾಃ ಪವಿತ್ರಾಶ್ಚ ಪಾವನಂ ಧರ್ಮ ಏವ ಚ[5]||

ವ್ಯಾಸನು ಹೇಳಿದನು: “ಗೋವುಗಳು ಭೂತಗಳ ಪ್ರತಿಷ್ಠಗಳು. ಗೋವುಗಳು ಪರಮಾಶ್ರಯವು. ಗೋವುಗಳು ಪುಣ್ಯಮಯೀ ಮತ್ತು ಪವಿತ್ರರು. ಅವು ಪಾವನ ಧರ್ಮಗಳು ಕೂಡ.

13080013a ಪೂರ್ವಮಾಸನ್ನಶೃಂಗಾ ವೈ ಗಾವ ಇತ್ಯನುಶುಶ್ರುಮಃ|

13080013c ಶೃಂಗಾರ್ಥೇ ಸಮುಪಾಸಂತ ತಾಃ ಕಿಲ ಪ್ರಭುಮವ್ಯಯಮ್||

ಮೊದಲು ಗೋವುಗಳಿಗೆ ಕೋಡುಗಳಿರಲಿಲ್ಲ ಎಂದು ನಾವು ಕೇಳಿದ್ದೇವೆ. ಕೋಡುಗಳಿಗಾಗಿ ಅವು ಪ್ರಭು ಅವ್ಯಯನನ್ನು ಉಪಾಸಿಸಿದರು ಎಂದು ಕೇಳಿದ್ದೇವೆ.

13080014a ತತೋ ಬ್ರಹ್ಮಾ ತು ಗಾಃ ಪ್ರಾಯಮುಪವಿಷ್ಟಾಃ ಸಮೀಕ್ಷ್ಯ ಹ|

13080014c ಈಪ್ಸಿತಂ ಪ್ರದದೌ ತಾಭ್ಯೋ ಗೋಭ್ಯಃ ಪ್ರತ್ಯೇಕಶಃ ಪ್ರಭುಃ||

ಆಗ ಗೋವುಗಳು ಪ್ರಯೋಪವೇಶಮಾಡಿದುದನ್ನು ನೋಡಿ ಪ್ರಭು ಬ್ರಹ್ಮನು ಆ ಗೋವುಗಳಲ್ಲಿ ಪ್ರತಿಯೊಂದಕ್ಕೂ ಅದು ಬಯಸಿದುದನ್ನು ನೀಡಿದನು.

13080015a ತಾಸಾಂ ಶೃಂಗಾಣ್ಯಜಾಯಂತ ಯಸ್ಯಾ ಯಾದೃಙ್ಮನೋಗತಮ್|

13080015c ನಾನಾವರ್ಣಾಃ ಶೃಂಗವಂತ್ಯಸ್ತಾ ವ್ಯರೋಚಂತ ಪುತ್ರಕ||

ಪುತ್ರಕ! ನಂತರ ಅವರು ಯಾವರೀತಿಯ ಕೋಡನ್ನು ಬಯಸಿದ್ದರೋ ಆಯಾ ರೀತಿಯ ಕೋಡುಗಳು ಹುಟ್ಟಿಕೊಂಡವು. ಆಗ ಕೋಡುಗಳನ್ನು ಹೊಂದಿದ ಆ ನಾನಾವರ್ಣದ ಗೋವುಗಳು ವಿರಾಜಿಸಿದವು.

13080016a ಬ್ರಹ್ಮಣಾ ವರದತ್ತಾಸ್ತಾ ಹವ್ಯಕವ್ಯಪ್ರದಾಃ ಶುಭಾಃ|

13080016c ಪುಣ್ಯಾಃ ಪವಿತ್ರಾಃ ಸುಭಗಾ ದಿವ್ಯಸಂಸ್ಥಾನಲಕ್ಷಣಾಃ||

ಬ್ರಹ್ಮನಿಂದ ವರವನ್ನು ಪಡೆದ ಗೋವುಗಳು ಹವ್ಯಕವ್ಯಪ್ರದೆಗಳೂ ಶುಭೆಯರೂ, ಪುಣ್ಯಮಯಿಗಳೂ, ಪವಿತ್ರರೂ, ಸುಭಗೆಗಳೂ ಮತ್ತು ದಿವ್ಯಸಂಸ್ಥಾನಲಕ್ಷಣೆಯರೂ ಆದವು.

13080016e ಗಾವಸ್ತೇಜೋ ಮಹದ್ದಿವ್ಯಂ ಗವಾಂ ದಾನಂ ಪ್ರಶಸ್ಯತೇ|

13080017a ಯೇ ಚೈತಾಃ ಸಂಪ್ರಯಚ್ಚಂತಿ ಸಾಧವೋ ವೀತಮತ್ಸರಾಃ||

13080017c ತೇ ವೈ ಸುಕೃತಿನಃ ಪ್ರೋಕ್ತಾಃ ಸರ್ವದಾನಪ್ರದಾಶ್ಚ ತೇ|

13080017e ಗವಾಂ ಲೋಕಂ ತಥಾ ಪುಣ್ಯಮಾಪ್ನುವಂತಿ ಚ ತೇಽನಘ||

ಅನಘ! ಗೋವುಗಳು ಮಹಾ ದಿವ್ಯ ತೇಜಃಸ್ವರೂಪಗಳು. ಗೋವುಗಳ ದಾನವು ಪ್ರಶಂಸನೀಯವು. ಮಾತ್ಸರ್ಯವಿಲ್ಲದೇ ಗೋದಾನಮಾಡುವ ಸಾಧು ಪುರುಷರು ಸುಕೃತರೆಂದೆನಿಸಿಕೊಳ್ಳುತ್ತಾರೆ ಮತ್ತು ಸಕಲ ದಾನಗಳನ್ನೂ ಮಾಡಿದವರಂತಾಗುತ್ತಾರೆ. ಅವರು ಗೋವುಗಳ ಪುಣ್ಯಲೋಕವನ್ನು ಪಡೆಯುತ್ತಾರೆ.

13080018a ಯತ್ರ ವೃಕ್ಷಾ ಮಧುಫಲಾ ದಿವ್ಯಪುಷ್ಪಫಲೋಪಗಾಃ|

13080018c ಪುಷ್ಪಾಣಿ ಚ ಸುಗಂಧೀನಿ ದಿವ್ಯಾನಿ ದ್ವಿಜಸತ್ತಮ||

ದ್ವಿಜಸತ್ತಮ! ಆ ಗೋಲೋಕ[6]ದಲ್ಲಿ ವೃಕ್ಷಗಳು ಮಧುರ ಫಲಗಳನ್ನೀಯುತ್ತವೆ. ದಿವ್ಯ ಪುಷ್ಪ-ಫಲಗಳಿಂದ ಕೂಡಿವೆ. ಆ ದಿವ್ಯ ಪುಷ್ಪಗಳು ಸುಗಂಧಯುಕ್ತವಾಗಿರುತ್ತವೆ.

13080019a ಸರ್ವಾ ಮಣಿಮಯೀ ಭೂಮಿಃ ಸೂಕ್ಷ್ಮ[7]ಕಾಂಚನವಾಲುಕಾ|

13080019c ಸರ್ವತ್ರ[8] ಸುಖಸಂಸ್ಪರ್ಶಾ ನಿಷ್ಪಂಕಾ ನೀರಜಾ ಶುಭಾ||

ಗೋಲೋಕದಲ್ಲಿ ಎಲ್ಲ ಭೂಮಿಯೂ ಮಣಿಮಯವಾಗಿದೆ. ಸುವರ್ಣಮಯ ಸೂಕ್ಷ್ಮ ಮಳಿಗೆಗಳಿಂದ ಕೂಡಿದೆ. ಕೆಸರು-ಧೂಳುಗಳಿಲ್ಲದ ಆ ಶುಭ ಭೂಮಿಯ ಸ್ಪರ್ಶವು ಸರ್ವತ್ರ ಸುಖಮಯವಾಗಿದೆ.

13080020a ರಕ್ತೋತ್ಪಲವನೈಶ್ಚೈವ ಮಣಿದಂಡೈರ್ಹಿರಣ್ಮಯೈಃ|

13080020c ತರುಣಾದಿತ್ಯಸಂಕಾಶೈರ್ಭಾಂತಿ ತತ್ರ ಜಲಾಶಯಾಃ||

ಅಲ್ಲಿಯ ಜಲಾಶಯಗಳು ಕೆಂದಾವರೆಗಳ ವನಗಳಿಂದಲೂ, ಬಾಲಸೂರ್ಯನ ಪ್ರಕಾಶಕ್ಕೆ ಸಮಾನ ರತ್ನಗಳನ್ನೊಡಗೂಡಿದ ಸುವರ್ಣಸೋಪಾನಗಳಿಂದಲೂ ಪ್ರಕಾಶಿಸುತ್ತವೆ.

13080021a ಮಹಾರ್ಹಮಣಿಪತ್ರೈಶ್ಚ ಕಾಂಚನಪ್ರಭಕೇಸರೈಃ|

13080021c ನೀಲೋತ್ಪಲವಿಮಿಶ್ರೈಶ್ಚ ಸರೋಭಿರ್ಬಹುಪಂಕಜೈಃ||

ಬಹುಮೂಲ್ಯ ಮಣಿಗಳೇ ದಳಗಳಾಗಿರುವ, ಕಾಂಚನಪ್ರಭೆಯ ಕೇಸರಿಗಳುಳ್ಳ ನೀಲಕಮಲಗಳೊಡನೆ ಸೇರಿಕೊಂಡಿರುವ ಕೆಂದಾವರೆಗಳು ತುಂಬಿದ ಸರೋವರಗಳಿಂದ ಗೋಲೋಕವು ಸಮಲಂಕೃತವಾಗಿದೆ.

13080022a ಕರವೀರವನೈಃ ಫುಲ್ಲೈಃ ಸಹಸ್ರಾವರ್ತಸಂವೃತೈಃ|

13080022c ಸಂತಾನಕವನೈಃ ಫುಲ್ಲೈರ್ವೃಕ್ಷೈಶ್ಚ ಸಮಲಂಕೃತಾಃ||

ಆ ಸರೋವರಗಳು ಸಾವಿರಾರು ಸುಳಿಗಳಿಂದ ಕೂಡಿದ್ದು ವಿಕಸಿತ ಕರವೀರ[9] ವನಗಳಿಂದಲೂ, ವಿಕಸಿತ ಸಂತಾನಕ ವನಗಳಿಂದಲೂ ಅಲಂಕೃತಗೊಂಡಿವೆ.

13080023a ನಿರ್ಮಲಾಭಿಶ್ಚ ಮುಕ್ತಾಭಿರ್ಮಣಿಭಿಶ್ಚ ಮಹಾಧನೈಃ|

13080023c ಉದ್ಧೂತಪುಲಿನಾಸ್ತತ್ರ ಜಾತರೂಪೈಶ್ಚ ನಿಮ್ನಗಾಃ||

ಮರಳುದಿಣ್ಣೆಗಳಿರುವ ನದಿಗಳು ಗೋಲೋಕದಲ್ಲಿ ಮುತ್ತುಗಳಿಂದಲೂ, ಮಹಾಪ್ರಭೆಯ ಮಣಿಗಳಿಂದಲೂ ಮತ್ತು ಸುವರ್ಣಗಳಿಂದಲೂ ಯುಕ್ತವಾಗಿವೆ.

13080024a ಸರ್ವರತ್ನಮಯೈಶ್ಚಿತ್ರೈರವಗಾಢಾ ನಗೋತ್ತಮೈಃ|

13080024c ಜಾತರೂಪಮಯೈಶ್ಚಾನ್ಯೈರ್ಹುತಾಶನಸಮಪ್ರಭೈಃ||

ಆ ನದೀತೀರಗಳಲ್ಲಿ ರತ್ನಮಯ ವಿಚಿತ್ರ ವೃಕ್ಷಗಳು ಮತ್ತು ಯಜ್ಞೇಶ್ವರನ ಪ್ರಭೆಗೆ ಸಮಾನ ಪ್ರಭೆಯ ಸುವರ್ಣಮಯ ವೃಕ್ಷಗಳು ನದಿಯಲ್ಲಿ ಸ್ನಾನಮಾಡುತ್ತಿವೆಯೋ ಎನ್ನುವಂತೆ ತೋರುತ್ತವೆ.

13080025a ಸೌವರ್ಣಗಿರಯಸ್ತತ್ರ ಮಣಿರತ್ನಶಿಲೋಚ್ಚಯಾಃ|

13080025c ಸರ್ವರತ್ನಮಯೈರ್ಭಾಂತಿ ಶೃಂಗೈಶ್ಚಾರುಭಿರುಚ್ಚ್ರಿತೈಃ||

ಗೋಲೋಕದಲ್ಲಿ ಸುವರ್ಣಮಯ ಗಿರಿಗಳೂ, ಮಣಿರತ್ನಗಳ ಶೈಲಸಮೂಹಗಳೂ ರತ್ನಮಯ ಎತ್ತರ ಸುಮನೋಹರ ಶಿಖರಗಳಿಂದ ಪ್ರಕಾಶಿಸುತ್ತವೆ.”

[10]13080026a ನಿತ್ಯಪುಷ್ಪಫಲಾಸ್ತತ್ರ ನಗಾಃ ಪತ್ರರಥಾಕುಲಾಃ|

13080026c ದಿವ್ಯಗಂಧರಸೈಃ ಪುಷ್ಪೈಃ ಫಲೈಶ್ಚ ಭರತರ್ಷಭ||

ಭರತರ್ಷಭ! ಗೋಲೋಕದಲ್ಲಿ ವೃಕ್ಷಗಳು ನಿತ್ಯವೂ ಪುಷ್ಪ-ಫಲ ಭರಿತವಾಗಿರುತ್ತವೆ. ಪಕ್ಷಿಗಳಿಂದ ತುಂಬಿರುತ್ತವೆ. ಅವುಗಳ ಪುಷ್ಪಗಳು ದಿವ್ಯಗಂಧಗಳಿಂದಲೂ ಫಲಗಳು ದಿವ್ಯ ರಸಗಳಿಂದಲೂ ತುಂಬಿರುತ್ತವೆ.

13080027a ರಮಂತೇ ಪುಣ್ಯಕರ್ಮಾಣಸ್ತತ್ರ ನಿತ್ಯಂ ಯುಧಿಷ್ಠಿರ|

13080027c ಸರ್ವಕಾಮಸಮೃದ್ಧಾರ್ಥಾ ನಿಃಶೋಕಾ ಗತಮನ್ಯವಃ||

ಯುಧಿಷ್ಠಿರ! ಗೋಲೋಕದಲ್ಲಿ ಪುಣ್ಯಕರ್ಮಿಗಳು ನಿತ್ಯವೂ ಸರ್ವಕಾಮಸಮೃದ್ಧರಾಗಿ ನಿಃಶೋಕರಾಗಿ ಮತ್ತು ಕೋಪವನ್ನು ಕಳೆದುಕೊಂಡು ರಮಿಸುತ್ತಾರೆ.

13080028a ವಿಮಾನೇಷು ವಿಚಿತ್ರೇಷು ರಮಣೀಯೇಷು ಭಾರತ|

13080028c ಮೋದಂತೇ ಪುಣ್ಯಕರ್ಮಾಣೋ ವಿಹರಂತೋ ಯಶಸ್ವಿನಃ||

ಭಾರತ! ವಿಚಿತ್ರ ರಮಣೀಯ ವಿಮಾನಗಳಲ್ಲಿ ಯಶಸ್ವೀ ಪುಣ್ಯಕರ್ಮಿಗಳು ವಿಹರಿಸಿ ಮೋದಿಸುತ್ತಾರೆ.

13080029a ಉಪಕ್ರೀಡಂತಿ ತಾನ್ರಾಜನ್ ಶುಭಾಶ್ಚಾಪ್ಸರಸಾಂ ಗಣಾಃ|

13080029c ಏತಾಽಲ್ಲೋಕಾನವಾಪ್ನೋತಿ ಗಾಂ ದತ್ತ್ವಾ ವೈ ಯುಧಿಷ್ಠಿರ||

ಯುಧಿಷ್ಠಿರ! ರಾಜನ್! ಅಲ್ಲಿ ಶುಭ ಅಪ್ಸರಗಣಗಳು ಕ್ರೀಡಿಸುತ್ತವೆ. ಗೋದಾನವನ್ನು ಮಾಡಿದವರು ಈ ಲೋಕಗಳನ್ನು ಪಡೆಯುತ್ತಾರೆ.

13080030a ಯಾಸಾಮಧಿಪತಿಃ ಪೂಷಾ ಮಾರುತೋ ಬಲವಾನ್ಬಲೀ|

13080030c ಐಶ್ವರ್ಯೇ ವರುಣೋ ರಾಜಾ ತಾ ಮಾಂ ಪಾಂತು ಯುಗಂಧರಾಃ||

13080031a ಸುರೂಪಾ ಬಹುರೂಪಾಶ್ಚ ವಿಶ್ವರೂಪಾಶ್ಚ ಮಾತರಃ|

13080031c ಪ್ರಾಜಾಪತ್ಯಾ ಇತಿ ಬ್ರಹ್ಮನ್ ಜಪೇನ್ನಿತ್ಯಂ ಯತವ್ರತಃ||

[11]“ಬ್ರಹ್ಮನ್! ಶಕ್ತಿಶಾಲೀ ಸೂರ್ಯ, ಬಲಶಾಲಿ ವಾಯು ಮತ್ತು ಐಶ್ವರ್ಯಗಳ ಅಧಿಪತಿ ವರುಣರು ಆಳುವ ಲೋಕಗಳಿಗೆ ಗೋದಾನಮಾಡಿದವರು ಹೋಗುತ್ತಾರೆ. ಗೋವುಗಳಲ್ಲಿ ಯುಗಂಧರಾ, ಸುರೂಪಾ, ಬಹುರೂಪಾ, ವಿಶ್ವರೂಪಾ ಎಂಬ ಹಸುಗಳು ಸರ್ವಪ್ರಾಣಿಗಳಿಗೂ ಮಾತೃಪ್ರಾಯವಾಗಿವೆ. ಮನುಷ್ಯನು ಯತವ್ರತನಾಗಿ ಪ್ರಜಾಪತಿಯು ಹೇಳಿರುವ ಈ ಮಾತೃಸ್ವರೂಪಿಣೀ ಗೋವುಗಳ ಹೆಸರುಗಳನ್ನು ಜಪಿಸಬೇಕು.

13080032a ಗಾಸ್ತು ಶುಶ್ರೂಷತೇ ಯಶ್ಚ ಸಮನ್ವೇತಿ ಚ ಸರ್ವಶಃ|

13080032c ತಸ್ಮೈ ತುಷ್ಟಾಃ ಪ್ರಯಚ್ಚಂತಿ ವರಾನಪಿ ಸುದುರ್ಲಭಾನ್||

ಗೋವುಗಳ ಶುಶ್ರೂಷೆಮಾಡುವ, ಸದಾ ಅವುಗಳ ಜೊತೆಯಿರುವವನ ವಿಷಯದಲ್ಲಿ ತೃಪ್ತಿಹೊಂದುವ ಗೋವುಗಳು ಅವನಿಗೆ ಅತ್ಯಂತ ದುರ್ಲಭ ವರಗಳನ್ನು ದಯಪಾಲಿಸುತ್ತವೆ.

13080033a ನ ದ್ರುಹ್ಯೇನ್ಮನಸಾ ಚಾಪಿ ಗೋಷು ತಾ ಹಿ ಸುಖಪ್ರದಾಃ|

13080033c ಅರ್ಚಯೇತ ಸದಾ ಚೈವ ನಮಸ್ಕಾರೈಶ್ಚ ಪೂಜಯೇತ್|

13080033e ದಾಂತಃ ಪ್ರೀತಮನಾ ನಿತ್ಯಂ ಗವಾಂ ವ್ಯುಷ್ಟಿಂ ತಥಾಶ್ನುತೇ||

ಸುಖಪ್ರದ ಗೋವುಗಳ ವಿಷಯದಲ್ಲಿ ಮನಸ್ಸಿನಲ್ಲಿ ಕೂಡ ದ್ರೋಹವನ್ನೆಸಗಬಾರದು. ಸದಾ ಅವುಗಳನ್ನು ಅರ್ಚಿಸಬೇಕು ಮತ್ತು ನಮಸ್ಕಾರಗಳಿಂದ ಪೂಜಿಸಬೇಕು. ಜಿತೇಂದ್ರಿಯ ಪ್ರಸನ್ನಾತ್ಮ ಮನುಷ್ಯನು ನಿತ್ಯವೂ ಗೋವುಗಳ ಸೇವೆಗೈದರೆ ಸಮೃದ್ಧಿಯನ್ನು ಹೊಂದುತ್ತಾನೆ.

13080034a ಯೇನ ದೇವಾಃ ಪವಿತ್ರೇಣ ಭುಂಜತೇ ಲೋಕಮುತ್ತಮಮ್|

13080034c ಯತ್ಪವಿತ್ರಂ ಪವಿತ್ರಾಣಾಂ ತದ್ ಘೃತಂ ಶಿರಸಾ ವಹೇತ್||

ಪವಿತ್ರವಾದವುಗಳಲ್ಲಿಯೇ ಪವಿತ್ರವಾದ ಯಾವ ಗೋಘೃತದ ಪ್ರಭಾವದಿಂದ ದೇವತೆಗಳು ಉತ್ತಮೋತ್ತಮ ಲೋಕಗಳನ್ನು ಪರಿಪಾಲಿಸುತ್ತಾರೋ ಆ ಘೃತವನ್ನು ಶಿರಸ್ಸಿನಲ್ಲಿ ಧಾರಣೆಮಾಡಬೇಕು.

13080035a ಘೃತೇನ ಜುಹುಯಾದಗ್ನಿಂ ಘೃತೇನ ಸ್ವಸ್ತಿ ವಾಚಯೇತ್|

13080035c ಘೃತಂ ಪ್ರಾಶೇದ್ಘೃತಂ ದದ್ಯಾದ್ಗವಾಂ ವ್ಯುಷ್ಟಿಂ ತಥಾಶ್ನುತೇ||

ಘೃತದಿಂದ ಅಗ್ನಿಯಲ್ಲಿ ಹೋಮಮಾಡಬೇಕು. ಘೃತವನ್ನಿತ್ತು ಸ್ವಸ್ತಿವಾಚನವನ್ನು ಮಾಡಿಸಬೇಕು. ಘೃತವನ್ನು ಪ್ರಾಶನಮಾಡಬೇಕು. ತುಪ್ಪವನ್ನು ದಾನಮಾಡಬೇಕು. ಹೀಗೆ ಮಾಡುವುದರಿಂದ ಗೋವುಗಳ ಅಭಿವೃದ್ಧಿಯಾಗುತ್ತದೆ.

13080036a ತ್ರ್ಯಹಮುಷ್ಣಂ ಪಿಬೇನ್ಮೂತ್ರಂ ತ್ರ್ಯಹಮುಷ್ಣಂ ಪಿಬೇತ್ಪಯಃ|

13080036c ಗವಾಮುಷ್ಣಂ ಪಯಃ ಪೀತ್ವಾ ತ್ರ್ಯಹಮುಷ್ಣಂ ಘೃತಂ ಪಿಬೇತ್|

13080036e ತ್ರ್ಯಹಮುಷ್ಣಂ ಘೃತಂ ಪೀತ್ವಾ ವಾಯುಭಕ್ಷೋ ಭವೇತ್ತ್ರ್ಯಹಮ್||

ಮೂರು ದಿನಗಳು ಬಿಸಿ ಗೋಮೂತ್ರವನ್ನು ಕುಡಿಯಬೇಕು. ಮೂರು ದಿವಸಗಳು ಬಿಸಿ ಆಕಳ ಹಾಲನ್ನು ಕುಡಿಯಬೇಕು. ಮೂರು ದಿನಗಳು ಬಿಸಿಯಾದ ಆಕಳ ತುಪ್ಪವನ್ನು ಕುಡಿಯಬೇಕು. ಅನಂತರ ಮೂರು ದಿನಗಳು ವಾಯುಭಕ್ಷಕನಾಗಿರಬೇಕು. ಈ ನಿಯಮದಲ್ಲಿದ್ದುಕೊಂಡು ಗೋಸೇವೆಯನ್ನು ಮಾಡುವವನು ಸಮೃದ್ಧಿಯನ್ನು ಹೊಂದುತ್ತಾನೆ.

13080037a ನಿರ್ಹೃತೈಶ್ಚ ಯವೈರ್ಗೋಭಿರ್ಮಾಸಂ ಪ್ರಸೃತಯಾವಕಃ|

13080037c ಬ್ರಹ್ಮಹತ್ಯಾಸಮಂ ಪಾಪಂ ಸರ್ವಮೇತೇನ ಶುಧ್ಯತಿ||

ಗೋವಿನ ಸಗಣಿಯಿಂದ ತೆಗೆದ ಗೋಧಿಯ ಕಾಳುಗಳಿಂದ ಮಾಡಿದ ಗಂಜಿಯನ್ನೇ ಒಂದು ತಿಂಗಳವರೆಗೆ ಕುಡಿಯುವ ವಿನಯಶೀಲ ಯವಭಕ್ಷಕನು ಆ ಒಂದು ನಿಯಮದಿಂದಲೇ ಬ್ರಹ್ಮಹತ್ಯಾಪಾಪಕ್ಕೆ ಸಮಾನ ಸಕಲಪಾಪಗಳಿಂದಲೂ ವಿಮುಕ್ತನಾಗುತ್ತಾನೆ.

13080038a ಪರಾಭವಾರ್ಥಂ ದೈತ್ಯಾನಾಂ ದೇವೈಃ ಶೌಚಮಿದಂ ಕೃತಮ್|

13080038c ದೇವತ್ವಮಪಿ ಚ ಪ್ರಾಪ್ತಾಃ ಸಂಸಿದ್ಧಾಶ್ಚ ಮಹಾಬಲಾಃ||

ದೈತ್ಯರನ್ನು ಪರಾಭವಗೊಳಿಸಲೋಸುಗ ದೇವತೆಗಳು ಈ ಶೌಚವನ್ನೇ ಆಚರಿಸಿದರು. ಅದರಿಂದ ಆ ಮಹಾಬಲರು ದೇವತ್ವವನ್ನು ಪಡೆದುಕೊಂಡು ಸಂಸಿದ್ಧರಾದರು.

13080039a ಗಾವಃ ಪವಿತ್ರಾಃ ಪುಣ್ಯಾಶ್ಚ ಪಾವನಂ ಪರಮಂ ಮಹತ್|

13080039c ತಾಶ್ಚ ದತ್ತ್ವಾ ದ್ವಿಜಾತಿಭ್ಯೋ ನರಃ ಸ್ವರ್ಗಮುಪಾಶ್ನುತೇ||

ಗೋವುಗಳು ಪವಿತ್ರವಾದುವು. ಪುಣ್ಯಸ್ವರೂಪಿಗಳು. ಪಾವನಗೊಳಿಸುವಂಥವುಗಳು. ಪರಮ ಶ್ರೇಷ್ಠವಾದವುಗಳು. ಅಂತಹ ಗೋವುಗಳನ್ನು ದ್ವಿಜಾತಿಯವರಿಗೆ ದಾನಮಾಡಿದ ನರನು ಸ್ವರ್ಗವನ್ನು ಪಡೆಯುತ್ತಾನೆ.

13080040a ಗವಾಂ ಮಧ್ಯೇ ಶುಚಿರ್ಭೂತ್ವಾ ಗೋಮತೀಂ ಮನಸಾ ಜಪೇತ್|

13080040c ಪೂತಾಭಿರದ್ಭಿರಾಚಮ್ಯ ಶುಚಿರ್ಭವತಿ ನಿರ್ಮಲಃ||

ಪವಿತ್ರ ನೀರಿನಿಂದ ಆಚಮನಮಾಡಿ ಪರಿಶುದ್ಧನಾಗಿ ಹಸುಗಳ ಮಧ್ಯದಲ್ಲಿ ಗೋಮತೀ ಮಂತ್ರ[12]ವನ್ನು ಮನಸಾ ಜಪಮಾಡುವುದರಿಂದ ಮನುಷ್ಯನು ಶುಚಿಯಾಗಿ ನಿರ್ಮಲನಾಗುತ್ತಾನೆ.

13080041a ಅಗ್ನಿಮಧ್ಯೇ ಗವಾಂ ಮಧ್ಯೇ ಬ್ರಾಹ್ಮಣಾನಾಂ ಚ ಸಂಸದಿ|

13080041c ವಿದ್ಯಾವೇದವ್ರತಸ್ನಾತಾ ಬ್ರಾಹ್ಮಣಾಃ ಪುಣ್ಯಕರ್ಮಿಣಃ||

13080042a ಅಧ್ಯಾಪಯೇರನ್ಶಿಷ್ಯಾನ್ವೈ ಗೋಮತೀಂ ಯಜ್ಞಸಂಮಿತಾಮ್|

13080042c ತ್ರಿರಾತ್ರೋಪೋಷಿತಃ ಶ್ರುತ್ವಾ ಗೋಮತೀಂ ಲಭತೇ ವರಮ್||

ವೇದವಿದ್ಯೆಯನ್ನೂ ವೇದವ್ರತಗಳನ್ನೂ ಮುಗಿಸಿ ಸ್ನಾತಕರಾಗಿರುವ ಪುಣ್ಯಕರ್ಮಿ ಬ್ರಾಹ್ಮಣರು ಪಂಚಾಗ್ನಿಗಳ ಮಧ್ಯಾದಲ್ಲಾಗಲೀ, ಗೋವುಗಳ ಮಧ್ಯದಲ್ಲಾಗಲೀ, ಬ್ರಾಹ್ಮಣರ ಸಭೆಯಲ್ಲಾಗಲೀ, ಯಜ್ಞಸದೃಶವಾದ ಗೋಮತೀ ವಿದ್ಯೆಯನ್ನು ಶಿಷ್ಯರಿಗೆ ಉಪದೇಶಿಸಬೇಕು. ಹಾಗೆ ಉಪದೇಶಪಡೆದ ಗೋಮತೀ ಮಹಾಮಂತ್ರವನ್ನು ಉಪವಾಸದಿಂದಿದ್ದು ಮೂರು ರಾತ್ರಿಗಳ ವರೆಗೆ ಪುನಶ್ಚರಣೆ ಮಾಡುವವನು ಗೋವುಗಳಿಂದ ವರವನ್ನು ಪಡೆಯುತ್ತಾನೆ.

13080043a ಪುತ್ರಕಾಮಶ್ಚ ಲಭತೇ ಪುತ್ರಂ ಧನಮಥಾಪಿ ಚ|

13080043c ಪತಿಕಾಮಾ ಚ ಭರ್ತಾರಂ ಸರ್ವಕಾಮಾಂಶ್ಚ ಮಾನವಃ|

13080043e ಗಾವಸ್ತುಷ್ಟಾಃ ಪ್ರಯಚ್ಚಂತಿ ಸೇವಿತಾ ವೈ ನ ಸಂಶಯಃ||

ಪುತ್ರಕಾಮನು ಪುತ್ರನನ್ನೂ, ಧನಕಾಮನು ಐಶ್ವರ್ಯವನ್ನೂ ಪಡೆಯುತ್ತಾನೆ. ಪತಿಯನ್ನು ಬಯಸುವವಳು ಪತಿಯನ್ನು ಮತ್ತು ಮಾನವನು ಸರ್ವಕಾಮನೆಗಳನ್ನೂ ಪಡೆಯುತ್ತಾರೆ. ಸೇವೆಗಳಿಂದ ತೃಪ್ತರಾದ ಗೋವುಗಳು ಎಲ್ಲವನ್ನೂ ನೀಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

13080044a ಏವಮೇತಾ ಮಹಾಭಾಗಾ ಯಜ್ಞಿಯಾಃ ಸರ್ವಕಾಮದಾಃ|

13080044c ರೋಹಿಣ್ಯ ಇತಿ ಜಾನೀಹಿ ನೈತಾಭ್ಯೋ ವಿದ್ಯತೇ ಪರಮ್||

ಹೀಗೆ ಮಹಾಭಾಗ್ಯಶಾಲೀ ಗೋವುಗಳು ಯಜ್ಞಗಳ ಪ್ರಧಾನ ಅಂಗಗಳಾಗಿವೆಯೆಂದೂ ಮನುಷ್ಯನ ಸಕಲವಿಧದ ಕಾಮನೆಗಳನ್ನು ಪೂರೈಸುತ್ತವೆಯೆನ್ನುವುದನ್ನೂ ತಿಳಿ. ಇವುಗಳಿಗಿಂತ ಶ್ರೇಷ್ಠ ಪ್ರಾಣಿಯು ಬೇರೆ ಯಾವುದೂ ಇಲ್ಲ.”

13080045a ಇತ್ಯುಕ್ತಃ ಸ ಮಹಾತೇಜಾಃ ಶುಕಃ ಪಿತ್ರಾ ಮಹಾತ್ಮನಾ|

13080045c ಪೂಜಯಾಮಾಸ ಗಾ ನಿತ್ಯಂ ತಸ್ಮಾತ್ತ್ವಮಪಿ ಪೂಜಯ||

ಮಹಾತ್ಮ ವ್ಯಾಸನು ಮಹಾತೇಜಸ್ವೀ ಶುಕನಿಗೆ ಹೀಗೆ ಗೋವಿನ ಮಹಾತ್ಮ್ಯವನ್ನು ಹೇಳಿದನಂತರ ಶುಕನೂ ಕೂಡ ಅನುದಿನವೂ ಗೋವುಗಳನ್ನು ಪೂಜಿಸತೊಡಗಿದನು. ಆದುದರಿಂದ ನೀನೂ ಗೋವುಗಳನ್ನು ಪೂಜಿಸು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರದಾನಿಕೇ ಆಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರದಾನಿಕ ಎನ್ನುವ ಎಂಭತ್ತನೇ ಅಧ್ಯಾಯವು.

[1] ತ್ರಿಷು ಲೋಕೇಷು ಸತ್ತಮಾಃ| (ಗೀತಾ ಪ್ರೆಸ್).

[2] ಚೈತಾಸ್ತಾರಯಂತೇ (ಗೀತಾ ಪ್ರೆಸ್).

[3] ದೇವಾನಾಮುತ್ತಮಂ (ಗೀತಾ ಪ್ರೆಸ್).

[4] ಪಿತರ್ಮಮ| (ಗೀತಾ ಪ್ರೆಸ್).

[5] ಗೋಧನಂ ಪಾವನಂ ತಥಾ|| (ಗೀತಾ ಪ್ರೆಸ್).

[6] ಗೋಲೋಕದ ವರ್ಣನೆಯು ಬ್ರಹ್ಮವೈವರ್ತ ಪುರಾಣದ ಪ್ರಕೃತಿಖಂಡದ ೫೪ನೇ ಅಧ್ಯಾಯದ ಶ್ಲೋಕ ೧೫-೨೦ ರಲ್ಲಿಯೂ ಬರುತ್ತದೆ. ಚತುರ್ಭುಜಶ್ಚ ವೈಕುಂಠೇ ಗೋಲೋಕೇ ದ್ವಿಭುಜಃ ಸ್ವಯಮ್| ಊರ್ಧ್ವಂ ವೈಕುಂಠಲೋಕಾಚ್ಚ ಪಂಚಾಶತ್ಕೋಟಿಯೋಜನಾತ್|| ೧೫|| ಗೋಲೋಕೋ ವರ್ತುಲಾಕಾರೋ ವರಿಷ್ಠಃ ಸರ್ವಲೋಕತಃ| ಅಮೂಲ್ಯರತ್ನಖಚಿತೈರ್ಮಂದಿರೈಶ್ಚ ವಿಭೂಷಿತಃ|| ೧೬|| ರತ್ನೇಂದ್ರಸಾರಖಚಿತೈಃ ಸ್ತಂಭಸೋಪಾನಚಿತ್ರಿತೈಃ| ಮಣೀಂದ್ರದರ್ಪಣಾಸಕ್ತೈಃ ಕವಾಟೈಃ ಕಲಶೋಜ್ವಲೈಃ|| ೧೭|| ನಾನಾಚಿತ್ರವಿಚಿತ್ರೈಶ್ಚ ಶಿಬಿರೈಶ್ಚ ವಿರಾಜಿತಃ| ಕೋಟಿಯೋಜನವಿಸ್ತೀರ್ಣೋ ದೈರ್ಘ್ಯೇ ಶತಗುಣಸ್ತಥಾ| ವಿರಜಾಸರಿದಾಕೀರ್ಣೈಃ ಶತಶೃಂಗೈಸ್ಸುವೇಷ್ಟಿತಃ|| ೧೮|| ಸರಿದರ್ಧಪ್ರಮಾಣೇಣ ದೈರ್ಘ್ಯೇಣ ಚ ತತೇನ ಚ| ಶೈಲಾರ್ಧಪರಿಮಾಣೇನ ಯುಕ್ತೋ ವೃಂದಾವನೇನ ಚ|| ೧೯|| ತದರ್ಧಮಾನವಿಲಸದ್ರಾಸಮಂಡಲಮಂಡಿತಃ| ಸರಿಚ್ಛೈಲವನಾದೀನಾಂ ಮಧ್ಯೇ ಗೋಲೋಕ ಏವ ಚ||೨೦||

[7] ಸರ್ವ (ಗೀತಾ ಪ್ರೆಸ್/ಭಾರತ ದರ್ಶನ).

[8] ಸರ್ವರ್ತು (ಗೀತಾ ಪ್ರೆಸ್/ಭಾರತ ದರ್ಶನ).

[9] ಗನ್ನೇರಳೇ ವೃಕ್ಷ (ಭಾರತ ದರ್ಶನ).

[10] ಮುಂದಿನ ನಾಲ್ಕು ಶ್ಲೋಕಗಳಲ್ಲಿ ಭೀಷ್ಮನು ಯುಧಿಷ್ಠಿರನನ್ನು ಸಂಬೋಧಿಸಿ ಹೇಳುವಂತಿದೆ. (ಭಾರತ ದರ್ಶನ).

[11] ಮುಂದಿನ ಶ್ಲೋಕಗಳು ವ್ಯಾಸನು ಶುಕನಿಗೆ ಹೇಳುವಂತಿದೆ.

[12] ಗೋಮಾಗ್ಂ ಅಗ್ನೀಽವಿಮಾಗ್ಂ ಅಶ್ವೀ ಎಂಬ ಮಂತ್ರ (ಭಾರತ ದರ್ಶನ).

Comments are closed.